ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರು
ಪ್ರಾಸ್ತವಿಕ:
ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನ 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬುದನ್ನು ಚರಿತ್ರೆ ಹೇಳುತ್ತದೆ. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಮಂಜುನಾಥ ಸ್ವಾಮಿಯ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಪುರಾತನವಾದದ್ದು. ಕದ್ರಿ ದೇವಸ್ಥಾನದ ಬಗ್ಗೆ ಹೀಗೊಂದು ನಂಬಿಕೆಯಿದೆ. ಪರಶುರಾಮ ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿದ್ದ. ಅಲ್ಲಿ ಕ್ರೂರಿಗಳಾಗಿದ್ದ ಕ್ಷತ್ರಿಯರನ್ನು ಪರಶುರಾಮ ನಾಶ ಮಾಡಿ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದನಂತೆ. ನಂತರ ಪರಶುರಾಮ ಭಗವಂತ ಶಿವನನ್ನು ಪ್ರಾರ್ಥಿಸಿ, ವಾಸಿಸುವುದಕ್ಕೆ ನೆಲ ಕಲ್ಪಿಸುವಂತೆ ಪ್ರಾರ್ಥಿಸಿದ. ಪರಶುರಾಮನ ಭಕ್ತಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಕದಲಿ ಕ್ಷೇತ್ರದಲ್ಲಿ ವಾಸಿಸುವುದಕ್ಕೆ ಅನುವು ಮಾಡಿಕೊಡುತ್ತಾನೆ. ಲೋಕೋದ್ಧಾರಕ್ಕಾಗಿ ಮಂಜುನಾಥನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಶಿವ ಕೇಳಿಕೊಂಡನಂತೆ. ಶಿವನ ಆಜ್ಞೆಯಂತೆ ಪರಶುರಾಮ ಕೊಡಲಿಯನ್ನು ಸಮುದ್ರಕ್ಕೆ ಎಸೆದು ಭಕ್ತಿಯಿಂದ ಪ್ರಾರ್ಥಿಸಿದಾಗ ಶಿವ ಪಾರ್ವತಿ ಸಮೇತನಾಗಿ ಮಂಜುನಾಥನ ರೂಪದಲ್ಲಿ ಪ್ರತ್ಯಕ್ಷನಾದನಂತೆ. ಜಗದೋದ್ಧಾರಕನಾಗಿ ಮಂಜುನಾಥ ಕದ್ರಿಯಲ್ಲಿ ನೆಲೆನಿಂತ ಎಂಬುದನ್ನು ಇತಿಹಾಸ ಹೇಳುತ್ತದೆ. ದೇವಸ್ಥಾನದ ಹಿಂಭಾಗದಲ್ಲಿ ಮೆಟ್ಟಿಲುಗಳನ್ನು ಏರಿ ಹೋದರೆ ಅಕ್ಷಯ ಪುಷ್ಕರಣಿಗಳಿವೆ. ಕೆರೆಯ ಸುತ್ತ ಸುಂದರ ಹೂ ತೋಟವಿದೆ. ಎತ್ತರದ ದೀಪದ ಕಂಬ ನಮ್ಮನ್ನು ಎದುರುಗೊಳ್ಳುತ್ತದೆ.
ಕದ್ರಿ ದೇವಸ್ಥಾನದ ಆಸುಪಾಸಿನಲ್ಲಿ ಒಂದು ಸುತ್ತು ಹಾಕಿದರೆ ಗುಡ್ಡದಲ್ಲಿರುವ ಜೋಗಿ ಮಠ, ಹನುಮಂತನ ಮೂರ್ತಿ, ದುರ್ಗಾದೇವಿ ಮಂದಿರ, ರಾಮ-ಲಕ್ಷ್ಮಣನ ತೀರ್ಥ ಹೀಗೆ ಸುತ್ತಲೂ ಪುರಾಣದ ಕಥೆಗಳನ್ನು ಹೇಳುವ ಹಲವು ಚಾರಿತ್ರಿಕ ಸ್ಥಳಗಳು ಕಂಡು ಬರುತ್ತವೆ. ಇಲ್ಲಿ ಕಾರ್ತೀಕ ಮಾಸದಂದು ದೀಪೋತ್ಸವ ಹಮ್ಮಿಕೊಳ್ಳಲಾಗುತ್ತದೆ. ದೇವಸ್ಥಾನದಲ್ಲಿ ಮಚ್ಛೇಂದ್ರನಾಥ, ಗೊರಕನಾಥ, ಲೋಕೇಶ್ವರ ಮತ್ತು ಬುದ್ಧನ ವಿಗ್ರಹಗಳಿವೆ. ದೇವಸ್ಥಾನದ ಪಶ್ಚಿಮಕ್ಕೆ ದುರ್ಗಾದೇವಿ ದೇವಸ್ಥಾನ, ಉತ್ತರಕ್ಕೆ ಗಣಪತಿ ದೇವಸ್ಥಾನ ಇದೆ. ದೇವಸ್ಥಾನದಲ್ಲಿ ವರ್ಷಪೂರ್ತಿ ಹಬ್ಬಗಳು, ಉತ್ಸವಗಳು ನಡೆಯುತ್ತವೆ. ದೇವಸ್ಥಾನದಲ್ಲಿ ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಧ್ವಜಾರೋಹಣ ಮಾಡಲಾಗುತ್ತದೆ. ನವರಾತ್ರಿಯಂದು ಒಂಬತ್ತು ದಿನ ಧರ್ನುಪೂಜೆ ನಡೆಯುತ್ತದೆ. ಪ್ರತಿದಿನ ಮಂಜುನಾಥನಿಗೆ ರುದ್ರಾಭಿಷೇಕ ನಡೆಯುತ್ತದೆ.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರ ಪುರಾಣ:
ಅಪ್ಪನನ್ನು ಕೊಂದ ಸೇಡಿಗಾಗಿ ಇಪ್ಪತ್ತೊಂದು ಸಲ ಭರತಖಂಡಲ್ಲಿ ಪ್ರದಕ್ಷಿಣೆಯನ್ನು ಹಾಕಿ ಕ್ಷತ್ರಿಯ ಸಂಹಾರ ಮಾಡಿದರೂ ಪರಶುರಾಮನ ಕೋಪ ಉಪಶಮನಗೊಳ್ಳುವುದಿಲ್ಲ.ತನ್ನ ಆಯುಧವಾದ ಕೊಡಲಿಯನ್ನು ಹಿಡಿದು ಮತ್ತೆ ನರಮೇಧಕ್ಕೆ ನಿಂತಾಗ ತ್ರಿಲೋಕಗಳು ನಡುಗುತ್ತವೆ. ಪರಶುರಾಮನಿಂದ ಲೋಕದ ರಕ್ಷಣೆಯನ್ನು ಮಾಡಲು ಮುಕ್ಕೋಟಿ ದೇವತೆಗಳು ಕಶ್ಯಪ ಮಹಾಋಷಿಯ ಬಳಿ ಬಂದು ಬೇಡಿಕೊಳ್ಳುತ್ತಾರೆ. ದೇವಾದಿದೇವತೆಗಳಿಗೆ ಭೂಮಂಡಲದ ರಕ್ಷಣೆಯ ಅಭಯವಿತ್ತು ಕಶ್ಯಪ ಋಷಿಗಳು ಬ್ರಾಹ್ಮಣ ರೂಪಿಯಾಗಿ ಹೋಗಿ ಮೋಸದ ಮಾತುಗಳಿಂದ ಪರಶುರಾಮ ಗೆದ್ದ ಭೂಮಂಡಲವನ್ನು ದಾನವಾಗಿ ಪಡೆದು ಜಗವನ್ನು ರಕ್ಷಿಸಿದ ಕಥೆ ಈಗಾಗಲೇ ನಮಗೆ ತಿಳಿದಿದೆ. ಸೋತರೆ ಮರಳಿ ಗೆಲ್ಲಬಹುದು ಆದರೆ ದಾನವಾಗಿ ಕೊಟ್ಟ ಭೂಮಿಯನ್ನು ಮರಳಿ ಪಡೆಯಲಾಗದೆ ಪರಶುರಾಮ ನೆಲೆ ಕಳೆದುಕೊಳ್ಳುತ್ತಾನೆ.
ದಾನ ನೀಡಿದ ಭೂಮಿಯಲ್ಲಿ ಒಂದು ಕ್ಷಣವೂ ಇರಲಾರದೆ, ಹೀಗೆ ನೆಲೆಯನ್ನು ಅರಸುತ್ತ ದಕ್ಷಿಣದ ತಪ್ಪಲಿಗೆ ಪಶ್ಚಿಮಘಟ್ಟಕ್ಕೆ ಬಂದು ಶಿವನನ್ನು ತಪಸು ಮಾಡುತ್ತಾನೆ. ಶಿವ ಒಲಿದು ಮನದ ಅಭಿಷ್ಟೇಯನ್ನು ತಿಳಿಸು ಎಂದಾಗ ತನಗೆ ಒದಗಿದ ದುರ್ಗತಿಯನ್ನು ಶಿವನಲ್ಲಿ ಹೇಳಿ , “ಸ್ವಾಮಿ ಸ್ವರ್ಗದ ಅಮರಾವತಿಯನ್ನೂ ನಾಚಿಸುವ, ಭೂಮಂಡಲದಲ್ಲಿ ಇನ್ನೆಲ್ಲೂ ಕಾಣದ ಸುಂದರ ಸಂಸ್ಕೃತಿಯ, ಸಜ್ಜನರಿಂದಲೇ ಕೂಡಿದ ಭೂಮಿಯೊಂದನ್ನು ಕರುಣಿಸು ಭಗವಂತ” ಎನ್ನುತ್ತಾ ಅಂಗಲಾಚುತ್ತಾನೆ ‘ಹೆದರದಿರು ಪರಶುರಾಮ, ಕದಳಿವನ ಅನ್ನುವ ಶಿವ ಸಾನಿಧ್ಯದ ಪ್ರದೇಶವೊಂದು ಕಡಲಿನ ಒಡಲಲ್ಲಿದೆ. ಶ್ರೇಷ್ಠ ಮುನಿಗಳೆಲ್ಲರೂ ಶಿವನಿಗಾಗಿ ತಪಸ್ಸು ಮಾಡಿದ ಪವಿತ್ರ ಜಾಗವದು. ನಾನು ಅಲ್ಲಿ ಮಂಜುನಾಥ ಸ್ವಾಮಿಯಾಗಿ ಅವತರಿಸುತ್ತೇನೆ. ಸಮುದ್ರರಾಜನಾದ ವರುಣದೇವನನ್ನು ಪ್ರಾರ್ಥಿಸಿ ಪಶ್ಚಿಮ ಘಟ್ಟದಿಂದ ಕದಳಿವನದ ವರೆಗೆ ಜಾಗ ಬಿಟ್ಟು ಕೊಡುವಂತೆ ಕೇಳಿಕೋ, ವರುಣದೇವನು ಜಾಗವನ್ನು ಬಿಟ್ಟರೆ ನಾನು ಅಲ್ಲಿ ನಿನಗೆ ಲಿಂಗರೂಪಿಯಾಗಿ ದರ್ಶನ ನೀಡುತ್ತೇನೆ. ವಿಶ್ವಕರ್ಮನನ್ನು ಕರೆದು ದೇವಸ್ಥಾನ ಹಾಗು ಪಟ್ಟಣವನ್ನು ನಿರ್ಮಿಸು. ಸಪ್ತ ಕೋಟಿ ಮಂತ್ರಗಳು ಸಪ್ತ ಕೊಳಗಳಾಗಿ ಉದ್ಭವಿಸಲಿ. ನನ್ನ ಆವಾಸ ಸ್ಥಾನಕ್ಕೆ ಕಾಶಿಯಿಂದ ಗಂಗೆಯೆ ಹರಿದು ಬರಲಿ, ನಿನಗೆ ಶುಭವಾಗಲಿ. ನಿನ್ನಿಂದ ಸೃಷ್ಟಿಯಾಗುವ ಊರಿಗೆ ತುಳುನಾಡು ಎಂಬ ಹೆಸರು ಬಂದು ಹದಿನಾಲ್ಕು ಲೋಕದ ಉನ್ನತ ಪುಟಗಳಲ್ಲಿ ಪ್ರಸಿದ್ಧಿಯಿಂದ ಮೆರೆಯಲಿ’ ಎಂದು ಅನುಗ್ರಹಿಸಿ ಶಿವ ಪರಶುರಾಮನನ್ನು ಹರಸಿ ಅಂತರ್ದಾನನಾಗುತ್ತಾನೆ.
ಆದರೆ ಅದೆಷ್ಟೇ ಧ್ಯಾನಿಸಿದರೂ ವರುಣ ದೇವ ಪ್ರತ್ಯಕ್ಷವಾಗುವುದಿಲ್ಲ.ಕೋಪಗೊಂಡ ಪರಶುರಾಮ ಸಮುದ್ರವೇ ಇಲ್ಲದಂತೆ ಬಟ್ಟ ಬರಿದು ಮಾಡಿಬಿಡುತ್ತೇನೆ ಎನ್ನುತ್ತಾ ತನ್ನ ಕೊಡಲಿಯನ್ನು ಎತ್ತಿ ನಿಲ್ಲುತ್ತಾನೆ. ಪರಶುರಾಮನ ಕೋಪಕ್ಕೆ ಹೆದರಿದ ವರುಣದೇವ ಮೈದೋರಿ “ಪ್ರಭು ಪರಶುರಾಮ ನೀನು ಎತ್ತಿದ ಕೊಡಲಿಯನ್ನು ಹಿಂದೆ ಸರಿಸಬೇಡ.ನಿನ್ನ ಶಕ್ತಿಯನ್ನೆಲ್ಲಾ ಕೂಡಿಸಿ ಕೊಡಲಿಯನ್ನು ಸಮುದ್ರದತ್ತ ಎಸೆದುಬಿಡು.ಆ ಕೊಡಲಿ ಎಲ್ಲಿಗೆ ಹೋಗಿ ಬೀಳುತ್ತೋ ಅಲ್ಲಿಯವರೆಗೆ ನಾನು ಹಿಂದೆ ಸರಿಯುತ್ತೇನೆ” ಅನ್ನುವ ಅಭಯವನ್ನು ನೀಡುತ್ತಾನೆ ವರುಣದೇವ ಹೇಳಿದಂತೆ ಕೊಡಲಿಯನ್ನು ಬೀಸಿ ಎಸೆಯುತ್ತಾನೆ ಪರಶುರಾಮ.
ಶಿವ ಹೇಳಿದ ಕದಳಿವನದ ಗಡಿ ದಾಟಿ ಬೀಳುತ್ತದೆ ಪರಶುರಾಮನ ಕೊಡಲಿ. ಶಿವ ಆಣತಿಯಂತೆ ಕದಳಿವನ ಬೆಟ್ಟವನ್ನು ಏರಿದಾಗ ಪಾರ್ವತಿ ಸಮೇತನಾಗಿ ಶಿವ ಲಿಂಗರೂಪಿಯಾಗಿ ದರ್ಶನ ನೀಡುತ್ತಾನೆ. ವಿಶ್ವಕರ್ಮ ಆಚಾರ್ಯರನ್ನು ಕರೆಸಿ ಸುಂದರವಾದ ದೇವಸ್ಥಾನ ಮತ್ತು ಪಟ್ಟಣವನ್ನು ನಿರ್ಮಿಸುತ್ತಾನೆ ಪರಶುರಾಮ. ಸಪ್ತಕೋಟಿ ಮಂತ್ರಗಳು ಸಪ್ತ ಕೊಳಗಳೆಂಬ ಪಾಪ ತೊಳೆಯುವ ಕೂಪಗಳಾಗುತ್ತವೆ. ಕಾಶಿಯಿಂದ ಅಘನಾಶಿನಿಯೇ ಕದಳಿವನವಕ್ಕೆ ದುಮ್ಮಿಕ್ಕುತ್ತಾಳೆ. ಕದಳಿವನ ಎಂಬ ಹೆಸರು ಕದರಿಕ ಎನ್ನುವ ರೂಪಾಂತರ ಹೊಂದಿ ಇಂದು ಕದ್ರಿಯಾಗಿ ನಮ್ಮ ಮುಂದಿದೆ.
ದೇವಸ್ಥಾನದ ಮಾಹಿತಿ
ತೆರೆಯುವ ಮತ್ತು ಮುಚ್ಚುವ ಸಮಯ :
ದಿನ ನಿತ್ಯ : 5.40 ರಿಂದ 1.00 ಹಾಗೂ 4.00 ರಿಂದ 8.00 ರ ವರೆಗೆ
ಧನುರ್ಮಾಸದ ತಿಂಗಳಲ್ಲಿ : ಬೆಳಿಗ್ಗೆ 5.00 ರಿಂದ 1.00 ಹಾಗೂ ಸಂಜೆ 4.00 ರಿಂದ 8.00ರ ವರೆಗೆ
ನಗರದಿಂದ ದೇವಸ್ಥಾನಕ್ಕೆ ಇರುವ ದೂರ :
ದೇವಸ್ಥಾನವು ಹಂಪನಕಟ್ಟೆಯಿಂದ (ನಗರದ ಮಧ್ಯಭಾಗ) 5 ಕೀ. ಮೀ. ದೂರದಲ್ಲಿದೆ.
ಸಮೀಪದ ಬಸ್ ನಿಲ್ದಾಣ :
ಮಲ್ಲಿ ಕಟ್ಟೆ ಬಸ್‍ನಿಲ್ದಾಣವು ದೇವಸ್ಥಾನದಿಂದ 1 ಕಿ. ಮೀ. ದೂರದಲ್ಲಿದೆ. ಕೆ.ಎಸ್. ಆರ್. ಟಿ. ಸಿ. ಬಸ್ ನಿಲ್ದಾಣವು 3 ಕಿ.ಮೀ. ದೂರದಲ್ಲಿದೆ. ಭಕ್ತಾದಿಗಳು ದೇವಸ್ಥಾನಕ್ಕೆ ಬರಲು ಸಿಟಿ ಬಸ್‍ಗಳನ್ನು ಉಪಯೋಗಿಸಿಕೊಳ್ಳಬಹುದು.
ಹತ್ತಿರದ ರೈಲು ನಿಲ್ದಾಣ :
ದೇವಸ್ಥಾನದಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವು 5 ಕಿ.ಮೀ. ದೂರದಲ್ಲಿದೆ. ಕಂಕನಾಡಿ ರೈಲು ನಿಲ್ದಾಣವು ಸುಮಾರು 4 ಕಿ. ಮೀ. ದೂರದಲ್ಲಿದೆ.
ಹತ್ತಿರದ ವಿಮಾನ ನಿಲ್ದಾಣ :
ಮಂಗಳೂರು (ಬಜಪೆ ವಿಮಾನ ನಿಲ್ದಾಣ) ರಾಷ್ಟ್ರೀಯ ವಿಮಾನ ನಿಲ್ದಾಣ ದೇವಸ್ಥಾನದಿಂದ ಸುಮಾರು 16 ಕಿ.ಮೀ. ದೂರದಲ್ಲಿದೆ.
ಹತ್ತಿರದ ಹೋಟೇಲುಗಳು :
ದೇವಸ್ಥಾನವು ನಗರದ ಪರಿಮಿತಿಯಲ್ಲಿರುವುದರಿಂದ ಹತ್ತಿರ ಹೆಚ್ಚಿನ ಹೋಟೇಲುಗಳ ಸೌಲಭ್ಯಗಳಿವೆ. ರಾಮಾವಿಲಾಸ್, ಕದಳೀಶ್ರೀ, ಹೋಟೆಲ್ ಮಂಜು-ಷಾ, ಅಭಿನಂದನಾ, ಸುವರ್ಣ, ವುಡ್ಸಲ್ಯಾಂಡ್ಸ್ ಮತ್ತು ರೂಪ ಹೋಟೇಲುಗಳು ಹತ್ತಿರದಲ್ಲಿವೆ.
ಹತ್ತಿರದ ನದಿ, ಕೆರೆ ಮತ್ತು ತೊರೆ :
ಸಪ್ತ ತೀರ್ಥ ಕೊಳಗಳು (7 ಕೊಳ) ಸಾಲಾಗಿ ದೇವಸ್ಥಾನದ ಆವರಣದಲ್ಲಿದೆ. ನೇತ್ರಾವತಿ ನದಿ, ಫಲ್ಗುಣಿ ನದಿ ಇತ್ಯಾದಿ.
ಸಾಂಸ್ಕೃತಿಕ ಚಟುವಟಿಕೆಗಳು :
ದೇವಸ್ಥಾನದ ಆಡಳಿತ ವರ್ಗದವರು ಸಾಂಸ್ಕೃತಿಕ ಕಾಯರ್ಕ್ರಮಗಳನ್ನು ಏರ್ಪಡಿಸುತ್ತಾರೆ. ನೃತ್ಯ, ಯಕ್ಷಗಾನ, ಸಂಗೀತ ಮುಂತಾದ ಕಾರ್ಯಕ್ರಮಗಳನ್ನು ಕೃಷ್ಣ ಜನ್ಮಾಷ್ಠಮಿ, ಶಿವರಾತ್ರಿ ಹಾಗೂ ಲಕ್ಷದೀಪೋತ್ಸವದಂದು ಏರ್ಪಡಿಸುತ್ತಾರೆ.
ವಿಶೇಷ ದಿನ/ ನಿತ್ಯ ದಿನಗಳಲ್ಲಿ ಭೇಟಿ ನೀಡಿರುವ ಅಂದಾಜು ಸಂಖ್ಯೆ :
ಪ್ರತಿದಿನ ಸುಮಾರು 2500 ಭಕ್ತಾದಿಗಳು ಬರುವರು, ಶನಿವಾರದಂದು 7000ಕ್ಕಿಂತ ಹೆಚ್ಚು, ವಿಶೇಷ ದಿನಗಳಲ್ಲಿ (ಸಂಕ್ರಮಣ, ಹುಣ್ಣಿಮೆ ಮತ್ತು ಸೋಮವಾರ) 10,000ಕ್ಕಿಂತ ಹೆಚ್ಚು ಭಕ್ತಾದಿಗಳು ಆಗಮಿಸುತ್ತಾರೆ. ದೀಪೋತ್ಸವ ಸಮಯದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜಾತ್ರೆಯಲ್ಲಿ 1.5 ಲಕ್ಷಕ್ಕೂ ಹೆಚ್ಚು ಶಿವರಾತ್ರಿಯ ಹಬ್ಬದಲ್ಲಿ 7 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುತ್ತಾರೆ.
ದೇವಸ್ಥಾನಕ್ಕೆ ದೇಣಿಗೆ :
ದೇವಸ್ಥಾನಕ್ಕೆ ದೇಣಿಗೆಯನ್ನು ಹಣ, ಮನಿ ಆರ್ಡರ್, ಚೆಕ್, ಬಂಗಾರ, ಬೆಳ್ಳಿ, ಸ್ಟೀಲ್, ತಾಮ್ರ, ಸೀರೆ, ಎಣ್ಣೆ ಅಕ್ಕಿ ಮತ್ತು ಡಿ.ಡಿ. ರೂಪದಲ್ಲಿ ಕೊಡಬಹುದು. ಭಕ್ತಾದಿಗಳು ಅಂತರ್ಜಾಲದ ಮೂಲಕ ದೇಣಿಗೆಯನ್ನು ಕೊಡಬಹುದು.
ಪಾಲಿಸತಕ್ಕ ನಿಯಮಗಳು :
ದೇವಸ್ಥಾನದ ಆವರಣದಲ್ಲಿ ಧೂಮಾಪಾನ ಮಾಡುವುದು ಮತ್ತು ಉಗುಳುವುದನ್ನು ನಿಷೇಧಿಸಲಾಗಿದೆ
ದೇವಸ್ಥಾನದ ಒಳಗಿರುವ ಬಾವಿಯನ್ನು ಹಾಗೂ ನಲ್ಲಿಯನ್ನು ಮುಟ್ಟಬಾರದು.
ದೇವಸ್ಥಾನದ ಆವರಣವನ್ನು ಸ್ವಚ್ಛವಾಗಿರಿಸಿ
ಮಧ್ಯಪಾನ ಮಾಡಿದವರು ಹಾಗೂ ಸಾಂಕ್ರಾಮಿಕ ರೋಗವುಳ್ಳವರು ದೇವಸ್ಥನದ ಆವರಣಕ್ಕೆ ಬರಬಾರದು.
7 ತಿಂಗಳು ದಾಟಿದ ಗರ್ಭಿಣಿ ಸ್ತ್ರೀಯರು ಒಳಗಿನ ಅಂಗಳಕ್ಕೆ ಪ್ರವೇಶಿ¸ಬಾರದು.
ಭಕ್ತಾದಿಗಳು ದೇವಸ್ಥಾನದ ಆವರಣಕ್ಕೆ ಬರಿಗಾಲಿನಲ್ಲಿ ಬರತಕ್ಕದ್ದು.
ದೇವಾಲಯದ ಒಳಗೆ ಊದುಬತ್ತಿ ಹಾಗೂ ಕರ್ಪೂರ ಉರಿಸಬಾರದು.
ಯಾವುದೇ ಸೇವೆ ಮಾಡಿಸುವವರು ಸೇವಾ ಕೌಂಟರಿನಲ್ಲಿ ರಸೀದಿ ಪಡೆಯತಕ್ಕದ್ದು v ದೇವಾಲಯದಲ್ಲಿ ಫೋಟೋ ವೀಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ.
ಹರಿಕೆ ಕಾಣಿಕೆಯನ್ನು ಹುಂಡಿಗೆ ಹಾಕಿ ಅಥವಾ ಸೇವಾ ಕೌಂಟರಿನಲ್ಲಿ ರಸೀದಿ ಪಡೆಯತಕ್ಕದ್ದು.
ಕಲ್ಯಾಣ ಮಂಟಪ ಕಾದಿರಿಸಲಿಚ್ಛಿಸುವವರು ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸತಕ್ಕದ್ದು.
ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸೂಚನೆ : ಗರ್ಭಗುಡಿಯ ಒಳಗೆ ಮಾಲೆ ಹಾಕುವುದು ಹಾಗೂ ತೆಗೆಯುವುದು ನಿóಷೇಧಿಸಲಾಗಿದೆ. ಈ ಕಾರ್ಯವನ್ನು ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾತ್ರ ಮಾಡಬೇಕು.
ವಿಶೇಷ ದಿನಗಳು
ಸೌರಮಾನ ಯುಗಾದಿ :
ಬೆಳಿಗ್ಗೆ ಎಂದಿನಂತೆ ಪೂಜೆ, ಸಂಜೆ ಮಹಾಪೂಜೆ (ಮಂಗಳಾರತಿ) ನಂತರ ದೇವರಿಗೆ ಕಣಿ(ತರಕಾರಿಗಳನ್ನು) ದೇವರಿಗೆ ಅರ್ಪಿಸಿ ಪೂಜಿಸಿ ಹೊಸ ಪಂಚಾಂಗ ಇಟ್ಟು ಪೂಜೆ ಮಾಡಿ ನಂತರ ಪಂಚಾಂಗ ಪಠಣ ಮಾಡಿ ಪುನಃ ದೇವರನ್ನು ಅದೇ ಸ್ಥಾನದಲ್ಲಿಟ್ಟು ಮರುದಿನ ಪ್ರಾಥಃ ಕಾಲದಲ್ಲಿ ದೇವರ ಬಲಿಮೂರ್ತಿಯನ್ನು ಗರ್ಭಗುಡಿಗೆ ಕೊಂಡೊಯ್ಯುತ್ತಾರೆ, ನಂತರ ಕಣಿ ತೆಗೆದು ಪಂಚಾಂಗವನ್ನು ಪಠಣ ಮಾಡುವುದು.
ಬ್ರಹ್ಮಕಲಶ ದಿನ :
2006 ರಲ್ಲಿ ವೈಶಾಖ ಶುದ್ಧ ಪಂಚಮಿಯ ದಿನದಂದು ದೇವರಿಗೆ ಬ್ರಹ್ಮಕಲಶ ಆಗಿರುವುದರಿಂದ ಇದರ ನೆನಪಿಗಾಗಿ ಪ್ರತಿವರ್ಷ ಆದಿನದಂದು (ಪಂಚಮಿ) ಸಾಮೂಹಿಕ ಶತ ರುದ್ರಾಭಿಷೇಕ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಸೇವೆಯನ್ನು ಮಧ್ಯಾಹ್ನ 12.00 ಗಂಟೆಗೆ ಮಾಡಲಾಗುತ್ತದೆ.
ಪತ್ತ ನಾಜೆ :
ದೀಪಾವಳಿಯಂದು ದೇವರ ನಿತ್ಯ 3 ಹೊತ್ತಿನ (ಬೆಳಿಗ್ಗೆ 8.00 ಗಂಟೆಗೆ, ಮಧ್ಯಾಹ್ನ 12.00 ಗಂಟೆಗೆ ಹಾಗೂ ರಾತ್ರಿ 8.00 ಗಂಟೆಗೆ) ಪ್ರದಕ್ಷಿಣಾ ಬಲಿ ಜರುಗುತ್ತದೆ. ಈ ಪ್ರದಕ್ಷಿಣಾ ಬಲಿಯು ದೀಪಾವಳಿಯಂದು ಪ್ರಾರಂಭವಾಗಿ ಮೇ ತಿಂಗಳ ಪತ್ತನಾಜೆಯವರೆಗೂ (ಮೇ 22 ರಿಂದ 24) ನಡೆಯುತ್ತದೆ. ಆ ದಿನದಂದು ಅದ್ಧೂರಿಯಾಗಿ ವಸಂತ ಪೂಜೆಯನ್ನು ನೆರವೇರಿಸಿ ಬಲಿ ಪ್ರದಕ್ಷಿಣೆಯನ್ನು ಮುಕ್ತಾಯಗೊಳಿಸಲಾಗುತ್ತದೆ.
ನಾಗರಪಂಚಮಿ :
ಶ್ರೀ ಮಂಜುನಾಥ ದೇವರ ಒಳಾಂಗಣದಲ್ಲಿರುವ ನಾಗದೇವರ ಸನ್ನಿಧಿಯಲ್ಲಿ ಗ್ರಾಮದಲ್ಲಿರತಕ್ಕಂತಹ ಎಲ್ಲಾ ಭಕ್ತಾದಿಗಳು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 10.30 ಗಂಟೆಯವರೆಗೆ ಬಂದು ದೇವರಿಗೆ ನಾಗಪೂಜೆ (ಹಾಲು ಹಾಗೂ ಪಂಚಾಮೃತದಿಂದ) ಮಾಡುತ್ತಾರೆ.
ಋಗುಪಾಕರ್ಮ :
ಈ ದಿನದಂದು ಮಧ್ಯಾಹ್ನದ ಕಲಶ ಪೂಜೆಯನ್ನು ದೇವರಿಗೆ ಬೆಳಿಗ್ಗೆ 8.30 ಕ್ಕೆ ನೆರವೇರಿಸಿ ನಂತರ ದೇವಸ್ಥಾನದ ತಂತ್ರಿವರ್ಯರಿಂದ ಉಪಾಕರ್ಮ ಹೋಮ ಮಾಡಿಸಿ ದೇವಸ್ಥಾನದ ಅರ್ಚಕರು ಹಾಗೂ ಇನ್ನಿತರ ಹೊರಗಿನಿಂದ ಬಂದ ವಟುಗಳು (ಬ್ರಾಹ್ಮಣರ ಮಕ್ಕಳು) ಹಾಗೂ ಬ್ರಾಹ್ಮಣರಿಗೆ ಜನಿವಾರ ಬದಲಾವಣೆ ಮಾಡುವರು.
ಕೃಷ್ಣ ಜನ್ಮಾಷ್ಠಮಿ :
ಸಂಜೆ 5 ಗಂಟೆ ನಂತರ ಕೃಷ್ಣ ಜನ್ಮಾಷ್ಠಮಿ ದಿನದಂದು ಕೃಷ್ಣಜನ್ಮ ಮಹೋತ್ಸವ ಸಮಿತಿ ಕದರಿ ಇವರು ದೇವಸ್ಥಾನದಲ್ಲಿರುವ ಗಂಧದ ಕೃಷ್ಣನ ಮೂರ್ತಿಯನ್ನು ಮಂಟಪದಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆಯಲ್ಲಿ ಕದರಿ ಕಂಬಳದ ಶ್ರೀ ಗೋಪಾಲಕೃಷ್ಣ ಮಠಕ್ಕೆ ಕೊಂಡೊಯ್ದು ಅಲ್ಲಿ ಆ ದಿನದಂದು ಪೂಜೆ ಮಾಡುತ್ತಾರೆ.
ಮೊಸರು ಕುಡಿಕೆ ಉತ್ಸವ :
ಸಂಜೆ 6 ಗಂಟೆಯ ನಂತರ ಹಿಂದಿನ ದಿನ ಕೊಂಡು ಹೋದ ಕೃಷ್ಣನ ಮೂರ್ತಿಯನ್ನು ಅದೇ ಮಂಟಪದಲ್ಲಿ ಕುಳ್ಳಿರಿಸಿಕೊಂಡು ಗೋಪಾಲಕೃಷ್ಣ ಮಠದಿಂದ ಅತಿ ವಿಜೃಂಭಣೆಯಿಂದ ಸ್ತಬ್ಧ ಚಿತ್ರಗಳು, ಡೊಳ್ಳು ಕುಣಿತ, ಕರಗ, ನೃತ್ಯ ಹಾಗೂ ಇನ್ನಿತರ ಮನರಂಜನೆಯೊಂದಿಗೆ ಹಾಗೂ ಕೃಷ್ಣನ ಕುರುಹಾದ ಮಡಕೆ ಒಡೆಯುವ ಕಾರ್ಯಕ್ರಮದೊಂದಿಗೆ ಮೆರವಣಿಗೆಯಲ್ಲಿ ಪುನಃ ಶ್ರೀ ಕದರಿ ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗುತ್ತವೆ.
ಶ್ರೀ ಗಣೇಶ ಚತುರ್ಥಿ :
ಬೆಳಗ್ಗೆ 9.00 ಗಂಟೆಗೆ 108 ಕಾಯಿ ಗಣಹೋಮ ಪ್ರಾರಂಭವಾಗಿ ಮಧ್ಯಾಹ್ನ 12.00 ಗಂಟೆಗೆ ಪೂರ್ಣಗೊಳ್ಳುತ್ತದೆ. ನಂತರ ವಿಶೇಷವಾಗಿ ತಯಾರಿಸಿದ ಕಡುಬು ಹಾಗೂ ಕಬ್ಬಿನ ಜಲ್ಲೆಯನ್ನು ಮಾಡಿ ಅದರೊಳಗೆ ತೆಂಗಿನಕಾಯಿಯನ್ನು ಮತ್ತು ಅಡಕೆ ಹಾಕಿ ಮೋದಕ ಅಪ್ಪ ಪಂಚಕಜ್ಜಾಯವನ್ನಿಟ್ಟು ಸಮರ್ಪಣೆ ಮಾಡಿ ನಂತರ ಮಹಾಪೂಜೆ ನೆರವೇರುತ್ತದೆ. ಈ ನೂರೆಂಟು ಕಾಯಿ ಗಣಹೋಮವು ಸಾಮೂಹಿಕ ಗಣಹೋಮವಾಗಿರುತ್ತದೆ. ಈ ಸೇವೆಗೆ 100/- ರೂ. ಆಗಿರುತ್ತದೆ.
ನವರಾತ್ರಿ :
ನವರಾತ್ರಿಯ ಮೊದಲನೆ ದಿನ ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಪುಣ್ಯಾರ್ಚನೆ ಮಾಡಿ ಕೊಪ್ಪರಿಗೆ ಮುಹೂರ್ತ ಇಡುವ ಕಾರ್ಯಕ್ರಮವಿರುತ್ತದೆ. ನಂತರ ದೇವಿಗೆ ಪಂಚಾಮೃತ ಅಭಿಷೇಕ ಮಾಡಿ ಪೂಜೆ ಮಾಡಲಾಗುವುದು. ಸಂಜೆ ಭಜನಾ ಕಾರ್ಯಕ್ರಮದ ನಂತರ ದೇವಿಗೆ ರಂಗಪೂಜೆ ನೆರವೇರುತ್ತದೆ. ಈ ರಂಗ ಪೂಜೆಯು ಒಂಭತ್ತು ದಿನಗಳ ಕಾಲವು ನಡೆಯುತ್ತದೆ. ಈ ನವರಾತ್ರಿಯ ದುರ್ಗಾಷ್ಟಮಿಯ ದಿನದಂದು ಸಾಮೂಹಿಕ ಚಂಡಿಕಾ ಹೋಮವು ಜರಗುತ್ತದೆ. ಈ ಚಂಡಿಕಾ ಹೋಮ ಸೇವೆ ದರ 120/- ರೂ. ಆಗಿರುತ್ತದೆ. ನವಮಿಯ ದಿನದಂದು ರಾತ್ರಿ ಭಜನಾ ಕಾರ್ಯಕ್ರಮವು ಮುಕ್ತಾಯಗೊಳ್ಳುತ್ತದೆ. ಮರುದಿನ ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಥಮ ದಿನದಂದು ಇಟ್ಟ ಕೊಪ್ಪರಿಗೆಯನ್ನು ತೆಗೆದು ನಂತರ ಕದ್ರಿ ಮಠದ ಮಠಾಧಿಪತಿಗಳು ಬಂದು ನವಧಾನ್ಯದ ಪ್ರಸಾದಗಳನ್ನು ನೀಡಿದ ನಂತರ ನವರಾತ್ರಿ ಮುಕ್ತಾಯಗೊಳ್ಳುತ್ತದೆ.
ನರಕ ಚತುರ್ದಶಿ :
ದೀಪಾವಳಿ ದಿನದಂದು ರಾತ್ರಿ ಮಹಾಪೂಜೆ ಮೊದಲು ದೇವಸ್ಥಾನದ ನಮಸ್ಕಾರ ಮಂಟಪದಲ್ಲಿ ಅವಲಕ್ಕಿಯನ್ನು ಹಾಕಿ ಬಲೀಂದ್ರನನ್ನು ಸ್ವಾಗತಿಸಲಾಗುವುದು. ನಂತರ ಕದ್ರಿ ಮಠದ ಮಠಾಧಿಪತಿಗಳು ಬಂದ ನಂತರ ಮಹಾಪೂಜೆಯಾಗಿ ಶ್ರೀ ದೇವರ ಬಲಿ ಮೂರ್ತಿಯನ್ನು ಹೊರಗೆ ತಂದು ಪ್ರದಕ್ಷಿಣೆಯನ್ನು ಪ್ರಾರಂಭಿಸಲಾಗುತ್ತದೆ. ಪತ್ತನಾಜೆಯಂದು ಮುಕ್ತಾಯಗೊಂಡ ಬಲಿಪ್ರದಕ್ಷಿಣೆಯನ್ನು ಪುನಃ ಈ ದಿನದಂದು ಪ್ರಾರಂಭಿಸಿ ಆರು ತಿಂಗಳ ಕಾಲ ನಡೆಸಲಾಗುವುದು. ದೀಪಾವಳಿಯ ಮೊದಲ ದಿನ ಎರಡನೆಯ ಹಾಗೂ ಮೂರನೆಯ ದಿನದಂದು ದೇವರ ಬಲಿ ಮೂರ್ತಿಯನ್ನು ಪ್ರಧಾನ ರಸ್ತೆಯ ಬದಿಯಲ್ಲಿ ಕದ್ರಿ ಮಠದ ದೇವರ ಕಟ್ಟೆಯವರೆಗೆ ಮೆರವಣಿಗೆಯಿಂದ ಕೊಂಡೊಯ್ದು ಅಲ್ಲಿ ಪೂಜೆ ನಡೆಸಿದ ನಂತರ ಪುನಃ ಬಂದು ದೇವರ ರಾಜಾಂಗಣದಲ್ಲಿ ಉತ್ಸವ ಬಲಿಪ್ರದರ್ಶನ ನಡೆಸಿದ ನಂತರ ಆ ದಿನದ ಬಲಿಯನ್ನು ಮುಕ್ತಾಯಗೊಳಿಸಲಾಯಿತು.
ಕಾರ್ತಿಕ ಸೋಮವಾರ :
ಕಾರ್ತಿಕ ಮಾಸವು ಶಿವನ ಆರಾಧನೆಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ಈ ಮಾಸದಲ್ಲಿ ಬರುವ ಪ್ರತಿ ಸೋಮವಾರದಂದು ಶಿವನ ಅತ್ಯಂತ ಪ್ರೀತಿಯಾದ ಪಂಚಾಮೃತ ಸಹಿತವಾದ ಶತರುದ್ರಾಭಿಷೇಕ ಸೇವೆಯನ್ನು ಭಕ್ತ ಜನರ ಸಹಕಾರದೊಂದಿಗೆ ಸಾಮೂಹಿಕವಾಗಿ ನೆರವೇರಿಸಲಾಗುವುದು. ಈ ಸೇವೆಯೊಂದರ ದರ 300/-ರೂ. ಈ ಸೇವೆಯು ಮಧ್ಯಾಹ್ನ 12.00 ಗಂಟೆಗೆ ನಡೆಯುತ್ತದೆ.
ಲಕ್ಷ ದೀಪೋತ್ಸವ :
ಅಂದು ಬೆಳಿಗ್ಗೆ ಮತ್ತು ಮಧ್ಯಾಹ್ನ ವಿಶೇಷ ಅಲಂಕಾರದೊಂದಿಗೆ ಮಂಜುನಾಥ ದೇವರಿಗೆ ಮಹಾಪೀಜೆ ನಡೆಯುತ್ತದೆ. ಅಲ್ಲದೆ ಬೆಳಿಗ್ಗೆ ಶ್ರೀ ಅಯ್ಯಪ್ಪ ದೇವರಿಗೆ ಸೀಯಾಳ(ಏಳನೀರು) ಅಭಿಷೇಕ ಮಾಡಿ ನಂತರ ಮಧ್ಯಾಹ್ನ ಮಹಾಪೂಜೆ ಜರುಗಿ ಅನ್ನ ಸಂತರ್ಪಣೆ ನಡೆಯುವುದು. ನಂತರ ರಾತ್ರಿ ದೇವರ ಬಲಿ ಪ್ರದಕ್ಷಿಣೆ ಹೊರಟು ದೇವರ ಮುಂಭಾಗದಲ್ಲಿರುವ ದೀಪಸ್ತಂಭದಲ್ಲಿ ಐದು ಅಂಕಣ ದೀಪವನ್ನು ಹಾಗೂ ದೇವಸ್ಥಾನದ ಒಳಗೆ ಹಾಗೂ ಹೊರಗೆ ಇರುವ ದಳಿಗಳಲ್ಲಿ ಹಣತಿಗಳನ್ನಿಟ್ಟು ದೀಪವನ್ನು ಉರಿಸಲಾಗುವುದು. ನಂತರ ಕದ್ರಿ ಮಠಾಧೀಶರ ಜೊತೆಗೂಡಿ ಶ್ರೀ ದೇವರ ಬಲಿಯನ್ನು ಕದ್ರಿ ಮಠದ ಕಟ್ಟೆಯ ಬಳಿಯಲ್ಲಿ ರಚಿಸಲಾದ ತಾತ್ಕಾಲಿಕ ಮಂಟಪದವರೆಗೆ ದಾರಿಯ ಇಕ್ಕೆಡೆಗಳಲ್ಲಿ ಹಣತೆ ಉರಿಸಿಕೊಂಡು ಉತ್ಸವ ಮೆರವಣಿಗೆಯನ್ನು ಅಲ್ಲಿಯವರೆಗೆ ಕೊಂಡೊಯ್ದು ತಾತ್ಕಾಲಿಕ ಮಂಟಪದಲ್ಲಿ ದೇವರನ್ನು ಕುಳ್ಳಿರಿಸಿ ಪೂಜಿಸಿದ ನಂತರ ಪುನಃ ಹಿಂತಿರುಗಿ ಬಂದು ರಾಜಾಂಗಣದಲ್ಲಿ ಉತ್ಸವಗಳು ನಡೆದ ಕೊನೆಯದಾಗಿ ಅಲಂಕಾರ ಮಾಡಿದ ಸಣ್ಣ ರಥದಲ್ಲಿ ದೇವರನ್ನು ಕುಳ್ಳಿರಿಸಿ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ತಂದು ಲಕ್ಷ ದೀಪೋತ್ಸವ ಆಚರಿಸಲಾಗುವುದು.
ಧನು ಪೂಜಾ :
ಈ ಪೂಜೆಯು ವಿಶೇಷ ಉಷಾ ಕಾಲದಲ್ಲಿ (ಬೆಳಿಗ್ಗೆ) ನಡೆಯಬೇಕಾಗಿರುವುದರಿಂದ ಈ ಧನುರ್ಮಾಸದಲ್ಲಿ ದೇವಸ್ಥಾನದ ಬಾಗಿಲನ್ನು ಬೆಳಿಗ್ಗೆ 5.00 ಗಂಟೆಗೆ ತೆರೆಯಲಾಗುವುದು. ನಂತರ ಅಭಿಷೇಕ ಇತ್ಯಾದಿಗಳು ನಡೆದು ಬೆಳಿಗ್ಗೆ 5.15 ಕ್ಕೆ ಧನುಪೂಜೆಯು ಜರಗುತ್ತದೆ. ಮತ್ತೆ 5.30 ಕ್ಕೆ ಬೆಳಿಗ್ಗೆಯ ಮಹಾಪೂಜೆ ನಡೆದು ಬಲಿಪ್ರದಕ್ಷಿಣೆ ಜರಗುತ್ತದೆ. ಈ ಸಮಯದಲ್ಲಿ ಬೆಳಿಗ್ಗೆ ಪೂಜೆಗೆ ಸಾಧಾರಣವಾಗಿ 700 ಜನರು ಸೇರಿರುತ್ತಾರೆ.
ಮಹಾಶಿವರಾತ್ರಿ :
ಆ ದಿನ ಬೆಳಿಗ್ಗೆಯಿಂದ ಹಲವಾರು ಭಕ್ತರು ಅನೇಕ ಸಂಖ್ಯೆಯಲ್ಲಿ ಬಂದು ವಿಶೇಷ ಸೇವೆಯಾದ ರುದ್ರಾಭಿಷೇಕ ಹಾಗೂ ಶಿವಪೂಜೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ನಂತರ ರಾತ್ರಿ ಸುಮಾರು 9.30ರಿಂದ 10.00 ಗಂಟೆಯ ಹೊತ್ತಿಗೆ ದೇವರಿಗೆ ರಂಗಪೂಜೆ ಸೇವೆ ನಡೆದ ನಂತರ ದೇವರ ಬಲಿ ಪ್ರದಕ್ಷಿಣೆ ಹೊರಡುತ್ತದೆ. ಹೀಗೆ ಶಿವರಾತ್ರಿಯ ನಾಲ್ಕು ಜಾವ ಪೂಜೆ ನಡೆದ ನಂತರ ಬೆಳ್ಳಿ ರಥೋತ್ಸವವು ಜರಗುತ್ತದೆ. ನಂತರ ಸಾಂಸ್ಕøತಿಕ ಕಾರ್ಯಕ್ರಮವು ಬೆಳಿಗ್ಗೆಯ ತನಕ ನಡೆಯುತ್ತದೆ.
ಕಂಬಳ :
ಈ ಹಬ್ಬವು ಡಿಸೆಂಬರ್‍ನಲ್ಲಿ ಜರಗುವುದು. ಇದಕ್ಕೆ ದೇವರ ಕಂಬಳ ಎಂದು ಕರೆಯುವರು. ದೇವಸ್ಥಾನದ ಲಕ್ಷದೀಪೆÇೀತ್ಸವಕ್ಕೆ ಮುಂಚೆ ಡಿಸೆಂಬರ್‍ನಲ್ಲಿ ಜರುಗುವುದು. ಕಂಬಳಕ್ಕೆ ಕದ್ರಿಯ ಅರಸರು ಹೋದ ನಂತರ ಶುರುವಾಗುವುದು. ಮಂಜುನಾಥ ದೇವಾಲಯದಲ್ಲಿ ಪೂಜೆ ಸಲ್ಲಸಿ ದೇವರ ತೀರ್ಥವನ್ನು ಕೊಂಡು ಹೋಗಿ ಅಲ್ಲಿ ಕಂಬಳ ಗದ್ದೆಗೆ ಹಾಕಿದ ನಂತರ ಅರಸರು ಕಂಬಳಕ್ಕೆ ಚಾಲನೆ ನೀಡುವರು. ಅಲ್ಲಿ ಎರಡು ಕಂಬಳ ಅಂಕಣಗಳಿದ್ದು ಒಂದಕ್ಕೆ ಗೋರಕ್ಷನಾಥ ಕರೆ, ಮಚ್ಚೇಂದ್ರನಾಥ ಕರೆ ಎಂದು ಕರೆಯುವರು.
ವರ್ಷಾವಧಿ ಜಾತ್ರೆ :
ವರ್ಷಾವಧಿ ಜಾತ್ರೆಯನ್ನು 9 ದಿವಸಗಳ ಕಾಲ ಮಾಡುವರು.
ಮೊದಲನೆ ದಿವಸ :
ದೇವರಿಗೆ ಬೆಳಗ್ಗೆ 4 ಗಂಟೆಗೆ ತೀರ್ಥಸ್ನಾನ. 8.30ಕ್ಕೆ ಮಠಾಧೀಶ್ವರಾದ ಯೋಗೀಶ್ವರರಿಂದ ತೀರ್ಥಸ್ನಾನ. ಸಂಜೆ 6 ಗಂಟೆಗೆ ಪೂಜೆಯ ನಂತರ ಧ್ವಜ ಕಂಭವನ್ನು ನೆಡುವುದು. ಈ ಕಾರ್ಯಕ್ರಮವು ಮೊಗವೀರ ಸಮಾಜದ ಬಂಧುಗಳಿಂದ ನೆರವೇರುತ್ತದೆ. ರಾತ್ರಿ 10 ಗಂಟೆಗೆ ಧ್ವಜ ಬಲಿ ಸೇವೆ ನಡೆಯುತ್ತದೆ. ಕದ್ರಿ ಯೋಗೀಶ್ವರ ಮಠಾಧೀಶರ ಸಮ್ಮಖದಲ್ಲಿ ಗರುಡಾರೋಹಣ ಮಾಡಲಾಗುತ್ತದೆ. ಇದರ ಅರ್ಥ ಜಾತ್ರೆಯು ಪ್ರಾರಂಭವೆಂದು. ನಂತರ ಪ್ರಥಮ ದಿನ ಮತ್ತು ಏಳನೆಯ ದಿನದಂದು ದೀಪದ ಬಲಿ, ಕಂಚೀಲು ಸೇವೆ ಉತ್ಸವ ಮಾಡುವರು. ಕಂಚೀಲು ಸೇವೆಯೆಂದರೆ ಮಕ್ಕಳು ವಧುವವರು ಅಲಂಕಾರವನ್ನು ಮಾಡಿಕೊಂಡು ಉತ್ಸವ ಮೂರ್ತಿಯ ಮುಂದೆ ಅವರು ಕೂಡಾ ಪ್ರದಕ್ಷಿಣೆ ಬರುವುದು.
ಎರಡನೇ ದಿವಸ :
ಸಾಯಂಕಾಲ 7 ಗಂಟೆಗೆ ಉತ್ಸವ ಬಲಿ ಸೇವೆ ಮಾಡುತ್ತಾರೆ. ಉತ್ಸವ ಬಲಿ ಎಂದರೆ ಉತ್ಸವ ಮೂರ್ತಿಯನ್ನು ಅಲಂಕರಿಸಿ ಚಂಡೆ ಓಲಗ ಜೊತೆಗೆ 7 ಸುತ್ತು ಸುತ್ತುವುದು. ನಂತರ ರಾತ್ರಿ 11 ಗಂಟೆಗೆ ಮಹಾಪೂಜೆ, ಭೂತ ಬಲಿ ಮತ್ತು ಸಣ್ಣ ರಥೋತ್ಸವವನ್ನು ಒಂದಾದ ಮೇಲೊಂದರಂತೆ ಮಾಡುವರು, ನಿತ್ಯ ಬಲಿ ಎಂದರೆ ದೇವರಿಗೆ ಅಲಂಕಾರ ಮಾಡದೆ 6 ಸುತ್ತುಗಳನ್ನು ಸುತ್ತುವುದು.
ಮೂರನೇ ದಿವಸ :
ಸಾಯಂಕಾಲ 7 ಗಂಟೆಗೆ ಬಿಕರ್ನಕಟ್ಟೆ ಸವಾರಿ ಬಲಿ ಉತ್ಸವ ಮಾಡುತ್ತಾರೆ. ದೇವರನ್ನು ಬಿಕರ್ನಕಟ್ಟೆಗೆ ಮೆರವಣಿಗೆ ಮಾಡಿಕೊಂಡು ಹೋಗುವರು. ನಂತರ ಉತ್ಸವ ಬಲಿ ಮಹಾಪೂಜೆ, ನಿತ್ಯ ಬಲಿ, ಭೂತ ಬಲಿ ನಡೆಯುತ್ತದೆ.
ನಾಲ್ಕನೇ ದಿವಸ :
ಸಾಯಂಕಾಲ 6 ಗಂಟೆಗೆ ಮಲ್ಲಿಕಟ್ಟೆ ಸವಾರಿ ಉತ್ಸವ ಮಾಡುತ್ತಾರೆ. ದೇವರನ್ನು ದಕ್ಷಿಣಾಭಿಮುಖವಾಗಿ ಮಲ್ಲಿಕಟ್ಟೆ ಮೆರವಣಿಗೆ ಮಾಡಿಕೊಂಡು ಹೋಗುವರು. ನಂತರ ಉತ್ಸವ ಬಲಿ ಮಹಾಪೂಜೆ, ನಿತ್ಯಬಲಿಭೂತ ಬಲಿ ನಡೆಯುತ್ತದೆ.
ಐದನೇ ದಿವಸ :
ಸಾಯಂಕಾಲ 6 ಗಂಟೆಗೆ ಮುಂಡಾಣಕಟ್ಟೆ ಸವಾರಿ ಬಲಿ ಉತ್ಸವ ಮಾಡುತ್ತಾರೆ. ದೇವರನ್ನು ಪಶ್ಚಿಮಾಭಿಮುಖವಾಗಿ ಮುಂಡಾಣಕಟ್ಟೆ ಮೆರವಣಿಗೆ ಮಾಡಿಕೊಂಡು ಹೋಗುವರು. ನಂತರ ಉತ್ಸವ ಬಲಿ ಮಹಾಪೂಜೆ, ನಿತ್ಯಬಲಿ ಭೂತ ಬಲಿ ನಡೆಯುತ್ತದೆ.
ಆರನೇ ದಿವಸ :
ಸಾಯಂಕಾಲ 6 ಗಂಟೆಗೆ ಕೊಂಚಾಡಿ ಸವಾರಿ ಬಲಿ ಉತ್ಸವ ಮಾಡುತ್ತಾರೆ. ದೇವರನ್ನು ಉತ್ತರಾಭಿಮುಖವಾಗಿ ಕೊಂಚಾಡಿಗೆ ಮೆರವಣಿಗೆ ಮಾಡಿಕೊಂಡು ಹೋಗುವರು. ನಂತರ ಉತ್ಸವ ಬಲಿ ಮಹಾಪೂಜೆ, ನಿತ್ಯಬಲಿ ಭೂತ ಬಲಿ ನಡೆಯುತ್ತದೆ. ನಂತರ ಕೆರೆ ದೀಪೋತ್ಸವ ನಡೆಯುತ್ತದೆ. ಕೆರೆ ದೀಪೋತ್ಸವ ಎಂದರೆ ಉತ್ಸವ ಮೂರ್ತಿಯನ್ನು ತುಳಸಿ ಕಟ್ಟೆಯ ಮುಂದೆ ಇಟ್ಟು ವಿಶೇಷ ಪೂಜೆ ಮಾಡುವರು. ನಂತರ ದೇವರು ಕೆರೆಯ ಸುತ್ತ ಪ್ರದಕ್ಷಿಣೆ ಹಾಕಿ ವಾಪಸ್ಸು ಆಗುವುದು.
ಏಳನೇ ದೀಪೋತ್ಸವ (7 ನೇ ದಿವಸ) :
7ನೇ ದಿನದಿಂದ ಮುಂದಕ್ಕೆ ಉತ್ಸವವನ್ನು ದೇವಸ್ಥಾನದ ಆವರಣದಲ್ಲಿಯೇ ಮಾಡುವರು. ಮಧ್ಯಾಹ್ನದ ನಂತರ ಮಹಾಪೂಜೆ, ಅನ್ನ ಸಂತರ್ಪಣೆಯು ಸಿಹಿ ಅಡುಗೆಯನ್ನು ಹೊಂದಿರುತ್ತದೆ. ಸಾಯಂಕಾಲ 7 ಗಂಟೆಗೆ ಉತ್ಸವಬಲಿ, ಮಹಾಪೂಜೆ, ನಿತ್ಯಬಲಿ, ಭೂತಬಲಿ, ದೀಪದ ಬಲಿ ಉತ್ಸವ, ಚಂದ್ರಮಂಡಲ ಉತ್ಸವವನ್ನು ಆಚರಿಸುತ್ತಾರೆ. ದೀಪದ ಬಲಿ ಉತ್ಸವವನ್ನು ಮೊದಲನೆ ಮತ್ತು 7ನೇ ದಿವಸ ಆಚರಿಸುತ್ತಾರೆ. ಕಂಚೀಲು ಸೇವೆಯನ್ನು ದೀಪದ ಬಲಿ ಉತ್ಸವದ ದಿನ ಆಚರಿಸುತ್ತಾರೆ.
ಮನ್ಮಹಾ ರಥೋತ್ಸವ : (8ನೇ ದಿವಸ)
8ನೇ ದಿವಸ ಶ್ರೀ ಮನ್ಮಹಾ ರಥೋತ್ಸವವನ್ನು ಆಚರಿಸುತ್ತಾರೆ. ಬೆಳಿಗ್ಗೆ 10 ಗಂಟೆಗೆ ರಥಾಲಂಕಾರ ಮಾಡುತ್ತಾರೆ. ನಂತರ ರಥ ಕಲಶ ಪೂಜೆ ಅಂದರೆ ರಥದ ಶುದ್ಧೀಕರಣವನ್ನು ಮಾಡುತ್ತಾರೆ. ಮಹಾಪೂಜೆಯ ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನದ ಸುತ್ತಲು ತಂದು ಅದನ್ನು ಕದ್ರಿ ಯೋಗೇಶ್ವರ ಮಠಾಧೀಶರ ಸಮ್ಮುಖದಲ್ಲಿ ರಥದಲ್ಲಿ ಮಧ್ಯಾಹ್ನ 1 ಗಂಟೆಗೆ ಇಡುವರು. ಸಾಯಂಕಾಲ 6 ಗಂಟೆಗೆ ರಥೋತ್ಸವವನ್ನು ಮಾಡುವರು. ಈ ರಥವನ್ನು ಅಶ್ವರೂಢರಾದ ಕದ್ರಿ ಮಠಾಧೀಶರು “ಆವೋ ಬೇಟ ಮಂಜುನಾಥ” ಎಂದು ಕರೆದ ನಂತರ ಎಳೆಯುವರು. ಇದಾದ ನಂತರ ಬೆಳ್ಳಿ ರಥ, ಚಂದ್ರ ಮಂಡಲದಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡುವರು. ರಾತ್ರಿಯಲ್ಲಿ ಮಹಾಪೂಜೆಯ ನಂತರ ಭೂತ ಬಲಿ ಸೇವೆ ಶಯನ ಗೃಹ ಪೂಜೆ ಮಾಡುತ್ತಾರೆ. ಶಯನ ಸೇವೆಯೆಂದರೆ ಮಂಚ ಮತ್ತು ಹಾಸಿಗೆಯನ್ನು ಹಾಸಿ ದೇವರನ್ನು ಅಲ್ಲಿ ಇಟ್ಟು ಬಾಗಿಲನ್ನು ಮುಚ್ಚುವುದು.
ಅವಭೃತ ಸ್ನಾನ :
ಬೆಳಿಗ್ಗೆ ಯೋಗೀಶ್ವರ ಮಠಾಧೀಶರು ದೇವಸ್ಥಾನದ ಬಾಗಿಲನ್ನು ತೆಗೆಯುವರು ಶಯ್ಯಗೃಹದಲ್ಲಿರುವ ಪ್ರತಿಬಿಂಬವನ್ನು ಯೋಗೀಶ್ವರ ಮಠಾಧೀಶರಿಗೆ ಕನ್ನಡಿಯಲ್ಲಿ ತೋರಿಸಿದ ನಂತರ ಅವರನ್ನು ತೀರ್ಥ ಮಂಟಪದಲ್ಲಿ ಕುಳ್ಳಿರಿಸುವರು. ನಂತರ ಮಹಾಪೂಜೆಯನ್ನು ಮಾಡುವರು ದೇವರಿಗೆ ತೀರ್ಥ ಅಭಿಷೇಕವನ್ನು ಮಾಡುವರು. ಅದಾದ ನಂತರ ತುಲಾಭಾರ ನಂತರ ರಾತ್ರಿ ದೇವರನ್ನು ದೇವಸ್ಥಾನದ ಪುಷ್ಕರಣಿಗೆ ತಂದು ಸ್ನಾನವನ್ನು ಮಾಡಿಸುವರು. ನಂತರ ದೇವರನ್ನು ಕಟ್ಟೆಯ ಮೇಲೆ ಇರಿಸುವರು. ಧ್ವಜಾವರೋಹಣ ನಡೆಯುತ್ತದೆ. ನಂತರ ಮರುದಿನ ಸಂಪ್ರೋಕ್ಷಣೆ ಅಭಿಷೇಕ ಮಾಡುವರು. ಮಧ್ಯಾಹ್ನ ವಾರ್ಷಿಕ ಪರ್ವಸೇವೆಯನ್ನು ಅಣ್ಣಪ್ಪ ದೇವರಿಗೆ ಮಾಡುವರು. ಸಂಜೆ ಮಲರಾಯ ದೈವಸ್ಥಾನದಲ್ಲಿ ನೇಮೋತ್ಸವ ಸೇವೆ ಮಲರಾಯ ದೈವಕ್ಕೆ ಜರಗುವುದು.
ದೇವಸ್ಥಾನದ ಸಂಪರ್ಕ:
ಕದ್ರಿ ಶ್ರೀ ಮಂಜುನಾಥ ದೇವಸ್ಥಾನ
ಕದ್ರಿ, ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ – 575002
ದೂರವಾಣಿ ಸಂಖ್ಯೆ : 91-824-2214176
ಫ್ಯಾಕ್ಸ್ ಸಂಖ್ಯೆ : 0824-2225294
ಇ-ಮೇಲ್ ವಿಳಾಸ : shreekadritemple@gmail.com