ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯೆಡೆಗೆ ನನ್ನ ಆದ್ಯತೆ; ಬೈತಡ್ಕ ಡೆಲಿವಿ ದೇವಯ್ಯ
ಬೈತಡ್ಕ ಡೆಲಿವಿ ದೇವಯ್ಯ, ಉಪಾಧ್ಯಕ್ಷರು: ಗ್ರಾಮ ಪಂಚಾಯಿತಿ ಬೆಟ್ಟಗೇರಿ
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬೈತಡ್ಕ ಡೆಲಿವಿ ಎಸ್. ದೇವಯ್ಯ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಬೈತಡ್ಕ ಡೆಲಿವಿ ದೇವಯ್ಯರವರು “ನಾನು ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಭಾರತೀಯ ಜನತಾ ಪಾರ್ಟಿಯ ಹಿರಿಯರಾದ ಪಾಲೂರಿನ ರಾಮಣ್ಣರವರ ಮಾರ್ಗದರ್ಶನದಲ್ಲಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ. ಆ ಸಂದರ್ಭದಲ್ಲಿ ನನ್ನ ಆತ್ಮೀಯ ಗೆಳೆಯರು ನನ್ನೊಂದಿಗೆ ಜೊತೆಗೂಡಿ ಸಹಕಾರ ನೀಡಿದರು. 2020-25 ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲ ಅವಧಿಗೆ ಸದಸ್ಯನಾಗಿ ಸೇವೆ ಸಲ್ಲಿಸಿದೆ. ಆ ನಂತರ ಎರಡನೇ ಅವಧಿಗೆ ಉಪಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇನೆ.
ನಮ್ಮ ಗ್ರಾಮದ ವ್ಯಾಪ್ತಿಯ ಮೂಲಭೂತ ಸಮಸ್ಯೆಗಳಲ್ಲಿ ರಸ್ತೆಗಳ ಅಭಿವೃದ್ಧಿ ಕುಂಠಿತ ಗೊಂಡಿತ್ತು. 2021 ರಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಂದಿನ ಶಾಸಕರಾದ ಕೆ.ಜಿ. ಬೋಪ್ಪಯ್ಯನವರ ಶಾಸಕರ ನಿಧಿಯಿಂದ ಸರಿ ಸುಮಾರು 30 ಲಕ್ಷದಷ್ಟು ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಪೂರೈಸಲಾಗಿದೆ. ಹಾಗೆ ಪಾಲೂರು ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಸರಿ ಸುಮಾರು 55 ಲಕ್ಷದಷ್ಟು ತಡೆಗೋಡೆ ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಈಗಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣರವರ ಶಾಸಕರ ನಿಧಿಯಿಂದ 15 ಲಕ್ಷದಷ್ಟು ಅನುದಾನ ಬಿಡುಗಡೆಗೊಂಡಿದ್ದು, ಕಾಂಕ್ರಿಟ್ ರಸ್ತೆಯ ಕಾಮಗಾರಿಯು ಶೀಘ್ರದಲ್ಲೇ ಪ್ರಾರಂಭಗೊಳಿಸಿ ಪೂರ್ಣಗೊಳಿಸಲಾಗುವುದು. ಇನ್ನು ಬಹಳಷ್ಟು ರಸ್ತೆಗಳು ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಗೊಳ್ಳಬೇಕಿದೆ. ಸೂಕ್ತವಾದ ಅನುಧಾನಕ್ಕಾಗಿ ಪ್ರಯತ್ನ ಪಡಲಾಗುತ್ತಿದ್ದು, ಅನುದಾನ ದೊರೆತ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿದ್ದೇನೆ.
ನಮ್ಮ ಪಾಲೂರು ಗ್ರಾಮದ ಬೀದಿ ದೀಪಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಜಲ ಜೀವನ್ ಮಿಷನ್ ಅಡಿಯಲ್ಲಿ ಸರಿ ಸುಮಾರು 59 ಲಕ್ಷದಷ್ಟು ಮನೆ ಮನೆಗೆ ಕುಡಿಯುವ ನೀರಿನ ಕಾಮಗಾರಿಯು ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಕಾಮಗಾರಿಯು ಪೂರ್ಣಗೊಂಡು ನೀರು ಸರಬರಾಜು ವ್ಯವಸ್ಥೆಯು ಮನೆ ಮನೆಗೆ ತಲುಪಲಿದೆ. ಹಾಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬಹುಪಾಲು ಬಿ.ಪಿ.ಎಲ್. ಪಡಿತರ ಕುಟುಂಬಗಳಿಗೆ ತೆರೆದ ಬಾವಿಗಳನ್ನು ನಿರ್ಮಿಸಲಾಗಿದ್ದು, ಇತರೆ 8 ಕುಟುಂಬಗಳಿಗೆ ಮಂಜೂರಾತಿ ದೊರತಿದೆ. ಆ ಬಾವಿಗಳನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು.
ಸ್ವಚ್ಚ ಭಾರತ್ ಅಭಿಯಾನದಡಿಯಲ್ಲಿ ಮನೆ ಮನೆಗಳಿಗೆ ಶೌಚಾಲಯ ನಿರ್ಮಾಣ ಕಾರ್ಯವು ಶೇಕಡ 100%ರಷ್ಟು ಪೂರ್ಣಗೊಂಡಿದೆ. ಇನ್ನಷ್ಟು ಹೆಚ್ಚಿನ ಅನುದಾನವು ದೊರೆತಲ್ಲಿ ನನ್ನ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನ ಪಡಲಾಗುವುದು. ನನಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ಇದೆ. ನನ್ನೆಲ್ಲಾ ಕಾರ್ಯಗಳಿಗೆ ನನ್ನ ಗ್ರಾಮದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರವು ಉತ್ತಮವಾಗಿ ದೊರೆಯುತ್ತಿದೆ. ನಾನು ಮಾಡುತ್ತಿರುವ ಈ ಗ್ರಾಮಾಭಿವೃದ್ಧಿ ಕಾರ್ಯಗಳಿಗೆ ಈ ಹಿಂದಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ನಾಪಂಡ ರ್‍ಯಾಲಿ ಮಾದಯ್ಯನವರ ಸಹಕಾರವನ್ನು ಇಲ್ಲಿ ಸ್ಮರಿಸುತ್ತಿದ್ದೇನೆ. ಹಾಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣರವರ ಸಹಕಾರವು ಉತ್ತಮವಾಗಿ ದೊರೆತಿದೆ”.
ಮೂಲತಃ ಕೃಷಿಕರಾಗಿರುವ ಹಾಗೂ ಕೃಷಿ ಡಿಪ್ಲೋಮಾ ಪದವೀಧರಾಗಿರುವ ಬೈತಡ್ಕ ಡೆಲಿವಿ ಎಸ್. ದೇವಯ್ಯನವರು ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಬೆಟ್ಟಗೇರಿ ಬಕ್ಕಾ ಕ್ರೀಡಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಟ್ಟಗೇರಿ ಬಕ್ಕಾದ ಶ್ರೀ ಕೃಷ್ಣ ಸ್ವ-ಸಹಾಯ ಸಂಘದ ಸದಸ್ಯರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಪಾಲೂರು ಕಾಳಿಕಾಂಬ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ಪಾಲೂರು ಮಹಾಲಿಂಗೇಶ್ವರ ದೇವಾಲಯದ ಭಕ್ತಮಂಡಳಿ ಸದಸ್ಯರಾಗಿದ್ದಾರೆ.
ಬೈತಡ್ಕ ಡೆಲಿವಿ ಎಸ್. ದೇವಯ್ಯನವರ ಕುಟುಂಬ ಪರಿಚಯ: ತಂದೆ; ದಿವಂಗತ ಬೈತಡ್ಕ ಸೋಮ್ಮಪ್ಪ(ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು), ತಾಯಿ; ದಿವಂಗತ ಜಾನಮ್ಮ(ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು), ಪತ್ನಿ; ಸೌಜನ್ಯ ಗೃಹಿಣಿ ಯಾಗಿದ್ದಾರೆ. ಹಿರಿಯ ಮಗಳು: ಭೂಮಿಕಾ ದ್ವಿತೀಯ ಪಿ.ಯು.ಸಿ. ವ್ಯಾಸಾಂಗ ನಿರತರಾಗಿದ್ದಾರೆ. ಮಗ; ಕುಶಾಲ್ ಹತ್ತನೇ ತರಗತಿಯಲ್ಲಿ ವ್ಯಾಸಾಂಗ ನಿರತರಾಗಿದ್ದಾರೆ.
ಪ್ರಸ್ತುತ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಾಲೂರು ಗ್ರಾಮದಲ್ಲಿ ಕುಟುಂಬ ಸಮೇತ ವಾಸವಿರುವ ಬೈತಡ್ಕ ಡೆಲಿವಿ ಎಸ್. ದೇವಯ್ಯನವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 14-03-2024