ಟೊಮೇಟೊ
ಟೊಮೇಟೋ ಸೋಲನೇಸಿ ಕುಟುಂಬಕ್ಕೆ ಸೇರಿದ್ದು ಮನುಷ್ಯನ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಮಾಗಿ ಕೆಂಪಾದ ಹಣ್ಣುಗಳನ್ನು ಉಪಯೋಗಕ್ಕೆ ಬಳಸುತ್ತಾರೆ. ಟೊಮೇಟೋ ಬೇಸಾಯ ಕ್ರಮವನ್ನು ಸಂಕ್ಷಿಪ್ತವಾಗಿ ಈ ಕೆಳಗೆ ವಿವರಿಸಲಾಗಿದೆ.
ಮಣ್ಣು ಮತ್ತು ವಾಯುಗುಣ
ಟೊಮೇಟೋ ಬೇಸಿಗೆ ಕಾಲದ ಬೆಳೆಯಾಗಿದ್ದು, 20-230 ಸೆ. ಸರಾಸರಿ ಮಾಸಿಕ ಉಷ್ಣಾಂಶ ಇದ್ದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ತಾಪಮಾನ ಮತ್ತು ಬೆಳಕಿನ ಪ್ರಮಾಣ ಮಿಡಿಕಚ್ಚುವಿಕೆ, ಬಣ್ಣ ಮತ್ತು ಪೌಷ್ಟಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಬೆಳವಣಿಗೆ ಮತ್ತು ಫಸಲಿನ ಮೇಲೆ ದೀರ್ಘ ಒಣ ವಾತಾವರಣ, ಅಧಿಕ ಮಳೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮರಳು ಮಿಶ್ರಿತ ಮಣ್ಣು ಮತ್ತು ಜೇಡಿಮಣ್ಣಿನಂತ ಎಲ್ಲಾ ರೀತಿಯ ಮಣ್ಣಿನಲ್ಲಿ ಟೊಮೇಟೋವನ್ನು ಬೇಸಾಯ ಮಾಡಬಹುದು. ಅಲ್ಪಾವಧಿ ಬೆಳೆಗೆ ಮರಳು ಮಿಶ್ರಿತ ಮಣ್ಣು ಸೂಕ್ತ. ಆದರೆ ಅಧಿಕ ಇಳುವರಿ ಕೊಡುವ ತಳಿಗಳಿಗೆ ಜೇಡಿ ಮತ್ತು ಗೋಡು ಮಣ್ಣು ಸೂಕ್ತವಾಗಿದೆ. ಮಣ್ಣಿನ ರಸಸಾರ 6.0 ರಿಂದ 7.0 ಇದ್ದರೆ ಉತ್ತಮ ಪಲಿತಾಂಶ ಸಿಗುತ್ತದೆ. ಮಣ್ಣು ಆಮ್ಲೀಯವಾಗಿದ್ದರೆ ಸುಣ್ಣ ಉಪಯೋಗಿಸಬೇಕು.
ತಳಿಗಳು
ಸುಧಾರಿಸಿದ ತಳಿಗಳು
ಅರ್ಕಾ ಸೌರಭ, ಅರ್ಕಾ ವಿಕಾಸ್, ಅರ್ಕಾ ಆಹುತಿ, ಅರ್ಕಾ ಆಶಿಸ್, ಅರ್ಕಾ ಅಭಾ, ಅರ್ಕಾ ಅಲೋಕ್, ಹೆಚ್ ಎಸ್ 102, ಹೆಚ್ ಎಸ್ 110, ಹಿಸಾರ್ ಅರುಣ, ಹಿಸಾರ್ ಲಾಲಿಮ, ಹಿಸಾರ್ ಲಲಿತ್, ಹಿಸಾರ್ ಅನುಮೋಲ್, ಕೆಎಸ್ 2, ನರೇಂದ್ರ ಟೊಮೇಟೋ-1, ನರೇಂದ್ರ ಟೊಮೇಟೋ-2, ಪೂಸಾ ರೆಡ್‍ಪ್ಲಮ್, ಪೂಸಾ ಅರ್ಲಿ ಡ್ವಾರ್ಪ್, ಪೂಸಾ ರೂಬಿ, ಸಿಒ-1, ಸಿಒ-2, ಸಿಒ-3, ಎಸ್-12, ಪಂಜಾಬ್ ಚುಹಾರ, ಪಿಕೆಎಂ-1, ಪಯೂರ್-1, ಶಕ್ತಿ, ಎಸ್‍ಎಲ್-120, ಪೂಸಾ ಗೌರವ್, ಪಂತ್ ಬಿಹಾರ್, ಪಂತ್ ಟಿ-3, ಸೋಲನ್ ಗೋಲ, ಮತ್ತು ಅರ್ಕಾ ಮೆಘಾಲಿ.
ಎಫ್ 1 ಸಂಕರ ತಳಿಗಳು
ಅರ್ಕಾ ಅಭಿಜಿತ್, ಅರ್ಕಾ ಶ್ರೇಷ್ಠ, ಅರ್ಕಾ ವಿಶಾಲ್, ಅರ್ಕಾ ವರ್ದನ್, ಪೂಸಾ ಹೈಬ್ರಿಡ್-1, ಪೂಸಾ ಹೈಬ್ರಿಡ್-2, ಸಿಒಟಿಹೆಚ್ ಹೈಬ್ರಿಡ್ ಟೊಮೇಟೋ, ರಶ್ಮಿ, ವೈಶಾಲಿ, ರೂಪಾಲಿ, ನವೀನ್, ಅವಿನಾಶ್-2, ಎಂಟಿಹೆಚ್-4, ಸದಾಬಹಾರ್, ಗುಲ್‍ಮೊಹರು ಮತ್ತು ಸೊನಾಲಿ.
ಬೀಜದ ಪ್ರಮಾಣ
ಒಂದು ಹೆಕ್ಟೇರು ಬೇಸಾಯ ಮಾಡಲು, 300-400ಗ್ರಾಂ ಬೀಜವನ್ನು ನರ್ಸರಿಯಲ್ಲಿ ಬಿತ್ತನೆ ಮಾಡಬೇಕು. ಸಂಕರ ತಳಿಯ ಬೀಜಗಳು ಬಹಳ ಬೆಲೆಯುಳ್ಳದ್ದಾಗಿದ್ದು, ಪ್ಲಾಸ್ಟಿಕ್ ಕಪ್‍ಗಳಲ್ಲಿ ಅಥವಾ ಟ್ರೇಗಳಲ್ಲಿ ಬಿತ್ತಬೇಕು ಮತ್ತು ಹೆಕ್ಟೇರಿಗೆ 70 ಗ್ರಾಂ. ಬೀಜ ಸಾಕಾಗುತ್ತದೆ. ನಾಟಿಗಿಂತ ಒಂದು ತಿಂಗಳ ಮೊದಲೇ ಸಸಿಗಳನ್ನು 60-100 ಸೆ.ಮೀ ಅಗಲದ, ಅನುಕೂಲಕರ ಉದ್ದದ ನೆಲಮಟ್ಟದಿಂದ ಎತ್ತರದಲ್ಲಿ ನಿರ್ಮಿಸಿದ ಪಾತಿಗಳಲ್ಲಿ ಬೆಳೆಸಿರಬೇಕು. ಬಿತ್ತನೆ ಮೊದಲೇ ನರ್ಸರಿ ಪಾತಿಗಳನ್ನು ಒಂದು ತಿಂಗಳಿನವರೆಗೆ ಬಿಳಿಯ ಪಾರದರ್ಶಕ ಪ್ಲಾಸ್ಟಿಕ್ ಹಾಳೆ ಬಳಸಿ ಸೂರ್ಯನ ಕಿರಣದಿಂದ ಸಂಸ್ಕರಿಸಬೇಕು. ಇದರಿಂದ ಮಣ್ಣಿನಲ್ಲಿ ರೋಗಕ್ಕೆ ಕಾರಣವಾಗುವ ಶಿಲೀಂದ್ರ, ಬ್ಯಾಕ್ಟೀರಿಯಾ, ತಂತು ಕ್ರಿಮಿ, ಕೀಟದ ಮೊಟ್ಟೆ ಮತ್ತು ಕಳೆಬೀಜಗಳು ನಾಶವಾಗುತ್ತವೆ. ಒಂದು ಚದರ ಮೀಟರು ನರ್ಸರಿ ಪ್ರದೇಶಕ್ಕೆ 5 ಕೆ.ಜಿ. ಕೊಳೆತ ಕೊಟ್ಟಿಗೆ ಗೊಬ್ಬರ, 20 ಗ್ರಾಂ ಸಾರಜನಕ, ರಂಜಕ ಮತ್ತು ಪೊಟಾಷ್ ಹಾಗು 2.5 ಗ್ರಾಂ ಕಾರ್ಬೋಪ್ಯೂರಾನ್ ಅಥವಾ 200 ಗ್ರಾಂ ಬೇವಿನ ಹಿಂಡಿ, 10-25 ಗ್ರಾಂ ಟ್ರೈಕೋಡರ್ಮ ಹರಡಬೇಕು. ನರ್ಸರಿ ಪಾತಿಮಾಡುವಾಗ ಚದರ ಮೀಟರಿಗೆ 400 ಗ್ರಾಂ.ನಂತೆ ಬೇವಿನ ಹಿಂಡಿ/ಹರಳು ಹಿಂಡಿ/ಬೇವಿನ ಎಲೆ/ಹರಳು ಎಲೆ/ಹೊಂಗೆ ಎಲೆಯನ್ನು ಪಾತಿಗೆ ಸೆರಿಸುವುದರಿಂದ ತಂತು ಕ್ರಿಮಿಯಿಂದ ರಕ್ಷಣೆ ದೊರೆಯುತ್ತದೆ. ಬಿತ್ತನೆ ನಂತರ ಹಸಿರು ಎಲೆಯಿಂದ ಮುಚ್ಚಿ, ರೋಸ್‍ಕ್ಯಾನ್‍ನಿಂದ ಬೆಳಗಿನ ಸಮಯದಲ್ಲಿ ನೀರು ಹಾಕಬೇಕು. ಬೀಜ ಮೊಳೆತೊಡನೆ ಮುಚ್ಚಳಿಕೆಯನ್ನು ತೆಗೆಯಬೇಕು. ನಾಟಿಗಿಂತ ಒಂದು ವಾರ ಮೊದಲೇ ನೀರನ್ನು ಮಿತಗೊಳಿಸಿ, ನೆಡುವ ಹಿಂದಿನ ದಿನ ಧಾರಾಳವಾಗಿ ನೀರು ಹಾಕಬೇಕು. ನಂಜು ರೋಗ ಹರಡುವ ಕೀಟಗಳಿಂದ ರಕ್ಷಿಸಲು ನರ್ಸರಿ ಪಾತಿಗಳಿಗೆ ನೈಲಾನ್ ಬಲೆಯನ್ನು ಹೊದಿಸಬೇಕು. ಪಾತಿಯಲ್ಲಿ ಕೊಳೆರೋಗ ತಡೆಯಲು ಪ್ರತೀ 1 ಕೆ.ಜಿ ಬೀಜಕ್ಕೆ 5-10 ಗ್ರಾಂ ಟ್ರೈಕೋಡರ್ಮ ಅಥವಾ 2 ಗ್ರಾಂ ಕಾರ್ಬಂಡೆಜಿಮ್‍ನಿಂದ ಬೀಜೋಪಚಾರ ಮಾಡಬೇಕು. ಉಪಚಾರ ಮಾಡಿದ ಬೀಜವನ್ನು 30 ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಬೇಕು. ಬೀಜವನ್ನು ಪಾತಿಯಲ್ಲಿ ವಿರಳವಾಗಿ ಅರ್ಧ ಸೆ.ಮೀ. ಆಳದಲ್ಲಿ ಬಿತ್ತಿ ಮೇಲ್ಮಣ್ಣಿನಿಂಧ ಮುಚ್ಚಬೇಕು.
ಜಮೀನು ತಯಾರಿ
ಜಮೀನನ್ನು 2-3 ಸಲ ಚೆನ್ನಾಗಿ ಉಳುಮೆ ಮಾಡಿ ಅಥವಾ ಅಗೆದು ಪುಡಿಯಾಗಿಸಿ ಹದಮಾಡಬೇಕು. ಕಡೆಯ ಬಾರಿ ಉಳುಮೆ ಮಾಡುವಾಗ ಒಂದು ಹೆಕ್ಟೇರು ಜಮೀನಿಗೆ 10 ಕೆ.ಜಿ. ಕಾರ್ಬೊಪ್ಯೂರಾನ್ ಹರಳು ಅಥವಾ 200 ಕೆ.ಜಿ. ಬೇವಿನ ಹಿಂಡಿ ಮತ್ತು ಕೊಟ್ಟಿಗೆ ಗೊಬ್ಬರವನ್ನು ಹರಡಬೇಕು.
ಗೊಬ್ಬರ
ಒಂದು ಹೆಕ್ಟೇರು ಜಮೀನಿಗೆ 20-25 ಟನ್ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ/ಸಾವಯವ ಗೊಬ್ಬರ ಉಳುಮೆ ಸಮಯದಲ್ಲಿ ಹರಡಿ ಮಣ್ಣಿನೊಂದಿಗೆ ಮಿಶ್ರಣ ಮಾಡಬೇಕು. ಮೂಲ ಗೊಬ್ಬರವಾಗಿ 75:40:25 ಕೆ.ಜಿ ಸಾರಜನಕ, ರಂಜಕ ಮತ್ತು ಪೊಟಾಷ್‍ನ್ನು ಸಹ ಪ್ರತೀ ಹೆಕ್ಟೇರು ಜಮೀನಿಗೆ ಕೊಡಬೇಕು. 1/2 ಸಾರಜನಕ, ಪೂರ್ತಿ ರಂಜಕ ಮತ್ತು ಅರ್ಧ ಪೊಟಾಷನ್ನು ಗಿಡ ನೆಡುವ ಮೊದಲೆ ಬಳಸಬೇಕು. ಕಾಲುಭಾಗ ಸಾರಜನಕ ಮತ್ತು ಉಳಿದ ಅರ್ಧ ಪೊಟಾಷನ್ನು ನಾಟಿ ಮಾಡಿದ 20-30 ದಿನಗಳಲ್ಲಿ ಮತ್ತು ಉಳಿದ ರಸಗೊಬ್ಬರವನ್ನು ನಾಟಿ ಮಾಡಿದ 2 ತಿಂಗಳ ನಂತರ ಗಿಡಗಳಿಗೆ ಕೊಡಬೇಕು.
ನಾಟಿ ಮಾಡುವುದು
ಲಭ್ಯವಿರುವ ನೀರಾವರಿಯ ವ್ಯವಸ್ಥೆಯನ್ನು ಅನುಸರಿಸಿ ಸಸಿಗಳನ್ನು ಸಮತಟ್ಟಾದ ಚಿಕ್ಕ ಪಾತಿಗಳಲ್ಲಿ ಅಥವಾ ಆಳವಿಲ್ಲದ ಸಾಲುಗಳಲ್ಲಿ ನೆಡಲಾಗುವುದು. ಮಳೆಗಾಲದಲ್ಲಿ ಮತ್ತು ಜೇಡಿಮಣ್ಣಿನಲ್ಲಿ ಸಸಿಗಳನ್ನು ಸಾಲುಗಳ ಬದಿಯಲ್ಲಿ ನೆಡಲಾಗುವುದು. ಮಧ್ಯಮ ಗಾತ್ರದ ಮತ್ತು ಸಂಕರ ತಳಿಯ ಗಿಡಗಳಿಗೆ 2 ಮೀ ಉದ್ದದ ಬಿದಿರು ಕಡ್ಡಿಯಿಂದ ಆಧಾರ ಒದಗಿಸಬೇಕು ಅಥವಾ 90 ಸೆ.ಮೀ. ಅಗಲದ 15 ಸೆ.ಮೀ. ಆಳದ ಸಾಲುಗಳ ಬದಿಯಲ್ಲಿ ನಾಟಿ ಮಾಡಬೇಕು. ಪ್ರತೀ ಸಾಲುಗಳಿಗೆ 30 ಸೆ.ಮೀ. ಅಂತರವಿಟ್ಟು ಬೆಳೆದ ಗಿಡಗಳನ್ನು ಅಗಲವಾದ ಸಾಲಿನ ಬದುಗಳಲ್ಲಿ ಹರಿಯಲು ಬಿಡಲಾಗುವುದು. ಚಳಿಗಾಲದಲ್ಲಿ ಗಿಡಗಳನ್ನು 75 x 60 ಸೆ.ಮೀ ಅಂತರವಿಟ್ಟು ನೆಟ್ಟರೆ ಬೇಸಿಗೆಯ ಬೆಳೆಗೆ 75×45 ಸೆ.ಮೀ. ಅಂತರ ಕೊಡಬೇಕು.
ನೀರಾವರಿ
ಟೊಮೇಟೋ ಬೆಳೆಗೆ ಸರಿಯಾದ ಸಮಯದಲ್ಲಿ ಅವಶ್ಯವಿದ್ದಷ್ಟು ಮಾತ್ರ ನೀರನ್ನು ಎಚ್ಚರಿಕೆಯಿಂದ ಹಾಕಬೇಕು. ಬೇಸಿಗೆಯಲ್ಲಿ 5-7 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಚಳಿಗಾಲದಲ್ಲಾದರೆ 10-15 ದಿನಗಳಿಗೊಮ್ಮೆ ನೀರಿನ ಅವಶ್ಯಕತೆಯಿದೆ. ಕಾಯಿ ಕಟ್ಟುವ ಸಮಯದಲ್ಲಿ ದೀರ್ಘ ಒಣ ವಾತಾವರಣದ ನಂತರ ಅಧಿಕ ಮಳೆಯಾದರೆ ಹಣ್ಣು ಬಿರಿದು ಹಾಳಾಗುತ್ತದೆ.
ಕಳೆ ನಿರ್ವಹಣೆ
ಪ್ರಥಮ ನಾಲ್ಕು ವಾರಗಳಲ್ಲಿ ಹಗುರವಾಗಿ ಕೊಚ್ಚುವುದರಿಂದ ಗಿಡದ ಬೆಳವಣಿಗೆಗೆ ಪ್ರೋತ್ಸಾಹಿಸಿದಂತಾಗುತ್ತದೆ ಮತ್ತು ಕಳೆಯ ನಿರ್ಮೂಲನೆಯೂ ಆಗುತ್ತದೆ. ನೀರು ಹಾಯಿಸಿ ಮಣ್ಣು ಸ್ವಲ್ಪ ಒಣಗಿದ ನಂತರ ಕೈಯಿಂದ ಕೊಚ್ಚುವುದರ ಮೂಲಕ ಎಲ್ಲಾ ಕಳೆಗಳನ್ನು ತೆಗೆದು ಮೇಲ್ಮಣ್ಣನ್ನು ಸಡಿಲಗೊಳಿಸಬೇಕು. ಹುಲ್ಲಿನ ಮುಚ್ಚಳಿಕೆ, ಕಪ್ಪು ಪ್ಲಾಸ್ಟಿಕ್ ಹಾಳೆಯ ಬಳಕೆ ಮತ್ತು ಇನ್ನಿತರ ಸಾಮಾಗ್ರಿಗಳ ಬಳಕೆಯಿಂದ ಕಳೆ ಮತ್ತು ರೋಗ ನಿರ್ವಹಣೆ ಹಾಗು ತೇವಾಂಶ ಉಳಿಸುವಲ್ಲಿ ಸಹಾಯವಾಗುತ್ತದೆ.
ಸಸ್ಯ ಸಂರಕ್ಷಣೆ
ಧಾನ್ಯ ಕಾಯಿ ಕೊರಕ, ಎಲೆ ಸುರಂಗ ಕೀಟ, ತಂಬಾಕು ಕಂಬಳಿ ಹುಳು ಮತ್ತು ಬೇರುಗಂಟಿನ ತಂತು ಕ್ರಿಮಿ ಮುಂತಾದವು ಟೊಮೇಟೋ ಬೆಳೆಯ ಮುಖ್ಯ ಕೀಟಗಳು.
ಕೀಟ ನಿರ್ವಹಣೆ
ಪ್ರಾಥಮಿಕ ಹಂತದ ಲಾರ್ವಗಳನ್ನು ಶೇಕಡ 5ರ ಬೇವಿನ ತಿರುಳಿನ ಸಾರದ ಸಿಂಪಡಣೆಯಿಂದ ನಿಯಂತ್ರಿಸಬಹುದು. ‘ಖಿ’ಆಕಾರದ ಪಕ್ಷಿ ನೆಲೆಸುವ ಸ್ಥಳವನ್ನು ಕಟ್ಟಿ ಹುಳು ತಿನ್ನುವ ಪಕ್ಷಿಗಳನ್ನು ಆಕರ್ಷಿಸಬೇಕು. ಪ್ರತೀ ಹೆಕ್ಟೇರಿಗೆ ಎನ್‍ಪಿವಿ 625 ಎಲ್‍ಈ ಅನ್ನು ಬೆಲ್ಲ 1 ಕೆ.ಜಿ, ಸ್ಯಾಂಡೋವಿಟ್ ಅಥವಾ ಟೀಪಾಲ್ (100 ಮಿಲಿ) ನೊಂದಿಗೆ ಮಿಶ್ರಣ ಮಾಡಿ ಸಂಜೆ ಸಮಯದಲ್ಲಿ ಸಿಂಪಡಿಸಬೇಕು. ಎಂಡೋಸಲ್ಫಾನ್ ಅಥವಾ ಕ್ಲೋರೊಫೈರಿಪಾಸ್ ಅಥವಾ ಕ್ವಿನಲ್‍ಫಾಸ್ (2 ಮಿಲಿ/ಲೀ) ಎಲೆ ಸುರಂಗ ಕೀಟದ ನಿಯಂತ್ರಣಕ್ಕೆ ಸಿಂಪಡಿಸಬೇಕು. ಹೊಂಗೆ/ಕ್ರೊಟಲೇರಿಯ ಎಲೆಗಳನ್ನು ಕೊಚ್ಚಿ ಮಣ್ಣಿಗೆ ಹಾಕುವುದರಿಂದ ತಂತು ಕ್ರಿಮಿಯಿಂದ ಉಂಟಾಗುವ ಹಾನಿಯ ತೀವ್ರತೆಯನ್ನು ಕಡಿಮೆ ಮಾಡಬಹುದು. ಕೀಟ ಮತ್ತು ರೋಗ ಭಾದೆಯನ್ನು ನಿಯಂತ್ರಿಸಲು ಆಂಧ್ರಪ್ರದೇಶದ ರೈತರು ಬೆಳ್ಳುಳ್ಳಿ+ಕಾಯಿಮೆಣಸಿನ ಕಸಾಯ ಮತ್ತು ಸಗಣಿನೀರು+ಗಂಜಳವನ್ನು ಬಳಸುತ್ತಾರೆ.
ರೋಗ ನಿರ್ವಹಣೆ
ಟೊಮೇಟೋ ಗಿಡವು ಶಿಲೀಂದ್ರ, ಬ್ಯಾಕ್ಟೀರಿಯ ಮತ್ತು ವೈರಾಣುಗಳಿಂದ ಬಾಧಿತವಾಗುತ್ತದೆ. ಸಾಮಾನ್ಯ ರೋಗಗಳೆಂದರೆ ಎಂಥ್ರೊಕ್ನೋಸು, ಬ್ಯಾಕ್ಟೀರಿಯ ಎಲೆ ಚುಕ್ಕೆ ರೋಗ, ಬ್ಯಾಕ್ಟೀರಿಯ ಬ್ಲೈಟ್, ಕ್ಯಾಂಕರ್, ಬಕ್ ಐ ರಾಟ್, ಕೊಳೆರೋಗ, ಪ್ಯುಸೇರಿಯಂ ಬ್ಲೈಟ್, ಎಲೆ ಸುರುಳಿಕಟ್ಟುವುದು, ಮೊಸಾಯಿಕ್, ಪೌಡರಿ ಮಿಲ್ ಡ್ಯೂ, ಕೊಳೆರೋಗ ಮುಂತಾದವು. ಮಣ್ಣನ್ನು ಸೋಲಾರೈಸ್ ಮಾಡುವುದು ಅಥವಾ ಕೃಷಿ ತ್ಯಾಜ್ಯಗಳನ್ನು ಮಣ್ಣಿನ ಮೇಲೆ ಸುಡುವುದರಿಂದ ರೋಗ ಬಾಧೆ ಕಡಿಮೆಯಾಗುವುದು. ಟ್ರೈಕೋಡರ್ಮ (5-10 ಗ್ರಾಂ) ಅಥವಾ ಕಾರ್ಬಂಡೆಜಿಮ್ (2 ಗ್ರಾಂ/1ಕ.ಜಿ)/ಥಿರಮ್ (3 ಗ್ರಾಂ/1ಕೆ.ಜಿ)ನಿಂದ ಬೀಜೋಪಚಾರ ಮಾಡಬೇಕು. ಶುಚಿತ್ವ ಕಾಪಾಡುವುದು, ಬೆಳೆ ಆವರ್ತನ, ಬಸಿಕಾಲುವೆ ವ್ಯವಸ್ಥೆ, ನೆಲಮಟ್ಟದಿಂದ ಮೇಲೆ ನಿರ್ಮಿಸಿದ ಪಾತಿಗಳತ್ತ ಗಮನ ಹರಿಸಿದರೆ ರೋಗ ಬಾಧೆ ಕಡಿಮೆಯಾಗುವುದು. ರೋಗಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. 200 ಪಿಪಿಎಂನ ಸ್ಟ್ರೆಪ್ಟೋಸೈಕ್ಲಿನ್ ಮತ್ತು ಕಾಪರ್ ಆಕ್ಸಿ ಕ್ಲೋರೈಡ್ (3 ಗ್ರಾಂ/ಲೀ) ಸಿಂಪಡಿಸುವುದರಿಂದ ರೋಗ ನಿಯಂತ್ರಣದಲ್ಲಿ ಹೆಚ್ಚಿನ ಯಶಸ್ಸು ಕಾಣಬಹುದು.