ಧರ್ಮವನ್ನು ಬದುಕಿನ ಬೆಳಕಾಗಿಸ ಬೇಕೇ ಹೊರೆತು ಬೆಂಕಿಯಾಗಿ ಅಲ್ಲ; ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ
ನಾಪೋಕ್ಲು: ಧರ್ಮವೆಂದರೆ ಬದುಕಿನ ಒಂದು ಬೆಳಕು ಆ ಧರ್ಮವನ್ನು ನಾವು ಬೆಳಕಾಗಿ ಉಪಯೋಗಿಸಬೇಕೆ ಹೊರತು ಬೆಂಕಿಯಾಗಿ ಅಲ್ಲ ಎಂದು ವಿರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಾಪೋಕ್ಲು ಬಳಿಯ ಚೆರಿಯಪರಂಬು ದರ್ಗಾದ ವಾರ್ಷಿಕ ಉರೂಸ್ ಸಮಾರಂಭದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವ ಧರ್ಮವು ಹಿಂಸೆಯನ್ನು ಬೋಧನೆ ಮಾಡುವುದಿಲ್ಲ, ಎಲ್ಲಾ ಧರ್ಮಗಳ ಮೂಲ ಧ್ಯೇಯ ಸಕಲ ಜೀವಾತ್ಮರಿಗೆ ಒಳಿತಾಗಿ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದಾಗಿದೆ. ಅದರ ಜೊತೆಗೆ ನಮ್ಮ ಬದುಕನ್ನು ನಾವು ರೂಡಿಸಬೇಕೆಂಬುವುದಾಗಿದೆ.ಧರ್ಮಗಳು ಒಂದು ಕೈಪಿಡಿ ಇದ್ದಹಾಗೆ, ಎಲ್ಲಾ ಧರ್ಮದ ಮಹಾನರು ಅತ್ಯಂತ ಉತ್ಕೃಷ್ಟವಾದ ಜೀವನ ಮೌಲ್ಯವನ್ನು ನಮಗೆ ತಂದುಕೊಟ್ಟಿದ್ದಾರೆ.ನಾವು ನೋಡುವ ನೋಟ,ಕೇಳುವ ಕಿವಿ, ಹಾಡುವ ಭಾಷೆ ಪರಿಶುದ್ಧವಾಗಿರಬೇಕೆಂದು ಬಸವಣ್ಣನವರು ವಚನದಲ್ಲಿ ಹೇಳಿದ್ದಾರೆ. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ಜಗತ್ತಿನಲ್ಲಿ ಯಾವುದೇ ಕಲಹ ಉಂಟಾಗಲು ಸಾಧ್ಯವಿಲ್ಲ. ಸಮಾಜದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಇದ್ದರೆ ಕನಸನ್ನು ಕಂಡು ಸುಂದರವಾದ ಬದುಕನ್ನು ಸಾಗಿಸಲು ಸಹಕಾರಿಯಾಗುತ್ತದೆ. ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಲು ಇಂದಿನ ಈ ಸೌಹಾರ್ದ ಸಮಾರಂಭ ಸಮಾಜಕ್ಕೆ ಪ್ರೇರಣೆಯಾಗಲಿ ಎಂದರು.
ನಾಪೋಕ್ಲು ಸೆಂಟ್ ಮೇರಿ ಚರ್ಚ್ ನ ಫಾದರ್ ಜ್ಞಾನ ಪ್ರಕಾಶ್ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಪ್ರತಿದಿನ ಕೊಲೆ ದರೋಡೆ ಅನಾಚಾರ, ಅನೈತಿಕತೆ ತಾಂಡವವಾಡುತ್ತಿದೆ. ಇದನ್ನು ಗಮನಿಸಿದರೆ ಪ್ರಪಂಚ ಎತ್ತ ಕಡೆ ಸಾಗುತ್ತಿದೆ ಎಂಬ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಎಲ್ಲಾ ಧರ್ಮಗಳಲ್ಲಿ ಒಳ್ಳೆಯ ಪುಸ್ತಕಗಳು ಬುದ್ಧಿಜೀವಿಗಳು,ಹಿರಿಯರೂ ಇದ್ದಾರೆ. ಆದರೂ ಸಹ ನಾವು ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವ ಬದಲು ಬೆಳಕಿನಿಂದ ಕತ್ತೆಲೆಡೆಗೆ ಹೋಗುವಂತಾಗಿದೆ. ಇವತ್ತಿನ ಸಮಾಜಕ್ಕೆ ಬೇಕಾಗಿರುವುದು ಒಬ್ಬ ಹರಿಶ್ಚಂದ್ರ, ಒಬ್ಬ ಮಹಮ್ಮದ್ ಪೈಗಂಬರ್ ಮತ್ತೊಬ್ಬ ಕ್ರೈಸ್ತ. ನಾವೆಲ್ಲರೂ ಅವರ ರೀತಿ ಬದುಕಿ ಅವರ ಪಡಿಹಚ್ಚುಗಳಾಗಬೇಕು. ಆಗ ಮಾತ್ರ ಒಂದು ಸುಂದರವಾದ ಸಮಾಜ ಕಟ್ಟಲು ಸಾಧ್ಯ ಎಂದ ಅವರು ಮನುಷ್ಯ ಯಾವಾಗ ಮನುಷ್ಯತ್ವವನ್ನೇ ಕಳೆದುಕೊಳ್ಳುತ್ತಾನೋ ಆವಾಗ ಮಾತ್ರ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಗೆ ಕಾರಣವಾಗುತ್ತದೆ. ನಾವು ಯಾರು ಪ್ರಪಂಚ ಅಲ್ಲೋಲಕಲ್ಲೋಲ ಆಗುವವರೆಗೂ ಬದುಕುವುದಿಲ್ಲ. ಮೂರು ದಿನದ ಜೀವನದಲ್ಲಿ ಒಳ್ಳೆಯ ಮನುಷ್ಯನಾಗಿ ಮಾನವನಾಗಿ ನಾವೆಲ್ಲರೂ ಬದುಕಬೇಕಾಗಿದೆ ಎಂದರು.
ಬೆಳೆಗಾರರಾದ ಕುಂದ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ ಸಮಾಜದಲ್ಲಿ ನಾವೆಲ್ಲರೂ ಪರಸ್ಪರ ಶಾಂತಿ ಸೌಹಾರ್ದತೆಯಿಂದ ಸಹೋದರರಂತೆ ಬಾಳಬೇಕಾಗಿದೆ. ಎಲ್ಲಾ ಧರ್ಮವು ಪವಿತ್ರವಾಗಿದೆ ಆದರೆ ಧರ್ಮದ ಅನುಯಾಯಿಗಳಾದ ನಾವು ಕೂಡ ಪವಿತ್ರರಾಗಿರಬೇಕು. ಯಾವುದೇ ಧರ್ಮದಲ್ಲಿ ಅನುಯಾಯಿಗಳು ತಪ್ಪು ಮಾಡುವಾಗ ಧರ್ಮದ ಹಿರಿಯರು ಅವರ ತಪ್ಪನ್ನು ತಿದ್ದುವ ಕೆಲಸ ಮಾಡಬೇಕಾಗಿದೆ. ನಾವೆಲ್ಲರೂ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಿ ಇಲ್ಲೇ ಸ್ವರ್ಗವನ್ನು ಕಾಣುವಂತ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರಬೇಕು. ಎಲ್ಲರೂ ಅವರವರ ಧರ್ಮವನ್ನು ಪಾಲಿಸಿ ಆದರೆ ಮತ್ತೊಂದು ಧರ್ಮಕ್ಕೆ ತೊಂದರೆ ಮಾಡುವ ಕೆಲಸ ಮಾಡಬಾರದು. ನಮ್ಮ ಈ ಊರಿನಲ್ಲಿ ಪರಸ್ಪರ ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ.ಇದೇ ರೀತಿ ಮುಂದುವರೆಯಲಿ ಎಂದ ಅವರು ಮುಂದಿನ ತಿಂಗಳಲ್ಲಿ ನಮ್ಮ ಕುಟುಂಬಸ್ಥರ ಅದೀನದಲ್ಲಿ ಕೊಡವ ಕುಟುಂಬಗಳ ಹಾಕಿ ಹಬ್ಬ ಇದೆ ಊರಿನಲ್ಲಿ ನಡೆಯಲಿದೆ. ಇದು ನಮ್ಮ ಜನಾಂಗದ ಕುಟುಂಬದ ಹಬ್ಬವಲ್ಲ ಸರ್ವಧರ್ಮದ ಜನಾಂಗದ ಹಬ್ಬವಾಗಬೇಕೆಂದು ನಾವು ಬಯಸಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಕ್ರೀಡಾಕೂಟ ಯಶಸ್ವಿಯಾಗಲು ಎಲ್ಲಾ ಧರ್ಮದವರು ಸಂಪೂರ್ಣ ಸಹಕಾರ ನೀಡಬೇಕೆಂದು ರಮೇಶ್ ಮುದ್ದಯ್ಯ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯಪ್ರಭಾ ಪ್ರಭಾಷಣ ಮಾಡಿದರು. ಕೊಡಗು ಜಿಲ್ಲಾ ನಾಹಿಬ್ ಖಾಝಿಗಳಾದ ಅಬ್ದುಲ್ಲಾ ಫೈಝಿ ಎಡಪಾಲ ಹಾಗೂ ನಾಪೋಕ್ಲು ಗ್ರಾಮ ಪಂಚಾಯತಿ ಸದಸ್ಯ ಬಿ. ಎಂ. ಪ್ರತೀಪ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಗಣ್ಯ ವ್ಯಕ್ತಿಗಳನ್ನು ಚೆರಿಯಪರಂಬು ಜಮಾಅತ್ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಮಾಅತ್ ಅಧ್ಯಕ್ಷರಾದ ಪರವಂಡ ಝುಬೈರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್,ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಎ. ಹಂಸ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಪಿ.ಎ. ಹನೀಫ್,ನಾಪೋಕ್ಲು ಗ್ರಾಮ ಪಂಚಾಯತ್ ಸದಸ್ಯರಾದ ಟಿ.ಎ. ಮಹಮ್ಮದ್, ಬಿ.ಎಂ. ಪ್ರತೀಪ್, ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಮರ್ಕಜ್ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕಕ್ಕುಂದಕಾಡು ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಅಧ್ಯಕ್ಷ ಟಿ.ಎಸ್ ಮಂಜಯ್ಯ,ಜಮಾಅತ್ ಕಾರ್ಯದರ್ಶಿ ಪರವಂಡ ಸಿರಾಜ್,ಮಸೀದಿಯ ಖತೀಬ ರಾದ ಹಂಝ ರಹ್ಮಾನಿ,ಸೇವ್ ದಿ ಡ್ರೀಮ್ಸ್ ಚಾರಿಟಿ ಸ್ಥಾಪಕ ಜಾಬಿರ್ ನಿಜಾಮಿ,ಜಮಾಅತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ, ಇಬ್ರಾಹಿಂ, ಹಂಝ,ಕೋಶಾಧಿಕಾರಿ ಬಶೀರ್,ಜಮಾಅತ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಾಬಿರ್ ನಿಜಾಮಿ ನಿರೂಪಿಸಿದರು. ಜಮಾಅತ್ ಕಾರ್ಯದರ್ಶಿ ಪರವಂಡ ಸಿರಾಜ್ ಸ್ವಾಗತಿಸಿ, ವಂದಿಸಿದರು. “ವಾರ್ಷಿಕ ಉರೂಸ್ ಪ್ರಯುಕ್ತ ಸೋಮವಾರ (ಇಂದು ) ಮದ್ಯಾಹ್ನ 2ಗಂಟೆಗೆ ಬೃಹತ್ ಬುರ್ದಾ ಮಜ್ಲಿಸ್, ಸಂಜೆ 4ಗಂಟೆಗೆ ಮೌಲೂದ್ ಪಾರಾಯಣ,ವಿಶೇಷ ಪ್ರಾರ್ಥನೆ ನಡೆದ ಬಳಿಕ ಭಕ್ತಾಧಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.”