ಆಲೂಗೆಡ್ಡೆ
ಜಗತ್ತಿನ ನಾಲ್ಕು ಪ್ರಮುಖ ಆಹಾರ ಬೆಳೆಗಳಲ್ಲಿ ಆಲೂಗೆಡ್ಡೆ ಒಂದಾಗಿದೆ. ಶರ್ಕರ ಪಿಷ್ಟ, ಪ್ರೋಟೀನ್ ಮತ್ತು ಖನಿಜಾಂಶಗಳಾದ ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಹಾಗು ವಿಟಮಿನ್ (ಬಿ1, ಬಿ2, ಬಿ6 ಮತ್ತು ಸಿ) ಗಳನ್ನು ಒಳಗೊಂಡಿದೆ. ಒಟ್ಟು ಬೆಳೆಯ ವಿಸ್ತೀರ್ಣದಲ್ಲಿ ಚೈನಾ ಮೊದಲ ಸ್ಥಾನದಲ್ಲಿದೆ. ರಷ್ಯಾ ಒಕ್ಕೂಟ, ಉಕ್ರೇನ್ ಮತ್ತು ಪೋಲೆಂಡ್ ನಂತರದ ಸ್ಥಾನದಲ್ಲಿವೆ. ಭಾರತ ನಾಲ್ಕನೆ ಸ್ಥಾನದಲ್ಲಿದ್ದು ಸುಮಾರು 1.82 ಮಿಲಿಯ ಹೆಕ್ಟೇರು ಪ್ರದೇಶದಲ್ಲಿ ಅಲೂಗೆಡ್ಡೆ ಬೆಳೆಯಲಾಗುತ್ತಿದೆ. ಒಟ್ಟು ಉತ್ಪಾದನೆ 34 ಮಿಲಿಯನ್ ಟನ್‍ಗಳಿಗೆ ಮೀರಿದೆ ಮತ್ತು ಉತ್ಪಾದನೆಯಲ್ಲಿ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಆಲೂಗೆಡ್ಡೆ ಉತ್ಪಾದಿಸುವ ರಾಷ್ಟ್ರ ಚೈನಾ, ನಂತರದ ಸ್ಥಾನದಲ್ಲಿ ರಷ್ಯಾ ಒಕ್ಕೂಟ, ಪೋಲೆಂಡ್ ಮತ್ತು ಉಕ್ರೇನುಗಳಿವೆ. ದೇಶದಲ್ಲಿ ಆಲೂಗೆಡ್ಡೆ ಬೆಳೆಯುವ 3/4 ಪಾಲು ವಿಸ್ತೀರ್ಣ ಮತ್ತು 4/5 ಪಾಲು ಉತ್ಪಾದನೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಾಗುತ್ತದೆ. ಹೆಚ್ಚು ವಿಸ್ತೀರ್ಣ ಮತ್ತು ಉತ್ಪಾದನೆ ಹೊಂದಿರುವ ರಾಜ್ಯ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರ ನಂತರದ ಸ್ಥಾನದಲ್ಲಿವೆ.
ವಾಯುಗುಣ ಮತ್ತು ಮಣ್ಣು
ಆಲೂಗೆಡ್ಡೆ ಸಮಶೀತೋಷ್ಣವಲಯದ ಬೆಳೆಯಾಗಿದೆ. ಆದರೆ ಇದು ಅರೆಉಷ್ಣವಲಯ ಮತ್ತು ಉಷ್ಣವಲಯದಲ್ಲಿ ಹೊಂದಿಕೊಂಡು ಬೆಳೆಯುತ್ತದೆ. ಗರಿಷ್ಟ ಉಷ್ಣಾಂಶ 350 ಸೆ. ಮತ್ತು ಕನಿಷ್ಟ ಉಷ್ಣಾಂಶ 200 ಸೆ. ಗಿಂತ ಕಡಿಮೆ ಇದ್ದಾಗ ದೇಶದಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತದೆ (ಗೆಡ್ಡೆ ಕಟ್ಟಲು ಅನುಕೂಲಕರ ಉಷ್ಣಾಂಶ 16-220 ಸೆ). ಮೆಕ್ಕಲು ಮಣ್ಣು, ಕಪ್ಪು, ಕೆಂಪು ಮತ್ತು ಗೋಡು ಮಣ್ಣಿನ ರಸಸಾರ 5.5-8.0 ಇದ್ದಾಗ ಆಲೂಗೆಡ್ಡೆ ಬೆಳೆಯಬಹುದು. ಗಂಗಾನದಿ ತಪ್ಪಲಿನ ಗೋಡು ಮಣ್ಣಿನ ತಟಸ್ಥ ರಸಸಾರ ಆಲೂಗೆಡ್ಡೆ ಬೆಳೆಗೆ ಅತ್ಯಂತ ಸೂಕ್ತವಾಗಿದೆ. ಯಾವುದೇ ಪದರಗಳಿಲ್ಲದ ಹುಡಿ ಮಣ್ಣಿನಲ್ಲಿ ಬೇರಿನ ವಿಸ್ತಾರ ಹೆಚ್ಚುತ್ತದೆ ಮತ್ತು ಉತ್ತಮ ಇಳುವರಿ ದೊರೆಯುತ್ತದೆ. ನೀರು ಬಸಿದು ಹೋಗುವ ಮರಳು ಮಣ್ಣು ಅಥವಾ ಮರಳು ಮಿಶ್ರಿತ ಎರೆಮಣ್ಣಿನಲ್ಲಿ ಸಾವಯವ ವಸ್ತು ವಿಪುಲವಾಗಿದ್ದರೆ ಆಲೂಗೆಡ್ಡೆ ಬೆಳೆಯಲು ಪ್ರಶಸ್ಥವಾಗಿದೆ.
ತಳಿಗಳು
ವಿದೇಶಗಳ ಹೊಸ ತಳಿಗಳನ್ನು ದೇಶದಲ್ಲಿ ಪ್ರಯೋಗಿಸಲು ನಡೆಸಿದ ಯತ್ನ ಸಫಲವಾಗಲಿಲ್ಲ. ಇವು ದೀರ್ಘಾವಧಿ ತಳಿಗಳಾಗಿದ್ದು, ಉತ್ತಮವಾಗಿ ಬೆಳೆಯಲು ಹಗಲಿನ ಅವಧಿ ಜಾಸ್ತಿಯಿರಬೇಕು. ಭಾರತ ಹಗಲಿನ ಅವಧಿ ಕಮ್ಮಿ ಇರುವ ಅರೆ ಉಷ್ಣವಲಯದ ದೇಶವಾದ್ದರಿಂದ ವಿದೇಶ ತಳಿಗಳ ಪಲಿತಾಂಶ ಉತ್ತಮವಾಗಿರಲಿಲ್ಲ. ದೇಶದ ವಾಯುಗುಣಕ್ಕೆ ಹೊಂದಿಕೊಳ್ಳುವ ಹೊಸ ತಳಿಗಳ ಸಂಶೋಧನೆಗಾಗಿ ಕೇಂದ್ರೀಯ ಆಲೂಗೆಡ್ಡೆ ಸಂಶೋಧನಾ ಸಂಸ್ಥೆಯನ್ನು 1949ರಲ್ಲಿ ಸ್ಥಾಪಿಸಲಾಯಿತು. ಈ ಕೇಂದ್ರ ಸಂಶೋಧಿಸಿದ ಹೊಸ ತಳಿಗಳು ‘ಕುಫ್ರಿ’ ಎಂಬ ಹೆಸರಿನಿಂದ ಪ್ರಾರಂಭವಾಗುತ್ತದೆ. ದೇಶದಲ್ಲಿ ಬೆಳೆಯುವ ಪ್ರಮುಖ ತಳಿಗಳೆಂದರೆ ಕುಫ್ರಿ ಚಂದ್ರಮುಖಿ, ಕುಫ್ರಿ ಜ್ಯೋತಿ, ಕುಫ್ರಿ ಬಹಾರು, ಕುಫ್ರಿ ಬಾದಶಹ, ಕುಫ್ರಿ ಸಟ್ಲೆಜ್, ಕುಫ್ರಿ ಸಿಂಧೂರಿ, ಕುಫ್ರಿ ಲಾಲಿಮ, ಕುಫ್ರಿ ಪುಕ್‍ರಾಜ್, ಕುಫ್ರಿ ಚಿಪೋಸನ-1, ಕುಫ್ರಿ ಚಿಪೋಸನ-2, ಕುಫ್ರಿ ಚಿಪೋಸನ-3, ಮತ್ತು ಕುಫ್ರಿ ಹಿಮಸೋನ. ಕುಫ್ರಿ ಚಿಪೋಸನ-1, ಕುಫ್ರಿ ಚಿಪೋಸನ-2, ಕುಫ್ರಿ ಚಿಪೋಸನ-3, ಮತ್ತು ಕುಫ್ರಿ ಹಿಮಸೋನ ಸಂಸ್ಕರಿಸಲು ಬಿಡುಗಡೆಯಾದ ತಳಿಗಳು.
ಬೇಸಾಯ ಕ್ರಮ
ಆಲೂಗೆಡ್ಡೆಯನ್ನು ನೇರವಾಗಿ ಜಮೀನಿನಲ್ಲಿ ಬಿತ್ತಲಾಗುತ್ತದೆ. ಆದರೂ ಟ್ರೂ ಪೊಟೇಟೊ ಸೀಡ್ಸ್ (ಟಿ.ಪಿ.ಎಸ್) ಗಳನ್ನು ನರ್ಸರಿಯಲ್ಲಿ ಅಭಿವೃದ್ಧಿಪಡಿಸಿ ಜಮೀನಿಗೆ ಸ್ಥಳಾಂತರಿಸಲಾಗುತ್ತದೆ ಅಥವಾ ನರ್ಸರಿಯಲ್ಲೆ ಗೆಡ್ಡೆ ಕಟ್ಟಲು ಬಿಡಲಾಗುತ್ತದೆ. ಗಿಡಗಳ ಸಾಂದ್ರತೆಯು ಸ್ಥಳ, ಗಿಡ ನೆಡುವ ರೀತಿ ಮತ್ತು ಉದ್ಧೇಶವನ್ನು ಅವಲಂಬಿಸಿದೆ. ಯಂತ್ರದ ಸಹಾಯದಿಂದ ಬೇಸಾಯ ಮಾಡುವುದಾದರೆ ಸಾಲಿನಿಂದ ಸಾಲಿಗೆ 60 ಸೆಂ.ಮೀ ಮತ್ತು ಗಿಡದಿಂದ ಗಿಡಕ್ಕೆ 20 ಸೆಂ.ಮೀ ಅಂತರವಿಡಬೇಕು. ಇದರಿಂದ ಒಂದು ಹೆಕ್ಟೇರು ಪ್ರದೇಶದಲ್ಲಿ ಸುಮಾರು 83,333 ಸಸಿಗಳನ್ನು ನಾಟಿಮಾಡಬಹುದು. ಕಾರ್ಮಿಕರ ಬಳಕೆಯ ಬೇಸಾಯ ಕ್ರಮದಲ್ಲಿ ಸಾಲಿನಿಂದ ಸಾಲಿಗೆ 45 ಸೆಂ. ಮೀ ಅಂತರವಿಡಬಹುದು, ಗುಡ್ಡ ಪ್ರದೇಶಗಳಲ್ಲಿ ಪ್ರಾಣಿಗಳ ಸಹಾಯದಿಂದಾಗುವ ಬೇಸಾಯ ಕ್ರಮದಲ್ಲಿ ಸಾಲಿನಿಂದ ಸಾಲಿಗೆ 50 ಸೆಂ. ಮೀ ಮತ್ತು ಗಿಡದಿಂದ ಗಿಡಕ್ಕೆ 20 ಸೆ.ಮೀ ಅಂತರವಿಡುತ್ತಾರೆ. ಉಳುಮೆಯ ನಂತರ ಆಲೂಗೆಡ್ಡೆ ನಾಟಿಮಾಡಲು ವಿವಿಧ ವಿಧಾನಗಳನ್ನು ದೇಶದಲ್ಲಿ ಬಳಸುತ್ತಾರೆ. ಜನರಿಂದ ಅಥವಾ ಯಂತ್ರವನ್ನು ಉಪಯೋಗಿಸಿ ಬದು ಮತ್ತು ಸಾಲುಗಳಲ್ಲಿ ನಾಟಿ ಮಾಡುವ ವಿಧಾನ ಜನಪ್ರಿಯವಾಗಿದೆ. ಕೈಯಿಂದ ನಾಟಿ ಮಾಡುವ ವಿಧಾನದಲ್ಲಿ ಸಾಲುಗಳನ್ನು ನಿರ್ಮಿಸಲು ಬಾಗಿದ ಅಥವಾ ತೆಳ್ಳಗಿನ ಗುದ್ದಲಿಯನ್ನು ಬಳಸುತ್ತಾರೆ. ನಂತರ ಗೊಬ್ಬರದ ಮಿಶ್ರಣವನ್ನು ಹರಡಿ ಮಣ್ಣು ಮುಚ್ಚಲಾಗುತ್ತದೆ. ಕಡೆಯದಾಗಿ ಬದುವನ್ನು ನಿರ್ಮಿಸಿ ಬೀಜದ ಗೆಡ್ಡೆಗಳನ್ನು ಬದುಗಳಲ್ಲಿ ಹೂಳಲಾಗುವುದು. ಯಾಂತ್ರಿಕತೆಯಲ್ಲಿ ಟ್ರಾಕ್ಟರ್ ಮೂಲಕ 2-4 ಸಾಲುಗಳನ್ನು ಮಾಡುತ್ತಾರೆ. ಇದರೊಂದಿಗೆ ಗೊಬ್ಬರವನ್ನು ಡ್ರಿಲ್‍ಗಳ ಮೂಲಕ ಹಾಕಲಾಗುತ್ತದೆ. ನಂತರ 2-4 ಸಾಲಿನ ನಾಟಿ ಯಂತ್ರದ ಮೂಲಕ ಬೀಜದ ಗೆಡ್ಡೆಯನ್ನು ನಾಟಿ ಮಾಡಲಾಗುತ್ತದೆ. ನಾಟಿಯಂತ್ರ ಮತ್ತು ಡ್ರಿಲ್ ಇಲ್ಲದೆ ಹೋದರೆ ಗೊಬ್ಬರ ಹರಡಿದ ನಂತರ ಟ್ರಾಕ್ಟರ್‍ನಿಂದ ಸಾಲು ಮಾಡಲಾಗುತ್ತದೆ ಮತ್ತು ಕೈಯಿಂದ 5-7 ಸೆ.ಮೀ ಆಳದಲ್ಲಿ ಬೀಜಗಳನ್ನು ನಾಟಿಮಾಡಲಾಗುತ್ತದೆ. ಇನ್ನೊಂದು ವಿಧಾನದಲ್ಲಿ ಹಗ್ಗದ ಸಹಾಯದಿಂದ ರೇಖೆಯೆಳೆದು, ಈ ರೇಖೆಯ ಉದ್ದಕ್ಕೂ ಗೊಬ್ಬರ ಹಾಕಲಾಗುತ್ತದೆ. ಬೀಜವನ್ನು ರೇಖೆಯ ಬದಿಯಲ್ಲಿಟ್ಟು ಎತ್ತುಗಳಿಂದ ಅಥವಾ ಗುದ್ದಲಿಯಂತ ಸಲಕರಣೆ ಬಳಸಿ ಕಾರ್ಮಿಕರಿಂದ ಬದುಗಳನ್ನು ನಿರ್ಮಿಸಲಾಗುವುದು. ಗುಡ್ಡ ಪ್ರದೇಶದಲ್ಲಿ ಆಳವಿಲ್ಲದ ಹಳ್ಳವನ್ನು ತೋಡಿ ಅದರಲ್ಲಿ ಗೊಬ್ಬರವನ್ನು ಹಾಕಲಾಗುವುದು. ನಂತರ ಗೆಡ್ಡೆ ಬೀಜವನ್ನು ಅದರಲ್ಲಿಟ್ಟು ಮಣ್ಣು ಮುಚ್ಚಿ ಬದು ನಿರ್ಮಿಸಲಾಗುವುದು. ಬೀಜದ ಗೆಡ್ಡೆಗಳು ಗೊಬ್ಬರದ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು.
ಪೋಷಕಾಂಶಗಳ ನಿರ್ವಹಣೆ
ಬೇಳೆಕಾಳು ಮತ್ತು ದ್ವಿದಳ ಧಾನ್ಯ ಬೆಳೆಗಿಂತ ಹೆಚ್ಚಾಗಿ ಆಲೂಗೆಡ್ಡೆ ಗೊಬ್ಬರಕ್ಕೆ ಉತ್ತಮವಾಗಿ ಸ್ಪಂದಿಸುತ್ತದೆ. ಮಣ್ಣು ಮತ್ತು ಹಿಂದಿನ ಬೆಳೆಯ ಇಳುವರಿ ಆಧಾರದ ಮೇಲೆ ಗೊಬ್ಬರದ ಪ್ರಮಾಣ ನಿರ್ಧರಿತವಾಗಿದೆ. ಗೋಡು ಮಣ್ಣಿಗೆ 180:80:110 ಮತ್ತು ಕಪ್ಪು ಮಣ್ಣಿಗೆ 115:45:50 ಪ್ರಮಾಣದಲ್ಲಿ ಸಾರಜನಕ, ರಂಜಕ ಮತ್ತು ಪೊಟಾಷ್ ಹಾಕಲು ಶಿಫಾರಸ್ಸು ಮಾಡಲಾಗಿದೆ.
ನೀರಾವರಿ
ಬೆಳವಣಿಗೆ ಮತ್ತು ಉತ್ತಮ ಫಸಲಿಗೆ ನೀರು ಬಹಳ ಮುಖ್ಯ. ನೀರಿನ ಅವಶ್ಯಕತೆ ಮಣ್ಣು, ವಾಯುಗುಣ ಮತ್ತು ಬೆಳೆಯ ಅವಧಿಯನ್ನು ಅವಲಂಬಿಸಿದೆ. ಆಲೂಗೆಡ್ಡೆ ಬೆಳೆಗೆ ಒಟ್ಟು ಸುಮಾರು 350-550 ಮಿ.ಮೀ ನೀರಿನ ಅವಶ್ಯಕತೆಯಿದೆಯೆಂದು ತಿಳಿದು ಬಂದಿದೆ. ನಾಟಿಮಾಡುವ ಮೊದಲು ನೀರು ಹಾಯಿಸುವುದರಿಂದ ಬೀಜ ಸಮಾನವಾಗಿ ಮೊಳಕೆಯೊಡೆಯುತ್ತದೆ. ಎರಡನೆಯ ಬಾರಿ ನೀರನ್ನು ನಾಟಿ ಮಾಡಿದ ಒಂದು ವಾರದ ನಂತರ ಹಾಯಿಸಬೇಕು. ನೀರಿನ ಮೂಲ ಕಡಿಮೆಯಿದ್ದರೆ ಗಿಡಗಳ ಬೆಳವಣಿಗೆಯ ಸಮಯದಲ್ಲಿ ದಕ್ಷತೆಯಿಂದ ಬಳಸಬೇಕು. ಸ್ಟೋಲನ್ ಸಮಯದಲ್ಲಿ, ಗೆಡ್ಡೆ ಬಿಡುವ ಮತ್ತು ಬೆಳೆಯುವ ಹಂತದಲ್ಲಿ ನೀರಿನ ಅವಶ್ಯಕತೆ ಜಾಸ್ತಿಯಿರುತ್ತದೆ. ಕೊಯ್ಲಿಗೆ 10 ದಿನಗಳಿರುವಾಗ ನೀರು ಹಾಯಿಸವುದನ್ನು ನಿಲ್ಲಿಸುವುದರಿಂದ ಗೆಡ್ಡೆಯ ಸಿಪ್ಪೆ ಭದ್ರವಾಗುತ್ತದೆ.
ಕಳೆನಿರ್ವಹಣೆ
ಪೋಷಕಾಂಶ, ಬೆಳಕು ಮತ್ತು ಸ್ಥಳಕ್ಕಾಗಿ ಕಳೆ ಮುಖ್ಯ ಬೆಳೆಗಳೊಂದಿಗೆ ಪೈಪೋಟಿ ನಡೆಸುತ್ತದೆ. ಇದರಿಂದ ಇಳುವರಿಯಲ್ಲಿ ಗಣನೀಯವಾದ ನಷ್ಟ ಉಂಟಾಗುತ್ತದಲ್ಲದೆ ಹಲವು ರೋಗಾಣು ಮತ್ತು ಹಾನಿಕಾರಕ ಕೀಟಗಳು ಕಳೆ ಗಿಡಗಳಲ್ಲಿ ಆಶ್ರಯ ಪಡೆಯುತ್ತವೆ. ಬೇಸಾಯ ಅಥವಾ ರಾಸಾಯನಿಕ ಅಥವಾ ಇವೆರಡರ ಒಟ್ಟು ಬಳಕೆಯಿಂದ ಕಳೆಯನ್ನು ನಿಯಂತ್ರಿಸಬಹುದು. ಉಳುಮೆ ಮಾಡುವುದರಿಂದ ಮತ್ತು ಬೆಳೆಗೆ ಒಂದು ತಿಂಗಳಾಗುವಾಗ ಕಳೆ ತೆಗೆದು ಮಣ್ಣು ಸೇರಿಸುವುದರಿಂದ ಕಳೆಯ ಪ್ರಮಾಣ ಕಡಿಮೆಯಾಗುವುದು. ನಾಟಿಗಿಂತ ಮೊದಲು ಉಪಯೋಗಿಸುವ ಕಳೆನಾಶಕಗಳಾದ ಪ್ಲುಕ್ಲೊರಾಲಿನ್ ಮತ್ತು ಪೆಂಡಿಮೆಥ್ರಿನ್ ಹಾಗು ಕಳೆ ಬೀಜ ಮೊಳಕೆ ತಡೆ ಹಿಡಿಯುವ ಲಿಲಾಕ್ಲೋರ್, ಲಿನುರಾನ್, ಮೆಟ್ರಿಬುಜಿನ್, ನೈಟ್ರೋಫೆನ್, ಆಕ್ಷಿಪ್ಕುರೋಫೆನ್, ಅಮಡಟ್ರಿನ್, ಸಿಮಾಜೈನ್ ಮುಂತಾದವು ಅತ್ಯಂತ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. 5% ಕಳೆ ಮೊಳಕೆಯ ನಂತರ ಕಳೆನಾಶಕ ಪಾರಾಕ್ವಾಟ್ ಅತ್ಯಂತ ಪರಿಣಾಮಕಾರಿ.
ಕೊಯ್ಲು ಮತ್ತು ಇಳುವರಿ
ಮಣ್ಣಿನ ತಾಪಮಾನ 26-30o ಸೆ. ಗಿಂತ ಹೆಚ್ಚಾಗುವ ಮೊದಲೆ ಆಲೂಗೆಡ್ಡೆ ಕೊಯ್ಲು ಮಾಡಬೇಕು. ಕೇಂದ್ರ ಹಾಗು ಪೂರ್ವ ಮೈದಾನ ಪ್ರದೇಶದಲ್ಲಿ ಜನವರಿ ಅಂತ್ಯದಲ್ಲಿ ಮತ್ತು ಪಶ್ಚಿಮ ಮೈದಾನದಲ್ಲಿ ಫೆಬ್ರವರಿ 15 ರೊಳಗೆ ಕೊಯ್ಲು ಮುಗಿಸಬೇಕು. ಇಲ್ಲದಿದ್ದರೆ ಮಾರ್ಚ್–ಎಪ್ರಿಲ್‍ನ ಅಧಿಕ ತಾಪಮಾನದಿಂದ ಗೆಡ್ಡೆ ಕೊಳೆತು ಹೋಗುತ್ತದೆ. ಕೊಯ್ಲುಗಿಂತ 10-15 ದಿವಸದ ಮೊದಲೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು ಇದರಿಂದ ಗೆಡ್ಡೆಯ ಸಿಪ್ಪೆ ಭದ್ರವಾಗುತ್ತದೆ. ಗುದ್ದಲಿ ಅಥವಾ ಕುರ್ಪಿಯ ಸಹಾಯದಿಂದ ಅಥವಾ ಎತ್ತುಗಳಿಂದ ಎಳೆಯುವ ಡಿಗ್ಗರುಗಳಿಂದ ಕೊಯ್ಲು ಮಾಡಲಾಗುವುದು. 1 ರಿಂದ 4 ಡಿಗ್ಗರುಗಳನ್ನು ಹೊಂದಿದ ಯಂತ್ರಗಳನ್ನು ಸಹ ಉಪಯೋಗಿಸಲಾಗುವುದು.
ಕೊಯ್ಲಿನ ನಂತರ ನಿರ್ವಹಣೆ
ಕೊಯ್ಲಿನ ನಂತರ ಆಲೂಗೆಡ್ಡೆಯನ್ನು ತಂಪಾದ ಪ್ರದೇಶದಲ್ಲಿ ಗುಡ್ಡೆ ಹಾಕಿ 10-15 ದಿವಸ ಒಣಗಲು ಮತ್ತು ಸಿಪ್ಪೆ ಭದ್ರವಾಗಲು ಬಿಡಬೇಕು. ಗುಡ್ಡೆಯ ಉದ್ದ, ಅಗಲ 3-4 ಮೀ ಮತ್ತು ಎತ್ತರ 1 ಮೀ ಸೂಕ್ತವಾದುದು. ಗುಡ್ಡ ಪ್ರದೇಶದಲ್ಲಿ ಆಲೂಗೆಡ್ಡೆಯನ್ನು ಗಾಳಿಯಾಡುವ ಕೋಣೆಯಲ್ಲಿ ಒಣಗಲು ಬಿಡಲಾಗುವುದು. ವರ್ಗೀಕರಿಸುವಾಗ ಗಾಯಗಳಿರುವ, ಹಾನಿಯಾದ ಮತ್ತು ಕೊಳೆತ ಆಲುಗೆಡ್ಡೆಯನ್ನು ಬೇರ್ಪಡಿಸಲಾಗುವುದು. ಗಾತ್ರದ ಆಧಾರದಲ್ಲಿ ವಿಂಗಡಿಸಿ ಗೋಣಿಚೀಲದಲ್ಲಿ ತುಂಬಲಾಗುವುದು. ಒಣಗಿಸಿ ವರ್ಗೀಕರಿಸಿದ ಆಲೂಗೆಡ್ಡೆಯನ್ನು ಶೀತಲ ಕೋಣೆಯಲ್ಲಿ ಶೇಖರಸಿಡಲಾಗುತ್ತದೆ. ಶೀತಲ ಕೋಣೆಯ ಕಡಿಮೆ ತಾಪಮಾನದಿಂದಾಗಿ ಗೆಡ್ಡೆ ಮೊಳಕೆಯೊಡೆಯುದಿಲ್ಲ ಮತ್ತು ಕೊಳೆಯುವುದಿಲ್ಲ ಹಾಗು ಹೆಚ್ಚಿನ ಆದ್ರ್ರತೆಯಿಂದ ತೂಕದಲ್ಲಿ ನಷ್ಟವಾಗುವುದಿಲ್ಲ.
ರೋಗ ಮತ್ತು ಕೀಟ ಬಾಧೆ
ಅನೇಕ ರೀತಿಯ ರೋಗ ಮತ್ತು ಕೀಟಗಳು ಗಿಡ ಮತ್ತು ಗೆಡ್ಡೆಗೆ ಹಾನಿ ಉಂಟು ಮಾಡುತ್ತವೆ. ಬ್ಲೈಟ್ ಪ್ರಮುಖ ರೋಗವಾಗಿದ್ದು ಕಾಂಡ, ಎಲೆ ಮತ್ತು ಗೆಡ್ಡೆಯನ್ನು ಬಾಧಿಸಿ ಇಳುವರಿಯಲ್ಲಿ ಅಧಿಕ ನಷ್ಟ ಉಂಟು ಮಾಡುತ್ತದೆ. ಗುಡ್ಡ ಪ್ರದೇಶದಲ್ಲಿ ಈ ರೋಗ ಪ್ರತೀ ವರ್ಷ ಕಾಣಿಸಿಕೊಂಡರೆ, ಮೈದಾನ ಪ್ರದೇಶದಲ್ಲಿ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತದೆ. ಎಲೆಯಲ್ಲಿ ಕಾಣಿಸಿಕೊಳ್ಳುವ ಇತರ ರೋಗಗಳೆಂದರೆ ಎಲೆ ಚುಕ್ಕೆ, ಅರ್ಲಿಬ್ಲೈಟ್, ಫೋಮ ಮತ್ತು ಎಲೆ ಬ್ಲೋಚ್. ಗೆಡ್ಡೆಯನ್ನು ಬಾಧಿಸುವ ಬ್ಲಾಕ್‍ಸ್ಕರ್ಪ್, ಮಾಮೂಲಿ ಸ್ಕ್ಯಾಬ್, ವಾರ್ಟ್ ಬ್ಲ್ಯಾಕ್ ಸ್ಕರ್ಪ್ ಮತ್ತು ಸ್ಕ್ಯಾಬ್ ದೇಶದ ಎಲ್ಲಾ ಆಲೂಗೆಡ್ಡೆ ಬೆಳೆಯುವ ಪ್ರದೇಶದಲ್ಲಿ ಬೇರೆ ಬೇರೆ ತೀವ್ರತೆಯಲ್ಲಿ ಕಂಡು ಬಂದಿದೆ. ಈ ರೋಗಗಳಿಂದ ಇಳುವರಿಯಲ್ಲಿ ಹೆಚ್ಚಿನ ನಷ್ಟವಾಗದೆ ಹೋದರೂ ವಿಕಾರಗೊಂಡ ಗೆಡ್ಡೆಗಳಿಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ದೊರೆಯುತ್ತದೆ. ವಾರ್ಟ್ ರೋಗ ಗೆಡ್ಡೆ ಮತ್ತು ಎಲೆಯನ್ನು ಬಾಧಿಸುತ್ತದೆ ಮತ್ತು ಇಳುವರಿಯಲ್ಲಿ ಅತ್ಯಧಿಕ ನಷ್ಟ ಉಂಟಾಗುತ್ತದೆ. ಡಾರ್ಜಿಲಿಂಗ್ ಗುಡ್ಡ ಪ್ರದೇಶದಲ್ಲಿ ಈ ರೋಗ ವ್ಯಾಪಕವಾಗಿದೆ. ಕಂದು ಕೊಳೆ ರೋಗದಿಂದ ಜಮೀನಿನಲ್ಲಿ ಸಸಿ ಸೊರಗಿ ಹೋಗುತ್ತದೆ. ಇದನ್ನು ಬ್ಯಾಕ್ಟೀರಿಯ ಸೊರಗು ರೋಗವೆಂದು ಕರೆಯುತ್ತಾರೆ. ಈ ರೋಗವು ಕೇಂದ್ರ ಗುಡ್ಡ ಪ್ರದೇಶಗಳಲ್ಲಿ ಹೆಚ್ಚಾಗಿದೆ ಮತ್ತು ಅಸ್ಸಾಂ, ಮೆಘಾಲಯ, ಮಹಾರಾಷ್ರ್ಟ, ಕರ್ನಾಟಕ ಮತ್ತು ಒರಿಸ್ಸಾದ ಕೆಲವು ಭಾಗಗಳಲ್ಲಿ ಗೋಚರಿಸಿದೆ.
ಸಸ್ಯ ಹೇನು ಮತ್ತು ಎಲೆಜಿಗಿ ಕೀಟ ರೋಗ ವಾಹಕ ಕೀಟಗಳಾಗಿವೆ. ಇವು ಅನೇಕ ನಂಜು ಮತ್ತು ಬ್ಯಾಕ್ಟೀರಿಯದಿಂದ ಉದ್ಭವವಾಗುವ ರೋಗವನ್ನು ಹರಡುತ್ತವೆ. ಕಟವಮ್ರ್ಸ್, ಬಿಳಿ ಗ್ರಬ್, ಆಲೂಗೆಡ್ಡೆ ಪತಂಗ, ಗೆಡ್ಡೆ ತಂತು ಕ್ರಿಮಿ ಮುಂತಾದವು ಪ್ರಮುಖ ಕೀಟಗಳು. ಕಟವರ್ಮ್ ಗಿಡದ ಕಾಂಡವನ್ನು ನೆಲಮಟ್ಟದಲ್ಲಿ ಕತ್ತರಿಸುತ್ತದೆ. ಬಿಳಿ ಗ್ರಬ್ ಗೆಡ್ಡೆಯನ್ನು ಜಮೀನಿನಲ್ಲಿ ಹಾನಿಮಾಡುತ್ತದೆ. ಆಲೂಗೆಡ್ಡೆ ಪತಂಗ ಗಿಡ ಮತ್ತು ಗೆಡ್ಡೆಯನ್ನು ಜಮೀನಿನಲ್ಲಿ ಹಾಗು ಶೇಖರಣೆಯಲ್ಲಿ ಗೆಡ್ಡೆಗೆ ಹಾನಿ ಮಾಡುತ್ತದೆ. ಇದು ಮೈದಾನ ಪ್ರದೇಶ ಮತ್ತು ಹಿಮಾಚಲ ಗುಡ್ಡ ಪ್ರದೇಶದ ಕೆಲವು ಭಾಗಗಳಲ್ಲಿ ಕಂಡು ಬಂದಿದೆ. ದಕ್ಷಿಣ ಗುಡ್ಡ ಪ್ರದೇಶದ ಕೆಲವು ಭಾಗಗಳಲ್ಲಿ ಗೋಚರಿಸಿದ ಪೋಷಕಾಂಶ ಹೀರುವ ಬೇರುಗಳಿಗೆ ಹಾನಿ ಮಾಡುವ ಗಂಟು ತಂತು ಹುಳುಗಳಿಂದ ಇಳುವರಿ ಕಡಿಮೆಯಾಗುತ್ತದೆ.