ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ

Reading Time: 9 minutes

ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ

“ದೇವದೂತ ಮಹಮದ್” ಎಂದು ಮದೀನದ ಮಸೀದಿಯ ಬಾಗಿಲಿನಲ್ಲಿ ಕೆತ್ತಲ್ಪಟ್ಟಿರುವುದು

ಪ್ರವಾದಿ ಮುಹಮ್ಮದ್(ಸ) ಸರ್ವಲೋಕಗಳಿಗೆ ಅನುಗ್ರಹವಾಗಿ ಕಳಿಸಲಾಗಿದೆಯೆಂದು ಪವಿತ್ರ ಖುರ್‍ಆನ್ ಹೇಳುತ್ತದೆ.(ಪವಿತ್ರ ಖುರ್‍ಆನ್ 21:107)ಅಂದರೆ ಅವರು ಕೇವಲ ಮನುಕುಲಕ್ಕೆ ಮಾತ್ರವಲ್ಲದೇ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಿಗೂ ಅನುಗ್ರಹವಾಗಿದ್ದಾರೆ.

ಪ್ರವಾದಿಮುಹಮ್ಮದ್(ಸ)ರವರರು ಅಂದಿನ ಎಲ್ಲಾ ಯುವಕರಂತೆ ಅನಕ್ಷರಸ್ಥರಾಗಿದ್ದರು. ದೇವಚರ(ಜಿಬ್ರೀಲ್)ಆಗಮಿಸಿ ” ಓದಿರಿ” ಎಂದು ಆದೇಶಿಸಿದಾಗ “ನಾನು ಓದು ಬರಹ ಬಲ್ಲವನಲ್ಲ” ಎಂದು ಯಾವುದೇ ಸಂಕೋಚವಿಲ್ಲದೇ ಉತ್ತರಿಸಿದ್ದರು.

ಮಹಮ್ಮದರ ಮೊಹರು

ಓದಿರಿ ನಿಮ್ಮನ್ನು ಸೃಷ್ಠಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ, ಅವನು ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಮಾನವನನ್ನು ಸೃಷ್ಠಿಸಿದನು. ಓದಿರಿ ಮತ್ತು ನಿಮ್ಮ ಪ್ರಭು ಬಹಳ ಉದಾರಿ. ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು. ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು. ಹೀಗೆ ದೇವನು ಅಪಾರ ಅನುಗ್ರಹದಿಂದ ಪ್ರವಾದಿ ಮುಹಮ್ಮದ್(ಸ)ರವರಿಗೆ ವಿದ್ಯೆಯನ್ನು ದಯಪಾಲಿಸಿದರು. ಹೌದು,ಅಂದು ಅರೇಬಿಯಾದ ಆ ಮಕ್ಕಾ ನಗರವು ಅಕ್ರಮ, ಅನಾಚಾರ, ಅಶ್ಲೀಲತೆ, ಅತ್ಯಾಚಾರ, ಮೋಸ, ದರೋಡೆ, ವಂಚನೆ ಹಾಗೂ ಮೂಡನಂಬಿಕೆಗಳ ಕೇಂದ್ರವಾಗಿತ್ತು. ಸಣ್ಣಪುಟ್ಟ ವಿಷಯಗಳಿಗೆ ವರ್ಷಗಟ್ಟಲೇ ಯುಧ್ದಗಳು ನಡೆಯುತ್ತಿದ್ದವು. ಹೆಣ್ಣು ಎಂದರೆ ಕೇವಲ ಬೋಗದ ವಸ್ತು ಎಂಬಂತೆ ಕಾಣುತ್ತಿದ್ದರು. ಹೆಣ್ಣು ಕೂಸು ಹುಟ್ಟಿ ಅದು ಜೀವಂತವಿದೆ ಎಂದು ಅರಿತರೆ ಅದನ್ನು ಜೀವಂತ ಹೂಳಲು ಹೇಸದ ಜನರು ಅಂದಿನ ಕಾಲಘಟ್ಟದಲ್ಲಿದ್ದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಇಂತಹ ಸಂಧರ್ಭದಲ್ಲಿ ಪ್ರವಾದಿ ಮುಹಮ್ಮದ್(ಸ)ರವರು ಬಾಲ್ಯದಿಂದಲೇ ಎಲ್ಲಾ ಕೆಡುಕುಗಳಿಂದ ದೂರವಿದ್ದರು. ಮಾತ್ರವಲ್ಲ, ಬಾಲ್ಯದಿಂದಲೇ ತನ್ನಲ್ಲಿ ಉತ್ತಮ ಚಾರಿತ್ರ್ಯವನ್ನು ಕಾಯ್ದುಕೊಂಡು ಬಂದಿದ್ದರು. ಸಮಾಜದಲ್ಲಿ ಅಧಾರ್ಮಿಕತೆ, ಅನೈತಿಕತೆಗೆ ಬೇಸೆತ್ತು ಹಿರಾ ಎಂಬ ಗುಹೆಯಲ್ಲಿ ಒಬ್ಬಂಟಿಯಾಗಿ ಧ್ಯಾನ ಮಗ್ನರಾಗಿರುವುದು ಅವರ ಎಂದಿನ ವಾಡಿಕೆಯಾಗಿತ್ತು. ಮುಂದೆ ತಮ್ಮ ನಲ್ವತ್ತನೇ ವಯಸ್ಸಿನಲ್ಲಿ ದೇವನ ಪ್ರವಾದಿಯಾಗಿ ನಿಯುಕ್ತಗೊಂಡರು. ನಂತರ ನಿರಂತರ ತಮ್ಮ ಕೊನೆಯ ಉಸಿರಿರುವ ತನಕ ಜನರನ್ನು ಒಳಿತಿನೆಡೆಗೆ ಆಹ್ವಾನಿಸಿ ವಿಶ್ವದ ನೈಜ ದೇವನ ಉಪಾಸನೆ, ಪರಿಶುಧ್ಧ ನೈತಿಕ ಬದುಕಿನ ಭೋದನೆಯನ್ನು ಯಾವ ಪ್ರವಾದಿಗಳು ಮತ್ತು ಋಷಿ ಮುನಿಗಳು ನೀಡುತ್ತಾ ಬಂದಿದ್ದರೆ, ಅದನ್ನೇ ಪ್ರವಾದಿ ಮುಹಮ್ಮದ್ (ಸ)ನೀಡಿದರು. ಅಂದರೆ ಅಂದಿನ ಮಹಾನ್ ವ್ಯಕ್ತಿಗಳು ಬೋದಿಸಿದ ಶಿಕ್ಷಣಕ್ಕಿಂತ ಭಿನ್ನವಾಗಿ ಪ್ರವಾದಿ ಮುಹಮ್ಮದ್(ಸ) ಒಂದು ದೇವರ ಕಲ್ಪನೆ ಮತ್ತು ಶುಷ್ಕ ನೈತಿಕತೆಯನ್ನು ಬೋದಿಸಲಿಲ್ಲ. ಅಂದರೆ ಪ್ರವಾದಿ(ಸ) ಅವರಿಗಿಂತ ಮುಂಚೆ ಮಾನವನಿಗೆ ದೇವನ ಅಸ್ತಿತ್ವ ಮತ್ತು ಆತನು ಏಕನು ಎಂಬುದರ ಅರಿವಿತ್ತು ಎಂಬುದರಲ್ಲಿ ಎರಡು ಮಾತಿರಲಿಲ್ಲ. ಅಂದರೆ ತತ್ವ ಸಿದ್ದಾಂತಕ್ಕೂ, ಮಾನವ ಚಾರಿತ್ರ್ಯಕ್ಕೂ ಏನು ಸಂಭಂದ ಎಂಬುದರ ಅರಿವು ಅವರಿಗೆ ಇರಲಿಲ್ಲ.


ದೇವನ ಮೇಲಿನ ನಂಬಿಕೆಯು ಕೇವಲ ತತ್ವಶಾಸ್ತ್ರೀಯ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲವೆಂದು ಅವರು ಹೇಳಿದರು. ದೇವ ಭಕ್ತಿಯಿಂದ ಹುಟ್ಟುವ ಚಾರಿತ್ರ್ಯವು ಕೇವಲ ಕುಟೀರಗಳ ನಾಲ್ಕು ಗೋಡೆಗೊಳಳಗಿನ ಮೂಲೆಯಲ್ಲಿ ಗೋಚರವಾಗುವಂತಹ ವಿಶಿಷ್ಟ ಪುರೋಹಿತ ವರ್ಗಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಅದು ಸಂಪೂರ್ಣ ಮಾನವ ಬದುಕು ಹಾಗೂ ಅದರ ಒಂದೊಂದು ಹಂತದಲ್ಲೂ ವ್ಯಾಪಕವಾಗಿ ಗೋಚರವಾಗಬೇಕು. ಅಂದರೆ ಓರ್ವ ವ್ಯಾಪಾರಿ ದೇವಭಕ್ತನಾಗಿದ್ದರೆ ಅವನ ವ್ಯಾಪಾರದಲ್ಲಿ ದೇವಭಕ್ತಿಗನುಸಾರವಾಗಿ ಚಾರಿತ್ರ್ಯವು ಪ್ರಕಟವಾಗದಿರಲು ಸಾಧ್ಯವಿಲ್ಲ. ಓರ್ವ ನ್ಯಾಯಾಧೀಶನು ದೇವಭಕ್ತಿಯುಳ್ಳವನಾಗಿದ್ದರೇ ನ್ಯಾಯ ಪಾಲನೆಯಲ್ಲಿ, ಓರ್ವ ಕಾನೂನು ಪಾಲಕ ದೇವಭಕ್ತಿಯುಳ್ಳವನಾಗಿದ್ದರೆ ಅವನ ವೃತ್ತಿಯಲ್ಲಿ ದೇವಭಕ್ತಿಗೆ ವಿರುಧ್ದವಾದ ಚಾರಿತ್ರ್ಯ ಪ್ರಕಟವಾಗದಿರಲು ಸಾಧ್ಯವಿಲ್ಲ. ಅದೇ ರೀತಿ ಒಂದು ದೇಶ ಮತ್ತು ಜನಾಂಗವು ದೇವಭಕ್ತಿಯನ್ನು ಮೈಗೂಡಿಸಿಕೊಂಡಿದ್ದರೆ ಅದರ ನಾಗರಿಕ ಜೀವನದಲ್ಲಿ ಅದರ ಆಡಳಿತ ವ್ಯವಸ್ಥೆಯಲ್ಲಿ, ವಿದೇಶಾಂಗ ನೀತಿಗಳಲ್ಲಿ ಹಾಗೂ ಯುಧ್ದ ಸಂಧಾನಗಳಲ್ಲಿ ದೇವಭಕ್ತಿಯನುಸಾರ ಚಾರಿತ್ರ್ಯ ಪ್ರಕಟವಾಗಬೇಕು ಅನ್ಯಥಾ ದೈವ ನಂಬಿಕೆಯಲ್ಲಿ ಅರ್ಥವಿಲ್ಲ.

ಮಹಮ್ಮದರು ಧ್ಯಾನಮಗ್ಧರಾಗುತ್ತಿದ್ದ ಹಿರಾ ಗುಹೆಯಿರುವ ಬೆಟ್ಟ

ಹೀಗೆ ಪ್ರವಾದಿ ಮುಹಮ್ಮದ್(ಸ) ತಮ್ಮ ಜೀವನದುದ್ದಕ್ಕೂ ಅತ್ಯನ್ನತ ಮಟ್ಟದ ಚಾರಿತ್ರ್ಯ ಹಾಗೂ ಜೀವನ ನೈರ್ಮಲ್ಯವನ್ನು ಕಾಯ್ದುಕೊಂಡರು. ಮಾತ್ರವಲ್ಲ ಅದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟು ಮಾದರಿಯಾದರು.

ಪ್ರವಾದಿ (ಸ) ರ ಸಂದೇಶ ಸಮಸ್ತ ಮಾನವರಿಗಾಗಿದೆ. ವರ್ಣ, ವರ್ಗ, ಭಾಷೆ ಮತ್ತು ದೇಶ ಎಂಬ ಭಿನ್ನತೆಗಳನ್ನು ಬದಿಗೊತ್ತಿ ಮನುಷ್ಯನನ್ನು ಮನುಷ್ಯನೆಂಬ ನೆಲೆಯಲ್ಲಿ ಅಭಿಸಂಬೋದಿಸುತ್ತಾರೆ. ಮತ್ತು ಸಮಸ್ತ ಮಾನವರ ಅಭ್ಯುದಯಕ್ಕೆ ಬೇಕಾದ ಕೆಲವು ಆದರ್ಶಗಳನ್ನು ಮುಂದಿಡುತ್ತಾರೆ. ಈ ಆದರ್ಶಗಳನ್ನು ಒಪ್ಪಿಕೊಂಡ ಪ್ರತಿಯೊಬ್ಬನು ಮುಸ್ಲಿಮನೆನಿಸಿಕೊಳ್ಳುತ್ತಾನೆ. ಅವನು ಕರಿಯನಾಗಲಿ, ಬಿಳಿಯನಾಗಲಿ, ಅರಬಿಯಾಗಲಿ ಅಥವಾ ಅರಬೇತರನಾಗಿರಲಿ ಅವನು ಯಾವ ದೇಶ ಮತ್ತು ಕುಲಗೋತ್ರದಲ್ಲಿ ಹುಟ್ಟಿದವನೇ ಆದರು ಪ್ರವಾದಿ (ಸ) ಸಂದೇಶದ ಅಭಿಸಂಬೋದಿತನೇ ಆಗಿದ್ದಾನೆ. ಅವನು ಪ್ರವಾದಿವರ್ಯರ ಆಧರ್ಶಗಳನ್ನು ಒಪ್ಪಿಕೊಳ್ಳುವ ಸರ್ವಸಾಮಾನ್ಯವಾದ ಹಕ್ಕುಗಳೊಂದಿಗೆ ಮುಸ್ಲಿಂ ಸಮುದಾಯದಲ್ಲಿ ಸೇರ್ಪಡೆಯಾಗುತ್ತಾನೆ.

ವಿಶ್ವಾಸದ ಏಕತೆ ಮತ್ತು ಒಡಮಾಡಿದ ಬಳಿಕ ಮನುಷ್ಯನನ್ನು ಮುನುಷ್ಯದಿಂದ ಪ್ರತ್ಯೇಕಿಸುವ ಯಾವುದೇ ತೆರನಾದ ಭೇದ ಬಾವ , ಅಸ್ಪ್ರಶ್ಯತೆ, ಉಚ್ಛ ನೀಚತೆ ಕುಲ-ಗೋತ್ರಗಳ ಭಿನ್ನತೆ, ಭಾಷೆ, ರಾಷ್ಟ್ರ ಮತ್ತು ಭೌಗೋಳಿಕ ವ್ಯತ್ಯಾಸಗಳು ಈ ಸಮುದಾಯದಲ್ಲಿ ಅಸ್ತಿತ್ವದಲ್ಲಿಲ್ಲ. ಮಾನವ ಕುಲಕೆ ಸ್ವಾತಂತ್ರದ ಈ ಸನದನ್ನು ಸತ್ಯಧರ್ಮದ ಹೊರತು ಮತ್ಯಾರು ನೀಡಿಲ್ಲ. ಸೃಷ್ಠಿಕರ್ತನ ದಾಸರು ಅವನ ವಿನಾಃ ಇನ್ಯಾರ ದಾಸರೂ ಆಗಿರಬಾರದು. ಎಲ್ಲಿಯವರೆಗೆಂದರೆ ಪ್ರವಾದಿಗಳ ದಾಸತನವನ್ನು ಒಪ್ಪಿಕೊಳ್ಳುವಂತಿಲ್ಲ.

ಹೀಗೆ ಕೇವಲ 23 ವರ್ಷಗಳ ತಮ್ಮ ಜೀವನದ ಅತಿ ಸಂಕ್ಷಿಪ್ತ ಅವದಿಯಲ್ಲಿ ಸಂಪೂರ್ಣ ಅರೇಬಿಯಾವನ್ನು ಬಹು ದೈವಾರಾಧನೆ, ಮೂಡ ನಂಬಿಕೆ, ವ್ಯಕ್ತಿ ಪೂಜೆ ಹಾಗೂ ಪೌರೋಹಿತ್ಯ ವ್ಯವಸ್ಥೆಯಿಂದ ಏಕ ದೇವಾರಾಧನೆಯೆಡೆಗೆ ಅರ್ಥಹೀನ ಜನಾಂಗೀಯ ಕಲಹಗಳಿಂದ ಒಗ್ಗಟ್ಟು ಮತ್ತು ಭಾವೈಕ್ಯತೆಯೆಡೆಗೆ, ಮಧ್ಯಪಾನ ಹಾಗೂ ವ್ಯಭಿಚಾರಗಳಿಂದ ದೇವಭಕ್ತಿಯೆಡೆಗೆ, ಅರಾಜಕತೆಯಿಂದ ಶಿಸ್ತು ಬದ್ದ ಮಾದರಿ ಯೋಗ್ಯ ಜೀವನದೆಡೆಗೆ, ನೈತಿಕ ಅಧಃಪತನದಿಂದ ಉತ್ಕ್‍ಷ್ಠತೆಯಡೆಗೆ ಪರಿವರ್ತಿಸಿ, ಹೆಚ್ಚು ನಗಣ್ಯವೆನ್ನುವ ಕಾಲದಲ್ಲಿ ಗಣ್ಯವೆನ್ನುವ ಭಾವ ಬಿತ್ತಿ ಸ್ತ್ರೀ ಸಬಲೀಕರಣಕ್ಕೆ ಚಾಲನೆ ನೀಡಿ ಮಾನವ ಇತಿಹಾಸವೇ ನಂಬಲ ಸಾಧ್ಯವಾಗದ ಅಧ್ಬುತಗಳೆಲ್ಲವನ್ನು ಕೇವಲ ಎರಡು ದಶಕಗಳಲ್ಲಿ ಸಾಧಿಸಿದ ಮಹಾನ್ ಮಾರ್ಗದರ್ಶಕರಾಗಿ ಹೊರಹೊಮ್ಮಿದರು. ಬದುಕಿನ ಎಲ್ಲಾ ಹಂತಗಳಲ್ಲೂ ಮಾನವಕುಲಕ್ಕೆ ಮಾದರಿಯಾಗಿ ಅಂದರೆ, ಮಾದರಿ ನ್ಯಾಯಾಪಾಲಕನಾಗಿ, ಮಾದರಿ ಅಧಿಕಾರಿಯಾಗಿ, ಮಾದರಿ ಶಿಕ್ಷಕರಾಗಿ, ಹಾಗೂ ಕೌಟುಂಬಿಕ ವ್ಯವಸ್ಥೆಯಲ್ಲಿ ಮಾದರಿ ಪತಿ, ಮಾದರಿ ತಂದೆಯಾಗಿ ಇಡೀ ಮನುಕುಲಕ್ಕೆ ಬೆಳಕಾಗಿದ್ದರು. ಜೀವನವೇ ಬೋದನೆ, ಬೋದನೆಯೇ ಜೀವನವಾಗಿ ನುಡಿದಂತೆ ನಡೆದ ಮೇರು ವ್ಯಕ್ತಿತ್ವನ್ನು ಮೈಗೂಡಿಸಿಕೊಂಡ ಪ್ರವಾದಿ ವರ್ಯರು ಅರೇಬೀಯಾದ ಮರಳುಗಾಡಿನ ಗಡಿದಾಟಿ ಜಗತ್ತಿನಾದ್ಯಂತ ಅತೀ ಹೆಚ್ಚು ಅನುಯಾಯಿಗಳನ್ನು ಗಳಿಸಿಕೊಂಡರು.

                     ಅದಕ್ಷ ಆಡಳಿತಗಾರರು, ಭ್ರಷ್ಟ ಅಧಿಕಾರಿಗಳು, ಸ್ತ್ರೀ ಲಂಪಟರು, ಹಾಗೂ ನಕಲಿ ಬಾಬಾಗಳು ತುಂಬಿರುವ ಪ್ರಸ್ತುತ ಸಮಾಜದಲ್ಲಿ ಸಹಸ್ರ ಘಟ್ಟಲೇ ಅನುಯಾಯಿಗಳನ್ನು ಹೊಂದಿದ್ದ ಪ್ರವಾದಿ ಮುಹಮ್ಮದ್(ಸ) ರ ಸರಳತೆ ಹಾಗೂ ಆಧರ್ಶವನ್ನು ಅವಲೋಕಿಸಬೇಕಾದ ಅಗತ್ಯವಿದೆ. ತನ್ನನ್ನು ಕಂಡಕೂಡಲೇ ತನ್ನ ಅನುಚರರು ಎದ್ದು ನಿಲ್ಲುವುದನ್ನು ಸಹಿಸದ ಆ ಮಹಾನ್ ಪ್ರವಾದಿಯ ಚರ್ಯೆಯು ನಮಗೆ ಮಾದರಿಯಾಗಬೇಕಾಗಿದೆ. ಸಾಮಾನ್ಯರಲ್ಲಿ ಸಾಮಾನ್ಯನಾಗಿ, ಅನುಚರರೊಂದಿಗೆ ಸೇರಿ ಒಬ್ಬ ವಿದ್ಯಾರ್ಥಿಯಾಗಿ, ಕಾರ್ಮಿಕನಾಗಿ ಹಾಗೂ ಇಡೀ ಅರೇಬಿಯಾ ಉಪ ಭೂಖಂಡದ ಅಧಿಕಾರ ಕೈಯಲ್ಲಿದ್ದರೂ ಯಾವುದೇ ಪ್ರಲೋಭನೆಗೊಳಗಾಗಗದೇ, ಸಿಂಹಾಸನ ಕಿರೀಟ ರಹಿತ ರಾಜನಾಗಿ ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು.

 ಸೃಷ್ಠಿಕರ್ತನಿಂದ ಜಿಬ್ರೀಲ್(ದೇವದೂತ) ಮುಖಾಂತರ ವಹ್‍ಯ್ಯ್(ದಿವ್ಯವಾಣಿ) ಪಡೆಯುತ್ತಿದ್ದ ಪ್ರವಾದಿ ವರ್ಯರು ತನ್ನ ಅನುಯಾಯಿಗಳು ಏಕದೇವಾರಾಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆನೀಡಿದರು, ಮಾತ್ರವಲ್ಲದೇ ಪ್ರವಾದಿಗಳು ಸೇರಿದಂತೆ ಯಾವುದೇ ಮಹಾನ್ ವ್ಯಕ್ತಿಗಳು ದೇವನಿಗೆ ಸಮವಲ್ಲವೆಂದು ಸಾರುವುದರ ಮೂಲಕ ಪ್ರವಾದಿಗಳು ಸೃಷ್ಠಿಕರ್ತನ ಸೃಷ್ಠಿ ಹೊರತು ಮತ್ಯಾವ ವಿಶೇಷ ಗುಣಲಕ್ಷಣಗಳನ್ನು ಹೊಂದಿಲ್ಲವೆಂದು ಸಾರಿದರು. ತನ್ನ ಅನುಯಾಯಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸುವುದರ ಮೂಲಕ ಕೆಲವೊಂದು ಸಂಧರ್ಭಗಳಲ್ಲಿ ಪ್ರವಾದಿವರ್ಯರು ಅನುಯಾಯಿಗಳ ಸಲಹೆಯನ್ನು ಪಡೆಯುತ್ತಿದ್ದರು. ಆಫ್ರಿಕನ್ ಮೂಲದ ನೀಗ್ರೋ ವಂಶದ ಬಿಲಾಲ್ ರವರನ್ನು ಮಸೀದಿಯ ಕರೆ(ಆಝಾನ್)ನೀಡಲು ಆಹ್ವಾನಿಸುವುದರ ಮೂಲಕ ವರ್ಣವ್ಯವಸ್ಥೆಯ ವಿರುಧ್ದ ಡಂಗುರ ಸಾರಿದರು.

                                               ವೈಚಾರಿಕತೆ ಮತ್ತು ಅಂಧಾನುಕರಣೆ ಇವೆರಡು ತದ್ವಿರುಧ್ದ ಪದಗಳು. ಉತ್ತಮ ಸಮಾಜದ ನಿರ್ಮಾಣಕ್ಕೆ ವೈಚಾರಿಕತೆ ಅಗತ್ಯ ಹಾಗೂ ಅಂದಾನುಕರಣೆಯ ಮೂಲಕ ಕುರಿಗಳು ಹಳ್ಳಕ್ಕೆ ಬೀಳುವಂತೆ ನಾಗರಿಕ ಸಮಾಜವು ಅನಾಗರಿಕತೆಯ ಪ್ರಪಾತಕ್ಕೆ ಬೀಳುವುದು ಖಚಿತ. ಈ ಹಿನ್ನೆಲೆಯಲ್ಲಿ ಸೃಷ್ಠಿಕರ್ತನಿಂದ ದೇವವಾಣಿ ಪಡೆಯುತ್ತಿದ್ದರೂ ತನ್ನ ಅನುಯಾಯಿಗಳ ಅಭಿಪ್ರಾಯ ಪಡೆಯುತಿದ್ದ ಪ್ರವಾದಿ ವರ್ಯರು ಶತಮಾನಗಳ ಹಿಂದೆ ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಬೇರುಗಳನ್ನು ಗಟ್ಟಿಗೊಳಿಸಿದ್ದರು. ಯೂಪ್ರಟಿಸ್ ನದಿ ದಡದಲ್ಲಿ ಒಂದು ನಾಯಿ ಅಥವಾ ಒಂಟೆಯು ಹಸಿವಿನ ಪ್ರಾಣ ಕಳೆದುಕೊಂಡರೇ ಸೃಷ್ಠಿಕರ್ತನ ಸನ್ನಿದಿಯಲ್ಲಿ ಆಡಳಿತಗಾರನಾದ ನಾನು ಹೊಣೆಗಾರನಾಗುತ್ತೆನೆಂದು ಆಡಳಿತದಲ್ಲಿ ಜಾಗರೂಕತೆಯನ್ನು ವಹಿಸುತ್ತಿದ್ದ ಹಝರತ್ ಉಮರ್ ರಂತಹ ದಕ್ಷ, ನ್ಯಾಯಿಕ ಆಡಳಿತಗಾರರನ್ನು ನೀಡಿದ ಪ್ರವಾದಿ ಮುಹಮ್ಮದ್ (ಸ) ರವರು ಇಂದಿನ ಆಡಳಿತಗಾರರಿಗೆ ಮಾದರಿಯಾಗಬೇಕಾಗಿದೆ.

About Author

ಯಂ.ಯಂ.ಅಬ್ದುಲ್ಲಾ
ಹಿಲ್ ರೋಡ್,ಮಡಿಕೇರಿ
ಮೊಬೈಲ್ 9844066582

 

More posts by M.M.Abdullah;

Follow On

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments