ಪಟ್ಟಮಾಡ ಮಿಲನ್ ಮುತ್ತಣ್ಣ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಬೇಂಗೂರು
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬೇಂಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪಟ್ಟಮಾಡ ಮಿಲನ್ ಮುತ್ತಣ್ಣ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಪಟ್ಟಮಾಡ ಮಿಲನ್ ಮುತ್ತಣ್ಣ “ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮುಖ್ಯವಾದ ಪ್ರೇರಣೆ ಎಂದರೆ ನನ್ನ ಪತಿಯಾದ ಪಿ.ಡಿ. ಮುತ್ತಣ್ಣ ಹಾಗೂ ಗ್ರಾಮಸ್ಥರು. ನಾನು ಜನಪ್ರತಿನಿಧಿ ಆಗುವ ಮೊದಲೇ ಬಡವರಾಗಲಿ, ಶ್ರೀಮಂತರಾಗಲಿ ನನ್ನೆಲ್ಲಾ ಗ್ರಾಮಸ್ಥರೊಂದಿಗೆ ಯಾವುದೇ ತಾರತಮ್ಯವಿಲ್ಲದೆ ಯಾರಾದರೂ ಕಷ್ಟದಲ್ಲಿದ್ದರೆ ಒಂದಾಗಿ ಒಗ್ಗಟ್ಟಿನಿಂದ ಅವರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆ. ಅವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದೆ. ನಾನು ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಕೆಲಸವನ್ನು ಮೆಚ್ಚಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಲಹೆ ನೀಡಿದರು ಹಾಗಾಗಿ ಗ್ರಾಮಸ್ಥರು ಹಾಗೂ ಸ್ನೇಹಿತರ ಒತ್ತಾಸೆಯ ಮೇರೆಗೆ 2020ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸದಸ್ಯಳಾಗಿ ಆಯ್ಕೆಯಾದೆ. ಅದಲ್ಲದೆ ಈ ಮೊದಲು ನನ್ನ ಪತಿಯಾದ ಪಿ.ಡಿ. ಮುತ್ತಣ್ಣ ಅವರು ಬೇಂಗೂರು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಅವರು ಸಲ್ಲಿಸಿದ ಸೇವೆ ಹಾಗೂ ಪಂಚಾಯಿತಿ ಅಭಿವೃದ್ಧಿಗೆ ಶ್ರಮವಹಿಸಿದ್ದನ್ನು ಮನಗಂಡ ಗ್ರಾಮಸ್ಥರು ನನಗೆ ಮತ ಚಲಾಯಿಸಿದ ಪರಿಣಾಮ ನಾನು ಚುನಾವಣೆಯಲ್ಲಿ ಗೆಲ್ಲಲು ಪೂರಕವಾಯಿತು. ನಾನು ಚುನಾವಣೆಯಲ್ಲಿ ಯಾವುದೇ ಪಕ್ಷದ ಬೆಂಬಲವಿಲ್ಲದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅತ್ಯಧಿಕ ಮತಗಳನ್ನು ಪಡೆದು ಗೆಲುವನ್ನು ಸಾಧಿಸಿದೆ. ಈ ಚುನಾವಣೆಯಲ್ಲಿ ಸುಮಾರು 830 ರಷ್ಟು ಮತದಾರರು ಮತವನ್ನು ಚಲಾಯಿಸಿದ್ದು ನಾನು 720ರಷ್ಟು ಮತಗಳನ್ನು ಪಡೆದೆ. ಅದರಲ್ಲಿ 200 ಮತಗಳು ಸಿಂಗಲ್ ವೋಟ್ ಆಗಿತ್ತು. ಇದು ನಮ್ಮ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದ ಮಹಿಳಾ ಗ್ರಾಮ ಪಂಚಾಯಿತಿ ಸದಸ್ಯೆ ಎಂಬ ಹೆಗ್ಗಳಿಕೆಯಾಗಿದೆ. ಚುನಾವಣೆಯ ನಂತರ ಮೊದಲ ಅವಧಿಯಲ್ಲಿ ಸದಸ್ಯರಾಗಿ ನಂತರ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ವ್ಯವಸ್ಥೆ, ಸೋಲಾರ್ ದೀಪ ವ್ಯವಸ್ಥೆ, ಪ್ರತಿ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಯು ಪ್ರಗತಿಯಲ್ಲಿದೆ. ಕಸ ವಿಲೇವಾರಿಗೆ ವಾಹನದ ವ್ಯವಸ್ಥೆ ಇದೆ. ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು 15 ಪ್ರತಿಶತ ಜನರಿಗೆ ಸ್ವಂತ ಮನೆಯ ಅವಶ್ಯಕತೆ ಇದ್ದು, ಆಶ್ರಯ ಯೋಜನೆಯ ಮೂಲಕ ಮನೆಗಳ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗುತ್ತಿದೆ. ನಮ್ಮ ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇಕಡ 40%ರಷ್ಟು ರಸ್ತೆಗಳ ಕಾಮಗಾರಿ ಬಾಕಿ ಇದ್ದು, ಅನುದಾನದ ಕೊರತೆ ಇರುವುದರಿಂದ ಇನ್ನಷ್ಟು ಕಾಮಗಾರಿಗಳ ಪ್ರಗತಿಗೆ ಅಡಚಣೆಯಾಗಿದೆ. ನಮ್ಮ ಪಂಚಾಯಿತಿ ವ್ಯಾಪ್ತಿಯ ಚೇರಂಬಾಣೆ ಪಟ್ಟಣದಲ್ಲಿರುವ ಮಾರುಕಟ್ಟೆಯ ನವೀಕರಣ ಕಾಮಗಾರಿಗೆ ತಾಲೂಕು ಪಂಚಾಯಿತಿಯಿಂದ ಅನುದಾನ ದೊರೆತಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ. ಈ ಮಾರುಕಟ್ಟೆಯು ಚೇರಂಬಾಣೆ ಪಟ್ಟಣ ಸೇರಿ ಕೊಳಗದಾಳು, ಬಾಡಗ , ಬೇಂಗೂರು, ಐವತೊಕ್ಲು ಹಾಗೂ ಕೊಟ್ಟೂರು ಗ್ರಾಮಗಳಿಗೆ ಪ್ರಮುಖವಾದ ಮಾರುಕಟ್ಟೆಯಾಗಿದೆ. ನಮ್ಮ ಗ್ರಾಮ ಪಂಚಾಯಿತಿ ವ್ಯಾತ್ತಿಯಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ತುರ್ತು ಸಂದರ್ಭಗಳಲ್ಲಿ ಒಂದು ಆಂಬುಲೆನ್ಸ್ ಅವಶ್ಯಕತೆ ಇದೆ. ಅಲ್ಲದೆ ಒಂದು ನಿವಾಸಿ ವೈದ್ಯರ ಅವಶ್ಯಕತೆ ಇದ್ದು, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದೆ. ಬೇಂಗೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಹಲವಾರು ಕನಸುಗಳನ್ನು ಹೊಂದಿದ್ದು, ಅವುಗಳೆಲ್ಲವನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೇನೆ. ಕೇವಲ ನಾಮಕಾವಸ್ಥೆಯಾಗಿ ಅಧ್ಯಕ್ಷರಾಗಿ ಇದ್ದು ಹೋಗಲು ನನಗೆ ಇಷ್ಟವಿಲ್ಲ. ಗ್ರಾಮ ಪಂಚಾಯಿತಿಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಮುಖ್ಯವಾಗಿ ಪಾರದರ್ಶಕ ಆಡಳಿತ ಭ್ರಷ್ಟಾಚಾರ ಮುಕ್ತ ಆಡಳಿತ ಅದರೊಂದಿಗೆ ಪಂಚಾಯತಿಯ ಸದಸ್ಯರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಕಡೆಗೆ ಮುನ್ನಡೆಯಬೇಕು ಎಂಬುವುದು ನನ್ನ ಅನಿಸಿಕೆಯಾಗಿದೆ. ಮುಂದಿನ ವರ್ಷಗಳಲ್ಲಿ ಜನಪ್ರತಿನಿಧಿಯಾಗಿ ರಾಜಕೀಯದಲ್ಲಿ ಸಕ್ರೀಯರಾಗುವ ಯುವಶಕ್ತಿ ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ಅಂದರೆ “ಸರ್ವೇ ಜನ ಸುಖಿನೋ ಭವಂತು” ಎಂಬ ಆದರ್ಶದಲ್ಲಿ ಜವಾಬ್ದಾರಿಯತವಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ. ಕೇವಲ ಚುನಾವಣೆಗೆ ಸ್ಪರ್ಧಿಸುವುದು, ಗೆಲ್ಲುವುದು ಮಾತ್ರ ಗುರಿಯಾಗಿ ಇಟ್ಟುಕೊಳ್ಳುವುದು ಸರಿ ಇಲ್ಲ ಎನ್ನುವುದನ್ನು ರಾಜಕೀಯ ಪ್ರವೇಶಿಸುವ ಭಾವಿ ಯುವ ಶಕ್ತಿಗೆ ನನ್ನ ಸಂದೇಶವಾಗಿದೆ”. ಮೂಲತಃ ಕೃಷಿಕರಾಗಿರುವ ಪಟ್ಟಮಾಡ ಮಿಲನ್ ಮುತ್ತಣ್ಣ ಅವರು ಸಾಮಾಜಿಕ ಕ್ಷೇತ್ರದಲ್ಲಿ ಕೊಡಗು ಹೋಂ ಮೇಡ್ ವೈನ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಉದ್ಯಮಿಯಾಗಿ ತನ್ನನ್ನು ತೊಡಗಿಸಿಕೊಂಡಿರುವ ಪಟ್ಟಮಾಡ ಮಿಲನ್ ಮುತ್ತಣ್ಣ ಅವರು ಶ್ರೀವಾಸ್ (Shrivas) ಎಂಬ Startup ಅನ್ನು ಕಳೆದ ಹನ್ನೆರಡು ವರ್ಷಗಳ ಹಿಂದೆ ಪ್ರಾರಂಭ ಮಾಡಿ ಮಹಿಳಾ ಉದ್ಯಮಿಯಾಗಿ ಯಶಸ್ವಿಯಾಗಿ ಸಂಸ್ಥೆಯನ್ನು ಮುನ್ನಡೆಸುಕೊಂಡು ಬರುತ್ತಿದ್ದಾರೆ. ಅದರಲ್ಲಿ ಕಾಫಿ ಪೌಡರ್, ರೋಸ್ಟಿಂಗ್ ಅಂಡ್ ಪ್ಯಾಕಿಂಗ್, ಕಾಫಿ ಬ್ಲೆಂಡಿಂಗ್, ಫ್ಯಾಷನ್ ಫ್ರೂಟ್ ಸ್ಕ್ವಾಷ್ ನಲ್ಲಿ ಜಿಲ್ಲೆಯಲ್ಲೇ ಅತೀ ದೊಡ್ಡ ಮಟ್ಟದ ಉದ್ಯಮವನ್ನು ನಡೆಸುತ್ತಿದ್ದಾರೆ. ನನ್ನ ಈ ಎಲ್ಲಾ ಸಮಾಜಮುಖಿ ಬೆಳವಣಿಗೆಗೆ ನನ್ನ ಕುಟುಂಬದ ಅದರಲ್ಲೂ ನನ್ನ ಅತ್ತೆಯವರಾದ ಪಟ್ಟಮಾಡ ತಂಗಮ್ಮ ದೇವಯ್ಯ ಅವರ ಪ್ರೋತ್ಸಾಹ ಮತ್ತು ಸಹಕಾರ ಹೆಚ್ಚಿದೆ. ಜೊತೆಗೆ ಪತಿ ಪಟ್ಟಮಾಡ ಡಿ. ರವಿನ್ ಮುತ್ತಣ್ಣ, ಬಾವ ಪಟ್ಟಮಾಡ. ಡಿ. ಪೊನ್ನಪ್ಪ ಅವರ ಸಹಕಾರವಿದೆ ಎಂದು ಪಟ್ಟಮಾಡ ಮಿಲನ್ ಮುತ್ತಣ್ಣ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪಟ್ಟಮಾಡ ಮಿಲನ್ ಮುತ್ತಣ್ಣಅವರ ಕುಟುಂಬ ಪರಿಚಯ: ಪಟ್ಟಮಾಡ ಮಿಲನ್ ಮುತ್ತಣ್ಣ ಅವರ ತಂದೆ: ಮಂಡೀರ ಪೊನ್ನಪ್ಪ. ತಾಯಿ: ಸರಸ್ವತಿ, ತಮ್ಮ: ಮಿಥುನ್. ಪತಿ: ಪಟ್ಟಮಾಡ. ಡಿ. ರವಿನ್ ಮುತ್ತಣ್ಣ. ಅತ್ತೆ: ತಂಗಮ್ಮ ದೇವಯ್ಯ. ಹಿರಿಯ ಪುತ್ರಿ: ಶ್ರೀಷ್ಮಾ ಬೊಳ್ಳಮ್ಮ ಹಾಗೂ ಕಿರಿಯ ಪುತ್ರಿ: ವರುಣಿಕ ಪೊನ್ನಮ್ಮ ವ್ಯಾಸಂಗ ನಿರತರಾಗಿದ್ದಾರೆ. ಪಟ್ಟಮಾಡ ಮಿಲನ್ ಮುತ್ತಣ್ಣರವರು ಪ್ರಸ್ತುತ ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೇಂಗೂರು ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 23-01-2024