ಕೊಡಗಿನ ಐತಿಹಾಸಿಕ ಚರ್ಚ್‌ಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತ ಹಾಗೂ ಬರೋಬರಿ 153 ವರ್ಷಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ ಚರ್ಚ್ ಶಾಂತಿ ಚರ್ಚ್. ಸಿದ್ದಾಪುರ ಸಮೀಪದ ಆನಂದಪುರದ ಚರ್ಚ್‌ನಲ್ಲಿದ್ದ ಹರ್ಮನ್ ಮೊಗ್ಲಿಂಗ್ ಹಾಗೂ ಎಫ್.ಕಿಟ್ಟೆಲ್ ಕನ್ನಡದ ಕೆಲಸವನ್ನು ಮಡಿಕೇರಿಯಲ್ಲೂ ಮುಂದುವರಿಸಿದ್ದರು. ಈಗಿನ ಶಾಂತಿ ಚರ್ಚ್ ಹಾಗೂ ಅದರ ಆಸುಪಾಸಿನ ಸ್ಥಳ ಅವರ ಕಾರ್ಯಕ್ಷೇತ್ರವಾಗಿತ್ತು.
1869ರಲ್ಲಿಯೇ ಬಾಸೆಲ್ ಮಿಷನ್ ತನ್ನ ಸೇವಾಪರ ಚಟುವಟಿಕೆಗಳನ್ನು ಮಡಿಕೇರಿಯಲ್ಲಿ ಆರಂಭಿಸಿತ್ತು. ಮರುವರ್ಷ 1870ರಲ್ಲಿ ಸಣ್ಣದಾದ ಧಾರ್ಮಿಕ ಸಭೆ ಆರಂಭಗೊಂಡು, ಈಗಿನ ಶಾಂತಿ ಚರ್ಚ್ ಸ್ಥಾಪನೆಯಾಯಿತು. ರೆವರೆಂಡ್ ಮುಲ್ಲರ್ ಇಲ್ಲಿ ಮಿಷನ್ ಅಂಗಡಿಯನ್ನೂ ತೆರೆದರು. ಇಲ್ಲಿನ ಪೂವಕ್ಕ, ಪೊನ್ನಮ್ಮ ಎಂಬುವವರು ಇವರ ಸೇವಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು.
ಕೆಲಕಾಲ ಇಲ್ಲಿಯೇ ಇದ್ದ ಮೊಗ್ಲಿಂಗ್ ಅವರು ಅನಾರೋಗ್ಯದ ನಿಮಿತ್ತ ವಾಪಸ್ ತಮ್ಮ ದೇಶಕ್ಕೆ ಹೊರಟರು. ನಂತರ, ಇಲ್ಲಿ ಎಫ್.ಕಿಟ್ಟೆಲ್, ಸ್ಟಾಕ್ಸ್, ಕಾಫ್‌ಮನ್ ಹಾಗೂ ಆನಂದಪುರದ ಆನಂದರಾವ್ ಕೌಂಡಿನ್ಯ ಅವರು ಸೇವೆಗಳನ್ನು ಮುಂದುವರಿಸಿದರು.
1885ರ ಹೊತ್ತಿಗೆ ಆನಂದಪುರದಿಂದ ಮಡಿಕೇರಿಯನ್ನು ಪ್ರತ್ಯೇಕಿಸಿ ಪ್ರತ್ಯೇಕ ಕೇಂದ್ರವನ್ನಾಗಿ ಮಾಡಲಾಯಿತು. ನಂತರ, ಇಲ್ಲಿ ಒಂದು ಆನಾಥಾಶ್ರಮವನ್ನೂ ತೆರೆಯಲಾಯಿತು. 50ಕ್ಕೂ ಅಧಿಕ ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದರು.
ಇಲ್ಲಿ ಒಂದು ಶಾಲೆಯನ್ನೂ ತೆರೆದು ಅದಕ್ಕೆ ಮಿಷನ್ ಶಾಲೆ ಎಂದು ಹೆಸರಿಡಲಾಯಿತು. ಇದೇ ಶಾಲೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ವಿದ್ಯಾಭ್ಯಾಸ ಮಾಡಿದ್ದರು ಎಂಬ ಉಲ್ಲೇಖಗಳೂ ದೊರೆಯುತ್ತವೆ. ಆದರೆ, ಈಗ ಇವೆಲ್ಲವೂ ಇತಿಹಾಸ ಸೇರಿದ್ದು, ಸದ್ಯ, ಶಾಂತಿ ಚರ್ಚ್ ಮಾತ್ರವೇ ಉಳಿದಿದೆ.
ಸ್ವಾತಂತ್ರ್ಯ ನಂತರ ಚರ್ಚ್ ನವೀಕರಣಗೊಂಡಿತು. ಗಂಟೆಗೋಪುರ ಸೇರಿದಂತೆ ಹಲವು ಹೊಸ ಕಟ್ಟಡಗಳು ನಿರ್ಮಾಣಗೊಂಡವು. ಇದೀಗ ಮೈಸೂರು ರಸ್ತೆಯಲ್ಲಿ ಕಣ್ಮನ ಸೆಳೆಯುವಂತೆ
ಈ ಚರ್ಚ್ ಇದೆ.
100ಕ್ಕೂ ಅಧಿಕ ಕುಟುಂಬಗಳು:
ಈಗಿನ ಚರ್ಚ್‌ನ ಧರ್ಮಗುರುವಾಗಿ ರೆವರಂಡ್. ಫಾದರ್ ಜೈಸನ್ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೇ ಹೇಳುವಂತೆ 100ಕ್ಕೂ ಅಧಿಕ ಕುಟುಂಬಗಳ ಭಕ್ತರನ್ನು ಚರ್ಚ್ ಹೊಂದಿದೆ.
ಈ ಕುರಿತು “ಸರ್ಚ್ ಕೂರ್ಗ್ ಮೀಡಿಯಾ”ಕ್ಕೆ ಪ್ರತಿಕ್ರಿಯಿಸಿದ ಅವರು, ‘ಶಾಂತಿ ಚರ್ಚ್ ಕೇವಲ ಮಡಿಕೇರಿಯಲ್ಲಿ ಮಾತ್ರವಲ್ಲ ನಾಡಿನ ಪ್ರಾಚೀನ ಚರ್ಚ್‌ಗಳಲ್ಲಿ ಒಂದಾಗಿದೆ. ಹರ್ಮನ್ ಮೊಗ್ಲಿಂಗ್, ಎಫ್.ಕಿಟ್ಟೆಲ್ ಅವರು ಇಲ್ಲಿಯೂ ಕೆಲವು ವರ್ಷಗಳ ಕಾಲ ತಂಗಿದ್ದರು’ ಎಂದು
ಹೇಳಿದರು.
ಡಿ. 24ರಂದು ವಿಶೇಷ ಕಾರ್ಯಕ್ರಮ
ಡಿ. 24ರಂದು ಸಂಜೆ 6.30ಕ್ಕೆ ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಶಾಂತಿ ಚರ್ಚ್‌ನಲ್ಲಿ ನಡೆಯಲಿವೆ. ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದಾರೆ. ರಾತ್ರಿ 8.30ರವರೆಗೂ ಕಾರ್ಯಕ್ರಮಗಳು ನಡೆಯಲಿವೆ. ನಂತರ, ವಿಶೇಷ ಪ್ರಾರ್ಥನೆ ಇರಲಿದೆ. ಕ್ರಿಸ್‌ಮಸ್ ದಿನವಾದ 25ರಂದು ಬೆಳಿಗ್ಗೆ 9 ಗಂಟೆಗೆ ವಿಶೇಷ ಪ್ರಾರ್ಥನೆ ಆರಂಭವಾಗಲಿದೆ.