ಸಂಪಾದಕೀಯ: ಕಾಫಿ ಪ್ರಿಯರಿಂದ, ಕಾಫಿ ಪ್ರಿಯರಿಗಾಗಿ “ಸರ್ಚ್‌ ಕಾಫಿ” 

ಕಾಫಿ ಪ್ರಿಯರಿಂದ, ಕಾಫಿ ಪ್ರಿಯರಿಗಾಗಿ “ಸರ್ಚ್‌ ಕಾಫಿ” 

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಆತ್ಮೀಯ ಕಾಫಿ ಪ್ರಿಯರೇ,

ಮೊದಲ ಸಂಪಾದಕೀಯದೊಂದಿಗೆ  ಸರ್ಚ್‌ ಕಾಫಿ  ಬಳಗದ ನಮಸ್ಕಾರಗಳು.

ಕಾಫಿಯ ಪರಿಮಳ ಮೈ ಮನಸುಗಳನ್ನು ಜಾಗೃತಗೊಳಿಸುತ್ತದೆ. ಪರಿಮಳವ ಆಗ್ರಾಣಿಸದೆ ಕಾಫಿ ಲೋಟಕ್ಕೆ ತುಟಿ ಬಿಚ್ಚುವುದುಂಟೆ? ಮುಂಜಾನೆ ದಿನಪತ್ರಿಕೆಯಲ್ಲಿ ತಲೆಹಾಕಿ ಕೂತಾಗ, ಮನೆಗೆ ನೆಂಟರಿಷ್ಷರು ಬಂದಾಗ ಅತ್ತ ಅಡುಗೆಮನೆಯಿಂದ ಬರುವ ಕಾಫಿಯ ಪರಿಮಳ ಮೂಗು ಮನಸ್ಸೆಲ್ಲವನ್ನು ಸೆಳೆಯುತ್ತದೆ. ತಕ್ಷಣಾರ್ಧದಲ್ಲಿ ಎಲ್ಲವೂ ಕಾಫಿಮಯವಾಗಿ ಅದರ ಪರಿಮಳದಲ್ಲಿ ತೇಲಿ ಬಿಡುವುದುಂಟು.  

ಕಾಫಿ ಕೃಷಿಗೆ ಪೂರಕ ಹಲವು ಅನ್ವೇಷಣೆಗಳು ಸಾಧ್ಯವಾಗಿರುವ ಈಗಿನ ಕಾಲಘಟ್ಟದಲ್ಲಿ ಕಾಫಿ ಕೃಷಿಯನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ದೂರದೃಷ್ಟಿ ಮತ್ತು ಸೂಕ್ತ ಯೋಜನೆಯ ಅಗತ್ಯ ಇದೆ. ಮತ್ತು ಕರ್ನಾಟಕದಲ್ಲಿ ಅದಕ್ಕೆ ಪೂರಕವಾದ ಅವಕಾಶಗಳೂ ಇವೆ. ರೈತರಲ್ಲಿ ಮತ್ತೆ ಕಾಫಿ ಕೃಷಿ ಬಗ್ಗೆ ವಿಶ್ವಾಸ ಮೂಡಿಸುವಂತೆ, ಕಾಫಿ ಕೃಷಿಕರ ಆದಾಯ ಹೆಚ್ಚಿಸುವಂತೆ ಮಾಡಬೇಕಿದೆ. ಪ್ರಭುತ್ವ ಮತ್ತು ಜನರು ಕೈಜೋಡಿಸಿದರೆ ಕಾಫಿ ಕೃಷಿ ಸಂಸ್ಕೃತಿಯನ್ನು ಮೆರೆಸಬಹುದು. ಕಾಫಿಯೊಂದಿಗೆ ಕಾಳುಮೆಣಸು, ಏಲಕ್ಕಿ, ಕಿತ್ತಳೆ ,ಅಡಿಕೆ, ಬಾಳೆ, ಜೇನು ಸಾಕಾಣೆ  ಇತ್ಯಾದಿ ಅಂತರ ಬೆಳೆಗಳು ಕಾಫಿ ಕೃಷಿಕರ ಬದುಕನ್ನು ಆಧರಿಸಿದೆ. 

ಕರ್ನಾಟಕದ ಕಾಫಿಗೆ ಅದರದೆ ಆದ ವಿಶೇಷತೆಯುಂಟು. ಇಲ್ಲಿನದು ಹೆಚ್ಚಾಗಿ ರೊಬಸ್ಟಾ ಮತ್ತು ಅರೆಬಿಕಾ ತಳಿಗಳು. ಆದರೆ ಇಲ್ಲಿನ ಕಾಫೀ ತೋಟಗಳು ನೆರಳಿನಲ್ಲಿ ಅಪ್ಪಟ ಜೈವಿಕ ಸಮೃದ್ಧತೆಯಿಂದ ಇರುವಂತಹ ತೋಟಗಳು. ಸಾಕಷ್ಟು ನಿತ್ಯಹರಿದ್ವರ್ಣದ, ಸಾರಜನಕವನ್ನು ಸ್ಥಿರೀಕರಿಸಬಲ್ಲ, ಜೊತೆಗೆ ವಿವಿಧ ಎತ್ತರಗಳ ಎಲೆ ತಾರಸಿಗಳನ್ನು ಹೊಂದಿರುವ ಸಾಕಷ್ಟು ಸಸ್ಯಗಳನ್ನು ತೋಟದಲ್ಲಿ ಕಾಣಬಹುದು. ಈ ದೃಶ್ಯವನ್ನು ಭಾರತ ಬಿಟ್ಟು ಇತರೇ ದೇಶಗಳಲ್ಲಿ ಕಾಣಲಾಗದು. ಗಿಡಮರ ನಾಶಪಡಿಸಿ, ಕಾಫಿ ಬೆಳೆಯುವ ಹೊಸ ಪ್ರಯತ್ನಗಳು ಕಾಫಿ ಕೃಷಿ ಮತ್ತು ಕಾಫಿ ಸಂಸ್ಕೃತಿಯನ್ನೇ ನಾಶಪಡಿಸುತ್ತವೆ. ಇಂತಹ ಪ್ರಯೋಗಗಳಿಂದ ಗುಣಮಟ್ಟದ ಕಾಫಿ ಉತ್ಪಾದನೆ ಸಾಧ್ಯವಿಲ್ಲ. ಇದು ಯಶಸ್ವಿಯಾಗುವುದೂ ಇಲ್ಲ. ಭಾರತದ ಮುಕ್ಕಾಲು ಪಾಲು ಕಾಫಿಯನ್ನು ಕರ್ನಾಟಕ ರಾಜ್ಯದಲ್ಲೇ ಉತ್ಪಾದಿಸಲಾಗುತ್ತಿದೆ. ಕಾಫಿ ಉತ್ಪಾದನೆಯಲ್ಲಿ ನಮ್ಮ ದೇಶವು ಜಗತ್ತಿನಲ್ಲಿ 5ನೆಯ ರಾಷ್ಟ್ರವಾಗಿದೆ. ಅದರ ಮುಕ್ಕಾಲು ಪಾಲಿನ ಕೊಡುಗೆಯು ಕರ್ನಾಟಕ ರಾಜ್ಯದ್ದೇ.

ನೆರಳಿನ ಆಶ್ರಯ ಮತ್ತು ಪರಿಸರ ಸ್ನೇಹಿ ಕಾಫಿಗೆ ನಮ್ಮ ಕರ್ನಾಟಕ ರಾಜ್ಯ ಪ್ರಸಿದ್ಧಿ. ನಮ್ಮದು ಪರಿಸರ ಸ್ನೇಹಿ ಕಾಫಿ ಕೃಷಿ. ವಿಶ್ವಮಟ್ಟದಲ್ಲೂ ಹಾಗೆಯೇ ಗುರುತಿಸಿಕೊಂಡಿದ್ದೇವೆ. ಅರೆಬಿಕಾ ಕಾಫಿಯನ್ನು ಹದವಾದ ನೆರಳಿನಲ್ಲಿ ಬೆಳೆಯಬೇಕು. ನಮ್ಮ ಕಾಫಿ ಉದ್ಯಮವು ಪರಿಸರವನ್ನು ಉಳಿಸಿ, ಬೆಳೆಸುವಂತಿರಬೇಕು. ಜೀವವೈವಿಧ್ಯಗಳನ್ನು ಪೋಷಿಸಿ, ಜಲಮೂಲ ರಕ್ಷಿಸುವಂತಾಗಬೇಕಿದೆ. ಇಂದಿನ ದಿನಗಳಲ್ಲಿ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಕಾಫಿ ಬೆಳೆಯಲ್ಲಿ ಸಿಗುತ್ತಿರುವ ಆದಾಯ ತೋಟದ ನಿರ್ವಹಣೆಗೂ ಸಾಕಾಗುತ್ತಿಲ್ಲ. ಹಾಕಿದ ಬಂಡವಾಳವೂ ಸಿಗುತ್ತಿಲ್ಲ. ಪೂರಕ ಬೆಳೆಯಾಗಿ ಕಾಳುಮೆಣಸು, ಏಲಕ್ಕಿ, ಕಿತ್ತಳೆ ,ಅಡಿಕೆ, ಬಾಳೆ, ಜೇನು ಸಾಕಾಣೆ  ಇತ್ಯಾದಿ ಅಂತರ ಬೆಳೆಗಳನ್ನು ಬೆಳೆಯುವವರು ಮಾತ್ರ ಚೇತರಿಕೆಯಲ್ಲಿದ್ದಾರೆ.

ಕಾಫಿ ವಲಯ ನಿರಂತರ ಸಂಕಷ್ಟಕ್ಕೊಳಗಾಗಿದ್ದು,. ಪ್ರಾಕೃತಿಕ ಬದಲಾವಣೆಗಳಿಂದ ಮಳೆಗಾಲದಲ್ಲಿಯೂ ಉಷ್ಣಾಂಶದ ಏರಿಕೆ ಕಂಡು ಬರತೊಡಗಿತು. ಇದು ಅರೆಬಿಕಾ ಕಾಫಿಯ ಬಹುಮುಖ್ಯ ಶತ್ರುವಾದ ಕಾಂಡ ಕೊರಕ ಕೀಟಗಳಿಗೆ ಅತ್ಯುತ್ತಮ ಸ್ಥಿತಿ. ಇದರಿಂದಾಗಿ ಅರೆಬಿಕಾ ತೋಟಗಳು ನಾಶವಾಗತೊಡಗಿದವು. ಜೊತೆಗೆ ಶುಂಠಿ ಮತ್ತಿತರ ಕೃಷಿಗಳಿಗೆ ಬಳಸಿದ ಅತಿಯಾದ ವಿಷಗಳ ಪರಿಣಾಮವೋ ಕೆಲವು ಜಾತಿಯ ಕೀಟಾಹಾರಿ ಇರುವೆಗಳು ನಾಶವಾಗಿ ಅದುವರೆಗೆ ಯಾವುದೇ ರೋಗವಿಲ್ಲದ ಸುರಕ್ಷಿತ ಬೆಳೆಯಾಗಿದ್ದ ರೊಬಸ್ಟ ಕಾಫಿಗೂ ಕಾಯಿ ಕೊರಕವೆಂಬ ಮಾರಿಯೊಂದು ಪ್ರಾರಂಭವಾಗಿ ಮೊದಲೇ ಬೆಳೆ ಇಳಿಕೆಯಿಂದಾದ ಸಂಕಷ್ಟಕ್ಕೆ ಮತ್ತೊಂದು ಸಮಸ್ಯೆ ಸೇರಿತ್ತು.

ವನ್ಯಮೃಗಗಳ ಹಾವಳಿ ಈ ಹಿಂದಿನಿಂದಲೂ ಕಾಫಿ ಬೆಳೆಗಾರರಿಗೆ ಇರುವ ಶಾಪ ಎಂದರೂ ತಪ್ಪಾಗಲಾರದು. ಅರಣ್ಯದಂಚಿನ ಭಾಗದ ಕಾಫಿ ತೋಟಗಳಲ್ಲಿ ಹುಲಿ, ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಹಿಂದೆ ಹಲಸಿನ ಹಣ್ಣು ತಿನ್ನಲು ಬರುತ್ತಿದ್ದ ಕಾಡಾನೆಗಳು ಈಗ ಕಾಫಿ ಹಣ್ಣುಗಳನ್ನೇ ತಿನ್ನಲಾರಂಭಿಸಿದೆ. ಕೊಯ್ಲು ಮಾಡಿ ಮನೆಯಂಗಳದಲ್ಲಿಟ್ಟ ಕಾಫಿ ಹಣ್ಣುಗಳನ್ನೂ ರಾತ್ರಿ ವೇಳೆಯಲ್ಲಿ ಬರುತ್ತಿರುವ ಕಾಡಾನೆಗಳು ತಿನ್ನುತ್ತಿವೆ. ಆನೆ ನಡೆದದ್ದೆ ದಾರಿ ಎಂಬಂತೆ ಎಲ್ಲೆಂದರಲ್ಲಿ ಸಂಚರಿಸುತ್ತಿರುವ ಕಾಡಾನೆಗಳಿಂದ ಕಾಫಿ ಗಿಡಗಳು ಮುರಿದು ನಷ್ಟವುಂಟಾಗುತ್ತಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಾಫಿ ಬೆಳೆ ಕಾಡಾನೆ ಪಾಲಾಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಮಳೆ ಮತ್ತು ಕಾಫಿ ಮಲೆನಾಡಿಗರ ಜೀವಾಳ. ಧೊ…. ಧೊ…. ಅಂತ ಮಳೆ ಸುರಿತಾ ಇರಬೇಕು, ಸೊರ್…. ಸೊರ್…. ಅಂತ ಕಾಫಿ ಹೀರ್ತಾನೆ ಇರಬೇಕು. ಅದೇ ಮಲೆನಾಡ ಲಕ್ಷಣ. ಗ್ರಾಮೀಣ ಬದುಕು ಮತ್ತು ಕೃಷಿಯಲ್ಲಿ ನಿಜವಾದ ನೆಮ್ಮದಿ ನೆಲೆಸಿದೆ. ಯುವ ಸಮೂಹ ಕಾಫಿ ಕೃಷಿಯಿಂದ ವಿಮುಖವಾಗುತ್ತಿರುವ ಈ ದಿನಗಳಲ್ಲಿ ಮತ್ತೆ ಅವರನ್ನು ಕಾಫಿ ಕೃಷಿಯತ್ತ ಕರೆತರುವ ಹೊಣೆ ನಮ್ಮೆಲ್ಲರ ಮೇಲಿದೆ. ಕಾಫಿ ಕೃಷಿ ಕೂಡ ಲಾಭದಾಯಕ ಕ್ಷೇತ್ರ ಎಂಬುದನ್ನು ಮನವರಿಕೆ ಮಾಡಬೇಕು. ಅದಕ್ಕಾಗಿ ಕಡಿಮೆ ವೆಚ್ಚ ಮತ್ತು ಶ್ರಮದಿಂದ ಹೆಚ್ಚು ಲಾಭಗಳಿಸುವ ವಿಧಾನಗಳನ್ನು ಪರಿಚಯಿಸುವ ಕೆಲಸ ಆಗಬೇಕು. 

ಕಾಫಿ ಕೃಷಿ ಕ್ಷೇತ್ರವು ಹಲವು ಗಂಭೀರ ಸಮಸ್ಯೆಗಳನ್ನು ಹೊಂದಿರುವುದು ಹೌದಾದರೂ, ಹೊಸ ಬೆಳವಣಿಗೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಿದೆ. ಮುಖ್ಯವಾಗಿ, ಯುವಸಮುದಾಯ ಕೃಷಿಯ ಪ್ರಾಮುಖ್ಯವನ್ನು, ಕಾಫಿ ಕೃಷಿ ಸಂಸ್ಕೃತಿ ರಕ್ಷಿಸುವ ಅನಿವಾರ್ಯತೆಯನ್ನು ಮನಗಾಣುತ್ತಿದ್ದು, ಈ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದೆ. ಅನೇಕ ಸಮಸ್ಯೆಗಳ ನಡುವೆಯೂ ಸಕಾರಾತ್ಮಕ ಪರಿವರ್ತನೆಯೆಡೆ ಮುಖ ಮಾಡಿರುವುದರಿಂದ ನಾಳೆಗಳ ಕುರಿತಂತೆ ಹೊಸ ಆಶಾವಾದ ಮೂಡಿದೆ. 

ದಾರಿಗಳೇನೋ ಇವೆ. ಅದನ್ನು ತೋರಿಸುವವರಾರು? ಯಾವುದನ್ನು ಮಾಡಬೇಕು ಎಂದು ಹೇಳುವವರಾರು?  ಕಾಫಿ ಕೃಷಿಯ ಸಮಸ್ಯೆಯನ್ನು ಹೇಳುತ್ತ ಕೂರುವುದರ ಬದಲು ಅದರ ಪರಿಹಾರಕ್ಕೆ ಮುಂದಾಗಬೇಕಿದೆ. ಗ್ರಾಹಕರು ಉತ್ತಮ ಗುಣಮಟ್ಟದ ಕಾಫಿಗಳನ್ನು ಗುರುತಿಸಲು ಮತ್ತು ಖರೀದಿಸಲು ಸಹಾಯ ಮಾಡುವುದು,  ಈ ಪ್ರಕ್ರಿಯೆಯಲ್ಲಿ, ಉತ್ತಮ ಗುಣಮಟ್ಟದ ಕಾಫಿ ಬೀಜಗಳನ್ನು ಉತ್ಪಾದಿಸಲು ಸಮಯ, ಉತ್ಸಾಹ, ಬಂಡವಾಳವನ್ನು ಹೂಡಿಕೆ ಮಾಡುವ ರೈತರು, ರೋಸ್ಟರ್‌ಗಳಿಗೆ ಪ್ರತಿಫಲ ನೀಡಲು, ಕಾಫಿ ಬೇಡಿಕೆಯನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ಹೆಚ್ಚಿಸಲು ಸಹಾಯ ಮಾಡುವುದು ನಮ್ಮ “ಸರ್ಚ್‌ ಕಾಫಿ” ಯ ಉದ್ದೇಶವಾಗಿದೆ.

ಕಾಫಿ ಕುಡಿಯಲು ಮಾತ್ರವಲ್ಲ. ಇದು ಇತರರೊಂದಿಗೆ ಹಂಚಿಕೊಳ್ಳಬೇಕಾದ ಸಾಮಾಜಿಕ ಚಟುವಟಿಕೆಯಾಗಿದೆ. ಕಾಫಿಯೊಂದಿಗೆ ಇಂದೇ “ಸರ್ಚ್‌ ಕಾಫಿ” ಸಮುದಾಯಕ್ಕೆ ನಾವೆಲ್ಲರೂ ಒಟ್ಟಾಗಿ ಸೇರಿಕೊಳ್ಳೋಣ. “ಕಾಫಿ ಪ್ರಿಯರಿಂದ, ಕಾಫಿ ಪ್ರಿಯರಿಗಾಗಿ” ಪ್ರಾರಂಭಗೊಂಡ “ಸರ್ಚ್‌ ಕಾಫಿ” ಗೆ ನಿಮ್ಮೆಲ್ಲರ  ಆಶೀರ್ವಾದ ಸದಾ ಹೀಗೆ ಇರಲಿ.  ನಿಮ್ಮೆಲ್ಲರ ಬೆಂಬಲದೊಂದಿಗೆ “ಸರ್ಚ್‌ ಕಾಫಿ”ಯನ್ನು ಪೋಷಿಸಿ.

ಈ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಮತ್ತು ಸಹಕಾರ ಇರುತ್ತವೆ ಅನ್ನುವ ಆಶಯ ಹೊಂದಿದ್ದೇವೆ. ಹೊಸತನದ ಹರಿಕಾರನಾಗಿ, ಸದಭಿರುಚಿಯ ದ್ಯೋತಕವಾಗಿ, ತಾಜಾತನದ ಕುರುಹಾಗಿ, ಕಾಫಿ ಸಂಸ್ಕೃತಿಯ ಪರಂಪರೆಯನ್ನು, ವಿಶೇಷತೆಗಳನ್ನು ತಿಳಿಸಲು ಈ ನಿಮ್ಮ  “ಸರ್ಚ್‌ ಕಾಫಿ” ಯು ಕಾಫಿ ಸಮುದಾಯದ ಒಂದು ವೇದಿಕೆಯಾಗಲಿ ಅನ್ನುವ ಆಶಯದೊಂದಿಗೆ, ವಂದನೆಗಳು.

ಸಂಪಾದಕರು – ಪ್ರಕಾಶಕರು

ಹಾಗೂ “ಸರ್ಚ್‌ ಕಾಫಿ” ಬಳಗ

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments