ನೃತ್ಯ ಎಂದರೆ ಸಾಕು ಎಲ್ಲರ ಕಿವಿ ನಿಮಿರುವುದು.

ನೃತ್ಯ ಎಂದರೆ ಸಾಕು ಎಲ್ಲರ ಕಿವಿ ನಿಮಿರುವುದು.

ಮೈ ಮನಕ್ಕೆ ಮುದ ನೀಡುವ ನೃತ್ಯ ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದೆ. ಮನೋರಂಜನೆ ಮಾತ್ರವಲ್ಲದೆ ದೈಹಿಕ ಕ್ಷಮತೆ, ಆರೋಗ್ಯಕ್ಕಾಗಿಯೂ ಜನ ನೃತ್ಯದ ಮೊರೆ ಹೋಗುತ್ತಿದ್ದಾರೆ. ಯುನೆಸ್ಕೋದ ಮಾನ್ಯತೆ ಪಡೆದಿರುವ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ITI) ಏಪ್ರಿಲ್ 29 ನ್ನು ” ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ” ಎಂದು ಘೋಷಿಸಿದೆ. ವಿಶ್ವದೆಲ್ಲೆಡೆ ಈ ದಿನವನ್ನು ಕಲಾವಿದರು ಸಂಭ್ರಮದಿಂದ ಆಚರಿಸುತ್ತಾರೆ.
ನೃತ್ಯ ಸಂಬಂಧಿತ ಕಾರ್ಯಕ್ರಮ, ತರಬೇತಿ,ಕಾರ್ಯಾಗಾರ , ಜಾಗೃತಿ ,ಪ್ಲಾಷ್ ಮೊಬ್ ಗಳನ್ನೂ ಆಯೋಜಿಸಲಾಗುತ್ತದೆ. ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ ಅಂಗವಾಗಿ ವಿಶೇಷ ಲೇಖನ ಇಲ್ಲಿದೆ.

ನೃತ್ಯ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ನೃತ್ಯದ ಇತಿಹಾಸವನ್ನು ಕರಾರುವಕ್ಕಾಗಿ ಹೇಳುವುದು ಕಷ್ಟ. ಲಭ್ಯವಿರುವ ಪುರಾವೆಗಳ ಪ್ರಕಾರ 30,000 ವರ್ಷಗಳ ಹಿಂದೆ ಮಾನವನ ಜೀವನದಲ್ಲಿ ನೃತ್ಯ ಹಾಸು ಹೊಕ್ಕಾಗಿತ್ತು. ಲಭ್ಯವಿರುವ ಅತೀ ಪ್ರಾಚೀನ ಪುರಾವೆ ಭಾರತದಲ್ಲೇ ದೊರೆತಿರುವುದು ನಮ್ಮ ಹೆಮ್ಮೆ. ಮಧ್ಯ ಪ್ರದೇಶ ರಾಜ್ಯದ ರೈಸನ್ ಜಿಲ್ಲೆಯ ಬಿಂಬೆಟ್ಕ (Bhimbetka) ದಲ್ಲಿ ಸುಮಾರು ಹತ್ತು ಕಿ. ಮೀ. ದೂರ ವ್ಯಾಪಿಸಿರುವ ಕಲ್ಲಿನ ಗುಹೆಗಳಲ್ಲಿ ಕಂಡು ಬರುವ ಚಿತ್ರಗಳು 30000 ವರ್ಷ ಹಳೆಯದು. ಇಲ್ಲಿ ಬಿಡಿಸಲಾಗಿರುವ ಚಿತ್ರಗಳಲ್ಲಿ ನೃತ್ಯದ ಸನ್ನಿವೇಶಗಳು ಕಾಣಸಿಗುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

 ಎಲ್ಲಕ್ಕೂ ಮುಖ್ಯವಾಗಿ ಜಗತ್ತಿಗೆ ನಾಟ್ಯಶಾಸ್ತ್ರ ಎಂಬ ಮಹಾನ್ ಗ್ರಂಥವನ್ನು ನೀಡಿದ ಹೆಗ್ಗಳಿಕೆಯೂ ಭಾರತದಾಗಿದೆ. ಈಜಿಪ್ಟ್ ಹಾಗೂ ಗ್ರೀಕರ ಇತಿಹಾಸದಲ್ಲೂ ನೃತ್ಯದ ಉಲ್ಲೇಖಗಳು  ಕಂಡುಬರುತ್ತದೆ. ಭಾರತದ ಪುರಾಣಗಳಲ್ಲಿ ಮಾತ್ರವಲ್ಲ ಕ್ರೈಸ್ತರ ಧರ್ಮಗ್ರಂಥ ಬೈಬಲ್ ನಲ್ಲು ನೃತ್ಯದ ಉಲ್ಲೇಖಗಳಿವೆ.
ನೃತ್ಯ ಮಾನವನ ವಿಕಾಸದ ಹಾದಿಯಲ್ಲಿ ಅವನ ಜೊತೆಜೊತೆಗೆ ಸಾಗಿ ಬಂದಿದೆ. ಅಚ್ಚರಿಯ ವಿಷಯವೆಂದರೆ ಭಾಷೆ ಬರವಣಿಗೆಯನ್ನೂ ಕಲಿಯುವ  ಮುನ್ನವೇ ಮಾನವ ನೃತ್ಯವನು ಕರಗತ ಮಾಡಿಕೊಂಡಿದ್ದ  , ಸಂವಹನ ನಡೆಸಲು ಸಹ ನೃತ್ಯವನ್ನು ಬಳಸುತ್ತಿದ್ದರು. ನಾಗರಿಕತೆ ಬೆಳೆದಂತೆ ನೃತ್ಯದ ಸ್ವರೂಪವು ಬದಲಾಗತೊಡಗಿತು. ಮಾನವ ಕೃಷಿಯನ್ನು ಕಲಿತ ,ಕೃಷಿಯಿಂದ ಆಯಾಸವಾದಾಗ ನೃತ್ಯದಲ್ಲಿ ಹಿತವನ್ನು ಕಂಡ. ಹಬ್ಬಗಳ ಆಚರಣೆ ಮಾಡಲು ಆರಂಭಿಸಿದ ನೃತ್ಯದಿಂದ ಅದಕ್ಕೊಂದು ಹೊಸ ಮೆರುಗು ನೀಡಿದ. ಮದುವೆ,ಹುಟ್ಟು ಸಾವು ಎಲ್ಲಾ ಸಂದರ್ಭದಲ್ಲಿಯೂ ನೃತ್ಯದ ಅಗತ್ಯ ಮನಗಂಡ. ಕೊನೆಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲೂ ನೃತ್ಯ ಮಾಡುವ ಪರಿಪಾಠ ಬೆಳೆದು ಬಂತು.ಇಂದಿಗೂ ಆಯಾ ಪ್ರಾಂತ್ಯದ ವಿಶಿಷ್ಟ ನೃತ್ಯಗಳನ್ನು ನಾವು ಕಾಣಬಹುದು. ಕೆಲ ಪ್ರದೇಶಗಳಲ್ಲಿ ಚಿಕಿತ್ಸೆಗಾಗಿಯೂ ನೃತ್ಯವನ್ನು ಬಳಸಲಾಗುತ್ತಿತ್ತು.ಒಟ್ಟಾರೆ ನೃತ್ಯ ಮಾನವನ ಜೀವನದ ಅವಿಭಾಜ್ಯ ಅಂಗವಾಯಿತು.

ಭರತ ಮುನಿಗಳು ರಚಿಸಿದ “ನಾಟ್ಯ ಶಾಸ್ತ್ರ” ,6000 ಶ್ಲೋಕಗಳ 36 ಅಧ್ಯಾಯಗಳ ಜ್ಞಾನಭಂಡಾರ. ನಾಟ್ಯ ಮಾತ್ರವಲ್ಲ ಅಭಿನಯ ,ಸಂಗೀತ , ವಸ್ತ್ರಾಲಂಕಾರ, ವೇದಿಕೆ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಸಮಗ್ರ ಮಾಹಿತಿಯನ್ನು ನೀಡುತ್ತದೆ. ಇದನ್ನು ಪಂಚಮ ವೇದ ಎಂದೂ ಕರೆಯುತ್ತಾರೆ. ಭರತನಾಟ್ಯವು ಭಾರತ ದೇಶದ ಪ್ರಮುಖ ಶಾಸ್ತ್ರೀಯ ನೃತ್ಯ ವಾಯಿತು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಭರತನಾಟ್ಯ ,ಕಟಕ್, ಕೂಚುಪುಡಿ, ಕಥಕಳಿ,ಮೋಹಿನಿ ಅಟ್ಟಂ, ಒಡಿಸಿ, ಮಣಿಪುರಿ, ಸತ್ರಿಯ ಹೀಗೆ 8 ನೃತ್ಯ ಪ್ರಕಾರಗಳಿಗೆ ಶಾಸ್ತ್ರೀಯ ನೃತ್ಯದ ಸ್ಥಾನಮಾನ ನೀಡಿದೆ.

ಶಾಸ್ತ್ರ ಬದ್ಧವಾಗಿ ರಚಿಸಲ್ಪಟ್ಟ ನೃತ್ಯ ಶಾಸ್ತ್ರೀಯ ನೃತ್ಯವಾದರೆ, ಜನರಿಂದ ಬೆಳೆದು ಬಂದ ನೃತ್ಯ ಜಾನಪದ ನೃತ್ಯಗಳು .ಅಂದಾಜಿನ ಪ್ರಕಾರ ಭಾರತದಲ್ಲಿ 1500ಕ್ಕು
ಹೆಚ್ಚು ಜನಪದ ನೃತ್ಯಗಳಿವೆ. ಇವು ಜನರ ಕೌಟುಂಬಿಕ, ಸಾಮಾಜಿಕ ,ಧಾರ್ಮಿಕ ಆಚರಣೆಗಳೊಂದಿಗೆ ಬೆಸೆದು ಕೊಂಡಿದೆ. ಜಾನಪದ ಮಾನವನ ನಾಡಿಮಿಡಿತ. ಅವುಗಳ ಸೊಗಸೇ ಬೇರೆ. ಜಾನಪದ ನೃತ್ಯದ ಜೊತೆ ಜನಪದ ಸಾಹಿತ್ಯ,ಸಂಗೀತ,ವಾದ್ಯಗಳು ಬೆರೆತುಕೊಂಡಿದೆ. ಇವುಗಳ ಸಮಾಗಮ ಅದ್ಭುತ ಲೋಕವನ್ನೇ ಸೃಷ್ಟಿಸುತ್ತವೆ.
ಇನ್ನು ಜನರನ್ನು ಸಮ್ಮೋಹನಗಳಿಸುವ ಸಿನಿಮಾ ನೃತ್ಯಗಳು ಭಾರತೀಯ ಚಿತ್ರರಂಗದ ಕೊಡುಗೆ.ಇವುಗಳ ಸಂಯೋಜನೆಗೆ ನಿರ್ದಿಷ್ಟ ಚೌಕಟ್ಟು ಆಗಲಿ ,ಕಟ್ಟುಪಾಡುಗಳಾಗಲಿ ಇಲ್ಲಾ. ಸನ್ನಿವೇಶಕ್ಕೆ ಅನುಗುಣವಾಗಿ ನೃತ್ಯ ಸಂಯೋಜಿಸಲಾಗುವುದು.

ವಿದೇಶಿ ಅದರಲ್ಲೂ ಪಾಶ್ಚಾತ್ಯ ನೃತ್ಯಗಳು ಇಂದು ಭಾರತದ ಮೂಲೆ ಮೂಲೆಗೂ ತಲುಪಿದೆ. ಇವುಗಳ ಕುರಿತಾಗಿ ಪ್ರತ್ಯೇಕ ಲೇಖನದಲ್ಲಿ ಹೇಳುತ್ತೇನೆ. ಹಿಪ್ ಹಾಪ್, ಕಾಂಟೇಂಪೊರರಿ , ಬೆಲ್ಲಿ, ಸಾಲ್ಸಾ , ಜಾಝ್, ಟ್ಯಾಪ್, ಲ್ಯಾಟಿನ್ ಸೇರಿದಂತೆ ಹಲವಾರು ನೃತ್ಯ ಪ್ರಕಾರಗಳು ಜಗತಿನಾದ್ಯಂತ ಪ್ರಚಲಿತದಲ್ಲಿದೆ. ಅದರಲ್ಲೂ ಶಾಸ್ತ್ರೀಯ ನೃತ್ಯವಾದ ಬ್ಯಾಲೆಟ್ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.

ಆಧುನಿಕ ಬ್ಯಾಲೆಟ್ ನೃತ್ಯಕ್ಕೆ ಹೊಸ ಭಾಷ್ಯ ಬರೆದ ಜೀನ್ ಜಾರ್ಜೆಸ್ ನೋವೇರೆ (1727 – 1810 )ಅವರ ಜನ್ಮದಿನವನ್ನು “ಅಂತಾರಾಷ್ಟ್ರೀಯ ನೃತ್ಯ ದಿನ” ವಾಗಿ ಆಚರಿಸಲಾಗುತ್ತದೆ . ಇಂಟರ್ ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್(ITI) ಪ್ರದರ್ಶನ ಕಲೆಗಳ ಬೆಳವಣಿಗೆಗಾಗಿ ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ಸಂಸ್ಥೆ. ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ವಿಶ್ವ ನೃತ್ಯ ದಿನಾಚರಣೆಯ ಜವಾಬ್ದಾರಿಯನ್ನು ಈ ಸಂಸ್ಥೆಗೆ ವಹಿಸಲಾಗಿದೆ.1948ರಿಂದ ಕಾರ್ಯನಿರತ ವಾಗಿರುವ ITI ನ ಮುಖ್ಯ ಕಚೇರಿ ಪ್ಯಾರಿಸ್ ನಲ್ಲಿದೆ. ಅಂತರಾಷ್ಟ್ರೀಯ ನೃತ್ಯ ದಿನದಂದು ITI ನ ವತಿಯಿಂದ ಸಾಂಕೇತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇದಕ್ಕಾಗಿ ಒಂದು ನಗರವನ್ನು ಆಯ್ದುಕೊಳ್ಳಲಾಗುತ್ತದೆ. ಅಲ್ಲಿ ಆಹ್ವಾನಿತ ಕಲಾವಿದರು ಹಾಗೂ ತಜ್ಞರಿಂದ ನೃತ್ಯ ಪ್ರದರ್ಶನ, ಕಾರ್ಯಾಗಾರ , ಭಾಷಣ, ತಜ್ಞರೊಂದಿಗೆ ಸಂವಾದ, ವಾರ್ಷಿಕ ಯೋಜನೆಗಳು, ನೃತ್ಯದ ಮೂಲಕ ಸಾಮಾಜಿಕ ಕೊಡುಗೆಗೆ ಯೋಜನೆ ,  ಮುಂತಾದ ಕಾರ್ಯಕ್ರಮಗಳನು ನಡೆಸಲಾಗುತ್ತದೆ. ಜೊತೆಗೆ ಪ್ರತಿ ವರ್ಷ ” ನೃತ್ಯ ದಿನದ ಸಂದೇಶ” ನೀಡಲು ಒಬ್ಬ ಸಾಧಕ ( Message Author) ನನ್ನು ಆಯ್ಕೆ ಮಾಡಿರುತ್ತಾರೆ. ಭಾರತದ ಚೇತನಾ ಜಲನ್ 1986 ರಲ್ಲಿ ಇಂತಹ ಅವಕಾಶ ಪಡೆದಿದ್ದರು.  ಈ ವರ್ಷ ಈಜಿಪ್ಟ್ ನ ಕರಿಮ ಮನ್ಸೂರ್ (Karima Mansour) ಸಂದೇಶ ಲೇಖಕರಾಗಿ ಆಯ್ಕೆಯಾಗಿದ್ದಾರೆ .

“ನೃತ್ಯ ಎಂದರೆ ಕೇವಲ ಮನೋರಂಜನೆ ಮಾತ್ರವಲ್ಲ.ನೃತ್ಯದಿಂದ ಶಾರೀರಿಕ – ಮಾನಸಿಕ ಬಲವರ್ಧನೆ, ದೇಹದ ಬಾಗುವಿಕೆ, ಶಕ್ತಿ, ದೈಹಿಕ ಕ್ಷಮತೆ, ಏಕಾಗ್ರತೆ , ನೆನಪಿನ ಶಕ್ತಿ ವೃದ್ದಿಯು ಆಗುತ್ತದೆ.ಲವಲವಿಕೆ ,ಹುರುಪು ಹೆಚ್ಚಾಗುವುದು. ಸ್ಪೋರ್ಟ್ಸ್ ಡ್ಯಾನ್ಸ್ ಸಂಸ್ಥೆಯ ಪ್ರಕಾರ ನೃತ್ಯವನ್ನು ಕ್ರೀಡೆಯಾಗಿ ಪರಿಗಣಿಸಲಾಗುವುದು.ಶಾಲೆಗಳಲ್ಲಿ ನೃತ್ಯವನ್ನು ಅದರಲ್ಲೂ ಜಾನಪದ ನೃತ್ಯಗಳನ್ನು ಸಹ ಒಂದು ವಿಷಯವಾಗಿ ಪರಿಗಣಿಸಿ ,ನೃತ್ಯ ಕಲಿಕೆಯನ್ನು ಖಡ್ಡಾಯವಾಗಿಸಿದರೆ ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ವಿಕಸನದೊಂದಿಗೆ ನಮ್ಮ ಸಂಸ್ಕೃತಿಯೊಂದಿಗಿನ ಸಂಬಂಧವೂ ಗಾಢವಾಗುತ್ತದೆ.” —ವಿನೋದ್ ಕರ್ಕೇರ

About the Author

✍. ವಿನೋದ್‌ ಕರ್ಕೆರ

More posts by Vinod Karkera >

0 0 votes
Article Rating
Subscribe
Notify of
guest
0 Comments
Inline Feedbacks
View all comments