ಬಿ.ಡಿ. ಮಂಜುನಾಥ್, ಸಹಕಾರಿಗಳು: ಸೋಮವಾರಪೇಟೆ. Somwarpet

Reading Time: 25 minutes

ಬಿ.ಡಿ. ಮಂಜುನಾಥ್, ಸಹಕಾರಿಗಳು: ಸೋಮವಾರಪೇಟೆ. Somwarpet

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಂಬೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ, ಬಿ.ಡಿ. ಮಂಜುನಾಥ್‌ರವರು ಕೊಡಗಿನ ಹಿರಿಯ ಸಹಕಾರಿಗಳಾಗಿದ್ದಾರೆ. ಸರಿ ಸುಮಾರು 47 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸೋಮವಾರಪೇಟೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ, ಕೊಡಗು ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 

ಇವರನ್ನು”ಸರ್ಚ್‌ ಕೂರ್ಗ್‌ ಮೀಡಿಯಾ”ವು ಪ್ರಸ್ತುತ ಪಡಿಸಿರುವ “ಕೊಡಗು ಸಹಕಾರ ದರ್ಶನ” ಎಂಬ ಕೊಡಗಿನ ಸಹಕಾರ ಚಳುವಳಿಯ ಡಿಜಿಟಲ್‌ ದಾಖಲೆಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀ, ಬಿ.ಡಿ. ಮಂಜುನಾಥ್‌ರವರು, “ನಾನು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮುಖ್ಯ ಪ್ರೇರಣೆ ನನ್ನ ತಂದೆಯವರಾದ ದಿ. ಬಿ.ಕೆ. ಡೊಡ್ಡಯ್ಯನವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿದ್ದು, ಸಂಘದ ಹಿರಿಯರು, ಕಾರ್ಯಕರ್ತರು ಸದಾ ನಮ್ಮ ಮನೆಗೆ ಬರುತ್ತಿದ್ದರು. ಅಲ್ಲದೆ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಸಂಘದ ಹಲವಾರು ಹಿರಿಯರು ನಮ್ಮ ಮನೆಯಲ್ಲಿ ಸಮಾಲೋಚನೆಯನ್ನು ನಡೆಸಲು ಒಂದೆಡೆ ಸೇರುತ್ತಿದ್ದರು. ಈ ಕಾರಣದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಉದ್ದೇಶವಾದ ನಿಸ್ವಾರ್ಥ ಸೇವೆ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ನನಗೆ ಹಿರಿಯರು ತಿಳಿ ಹೇಳಿಕೊಡುತ್ತಿದ್ದರು, ಹಿರಿಯರ ಸಂಪರ್ಕದೊಂದಿಗೆ ನನ್ನ 16ನೇ ವಯಸ್ಸಿನಲ್ಲಿ ಪ್ರಥಮ ಸಂಘ ಶಿಕ್ಷಾ ವರ್ಗ (OTC) ಶಿಕ್ಷಣಕ್ಕಾಗಿ ತಿಪಟೂರಿಗೆ ತೆರೆಳಿದೆ, ಅಲ್ಲಿ ನನಗೆ ಸಿಕ್ಕ ಶಿಕ್ಷಣ, ಸಮಯ ಪ್ರಜ್ಞೆ, ಮಾತುಗಾರಿಕೆ, ನಾಯಕತ್ವ, ಪಾರದರ್ಶಕತೆ, ಸಮರ್ಪಣೆ, ದೇಶಪ್ರೇಮದ ಜೊತೆಗೆ ರಾಷ್ಟ್ರ ನಿರ್ಮಾಣ, ಒಟ್ಟಿನಲ್ಲಿ “ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ ಚ” ಎಂಬುವುದನ್ನು ಕಲಿಯಲು ಸಾಧ್ಯವಾಯಿತು. ಅದಲ್ಲದೆ ಅಲ್ಲಿ ನನಗೆ ಸಿಕ್ಕ ಒಂದು ಸೌಭಾಗ್ಯವೆಂದರೆ, ಅಂದಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದ್ವೀತೀಯ ಸರ ಸಂಘಚಾಲಕರಾದ ಪರಮ ಪೂಜನೀಯ ಗುರೂಜೀ ಅವರನ್ನು ನೋಡಲು ಮತ್ತು ಅವರೊಂದಿಗೆ ಸಹ ಭೋಜನ ಮಾಡಲು ಅವಕಾಶ ದೊರೆತ್ತದ್ದು. ಆ ಸಂಧರ್ಭವನ್ನು ನೆನೆದಾಗ ಈಗಲೂ ನನಗೆ ರೋಮಾಂಚನವಾಗುವುದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ರಾಮಣ್ಣಜೀ, ಹೋ.ವೆ. ಶೇಷಾದ್ರಿ, ಸು. ರಾಮಣ್ಣರಂತಹ ಹಿರಿಯರ ಸಂಪರ್ಕದೊಂದಿಗೆ ಹಾಗೂ ಅವರೊಂದಿಗಿನ ಸಾಮಾಜಿಕ ವಿಚಾರಗಳ ಚರ್ಚೆ ಹಾಗೂ ಸಂಘದ ಶಾಖೆಯಲ್ಲಿ ಆಟದೊಂದಿಗೆ ಕಲಿಯುತ್ತಿದ್ದ ಸಂಸ್ಕಾರದ ಫಲವಾಗಿ ನಾನು ಕೂಡ ತಂದೆಯಂತೆ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳಲು ಪ್ರೇರಣೆ ದೊರಕಿತು. 

ನನ್ನ ತಂದೆ ಸೋಮವಾರಪೇಟೆ ಗ್ರಾಹಕರ ಸಹಕಾರ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಕ್ಷೇತ್ರವಾದ ಸಹಕಾರ ಭಾರತಿಯ ಕಾರ್ಯಕರ್ತರು ಮಂಗಳೂರಿನಿಂದ ಕೊಡಗಿಗೆ ಬರುತ್ತಿದ್ದರು, ಆ ಸಂದರ್ಭದಲ್ಲಿ ಕೊಡಗಿನಲ್ಲಿ  ಸಹಕಾರ ಕ್ಷೇತ್ರದಲ್ಲಿ  ನಮ್ಮ ಪರಿವಾರದ ಕಾರ್ಯರ್ತರು ಕಡಿಮೆ ಇದ್ದು, ಅವರ ಸೂಚನೆಯಂತೆ   ಸಹಕಾರ ಕ್ಷೇತ್ರದಲ್ಲಿ ನಾನು ಮೊದಲು 1977 ರಲ್ಲಿ ಸೋಮವಾರಪೇಟೆ ಸಹಕಾರ ಬ್ಯಾಂಕ್‌ (ಈಗಿನ ಸೋಮವಾರಪೇಟೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ) ನ ಸದಸ್ಯನಾದೆ.  ಆ ಸಮಯದಲ್ಲಿ  ಸಹಕಾರ ಕ್ಷೇತ್ರದ ಬಗ್ಗೆ ನನಗೆ ಅಷ್ಟೇನು ತಿಳುವಳಿಕೆ ಇರಲಿಲ್ಲ. ಹಾಗಾಗಿ ಸಹಕಾರ ಬ್ಯಾಂಕ್‌ ನ ವ್ಯವಹಾರ, ಕಾರ್ಯನಿರ್ವಹಿಸುವ ರೀತಿ, ಅಲ್ಲಿನ ಅಧಿಕಾರಿಗಳು, ಪದಾಧಿಕಾರಿಗಳು ಸದಸ್ಯರ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದೆ. 

ಅಂದಿನ ದಿನಗಳಲ್ಲಿ ಬ್ಯಾಂಕ್‌ನ ಸದಸ್ಯರಾದ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥತರಾಗಿದ್ದು, ಸಹಕಾರ ಕ್ಷೇತ್ರವಾಗಲಿ, ಹಣಕಾಸಿನ ವ್ಯವಹಾರ, ಸಾಲ, ಬಡ್ಡಿ ಇವುಗಳ ಬಗ್ಗೆ ತಿಳುವಳಿಕೆ ಕಡಿಮೆ ಇದ್ದಿತ್ತು. ಈ ಇವರ ದೌರ್ಬಲ್ಯವನ್ನು ಆಗಿನ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ತಮ್ಮ ಇಚ್ಛೆಗೆ ತಕ್ಕಂತೆ ತಮ್ಮ ಸ್ವಾರ್ಥ ದೃಷ್ಟಿಯಿಂದ ಸಹಕಾರ ಬ್ಯಾಂಕ್‌ ಅನ್ನು ಬಳಸಿಕೊಳ್ಳುತ್ತಿದ್ದರು. ಸಾಲಕ್ಕಾಗಿ ಅಧಿಕಾರಿಗಳನ್ನು ಪರಿ ಪರಿ ಬೇಡುವ ಪರಿಸ್ಥಿತಿ, ಸಾಲ ಮರುಪಾವತಿ ವಿಳಂಬವಾದರೆ ಮನೆಯನ್ನು ಜಪ್ತಿ ಮಾಡುವುದು. 500 ರೂ, 1000 ರೂ ಸಾಲಕ್ಕಾಗಿ ದಿನಪೂರ್ತಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ. 18% ದಿಂದ 24% ವರೆಗಿನ ಬಡ್ಡಿದರದ ಸಾಲ, ಬ್ಯಾಂಕ್‌ನ ಚುನಾವಣೆಗಳು ಸಕಾಲಕ್ಕೆ ನಡೆಯುತ್ತಿರಲಿಲ್ಲ, ಇದರಿಂದ ಸದಸ್ಯರಿಗೆ ಮಾತ್ರವಲ್ಲದೆ ಬ್ಯಾಂಕಿಗೂ ಕೂಡಾ ತುಂಬಾ ನಷ್ಟವಾಗುವ ಪರಿಸ್ಥಿತಿ ಬಂದೊದಗಿತು.

ಸಹಕಾರ ಕ್ಷೇತ್ರದ “ಎಲ್ಲರಿಗಾಗಿ ನಾನು – ನನಗಾಗಿ ಎಲ್ಲರೂ” ಎಂಬ ತತ್ವ ಮರೆಯಾದ ಹಾಗೆ ಕಾಣುತ್ತಿತ್ತು. ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಸದಸ್ಯರಿಗೆ ಉತ್ತಮ ಸೇವೆ ನೀಡಬೇಕೆಂಬ ಹಿರಿಯರ ಓತ್ತಾಸೆಯಿಂದ ನಮ್ಮ ಸಮಾನ ಮನಸ್ಕರ ಒಂದು ಯುವ ತಂಡದೊಂದಿಗೆ 1984 ರಲ್ಲಿ ಬ್ಯಾಂಕ್‌ಗೆ ನಡೆದ ಚುಣಾವಣೆಯಲ್ಲಿ ಸ್ವರ್ದಿಸಿ  ನಿರ್ದೇಶಕರುಗಳಾಗಿ ಆಯ್ಕೆಗೊಂಡೆವು. ಆಗ ನಮ್ಮೊಂದಿಗೆ ಬ್ಯಾಂಕ್‌ನ ಅಧ್ಯಕ್ಷರಾಗಿ ಜಿ. ಸೋಮೇಶ್‌, ಹಾಗೂ ನಿರ್ದೇಶಕರಾಗಿ ಬಿ.ಎಸ್. ಅನಂತ್‌ ರಾವ್‌, ಕೂಡ ಇದ್ದರು. ನಾನು ಕಳೆದ 46 ವರ್ಷಗಳಿಂದ ಸಕ್ರಿಯವಾಗಿ ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. 3 ಬಾರಿ ಸೋಮವಾರಪೇಟೆ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. 40 ವರ್ಷಗಳಿಂದ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. 

ನಾವು ಸೋಮವಾರಪೇಟೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದು ಉತ್ತಮವಾದ ಪಾರದರ್ಶಕ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ, ನನಗೆ ಡಿ.ಸಿ.ಸಿ ಬ್ಯಾಂಕ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಅಷ್ಟೇನು ತಿಳುವಳಿಕೆ ಇರಲಿಲ್ಲ, ಹಾಗಾಗಿ ಅದರ ಬಗ್ಗೆ ಮಾಹಿತಿ ತಿಳಿಯಲು ಪ್ರಯತ್ನಿಸುವಾಗ ನನಗೆ ಮಾರ್ಗದರ್ಶಕರಾಗಿ ದೊರೆತದ್ದು ನಮ್ಮ ಸೋಮವಾರಪೇಟೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ  ಕಾರ್ಯದರ್ಶಿಗಳಾದ ಹಿರಿಯರೂ ಆದ‌ ಬಿ.ಎಸ್. ರಾಮಣ್ಣನವರು. 

ಶ್ರೀ ರಾಮಣ್ಣವನರ ಬಗ್ಗೆ ಹೇಳುವುದಾದರೆ ಅವರು ಬೆಳ್ಳಗಿನ ಹೊತ್ತು ಸಂಘದ ಕಛೇರಿಗೆ ತಲುಪಿದ್ದಾರೆ ಅಂದರೆ ಅದು ಸರಿಯಾಗಿ 9 ಗಂಟೆ ಆಗಿದೆ ಅನ್ನುವುದನ್ನು ಗಡಿಯಾರವನ್ನು ನೋಡದೇ ಹೇಳುತ್ತಿದ್ದೇವು, ಅವರ ಸಮಯ ಪ್ರಜ್ಷೆ ಅಷ್ಟಿತ್ತು. ಅವರದ್ದು ತುಂಬಾ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಕ್ತಿತ್ವ. ಅವರನ್ನು ಒಂದು ದಿನ ನಾನು ಭೇಟಿಯಾದಾಗ ತುಂಬಾ ಬೇಸರದಲ್ಲಿ ಇರುವುದನ್ನು ಗಮನಿಸಿದೆ. ಅವರು ಕಣ್ಣೀರು ಹಾಕುವಷ್ಟು ಭಾವುಕರಾಗಿದ್ದರು. ಅದರ ಕಾರಣವೇನಿರಬಹುದು ಎಂದು ಅಧ್ಯಕ್ಷರಾದ ಜಿ. ಸೋಮೇಶ್‌ ಅವರ ಬಳಿ ಕೇಳಿದಾಗ ಅವರು ಇಂದು ನಮ್ಮ ಬ್ಯಾಂಕ್‌ಗೆ ಸಾಲವನ್ನು ಕೇಳುವ ಸಲುವಾಗಿ ಡಿ.ಸಿ.ಸಿ ಬ್ಯಾಂಕ್‌ ಗೆ ಹೋಗಿದ್ದರು ಆದರೆ ಅಲ್ಲಿನ ಅಧಿಕಾರಿಗಳ ದಬ್ಬಾಳಿಕೆಗೆ ಮನನೊಂದು ಬೇಸರಗೊಂಡಿದ್ದಾರೆ ಎಂದರು, ಆದರೆ ನನಗೆ ಡಿ.ಸಿ.ಸಿ ಬ್ಯಾಂಕ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಅಷ್ಟೇನು ತಿಳುವಳಿಕೆ ಇರಲಿಲ್ಲ, ಹಾಗಾಗಿ ಅದರ ಬಗ್ಗೆ ಮಾಹಿತಿ ತಿಳಿಯಲು ಸ್ವತ: ರಾಮಣ್ಣ ನವರ ಬಳಿಯೇ ತೆರೆಳಿದೆ, ಆಗ ಅವರು ನಾವು ಕೃಷಿಕರಿಗೆ ಕೊಡುವ ಸಾಲದ ಹಣವನ್ನು ಡಿ.ಸಿ.ಸಿ ಬ್ಯಾಂಕ್‌ ನಿಂದಲೇ ಪಡೆಯಬೇಕು, ಅದನ್ನು ನಾವು ಬಡ್ಡಿ ಸಮೇತ ಹಿಂದಿರುಗಿಸಬೇಕು, ಡಿ.ಸಿ.ಸಿ ಬ್ಯಾಂಕ್‌ ಕಾರ್ಯ ನಮ್ಮ ಸೋಮವಾರಪೇಟೆ ಬ್ಯಾಂಕ್‌ ಮಾದರಿಯಲ್ಲೇ ಇರುವುದು, ಅಲ್ಲಿಯೂ ಕೂಡಾ ಚುನಾವಣೆ ಮುಖಾಂತರ ನಿರ್ದೇಶಕರನ್ನು ಆಯ್ಕೆ ಮಾಡಲಾಗುವುದು. ಡಿ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕರಾಗಿ ಸ್ವರ್ಧಿಸಲು ನಮ್ಮ ಸೋಮವಾರಪೇಟೆ ಸೊಸೈಟಿಯ ರೀತಿ ಇರುವ ಜಿಲ್ಲೆಯ ಎಲ್ಲಾ ಸೊಸೈಟಿಗಳಿಂದ ಒಬ್ಬರಿಗೆ ಅವಕಾಶವಿರುತ್ತದೆ, ಆದರೆ ಆ ಚುನಾವಣೆಯಲ್ಲಿ ಸ್ಪರ್ದಿಸಲು ತುಂಬಾ ಸಾಮರ್ಥ್ಯದ ಅವಶ್ಯಕತೆ ಇದೆ, ತಾಲೂಕಿನಲ್ಲೆಲ್ಲಾ ಓಡಾಟ ಮಾಡಬೇಕು, ತುಂಬಾ ಹಿರಿಯರನ್ನೆಲ್ಲಾ ವಿಶ್ವಾಸಕ್ಕೆ ಪಡೆಯಬೇಕು, ತುಂಬಾ ವಿರೋಧಗಳು ಬರುತ್ತದೆ ಎಂದು ತಿಳಿಸಿದರು. 

ಆದರೆ ಅದನ್ನು ನಾನು ಛಲದ ರೀತಿಯಲ್ಲಿ ತೆಗೆದು ಕೊಂಡೆ, ನಮ್ಮ ಸೋಮವಾರಪೇಟೆ ಸೊಸೈಟಿಯನ್ನು ಉತ್ತಮವಾಗಿ ನಡೆಸಿದ ಅನುಭವವಿದ್ದ ಕಾರಣ ಚುಣಾವಣೆಯಲ್ಲಿ ಸ್ವರ್ದಿಸಿ ಗೆದ್ದು ಡಿ.ಸಿ.ಸಿ ಬ್ಯಾಂಕನ್ನು ಕೂಡ ಉತ್ತಮ ರೀತಿಯಲಿ ಪಾರದರ್ಶಕವಾಗಿ ಅಭಿವೃದ್ದಿಯತ್ತ ಕೊಂಡೊಯ್ಯಬೇಕೆಂದು ನಿರ್ದರಿಸಿದೆ. ಅಲ್ಲದೆ ಆ ಸಂದರ್ಭದಲ್ಲಿ ಬಿ.ಜೆ.ಪಿ ಪಕ್ಷದ ಪ್ರತಿನಿಧಿಯಾಗಿ ಯಾರು ಹೆಚ್ಚಾಗಿ ಇರಲಿಲ್ಲ. ಹಾಗಾಗಿ 1994ರಲ್ಲಿ ಬಿ.ಜೆ.ಪಿ ಪಕ್ಷದ ಬೆಂಬಲದೊಂದಿಗೆ ನಾನು ಇತರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಆಯ್ಕೆಯಾದ 3 ಜನರೊಂದಿಗೆ ಡಿ.ಸಿ.ಸಿ ಬ್ಯಾಂಕ್‌ನ ಚುನಾವಣೆಯಲ್ಲಿ ಸ್ಪರ್ದಿಸಿ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಗೆಲುವನ್ನು ಸಾಧಿಸಿದೆವು. ಅದೇ ಮೊದಲ ಬಾರಿಗೆ ನಾನು ಬಿ.ಜೆ.ಪಿ ಪಕ್ಷ ಬೆಂಬಲಿತ  ಏಕೈಕ  ನಿರ್ದೇಶಕರಾಗಿ ಗೆಲುವು ಸಾಧಿಸಿದೆ. ಪ್ರಸ್ತುತ ಡಿ.ಸಿ.ಸಿ ಬ್ಯಾಂಕ್‌ನಲ್ಲಿನ ಆಡಳಿತ ಮಂಡಳಿಯು ಪೂರ್ಣ ಬಿ.ಜಿ.ಪಿ ಬೆಂಬಲಿತವಾಗಿರುವುದನ್ನು ನೋಡುವಾಗ ಅದಕ್ಕೆ ಅಡಿಗಲ್ಲು ನಾನಾಗಿರುವೆ ಎಂಬುವುದು ಹಾಗೂ ನಾವು ಅಂದು ಮಾಡಿದ ಪ್ರಯತ್ನಕ್ಕೆ ತಕ್ಕ ಫಲ ಇಂದು ದೊರೆತಿರುವುದು ತುಂಬಾ ಸಂತೋಷವಾಗುತ್ತಿದೆ.

ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನನ್ನ ಅಧ್ಯಕ್ಷ ಅವಧಿಯಲ್ಲಿ ಸಂಘದ ಪ್ರಗತಿಯ ಬಗ್ಗೆ ಹೇಳುವುದಾದರೆ ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯಲು ಏನೆಲ್ಲವನ್ನು ಮಾಡಬೇಕು ಎಲ್ಲವನ್ನು ಮಾಡಿದ್ದೇನೆ ಯಾವುದು ಒಂದನ್ನು ಕೂಡ ಬಿಟ್ಟಿಲ್ಲ. ಒಂದು ಸಹಕಾರ ಸಂಘದಿಂದ ಒಬ್ಬ ಸದಸ್ಯನಿಗೆ ಏನೆಲ್ಲಾ ಸವಲತ್ತುಗಳು ದೊರೆಯಬೇಕೊ ಅವೆಲ್ಲವನ್ನು ನೀಡುವ ನಿಟ್ಟಿನಲ್ಲಿ ನಾನು ಶ್ರಮಿಸಿದ್ದೇನೆ.

ನಮ್ಮ ಅಧಿಕಾರವಧಿಯಲ್ಲಿ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಒಂದು ಒಂದು ಶಾಖೆಯನ್ನು ಅಬ್ಬೂರು ಕಟ್ಟೆ ಬಳಿ ತೆರೆಯಲಾಯಿತು. ಇದರ ಉದ್ಘಾಟನೆಗಾಗಿ ಅಂದಿನ ಹಿರಿಯ ಸಹಕಾರಿಗಳಾದ ಎಂ.ಸಿ. ನಾಣಯ್ಯನವರು ಪಾಲ್ಗೊಂಡಿದ್ದರು. ಅಂದು ಈ ಶಾಖೆಯ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆಯು ಬಂದಿತು. ಆದರೆ ಅಬ್ಬೂರು ಕಟ್ಟೆ ಗ್ರಾಮ ವ್ಯಾಪ್ತಿಯ ಸದಸ್ಯರಿಗೆ ಸೋಮವಾರಪೇಟೆಯಲ್ಲಿರುವ ಮುಖ್ಯ ಕಚೇರಿಗೆ ಬರಲು ಹೋಗುವುದು ತುಂಬಾ ಕಷ್ಟ ಸಾಧ್ಯವಾಗುತ್ತಿತ್ತು. ಅಲ್ಲದೆ ಈ ಕಚೇರಿಯ ಪ್ರಾರಂಭವಾದ ಸಮಯದಲ್ಲಿ ಅಲ್ಲಿ ಕೇವಲ ಕೆಲವೇ ಮನೆಗಳು ಮಾತ್ರ ಇತ್ತು. ಆದರೆ ಈಗ ನೂರಾರು ಮನೆಗಳಷ್ಟು ಆಗಿವೆ ಹಾಗಾಗಿ ಈ ಬಗ್ಗೆ ಮುಂದಾಲೋಚನೆಯನ್ನು ಅಂದೆ ಮಾಡಿ ನಾವು ಅಲ್ಲಿ ಒಂದು ಶಾಖೆಯನ್ನು ಪ್ರಾರಂಭ ಮಾಡಿದೆವು. ಅದು ಅಲ್ಲದೆ ಸಂಘದ ಸ್ವಂತ ಜಾಗದಲ್ಲಿ ಕಟ್ಟಡವನ್ನು ಕಟ್ಟಿದೆವು. ಹಾಗೆ ಸಿಬ್ಬಂದಿಗಳಿಗೂ ಕೂಡ ವಸತಿ ಗೃಹವನ್ನು ಕಟ್ಟಿಕೊಟ್ಟೆವು.

ಸೋಮವಾರಪೇಟೆಯ ಪಟ್ಟಣದಲ್ಲಿ ನಮ್ಮ ಸಹಕಾರ ಸಂಘಕ್ಕೆ ಸೇರಿದ ಒಂದು ಜಾಗವನ್ನು ಮಾರಾಟ ಮಾಡಲು ಮುಂದಾದಾಗ ಅದರಿಂದ ಬಂದ ಹಣವನ್ನು ಬಿಳುಗುಂದ ಗ್ರಾಮದಲ್ಲಿ ನಿವೇಶನವನ್ನು ಖರೀದಿ ಮಾಡಿ ಅಲ್ಲಿ ಈಗ  ಒಂದು ಶಾಖೆಯನ್ನು ಕೂಡ ನಿರ್ಮಾಣ ಮಾಡಿದ್ದೇವೆ.

ಕೊಡಗಿನ ಸಹಕಾರ ಸಂಘಗಳ  ಇತಿಹಾಸದಲ್ಲಿ ಮೊದಲ ಬಾರಿಗೆ ಸಹಕಾರ ಸಂಘವನ್ನು ಗಣಕೀಕೃತ ಮಾಡಬೇಕೆಂದು ಪ್ರಾರಂಭಿಸಿದ್ದು ನಮ್ಮ ಸಹಕಾರ ಸಂಘದಲ್ಲಿ. ಅದು ಕೂಡ 25 ವರ್ಷಗಳ ಹಿಂದೆಯೇ. ಇದಕ್ಕಾಗಿ ತುಂಬಾ ಪರಿಶ್ರಮಪಟ್ಟಿದ್ದೇವೆ. ಅಂದಿನ ಒಂದು ಫ್ಲಾಪಿ ಡಿಸ್ಕ್ ನ ಬೆಲೆ ರೂ. 800, ಅಲ್ಲದೆ ಒಂದು ಸಿಡಿಯ ಬೆಲೆ ಸಾವಿರ ರೂಪಾಯಿಗಳು.  ಅಂತಹ ಸಂದರ್ಭಗಳಲ್ಲಿ ಕೂಡ ಅನೇಕ ಅಡೆತಡೆಗಳನ್ನು ನಿಭಾಯಿಸಿಕೊಂಡು ಸಂಘದ ವ್ಯವಹಾರಗಳನ್ನು ಗಣಕೀಕರಣ ಮಾಡಿದ ಕಾರಣದಿಂದ ಕೊಡಗಿನ ಎಲ್ಲಾ ಸಹಕಾರ ಸಂಘಗಳಿಗೆ ನಾವು ಮಾದರಿಯಾಗಿ ನಿಂತಿದ್ದೇವೆ. ನಮ್ಮ ಈ ಕೆಲಸದಿಂದ ಪ್ರೇರಣೆಗೊಂಡ ಇತರ ಸಂಘಗಳ ಆಡಳಿತ ಮಂಡಳಿಯವರೂ ಕೂಡ ಗಣಕೀಕರಣದಲ್ಲಿ ತೊಡಗಿಸಿಕೊಂಡಿರುವ ಕಾರಣ ಇಂದು ಕೊಡಗಿನ ಎಲ್ಲಾ ಸಹಕಾರ ಸಂಘಗಳು ಗಣಕೀಕೃತವಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಇದಕ್ಕೆ ಮಾಲ್ದರೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಈಗಿನ ಅಧ್ಯಕ್ಷರಾದ ಚೇರಂಡ ನಂದ ಸುಬ್ಬಯ್ಯನವರು ಹಾಗೂ ನಮ್ಮಿಬ್ಬರ ದೂರದೃಷ್ಠಿಯೇ  ಕಾರಣ ವೆಂದರೆ ತಪ್ಪಾಗಾಲಾರದು.

ನಮ್ಮ ರಾಜ್ಯ ಅಥವಾ ಜಿಲ್ಲೆಯ ಸಹಕಾರ ಸಂಘಗಳ ಇತಿಹಾಸದಲ್ಲಿ ಅಪೂರ್ವವೆನಿಸಿದ ಒಂದು ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಅದೇನೆಂದರೇ ನಮ್ಮ ಸಂಘದಲ್ಲಿ ಸಾಲ ಪಡೆದ ಸದಸ್ಯರಿಗೆ ವಿಮೆ ಯೋಜನೆ ಮಾಡಿದ್ದೇವೆ. ಈ ಯೋಜನೆಗೆ ಪ್ರೇರಣೆ ಎಂದರೆ ನಮ್ಮ ಅಂದಿನ ಸಂಘದ ಸದಸ್ಯರಾಗಿದ್ದ  ಸೋಮೇಶ್ ಹಾಗೂ ಆತನ ಪತ್ನಿ. ಸೋಮೇಶ್ ರವರು ನಮ್ಮ ಸಹಕಾರ ಸಂಘದಿಂದ ಸಾಲವನ್ನು ಪಡೆದಿದ್ದರು ಆದರೆ ಅವರು ಅಕಾಲಿಕವಾಗಿ ಮರಣ  ಹೊಂದಿದ್ದರಿಂದ ಆ ಸಾಲದ ಹೊರೆಯು ಆತನ ಪತ್ನಿಯ ಹೆಗಲಿಗೆ ಬಿದ್ದಿದರಿಂದ ಅವರಿಗೆ ಜೀವನ ನಡೆಸಲು ತುಂಬಾ ಸಮಸ್ಯೆ ಎದುರಾಯಿತು. ಹಾಗಾಗಿ ಈ ಒಂದು ಸಮಸ್ಯೆಗೆ ಪರಿಹಾರ ಮಾಡಬೇಕೆಂಬ ಉದ್ದೇಶದಿಂದ ನಾನು ಆಲೋಚಿಸಿದೊಡಗಿದೆ. 

ಸಹಕಾರ ಸಂಘದಲ್ಲಿ ಯಾವುದಾದರೂ ಸದಸ್ಯರು ಸಾಲವನ್ನು ಪಡೆದು ಮರುಪಾವತಿ ಮಾಡದಿದ್ದ ಸಂದರ್ಭದಲ್ಲಿ ಅವರಿಗೆ ಜಾಮೀನಾಗಿ ನಿಂತವರಿಗೂ ಸಾಲವನ್ನು ನೀಡುವುದಿಲ್ಲ. ಅದೂ ಅಲ್ಲದೆ ಮನೆಯ ಯಜಮಾನರು ಸಾಲವನ್ನು ಪಡೆದ ವಿಷಯ ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿರುವ ಸದಸ್ಯರಿಗೆ ತಿಳಿಯುತ್ತಿರಲಿಲ್ಲ. ಮತ್ತು ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ ಆ ಸಾಲದ ಹೊರೆ ಮನೆಯವರ ಮೇಲೆ ಬಂದು ಅದರ ವಸೂಲಾತಿಗೆ ಸಂಘದ ಕಡೆಯಿಂದ ಹಾಗೂ ಜಾಮೀನುದಾರರ ಕಡೆಯಿಂದ ಒತ್ತಡ ಬರುವ ಮೂಲಕ ಮೃತ ಪಟ್ಟ ಸಾಲಗಾರನ ಮನೆಯವರಿಗೆ ನರಕ ಸದೃಶ್ಯ ವಾತವರಣ ನಿರ್ಮಾಣವಾಗುತ್ತಿತ್ತು. ಈ ಸಮಸ್ಯೆಯನ್ನು ಯಾವುದಾದರೂ ರೀತಿಯಲ್ಲಿ ಪರಿಹರಿಸಬೇಕೆಂದು ಸತತ ಎರಡು ವರ್ಷಗಳ ಕಾಲ ನಾನು ಶ್ರಮಿಸಿದ್ದೇನೆ. ಆ ಸಂದರ್ಭದಲ್ಲಿ  ವಿವಿಧ ವಿಮೆ ಕಂಪನಿಗಳೊಂದಿಗೆ ಮಾತನಾಡಿ ನಮ್ಮ ಸದಸ್ಯರಿಗೆ ಅನುಕೂಲವಾಗುವ ಯೋಜನೆಗಳನ್ನು ಮಾಡಬಹುದೇ ಎಂಬ ಸಲಹೆಗಳನ್ನು ನೀಡಿದ್ದೆ, ಆದರೆ ಅದು ಯಾವುದು ಪ್ರಯೋಜನಕ್ಕೆ ಬಾರಲಿಲ್ಲ. ವಿಮೆ ಕಂಪನಿಗಳ ಪ್ರತಿಕ್ರಿಯೆಗಳು ಹಾಗೂ ನಿಯಮಗಳು ಅದಕ್ಕೆ ಒಪ್ಪಿಗೆಯನ್ನು ಸೂಚಿಸುವಂತೆ ಇರಲಿಲ್ಲ, ಅಲ್ಲದೆ ಸದಸ್ಯರಿಗೂ ತುಂಬಾ ಹೊರೆಯಾಗುತ್ತಿತ್ತು.   ಕೊನೆಗೆ ನಾವೇ ಅದರ ಜವಾಬ್ದಾರಿಯನ್ನು ತೆಗೆದು ನಮ್ಮ ಸಂಘದಿಂದಲೇ ಒಂದು ವಿಮಾ ಯೋಜನೆಯನ್ನು ತಯಾರಿ ನಡೆಸಲು ಪ್ರಾರಂಭಿಸಿದೆವು. 

ಈ ವಿಮಾ ಯೋಜನೆಯು ಹೇಗಿದೆ ಎಂದರೆ ನಮ್ಮ ಸಹಕಾರ ಸಂಘದಲ್ಲಿ ಯಾವುದೇ ಸದಸ್ಯರು ಸಾಲವನ್ನು ಪಡೆದು 15 ತಿಂಗಳ ಮೊದಲು ಮರಣ ಹೊಂದಿದರೆ ಆ ಸಾಲದ ಹಣದ ಅಸಲು ಮತ್ತು ಬಡ್ಡಿಯನ್ನು ಪೂರ್ಣ ಈ ವಿಮೆ ಯೋಜನೆಯಲ್ಲಿ ಮನ್ನ ಮಾಡಲಾಗುವುದು. ಅಲ್ಲದೆ ಸಾಲ ಪಡೆದ ಸದಸ್ಯರು 18 ತಿಂಗಳ ಕಾಲ ಸಾಲವನ್ನು ಮರುಪಾವತಿ ಮಾಡದೆ ಮರಣವನ್ನು ಹೊಂದಿದ್ದರೆ ಆ ಸಾಲದ 25 ಪ್ರತಿಶತ ಹಣವನ್ನು ಮನೆಯವರು ಪಾವತಿಸಿದರೆ ಹಾಗೂ 75 ಪ್ರತಿಶತ ಹಣವನ್ನು ಸಂಘದ ಈ ವಿಮೆ ಯೋಜನೆಯಲ್ಲಿ ಮನ್ನ ಮಾಡಲಾಗುವುದು. 21 ತಿಂಗಳ ನಂತರ ಮರುಪಾವತಿ ಮಾಡದಿದ್ದಲ್ಲಿ 50 ಪ್ರತಿಶತ ಹಣವನ್ನು ಮನೆಯವರು ಹಾಗೂ 50% ಹಣವನ್ನು ಸಹಕಾರ ಸಂಘದಿಂದ ಮತ್ತು ಎರಡು ವರ್ಷಗಳಿಗಿಂತ ಹೆಚ್ಚು ಸಮಯದಲ್ಲಿ ಮರುಪಾವತಿ ಮಾಡದಿದ್ದಲ್ಲಿ 75% ಹಣವನ್ನು ಮನೆಯವರು ಹಾಗೂ 25% ಹಣವನ್ನು ಸಹಕಾರ ಸಂಘದಿಂದ ಮನ್ನಾ ಮಾಡಲಾಗುವುದು. ಈ ವಿಮಾ ಯೋಜನೆಯಿಂದ ಸಹಕಾರ ಸಂಘಕ್ಕೆ ಹಾಗೂ ಸದಸ್ಯರಿಗೂ ಸದಸ್ಯರ ಕುಟುಂಬದವರಿಗೂ ತುಂಬಾ ಅನುಕೂಲಕರವಾಗಿದೆ. 

ನಮ್ಮ ಸಹಕಾರ ಸಂಘದಿಂದ ಸುಮಾರು 25 ಸಾವಿರ ರೂಪಾಯಿಗಳಷ್ಟು ಮರಣ ನಿಧಿ ಯನ್ನು ಕೂಡ ನೀಡಲಾಗುತ್ತಿದ್ದು, ನಮ್ಮ ಸಹಕಾರ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಎಲ್ಐಸಿ ಯೋಜನೆಯನ್ನು ಕೂಡ ಮಾಡಲಾಗಿದೆ. ನಮ್ಮ ಸಹಕಾರ ಸಂಘ  ಯಾವುದೇ ಖಾಸಗಿ ಬ್ಯಾಂಕ್ ಗಳಿಗಿಂತ ಕಡಿಮೆಯಿಲ್ಲದಂತೆ ಸೇವೆ ನೀಡಬೇಕೆಂಬುದು ನನ್ನ ಗುರಿಯಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರ ತುಂಬಾ ಇದೆ ಅಲ್ಲದೆ ನಮ್ಮ ಸಹಕಾರ ಸಂಘ ಬೇರೆ ಎಲ್ಲಾ ಸಹಕಾರ ಸಂಘಗಳಿಗಿಂತ ಹೆಚ್ಚು ಗುಣಮಟ್ಟ ಸೇವೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಹಾಗೂ ರೈತರಿಗೆ ಉತ್ತಮ ಗುಣಮಟ್ಟದ ಗೊಬ್ಬರ ಮಾರಾಟ ಮಾಡಬೇಕೆಂದು ನಾನು ಬಯಸುತ್ತೇನೆ. ಅಲ್ಲದೆ ಸಂಘದಲ್ಲಿರುವ ಎಲ್ಲಾ ನಿರ್ದೇಶಕರುಗಳು ರಾಜಕೀಯವನ್ನು ಬದಿಗಿಟ್ಟು ಕೃಷಿಕರ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ.

ನಮ್ಮ ಸಹಕಾರ ಸಂಘದ ಅಭಿವೃದ್ಧಿಗೆ ಸಾಕಾರವಾಗುವಂತಹ ಇನ್ನೊಂದು ವಿಷಯವನ್ನು ನಿಮಗೆ ತಿಳಿಸುತ್ತೇನೆ. ಇದಕ್ಕೆ ಮುಖ್ಯ ಪ್ರೇರಣೆಯೆಂದರೆ ಅಂತಾರಾಷ್ಟ್ರೀಯ ಕಂಪನಿ ಆದ ಆಪಲ್ ನ ಸ್ಥಾಪಕರಾದ ಸ್ಟೀವ್ ಜಾಬ್ಸ್. ಇವರು ತಮ್ಮ ಕಂಪನಿಯ ಎಲ್ಲಾ ನೌಕರರಿಗೆ ಮೂರು ತಿಂಗಳಿಗೊಮ್ಮೆ ಒಂದು ಹೊಸ ಐಡಿಯಾವನ್ನು ನೀಡಬೇಕು ಎಂದು ಹೇಳುತ್ತಿದ್ದರು ಅಂದರೆ ವರ್ಷಕ್ಕೆ ನಾಲ್ಕು ಬಾರಿ. ಅಂದರೆ ಕಂಪನಿಯಲ್ಲಿ ಸುಮಾರು ಸಾವಿರ ಜನ ನೌಕರರಿದ್ದರೆ ಅದರಲ್ಲಿ ನಾಲ್ಕು ಸಾವಿರಗಳಷ್ಟು ಹೊಸ ಐಡಿಯಾಗಳು ದೊರೆಯುತ್ತಿತ್ತು. ಅದರಲ್ಲಿ ಉತ್ತಮವಾದ ಕನಿಷ್ಠ 10 ಐಡಿಯಾಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದರು. ಈ ಕಾರಣದಿಂದಲೇ ಈಗಲೂ ಆಪಲ್ ಕಂಪನಿ ಜಾಗತಿಕವಾಗಿ ದಿಗ್ಗಜ ಕಂಪನಿಯಾಗಿ ಮುಂದುವರೆಯುತ್ತಿದೆ. ಇದೇ ಕಲ್ಪನೆಯಲ್ಲಿ ನಮ್ಮ ಸಹಕಾರ ಸಂಘದಲ್ಲಿ ನಾವು ಸಿಬ್ಬಂದಿಗಳೆಲ್ಲರೂ ಪ್ರತಿ ತಿಂಗಳು ಹೊಸ ವಿಚಾರಗಳನ್ನು ಹೊಸ ಪ್ರಯೋಗಗಳನ್ನು ಮಾಡಲು ಹಾಗೂ ಅದರ ಫೀಡ್ಬ್ಯಾಕ್ ಅನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ.

ನನ್ನ ಅಧ್ಯಕ್ಷ ಅವಧಿಯಲ್ಲಿ ಬ್ಯಾಂಕಿನ ವಹಿವಾಟು ಹೆಚ್ಚಾಗಲು ತುಂಬಾ ಶ್ರಮಿಸಿದ್ದೇನೆ. ಸಣ್ಣ ವ್ಯಾಪಾರಿಗಳಿಗೆ ಸಹಾಯವಾಗಲೆಂದು ಒಂದು ಚಿನ್ನ ಖರೀದಿಯೋಜನೆಯನ್ನು ಕೂಡ ಜಾರಿಗೆ ತಂದಿದ್ದೇವೆ. ಅದು ಹೇಗೆ ಎಂದರೆ ಸದಸ್ಯರು ಒಂದು ಲಕ್ಷ ಮೌಲ್ಯದ ಚಿನ್ನವನ್ನು ಖರೀದಿಸಲು ಮುಂದಾದರೆ ಸದಸ್ಯರು ಕೇವಲ 15 ಸಾವಿರಗಳಷ್ಟು ಹಣವನ್ನು ಮಾತ್ರ ಪಾವತಿಸಿದರೆ ಸಾಕು, ಉಳಿದ ರೂಪಾಯಿ 85,000 ದಷ್ಟು ಹಣವನ್ನು ಸಹಕಾರ ಸಂಘದಿಂದಲೇ ನೀಡಿ ಚಿನ್ನವನ್ನು ಖರೀದಿಸಲಾಗುವುದು. ನಂತರ ಈ 80,000 ಹಣವನ್ನು ಕಡಿಮೆ ಬಡ್ಡಿ ದರದಲ್ಲಿ 12, 24 ಅಥವಾ 36 ತಿಂಗಳ ಇ.ಎಂ.ಐ.  ನಲ್ಲಿ ಕಟ್ಟಿ ಚಿನ್ನವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಲಾಭವೇನೆಂದರೆ ಸದಸ್ಯರಿಗೆ ಇಂದಿನ ದರದಲ್ಲಿ ಚಿನ್ನವನ್ನು ಖರೀದಿಸಲು ಸಾಧ್ಯವಾಗುವುದು.  ಅಂದು ನಾವು ಈ ಯೋಜನೆಯನ್ನು ಜಾರಿಗೆ ತಂದ ಸಂದರ್ಭದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 2000 ರೂಪಾಯಿಗಳಿತ್ತು. ಆ ಸಂದರ್ಭದಲ್ಲಿ ಹಲವಾರು ಸದಸ್ಯರು ಈ ಯೋಜನೆಗೆ ಸೇರಿದ್ದರು ಇದರಿಂದ ಸದಸ್ಯರಿಗೂ ಕೂಡ ಒಂದು ರೀತಿಯ ಹೂಡಿಕೆ ಆಗಿ ತುಂಬಾ ಲಾಭ ಬಂದಿದೆ. ಪ್ರಸ್ತುತ ನಮ್ಮ ಸಹಕಾರ ಸಂಘದಲ್ಲಿ ಸುಮಾರು 15 ಕೋಟಿ ರೂಪಾಯಿಗಳಷ್ಟು ಚಿನ್ನದ ಸಾಲವನ್ನು ನೀಡಲಾಗುತ್ತಿದೆ ಅಲ್ಲದೆ ಸದಸ್ಯರಿಗೂ ಕೂಡ ನಮ್ಮ ಸಹಕಾರ ಸಂಘದ ಮೇಲೆ ಇರುವ ನಂಬಿಕೆಯನ್ನು ತೋರಿಸುತ್ತದೆ.

ನಮ್ಮ ಸಹಕಾರ ಸಂಘದ ಸದಸ್ಯರ ಬಗ್ಗೆ ಹೇಳುವುದಾದರೆ ಅವರೆಲ್ಲರೂ ತುಂಬಾ ಪ್ರಬುದ್ಧರಾಗಿದ್ದಾರೆ ಸಹಕಾರ ಸಂಘದ ಪ್ರಕ್ರಿಯೆ ಹಾಗೂ ವ್ಯವಹಾರಗಳ ಬಗ್ಗೆ ಒಳ್ಳೆಯ ಜ್ಞಾನವನ್ನು ಹೊಂದಿದ್ದಾರೆ.  ಅಲ್ಲದೆ ನಮ್ಮ ಯೋಜನೆಗಳನ್ನು ಕೂಡ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಮ್ಮ ಸಂಘವೂ ಹಾಗೂ ಸದಸ್ಯರ ಜೀವನವು ಉತ್ತಮವಾಗಿ ನಡೆಯುತ್ತಿದೆ. ಅಲ್ಲದೆ ನಮ್ಮ ಸಂಘದ ಸಿಬ್ಬಂದಿಗಳು ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣವಾಗಿ ಈ ವರ್ಷದಲ್ಲಿ ನಮ್ಮ ಸಂಘವು ಸುಮಾರು ಎರಡು ಕೋಟಿಗಳಷ್ಟು ಲಾಭವನ್ನು ಗಳಿಸಿ ಪ್ರಗತಿಯ ಹಾದಿಯಲ್ಲಿದೆ. ನಮ್ಮ ಸಹಕಾರ ಸಂಘಕ್ಕೆ ಅಪೇಕ್ಸ್ ಬ್ಯಾಂಕಿನಿಂದ ‌ ಪ್ರಶಸ್ತಿಗಳು ದೊರೆತಿದೆ. ಅಲ್ಲದೆ ಕೊಡಗು ಡಿ.ಸಿ.ಸಿ. ಬ್ಯಾಂಕ್ ನಿಂದ ಕೂಡ ಪ್ರಶಸ್ತಿಗಳು ದೊರೆತಿದೆ.

ಇದರೊಂದಿಗೆ 1989 ರಲ್ಲಿ ಸೋಮವಾರಪೇಟೆ ವಿವಿಧೋದ್ದೇಶ ಸಹಕಾರ ಸಂಘವು ಪೂರ್ಣ ನಷ್ಟದಲ್ಲಿ ನಡೆಯುತ್ತಿತ್ತು ಸಿಬ್ಬಂದಿಗಳಿಗೆ ಸಿಗುತ್ತಿದ್ದ ಸಂಬಳ ಮೊತ್ತವನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಅದು ಸಂಘದ ಕಾರ್ಯದರ್ಶಿಗೆ ಪ್ರತಿ ತಿಂಗಳು 80 ರೂಪಾಯಿ ಸಂಬಳ ಹಾಗೂ ಸಿಬ್ಬಂದಿಗಳಿಗೆ 20 ರೂಪಾಯಿ ಸಂಬಳ ದೊರೆಯುತ್ತಿತ್ತು. 1990ರ ಚುನಾವಣೆಯಲ್ಲಿ ನಾವು ಸ್ಪರ್ಧಿಸಿ ಆಯ್ಕೆಗೊಂಡು ಸಂಘದ ನಿರ್ದೇಶಕರು ನನ್ನನ್ನು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು. ನಂತರ ಶ್ರಮವಹಿಸಿ ಆ ಸಂಘವನ್ನು ಲಾಭದ ಹಂತದಲ್ಲಿ ತಂದು ನಿಲ್ಲಿಸಿದ್ದೇವೆ. ಪ್ರಸ್ತುತ ಸದ್ಯಕ್ಕೆ ಸುಂಟಿಕೊಪ್ಪದಲ್ಲಿ ಒಂದು ಶಾಖೆ ಹಾಗೂ ನೂತನವಾಗಿ ಶನಿವಾರ ಸಂತೆಯಲ್ಲಿ ಒಂದು ಶಾಖೆಯನ್ನು ಪ್ರಾರಂಭಿಸಲಾಗುತ್ತಿದೆ. ಹಾಗೆ ಪ್ರಸ್ತುತ ಈ ಸಂಘವು ಹಾಲಿ ವರ್ಷದಲ್ಲಿ 36 ಲಕ್ಷಗಳ ಲಾಭವನ್ನು ಗಳಿಸಿ ಸದಸ್ಯರಿಗೆ ಶೇಕಡ. 20% ಡಿವಿಡೆಂಡ್‌ ಹಂಚುವಷ್ಟು ಸಶಕ್ತವಾಗಿ ಬೆಳೆದಿದೆ.

ಸಹಕಾರಿ ಕ್ಷೇತ್ರ ಇನ್ನಷ್ಟು ಉತ್ತಮಗೊಳ್ಳಲು ನನ್ನ ಸಲಹೆ ಏನೆಂದರೆ…. ಯುವಕರು ಹೆಚ್ಚು ಹೆಚ್ಚಾಗಿ ಆಡಳಿತ ಮಂಡಳಿಗೆ ಆಯ್ಕೆಯಾಗಿ ಬರಬೇಕು. ಚುನಾವಣೆಗೆ ನಿಲ್ಲುವುದು ತುಂಬಾ ಕಷ್ಟ ಆದರಿಂದ ಈ ಉಸಾಬರಿ ಏಕೆ ಬೇಕು? ಎಂದು ಯುವಕರು ಹೇಳುತ್ತಿದ್ದಾರೆ.  ಆದರೆ ಯುವಶಕ್ತಿಯು ವೃತ್ತಿಪರತೆಯನ್ನು ಬೆಳೆಸಿಕೊಂಡು ಸಂಘದ ಆಡಳಿತ ಮಂಡಳಿಗೆ ಚುನಾವಣೆಯ ಮುಖಾಂತರ ಗೆದ್ದು ಬರಬೇಕು. ಹಾಗಾದರೆ ಮಾತ್ರ ಸಹಕಾರ ಕ್ಷೇತ್ರವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಯುವಶಕ್ತಿಯ ಸಹಕಾರ ಕ್ಷೇತ್ರದ ಬಗ್ಗೆಗಿನ  ನಿರಾಶಕ್ತಿಯು ಸಹಕಾರ ಕ್ಷೇತ್ರಕ್ಕೆ ತುಂಬಾ ಹಿನ್ನಡೆಯಾಗುತ್ತಿರುವ ಸಂದರ್ಭ ಇಂದು ತಲೆದೋರುತ್ತಿದೆ. ಆ ನಿಟ್ಟಿನಲ್ಲಿ ಪ್ರಸ್ತುತ ಯುವಶಕ್ತಿಯ ಪಾತ್ರವು ಆಡಳಿತ ಮಂಡಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕಾಗಿದೆ ಎಂಬುದು ಯುವಶಕ್ತಿಯಲ್ಲಿ ನನ್ನ ಕಳಕಳಿಯ ವಿನಂತಿಯಾಗಿದೆ.

ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ  ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಇಂದಿನ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಒಗ್ಗಿಕೊಳ್ಳಬೇಕು. ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಶಕ್ತಿಯ ಮೇಲೆ ನಾವು ಕಾರ್ಯನಿರತರಾಗಬೇಕು. ಅಲ್ಲದೇ ಯಾರೊಂದಿಗೆ ತಲೆಬಾಗಬಾರದು. ಸಿಬ್ಬಂದಿಗಳಿಗೆ ಸೇವಾ ಮನೋಭಾವವಿರಬೇಕು. ಕೇವಲ ಸಂಬಳಕ್ಕಾಗಿ ಮಾತ್ರ ಕೆಲಸ ಮಾಡುವ ಹಾಗೆ ಇರಬಾರದು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪ್ರಪಂಚವನ್ನು ಆಳುವ ಕಾಲ ಬಂದೊದಗಿದೆ ಇಂಥ ಸಂದರ್ಭದಲ್ಲಿ ಈ ರೀತಿಯ ಬದಲಾವಣೆಗಳನ್ನು ನಾವು ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ. ನಾವು ಕೆಲಸ ನಿರ್ವಹಿಸುತ್ತಿರುವ ಕಾರ್ಯಕ್ಷೇತ್ರದ ಬಗ್ಗೆ ನಮಗೆ ಮಾಹಿತಿ ಇರಬೇಕು. ನಮ್ಮ ವ್ಯವಹಾರದ ಪ್ರತಿಸ್ಪರ್ಧಿಗಳು ಏನು ಯೋಚನೆ ಮಾಡುತ್ತಿದ್ದಾರೆ ಎಂಬುದು ತಿಳಿಯಬೇಕು “ಔಟ್ ಆಫ್ ದಿ ಬಾಕ್ಸ್” ಆಲೋಚನೆ ಮಾಡಬೇಕಾಗಿದೆ.

ಬೇಸರದ ಸಂಗತಿ ಏನೆಂದರೆ ಸಂಘದ ಚುನಾವಣೆ ನಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸಂಘದ ಚುನಾವಣೆಯಲ್ಲಿ ಭಾಗವಹಿಸುವ ಅಪೇಕ್ಷೇಯಿಂದ ರಾಜಕೀಯ ವಲಯದಲ್ಲಿ ಸ್ಪರ್ಧಿಸಲು ತುಂಬಾ ಒತ್ತಡವನ್ನು ತರುತ್ತಾರೆ. ಆದರೆ ಅವರಿಗೆ ಆ ನಿರ್ದೇಶಕ ಸ್ಥಾನದ ಮಹತ್ವ ತಿಳಿದಿರುವುದಿಲ್ಲ. ಅದರ ಕಾರ್ಯ ಪರಿಚಯವಿರುವುದಿಲ್ಲ. ಗೆದ್ದ ನಂತರ ಸರಿಯಾಗಿ ಸಭೆಗೆ ಬರುವುದಿಲ್ಲ ಕೇವಲ ರಾಜಕೀಯ ಉದ್ದೇಶದಿಂದ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಬರುತ್ತಾರೆ. ಸಹಕಾರ ಕ್ಷೇತ್ರದ ಕಾನೂನು ನಿಯಮಗಳ ಬಗ್ಗೆ ಮಾಹಿತಿಯೂ ಇರುವುದಿಲ್ಲ. ತಮ್ಮ ಸಹಕಾರ ಕಾರ್ಯ ಕ್ಷೇತ್ರದಲ್ಲಿ ಮುಂದುವರಿಯಬೇಕೆಂದರೆ ಪ್ರತಿಯೊಬ್ಬರಿಗೂ ಸಹಕಾರ ಕ್ಷೇತ್ರದ ಬಗ್ಗೆ ತಿಳುವಳಿಕೆ ಇರಲೇಬೇಕು ಅದು ಇಂದಿನ ಅನಿವಾರ್ಯವಾಗಿದೆ. ಸಂಘದ ಸದಸ್ಯರಾಗಿರಲಿ ಸಿಬ್ಬಂದಿಗಳಾಗಿರಲಿ ಆಡಳಿತ ಮಂಡಳಿಯವರು ಆಗಿರಲಿ ಎಲ್ಲರೂ ಜೊತೆಗೂಡಿ ಸಹಕಾರ ಸಂಘದ ಏಳಿಗೆಗೆ ಶ್ರಮಿಸಬೇಕು. ಎಂಬುದು ನನ್ನ ಮನದಾಳದ ಮಾತುಗಳು.

ನಾನು ಕಾಫಿ ಬೋರ್ಡ್ ನಲ್ಲಿ ಎರಡು ಅವಧಿಗೆ ಸದಸ್ಯನಾಗಿದ್ದೆ. ಸುಮಾರು ಆರು ವರ್ಷಗಳ ಕಾಲ, ಈ ಸಂದರ್ಭದಲ್ಲಿ ಕಾಫಿ ಬೆಳೆಯುವವರು ತುಂಬಾ ಸಂಕಷ್ಟದಲ್ಲಿದ್ದರು ಅದು 2004ರ ಇಸವಿ ಅಂದು ಕಾಫಿಗೆ ಪ್ರತಿ ಚೀಲಕ್ಕೆ 500 ರುಪಾಯಿಗಳಿಗಿಂತ ಕಡಿಮೆ ಬೆಲೆ ದೊರೆಯುತ್ತಿತ್ತು. ಕಾಫಿ ಬೆಳೆಗಾರರು ಕೃಷಿಗೆ ಸಾಲವನ್ನು ಪಡೆದು ಹಿಂದಿರುಗಿಸಲು ದಿಕ್ಕೆ ತೊರದಂತಹ ಸ್ಥಿತಿ. ಸಾಲದ ಬಡ್ಡಿ ಕಟ್ಟಲೂ  ಕೈಯಲ್ಲಿ ಹಣವಿಲ್ಲ. ತಮ್ಮ ಸಣ್ಣ ಕಾಫಿ ತೋಟವನ್ನು ಮಾರುವ ಪರಿಸ್ಥಿತಿಯಲ್ಲಿದ್ದರು. ಇದೇ ಸಂದರ್ಭದಲ್ಲಿ ಸಣ್ಣ ಕಾಫಿ ಬೆಳೆಗಾರರಿಗೆ ಏನಾದರೂ ಸಹಾಯವನ್ನು ಮಾಡಬೇಕೆಂದು ಅಂದಿನ ಕಾಫಿ ಬೋರ್ಡ್ ಅಧ್ಯಕ್ಷರಾಗಿದ್ದ ಶ್ರೀಮತಿ ಲಕ್ಷ್ಮಿ ವೆಂಕಟಾಚಲಂ  ಅವರ ನೇತೃತ್ವದಲ್ಲಿ ಒಂದು ತಂಡವನ್ನು ರೂಪಿಸಲಾಯಿತು. ಸಣ್ಣ ಬೆಳೆಗಾರರಿಗೆ ಹೇಗಾದರೂ ಸಹಾಯ ಮಾಡಬೇಕು ಇಂತಹ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕು ಮುಂದೆ ಒಳ್ಳೆಯ ದಿನಗಳು ಕಾದಿವೆ ಎಂದು ಶ್ರೀಮತಿ ಲಕ್ಷ್ಮಿ ವೆಂಕಟಾಚಲಂ ಅವರು ನಮಗೆ ಉತ್ಸಾಹವನ್ನು ತುಂಬುತ್ತಿದ್ದರು.

 ಕಾಫಿ ಬೆಳೆಗಾರರು ತುಂಬಾ ಸಂಕಷ್ಟದಲ್ಲಿದ್ದ ಸಮಯದಲ್ಲಿ ಬ್ಯಾಂಕಿನಿಂದ ಅವರು ಪಡೆದ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ತುಂಬಾ ಸಂಕಷ್ಟದಲ್ಲಿದ್ದರು. ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಯಾವುದಾದರೂ ಒಂದು ರೀತಿಯಲ್ಲಿ ಸಹಾಯ ಮಾಡಲು ನಾನು ಹಾಗೂ ಕಾಫಿ ಮಂಡಳಿಯ ನನ್ನ ಸಹಪಾಠಿಗಳು ಧೀರ್ಘವಾಗಿ ಸಮಾಲೋಚಿಸಿ ಆ ನಿಟ್ಟಿನಲ್ಲಿ ಕೆಲವೊಂದು ಮಾರ್ಗಳನ್ನು ಹುಡುಕಲು  ಮುಂದಾದೆವು. ಆಗ ನಮ್ಮ ಮುಂದೆ ಬಂದಿದೂ ಒಂದೇ ಆಯ್ಕೆ ಅದು ಏನೆಂದರೆ ಕಾಫಿ ಬೋರ್ಡ್ ನ ಮಾರ್ಕೆಟಿಂಗ್, ಎಕ್ಸಟೆನ್ಶನ್,  ರಿಸರ್ಚ್ ಮತ್ತು ಪ್ರಮೋಷನ್  ಡಿಪಾರ್ಟ್‌ಮೆಂಟ್‌ ಗಳಿಗೆ ವೆಚ್ಚ ಮಾಡದೆ ಇರುವ ಹಣವನ್ನು ರೈತರ ಸಾಲದ ಬಡ್ಡಿಯ 3% ಹಣವನ್ನು ನೀಡಿದರೆ ರೈತರಿಗೆ ಸಹಾಯವಾಗುವುದು ಎಂಬ ಮನವಿಯನ್ನು ಅವರ ಮುಂದಿಟ್ಟೆವು. ಅವರು ಕೂಡ ನಮ್ಮ ಮನವಿಯನ್ನು ಒಪ್ಪಿದರು. 

ಇದೆ ಸಂದರ್ಭದಲ್ಲಿ ಮತ್ತೊಂದು ಯೋಜನೆಯಾದ Special Coffee Term Loan (SCTL) ಅನ್ನು ಜಾರಿಗೆ ತರುವುದರಿಂದ  ಇದರಿಂದ ರೈತರಿಗೆ ತುಂಬಾ ಅನುಕೂಲವಾಗಿತ್ತು. ಈ ಯೋಜನೆಯ ಪ್ರಕಾರ ಕೃಷಿಕರು ತಮ್ಮ ಮನೆ ವಾಹನ ಮುಂತಾದವುಗಳಿಗೆ ಮಾಡಿದ ಸಾಲ 10 ಲಕ್ಷ ವಿದ್ದರೆ ಅದರ ಬಡ್ಡಿ ಮೂರು ಲಕ್ಷ ಸೇರಿಸಿ  ಒಟ್ಟು 13 ಲಕ್ಷ  ಇತ್ತು. ತಮ್ಮ ಆಸ್ತಿ ಹರಾಜಿಗೆ ಬಂದ ಪರಿಸ್ಥಿತಿ ಒದಗಿತು. ಆಗ ಉಳಿದ ಬ್ಯಾಕ್‌ಗಳೊಂದಿಗೆ ಚರ್ಚಿಸಿ, ಈ ಸಾಲಗಳಿಗೆ ಮುಂದಿನ ಅವಧಿಗೆ ಬಡ್ಡಿಯನ್ನು ವಿಧಿಸಿದಂತೆ ಹಾಗೂ ಸಾಲವನ್ನು ಮರುಪಾವತಿಸಲು 13 ವರ್ಷಗಳ ಕಾಲಾವಕಾಶವನ್ನು ನೀಡಲಾಯಿತು. ಇದರಿಂದ 2002 ರಿಂದ 2006ರ ನಡುವೆ ರೈತರಿಗೆ ತುಂಬಾ ಸಹಾಯವಾಯಿತು. ಆ ಸಂದರ್ಭದಲ್ಲಿ ರೈತರಿಗೆ ಸಹಾಯವಾಗದಿದ್ದಲ್ಲಿ ಸುಮಾರು 20ರಿಂದ 30% ಸಣ್ಣ ಬೆಳೆಗಾರರ ಕಾಫಿ ತೋಟಗಳು ದೊಡ್ಡ ಕಂಪನಿಗಳಿಗೆ ಮಾರಾಟವಾಗುತ್ತಿತ್ತು. ಈ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸಿದ್ದರ ಬಗ್ಗೆ ನನಗೆ ತೃಪ್ತಿಯಿದೆ.

ನನ್ನ ಸಹಕಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಂತಾದ ಈ ಎಲ್ಲಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿ ಕೊಳ್ಳಲು ಮೂಲ ಪ್ರೇರಣೆ ಎಂದರೆ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ನನಗೆ ದೊರೆತ ಸಂಸ್ಕಾರವೆಂದರೆ ತಪ್ಪಾಗಲಾರದು.”

ಶ್ರೀ,  ಬಿ.ಡಿ. ಮಂಜುನಾಥ್‌ರವರ ಕಿರು ಪರಿಚಯ:

ಕೊಡಗಿನ ಹಿರಿಯ ಸಹಕಾರಿಗಳಾದ  ಶ್ರೀ,  ಬಿ.ಡಿ. ಮಂಜುನಾಥ್‌ರವರು ಸಹಕಾರ ಕ್ಷೇತ್ರದಲ್ಲಿ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿ, ಕೊಡಗು ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿ, ಬೆಂಗಳೂರು KSCARD ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದಾರೆ. ಸೋಮವಾರಪೇಟೆಯ ಶ್ರೀ ರಾಮ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸ್ಥಾಪಕ ಅಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿ, ಸೋಮವಾರಪೇಟೆ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಫಿ ಬೋರ್ಡ್ ನಲ್ಲಿ ಎರಡು ಅವಧಿಗಳಲ್ಲಿ ಸದಸ್ಯರಾಗಿ ಸುಮಾರು ಆರು ವರ್ಷಗಳ ಕಾಲ ಸೇವೆ. ಕರ್ನಾಟಕ ಸಹಕಾರ ಮಹಾಮಂಡಳದಿಂದ ನೀಡಲ್ಪಡುವ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಕೊಡಗು ಜಿಲ್ಲಾಧ್ಯಕ್ಷರಾಗಿ ಕೊಡಗಿನಲ್ಲಿ ಬಿ.ಜೆ.ಪಿ.ಯ. ಬಲವರ್ಧನೆಗೆ ಅಪಾರ ಕೊಡುಗೆ ನಿಡಿದ್ದಾರೆ. ಬಿ.ಜೆ.ಪಿ.ಯ ರಾಜ್ಯ ಸಮಿತಿ ಸದಸ್ಯ ಹಾಗೂ ಬಿ.ಜೆ.ಪಿ.ಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ  ಪಯೋನಿಯರ್‌ ಟೆನಿಸ್‌ ಕ್ಲಬ್‌ನ  ಹಿರಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾಗಿ ಸೇವೆ. ಸೋಮವಾರಪೇಟೆಯ ಬ್ಲೂ ಸ್ಟಾರ್ ಹಾಕಿ ಕ್ಲಬ್ ನ ಸ್ಥಾಪಕ ಕಾರ್ಯದರ್ಶಿ

ಬ್ಲೂ ಸ್ಟಾರ್ ಹಾಕಿ ಕ್ಲಬ್‌ನಿಂದ ಸುಮಾರು ನೂರು ಜನ ಕ್ರೀಡಾಪಟುಗಳಿಗೆ ತಮ್ಮ ಜೀವನವನ್ನು ನಡೆಸಲು ಸಹಾಯಕವಾಗುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಬ್ಲೂ ಸ್ಟಾರ್ ಹಾಕಿ ಕ್ಲಬ್‌ನಿಂದ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಬೆಳೆದಿದ್ದಾರೆ. ಅವರೆಂದರೆ ಅರ್ಜುನ್ ಹಾಲಪ್ಪ, ಸುನಿಲ್, ಆಭರಣ, ವಿಕ್ರಂ ಕಾಂತ್ ಅಲ್ಲದೆ ಹಲವಾರು ಕ್ಲಬ್‌ನ ಸದಸ್ಯರು ಕೆನರಾ ಬ್ಯಾಂಕ್, ಎಚ್.ಎಮ್.ಟಿ.  ಮುಂತಾದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಹಾಕಿ ಆಟಗಾರರಾಗಿ ಸೇರ್ಪಡೆಗೊಳ್ಳಲು ಸಾಧ್ಯವಾಗಿದೆ.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರಾಗಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಸೋಮವಾರಪೇಟೆ ಆಂಜನೇಯ ದೇವಾಲಯ ಸಮಿತಿ ಸದಸ್ಯರಾಗಿ ಸೇವೆ. ಸೋಮವಾರಪೇಟೆ ರಾಮ ಮಂದಿರ ಸದಸ್ಯ ಹಾಗೂ ವಿದ್ಯಾ ನಿಧಿಯ ಪ್ರಮುಖರಾಗಿ ಸೇವೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಸೋಮವಾರಪೇಟೆಯ ಪ್ರತಿಷ್ಟಿತ  ಬಿ.ಟಿ.ಸಿ.ಜಿ. ಕಾಲೇಜಿನ ಆಡಳಿತ ಮಂಡಳಿಯಲ್ಲಿ ಕೆಲವು ವರ್ಷಗಳ ಕಾಲ ಸೇವೆ.

ಮೂಲತಃ ಕೃಷಿಕರಾಗಿರುವ ಬಿ.ಡಿ. ಮಂಜುನಾಥ್‌ರವರ ತಂದೆ: ದಿ. ಬಿ.ಕೆ. ದೊಡಯ್ಯ, ತಾಯಿ : ದಿ. ಲಕ್ಷ್ಮಮ್ಮ, ಪತ್ನಿ: ನಂದಿನಿ (ಗೃಹಿಣಿ). ಮಗ: ಗೌತಮ್ (ಅಮೆರಿಕದ ಟೆಕ್ಸಾಸ್ ನಲ್ಲಿ ಉದ್ಯೋಗಿ), ಸೊಸೆ : ರಶ್ಮಿ (ಅಮೆರಿಕದ ಟೆಕ್ಸಾಸ್ ನಲ್ಲಿ ಉದ್ಯೋಗಿ), ಮೊಮ್ಮಗ : ಶಿವ. ಮಗಳು : ಭಾವನ, ಅಳಿಯ : ಅರ್ಜುನ್ ಹಾಲಪ್ಪ (ಅಂತಾರಾಷ್ಟ್ರೀಯ ಹಾಕಿ ಆಟಗಾರ) ಮೊಮ್ಮಮಗಳು: ಅಗ್ರತಾ.

ಶ್ರೀಯುತ ಬಿ.ಡಿ. ಮಂಜುನಾಥ್‌ರವರು ಪ್ರಸ್ತುತ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಂಬೂರು ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ರಾಜಕೀಯ, ಸಾಮಾಜಿಕ ಧಾರ್ಮಿಕ ಹಾಗೂ  ಶೈಕ್ಷಣಿಕ  ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 05-08-2023

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments