ಮಡಿಕೇರಿ ಜ.11 : ಸಿನಿಮಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಉದ್ದೇಶದಿಂದ ಕುಟುಂಬ ಸದಸ್ಯರೇ ಸೇರಿ `ಕಿಲ್ಲಿಂಗ್ ಡಾಲ್’ ಎಂಬ ಕಿರುಚಿತ್ರವನ್ನು ನಿರ್ಮಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಐಮಣಿಯಂಡ ಲೋಹಿತ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿರಾಜಪೇಟೆಯ ಚೂರಿಯಲ್ ಎಂಬಲ್ಲಿ ಚಿತ್ರೀಕರಣ ನಡೆದಿದ್ದು, ಜ.14ರಂದು ಲೋಹಿತ್ ಸ್ಟುಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಮಧ್ಯಮ ವರ್ಗದ ಯುವಕನೊಬ್ಬನ ಸುತ್ತ ಹೆಣೆದಿರುವ ಕಥೆಯಾಗಿದ್ದು, ನೋಡಲು ಅಷ್ಟೇನು ಸುಂದರವಲ್ಲದ ಯುವಕ ಮನನೊಂದು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಹಾಗೂ ಅದರಿಂದ ಸಮಾಜದ ಮೇಲಾಗುವ ದುಷ್ಪರಿಣಾಮದ ಕುರಿತು 35 ನಿಮಿಷದ ಕಿರುಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.
ಈ ಕಿರಿಚಿತ್ರವನ್ನು ತಾನೇ ನಿರ್ದೇಶನ, ನಿರ್ಮಾಣ ಮಾಡಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸುಮಾರು 1 ಲಕ್ಷ ಬಜೆಟ್‍ನಲ್ಲಿ ಚಿತ್ರ ಮೂಡಿ ಬಂದಿದೆ.
ನಟನೆಯ ಬಗ್ಗೆ ಕಿಂಚಿತ್ತೂ ಅನುಭವ ಇಲ್ಲದ ಕುಟುಂಬದ 15 ಮಂದಿ ಮೊದಲ ಬಾರಿಗೆ ನಟಿಸಿದ್ದು, ಚಿತ್ರಕ್ಕೆ ಜೀವ ತುಂಬಿದ್ದಾರೆ ಎಂದ ಅವರು, ಈಗಾಗಲೇ ಯೂಟ್ಯೂಬ್‍ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, ಸಾರ್ವಜನಿಕರು ವೀಕ್ಷಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಐಮಣಿಯಂಡ ಭವ್ಯ, ಪೊನ್ನಮ್ಮ, ಹರಿಶ್ಚಂದ್ರ, ಸುರೇಶ್, ರಘು ಉಪಸ್ಥಿತರಿದ್ದರು.