ಕ್ವಿಟ್ ಇಂಡಿಯಾ ಚಳುವಳಿಗೆ ೭೬ರ ಸಂಭ್ರಮ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಎರಡು ಪ್ರಮುಖ ಹೆಜ್ಜೆ ಗುರುತುಗಳಿವೆ. ಮೊದಲನೆಯದು 1857ರ ಸಿಪಾಯಿ ದಂಗೆ. ಎರಡನೆಯದು 1942ರ ಕ್ವಿಟ್ ಇಂಡಿಯಾ(ಭಾರತ ಬಿಟ್ಟು ತೊಲಗಿ) ಚಳವಳಿ. ದೇಶದ ಸ್ವಾತಂತ್ರ್ಯ ವೀರರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ‘ (ಕ್ವಿಟ್ ಇಂಡಿಯಾ) ಅಸಹಕಾರ ಚಳವಳಿಗೆ ಆಗಸ್ಟ್ 8ರಂದು ಮುಂಬೈನಲ್ಲಿ ಚಾಲನೆ ನೀಡಿದ ಮಹಾತ್ಮ ಗಾಂಧೀಜಿ, ಆಗಸ್ಟ್ 9ರಂದು ಅಂತಿಮ ಎಚ್ಚರಿಕೆ ನೀಡಿದರು.
ಮುಂಬೈನ ಗೊವಾಲಿಯ ಮೈದಾನದಲ್ಲಿ 1942ರ ಆಗಸ್ಟ್ 8ರಂದು ಹೋರಾಟಕ್ಕೆ ‘ಮಾಡು ಇಲ್ಲವೇ ಮಡಿ‘ ಎಂಬ ಘೊಷಣಾ ವಾಕ್ಯ ಮೊಳಗಿಸಿದರು. ಅಂದಿನಿಂದ ಈ ಮೈದಾನ ‘ಆಗಸ್ಟ್ ಕ್ರಾಂತಿ ಮೈದಾನ‘ ಎಂದೇ ಹೆಸರಾಯಿತು. ಚಳವಳಿಯ ತೀಕ್ಷ್ಣತೆ ಅರಿತ ಬ್ರಿಟಿಷರು, ಬಹುತೇಕ ಪ್ರಮುಖ ನಾಯಕರನ್ನು ಸೆರೆಮನೆಗೆ ತಳ್ಳಿದರು. ಆದರೂ ನಾಯಕರಿಲ್ಲದೆಯೇ ಉಗ್ರ ಸ್ವರೂಪ ಪಡೆದದ್ದು ಈ ಚಳವಳಿಯ ವಿಶೇಷ. ಇಡೀ ದೇಶದಲ್ಲಿ ಕ್ರಾಂತಿಯ ಅಲೆ ಎದ್ದಿತು. ದೇಶದ ಮೂಲೆ ಮೂಲೆಯಲ್ಲೂ ಈ ಘೊಷಣೆಯು ಜನರನ್ನು ಬಡಿದೆಬ್ಬಿಸಿತು.
ಅರುಣಾ ಅಸಫ್ ಅಲಿ ಹಾಗೂ ಸುಚೇತ ಕೃಪಲಾನಿಯವರು ಚಳವಳಿಯ ಮುಂದಾಳತ್ವ ವಹಿಸಿಕೊಳ್ಳುವುದರೊಂದಿಗೆ ಯುವಕರು ಹೆಚ್ಚೆಚ್ಚು ಸಕ್ರಿಯರಾದರು. ಕೃಷಿಕರು ಬಹು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಈ ಚಳವಳಿಯ ಬಹು ಮುಖ್ಯ ಅಂಶ.
ಕೈಕೊಟ್ಟ ಲೆಕ್ಕಾಚಾರ: ಶತಮಾನದಿಂದ ನಡೆಯುತ್ತ ಬಂದ ಸ್ವಾತಂತ್ರ್ಯ ಸಮರ ತೀವ್ರಗೊಂಡಿದ್ದ ಕಾಲವದು. ತ್ರಿವರ್ಣ ಧ್ವಜದಡಿ ಎಲ್ಲರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಮೂಲೋತ್ಪಾಟಿಸಲು ಸಿದ್ಧರಾದ ಸಮಯವದು. ಇಂದಿಗೆ ಸರಿಯಾಗಿ 75 ವರ್ಷಗಳ ಹಿಂದೆ. ಅದೇ 1942ರ ಕ್ವಿಟ್ ಇಂಡಿಯಾ ಚಳವಳಿ. ನಾಯಕರೇ ಇಲ್ಲದೆ ಉಗ್ರ ಸ್ವರೂಪ ಪಡೆದದ್ದು ಈ ಚಳವಳಿಯ ಹೆಗ್ಗಳಿಕೆ. ಆಂದೋಲನ ಆರಂಭವಾದ ಐದೇ ವರ್ಷದಲ್ಲಿ ಭಾರತ ಸ್ವತಂತ್ರವಾಯ್ತು.
ಕ್ವಿಟ್ ಇಂಡಿಯಾ ಹೆಸರಿನ ಹಿಂದೆ
ಬ್ರಿಟಿಷರನ್ನು ಭಾರತದಿಂದ ತೊಲಗಿಸುವ ಚಳವಳಿಗೆ ಕ್ವಿಟ್ ಇಂಡಿಯಾ ಎಂಬ ಹೆಸರು ಹೇಗೆ ಬಂತು ಎಂಬ ಸಂಗತಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಬ್ರಿಟಿಷರನ್ನು ಭಾರತದಿಂದ ಓಡಿಸುವ ಚಳವಳಿಗೆ ರೂಪುರೇಷೆ ಸಿದ್ಧಪಡಿಸಿ, ಅದಕ್ಕೆ ಸೂಕ್ತವಾದ ಘೊಷವಾಕ್ಯವನ್ನು ಸೂಚಿಸುವಂತೆ ಗಾಂಧೀಜಿ ತಮ್ಮ ಸಂಗಡಿಗರಲ್ಲಿ ಕೇಳಿಕೊಂಡರು. ಅವರಲ್ಲೊಬ್ಬರು ಹೊರನಡೆ (ಗೆಟ್ ಔಟ್) ಪದ ಸೂಚಿಸಿದರು. ಆದರೆ ಇದು ತುಂಬ ಒರಟಾದ ಪದಪ್ರಯೋಗವೆಂದು ಗಾಂಧೀಜಿ ನಿರಾಕರಿಸಿದರು. ರಾಜಗೋಪಾಲಾಚಾರಿಯ ಹಿಮ್ಮೆಟ್ಟು ಅಥವಾ ಹಿಂದೆ ಸರಿ (ರಿಟ್ರೀಟ್) ಎಂಬ ಸೂಚನೆಯನ್ನೂ ಗಾಂಧೀಜಿ ನಿರಾಕರಿಸಿದರು. ಯೂಸುಫ್ ಮೆಹರ್ಲೆ, ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಎಂಬ ಪದವನ್ನು ಸೂಚಿಸಿದಾಗ ಗಾಂಧಿ ಖುಷಿಯಿಂದ ಒಪ್ಪಿಕೊಂಡರು.
ಬ್ರಿಟಿಷರ ಆಳ್ವಿಕೆಯ ವಿರುದ್ಧ ದೀರ್ಘ ಕಾಲದ ಹೋರಾಟದಿಂದ ಭಾರತೀಯರ ಸಹನೆಯ ಕಟ್ಟೆ ಯಾವುದೇ ಕ್ಷಣಕ್ಕೆ ಆಕ್ರೋಶವಾಗಿ ಸ್ಪೋಟಗೊಳ್ಳುವ ಹಂತದಲ್ಲಿತ್ತು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧದ ಕಿಚ್ಚು ಉರಿಯುತ್ತಿತ್ತು.
ಈ ಅಸಹಕಾರ ಚಳವಳಿಯ ಗುರಿ ಬ್ರಿಟಿಷ್ ಆಳ್ವಿಕೆಗೆ ಅಂತ್ಯ ಹಾಡುವುದು ಮತ್ತು ಭಾರತವನ್ನು ಸ್ವತಂತ್ರಗೊಳಿಸುವುದಾಗಿತ್ತು. ಬ್ರಿಟಿಷರು ಭಾರತೀಯರ ಅದೆಷ್ಟೋ ಹೋರಾಟವನ್ನು ದಮನಿಸುತ್ತಲೇ ಬಂದಿದ್ದರು. ಅದೆಷ್ಟೋ ಭಾರತೀಯರನ್ನು ನಿರ್ದಯವಾಗಿ ಸಾಯಿಸಿದ್ದರು, ಗಲ್ಲಿಗೇರಿಸಿದ್ದರು, ಜೈಲಿನಲ್ಲಿಟ್ಟು ಹಿಂಸಿಸಿದ್ದರು. ಗುಲಾಮರಂತೆ ನಡೆಸಿಕೊಂಡಿದ್ದರು. ಇದೂ ಅಂಥದೇ ಮತ್ತೊಂದು ಹೋರಾಟ ಎಂದು ಬ್ರಿಟಿಷರು ಭಾವಿಸಿದ್ದಿರಬಹುದು. ಚಳವಳಿ ಆರಂಭವಾದ 24 ಗಂಟೆಯೊಳಗೆ ಬಹುತೇಕ ಕಾಂಗ್ರೆಸ್ ನಾಯಕರನ್ನು ಬಂಧಿಸಿದರು. ಆ ವರ್ಷವಿಡೀ ಅವರನ್ನು ಸೆರೆಯಲ್ಲಿಟ್ಟರು. ಆದರೂ ಚಳವಳಿ ನಿಲ್ಲಲಿಲ್ಲ.
ಬ್ರಿಟಿಷರು ಎರಡನೇ ಮಹಾಯುದ್ಧದಲ್ಲಿ ಭಾರತದ ಸೇನೆಯನ್ನು ಬಳಸಿಕೊಂಡಿದ್ದರು. ಇದು ಭಾರತೀಯರನ್ನು ಕೆರಳಿಸಿತ್ತು. ಮಹಾಯುದ್ಧ ಆರಂಭವಾದಾಗಲೇ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯು ಬ್ರಿಟಿಷ್ ಸರ್ಕಾರವನ್ನು ಸಮರ್ಥಿಸುವುದಾಗಿಯೂ ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕೆಂದೂ ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿತು. ಆದರೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಕಾಂಗ್ರೆಸ್ನ ಈ ನಿಲುವಿಗೆ ಗಾಂಧೀಜಿಯ ಬೆಂಬಲವೂ ಇರಲಿಲ್ಲ. ಈ ಮಧ್ಯೆ 1942ರ ಜುಲೈ 14ರಂದು ಸಂಪೂರ್ಣ ಸ್ವಾತಂತ್ರ್ಯ್ಕಾಗಿ ಕಾಂಗ್ರೆಸ್ ಪಕ್ಷವು ಗೊತ್ತುವಳಿ ಹೊರಡಿಸಿತು. ಬೇಡಿಕೆ ನೆರವೇರದಿದ್ದರೆ ಅಸಹಕಾರ ಚಳವಳಿಯ ಎಚ್ಚರಿಕೆಯನ್ನೂ ನೀಡಿತು. ಆದರೆ ಪಕ್ಷದಲ್ಲಿಯೇ ಹಲವರು ಇದನ್ನು ವಿರೋಧಿಸಿದರು. ಮೊಹಮ್ಮದ್ ಅಲಿ ಜಿನ್ನಾರ ವಿರೋಧದ ಕಾರಣ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಬ್ರಿಟಿಷರ ಪರವಾಗಿ ನಿಂತರು. ಇದರಿಂದ ಮುಸ್ಲಿಂ ಲೀಗ್ ಪಕ್ಷಕ್ಕೆ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರವೂ ದೊರೆಯಿತು.
ಒಗ್ಗೂಡಿತು ಐಎನ್ಎ: ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಭಾರತೀಯ ರಾಷ್ಟ್ರೀಯ ಸೇನೆ(ಐಎನ್ಎ)ಯನ್ನು ಒಗ್ಗೂಡಿಸಿದರು. ಗೆಲ್ಲುವುದು ಸಾಧ್ಯವಾಗಲಿಲ್ಲವಾದರೂ ಬೋಸ್ ಅವರ ಧೈರ್ಯ-ಸಾಹಸಗಳಿಂದ ಪ್ರೇರಿತರಾಗಿ ಹೊಸ ಪೀಳಿಗೆಯ ಭಾರತೀಯರು ಈ ಚಳವಳಿಯನ್ನು ಸೇರತೊಡಗಿದರು. ಭಾರತದ ಬರ್ವ ಗಡಿಯ ಬಳಿ ಜಪಾನಿ ಸೇನೆ ತಲುಪಿದ್ದನ್ನು ಕಂಡ ಬ್ರಿಟಿಷರು ಮರುದಿನವೇ ಕಾಂಗ್ರೆಸ್ಸಿನ ಎಲ್ಲ ರಾಷ್ಟ್ರೀಯ ನಾಯಕರನ್ನೂ ಬಂಧಿಸಿದರು. ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸಲಾಯಿತು. ಇದರಿಂದ ಜನರ ಆಕ್ರೋಶ ಮತ್ತಷ್ಟು ಜಾಸ್ತಿಯಾಯಿತು. ಹೋರಾಟ ಹಲವೆಡೆ ಹಿಂಸಾರೂಪ ತಾಳಿತು. ಬಾಂಬುಗಳನ್ನು ಸ್ಪೋಟಿಸಲಾಯಿತು, ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು. ವಿದ್ಯುತ್ತನ್ನು ಸ್ಥಗಿತಗೊಳಿಸಲಾಯಿತು. ಸಾರಿಗೆ ಮತ್ತು ಸಂಪರ್ಕಗಳನ್ನು ಕಡಿಯಲಾಯಿತು. ಬ್ರಿಟಿಷರು ಲಕ್ಷಾಂತರ ಜನರನ್ನು ಬಂಧಿಸಿದರು. ಪ್ರದರ್ಶನಾಕಾರರನ್ನು ಸಾರ್ವಜನಿಕವಾಗಿ ದಂಡಿಸಲಾಯಿತು. ಬಹಳಷ್ಟು ರಾಷ್ಟ್ರೀಯ ನಾಯಕರು ಭೂಗತರಾದರು.
21ದಿನಗಳ ಉಪವಾಸ!: ಚಳವಳಿಯಿಂದಾಗಿ ಕಾಂಗ್ರೆಸ್ ನಾಯಕರು ಮೂರು ವರ್ಷ ಪ್ರಪಂಚದ ಸಂಪರ್ಕ ಕಳೆದುಕೊಳ್ಳಬೇಕಾಯಿತು. ಕಸ್ತೂರ್ ಬಾ ಗಾಂಧಿ ಮತ್ತು ಗಾಂಧೀಜಿಯವರ ಕಾರ್ಯದರ್ಶಿ ಮಹಾದೇವ ದೇಸಾಯಿ ಮರಣದ ನಂತರ ಗಾಂಧಿಯವರ ಆರೋಗ್ಯ ಹದಗೆಟ್ಟಿತು. ಆದರೂ ಅವರು 21 ದಿನಗಳ ಉಪವಾಸ ಕೈಗೊಂಡರು. ಅವರ ಆರೋಗ್ಯ ಇನ್ನೂ ಹದಗೆಟ್ಟ ಕಾರಣ ಬ್ರಿಟಿಷರು ಅವರನ್ನು 1944ರಲ್ಲಿ ಬಿಡುಗಡೆಗೊಳಿಸಿದರು. 1946ರ ವೇಳೆಗೆ ಎಲ್ಲ ಬಂಧಿತರನ್ನು ಬಿಡುಗಡೆ ಮಾಡಲಾಯಿತು. 1947ರ ಆಗಸ್ಟ್ 15ರಂದು ಭಾರತವನ್ನು ಸ್ವತಂತ್ರ ದೇಶವೆಂದು ಘೊಷಿಸಲಾಯಿತು.
ಚಳವಳಿಯ ಹೆಜ್ಜೆಗಳು
1942ರ ಮಾರ್ಚ್: ಬ್ರಿಟಿಷ್ ಸರ್ಕಾರವು ಹೊಸ ಸಂವಿಧಾನದ ಪ್ರಸ್ತಾವನೆಯೊಂದಿಗೆ ಸರ್ ಸ್ಟ್ಯಾಫೋರ್ಡ್ ಕ್ರಿಪ್ಸ್ನನ್ನು ಭಾರತಕ್ಕೆ ಕಳುಹಿಸಿಕೊಟ್ಟಿತು. ಆದರೆ ಈ ಪ್ರಸ್ತಾವನೆಯು ಸಮಾಧಾನಕರವಾಗಿಲ್ಲವೆಂದು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ಗಳು ತಿರಸ್ಕರಿಸಿದವು.
1942ರ ಮೇ: ‘ಭಾರತವನ್ನು ನಮಗೆ ಬಿಟ್ಟುಕೊಡಿ. ಅರಾಜಕತೆಯುಂಟಾಗುತ್ತದೆಯೆಂಬ ಭಯ ಬೇಡ. ನಮ್ಮ ನೆರವಿಗೆ ದೇವರಿದ್ದಾನೆ‘ ಎಂದು ಮಹಾತ್ಮ ಗಾಂಧಿಯವರು ಬ್ರಿಟನ್ಗೆ ಸ್ಪಷ್ಟ ಸಂದೇಶ ರವಾನಿಸಿದರು.
1942ರ ಆಗಸ್ಟ್ 7: ಮುಂಬೈನ ಗೊವಾಲಿಯಾ ಟ್ಯಾಂಕ್ ಮೈದಾನದಲ್ಲಿ ಮಧ್ಯರಾತ್ರಿಯವರೆಗೂ ನಡೆದ ಐತಿಹಾಸಿಕ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆ. ಅಲ್ಲಿ ಕೈಗೊಂಡ ನಿರ್ಣಯವೇ ‘ಕ್ವಿಟ್ ಇಂಡಿಯಾ ನಿರ್ಣಯ/ರೆಸಲ್ಯೂಷನ್’. ಇದು ದೇಶಾದ್ಯಂತ ಸಂಚಲನ ಮೂಡಿಸಿತು.
1942ರ ಆಗಸ್ಟ್ 9: ಮುಂಜಾನೆ ಬ್ರಿಟಿಷರು ಕಾಂಗ್ರೆಸ್ಸನ್ನು ಕಾನೂನುಬಾಹಿರ ಸಂಸ್ಥೆ ಎಂದು ಘೊಷಿಸಿ, ಗಾಂಧಿ, ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್, ಅಬ್ದುಲ್ ಕಲಾಂ ಆಜಾದ್ ಮೊದಲಾದವರನ್ನು ಬಂಧಿಸಿದರು. ಹೀಗಾಗಿ ಜನರನ್ನು ಮುನ್ನಡೆಸಲು ನಾಯಕರೇ ಇರಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಹರತಾಳ, ದೊಂಬಿಗಳನ್ನು ಆರಂಭಿಸಿದರು. ಗಾಂಧಿ ಟೋಪಿ ಹಾಕಿರುವವರು ಇದ್ದರೆ ಮಾತ್ರ ಕಾರು ಮುಂದೆ ಚಲಿಸಲು ಅವಕಾಶ ಮಾಡಿಕೊಡುತ್ತಿದ್ದರು, ಇಲ್ಲದಿದ್ದರೆ ತಡೆಯುತ್ತಿದ್ದರು.