ಕೊಡಗಿನ ಪತ್ರಿಕೋದ್ಯಮದ ಇತಿಹಾಸ, ಬೆಳವಣಿಗೆ ಹಾಗೂ ವೈಶಿಷ್ಟ್ಯ

Reading Time: 18 minutes

ಕೊಡಗಿನ ಪತ್ರಿಕೋದ್ಯಮದ ಇತಿಹಾಸ, ಬೆಳವಣಿಗೆ ಹಾಗೂ ವೈಶಿಷ್ಟ್ಯ

ಪ್ರಕೃತಿ ರಮಣೀಯ ಗಿರಿಕಂದರಗಳಿಂದ ಕೂಡಿದ ಕೊಡಗು ಪೌರಾಣಿಕ, ಐತಿಹಾಸಿಕ, ಹಾಗೂ ಆಧುನಿಕ ಕಾಲಘಟ್ಟದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕೃಷಿಕರ ಬೀಡು, ಯೋಧರ ನಾಡು, ಕಲೆ ಸಾಹಿತ್ಯದ ನೆಲೆವೀಡಾದ ಕೊಡಗು ಪತ್ರಿಕೋದ್ಯಮದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಂತಹ ಹಲವು ವೈಶಿಷ್ಟ್ಯಗಳನ್ನೊಳಗೊಂಡ ಕೊಡಗಿನ ಪತ್ರಿಕೋದ್ಯಮದ ಇತಿಹಾಸ ಬೆಳವಣಿಗೆ ಹಾಗೂ ಅದರ ವೈಶಿಷ್ಟ್ಯಗಳ ಒಂದು ಮೆಲಕು ನೋಟ ಈ ಲೇಖನದಾಗಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗಿನ ಪತ್ರಿಕೋದ್ಯಮದ ಇತಿಹಾಸ
ಬ್ಯಾಸೆಲ್ ಮಿಷನ್‍ನ ರೆವರೆಂಡ್ ಹೆರ್ಮನ್ ಫೆಡ್ರಿಕ್ ಮಂಗಳೂರಿನಲ್ಲಿ ಕನ್ನಡದ ಮೊದಲ ಪತ್ರಿಕೆಯಾದ  ‘ಮಂಗಳೂರು ಸಮಾಚಾರ’ ಎಂಬ ಪಾಕ್ಷಿಕ ಪತ್ರಿಕೆಯನ್ನು 1843 ರಲ್ಲಿ ಪ್ರಾರಂಭಿಸಿದ. ಜರ್ಮನ್ ಮಿಷನರಿಯಾದ ರೆವರೆಂಡ್ ಹೆರ್ಮನ್ ಫೆಡ್ರಿಕ್ ಮೊಗ್ಲಿಂಗ್‍ನು 1852 ರಿಂದ 1860 ರವರೆಗೆ ಕೊಡಗಿನ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಅಮ್ಮತ್ತಿ ಮಾರ್ಗ ಮಧ್ಯೆ ಸಿಗುವ ಆನಂದಪುರದಲ್ಲಿ ಚರ್ಚ್‍ನ್ನು ನಿರ್ಮಿಸಿ ತನ್ನ ಸೇವೆಯನ್ನು ಮಾಡುತ್ತಾನೆ. ಆ ಸಂದರ್ಭದಲ್ಲಿ ಆತ ಮಂಗಳೂರು ಸಮಾಚಾರ ಪತ್ರಿಕೆಯ ಮಾದರಿಯಲ್ಲಿ ಕಲ್ಲು ಅಚ್ಚಿನ ಮುದ್ರಣ ಸ್ವರೂಪದ ಪತ್ರಿಕೆಯನ್ನು ಕೊಡಗಿನಲ್ಲಿ ಹೊರಡಿಸಿದನು ಎಂಬುದು ದಾಖಲೆಗಳಿಲ್ಲದೆ ಪ್ರಚಲಿತದಲ್ಲಿದೆ. ಆ ಪತ್ರಿಕೆಯೆ 1857ರಲ್ಲಿ ಪ್ರಕಟಗೊಂಡ ‘ಈರಾರು ಪತ್ರಿಕೆ’ ಎಂಬ ಮಾಸಿಕ. ಈ ಪತ್ರಿಕೆಯ ಪ್ರತಿಯು ಲಭ್ಯವಿಲ್ಲದ ಕಾರಣ ‘ಈರಾರು ಪತ್ರಿಕೆ’ ಯನ್ನು ದಾಖಲೆಯಾಗಿ ಪರಿಗಣಿಸಿಲ್ಲ. 1860 ರಲ್ಲಿ ಮೊಗ್ಲಿಂಗ್ ನಿವೃತ್ತನಾಗಿ ಸ್ವದೇಶಕ್ಕೆ ಹಿಂತಿರುಗುವ ಸಮಯದಲ್ಲಿ ಕನ್ನಡ ಇಂಗ್ಲಿಷ್ ನಿಘಂಟಿನ ಹರಿಕಾರ ರೆವರೆಂಡ್ ಫನಾರ್ಂಡಿಸ್ ಕಿಟಲ್ ಕೊಡಗಿನ ಆನಂದಪುರದ ಮೊಗ್ಲಿಂಗ್ ಮನೆಯಲ್ಲಿಯೇ ತನ್ನ ನಿಘಂಟು ರಚನೆಯ ಕೆಲಸವನ್ನು ಆರಂಭಿಸಿದ. ಆ ಸಂದರ್ಭದಲ್ಲಿ ಕೆಲವು ಸಮಯದವರೆಗೆ ಮೊಗ್ಲಿಂಗ್ ಪ್ರಕಟಿಸುತ್ತಿದ್ದ ಪತ್ರಿಕೆಯ ಸ್ವರೂಪದಲ್ಲಿಯೇ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿತ್ತು ಎಂಬುದು ಕೂಡ ದಾಖಲೆಗಳಿಲ್ಲದೆ ನಮ್ಮಿಂದ ಮರೆಮಾಚಿದೆ.
ಕೊಡಗಿನಲ್ಲಿ ಪತ್ರಿಕೋದ್ಯಮ 1857ರಲ್ಲೇ ತನ್ನ ಛಾಪನ್ನು ಮೂಡಿಸಿದೆ ಎಂಬುದು ಕೆಲವೊಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಅಧಿಕೃತವಾಗಿ ಸಿಕ್ಕಿರುವ ದಾಖಲೆಗಳ ಪ್ರಕಾರ ಕೊಡಗಿನ ಪ್ರಥಮ ಪತ್ರಿಕೆ 1883 ರಿಂದ 1885 ವರೆಗೆ ಪ್ರಕಟಗೊಂಡ ‘ಕೊಡಗು ಚಂದ್ರಿಕೆ’ ಎಂಬ ಮಾಸಿಕ ಈ ಪತ್ರಿಕೆಯನ್ನು ಮೈಸೂರು ರಂಗರಾವ್ ರವರು ಕೊಡಗಿನ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಿಂದ ಆರಂಭಿಸಿ ಕೊಡಗಿನ ಪತ್ರಿಕೋದ್ಯಮಕ್ಕೆ ಚಾಲನೆ ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ಕೊಡಗಿನಲ್ಲಿ ನೂರಕ್ಕೂ ಅಧಿಕ ಪತ್ರಿಕೆಗಳು ಪ್ರಕಟಗೊಂಡು ಕೆಲವೊಂದು ಸ್ಥಗಿತಗೊಂಡವು. ಕೆಲವೊಂದು ಪ್ರಸ್ತುತ ಪ್ರಕಟಗೊಳ್ಳುತ್ತಾ ಅದರೊಂದಿಗೆ ಸ್ಥಳೀಯ ದೃಶ್ಯ ಮಾಧ್ಯಮಗಳು ಆನ್‍ಲೈನ್ ಮಾಧ್ಯಮಗಳು ಕೊಡಗಿನ ಪತ್ರಿಕೋದ್ಯಮದ ನಿರಂತರ ಬೆಳವಣಿಗೆಗೆ ಶ್ರಮಿಸುತ್ತಿದೆ.
ಅಧಿಕೃತ ದಾಖಲೆಗಳ ಪ್ರಕಾರ 2019ಕ್ಕೆ ಕೊಡಗಿನ ಪತ್ರಿಕೋದ್ಯಮಕ್ಕೆ 136 ವರ್ಷಗಳು. ಆದರೆ ರೆವರೆಂಡ್ ಹೆರ್ಮನ್ ಫೆಡ್ರಿಕ್ ಮೊಗ್ಲಿಂಗ್ 1857ರಲ್ಲಿ ಪ್ರಕಟಿಸಿದ ‘ಈರಾರು ಪತ್ರಿಕೆ’ ಯನ್ನು ಪರಿಗಣಿಸಿದರೆ 162 ವರ್ಷಗಳು ಸಂದಿವೆ. ಮೊಗ್ಲಿಂಗ್ ಸಂಪಾದಕತ್ವದ ಬರವಣಿಗೆಯಲ್ಲಿ “ಮಂಗಳೂರು ಸಮಾಚಾರ 1843 ರಲ್ಲಿ ಮಂಗಳೂರಿನಲ್ಲಿ ಪ್ರಕಟಗೊಂಡವು, ಕನ್ನಡ ಸಮಾಚಾರ 1844 ರಲ್ಲಿ ಬಳ್ಳಾರಿಯಲ್ಲಿ ಪ್ರಕಟಗೊಂಡವು, ಈರಾರು ಪತ್ರಿಕೆ 1857 ರಲ್ಲಿ ಕೊಡಗಿನಲ್ಲಿ ಪ್ರಕಟಗೊಂಡವು.” ಈ ಮೂರು ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮಕ್ಕೆ ಆರಂಭದ ಹೆಜ್ಜೆ ಗುರುತುಗಳಾಗಿವೆ. ಹಾಗಾಗಿ ಕನ್ನಡದ ಮೂರನೇ ಪತ್ರಿಕೆ ‘ಈರಾರು ಪತ್ರಿಕೆ’ 1857ರಲ್ಲಿ ಕೊಡಗಿನಲ್ಲಿ ಪ್ರಕಟಗೊಂಡಿರುವುದು ಒಂದು ಹೆಗ್ಗಳಿಕೆ.

ಕೊಡಗಿನಲ್ಲಿ ಪತ್ರಿಕೋದ್ಯಮ ಬೆಳೆದು ಬಂದ ಹಾದಿ
ಕೊಡಗಿನ ಪತ್ರಿಕೋದ್ಯಮದಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ “ಕೊಡಗು ಚಂದ್ರಿಕೆ” ಕೊಡಗಿನ ಮೊತ್ತಮೊದಲ ಪತ್ರಿಕೆಯಾಗಿ ತನ್ನ ಚಾಪನ್ನು ಉಳಿಸಿಕೊಂಡಿದೆ ಇದೇ ರೀತಿಯ ಹಲವಾರು ಪತ್ರಿಕೆಗಳು ಕೊಡಗಿನಲ್ಲಿ ಪ್ರಕಟಗೊಂಡು ಸ್ಥಗಿತಗೊಂಡು ಕೆಲವೊಂದು ತನ್ನ ಪ್ರಕಟಣೆಯನ್ನು ಮುಂದುವರೆಸುತ್ತ ಸಾಗುತ್ತಿದೆ. ಹಾಗೆಯೇ ಕನ್ನಡದೊಂದಿಗೆ ಕೊಡವ, ತುಳು, ಮಲಯಾಳಂ, ಇಂಗ್ಲಿಷ್ ಭಾಷೆಗಳ ಪತ್ರಿಕೆಗಳೂ ಕೊಡಗಿನಲ್ಲಿ ಪ್ರಕಟಗೊಂಡಿವೆ. ಒಟ್ಟಿನಲ್ಲಿ ಕೊಡಗಿನ ಪತ್ರಿಕೆಗಳು ಬೆಳೆದುಬಂದ ಹಾದಿಯ ಬಗ್ಗೆ ಒಂದು ಮೆಲುಕು ನೋಟವನ್ನು ಹರಿಸೋಣ.

ಸ್ವತಂತ್ರ ಪೂರ್ವದ ಕೊಡಗಿನ ಪತ್ರಿಕೋದ್ಯಮ:
1883ರಲ್ಲಿ ಮೈಸೂರು ರಂಗರಾವ್ ಸಾರಥ್ಯದಲ್ಲಿ ‘ಕೊಡಗು ಚಂದ್ರಿಕೆ’ ಮಾಸಿಕ ಪತ್ರಿಕೆಯಾಗಿ ಪ್ರಕಟಗೊಂಡವು. *1910ರಲ್ಲಿ ಬಿ.ಎಸ್.ಕುಶಾಲಪ್ಪನವರ ಸಾರಥ್ಯದಲ್ಲಿ ‘ಮಡಿಕೇರಿ ಸೆಂಟ್ರಲ್ ಹೈಸ್ಕೂಲ್ ಪೇಪರ್’ ಕನ್ನಡ-ಇಂಗ್ಲಿಷ್ ತ್ರೈಮಾಸಿಕ. *1912ರÀಲ್ಲಿ ಪಿ.ಎಂ.ಪೂಣಚ್ಚರ ‘ಕೊಡಗು ವೃತ್ತಾಂತ’ ವಾರಪತ್ರಿಕೆ. *1920ರಲ್ಲಿ ಸ್ವತಂತ್ರ ಹೋರಾಟಗಾರ ಪಂದ್ಯಂಡ ಬೆಳ್ಯಪ್ಪನವರ ‘ಕೊಡಗು’ ವಾರಪತ್ರಿಕೆ. *1921ರಲ್ಲಿ ಪಂದ್ಯಂಡ ಬೆಳ್ಯಪ್ಪನವರ ‘ಲೋಕ ಪಾವನ’ ವಾರಪತ್ರಿಕೆ. *1925ರಲ್ಲಿ ಅಬ್ದುಲ್‍ಗಫಾರ್‍ಖಾನ್‍ರ ‘ಕೊಡಗು ಬೋಧಿನಿ’ ಮಾಸಿಕ. *1925ರÀಲ್ಲಿ ಬಿ.ಕೆ.ಎಸ್.ಮೂರ್ತಿರವರ ‘ಕೊಡಗು ಸಮಾಚಾರ’ ವಾರಪತ್ರಿಕೆ. *1925ರಲ್ಲಿ ಕೆ. ನಾರಾಯಣರಾವ್‍ರ ‘ಲೋಕರಹಸ್ಯ’ ಮಾಸಿಕ. *1926ರಲ್ಲಿ ಡಿ.ಎಂ.ಸಿದ್ದಲಿಂಗಯ್ಯನವರ ‘ವಿದ್ಯಾರ್ಥಿ’ ದ್ವೈಮಾಸಿಕ. *1928ರÀಲ್ಲಿ ಬಿ.ಕೆ.ಶೇಷಭಟ್ಟ ಮತ್ತು ಶಂಕರಭಟ್ಟರ ‘ರಾಷ್ಟ್ರಬಂಧು’ ವಾರಪತ್ರಿಕೆ. *1932ರಲ್ಲಿ ಬಿ.ಎ.ಬೆಳ್ಯಪ್ಪರವರ ‘ಶಾರದ’ ಮಾಸಿಕ. *1932ರಲ್ಲಿ ಪಂದ್ಯಂಡ ಬೆಳ್ಯಪ್ಪರ ‘ಜನ್ಮ ಭೂಮಿ’ ಎಂಬ ಕನ್ನಡ ವಾರಪತ್ರಿಕೆ. * 1936ರಲ್ಲಿ ಪ್ರಸಿದ್ಧ ಸಾಹಿತಿ ಭಾರತೀಸುತರ ‘ಗುರುವಾಣಿ’. *1939ರಲ್ಲಿ ಬಿ.ಆರ್.ಸುಬ್ರಾಯರ ‘ಕೊಡಗು ಚಂದ್ರಿಕೆ’ ಮಾಸಿಕ. * 1939ರಲ್ಲಿ ಬೊಳಕಾರಂಡ ಸಿ.ಕಾರ್ಯಪ್ಪರ ‘ಉದಯ’ ಕನ್ನಡ ವಾರಪತ್ರಿಕೆ ಹಾಗೂ ‘ಡಾನ್’ ಇಂಗ್ಲಿಷ್ ವಾರಪತ್ರಿಕೆಯನ್ನು ಒಟ್ಟಿಗೆ ಪ್ರಕಟಿಸಿದರು. *1940ರಲ್ಲಿ ಪಿ.ಪಿ.ಬೆಳ್ಯಪ್ಪರ ‘ಕೊಡಗು ಸಹಕಾರ ಬಂದು’ ಮಾಸಿಕ ಪ್ರಕಟಗೊಂಡವು.

1947ರ ಸ್ವಾತಂತ್ರ್ಯ ನಂತರದ ಕೊಡಗಿನ ಪತ್ರಿಕೋದ್ಯಮ:
ಸ್ವಾತಂತ್ರ್ಯ ನಂತರದಲ್ಲಿ ಕೊಡಗಿನ ಪತ್ರಿಕೋದ್ಯಮವೂ ಹಂತ ಹಂತವಾಗಿ ಬೆಳೆಯತೊಡಗಿತ್ತು. ಆದರೆ 1980 ರಿಂದ ಕೊಡಗಿನ ಪತ್ರಿಕೋದ್ಯಮ ನಾನಾ ರೀತಿಯ ಬದಲಾವಣೆಗಳನ್ನು ಹೊಸತನವನ್ನು ಕಂಡಿತು. ಮುದ್ರಣ ಮಾಧ್ಯಮದೊಂದಿಗೆ ದೃಶ್ಯ ಮಾಧ್ಯಮ ಆನ್‍ಲೈನ್ ಮಾಧ್ಯಮದೊಂದಿಗೆ ತನ್ನ ಪತ್ರಿಕೋದ್ಯಮವನ್ನು ನವಯುಗದೆಡೆಗೆ ಸಾಗಿಸುತ್ತಿದೆ. 1948ರಲ್ಲಿ ಖ್ಯಾತ ಸಾಹಿತಿ ಐ.ಮಾ. ಮುತ್ತಣ್ಣ ನವರ ಸಾರಥ್ಯದಲ್ಲಿ ‘ಪ್ರಭಾತ’ ಎಂಬ ಕನ್ನಡ ಸಾಹಿತ್ಯ ಪತ್ರಿಕೆ ಪ್ರಕಟಗೊಂಡವು. *1948ರಲ್ಲಿ ಎಂ.ಬಿ. ಮುತ್ತಣ್ಣ ನವರ ‘ಸತ್ಯಾರ್ಥಿ’ ಎಂಬ ಕನ್ನಡ ಮಾಸಿಕ. *1948 ರಲ್ಲಿ ಬಿ.ಎಸ್. ಕೇಶವಚಾರ್ಯ ರವರ ‘ನವೀನ ಶಿಕ್ಷಕ’ ಎಂಬ ಕನ್ನಡ ಮಾಸಿಕ ಪ್ರಕಟಗೊಂಡವು.

1950ರ ದಶಕದಲ್ಲಿ ಕೊಡಗಿನ ಪತ್ರಿಕೋಧ್ಯಮ:
*1954ರಲ್ಲಿ ಬಿ.ಎಸ್.ಗೋಪಾಲಕೃಷ್ಣ ಅವರ ಸಾರಥ್ಯದಲ್ಲಿ ‘ನಂದಾದೀಪ’ ಮಾಸಿಕ. *1957ರ ಮಾರ್ಚ್ 4ರಂದು ಬಿ.ಎಸ್.ಗೋಪಾಲಕೃಷ್ಣರ ಕೊಡಗಿನ ಪ್ರಪ್ರಥಮ ದಿನಪತ್ರಿಕೆ ‘ಶಕ್ತಿ’ ಆರಂಭಗೊಂಡವು.

1960ರ ದಶಕದಲ್ಲಿ ಕೊಡಗಿನ ಪತ್ರಿಕೋಧ್ಯಮ:
*1960ರಲ್ಲಿ ಪಾರ್ಥಸಾರಥಿಯವರ ‘ಹಿತವಾಣಿ’ ಎಂಬ ದಿನಪತ್ರಿಕೆ. *1961ರಲ್ಲಿ ಎಂ.ಎಸ್.ಸುಬ್ರಾಯರವರ ‘ಪರಿಮಳ’ ಪತ್ರಿಕೆ. *1965ರಲ್ಲಿ ಗೋವಿಂದರಾವ್‍ರವರ ‘ರಾಷ್ಟ್ರ ಬಂದು’ ದಿನಪತ್ರಿಕೆ. *1965ರಲ್ಲಿ ಜಯಲಕ್ಷ್ಮಿ ಗೋವಿಂದರಾವ್‍ರವರ ‘ರಾಷ್ಟ್ರ ಮತ’ ಮಹಿಳಾಪತ್ರಿಕೆ. *1965ರಲ್ಲಿ ಕೆ.ಕೆ.ಪುಟ್ಟರಾಜುರವರ ‘ರವಿ’ ದೈನಿಕ. *1968ರಲ್ಲಿ ಬಿ.ಎಸ್.ಗೋಪಾಲಕೃಷ್ಣರ ‘ಸಂಧ್ಯಾ’ ಕೊಡಗಿನ ಪ್ರಥಮ ಸಂಜೆ ದಿನಪತ್ರಿಕೆ ಆರಂಭಗೊಂಡವು.

1970ರ ದಶಕದಲ್ಲಿ ಕೊಡಗಿನ ಪತ್ರಿಕೋಧ್ಯಮ:
*1970ರಲ್ಲಿ ಬಿ.ಎಸ್.ಗೋಪಾಲಕೃಷ್ಣರವರ ‘ಚೇತನ’ ವಾರಪತ್ರಿಕೆ. *1972ರಲ್ಲಿ ಟಿ.ಎ.ಮಧುರಶೆಟ್ಟರ ‘ನವಶಕ್ತಿ’ ದಿನಪತ್ರಿಕೆ. *1972ರಲ್ಲಿ ಕೆ.ಸಿ.ರಾಮಮೂರ್ತಿರವರ ‘ತ್ರಿವಿಕ್ರಮ’ ವಾರಪತ್ರಿಕೆ. *1973ರಲ್ಲಿ ಎಚ್.ಕೆ.ನಂಬಿಯಾರ್‍ರ ‘ಸಂಸಾರಂ’ಮಲಯಾಳಂ ವಾರಪತ್ರಿಕೆ. *1973ರಲ್ಲಿ ಆಲ್‍ಕೂರ್ಗ್ ಟೀಚರ್ಸ್ ಅಸೋಸಿಯೇಷನ್‍ರವರ ‘ಗುರುವಾಣಿ’ ಮಾಸಿಕ. *1976ರಲ್ಲಿ ಬಿ.ಡಿ.ಗಣಪತಿರವರ ‘ಕೊಡಗು ದೈನಿಕ’ ದಿನಪತ್ರಿಕೆ.

1980ರ ದಶಕದಲ್ಲಿ ಕೊಡಗಿನ ಪತ್ರಿಕೋಧ್ಯಮ:

*1980ರಲ್ಲಿ ಉಳ್ಳಿಯಡ.ಎಂ.ಪೂವಯ್ಯರವರ ‘ಬ್ರಹ್ಮಗಿರಿ’ ಕೊಡವಪತ್ರಿಕೆ. *1980ರಲ್ಲಿ ವಿ.ಪಿ.ಸುರೇಶ್ ‘ಪರಾಕ್ರಮ’ ಸಂಜೆ ದೈನಿಕ. *1982ರಲ್ಲಿ ಎ.ಕೆ.ಪಾಲಾಕ್ಷರವರ ‘ಸೂಜಿ’ ಮಾಸಿಕ. *1984ರಲ್ಲಿ ಅರವಿಂದಆರ್ಯರ ‘ಆತ್ಮೀಯ’ ಇಂಗ್ಲಿಷ್ ವಾರಪತ್ರಿಕೆ ಕೊಡಗಿನ ಪ್ರಥಮ ಇಂಗ್ಲೀಷ್ ವಾರಪತ್ರಿಕೆಯಾಯಿತು. *1985ರಲ್ಲಿ ಬಿ.ಎನ್.ಚಂಗಪ್ಪರವರ ‘ತೂಕ್‍ಬೊಳಕ್’ ಕೊಡವ ವಾರಪತ್ರಿಕೆ. *1986ರಲ್ಲಿ ಪಾಲಂದಿರ ರಮೇಶ್‍ರ ‘ಜಮ್ಮನಂಗಡ’ ಕೊಡವ ವಾರಪತ್ರಿಕೆ. *1986ರಲ್ಲಿ ಟಿ.ಪಿ.ರಮೇಶ್‍ರ ‘ಗಡಿನಾಡ ಸಂಚಾರಿ’ ವಾರಪತ್ರಿಕೆಯಾಗಿ, 1991ರಲ್ಲಿ ದಿನಪತ್ರಿಕೆಯಾಗಿ ಪ್ರಕಟಗೊಂಡವು. *1987ರಲ್ಲಿ ಬಿ.ಎ.ಷÀಂಶುದ್ದೀನ್ ನೇತೃತ್ವದಲ್ಲಿ ‘ಕೊಡಗು ಕೇಸರಿ’ ದಿನಪತ್ರಿಕೆ. *1988ರಲ್ಲಿ ಕೆ.ಎಂ.ಮಾಚಯ್ಯರವರ ‘ಕೊಡಗಿನ ಅಕ್ಷಿ’ ವಾರಪತ್ರಿಕೆ. *1989ರಲ್ಲಿ ಡಿ.ಎಂ.ಚಿನ್ನಪ್ಪರ ‘ಸಿಡಿಲು’ ವಾರಪತ್ರಿಕೆ. *1989ರಲ್ಲಿ ಅಬೂಬ್ಬಕರ್‍ರ ‘ಸ್ಟಾರ್ ಆಫ್ ಕೊಡಗು’ ಆಂಗ್ಲ ವಾರಪತ್ರಿಕೆ.

1990ರ ದಶಕದಲ್ಲಿ ಕೊಡಗಿನ ಪತ್ರಿಕೋಧ್ಯಮ:
*1990ರಲ್ಲಿ ನಾರಾಯಣಸ್ವಾಮಿ ನಾಯ್ಡುರ ‘ಚೇತನ’ ಮಾಸಿಕ. *1990ರಲ್ಲಿ ಎನ್.ಕೆ.ರಾಜೇಂದ್ರರ ‘ಆಕಾಶ ಬಾಣ’ ವಾರಪತ್ರಿಕೆ. *1990ರಲಿ ಭಾರದ್ವಾಜ್‍ರ ‘ಕೊಡಗು ಮಿತ್ರ’ ವಾರಪತ್ರಿಕೆ. *1994ರಲ್ಲಿ ರಾಜಶೇಖರ ಕೋಟಿಯವರ ‘ಆಂದೋಲನ ಕೊಡಗು ಆವೃತ್ತಿ’ ದಿನಪತ್ರಿಕೆ. *1995ರಲ್ಲಿ ಅರುಣ್ ಕೂರ್ಗ್‍ರವರ ‘ವಿವೇಕ ಜ್ಯೋತಿ’ ಮಾಸಿಕ. * 1995ರಲ್ಲಿ ಮನುಶೆಣೈರ ‘ಕೊಡಗು ಸಮಾಚಾರ’ ವಾರಪತ್ರಿಕೆ. *1995ರಲ್ಲಿ ಹೀರಾ ಅಸೋಸಿಯೇಟ್‍ರವರ ‘ಕಾಫಿಲ್ಯಾಂಡ್ ನ್ಯೂಸ್’ ಕೊಡಗಿನ ಪ್ರಥಮ ಇಂಗ್ಲಿಷ್ ದೈನಿಕ. *1996ರಲ್ಲಿ ಅಜ್ಜಿನಿಕಂಡ ಮಹೇಶ್ ನಾಚಯ್ಯರ ‘ಪೂಮಾಲೆ’ ಕೊಡವ ವಾರಪತ್ರಿಕೆ. *1996ರಲ್ಲಿ ಬಿ.ಆರ್.ನಾರಾಯಣರವರ ‘ವಾಕ್ಸ್‍ಕೂರ್ಗಿ’ ಇಂಗ್ಲಿಷ್ ವಾರಪತ್ರಿಕೆ. *1996ರÀಲ್ಲಿ ಬಿ.ಎಂ.ಚÀಂಗಪ್ಪರವರ ‘ವಾಯ್ಸ್‍ಆಫ್ ಕೂರ್ಗ್’ ಆಂಗ್ಲ ಪತ್ರಿಕೆ. *1996ರಲ್ಲಿ ಎಂ.ಇ.ಮಹಮ್ಮದ್‍ರವರ ‘ಫಿರ್ದೌಸ್’ ವಾರಪತ್ರಿಕೆ. *1996ರಲ್ಲಿ ಹೆಚ್.ಟಿ.ಅನಿಲ್‍ರವರ ‘ಮಲೆನಾಡು ವಾರ್ತೆ’ ಮಾಸಿಕ. * 1996ರಲ್ಲಿ ಅನಂತಶಯನರವರ ‘ಕೊಡಗು ಫ್ರಂಟ್’ ಆಂಗ್ಲ ದಿನಪತ್ರಿಕೆ. *1998ರಲ್ಲಿ ಅಡ್ಡಂಡ ಕಾರ್ಯಪ್ಪರವರ ‘ವೀರನಾಡು’ ದೈನಿಕ ನಂತರದ ದಿನಗಳಲ್ಲಿ ವಾರಪತ್ರಿಕೆಯಾಗಿ ಪ್ರಕಟಗೊಂಡವು.

2000ರ ದಶಕದಲ್ಲಿ ಕೊಡಗಿನ ಪತ್ರಿಕೋಧ್ಯಮ:
*2000ದಲ್ಲಿ ಶ್ರೀಧರ್‍ಹೂವಳ್ಳಿಯವರ ‘ಕೊಡಗು ರತ್ನ’ ವಾರಪತ್ರಿಕೆ. *2000 ಸೋಮೇಶ್‍ರವರ ‘ಹಿಂದೂ ವಿಜಯ’ ವಾರಪತ್ರಿಕೆ. *2002ರಲ್ಲಿ ಹೆಚ್.ಆರ್.ಎನ್.ಮೂರ್ತಿರವರ ‘ಜನನಿ’ ಮಾಸಿಕ. *2003ರಲ್ಲಿ ಅರುಣ್ ಕೂರ್ಗ್ ಹಾಗೂ ಎಚ್.ಆರ್.ಎನ್.ಮೂರ್ತಿರವರ ‘ಹಾಯ್‍ಕೂರ್ಗ್’ ವಾರಪತ್ರಿಕೆ. *2004ರಲ್ಲಿ ಬಿ.ಎಂ.ಕೆ. ವಾಸುರೈರವರ ‘ತುಳುವೆರತುಡಿಪು’ ತುಳು ವಾರಪತ್ರಿಕೆ. *2004ರಲ್ಲಿ ಅರುಣ್ ಕೂರ್ಗ್‍ರವರ ‘ರಾಷ್ಟ್ರ ಜಾಗೃತಿ’ ವಾರಪತ್ರಿಕೆ. *2005ರಲ್ಲಿ ಸುನಿಲ್, ಕೆ.ಎಎಸ್.ಮೂರ್ತಿರವರ ‘ಸ್ಪೂರ್ತಿ’ ಮಾಸಿಕ. *2006ರಲ್ಲಿ ಬಿ.ಎಂ.ಮನುಶೆಣೈರವರ ‘ಕೊಡಗು ಸಮಾಚಾರ’ ಮಲಯಾಳಂ ವಾರಪತ್ರಿಕೆ. *2006ರಲ್ಲಿ ಟಿ.ಎಲ್.ಶ್ರೀನಿವಾಸ್‍ರವರ ‘ಕೂರ್ಗ್‍ವಾಯ್ಸ್’ ವಾರಪತ್ರಿಕೆ. *2006ರಲ್ಲಿ ವಸಂತ್‍ರ ‘ಕೊಡಗು ಮಿತ್ರ’ ವಾರಪತ್ರಿಕೆ. *2008 ರಲ್ಲಿ ಕೆ.ಟಿ. ವಾತ್ಸಲ್ಯ ರವರ ‘ಓಯಾಸಿಸ್ ‘ ಎನ್ನುವ ರಾಜ್ಯ ಮಟ್ಟದ ಮಾಸ ಪತ್ರಿಕೆ *2009ರಲ್ಲಿ ಬಿ.ಎಂ.ಮನೋರಮರ ‘ನೂಪುರಭ್ರಮರಿ’ ಮಾಸಿಕ. *2009ರಲ್ಲಿ ಹೆಚ್.ಕೆ.ಜಗದೀಶ್‍ರ ‘ಕೊಡಗುಧ್ವನಿ’ ವಾರಪತ್ರಿಕೆ. *2009ರಲ್ಲಿ ಕೆ.ಎಸ್.ಮೂರ್ತಿರವರ ‘ಕುಶೋಲೋದಯ’ ವಾರಪತ್ರಿಕೆ.

2010ರ ದಶಕದಲ್ಲಿ ಕೊಡಗಿನ ಪತ್ರಿಕೋಧ್ಯಮ:
*2010ರಲ್ಲಿ ಚಮ್ಮಟ್ಟೀರ ಪ್ರವೀಣ್‍ರವರ ‘ಕೊಡಗುವಾರ್ತೆ’ ವಾರಪತ್ರಿಕೆ’. *2011ರಲ್ಲಿ ಹೆಚ್.ಬಿ.ಯಶೋಧಾರವರ ‘ನ್ಯಾಯದಹಾದಿ’ ಪಾಕ್ಷಿಕ. *2013ರಲ್ಲಿ ರಮೇಶ್‍ಉತ್ತಪ್ಪರವರ ‘ಕೊಡವಪಳಮೆ’ ಕೊಡವ ಮಾಸಿಕ. *2016ರಲ್ಲಿ ಬಿ.ಕೆ.ಚಿನ್ನಪ್ಪನವರ ‘ಪ್ರಜಾಸತ್ಯಾ’ ದಿನಪತ್ರಿಕೆ. *2015ರಲ್ಲಿ ಶ್ರೀಧರನೆಲ್ಲಿತ್ತಾಯರವರ ‘ಕೂರ್ಗ್‍ಎಕ್ಸ್‍ಪ್ರೆಸ್’ ವಾರಪತ್ರಿಕೆ. *2016ರಲ್ಲಿ ಬೊಳ್ಳ್ಳಜಿರ ಅಯ್ಯಪ್ಪರವರ ‘ಕಾವೇರಿಟೈಮ್ಸ್’ ದಿನಪತ್ರಿಕೆ. *2016ರಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ‘ಪೊಂಗುರಿ’ ತ್ರೈಮಾಸಿಕ. *2016ರಲ್ಲಿ ಅರೆಭಾಷೆ ಸಾಹಿತ್ಯ ಅಕಾಡೆಮಿಯ ‘ಹಿಂಗಾರ’ ತ್ರೈಮಾಸಿಕ. *2018ರಲ್ಲಿ ಮಂಜುಚಿನ್ನಪ್ಪರ ‘ವಾಯ್ಸ್‍ಆಫ್ ಕೊಡವ’ ಮಾಸಿಕ. ಪತ್ರಿಕೆಗಳು ಪ್ರಕಟಗೊಂಡವು.

ಕೊಡಗಿನ ದೃಶ್ಯ ವಾಹಿನಿಗಳು:
*2004ರಲ್ಲಿ ಶ್ರೀಧರ್ ನೆಲ್ಲಿತ್ತಾಯರ ‘ಚಾನೆಲ್ ಕೂರ್ಗ್’. * 2010ರಲ್ಲಿ ಭರತ್‍ರವರ ‘ಸಂಗಮ ಚಾನೆಲ್’. 2010ರಲ್ಲಿ ಜಿ.ವಿ.ರವಿಕುಮಾರ್‍ರ ‘ಕೊಡಗುಚಾನೆಲ್’. *2012ರಲ್ಲಿ ಬಿ.ಆರ್. ಸವಿತಾ ರೈರವರ ‘ಚಿತ್ತಾರ ವಾಹಿನಿ’. *2015ರಲ್ಲಿ ಹೆಚ್.ಟಿ. ಅನಿಲ್‍ರ ‘ಟಿವಿ 1 ಚಾನೆಲ್’. ಪ್ರಾರಂಭಗೊಂಡವು.

ಕೊಡಗು ಕೊಡಗು ಪತ್ರಿಕಾ ರಂಗದ ದಿಗ್ಗಜರು:

ಪಂದ್ಯಂಡ ಬೆಳ್ಯಪ್ಪ: ‘ಕೊಡಗಿನ ಗಾಂಧಿ’ ಎಂದೇ ಪ್ರಸಿದ್ಧರಾದ ಪಂದ್ಯಂಡ ಬೆಳ್ಯಪ್ಪನವರು 1920ರಲ್ಲಿ ರಲ್ಲಿ ‘ಕೊಡಗು’ ಎಂಬ ವಾರಪತ್ರಿಕೆ ‘ಲೋಕಪಾವನ’ ಎಂಬ ವಾರಪತ್ರಿಕೆ ಹಾಗೂ ‘ಜನ್ಮಭೂಮಿ’ ಎಂಬ ವಾರಪತ್ರಿಕೆಯನ್ನು ಆರಂಭಿಸಿ, ಕೊಡಗಿನ ಪತ್ರಿಕೋದ್ಯಮಕ್ಕೆ ತನ್ನದೆ ಆದ ಸೇವೆಯನ್ನು ಸಲ್ಲಿಸುತ್ತಾರೆ.

ಬಿ.ಡಿ. ಗಣಪತಿ: ಪತ್ರಿಕೋದ್ಯಮ, ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ಸಮಾಜ ಸೇವಕನಾಗಿ ಕೊಡಗಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಬಿ.ಡಿ.ಗಣಪತಿಯವರು. 1941ರಲ್ಲಿ ಸ್ವಾತಂತ್ರ್ಯ ಸಂಗ್ರಾಮ ತೀವ್ರಗತಿಯಲ್ಲಿದ್ದಾಗ ‘ಕೊಡಗು’ ಪತ್ರಿಕೆಯ ಸಂಪಾದಕ ಪಂದ್ಯಂಡ ಬೆಳ್ಯಪ್ಪನವರು ಸೆರೆಮನೆಗೆ ಕಳುಹಿಸಲ್ಪಟ್ಟ ಸಂದರ್ಭದಲ್ಲಿ ಬಿ.ಡಿ.ಗಣಪತಿಯವರು ಸಂಪಾದಕತ್ವವನ್ನು ವಹಿಸಿಕೊಂಡರು. ಒಂದೇ ವರ್ಷದೊಳಗೆ ಆಂಗ್ಲ ಸರಕಾರದ ವಿರುದ್ಧ ಬರೆದ ಸಂಪಾದಕೀಯ ಅವರಿಗೆ ಆರು ತಿಂಗಳ ಸೆರೆವಾಸವನ್ನು ತಂದು ಕೊಟ್ಟಿತು. ಪತ್ರಿಕೆಯ ಪ್ರಕಟಣೆಯೂ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಬಿಡುಗಡೆಯಾಗಿ ಬಂದ ಮೇಲೆ ‘ಕೊಡಗು ಕಂಪೆನಿ’ಯಲ್ಲಿ ಬಂಡವಾಳ ಕಡಿಮೆಯಾಗಿರುವದನ್ನು ಗಮನಿಸಿ, ಗಣಪತಿಯವರು ಕೊಡಗಿನ ಎಲ್ಲೆಡೆ ಸಂಚರಿಸಿ ಅತ್ಯಧಿಕ ಸಂಖ್ಯೆಯಲ್ಲಿ ‘ಕೊಡಗು’ ಪತ್ರಿಕೆಗೆ ಚಂದಾದಾರರನ್ನು ಮಾಡಿದರು. ಅಲ್ಲಿಂದ ಅವರು ‘ಕೊಡಗು’ ಪತ್ರಿಕೆಯ ಆತ್ಮಶಕ್ತಿಯಾಗಿದ್ದುಕೊಂಡು ಅದನ್ನು ಬೆಳೆಸಿಕೊಂಡು ನಡೆಸಿದರು. ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕಾರಂಗದಲ್ಲಿದ್ದ ಗಣಪತಿಯವರು ಆಂಗ್ಲ ಪತ್ರಿಕೆಗಳಾದ ‘ದ ಹಿಂದು’, ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಮತ್ತು ಮಲಯಾಳಮ್ ಪತ್ರಿಕೆ ‘ಮಾತೃಭೂಮಿ’ಯ ಬಾತ್ಮಿದಾರರೂ ಆಗಿದ್ದರು.

ಬಿ.ಎಸ್. ಗೋಪಾಲಕೃಷ್ಣ: ಕೊಡಗಿನ ಪತ್ರಿಕಾ ರಂಗದ ಭೀಷ್ಮ ಎಂದೇ ಖ್ಯಾತರಾದವರು ಬಿ.ಎಸ್.ಗೋಪಾಲಕೃಷ್ಣರವರು ‘ಶಕ್ತಿ’ ಎಂಬ ಕೊಡಗಿನ ಪ್ರಪ್ರಥಮ ದೈನಿಕವನ್ನು ಆರಂಭಿಸಿದ ಕೀರ್ತಿ ಗೋಪಾಲಕೃಷ್ಣರವರದ್ದು. ಮಾತ್ರವಲ್ಲದೆ ‘ಸಂಧ್ಯಾ’ ಎಂಬ ಕೊಡಗಿನ ಪ್ರಥಮ ಸಂಜೆ ದಿನಪತ್ರಿಕೆಯನ್ನು ಆರಂಭಿಸಿದ ಕೀರ್ತಿಯೂ ಇವರಿಗೇ ಸಲ್ಲಬೇಕು. 1954ರಲ್ಲಿ ಬಿ.ಎಸ್. ಗೋಪಾಲಕೃಷ್ಣ ರವರು ‘ನಂದಾದೀಪ’ ಎಂಬ ಮಾಸಪತ್ರಿಕೆಯನ್ನು ಹೊರಡಿಸುವ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟರು. ‘ಚೇತನ’ ಎಂಬ ವಾರಪತ್ರಿಕೆ ಹಾಗೂ ಬೆಂಗಳೂರಿನಿಂದ ‘ಶಕಿ’್ತ ಎಂಬ ವಾರಪತ್ರಿಕೆಯನ್ನು ಹೊರಡಿಸುತ್ತಾರೆ. ಬಿ.ಎಸ್.ಗೋಪಾಲಕೃಷ್ಣ ರವರು ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಾರೆ.

ಕಾಕೆಮಾನಿ: ಕಾಕೆಮಾನಿ ಕಾವ್ಯನಾಮದಿಂದ ಪ್ರಖ್ಯಾತರಾದ ಪತ್ರಕರ್ತರು ಬರಹಗಾರರು ಆದ ಬಿ.ಡಿ. ಸುಬ್ಬಯ್ಯನವರು 1960-80ರ ದಶಕದಲ್ಲಿ ಮಡಿಕೇರಿಯಲ್ಲಿ ‘ಇಂಡಿಯನ್ ಎಕ್ಸ್‍ಪ್ರೆಸ್’, ‘ಕನ್ನಡ ಪ್ರಭ’, ‘ಕೊಡಗು ದೈನಿಕ’ ಪತ್ರಿಕೆಗಳ ವರದಿಗಾರ, ಅಂಕಣಕಾರರಾಗಿ ಕರ್ತವ್ಯ ನಿರ್ವಹಿಸಿ, ವಾರಪತ್ರಿಕೆಯಾದ ‘ಕೊಡಗು’ ಪತ್ರಿಕೆಯನ್ನು 1976ರಲ್ಲಿ ಇವರ ನೇತೃತ್ವದ ತಂಡದೊಂದಿಗೆ ‘ಕೊಡಗುದೈನಿಕ’ ದಿನಪತ್ರಿಕೆಯಾಗಿ ಪರಿವರ್ತಿಸಲಾಯಿತು.

ಟಿ.ಎ.ಮಧುರ ಶೆಟ್ಟಿ: ಕೊಡಗಿನ ವರ್ಣರಂಜಿತ ಪತ್ರಿಕೋದ್ಯಮ ಇತಿಹಾಸದಲ್ಲಿ ಪತ್ರಿಕೋದ್ಯಮದ ಮೇರು ವ್ಯಕ್ತಿಗಳು ಈರ್ವರು. ಓರ್ವರು ಶಕ್ತಿಯ ಬಿ.ಎಸ್ ಗೋಪಾಲಕೃಷ್ಣ. ಮತ್ತೋರ್ವರು ಟಿ.ಎ. ಮಧುರಶೆಟ್ಟಿ ಯವರು ಇವರಿಬ್ಬರೂ ಕೊಡಗಿನ ಪತ್ರಿಕಾರಂಗದ ಕೃಷ್ಣಾರ್ಜುನರು ಎಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ‘ಶಕಿ’್ತ ಪತ್ರಿಕೆಯ ಮುಖಾಂತರ ತಮ್ಮ ಪತ್ರಿಕಾ ವೃತ್ತಿಗೆ ಪಾದಾರ್ಪಣೆ ಮಾಡಿದ ಮಧುರಶೆಟ್ಟಿಯವರು ‘ನವಶಕ್ತಿ’ ಎಂಬ ದಿನಪತ್ರಿಕೆಯನ್ನು ಆರಂಭಿಸಿದರು. ಕೊಡಗಿನಲ್ಲಿ ಪತ್ರಕರ್ತರ ಸಂಘ ಹುಟ್ಟು ಹಾಕಿ ಸಂಘದ ಸ್ಥಾಪಕ ಅಧ್ಯಕ್ಷರಾದರು.

ಟಿ.ಪಿ. ರಮೇಶ್: ಕೊಡಗು ಕಂಡ ಸಂಘಟನಾ ಚತುರ ಎಂದು ಬಿರುದಾಂಕಿತ ಟಿ.ಪಿ.ರಮೇಶ್‍ರವರು ಕೊಡಗಿನ ಪತ್ರಿಕೋದ್ಯಮಕ್ಕೆ ತಮ್ಮದೇ ಆದ ಕಾಣಿಕೆ ಸಲ್ಲಿಸಿದ್ದಾರೆ 1998 ರಲ್ಲಿ ಕೊಡಗು ಜಿಲ್ಲೆ ಪತ್ರಕರ್ತರ ಸಂಘದದಲ್ಲಿ ಚೈತನ್ಯ ತುಂಬಿದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಹೊಗೆಯಾಡುತ್ತಿದ್ದ ಭಿನ್ನಾಭಿಪ್ರಾಯಗಳನ್ನು ಸಮನ ಮಾಡಿ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಸಂಘ ವ್ಯವಸ್ಥೆಯಲ್ಲಿ ಶಾಶ್ವತವಾದ ನೆಲೆಗಾಗಿ ಟಿ.ಪಿ.ರಮೇಶ್ ಪತ್ರಕರ್ತರ ಸಹಕಾರದೊಂದಿಗೆ 1998ರಲಿ ಪ್ರೆಸ್‍ಕ್ಲಬ್ ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷರಾದರೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೆಸ್‍ಕ್ಲಬ್ ಹಾಗೂ ಪತ್ರಕರ್ತರ ಸಂಘಕ್ಕೆ 2001ರಲ್ಲಿ ಪತ್ರಿಕಾ ಭವನ ನಿರ್ಮಿಸಿಲು ನೇತೃತ್ವ ವಹಿಸಿದ ಕೀರ್ತಿ ರಮೇಶ್‍ರಿಗೆ ಸಲ್ಲುತ್ತದೆ. ತಮ್ಮದೇ ಆದ ‘ಗಡಿನಾಡ ಸಂಚಾರಿ’ ಪತ್ರಿಕೆಯನ್ನು 30 ವರ್ಷಗಳ ಕಾಲ ನಡೆಸಿ ಪತ್ರಿಕೋದ್ಯಮಕ್ಕೆ ತಮ್ಮದೆ ಆದ ಸೇವೆ ಸಲಿಸಿದ್ದಾರೆ.

ಜಿ. ರಾಜೇಂದ್ರ: ದಿವಂಗತ ಬಿ.ಎಸ್. ಗೋಪಾಲಕೃಷ್ಣರ ನಂತರ ‘ಶಕ್ತಿ’ ಪತ್ರಿಕೆಯ ಜವಾಬ್ದಾರಿ ಜಿ.ಯದುಮಣಿ ಅವರ ಹೆಗಲಿಗೆ ಬಂತು. ಯದುಮಣಿಯವರು ಶಕ್ತಿ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದ ಸಂದರ್ಭ ಅಕಾಲಿಕ ಮರಣಕ್ಕೀಡಾಗುತ್ತಾರೆ. ಆ ಸಂದರ್ಭದಲ್ಲಿ ಶಕ್ತಿಯ ಜವಾಬ್ದಾರಿ ಜಿ. ರಾಜೇಂದ್ರರ ಪಾಲಿಗೆ ಬರುತ್ತದೆ. 35 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ. 1991 ರಿಂದ 2010ರ ವರಗೆ `ಶಕಿ’್ತ ಸಂಪಾದಕರಾಗಿ, 2010 ರಿಂದ `ಶಕ್ತಿ’ ದೈನಿಕದ ಪ್ರಧಾನ ಸಂಪಾದಕರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 1986 ರಿಂದ 88ರವರಗೆ ಸಂಯುಕ್ತ ಕರ್ನಾಟಕದ ಜಿಲ್ಲಾ ವರದಿಗಾರರಾಗಿ, 1996 ರಿಂದ ಟೈಮ್ಸ್ ಆಫ್ ಇಂಡಿಯಾದ ಜಿಲ್ಲಾ ವರದಿಗಾರರಾಗಿ, ರಾಜ್ಯ ಮಾಧ್ಯಮ ಅಕಾಡೆಮಿಯ ಮಾಜಿ ಸದಸ್ಯರಾಗಿ, ರಾಜ್ಯ ಪತ್ರಿಕಾ ಮಾನ್ಯತಾ ಸಮಿತಿಯ ಮಾಜಿ ಸದಸ್ಯರಾಗಿ, ಸಣ್ಣ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1984 ರಿಂದ 1986ರ ವರಗೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕೊಡಗು ಪ್ರೆಸ್‍ಕ್ಲಬ್‍ನ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1993ರಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಉತ್ತಮ ವರದಿ ಪ್ರಶಸ್ತಿ, 2004ರಲ್ಲಿ ಕೊಡಗು ಜಿಲ್ಲಾಡಳಿತದಿಂದ ಉತ್ತಮ ಪತ್ರಕರ್ತರ ಪ್ರಶಸ್ತಿ, 2008ರಲ್ಲಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿ ಕೊಡಗಿನ ಪತ್ರಿಕೋದ್ಯಮಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸಿದ್ದಾರೆ.

ಉಳ್ಳಿಯಡ ಎಂ.ಪೂವಯ್ಯ: ಸತತ 40 ವರ್ಷಗಳಿಂದ ‘ಬ್ರಹ್ಮಗಿರಿ’ ಎಂಬ ಕೊಡವ ಪತ್ರಿಕೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬರುತ್ತಿರುವ ಉಳ್ಳಿಯಡ ಪೂವಯ್ಯನವರು ‘ಶಕಿ’್ತ ಪತ್ರಿಕೆಯ ನಂತರ ದೀರ್ಘ ಕಾಲದವರೆಗೆ ತನ್ನ ಪ್ರಕಟಣೆಯನ್ನು ಮುಂದುವರಿಸುತ್ತಿರುವ ಪತ್ರಿಕೆ ‘ಬ್ರಹ್ಮಗಿರಿ’ ಎಂಬ ಹೆಗ್ಗಳಿಕೆ ಇವರದಾಗಿದೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಉಳ್ಳಿಯಡ ಪೂವಯ್ಯನವರು ಕೊಡಗಿನ ಪತ್ರಿಕೋದ್ಯಮಕ್ಕೆ ತಮ್ಮದೆ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಅನಿಲ್ ಎಚ್.ಟಿ: ಕೊಡಗು ಜಿಲ್ಲೆ ಮಾತ್ರವಲ್ಲದೇ ಕರ್ನಾಟಕದ ಪತ್ರಿಕಾ ಓದುಗರಿಗೆ ಚಿರಪರಿಚಿತ ಹೆಸರು ಹೆಚ್.ಟಿ. ಅನಿಲ್. ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿ ಪಡೆದ ಅನಿಲ್ ಬೆಂಗಳೂರಿನ ಪತ್ರಿಕೆಗಳಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಕೊಡಗಿನಲ್ಲಿಯೇ ಕಾರ್ಯರ್ನಿವಹಿಸುವ ಬಯಕೆಯಿಂದ ಮಡಿಕೇರಿಗೆ ಬಂದು ಉದಯ ಟಿವಿಯ ಜಿಲ್ಲಾ ವರದಿಗಾರರಾಗಿ ನೇಮಕಗೊಂಡರು. ಪ್ರಸ್ತುತ, ಆಜ್‍ತಕ್, ಇಂಡಿಯಾ ಟುಡೇಯಂಥ ರಾಷ್ಟ್ರೀಯ ಮಾಧ್ಯಮಗಳ ಕೊಡಗು ಜಿಲ್ಲಾ ಪ್ರತಿನಿಧಿಯಾಗಿರುವ ಅನಿಲ್ ಕನ್ನಡಪ್ರಭ ಪತ್ರಿಕೆಯಲ್ಲಿ ಸತತ 18 ವರ್ಷಗಳ ಕಾಲ ಕೊಡಗು ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಈಗ ಅನಿಲ್, ವಿಶ್ವವಾಣಿ ಪತ್ರಿಕೆಯ ವಿಶೇಷ ಪ್ರತಿನಿಧಿಯಾಗಿದ್ದಾರೆ. ಪ್ರಸಾರ ಭಾರತೀಯ ಆಕಾಶವಾಣಿ ಕೇಂದ್ರದ ಕೊಡಗು ಪ್ರತಿನಿದಿಯಾಗಿ 16 ವರ್ಷಗಳಿಂದ ಕಾರ್ಯಿ ನಿರ್ವಹಿಸುತ್ತಿರುವ ಅನಿಲ್ ಎಚ್.ಟಿ. ಮಡಿಕೇರಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಟಿವಿ1 ಚಾನಲ್ ಮಾಲೀಕರೂ ಆಗಿದ್ದಾರೆ. ರಾಜ್ಯಮಟ್ಟದಲ್ಲಿ ಅನಿಲ್ ಬರೆದ ವರದಿಗಳಿಗೆ ಪ್ರಶಸ್ತಿಗಳ ಸುರಿಮಳೆಯೇ ಲಬಿಸಿದೆ. ಕಾಡುಗಳ್ಳ ವೀರಪ್ಪನ್ ಕುರಿತಾಗಿ ಅನಿಲ್ ಬರೆದಿದ್ದ ವಿಶೇಷ ವರದಿಗೆ ರಾಜ್ಯಪ್ರಶಸ್ತಿ ಲಭಿಸಿತ್ತು. ಈವರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 19 ಪ್ರಶಸ್ತಿಗಳೂ ಅನಿಲ್‍ಗೆ ಲಬಿಸಿ ರಾಜ್ಯಮಟ್ಟದ ದಾಖಲೆಯಾಗಿದೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಅತ್ಯುತ್ತಮ ವರದಿಗಾಗಿ ಈವರೆಗೆ ಅನಿಲ್ 22 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕದ ಮಾಧ್ಯಮ ಅಕಾಡೆಮಿ ಅತ್ಯುತ್ತಮ ವರದಿಗಾಗಿ ಅನಿಲ್ ಎಚ್.ಟಿ.ಗೆ ಪ್ರಶಸ್ತ್ತಿ ನೀಡಿದ್ದರೆ ಮತ್ತೆ ಅದೇ ಮಾದ್ಯಮ ಅಕಾಡೆಮಿ ಜೀವಮಾನದ ಸಾಧನೆಗಾಗಿ ಅನಿಲ್ ಅವರನ್ನು ಪ್ರಶಸ್ತ್ತಿ ನೀಡಿ ಗೌರವಿಸಿತ್ತು. ಮಾಧ್ಯಮ ಅಕಾಡೆಮಿ ಇತಿಹಾಸದಲ್ಲಿಯೇ ಎರಡು ಪ್ರಶಸ್ತಿಗಳು ಲಬಿಸಿದ ಏಕಮಾತ್ರ ಪತ್ರಕರ್ತ ಎಂಬ ಹಿರಿಮೆಯೂ ಅನಿಲ್ ಎಚ್.ಟಿ.ಯದ್ದು. ಅನಿಲ್ ಈ ವರೆಗೆ ಅತ್ಯುತ್ತಮ ಪತ್ರಿಕಾ ವರದಿಗಳಿಗಾಗಿ 52 ನೇ ಪ್ರಶಸ್ತಿಯನ್ನು ಪಡೆಯುವ ಮೂಲಕ ರಾಜ್ಯದ ಪತ್ರಿಕಾರಂಗದಲ್ಲಿಯೇ ಅತ್ಯಧಿಕ ಪ್ರಶಸ್ತಿ ಪಡೆದಿರುವ ಪತ್ರಕರ್ತ ಎನಿಸಿದ್ದಾರೆ.

ಅಜ್ಜಮಾಡ ರಮೇಶ್ ಕುಟ್ಟಪ್ಪ: ಕೊಡಗು ಜಿಲ್ಲಾ ಪತ್ರಕರ್ತ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್‍ಗೆ ಆಧುನಿಕ ಸ್ಪರ್ಶ ಕೊಟ್ಟವರು ಅಜ್ಜಮಾಡ ರಮೇಶ್ ಕುಟ್ಟಪ್ಪನವರು. ಇವರು ಕಳೆದ 20ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ರಾಜ್ಯ ಸರಕಾರದಿಂದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದÀ 13 ಪ್ರಶಸ್ತಿಗಳು, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ, ವಿಜಯವಾಣಿ ಪತ್ರಿಕೆಯಿಂದ 10 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ನಾಣ್ಯ ಸನ್ಮಾನ ಪಡೆದಿದ್ದಾರೆ. ಅಜ್ಜಮಾಡ ರಮೇಶ್ ಕುಟ್ಟಪ್ಪನವರು ಕೊಡಗು ಜಿಲ್ಲಾ ಪತ್ರಿಕಾರಂಗ ಕಂಡ ಅತ್ಯಂತ ಜನಾನುರಾಗಿ ಪತ್ರಕರ್ತರಾಗಿದ್ದಾರೆ.

ಬಿ.ಆರ್. ಸವಿತಾ ರೈ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಇತಿಹಾಸದಲ್ಲೇ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಬಿ.ಆರ್. ಸವಿತಾ ರೈ ಆಯ್ಕೆಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತೆಯಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಸವಿತಾ ರೈ, ಕೊಡಗುಮಿತ್ರ, ಕೊಡಗು ಸಮಾಚಾರ, ಕೂರ್ಗ್‍ಚಾನಲ್, ಜನವಾಹಿನಿ, ವಾರ್ತಾ ಭಾರತಿ ಮತ್ತಿತರ ಮಾಧ್ಯಮಗಳಲ್ಲಿ ವರದಿಗಾರಳಾಗಿ ಕೆಲಸ ನಿರ್ವಹಿಸಿದ್ದಾರೆ. ಇದೀಗ ಕಳೆದ ಏಳು ವರ್ಷಗಳಿಂದ ಮಡಿಕೇರಿಯಲ್ಲಿ ಚಿತ್ತಾರ ದೃಶ್ಯವಾಹಿನಿ ಆರಂಭಿಸಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊಡಗಿನ ಪತ್ರಿಕೋದ್ಯಮವು ಹಲವಾರು ಸಮಸ್ಯೆಗಳ ನಡುವೆಯೂ ಹೊಸತನದೊಂದಿಗೆ ಆಡಳಿತಶಾಹಿಗಳ ಮತ್ತು ಜನಸಮೂಹದ ನಡುವಿನ ಸಂಪರ್ಕ ಸೇತುವೆಯಾಗಿ ತಮ್ಮ ಜವಾಬ್ದಾರಿಯುತ ಹೊಣೆಯನ್ನು ನಿರ್ವಹಿಸಿಕೊಂಡು ಬರುತ್ತಿದೆ.

✍. ಅರುಣ್ ಕೂರ್ಗ್

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments