ಹಣ್ಣಿನ ಬೆಳೆಗಳಲ್ಲಿ ಕೀಟ ನಿಯಂತ್ರಣ Insect control in fruit crops

Reading Time: 11 minutes

ಹಣ್ಣಿನ ಬೆಳೆಗಳಲ್ಲಿ ಕೀಟ ನಿಯಂತ್ರಣ

ಹಣ್ಣಿನ ಬೆಳೆಗಳಲ್ಲಿ ಕೀಟ ನಿಯಂತ್ರಣ
ತೋಟಗಾರಿಕೆ ಬೆಳೆಗಳಲ್ಲಿ ಹಣ್ಣಿನ ಬೆಳೆಗಳ ಉತ್ಪಾದನೆ ಶೇಕಡ 38ರಷ್ಟಿದೆ. ದ್ರಾಕ್ಷಿ, ಮಾವು, ಬಾಳೆಹಣ್ಣು, ಪಪ್ಪಾಯಿ, ಸಪೋಟ, ದಾಳಿಂಬೆ ಮುಂತಾದವು ಮುಖ್ಯ ಹಣ್ಣಿನ ಬೆಳೆಗಳು. ಅದಲ್ಲದೆ ಕೊಡಗಿನಲ್ಲಿ ಬೆಳೆಯಲ್ಪಡುವ ಹಣ್ಣುಗಳಾದ ಲಿಚ್ಚಿ, ರಂಬುಟಾನ್, ಬೆಣ್ಣೆಹಣ್ಣು, ಕದಂಬ ಹಣ್ಣು, ಪಣಂಪುಳಿ, ಮಲಯನ್ ಏಪಲ್ ಮುಂತಾದವು ಕಡಿಮೆ ಬಳಕೆಯಲ್ಲಿರುವ ಹಣ್ಣುಗಳು. ತರಕಾರಿ ಬೆಳೆಗಳಲ್ಲಿರುವಂತೆ ಹಣ್ಣಿನ ಬೆಳೆಗೆ ಅನೇಕ ಕೀಟ ಮತ್ತು ರೋಗಗಳು ಬಾಧಿಸುತ್ತವೆ. ಹಲವು ಕೀಟಗಳು ನಂಜು/ಬ್ಯಾಕ್ಟೀರಿಯಾ/ಇತರ ರೋಗ ವಾಹಕಗಳಾಗಿವೆ ಹಾಗೂ ಬೆಳೆಯ ಬೆಳವಣಿಗೆಯನ್ನು ಕುಂಠಿತ ಮಾಡುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮಾವು
ಮುಖ್ಯ ಕೀಟಗಳೆಂದರೆ– ಮಾವಿನ ಹಣ್ಣಿನ ನೊಣ, ಗೊರಟು ಹುಳ, ಜಿಗಿತದ ಹುಳು, ಕಾಂಡ ಕೊರಕ, ಬಲೆಕಟ್ಟುವ ಹುಳು, ಕಾಯಿಕೊರಕ, ಮತ್ತು ಹಿಟ್ಟಿನ ತಿಗಣೆ.
ಹಣ್ಣಿನ ನೊಣ
ನೋಡಲು ಮನೆ ನೊಣದಂತಿದ್ದು ದೊಡ್ಡದಾಗಿದೆ. ಮಾವಿನ ಸಿಪ್ಪೆಯ ಕೆಳಗಡೆ ಮೊಟ್ಟೆ ಇಡುತ್ತದೆ.
ಲಕ್ಷಣಗಳು: ಮೊಟ್ಟೆ ಇಟ್ಟ ಸ್ಥಳದಲ್ಲಿ ರಂಧ್ರ ಗೋಚರಿಸುತ್ತದೆ. ಹಣ್ಣು ಕೊಳೆತು ಕಳಚಿ ಬೀಳುತ್ತದೆ. ಹಣ್ಣಿನೊಳಗೆ ಲಾರ್ವ ಸೇರಿಕೊಂಡು ತಿರುಳನ್ನು ತಿನ್ನುತ್ತವೆ. ಬೆಳೆದ ಹುಳು ಹೊರಬಂದು ಮಣ್ಣಿನಲ್ಲಿ ಕೋಶಾವಸ್ಥೆ ಹೊಂದುತ್ತದೆ.
ನಿರ್ವಹಣೆ: ಹಣ್ಣು ಕೊಯ್ಲು ಮಾಡುವ 45 ದಿವಸಕ್ಕಿಂತ ಮೊದಲೇ ಮರದ ಸುತ್ತಲೂ ಉಳುಮೆ ಮಾಡಬೇಕು. ವಾರಕೊಮ್ಮೆ ಕೆಳಗೆ ಬಿದ್ದ ಹಣ್ಣುಗಳನ್ನು ಆಯ್ದು ನಾಶಪಡಿಸಬೇಕು. ಒಂದು ಎಕರೆಗೆ 4-5 ಮಿಥೈಲ್ ಯೂಜಿನಾಲ್ ಕೀಟಾಕರ್ಷಕ ಬಲೆ ಅಳವಡಿಸಬೇಕು.

ಗೊರಟಿನ ಹುಳು
ಇದು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕಾಯಿ ಗೋಲಿಯಾಕಾರವಿದ್ದಾಗ ಲಾರ್ವವು ಒಳ ಪ್ರವೇಶಿಸಿ ಗೊರಟನ್ನು ಸೇರುತ್ತದೆ. ನಂತರ ಗೊರಟಿನಲ್ಲೆ ಬೆಳವಣಿಗೆ ಹೊಂದಿ ಪ್ರೌಢ ಕೀಟವಾಗಿ ಹೊರಬರುತ್ತದೆ. ಇದರಿಂದ ತಿರುಳಿನ ಗುಣಮಟ್ಟ ಹಾಳಾಗುತ್ತದೆ. ಜೀವನ ಚಕ್ರ ಪೂರೈಸಲು ಒಂದು ವರ್ಷ ಬೇಕಾಗುತ್ತದೆ.
ನಿರ್ವಹಣೆ: ವಾರಕ್ಕೊಮ್ಮೆ ಬಿದ್ದ ಮಾವಿನ ಹಣ್ಣುಗಳನ್ನು ಹೆಕ್ಕಿ ನಾಶ ಮಾಡಬೇಕು. ಮರ ಹೂ ಬಿಡುವ ಮುಂಚೆ (ನವೆಂಬರ್-ಡಿಸೆಂಬರ್) ಮುಖ್ಯಕಾಂಡ, ಕೊಂಬೆ, ಕೊಂಬೆಯ ಬುಡವನ್ನು ಕ್ಲೋರುಪೈರಿಫಾಸ್‍ನಿಂದ (2.5 ಮಿಲಿ/ಲೀ) ಸಿಂಪಡಿಸಬೇಕು. ಇದರಿಂದ ಮರದ ತೊಗಟೆಗಳಲ್ಲಿ ಅಡಗಿ ಕುಳಿತಿರುವ ಜೀರುಂಡೆಗಳು ನಾಶವಾಗುತ್ತದೆ.
ಮಾವು ನಿಂಬೆಹಣ್ಣಿನ ಗಾತ್ರದಲ್ಲಿರುವಾಗ ಎಸಿಫೇಟ್ (1.5 ಗ್ರಾಂ/ಲೀ) ಸಿಂಪಡಿಸಬೇಕು. 2-3 ವಾರಗಳ ಬಳಿಕ ಡೆಕಾಮೆಥ್ರಿನ್ (1 ಮಿಲಿ/ಲೀ) ಸಿಂಪಡಿಸಬೇಕು. ಕೊಯ್ಲು ಮಾಡಿದ ನಂತರ ತೋಟ ಮತ್ತು ಸಂಸ್ಕರಿಸುವ ಉದ್ಯಮಗಳಲ್ಲಿರುವ ಎಲ್ಲಾ ಮಾವಿನ ಓಟೆಗಳನ್ನು ನಾಶಪಡಿಸಬೇಕು.

ಜಿಗಿತದ ಹುಳು
ಈ ಕೀಟಗಳು ಹೂ ಗೊಂಚಲಿನಿಂದ ರಸ ಹೀರಿ ಸಿಹಿ ಪದಾರ್ಥವನ್ನು ಗೊಂಚಲಿನ ಮೇಲೆಲ್ಲಾ ವಿಸರ್ಜಿಸುತ್ತವೆ. ಇದರಿಂದ ಗೊಂಚಲಿನ ಮೇಲೆ ಕಪ್ಪು ಪದರ ಬೆಳೆದು ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯಾಗುತ್ತದೆ. ಕೀಟ ಬೆಳೆದಾಗ ಹಳೆಯ ಎಲೆಗಳನ್ನು ಬಿಟ್ಟು ಬೇರೆ ಎಲೆಗಳನ್ನು ಆಶ್ರಯಿಸುತ್ತದೆ. ಕಾಯಿ ಬೆಳೆಯುವ ಸಮಯದಲ್ಲಿ ಕೀಟಬಾಧೆ ಹೆಚ್ಚಾದರೆ ಹಣ್ಣಿನ ಗುಣಮಟ್ಟ ಹಾಳಾಗುತ್ತದೆ.
ನಿರ್ವಹಣೆ: ಕೀಟದ ಸಂಖ್ಯೆ ಕಡಿಮೆ ಇದ್ದರೆ ಅಜಾಡಿರಾಕ್ಟಿನ್ (5 ಮಿಲಿ/ಲೀ) ಸಿಂಪಡಿಸಬೇಕು. ಕೀಟದ ಸಂಖ್ಯೆ ಜಾಸ್ತಿ ಇದ್ದರೆ ಇಮಿಡಾಕ್ಲೋಪ್ರಿಡ್ (0.4 ಮಿಲಿ/ಲೀ) ಅಥವಾ ಎಲ್. ಸೈಹೇಲೋಥ್ರಿನ್ (0.5 ಮಿಲಿ/ಲೀ) ಸಿಂಪಡಿಸಿದ ನಂತರ ಅವಶ್ಯಕತೆಯಿದ್ದಲ್ಲಿ ಕಾಯಿ ಬಟಾಣಿ ಹಂತ ತಲುಪಿದಾಗ ಇನ್ನೊಮ್ಮೆ ಸಿಂಪಡಿಸಬೇಕು.

ಕೊಂಬೆ ಕೊರಕ
ಲಾರ್ವ ಹುಳು ಎಳೆ ಎಲೆಯ ಮಧ್ಯರೇಖೆಯಲ್ಲಿ ರಂಧ್ರ ಕೊರೆದ ನಂತರ ಎಳೆ ಚಿಗುರುಗಳಲ್ಲಿ ತೂತು ಕೊರೆಯುತ್ತದೆ. ಹೀಗಾಗಿ ಎಳೆ ಚಿಗುರುಗಳು ಒಣಗಿ ಹೋಗುತ್ತವೆ. ಇದು ಕಸಿ ಕಟ್ಟಿದ ಚಿಕ್ಕ ಸಸಿಗಳಿಗೆ ಹಾನಿಕಾರಕ.
ನಿರ್ವಹಣೆ: ಬಾಧೆಯಿರುವ ಕೊಂಬೆಗಳನ್ನು ಕತ್ತರಿಸಬೇಕು. ಹೊಸ ಚಿಗುರು ಕಂಡುಬಂದಾಗ ಕಾರ್ಬರಿಲ್ (4 ಗ್ರಾಂ/ಲೀ) ಅಥವಾ ಪ್ರೊಫೇನೊಫಾಸ್ (2 ಮಿಲಿ/ಲೀ) ಸಿಂಪಡಿಸಬೇಕು.

ಎಲೆಯಲ್ಲಿ ಬಲೆ ಹೆಣೆಯುವ ಹುಳಗಳು
ಕಂಬಳಿ ಹುಳುಗಳು ಎಳೆ ಎಲೆಗಳನ್ನು ತಿನ್ನುತ್ತವೆ. ಯಥೇಚ್ಛವಾಗಿ ಬಲೆ ಕಟ್ಟಿದಾಗ ಒಳಗಿನಿಂದಲೆ ಆಹಾರ ಸೇವಿಸುತ್ತದೆ. ಅನೇಕ ಲಾರ್ವಗಳು ಬಲೆ ಕಟ್ಟಿದ ಎಲೆಗಳಲ್ಲಿ ಗುಂಪಾಗಿ ಕಂಡುಬರುತ್ತದೆ. ತೀವ್ರ ಬಾಧೆ ಇದ್ದರೆ ಗಿಡ ಹೂ ಬಿಡುವುದಿಲ್ಲವಾದ್ದರಿಂದ ಬರಡಾಗಿರುತ್ತದೆ.
ನಿರ್ವಹಣೆ: ಜುಲೈ ತಿಂಗಳಿನಲ್ಲಿ ಹೊಸ ಚಿಗುರು ಬಂದಾಗ ಬಲೆಯ ನಿರ್ವಹಣೆ ಮಾಡಬೇಕು. ಇಲ್ಲದೆ ಹೋದರೆ ಮುಂದಿನ ವರ್ಷ ಚಿಗುರು ಮತ್ತು ಹೂಬಿಡಲು ತೊಂದರೆಯಾಗುತ್ತದೆ. ಬಲೆ ಕಟ್ಟಿದ ಎಲೆಗಳನ್ನು ತೆಗೆದು ಹಾಕಬೇಕು. ಪ್ರೊಫೆನೋಫಾಸ್ (2 ಮಿಲಿ/ಲೀ) ಅಥವಾ ಕಾರ್ಬಾರಿಲ್ (4 ಗ್ರಾಂ/ಲೀ) ಸಿಂಪಡಿಸಬೇಕು.

ಕಾಯಿ ಕೊರಕ: ಮಾವನ್ನು ಕಾಡುವ ಪ್ರಮುಖ ಕೀಟ. ಮಾವು ಗೋಲಿ ಗಾತ್ರದಲ್ಲಿರುವಾಗ ಕೀಟ ಕಾಯಿಯ ಒಳ ಪ್ರವೇಶಿಸುತ್ತದೆ. ಸುರಂಗ ಕೊರೆದು ಓಟೆಯ ಒಳ ಸೇರಿ ಬೆಳವಣಿಗೆ ಹೊಂದುತ್ತದೆ. ಇದರಿಂದ ಕಾಯಿಗಳು ಉದುರಿ ಹೋಗುತ್ತದೆ. ಪ್ರೌಢ ಕೀಟ ನಿರ್ಗಮನ ರಂಧ್ರದ ಮೂಲಕ ಹೊರಬರುತ್ತದೆ.
ನಿರ್ವಹಣೆ: ಉದುರಿದ ಕಾಯಿಗಳನ್ನು ಹೆಕ್ಕಿ ನಾಶಪಡಿಸಬೇಕು.ಎಂಡೋಸಲ್ಫಾನ್ (2 ಮಿಲಿ/ಲೀ) ಸಿಂಪಡಿಸಬೇಕು. ನಂತರ 15 ದಿನ ಅಂತರದಲ್ಲಿ ಡೆಕಾಮೆಥ್ರಿನ್ (1 ಮಿಲಿ/ಲೀ) ಸಿಂಪಡಿಸಬೇಕು. ಕೊಯ್ಲುಗೆ 15 ದಿವಸಗಳಿರುವಾಗ ಯಾವುದೇ ಸಿಂಪಡಣೆಯನ್ನು ಕೈಗೊಳ್ಳಬಾರದು.

ಹಿಟ್ಟಿನ ತಿಗಣೆ
ಕಾಂಡದ ಬುಡ, ಎಳೆಯ ಕೊಂಬೆ ಮತ್ತು ಹೂ ಗೊಂಚಲಿನಲ್ಲಿ ಗುಂಪಾಗಿರುತ್ತದೆ. ಬಾಧೆ ಹೆಚ್ಚಾದಾಗ ಹೂ ಕಳಚಿ ಬೀಳುತ್ತದೆ. ಎಪ್ರಿಲ್ ಮೇ ತಿಂಗಳಿನಲ್ಲಿ ಮೊಟ್ಟೆಗಳನ್ನು ನಾಶಪಡಿಸಲು ಕಾಂಡದ ಬುಡದಲ್ಲಿ ಮಣ್ಣನ್ನು 6 ಇಂಚು ಆಳಕ್ಕೆ ಬಿಡಿಸಬೇಕು.
ನವೆಂಬರ್ ತಿಂಗಳಿನಲ್ಲಿ 400 ಗೇಜಿನ ಗ್ರೀಸ್ ಸವರಿದ ಒಂದಡಿ ಅಗಲದ ಪ್ಲಾಸ್ಟಿಕ್ ಹಾಳೆಯನ್ನು ಕಾಂಡದ ಬುಡದಲ್ಲಿ ಹಗ್ಗದ ಸಹಾಯದಿಂದ ಕಟ್ಟಬೇಕು.

ಕಿತ್ತಳೆ
ಎಲೆ ಸುರಂಗ ಹುಳ
ಕಿತ್ತಳೆಯನ್ನು ತೀವ್ರವಾಗಿ ಬಾಧಿಸುವ ಕೀಟವಾಗಿದೆ. ಬಾಧಿತ ಎಲೆ ವಕ್ರವಾಗಿ ಕಾಣುತ್ತದೆ. ಲಾರ್ವ ಎಲೆಯಲ್ಲಿ ಹಾವಿನಾಕೃತಿಯ ಸುರಂಗವನ್ನು ಮಾಡುತ್ತದೆ.
ನಿರ್ವಹಣೆ: ಬಿ.ಟಿ (10 ಗ್ರಾಂ/ಲೀ) ಸಿಂಪಡಿಸಬೇಕು. ನಂತರ ಎರಡು ವಾರ ಅಂತರದಲ್ಲಿ ಅಜಾಡಿರಾಕ್ಟಿನ್ (5 ಮಿಲಿ/ಲೀ) ಸಿಂಪಡಿಸಬೇಕು.
ಈ ವಿಧಾನವನ್ನು ಕಿತ್ತಳೆ ಚಿಟ್ಟೆ ನಿಯಂತ್ರಣಕ್ಕೆ ಸಹ ಅನುಸರಿಸಬೇಕು.

ಕಪ್ಪು ನೊಣ
ರಸ ಹೀರುವ ಕೀಟವಾಗಿದ್ದು ಬೆಳವಣಿಗೆ ಕುಂಠಿತವಾಗುತ್ತದೆ.
ನಿರ್ವಹಣೆ: ಬೇವಿನ ಸೋಪು (10 ಗಾಂ್ರ/ಲೀ) ಸಿಂಪಡಣೆಯ ನಂತರ ಡೈಯೋಮೆಥೋಕ್ಷಾಮ್ (0.25 ಗ್ರಾಂ/ಲೀ) ಸಿಂಪಡಿಸಬೇಕು.

ಹೇನು ಮತ್ತು ಸಿಲ್ಲಾ
ಇವು ಗಿಡದ ರಸವನ್ನು ಹೀರಿ ಬೆಳವಣಿಗೆಯನ್ನು ಕುಠಿಂತಗೊಳಿಸುತ್ತದೆ. ಬೇವಿನ ಸೋಪು (10 ಗಾಂ್ರ/ಲೀ) ಸಿಂಪಡಣೆಯ ನಂತರ ಥೈಯೋಮೆಥೊಕ್ಷಾಮ್ (0.25 ಗ್ರಾಂ/ಲೀ) ಅಥವಾ ಇಮಿಡಾಕ್ಲೋಪ್ರಿಡ್ (0.5 ಮಿಲಿ/ಲೀ) ಸಿಂಪಡಿಸಬೇಕು.

ಹಣ್ಣಿನ ನೊಣ
ಹಣ್ಣಿಗೆ ತೂತು ಕೊರೆದು ಒಳಗೆ ಮೊಟ್ಟೆ ಇಡುತ್ತದೆ. ಲಾರ್ವ ಒಳಗಡೆ ಬೆಳವಣಿಗೆ ಹೊಂದುತ್ತದೆ. ರಂಧ್ರದ ಸುತ್ತಲೂ ಶಿಲೀಂಧ್ರದ ಬೆಳವಣಿಗೆಯಿಂದ ಹಣ್ಣು ಬೆಳೆಯುವ ಮೊದಲೇ ಕಳಚಿ ಬೀಳುತ್ತದೆ. ಬೆಳೆದ ಮೆಗಾಟ್‍ಗಳು ಮಣ್ಣಿನ ಮೇಲ್ಪದರದಲ್ಲಿ ಕೋಶಾವಸ್ಥೆ ಹೊಂದಿ ಪ್ರೌಢ ಕೀಟವಾಗಿ ಹೊರಬರುತ್ತದೆ.
ನಿರ್ವಹಣೆ: ಕೀಟಾಕರ್ಷಕ ದ್ರಾವಣದ ಸಿಂಪಡಣೆ ಅಥವಾ ಚಿಮುಕಿಸುವುದರಿಂದ ಕೀಟ ಹತೋಟಿಯಲ್ಲಿರುತ್ತದೆ. 15 ದಿನಗಳಿಗೊಮ್ಮೆ ಕೀಟನಾಶಕ ಸಿಂಪಡಣೆಯಿಂದ ಹಣ್ಣಿನ ನೊಣವನ್ನು ನಿಯಂತ್ರಿಸಬಹುದು. ಕೀಟಾಕರ್ಷಕ ದ್ರಾವಣವು ಬೆಲ್ಲ+ಮೆಲಾಥಿಯನ್ ಕೀಟನಾಶಕವನ್ನು ಒಳಗೊಂಡಿದೆ. 1 ಎಕರೆ ಪ್ರದೇಶದಲ್ಲಿ ಮೇಲ್ಕಾಣಿಸಿದ ದ್ರಾವಣವನ್ನು 40 ವಿವಿಧ ಎಡೆಗಳಲ್ಲಿ ಚಿಮುಕಿಸಿದಾಗ ಹಣ್ಣಿನ ನೊಣದ ಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು.

ಸಪೋಟ
ಚಿಕ್ಕು ಪತಂಗ ಮತ್ತು ಮೊಗ್ಗು ಕೊರಕ
ಇದು ಹೂ ಮೊಗ್ಗು, ಹೂ, ಎಲೆ ಮತ್ತು ಕಾಯಿಯನ್ನು ಹಾಳು ಮಾಡುತ್ತದೆ. ಮೊಗ್ಗಿನಲ್ಲಿ ರಂಧ್ರ ಕೊರೆದು ಎಲೆಗಳನ್ನು ಸೇರಿಸಿ ಬಲೆ ಕಟ್ಟುತ್ತದೆ. ಕೆಲವೊಮ್ಮೆ ಎಳೆಯ ಕಾಯಿಯಲ್ಲಿ ರಂಧ್ರ ಕೊರೆಯುತ್ತದೆ.
ಲಕ್ಷಣ: ಬಲೆಗಳಲ್ಲಿ ಒಣಗಿದ ಎಲೆ, ಹೂಗೊಂಚಲನ್ನು ಕಾಣಬಹುದು. ವರ್ಷವಿಡೀ ಸಕ್ರಿಯವಾಗಿದ್ದು ಚಿಗುರಿನ ಸಮಯದಲ್ಲಿ ಚಟುವಟಿಕೆ ಹೆಚ್ಚಾಗಿರುತ್ತದೆ.
ನಿರ್ವಹಣೆ: ಹಾನಿಗೊಂಡಿರುವ ಎಲ್ಲಾ ಭಾಗಗಳನ್ನು ನಾಶಪಡಿಸಬೇಕು. ಎಂಡೋಸಲ್ಫಾನ್ (2 ಮಿಲಿ/ಲೀ) ಅಥವಾ ಡೈಮೀಥೋಟ್ (2 ಮಿಲೀ/ಲಿ) ಸಿಂಪಡಿಸಬೇಕು.

ಬಾಳೆ
ಮಿಥ್ಯಾಕಾಂಡ ವಿವಿಲ್
ಪ್ರೌಢ ಹಾಗು ಲಾರ್ವಗಳು ಮಿಥ್ಯಾಕಾಂಡವನ್ನು ಭಕ್ಷಿಸುತ್ತದೆ. ಇದರಿಂದಾಗಿ ಕಾಂಡ ಕೊಳೆತು ಗಿಡ ದುರ್ಬಲವಾಗಿ ಮುರಿದು ಬೀಳುತ್ತದೆ.
ನಿರ್ವಹಣೆ: ಬಾಳೆ ಕಂದುಗಳನ್ನು ನೆಡುವ ಮೊದಲು ಕ್ಲೋರುಪೈರಿಫೊಸ್ (3 ಮಿಲಿ/ಲೀ) ದ್ರಾವಣದಲ್ಲಿ ಅದ್ದಬೇಕು. ಶುದ್ಧ ಬೇಸಾಯ ಕ್ರಮವನ್ನು ಅನುಸರಿಸಬೇಕು. ಕೀಟಬಾಧೆ ಕಂಡುಬಂದರೆ ಕಾಂಡದಲ್ಲಿ ಕೊರೆದ ಅತ್ಯಂತ ಮೇಲಿನ ರಂಧ್ರದ ಮೂಲಕ ಡೈಕ್ಲೋರೋವಾಸ್ (1 ಮಿಲಿ/ಲೀ) + ಕಾರ್ಬೆಂಡೇಜಿಮ್ (2 ಗ್ರಾಂ/ಲೀ) ಸುರಿಯಬೇಕು. ಈ ದ್ರಾವಣವನ್ನು ಇಡೀ ಗಿಡಕ್ಕೆ ಸಿಂಪಡಿಸಬೇಕಲ್ಲದೆ ಗಿಡದ ಬುಡವನ್ನು ಸಹ ತೋಯ್ಸಬೇಕು.

ಹೇನು
ಬಂಚಿ ಟಾಪ್ ರೋಗವನ್ನು ಹರಡುತ್ತದೆ. ಹಾನಿಗೊಳಗಾದ ಗಿಡವನ್ನು ನಾಶಪಡಿಸಬೇಕು. ರೋಗವಾಹಕ ಕೀಟವನ್ನು ಡೈಮೀಥೋಟ್ (2 ಮಿಲಿ/ಲೀ) ಅಥವಾ ಇಮಿಡಾಕ್ಲೋಪ್ರಿಡ್ (0.4 ಮಿಲಿ/ಲೀ) ಸಿಂಪಡಣೆಯ ಮೂಲಕ ನಿಯಂತ್ರಿಸಬೇಕು.

ಸೀಬೆ
ಮುಖ್ಯ ಕೀಟಗಳೆಂದರೆ ‘ಟಿ’ ಸೊಳ್ಳೆ ಮತ್ತು ಹಣ್ಣಿನ ನೊಣ.
‘ಟಿ’ ಸೊಳ್ಳೆ
ಗೋಲಿಯಾಕರದ ಸೀಬೆಯನ್ನು ಬಾಧಿಸುತ್ತದೆ. ಕೀಟ ಕಚ್ಚಿದ ಸ್ಥಳದಲ್ಲಿ ಕಜ್ಜಿಯಾಗಿ ಕಾಯಿ ಬೆಳೆದಂತೆ ಅಗಲವಾಗಿ ಕಂಡುಬರುವುದು. ಕಜ್ಜಿ ಗುರುತಿನಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ದೊರೆಯುತ್ತದೆ.

ಹಣ್ಣಿನ ನೊಣ
ಮೀಥೈಲ್ ಯೂಜಿನಾಲ್ ಕೀಟಾಕರ್ಷಕ ಬಲೆಯನ್ನು ಎಕರೆಗೆ 5 ರಂತೆ ಅಳವಡಿಸಬೇಕು. ಕೆಳಬಿದ್ದ ಕಾಯಿಗಳನ್ನು ಹೆಕ್ಕಿ ನಾಶಪಡಿಸಬೇಕು ಇಲ್ಲವೆ ಆಳದಲ್ಲಿ ಹುಗಿಯಬೇಕು.

ಪಪ್ಪಾಯ
ಪಪ್ಪಾಯದಲ್ಲಿ ಕೀಟದಿಂದಾಗುವ ಹಾನಿ ತುಂಬಾ ಕಡಿಮೆ. ಮುಖ್ಯ ಕೀಟಗಳೆಂದರೆ ಜೇಡ ಮತ್ತು ಸ್ವಲ್ಪ ಮಟ್ಟಿಗೆ ರಸಹೀರುವ ಕೀಟ ಹೇನು. ನಂಜು ರೋಗವನ್ನು ಹರಡುವ ಹತ್ತಿಯ ನುಸಿ ಎಫಿಸ್‍ಗೋಸಿಪ್ಪಿ ಅತ್ಯಂತ ಹೆಚ್ಚಿನ ಮಹತ್ವ ಪಡೆದಿದೆ.
ಜೇಡ ನುಸಿ
ಹೆಚ್ಚಾಗಿ ಬೇಸಿಗೆಯಲ್ಲಿ ಎಲೆಯ ಮೇಲೆ ಹಾಗು ತಳ ಭಾಗದಲ್ಲಿ ಹಾನಿ ಮಾಡುತ್ತದೆ. ಎಲೆಯ ಮಧ್ಯರೇಖೆಯ ಸುತ್ತಲು ಹೆಚ್ಚಾಗಿ ಕಂಡುರುತ್ತದೆ.
ಲಕ್ಷಣಗಳು: ಬಿಳಿ ತೂತುಗಳು ಎಲೆಗಳು ಮೇಲ್ಭಾಗದಲ್ಲಿ ಕಾಣುತ್ತದೆ. ಇದನ್ನು ನಿಯಂತ್ರಿಸದಿದ್ದರೆ ಚುಕ್ಕೆ ದೊಡ್ಡದಾಗಿ ಸುಟ್ಟಂತೆ ಕಾಣುತ್ತದೆ.
ನಿರ್ವಹಣೆ: ಕೆಲ್‍ಥೇನ್ (2.5 ಮಿಲಿ/ಲೀ) ಅಥವಾ ಡೈಮೀಥೋಟ್ (2 ಮಿಲಿ/ಲೀ) ಸಿಂಪಡಿಸಬೇಕು.

ರಿಂಗ್‍ಸ್ಪಾಟ್ ನಂಜು ರೋಗ
ಈ ನಂಜು ರೋಗವು ಹತ್ತಿಯ ಹೇನಿನಿಂದ ಹರಡುತ್ತದೆ. ಎಲೆ ಮೇಲೆ ಚುಕ್ಕೆಗಳ ಚಿತ್ರಣ ಕಂಡು ಬರುತ್ತದೆ. ಅತೀ ಹಾನಿಗೊಳಗಾದಾಗ ಹಣ್ಣು ರೂಪ ಕಳೆದುಕೊಳ್ಳುತ್ತದೆ. ಮತ್ತು ಕಡಿಮೆ ಇಳುವರಿ ದೊರೆಯುತ್ತದೆ.
ನಿರ್ವಹಣೆ: ಯಾವುದೇ ನಿವಾರಣೆ ಉಪಾಯವಿಲ್ಲ. ನುಸಿ ಉಪಟಳ ತಡೆಯಲು ಪಪ್ಪಾಯ ಬೆಳೆಯ ಸನಿಹದಲ್ಲಿ ಹತ್ತಿ, ಕುಂಬಳಜಾತಿಯ ಬೆಳೆ ಮತ್ತು ದ್ವಿದಳ ಧಾನ್ಯ ಬೆಳೆಯಬಾರದು. ಇಮಿಡಾಕ್ಲೋಪ್ರಿಡ್ (0.4 ಮಿಲಿ/ಲೀ) ಹೇನು ನಿವಾರಕವಾಗಿ ಸಿಂಪಡಿಸಬೇಕು.

ಕಡಿಮೆ ಬಳಕೆಯ ಹಣ್ಣುಗಳು
ರಂಬುಟಾನ್, ಮಲಯನ್ ಎಪಲ್, ಬೆಣ್ಣೆಹಣ್ಣು, ಲಿಚ್ಚಿ, ಕರಮಂಜಿ, ಪಣಂಪುಳಿ ಇತ್ಯಾದಿ ಕಡಿಮೆ ಬಳಕೆಯಲ್ಲಿರುವ ಹಣ್ಣುಗಳು.
ರಸಹೀರುವ ಕೀಟಗಳಾದ ಹೇನು, ಥ್ರಿಪ್ಸ್, ಹಿಟ್ಟಿನ ತಿಗಣೆ ಮೊದಲಾದವು ಎಲೆ ಮತ್ತು ಹೂ ಗೊಂಚಲಿನಿಂದ ರಸ ಹೀರುತ್ತವೆ.
ನಿರ್ವಹಣೆ: ಕೀಟ ಕಡಿಮೆ ಸಂಖ್ಯೆಯಲ್ಲಿದ್ದರೆ ಬೇವಿನ ಸೋಪು (10 ಗಾಂ್ರ/ಲೀ) ಸಿಂಪಡಿಸಬೇಕು. ಕೀಟಬಾಧೆ ಜಾಸ್ತಿಯಿದ್ದಲ್ಲಿ ಇಮಿಡಾಕ್ಲೋಪ್ರಿಡ್ (0.4 ಮಿಲಿ/ಲೀ) ಅಥವಾ ಫಿಪ್ರೊನಿಲ್ (1.5 ಮಿಲಿ/ಲೀ) ಅಥವಾ ಥೈಯೋಮೆಥೋಕ್ಷಾಮ್ (0.25 ಗ್ರಾಂ/ಲೀ) ಸಿಂಪಡಿಸಬೇಕು. ಹಿಟ್ಟಿನ ತಿಗಣೆ ಬಾಧೆ ಜಾಸ್ತಿಯಿದ್ದಲ್ಲಿ ಲಾಷ್ಟ್ರ (5 ಮಿಲಿ/ಲೀ) ನೆನೆಸುವುದರಿಂದ ಪರಿಹಾರ ದೊರಕುತ್ತದೆ.
ಹಣ್ಣಿನ ನೊಣ
ಇವು ಮಲಯನ್ ಏಪಲ್, ಕರೋಂಡ, ಗಾರ್ಸಿನಿಯ ಮತ್ತು ಬೆಣ್ಣೆ ಹಣ್ಣುಗಳಿಗೆ ಧಾಳಿ ಮಾಡುತ್ತದೆ. ಆದರೆ ಲಿಚ್ಚಿ, ಕದಂಬಹಣ್ಣು, ಕಮರಾಕ್ಷಿ ಹಣ್ಣುಗನ್ನು ಬಾಧಿಸುವುದು ಕಡಿಮೆ. ಶುಚಿತ್ವ ಕಾಪಾಡುವುದರೊಂದಿಗೆ ಎಕರೆಗೆ 5 ರಂತೆ ಮೀಥೈಲ್ ಯೂಜಿನಾಲ್ ಕೀಟಾಕರ್ಷಕ ಬಲೆಯನ್ನು ಅಳವಡಿಸುವುದರಿಂದ ಹಾನಿ ಕಡಿಮೆಯಾಗುತ್ತದೆ. ಕೆಳಗೆ ಬಿದ್ದ ಹಣ್ಣುಗಳನ್ನು ಹೆಕ್ಕಿ ನಾಶಪಡಿಸಬೇಕು.
ಅನಾರ್ ಚಿಟ್ಟೆ
ಲಿಚ್ಚಿ ಹಣ್ಣಿಗೆ ಹಾನಿಮಾಡುವುದು ಕಂಡುಬಂದಿದೆ. ಲಿಚ್ಚಿ ಎಳೆ ಮಿಡಿಯಿದ್ದಾಗ ಲಾರ್ವ ಒಳ ಸೇರಿ ಬೀಜದ ಒಳಭಾಗವನ್ನು ಸಂಪೂರ್ಣವಾಗಿ ತಿಂದು ಹಾಕುತ್ತವೆ. ನಂತರ ಹೊರ ಬಂದು ಕೋಶಾವಸ್ಥೆ ಹೊಂದುತ್ತದೆ. ಮಿಡಿ ಕಚ್ಚುವ ಸಮಯದಲ್ಲಿ ಬೇವಿನ ಸೋಪು (10 ಗ್ರಾಂ/ಲೀ) ಸಿಂಪಡಿಸುವುದರಿಂದ ಕೀಟಗಳನ್ನು ಹತೋಟಿಗೆ ತರಬಹುದು. ಕಾಯಿ ಕೊತ್ತಂಬರಿ ಬೀಜದ ಗಾತ್ರದಲ್ಲಿರುವಾಗ ಇನ್ನೊಮ್ಮೆ ಡೈಮಿಥೋಟ್ (2 ಮಿಲಿ/ಲೀ) ಸಿಂಪಡಿಸಬೇಕು.

 

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments