ಕೊಡಗಿನ ಬೇತ್ರಿ ಸೇತುವೆಯ ಸುತ್ತ ಒಂದು ನೋಟ
ಬೇತ್ರಿ ಸೇತುವೆ ಮೂರ್ನಾಡು-ವಿರಾಜಪೇಟೆಗೆ ಸಂಪರ್ಕಿಸುವ ಜೀವನದಿ ಕಾವೇರಿಗೆ ಅಡ್ಡಲಾಗಿ ಕಟ್ಟಲ್ಪಟ್ಟ ಸೇತುವೆ. ಈ ಸೇತುವೆಯು ಬೈಂದೂರು-ವಿರಾಜಪೇಟೆಗೆ ರಾಜ್ಯ ಹೆದ್ದಾರಿಯ ಒಂದು ಪ್ರಮುಖ ಸೇತುವೆಯೂ ಹೌದು. ಮಡಿಕೇರಿ-ವಿರಾಜಪೇಟೆಯ ಅತಿ ಮುಖ್ಯ ರಸ್ತೆಯ ಬೇತ್ರಿ ಎಂಬಲ್ಲಿ 1955 ರಲ್ಲಿ ಈ ಸೇತುವೆಯು ಸಂಚಾರಕ್ಕೆ ಮುಕ್ತವಾಯಿತು. ಬೇತ್ರಿ ಸೇತುವೆಯ ಬಗ್ಗೆ ತಿಳಿಯದ ಕೆಲವು ಸಂಗತಿಗಳ ಬಗ್ಗೆ ಒಂದಿಷ್ಟು ಮಾಹಿತಿ.
ಭಾರತದ ಸಂವಿಧಾನದ ಪ್ರಕಾರ 26 ಜನವರಿ 1950 ರಂದು ಕೂರ್ಗ್ ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಭಾರತ ಒಕ್ಕೂಟದಲ್ಲಿ 1950 ರಿಂದ 1956 ರವರೆಗೂ ಅಸ್ತಿತ್ವದಲ್ಲಿದ್ದ ಕೂರ್ಗ್ ರಾಜ್ಯವು ಪಾರ್ಟ್-ಸಿ ರಾಜ್ಯವಾಗಿತ್ತು. 1950 ರ ಜನವರಿ 26 ರಂದು ಭಾರತದ ಸಂವಿಧಾನವು ಜಾರಿಗೆ ಬಂದಾಗ, ಅಸ್ತಿತ್ವದಲ್ಲಿರುವ ಬಹುತೇಕ ಪ್ರಾಂತ್ಯಗಳು ರಾಜ್ಯಗಳಾಗಿ ಪುನರ್‍ರ್ನಿರ್ಮಿಸಲ್ಪಟ್ಟವು. ಹೀಗಾಗಿ, ಕೂರ್ಗ್ ಪ್ರಾಂತ್ಯವು ಕೂರ್ಗ್ ರಾಜ್ಯವಾಯಿತು. ಸಂವಿಧಾನದ ಜಾರಿಗೆ ಮುಂಚಿತವಾಗಿ, ಕೂರ್ಗ್ ಭಾರತದ ಡೊಮಿನಿಯನ್(ಸ್ವತಂತ್ರ) ಪ್ರಾಂತ್ಯವಾಗಿತ್ತು. ಕೂರ್ಗ್ ರಾಜ್ಯವನ್ನು ಕನ್ವಾರ್ ಬಾಬಾ ದಯಾ ಸಿಂಗ್ ಬೇಡಿ, 1950 ರಿಂದ 1956 ರ ಮುಖ್ಯ ಕಮಿಷನರ್ ಆಗಿ ಆಳಿದರು. ಇದರ ರಾಜಧಾನಿ ಮರ್ಕರಾವಾಗಿತ್ತು (ಈಗಿನ ಮಡಿಕೇರಿ). ಸರ್ಕಾರದ ಮುಖ್ಯಸ್ಥರಾಗಿ ಚೆಪ್ಪುಡಿರ ಪೂಣಚ್ಚರವರು 27 ಮಾರ್ಚ್ 1952 ರಿಂದ 31 ಅಕ್ಟೋಬರ್ 1956ರವರಗೆ ಕೂರ್ಗ್ ಪ್ರಾಂತ್ಯದ ಮೊಟ್ಟಮೊದಲ ಹಾಗೂ ಕೊನೆಯ ಮುಖ್ಯಮಂತ್ರಿಯಾಗಿದ್ದರು. 1956 ರ ನವೆಂಬರ್ 1 ರಂದು ರಾಜ್ಯ ಮರುಸಂಘಟನೆ ಕಾಯಿದೆ ಪ್ರಕಾರ ಕೂರ್ಗ್ ರಾಜ್ಯವನ್ನು ರದ್ದುಪಡಿಸಲಾಯಿತು. ನಂತರ ಕೂರ್ಗ್ ರಾಜ್ಯವನ್ನು ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯವನ್ನು 1973 ರಲ್ಲಿ ಕರ್ನಾಟಕ ಎಂದು ಮರು ನಾಮಕರಣಗೊಂಡಿತು. ಪ್ರಸ್ತುತ, ಕೊಡಗು, ಜಿಲ್ಲೆಯಾಗಿ ಕರ್ನಾಟಕ ರಾಜ್ಯದಲ್ಲಿದೆ.
ಆಗಿನ ಕೂರ್ಗ್ ಚೀಪ್ ಕಮಿಷನರ್‍ರಾದ ಕನ್ವಾರ್ ದಯಾಸಿಂಗ್ ಬೇಡಿ ಐ.ಪಿ.ಎಸ್, 1953 ಮಾರ್ಚ್ 29ರಂದು ಬೇತ್ರಿ ಸೇತುವೆಗೆ ಶಂಕುಸ್ಥಾಪನೆ ಮಾಡಿದರು. ಈ ಸೇತುವೆಯ ವಿನ್ಯಾಸ ಮತ್ತು ನಿರ್ಮಾಣದ ಹೊಣೆಯನ್ನು ಕೇಂದ್ರ ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿತ್ತು. ಇದಾಗಿ ಕೇವಲ ಮೂರು ವರ್ಷಗಳಲ್ಲಿ ಅಂದರೆ ದಿನಾಂಕ 29ನೇ ಮೇ 1955ರಲ್ಲಿ ಅಂದಿನ ಕೇಂದ್ರ ಸಾರಿಗೆ ಮತ್ತು ರೈಲ್ವೆ ಮಂತ್ರಿಗಳಾಗಿದ್ದ, ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಉದ್ಘಾಟಿಸಿ ಸಂಚಾರಕ್ಕೆ ಮುಕ್ತಗೊಳಿಸಿದರು. ಆಗಿನ ಸಂದರ್ಭದಲ್ಲಿ ಕೇವಲ ಮೂರು ವರ್ಷಗಳಲ್ಲಿ ನಿಮಾರ್ಣವಾದ ಬೇತ್ರಿ ಸೇತುವೆಯ, ಈಗಿನ ಕಾಲದ ಸಾಮಾನ್ಯ ಸೇತುವೆಯಂತಲ್ಲಾ ಈ ಸೇತುವೆಯ ವಿನ್ಯಾಸ ಹಾಗೂ ನಿಮಾರ್ಣ ಶೈಲಿಯು ವಿಶಿಷ್ಟವಾಗಿದೆ. ಸ್ವಾತಂತ್ರ್ಯಾ ನಂತರ ನಿಮಾರ್ಣಗೊಂಡ ಒಂದು ಉತ್ತಮ, ವಿಶಿಷ್ಟ ಸೇತುವೆಯ ಸಾಲಿನಲ್ಲಿ ಬೇತ್ರಿ ಸೇತುವೆಯು ಒಂದು.
ಮೇಲ್ಭಾಗದಲ್ಲಿ ಸಾಮಾನ್ಯ ಸೇತುವೆಯಂತೆ ಕಾಣುವ ಬೇತ್ರಿ ಸೇತುವೆಯ ತಲಭಾಗವು ಕಮಾನು ಆಕೃತಿಯಲ್ಲಿದ್ದು, ಕಾಂಕ್ರೀಟು ಹಾಗೂ ಗ್ರಾನೈಟ್ ಕಲ್ಲುಗಳಿಂದ ನಿಮಾರ್ಣಗೊಂಡಿದೆ. ಇದು ಒಂದು ಇಂಜಿನಿಯರ್ ನಿಮಾರ್ಣದ ಅದ್ಭುತ ಕಲಾ ಕೌಶಲ್ಯವಾಗಿದೆ. ಇದೀಗ ಬೇತ್ರಿ ಸೇತುವೆಗೆ 63 ವಸಂತಗಳು ಪೂರ್ಣಗೊಂಡಿವೆ. ದಿನವೊಂದಕ್ಕೆ 1000ಕ್ಕೂ ಹೆಚ್ಚು ವಾಹನಗಳು ಸಂಚರಿಸುವ ಈ ಗಟ್ಟಿಮುಟ್ಟಾದ ಸೇತುವೆಯು, ಈ ವರ್ಷ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದ ಜಲಪ್ರಳಯದಲ್ಲಿ ಸಂಪೂರ್ಣ ಜಲಾವೃತಗೊಂಡಿತು. ಈ ಮೊದಲು ಹಲವಾರು ಬಾರಿ ಬೇತ್ರಿ ಸೇತುವೆಯು ಜಲಾವೃತಗೊಂಡಿದ್ದರೂ, ಸೇತುವೆಯು ಅಲುಗಾಡದೆ ಇರುವುದು ಆಗಿನ ಗುಣಮಟ್ಟದ ಕಾಮಗಾರಿಯ ಪ್ರತೀಕವಾಗಿದೆ. ಸೇತುವೆಯ ಉದ್ಘಾಟನೆಯ ನಂತರ ಸೇತುವೆಯ ಮೇಲೆ ಸಂಚರಿಸಿದ ಮೊದಲ ವಾಹನ ಅಪ್ಪಾರಂಡ ತಿಮ್ಮಯ್ಯನವರ ಮರ್ಸಿಡಿಸ್ ಬೆಂಜ್ಹ್ ಕಾರು ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿಯವರೆಗಿನ ಸುಧೀರ್ಘ 63ವರ್ಷದಲ್ಲಿ ಸಾವಿರ,ಲಕ್ಷ, ಕೋಟಿಗೂ ಮಿಗಿಲು ಹಲವು ರೀತಿಯ ವಾಹನಗಳು, ಬೇತ್ರಿ ಸೇತುವೆಯ ಮೇಲೆ ಹಾದುಹೋಗಿವೆ. ಅದು ಅಲ್ಲದೆ ಪಾದಾಚಾರಿಗಳು ಹಾಗೂ ಪ್ರಾಣಿಗಳು ಈ ಸೇತುವೆಯ ಮೇಲೆ ಸಾಗಿವೆ.
ಇಂತಹ ಒಂದು ವಿಭಿನ್ನವಾದ ಬೇತ್ರಿ ಸೇತುವೆಯು ಶತಮಾನ ಪೂರೈಸಿ ಇನ್ನೂ ನೂರುಕಾಲ ಬಾಳಲು ಸೇತುವೆಯ ಸುತ್ತ ಕಾಲ ಕಾಲಕ್ಕೆ ಸುರಕ್ಷತೆಯನ್ನು ನಿಭಾಯಿಸುವುದರೊಂದಿಗೆ, ಸೇತುವೆಯ ಬಳಿಯಿರುವ ನದಿ ದಂಡೆಗಳ ಇಕ್ಕೆಡೆಗಳಲ್ಲಿ ಸ್ವಚ್ಚತೆಯನ್ನು ಕಾಪಾಡ ಬೇಕಿದೆ. ಹಾಗೆ ಇಂತಹ ಗುಣಮಟ್ಟದ ಸೇತುವೆಗಳು ಮುಂದಿನ ದಿನಮಾನಗಳಲ್ಲಿ ನಿಮಾರ್ಣಗೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂಬುದೆ ನಮ್ಮ ಆಶಯ.
✍. ಅರುಣ್ ಕೂರ್ಗ್