ಹೊದ್ದೂರು ಶ್ರೀ ಭಗವತಿ ದೇವಾಲಯದ ಜೀರ್ಣೋದ್ಧಾರ; ಮಾರ್ಚ್ 7ರಿಂದ 14ರವರಗೆ ಪುನರ್ ಪ್ರತಿಷ್ಠಾಪನೆ-ಬ್ರಹ್ಮ ಕಳಶೋತ್ಸವ
ನಾಪೋಕ್ಲು–ಮೂರ್ನಾಡು ಮುಖ್ಯರಸ್ತೆಯ ಸಮೀಪದ ಹೊದ್ದೂರು ಗ್ರಾಮದ ಪುರಾತನ ಭಗವತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮೂರು ವರ್ಷಗಳಿಂದ ಸಾಗಿ ಇದೀಗ ಪುನರ್ ನಿರ್ಮಾಣಗೊಂಡಿದ್ದು, ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಶೋತ್ಸವ ಮಾರ್ಚ್ 7ರಿಂದ 14 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀ ಭಗವತಿ ದೇವಾಲಯ ನೂತನವಾಗಿ ನಿರ್ಮಾಣಗೊಂಡು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿದ್ದು, ಪುನರ್ ಪ್ರತಿಷ್ಠಾಪನೆ ಬ್ರಹ್ಮ ಕಳಶೋತ್ಸವದ ಅಂಗವಾಗಿ ಅಂತಿಮ ಹಂತದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ.ಧಾರ್ಮಿಕ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಕ್ಷೇತ್ರದ ಅಭಿವೃದ್ಧಿಗಾಗಿ ಗ್ರಾಮಸ್ಥರು ಪಣತೊಟ್ಟು ದೇವಾಲಯದ ಕಾರ್ಯ ಆರಂಭಿಸಿದ್ದರು. ಸುಮಾರು ₹ 1.8 ಕೋಟಿ ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದು ಊರಿನ ಭಕ್ತರು ತನು, ಮನ ಧನದಿಂದ ಸಹಕರಿಸಿದ್ದಾರೆ.
ಇತಿಹಾಸದ ಪ್ರಕಾರ ಸರಿ ಸುಮಾರು ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ ದೈವಿಕ ತಾಣ ಇದು ಎಂದು ನಂಬಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಮಚ್ಚೇಂದ್ರನಾಥ ಗುರು, ಕಣ್ವಮುನಿ ಹಾಗೂ ಅಗಸ್ತ್ಯ ಮಹರ್ಷಿ ತಪಸ್ಸು ಮಾಡಿ ತ್ರಿಶಕ್ತಿ ರೂಪಿಣಿಯರಾದ ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಉದ್ಭವಿಸಿ ನೆಲೆ ನಿಂತ ತಾಣ ಇದಾಗಿದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿದೆ. ತ್ರಿಶಕ್ತಿ ರೂಪಿಣಿ ಉದ್ಭವವಾಗಿ ಮೇಲೆ ಎದ್ದು (ಕೊಡವ ಭಾಷೆಯಲ್ಲಿ ಪೊದ್ದ್) ಬಂದ ತಾಣ ಪೊದ್ದೂರು ಆಗಿ ಬಳಿಕ ಹೊದ್ದೂರು ಎನಿಸಿಕೊಂಡಿತು.
ಇಲ್ಲಿ ರಾಜ ಮಯೂರವರ್ಮನ ಅರಮನೆ ಇತ್ತು ಎನ್ನುವುದಕ್ಕೆ ಕುರುಹುಗಳಿವೆ. ಮಚ್ಚೇಂದ್ರನಾಥರ ಗುರುಪೀಠ ಇದೆ. ಶ್ರೀ ದೇವಿಯ ಕ್ಷೇತ್ರವು ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಭಗವತಿ ದೇವಿಯು ತ್ರಿ ಸ್ವರೂಪಿ ಶಕ್ತಿಯಾಗಿದ್ದು ಸ್ವಕ್ಷೇತ್ರದಲ್ಲಿಯೇ ಉದ್ಭವವಾದಂತಹ ಶಕ್ತಿದೇವತೆಯಾಗಿರುತ್ತಾಳೆ. ಈ ದೇವಾಲಯದಲ್ಲಿ ಹಿಂದೆ ಶ್ರೀಚಕ್ರ ಇದ್ದು ಈಗ ಇದು ಕಾಣದಾಗಿದೆ. ಇಲ್ಲಿ ಋಷಿಮುನಿಗಳು ಜಪ–ತಪ ಮಾಡಿರುವಂತಹ ಕುರುಹುಗಳು ಕಂಡುಬಂದಿದೆ.
ದೇವಾಲಯವು ಶಿಥಿಲಗೊಂಡಿದ್ದು ದೇವಿಯ ವಿಗ್ರಹವು ವಿಘ್ನಗೊಂಡಿದ್ದರಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಗ್ರಾಮದಲ್ಲಿ 27 ತೆರಿಗೆ ಕುಟುಂಬಗಳಿದ್ದು ಪ್ರತಿ ಕುಟುಂಬದಿಂದ ಒಬ್ಬರಂತೆ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿದ್ದು ದೇವಿಯ ಕ್ಷೇತ್ರವನ್ನು ಶಿಲೆಯಲ್ಲಿ ನಿರ್ಮಿಸಲಾಗಿದೆ. ತಂತ್ರಿಗಳಾಗಿ ನೀಲೇಶ್ವರ ದಾಮೋದರ ಹಾಗೂ ಪದ್ಮನಾಭ, ಬೆಳ್ತಂಗಡಿಯ ರಾಜೇಂದ್ರ ಪ್ರಧಾನ ಶಿಲ್ಪಿಯಾಗಿ, ವಾಸ್ತುಶಿಲ್ಪಿಯಾಗಿ ಕಾಸರಗೋಡಿನ ಬೆದರಡ್ಕ ರಮೇಶ್ ಕಾರಂತ ಕಾರ್ಯನಿರ್ವಹಿಸಿದ್ದಾರೆ.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚೌರಿರ ಕೆ. ಮೇದಪ್ಪ , ದೇವತಕ್ಕರಾಗಿ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯರಾಗಿರುವ ಮಾಜಿ ಸೈನಿಕ, ನಿವೃತ್ತ ಶಿಕ್ಷಕ ಚೌರಿರ ಉದಯ ಸೇರಿದಂತೆ ಸಮಿತಿ ಸದಸ್ಯರು ಗ್ರಾಮಸ್ಥರು ಕಾರ್ಯನಿರ್ವಹಿಸುತ್ತಿದ್ದಾರೆ.
ದೇವಾಲಯವನ್ನು ಕಾರ್ಕಳದಿಂದ ತರಲಾದ ಕಲ್ಲಿನಿಂದಲೇ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿ ಆಕರ್ಷಕ ಕುಸುರಿ ಕೆಲಸದೊಂದಿಗೆ ಸಂಪೂರ್ಣವಾಗಿ ನಿರ್ಮಿಸಲಾಗಿರುವುದು ವಿಶೇಷ. ದೇವಾಲಯದ ಸುತ್ತಲೂ ಇಂಟರ್ಲಾಕ್ ಅಳವಡಿಕೆ, ಉದ್ಯಾನವನ ನಿರ್ಮಿಸಲಾಗಿದೆ. ಸುಮಾರು 1.8 ಕೋಟಿ ರೂ ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದೆ.
{ನಾಲ್ಕು ವರ್ಷಗಳ ಹಿಂದೆ ಗ್ರಾಮದಲ್ಲಿ ಹೊಸ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಜೀರ್ಣೋದ್ಧಾರಗೊಂಡ ದೇವಾಲಯ ಇದೀಗ ಸುಂದರವಾಗಿ ಕಂಗೊಳಿಸುತ್ತಿದೆ. ಈಗಾಗಲೇ ಸುಮಾರು 1.5 ಕೋಟಿ ರೂ. ವೆಚ್ಚವಾಗಿದೆ ಇನ್ನೂ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ .ಅಂದಾಜು 30 ಲಕ್ಷ ರೂ. ಅವಶ್ಯಕತೆ ಇದ್ದು, ನಿರೀಕ್ಷಿಸಲಾಗಿದೆ} :ಚೌರಿರ ಕೆ. ಮೇದಪ್ಪ, ಅಧ್ಯಕ್ಷರು ದೇವಾಲಯ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ
{2013ರಲ್ಲಿ ವಿರಾಜಪೇಟೆಯ ದಿವಾಕರ ಭಟ್ಟರ ಮುಖಾಂತರ ತಾಂಬೂಲ ಪ್ರಶ್ನೆ ಇಡಲಾಗಿ ಪ್ರತಿ ತಿಂಗಳ ಮೊದಲ ಮಂಗಳವಾರ ಪೂಜಾ ಕೈಂಕರ್ಯಗಳು ನಡೆದು ಕೊಂಡು ಬಂತು. ನಂತರ 2017ರ ಅಕ್ಟೋಬರ್‌ನಲ್ಲಿ ಸ್ವರ್ಣರೂಢ ಪ್ರಶ್ನೆ ಇಡಲಾಗಿ ಜೀರ್ಣೋದ್ಧಾರ ಕಾರ್ಯ ಕೈಗೊಂಡು ಪುನರ್ ಪ್ರತಿಷ್ಠಾಪನೆ ಬ್ರಹ್ಮ ಕಳಶೋತ್ಸವಕ್ಕೆ ಸಜ್ಜಾಗಿದೆ.} :ನೆರವಂಡ ಸಂಜಯ ಪೂಣಚ್ಚ, ತಕ್ಕ ಮುಖ್ಯಸ್ಥರು ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ
{ಗರ್ಭಗುಡಿ ಶಾಸ್ತ್ರೋತ್ರವಾಗಿ ನಿರ್ಮಾಣಗೊಂಡು ಷಡಧಾರ ಪ್ರತಿಷ್ಠೆ 9 ಅಡಿ ಆಳದಿಂದ ಆಗಿದೆ. ಭಕ್ತಾದಿಗಳ ಸಹಕಾರದಿಂದ ಜನರ ಶ್ರೇಯೋಭಿವೃದ್ಧಿಗಾಗಿ ದೇವಾಲಯ ನಿರ್ಮಾಣಗೊಂಡಿದೆ} :ಚೌರಿರ ಉದಯ, ಮಾಜಿ ಸೈನಿಕರು, ನಿವೃತ್ತ ಶಿಕ್ಷಕ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯ
ಶ್ರೀ ಭಗವತಿ ಕ್ಷೇತ್ರ ಹೊದ್ದೂರು, ಮಡಿಕೇರಿ ಕೊಡಗು.
ಮರಕಡ ಶ್ರೀ ಗುರ ಪರಾಶಕ್ತಿ ಮಠ ಪರಮ ಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ಪೂರ್ಣಾನುಗ್ರಹದೊಂದಿಗೆ, ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮನವರ ದಿವ್ಯ ನೇತೃತ್ವದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಭಗವತಿ ಕ್ಷೇತ್ರ ಹೊದ್ದೂರು ಇದರ ಪ್ರತಿಷ್ಠಾಪನೆ ಬ್ರಹ್ಮಕಳಶ, ಮತ್ತು ವೈದಿಕ ಕಾರ್ಯಕ್ರಮಗಳು. ಬ್ರಹ್ಮಶ್ರೀ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿಗಳು ಅರವತ್ತ್ ಇವರ ವೈದಿಕ ಕಾರ್ಯಕ್ರಮಗಳು ದೇವಸ್ಥಾನದ ತಕ್ಕಮುಖ್ಯಸ್ತರ ಉಪಸ್ಥಿತಿಯಲ್ಲಿ ಮಾ.7 ರಿಂದ ಆರಂಭಗೊಂಡು ಮಾ.14.ವರೆಗೆ ಒಂದು ವಾರಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಲಿದೆ.
ಪೂಜಾ ಕಾರ್ಯಕ್ರಮದ ವಿವರ:
ದಿನಾಂಕ: 07-3-2024 ಗುರುವಾರ ಸಾಯಂಕಾಲ 6.00ಗಂಟೆಗೆ. ಶಿಲ್ಪಿಯವರು ಮತ್ತು ಆಚಾರಿಯವರಿಂದ ಕುತ್ತಿಪೂಜೆ, ಕ್ಷೇತ್ರ ಬಿಟ್ಟುಕೊಡುವುದು.
ದಿನಾಂಕ: 08-03-2024 ಶುಕ್ರವಾರ ಸಾಯಂಕಾಲ 5.00 ಗಂಟೆಗೆ ತಂತ್ರಿಯವರ ಆಗಮನ. 7.00 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಆಚಾರ್ಯ ವರ್ಣ, ಪ್ರಾಸಾದ ಪರಿಗ್ರಹ ಪಶುದಾನ ಶುದ್ಧಿ, ಅಂಕುರ ಆರೋಹಣ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಕಳಶ ಪೂಜೆ, ವಾಸ್ತು ಹೋಮ, ವಾಸ್ತುಬಲಿ, ಕುಂಡಶುದ್ಧಿ, ವಾಸ್ತು ಕಳಾಶಾಭಿಷೇಕ, ರಾತ್ರಿ ಪೂಜೆ, ಅನ್ನದಾನ.
ದಿನಾಂಕ; 09-03-2024 ಶನಿವಾರ ಬೆಳಿಗ್ಗೆ 6.00 ಗಂಟೆಗೆ ಗಣಪತಿಹೋಮ, ತ್ರಿಕಾಲಪೂಜೆ, ಅಂಕುರ ಪೂಜೆ, ಬಿಂಬ ಶುದ್ಧಿ, ಸ್ಥಳ ಶುದ್ಧಿ, ದ್ವಾರ ಪ್ರಾಯಶ್ಚಿತ ಹೋಮ, 12.00 ಗಂಟೆಗೆ ಮಧ್ಯಾಹ್ನ ಪೂಜೆ, ಅನ್ನದಾನ.
ಸಾಯಂಕಾಲ 5.00 ಗಂಟೆಯಿಂದ ಅಂಕುರ ಆರೋಹಣ, ವಿಗ್ರಹ ಪರಿಗ್ರಹ, ದೀಪಾರಾಧನೆ, ಜಲಾದಿವಾಸ, ಕುಂಡಶುದ್ದಿ, ತ್ರಿಕಾಲ ಪೂಜೆ, ಅಂಕುರ ಪೂಜೆ, ರಾತ್ರಿ ಪೂಜೆ, ಅನ್ನದಾನ.
ದಿನಾಂಕ: 10-03-2024 ಭಾನುವಾರ ಬೆಳಿಗ್ಗೆ 6.00 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಅಂಕುರ ಪೂಜೆ, ಅದ್ಭುತ ಶಾಂತಿ ಹೋಮ, ಸ್ವಶಾಂತಿ ಹೋಮ, ಚೋರಶಾಂತಿ ಹೋಮ, ಕಳಾಶಾಭಿಷೇಕ, ಮಧ್ಯಾಹ್ನ ಪೂಜೆ, ಅನ್ನದಾನ.
ಸಾಯಂಕಾಲ 6.00 ಗಂಟೆಯಿಂದ ದೀಪಾರಾಧನೆ, ತಾಯಂಬಗ (ಚಂಡೆಯವರಿಂದ) ಅಂಕುರ ಪೂಜೆ, ತ್ರಿಕಾಲ ಪೂಜೆ, ಕುಂಡ ಶುದ್ಧಿ, ರಾತ್ರಿ ಪೂಜೆ, ಅನ್ನದಾನ.
ದಿನಾಂಕ: 11-03-2024 ಸೋಮವಾರ ಬೆಳಿಗ್ಗೆ 6.00 ಗಂಟೆಗೆ ಗಣಪತಿಹೋಮ, ತ್ರಿಕಾಲಪೂಜೆ, ಅಂಕುರ ಪೂಜೆ, ಅಗ್ನಿಜ್ವಲನ, ತತ್ವಕಳಶಪೂಜೆ, ಅನುಜ್ಞಾ ಕಳಶಪೂಜೆ, ಮಂಟಪಶುದ್ಧಿ, ತತ್ವಹೋಮ, ತತ್ವಕಳಾಶಾಭಿಷೇಕ. ಅನುಜ್ಞಾ ಕಳಶಾಭಿಷೇಕ. ಮಧ್ಯಾಹ್ನ ಪೂಜೆ, ಅನ್ನದಾನ.
ಸಾಯಂಕಾಲ 5 ಗಂಟೆಯಿಂದ ಅನುಜ್ಞಾಬಲಿ
6.30 ಗಂಟೆಗೆ ಅನುಜ್ಞಾ ಪ್ರಾರ್ಥನೆ ಗ್ರಾಮಸ್ಥರಿಂದ, ದೀಪಾರಾಧನೆ, ಅಂಕುರ ಪೂಜೆ, ತ್ರಿಕಾಲ ಪೂಜೆ, ಕುಂಡಶುದ್ದಿ, ಅನ್ನದಾನ.
ದಿನಾಂಕ: 12-03-2024 ಮಂಗಳವಾರ ಬೆಳಿಗ್ಗೆ 5.00 ಗಂಟೆಯಿಂದ ಗಣಪತಿ ಹೋಮ, ಕಳಶ ಮಂಟಪ ಸಂಸ್ಕಾರ, ಅಗ್ನಿಜ್ವಲನ, ಅಂಕುರ ಪೂಜೆ, ತ್ರಿಕಾಲಪೂಜೆ, ಕುಂಭೇಷ ಕರ್ಕರಿ ಪೂಜೆ, ನಿದ್ರಾಕಳಶಪೂಜೆ, ಶಯ್ಯಾಪೂಜೆ, ತತ್ವಕಳಶಪೂಜೆ, ಸಂಹಾರ ತತ್ವಹೋಮ, ಅನುಜ್ಞಾಪ್ರಾರ್ಥನೆ, ತತ್ವಕಳಾಶಾಭಿಷೇಕ, ಜೀವ ಕಳಶಪೂಜೆ, ಜೀವೋದ್ವಾಷನೆ, ಜೀವಕಳಶ ಶಯ್ಯಕ್ಕೆ ಆಗಮನ, ಬಿಂಭೋದ್ಧಾರ ಮಧ್ಯಾಹ್ನ ಪೂಜೆ, ಅನ್ನದಾನ.
ಸಾಯಂಕಾಲ 4.00 ಗಂಟೆಗೆ ಜಲೋದ್ಧಾರ, ಬಿಂಬಶುದ್ಧಿ, ಪಶುದಾನ ಪುಣ್ಯಾಹ, ಪ್ರಾಸಾದ ಶುದ್ದಿ ಕ್ರಿಯೆಗಳು, ಅದಿವಾಸಹೋಮ, ಧ್ಯಾನಾಧಿವಾಸ, ಪೀಠಾಧಿವಾಸ, ಪ್ರಾಸಾದ ಅದಿವಾಸ ಶಯ್ಯಯಲ್ಲಿ ರಾತ್ರಿಪೂಜೆ. ಅನ್ನದಾನ.
ದಿನಾಂಕ: 13-03-2024 ಬುಧವಾರ ಬೆಳಿಗ್ಗೆ 5.00 ಗಂಟೆಗೆ ಗಣಪತಿ ಹೋಮ, ತ್ರಿಕಾಲಪೂಜೆ, ಕುಂಬೇಷ ಕಳಶಪೂಜೆ, ಕರ್ಕರಿ ಕಳಶಪೂಜೆ, ಪರಿಕಳಶಪೂಜೆ, ಅಂಕುರಪೂಜೆ, ಪ್ರಾಸಾದ ಪ್ರತಿಷ್ಠೆ.
ಬೆಳಿಗ್ಗೆ 8.00 ರಿಂದ 10.30ರ ಒಳಗೆ ಮೇಷ ಲಗ್ನ, ಶುಕ್ಲ ಪಕ್ಷ, ಚತುರ್ಥ ತಿಥಿ ಸುಮುಹೂರ್ತದಲ್ಲಿ ಪೀಠಪ್ರತಿಷ್ಠೆ, ಬಿಂಬಪ್ರತಿಷ್ಠೆ, ನಾಗಪ್ರತಿಷ್ಠೆ, ಬ್ರಹ್ಮಕಳಶಪೂಜೆ, ಅಷ್ಟಬಂಧ ಕ್ರಿಯೆ, ಕುಂಬೇಷ ಕಳಶಾಭಿಷೇಕ, ನಿದ್ರಾಕಳಶಾಭಿಷೇಕ, ಜೀವಕಳಶಾಭಿಷೇಕ, ಜೀವ ಆಹ್ವಾನ, ಪ್ರತಿಷ್ಠಾ ಬಲಿ, ಪರಿವಾರ ಪ್ರತಿಷ್ಠೆ, ಮಹಾಪೂಜೆ, ನಿತ್ಯವಿದಾನ ನಿಶ್ಚಯ, ಅನ್ನದಾನ.
ಸಾಯಂಕಾಲ 5.00 ಗಂಟೆಗೆ ಅದಿವಾಸಹೋಮ, ದೀಪಾರಾಧನೆ, ಮಹಾಬಲಿಪೀಠ ಅದಿವಾಸ, ತ್ರಿಕಾಲ ಪೂಜೆ ಕಳಶಾಧಿವಾಸ, ರಾತ್ರಿಪೂಜೆ, ಅನ್ನದಾನ.
ದಿನಾಂಕ: 14-03-2024 ಗುರುವಾರ ಬೆಳಿಗ್ಗೆ 5.00 ಗಂಟೆಗೆ ಗಣಪತಿ ಹೋಮ, ಮಹಾಬಲಿ, ಪೀಠಪ್ರತಿಷ್ಠೆ, ತತ್ವಕಳಶ ಪೂಜೆ, ತತ್ವಹೋಮ, ತತ್ವಕಳಶಾಭಿಷೇಕ, ಪರಿಕಳಶಾಭಿಷೇಕ, ಕುಂಬೇಷ ಕಳಶಾಭಿಷೇಕ. ಬ್ರಹ್ಮಕಳಶಾಭಿಷೇಕ, ಅವಸ್ರಾವ ಪ್ರೋಕ್ಷಣೆ. ಮಹಾಪೂಜೆ, ಭೂತಬಲಿ, ಅನ್ನದಾನ.
ಸಾಯಂಕಾಲ 3.00 ಗಂಟೆಗೆ ದೇವರ ನೃತ್ಯಬಲಿ.
ಪ್ರತಿ ದಿನ ವೈದಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ದೇವಾಲಯದ ಜೀರ್ಣೋದ್ಧಾರ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ನಾಡಿನ ಭಕ್ತಾಧಿಗಳು ತಮ್ಮ ತನು ಮನ ಧನ ಸಹಾಯ ನೀಡಿ ಸಹಕರಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತಿರುವ,
ಅಧ್ಯಕ್ಷರು / ಕಾರ್ಯದರ್ಶಿಗಳು ತಕ್ಕ ಮುಖ್ಯಸ್ಥರು.
ಹಾಗೂ ಆಡಳಿತ ಮಂಡಳಿ, ಸದಸ್ಯರು. ಹಾಗೂ ಗ್ರಾಮಸ್ಥರು.
ಭಗವತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ. ಹೊದ್ದೂರು. 571252
ಸೇವಾಕಾಂಕ್ಷಿಗಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
99726 38034, 90087 49181, 99008 76893, 98458 21255
ಶ್ರೀ ಭಗವತಿ ದೇವಾಲಯ, ಹೊದ್ದೂರು ಇದರ ಬ್ಯಾಂಕ್ ಖಾತೆ ವಿವರಗಳು:
SRI BHAGAVATHI TEMPLE TRUST.
Bank Name: State Bank of India
Branch: Murnad
A/C No. 37731155950
IFSC: SBIN0007910