ಹುಳಿಯಾರರ "ತಯಾರಿ"ಯಲ್ಲೊಂದು ದಿನ

ಹುಳಿಯಾರರ "ತಯಾರಿ"ಯಲ್ಲೊಂದು ದಿನ

ಹುಳಿಯಾರ್!… ನಟರಾಜ್ ಹುಳಿಯಾರ್ ಪ್ರಸಿದ್ಧ ಅಂಕಣಕಾರ. ಯಾವುದೋ ವಿಚಾರಗಳ ಬಗ್ಗೆ ಮಾಡಿಟ್ಟುಕೊಳ್ಳುವ ಟಿಪ್ಪಣಿಗಳೇ ಅವರ ಬರಹ ಶಕ್ತಿಯ ಒಳಗುಟ್ಟು ಹೌದು. ಅವರ ಅಂಕಣಗಳು ಹಾಗೂ ಕೆಲವು ಪುಸ್ತಕಗಳನ್ನು ಓದಿದಾಗ ಈತ ಬ್ರಹ್ಮಾಂಡದ ಎಲ್ಲಾ ಪುಸ್ತಕಗಳನ್ನು ತಿರುವಿ ಹಾಕಿರಬಹುದೆಂದೇ ಭಾವಿಸುತ್ತಿದ್ದೆ. ಅವರ ಕಡಲೆಗನ್ನಡವನ್ನೇ ಅಗಿದು-ಜಗಿದು ಓದುವ ಸಾಲುಗಳಲ್ಲಿ ಕಬ್ಬಿಣ ಕನ್ನಡವೂ ಸೇರಿಕೊಂಡಿದ್ದಾಗ ಆ ಪುಸ್ತಕವನ್ನೇ ಬದಿಗೆ ಸರಿಸಿ ಮತ್ತಿನ್ಯಾವತ್ತೂ ಆ ಪುಸ್ತಕವನ್ನು ಸವರಿ ಪ್ರೀತಿಯಿಂದ ಅಪ್ಪಿಕೊಂಡದ್ದೂ ಉಂಟು.

         ಇದರ ನಡುವೆ 2018ರ ಕೈಲ್‍ಪೋಳ್ದನ್ನು (ಕೊಡಗಿನ ಕೃಷಿ ಹಬ್ಬ) ಶಾಸ್ತ್ರ ಮಾಡಿದ್ದ ಕೆಲವು ದಿನ ಕಳೆದು 16.09.2018ರಂದು ಸೆಲ್ ಫೋನಿಗೊಂದು ಅನಾಮಧೇಯ ನಂಬರಿಂದ “ಇಂದಿನ ಪ್ರಜಾವಾಣಿಯಲ್ಲಿ ಹುಳಿಯಾರರ ಕಥೆಯೊಂದು ಬಂದಿದೆ ಓದಿಬಿಡಿ” ಎಂದು ಬಂದಿತ್ತು. ಆ ದಿನ ಭಾನುವಾರ ಪ್ರಕಾಶ್ ರೈಯವರ ಕಾಲಂ ಕೂಡ ಇರುತ್ತೆ. ಈ ಕಥೆಯನ್ನಾಗಲೀ ಆ ದಿನದ ಪತ್ರಿಕೆಯನ್ನಾಗಲಿ ಮಿಸ್ಸ್ ಮಾಡಿಕೊಳ್ಳುವ ಅವಕಾಶ ಇರಲೇ ಇಲ್ಲ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

‘ತಯಾರಿ’ ಕಥೆಯ ಕಥಾನಾಯಕ ಒಬ್ಬ ವಿಜ್ಞಾನಿ. ಕೇವಲ ವಿಜ್ಞಾನಿಯಲ್ಲ. ಪ್ರಸಿದ್ಧಿಯ ಶಿಖರದತ್ತ ದಾಪುಗಾಲು ಹಾಕುತ್ತಿರುವವನು. ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಂಶೋಧನೆಗಳಿಂದ ಹೆಸರು ಮಾಡಿದ ವಿಜ್ಞಾನಿ. ಆತನಿಗೊಂದು ದಿನ ಅನಾಮಧೇಯ ಕರೆಯೊಂದು ಬರುತ್ತದೆ. “ಸರ್, ಈ ನಂಬರ್‍ಗೆ ತಿರುಗಿ ಫೋನ್ ಮಾಡಬೇಡಿ. ನಾನೇ ನಿಮ್ಮನ್ನ ಭೇಟಿ ಮಾಡಿ ಹೆಚ್ಚಿನ ಮಾಹಿತಿ ನೀಡುತ್ತೇನೆ. ಸದ್ಯದಲ್ಲಿ ನೀವು ಅಪಾಯದಲ್ಲಿದ್ದೀರಿ ಎಚ್ಚರವಾಗಿರಿ”

           ವಿಜ್ಞಾನಿ ಬಹಳಷ್ಟು ತಲೆಕೆಡಿಸಿಕೊಳ್ಳುತ್ತಾನೆ. ಫೋನ್ ಮಾಡಿದ್ದು ಯಾರು? ಆತ ನನಗೆ ನಾಳೆ ಮಾಹಿತಿ ಒದಗಿಸಬಹುದಾ? ನನ್ನ ಕೊಲೆಗೆ ಯಾರು ಸಂಚು ನಡೆಸುತ್ತಿರಬಹುದು. ನನ್ನ ಅಭಿವೃದ್ಧಿ ಸಹಿಸದವರಾ? ಅಥವಾ ನಾನು ಮಾಡುತ್ತಿರುವ ಸಂಶೋಧನೆಯ ಮಾಹಿತಿಗಾಗಿ ನನ್ನನ್ನು ಅಪಹರಿಸಿಬಿಡುತ್ತಾರಾ? ಹಾಗಾದರೆ ಯಾವ ದೇಶದವರು? ಉಗ್ರಗಾಮಿಗಳಾ? ಹೀಗೆ ಒಂದರ ಹಿಂದೊಂದು ಪ್ರಶ್ನೆಗಳು ವಿಜ್ಞಾನಿಯನ್ನು ಕಾಡಲು ತೊಡಗುತ್ತದೆ.

             ಅತಿಯಾಗುವಷ್ಟು ಯೋಚನೆ ಮಾಡಿ ಮಾಡಿ ಒಂದೋ ನಾನು ಅಪಹರಣವಾಗುತ್ತೀನಿ ಅಥವಾ ಕೊಲೆಯಾಗುತ್ತೀನಿ ಎಂಬ ತೀರ್ಮಾನಕ್ಕೆ ಬರುತ್ತಾನೆ. ಹಾಗಾಗಿ ತನ್ನ ಅಂತಿಮ ಕ್ಷಣವನ್ನು ಕಣ್ಣಲ್ಲೆಲ್ಲಾ ತುಂಬಿಕೊಂಡು ನರಳುತ್ತಾನೆ. ಆ ವಿಜ್ಞಾನಿ ಬ್ರಹ್ಮಚಾರಿ ಬೇರೆ!.

ಸರಿ ಯಾವುದಕ್ಕೂ ಒಂದು ವಿಲ್ (ಉಯಿಲು) ಬರೆದಿಡುವುದು ಒಳ್ಳೆಯದು ಎಂಬ ಯೋಚನೆ ಬಂದು ಅದ್ಯಾವುದೋ ಅನಾಥಾಶ್ರಮ ಹಾಗೂ ತನ್ನೆರಡು ನಂಬಿಕಸ್ಥ ಸೇವಕರಿಗೆ ಒಂದಷ್ಟು ತನ್ನ ಸಂಪತ್ತನ್ನು ಹಂಚಿ ಬಿಡಲು ಯೋಚಿಸಿ….. ಬಿಳಿ ಹಾಳೆ ಹಾಗೂ ಪೆನ್ನ್ ತೆಗೆದುಕೊಂಡು ರೀಡಿಂಗ್ ರೂಮ್‍ನ ಟೇಬಲ್‍ನಲ್ಲಿ ಕೂತು ಮತ್ತಷ್ಟು ಮತ್ತಷ್ಟು ಪ್ರಶ್ನೆಗಳು ಬಿಳಿಹಾಳೆಯ ಮುಂದೆ ಹಾದುಹೋಗುತ್ತಲೇ ಇತ್ತು. ಕೊನೆಯದಾಗಿ ನಿಧಾನಕ್ಕೆ ಲೇಖನಿಯನ್ನು ತೆಗೆದುಕೊಂಡು ಒಂದು ಪಿಸ್ತೂಲಿಗೆ ಅರ್ಜಿ ಹಾಕುತ್ತಾನೆ. ಹುಳಿಯಾರರ ‘ತಯಾರಿ’ ಕಥೆ ಇಲ್ಲಿಗೆ ಮುಗಿಯುತ್ತದೆ. ನಂತರ ಪ್ರಾರಂಭವಾಗುವುದೇ ನನ್ನಂಥ ಓದುಗನ ಗೋಳು.

                         ಓದುಗರಲ್ಲಿ ಹಲವಾರು ತರಹದ ಓದುಗರು ಇರುತ್ತಾರೆ. ಶಾಲಾ ಕಾಲೇಜು ದಿನಗಳಿಂದ ಹಿಡಿದು ಉದ್ಯೋಗ ಹಿಡಿದು/ರೈತಾಪಿ ಮಾಡಿಕೊಂಡು ಇತರೆ, ಇತರೆ ಓದುಗರು. ಪ್ರತಿಯೊಬ್ಬರು ಒಂದಲ್ಲ ಒಂದು ಬಾರಿ ಅದ್ಯಾವುದೋ ಕಾರಣಕ್ಕೆ ತಾವುಗಳು ನಡೆಸಿಕೊಂಡ ತಯಾರಿಯ ಪ್ಲಾಶ್ ಬ್ಯಾಕ್‍ಗೆ ಹೋಗಿ ಬಿಡುತ್ತಾರೆ. ಸಣ್ಣ ತರಗತಿಯಲ್ಲಿ ಯಾರದೋ ಪೆನ್ಸಿಲ್ ಕದ್ದ ದಿನವೇ ಟೀಚರ್ ಕರಿತಾರೆ ಬಾ ಎಂದ ಕ್ಷಣ. ಕಾಲೇಜಿನಲ್ಲಿ ಪ್ರೇಮಪತ್ರವನ್ನು ಹುಡುಗಿಯ ಕೈ ತಲುಪಿಸಿದಂದೇ ಪ್ರಿನ್ಸಿಪಾಲ್ ಚೇಂಬರ್‍ಗೆ ಆಹ್ವಾನ ಬಂದಾಗ? ಕಛೇರಿಯ ಕೆಲಸದೊತ್ತಡದಲ್ಲಿ ಯಾರೊಂದಿಗೋ ರೇಗಿ ರಂಪ ರಗಳೆ ಮಾಡಿದಂದೇ ಮ್ಯಾನೇಜರ್ ಬರಹೇಳಿದ್ದಾರೆ ಎಂದು ಪ್ಯೂವನ್ ಹೇಳಿಹೋದಾಗ? ಹೆಂಡತಿಗೆ ಒಲ್ಲದ ಕೆಲಸವನ್ನು ರಾಜಗಾಂಭೀರ್ಯದಲ್ಲಿ ಮಾಡಿ ಮನೆಗೆ ಬಂದ ದಿನವೇ ಮನೆಯಾಕೆ, ಮಾತಾಡಿಸಬೇಡಿ ಎಲ್ಲಾ ಗೊತ್ತಾಯಿತು. ಬೆಳಿಗ್ಗೆ ಎಲ್ಲರಿಗೂ ಬರಲು ಹೇಳ್ತಿನಿ. ನಾನೀ ಮನೆಯಲ್ಲಿ ಇರೊಲ್ಲ ಎಂಬ ಬಾಂಬ್ ಸಿಡಿಸಿದಾಗ… ಹೀಗೆ ಹೀಗೆ ಹುಳಿಯಾರರ ‘ತಯಾರಿ’ ಯೊಳಗಡೆ ಕಥೆ ಓದಿ ಮುಗಿಸಿದ ಕ್ಷಣದಲ್ಲಿ ‘ಭಾವನಾ’ ಲೋಕಕ್ಕೆ ಒಬ್ಬೊಬ್ಬರು ಒಂದೊಂದು ತರಹದಲ್ಲಿ ಹೋಗಿಬಿಡುತ್ತಾರೆ.

                       ನಾನು ಹೆಚ್ಚು ಸದ್ದುಗದ್ದಲವಿಲ್ಲದ ಬಾರೊಂದರಲ್ಲಿ ಕೂತು ಭಾನುವಾರದ ವಿಶೇಷಗಳ ಬಗ್ಗೆ ಕಣ್ಣಾಡಿಸಿ ಪ್ರಕಾಶ್ ರೈಯ ಅಂಕಣವನ್ನು ಓದಿ ‘ತಯಾರಿ’ಯನ್ನು ಮುಗಿಸಿದಾಗ ನನ್ನದೂ ಒಂದು ಲಾರ್ಜ್ ಮುಗಿದಿತ್ತು. ‘ತಯಾರಿ’ಯಿಂದಾಗಿ ಗತಕಾಲಕ್ಕೆ ಹೊರಟು ನಿಂತಿದ್ದ ನಾನು ಮತ್ತೊಂದು ಲಾರ್ಜ್ ರಿಪೀಟ್ ಅಂದೆ. ಕೆಲವರುಷಗಳ ಹಿಂದೆ ಕೊಡಗಿನಲ್ಲಿ ಪ್ರಗತಿಪರ ಚಿಂತಕರ ವೇದಿಕೆಯನ್ನು ಕಟ್ಟಿ ವೇದಿಕೆ ಮುಖಾಂತರ ಕೆಲವು ಪ್ರಬಲರ ವಿರುದ್ಧ ಕೋಮುವಾದಿಗಳ ವಿರುದ್ದ ಧ್ವನಿ ಎತ್ತಿದ್ದೆ. ಆ ಸಂದರ್ಭದಲ್ಲಿ ಅನುಭವಸ್ಥ ಹಿರಿಯ ಹೋರಾಟಗಾರರೊಬ್ಬರು “ನೋಡು ಇನ್ನು ಮುಂದೆ ರಾತ್ರಿ ಓಡಾಟಗಳನ್ನು ನಿಲ್ಲಿಸು. ರಾತ್ರಿಯ ಮದುವೆಗಳು ಗುಂಡುಪಾರ್ಟಿ ಇತ್ಯಾದಿಗಳನ್ನೆಲ್ಲಾ ನಿಲ್ಲಿಸಿಬಿಡು. ಶತ್ರುಗಳು ಮುಖಾಮುಖಿ ಆಗದೇನೆ ಅವರ ಕೆಲಸ ಮಾಡುವ ಬುದ್ದಿವಂತರು ಎಚ್ಚರ” ಎಂದು ನನಗೆ ಎಚ್ಚರಿಕೆ ಕೊಡುತ್ತಾರೆ.

ಹುಳಿಯಾರರ ವಿಜ್ಞಾನಿಯಂತೆ ನಾನು ಏನೇನೋ ತಯಾರಿ ಮಾಡಿಕೊಂಡು ಆಡಿಸುವವರ ಚೇಲಗಳ ಕೈಗೆ ಸಿಕ್ಕುಬಿದ್ದು ಸ್ಟೇಷನ್ ಕೋಟ್ ಅಲೆದಾಡಿದ್ದೆ. ಪಾಕಡ ಶತ್ರುಗಳಂತೂ ಕೊನೆಗೂ ರಾಜಿಗೆ ಬಂದು ನಿಂತು ಸಮಸ್ಯೆ ಬಗೆಹರಿಸಿಕೊಂಡು ಬಿಟ್ಟಿದ್ದರು.

 

                ಮೇಲಿನ ನೆನಪುಗಳು ಜಾರಿಕೊಳ್ಳುತ್ತಿದ್ದಂತೆ ದಿ.ಮಾಜಿ ಪ್ರಧಾನಿ ಇಂದಿರಾಗಾಂಧಿ ನೆನಪಾದರು. ಅಂಗರಕ್ಷಕರಿಂದಲೇ ಅಂತ್ಯಗೊಳಿಸಿಕೊಂಡ ಹಿಂದಿನ ತಯಾರಿಯ ಕಲ್ಪನಾಲೋಕಕ್ಕೆ ಹೋಗುತ್ತಲೆ… ರಾಜೀವ್ ಗಾಂಧಿ ನಂತರದ ಪ್ರಧಾನಿಯಾದಾಗ ಅವರ ರಕ್ಷಣೆಗೆ ಎಂತಹ ತಯಾರಿ ನಡೆಸಿದ್ದರಬಹುದು. ಹಾಗಾಗಿಯೂ ಮಾನವ ಬಾಂಬ್‍ನಿಂದ ಅಂತ್ಯ ಕಂಡ ಕ್ಷಣಕ್ಕೆ ತಯಾರಿ ಎಷ್ಟು ಮಾಡಿದರೂ ಮುಗಿಯದು ಛೇ? ಎಂದು ಎರಡನೇ ಲಾರ್ಜ್ ಅರ್ಧ ಮುಗಿಸಿ ತಲೆಕೊಡವಿಕೊಂಡೆ. ಈ ಬಾವಾಲೋಕಕ್ಕೆ ಮುಳುಗುವಾಗಲೇ ‘ತಯಾರಿ’ಯಾಗಿ ಮೊಬೈಲ್ ಸ್ವಿಚ್ ಆಫ್ ಮಾಡಿ ನೆಮ್ಮದಿಯಲ್ಲಿದ್ದೆ.

ಇದೀಗ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದಾರೆ. ಶಂಕಿತ ಕೆಲವರನ್ನು ಬಂಧಿಸಿದ್ದಾರೆ. ಅವರುಗಳು ಮೋದಿಯನ್ನು ರಾಜೀವ್ ಗಾಂಧಿ ಹತ್ಯೆ ಶೈಲಿಯಲ್ಲಿ ಸಂಚು ರೂಪಿಸಿದ್ದರು ಎಂಬುದಾಗಿ ಪತ್ರಿಕೆಯೊಂದರಲ್ಲಿ ಓದಿದ್ದು, ಆ ಕ್ಷಣದಲ್ಲಿ ಮನಸ್ಸಿಗೆ ಬಂದು ಹೋಯಿತು. ಯಾಂತ್ರಿಕವಾಗಿ ಗ್ಲಾಸ್‍ಗೆ ಕೈ ಹಾಕಿ ಬಾಯಿ ಹತ್ತಿರ ತಂದಿಟ್ಟಾಗಲೇ ಅರಿವಾದದ್ದು ಎರಡನೇ ಲಾರ್ಜ್ ಖಾಲಿಯಾಗಿದ್ದು, ಮತ್ತೊಮ್ಮೆ ರಿಪೀಟ್ ಅಂದೆ. ಖಾಲಿ ಕೈಗೊಂದು ಸಿಗರೇಟ್ ಅಂಟಿಸಿ ಉಂಗುರದಂತೆ ಹೊಗೆಬಿಡುತ್ತಿದ್ದಾಗ ಗಾಂಧಿಯ ನೆನಪು ಗಾಂಧಿಯ ಅಂತ್ಯ ಕಾಣಿಸಲು ಆ ದಿನಗಳ ತಯಾರಿ ಹೇಗಿದ್ದಿರಬಹುದು……. ಎಂದು ಚಿಂತಿಸುತ್ತಿರುವಾಗಲೇ “ಸರ್ ಲಾರ್ಜ್” ಅಂದ ಬಾರ್‍ಮೆನ್. ಸೀಪ್ ಮಾಡುತ್ತಾ ತಲೆಕೊಡವಿಕೊಂಡು ಮತ್ತೊಂದು ದೀರ್ಘ ದಂ ಎಳೆದು ಸುರುಳೀ ಹೊಗೆ ಬಿಡುತ್ತಾ ಕಂಡೆ ಅಚ್ಚೆ ದಿನ್ ಕನಸ್ಸು…….

                           ಬಲಿಷ್ಟ ರಾಷ್ಟ್ರ ನಮ್ಮದು. ಪ್ರಧಾನಿಯಾಗಿ ಪ್ರಪಂಚವೆಲ್ಲಾ ಸುತ್ತಿದ್ದಾರೆ. ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಅವರೊಂದಿಗಿದೆ. ಹಾಗಿದ್ದೂ ಅವರ ‘ತಯಾರಿ’ಗಳು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ಇಂದಿರಾಗಾಂಧಿ ರಾಜೀವ್ ಗಾಂಧಿಯಂತಹ ಹತ್ಯೆ ಈ ದೇಶದಲ್ಲಿ ಇನ್ನೆಂದೂ ನಡೆಯದಿರಲಿ. ದೇಶದ ಸಾರಥಿಯ ರಕ್ಷಣೆಗೆ ಪ್ರತಿನಿತ್ಯ ‘ತಯಾರಿ’ ನಡೆಯಲಿ ಅವರುಗಳ ಹತ್ಯೆ ಕನಸು ಹೊತ್ತವರು ‘ತಯಾರಿ’ ನಡೆಸುತ್ತಲೇ ಮಣ್ಣಾಗಲಿ. ದೇಶದ ಪ್ರೀತಿಯ ನೇತಾರನನ್ನೇ ಉಳಿಸಿಕೊಳ್ಳಲಾಗದ ನಮ್ಮ ವ್ಯವಸ್ಥೆ ದೇಶವನ್ನು ಹೇಗೆ ರಕ್ಷಿಸಿಕೊಳ್ಳಬಲ್ಲದು… ಹೀಗೇ ಮೂರನೇ ಲಾರ್ಜ್‍ನಲ್ಲಿ ದೇಶದ ‘ತಯಾರಿ’ಗಳ ಬಗ್ಗೆ ತಲೆಸಿಡಿದು ಹೋಗುವಷ್ಟು ಪ್ರಶ್ನೆಗಳು.

                               ನಟರಾಜ್ ಹುಳಿಯಾರರಿಗೂ ಅವರ ‘ತಯಾರಿ’ಗೂ ಶಾಪ ಹಾಕುತ್ತಲೇ ಇದಿಷ್ಟು ಹೊತ್ತು ಸ್ವಿಚ್ ಆಫ್ ಮಾಡಿ ಕೂತಿದ್ದ ನಾನು ಮನೆ ತಲುಪಿ ಅಲ್ಲಿ ಬರುವ ಬಿರುಸು ಬಾಣಗಳನ್ನು ತಪ್ಪಿಸಿಕೊಳ್ಳುವ ‘ತಯಾರಿ’ ನಡೆಸಿ ಕೊನೆಗೊಂದು ತೀರ್ಮಾನ ಮಾಡಿ ಮೂರನೇ ಲಾರ್ಜ್‍ನ ಕೊನೆ ಸಿಪ್ ಮುಗಿಸಿ ಮೊಬೈಲ್ ಸ್ವಿಚ್ ಅನ್ ಮಾಡಿ ಮನೆಗೆ ಹೊರಟೆ.

ದಾರಿಯಲ್ಲಿ ಮತ್ತೆ ಕಾಡಿದ್ದು ‘ತಯಾರಿ’ಯ ವಿಜ್ಞಾನಿ ವಿಲ್ ಬರೆಯಲು ಹೊರಟವ, ಪಿಸ್ತೂಲ್‍ಗೆ ಅರ್ಜಿ ಬರೆದದ್ದು.

0 0 votes
Article Rating
Subscribe
Notify of
guest
0 Comments
Inline Feedbacks
View all comments