ನಾಪೋಕ್ಲು: ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಅವರ ಉರೂಸ್ ಸಮಾರಂಭಕ್ಕೆ ಗಣ್ಯರು ಶ್ರದ್ಧಾ ಭಕ್ತಿಯ ಚಾಲನೆ ನೀಡಿದರು.
ಶುಕ್ರವಾರ ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನ ದೊಂದಿಗೆ ದರ್ಗಾಗೆ ತೆರಳಿದ ಸಮುದಾಯ ಬಾಂಧವರು ಕೊಡಗು ಜಿಲ್ಲಾ ನಾಹಿಬ್ ಖಾಝಿಗಳಾದ ಅಬ್ದುಲ್ಲಾ ಫೈಝಿ ಯವರು ದರ್ಗಾದ ಆವರಣದಲ್ಲಿ ನೂತನವಾಗಿ ಅಳವಡಿಸಿದ ಇಂಟರ್ ಲಾಕ್ ಲೋಕಾರ್ಪಣೆಗೊಳಿಸಿದರು.ಬಳಿಕ ಮಖಾಂ ಝಿಯಾರತ್ ಗೆ ನೇತೃತವಹಿಸಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಚೆರಿಯಪರಂಬು
ಮೊಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಪರವಂಡ ಝುಬೈರ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಜಮಾಅತ್ ಕಾರ್ಯದರ್ಶಿ ಪರವಂಡ ಸಿರಾಜ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಉರೂಸ್ ಸಮಾರಂಭವನ್ನು 5ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಇಂದಿನಿಂದ ಪ್ರಾರಂಭವಾಗುವ ಉರೂಸ್ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದ್ದಾರೆ.ಫೆ 10ಶನಿವಾರ ಸಂಜೆ 7ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಅರೆಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ನಾಪೋಕ್ಲು ಸೆಂಟ್ ಮೇರಿ ಚರ್ಚ್ ನ ಫಾದರ್ ಜ್ಞಾನ ಪ್ರಕಾಶ್ ಸೇರಿದಂತೆ ವಿವಿಧ ಧಾರ್ಮಿಕ ಪಂಡಿತರು, ರಾಜಕೀಯ ನೇತಾರರು,ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.ಫೆ.12ಸೋಮವಾರ ಮದ್ಯಾಹ್ನ 2ಗಂಟೆಗೆ ಬುರ್ದಾ ಮಜ್ಲಿಸ್ ಸಂಜೆ 4ಗಂಟೆಗೆ ಮೌಲೂದ್ ಪಾರಾಯಣ ಹಾಗೂ ಸರ್ವಧರ್ಮೀಯರಿಗೆ ಅನ್ನದಾನ ಕಾರ್ಯಕ್ರಮ ನೆರವೇರಲಿದ್ದು ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉರೂಸ್ ಸಮಾರಂಭವನ್ನು ಯಶಸ್ವಿಗೊಳಿಸಲು ಸಹಕರಿಸ ಬೇಕೆಂದು ಸಿರಾಜ್ ಮನವಿ ಮಾಡಿದರು.
ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ ಪಿ.ಎ.ಹಾರಿಸ್, ಸಹ ಕಾರ್ಯದರ್ಶಿ ಕೆ.ಎ.ಮಾಹಿನ್,ಖಜಾಂಚಿ ಪಿ. ಎ. ಬಶೀರ್,ಕಕ್ಕುಂದಕಾಡು ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಅಧ್ಯಕ್ಷ ಟಿ. ಎಸ್.ಮಂಜಯ್ಯ,ಚೆರಿಯಪರಂಬು ಸರ್ಕಾರಿ ಶಾಲೆಯ ಶಿಕ್ಷಕ ಸುಕುಮಾರ್, ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್,ಚೆರಿಯಪರಂಬು ಮಸೀದಿಯ ಖತೀಬರಾದ ಹಂಝ ರಹ್ಮಾನಿ, ಕಲ್ಲುಮೊಟ್ಟೆ ಮಸೀದಿಯ ಖತೀಬರಾದ ರಹೂಫ್ ಸಖಾಫಿ,ಚೆರಿಯ ಪರಂಬು ಜಮಾಅತ್ ನ ಮಾಜಿ ಅಧ್ಯಕ್ಷರು,ಉಪಾಧ್ಯಕ್ಷರುಗಳು, ಜಮಾಅತ್ ಪದಾಧಿಕಾರಿಗಳು,ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.