ಸಿ.ಡಿ.ಎಸ್. ಎಂಬ ಮಹಾ ದಂಡನಾಯಕ
ಇನ್ನು ದೇಶಕ್ಕೆ ಒಬ್ಬರೇ ಪರಮೋಚ್ಚ ಮಿಲಿಟರಿ ಅಧಿಕಾರಿ
ಭಾರತೀಯ ಸೈನ್ಯದಲ್ಲಿ ರಾಂಕ್ ಪದ್ದತಿಯಿದೆ. ಭಾರತೀಯ ಭೂಸೇನೆಯ ಅತ್ಯಂತ ದೊಡ್ಡ ಹುದ್ದೆ ಫೀಲ್ಡ್ ಮಾರ್ಷಲ್, ವಾಯುಸೇನೆಯಲ್ಲಿ ಮಾರ್ಷಲ್ ಆಫ್ ಏರ್ ಫೋರ್ಸ್, ನೌಕಾದಳದಲ್ಲಿ ಅಡ್ಮಿರಲ್ ಆಫ್ ದಿ ಫ್ಲೀಟ್. ಈ ಹುದ್ದೆಗಳು ೫ ಸ್ಟಾರ್‌ಗಳ ರಾಂಕ್‌ಗಳು. ಈ ಹುದ್ದೆಯನ್ನು ಅಲಂಕರಿಸಿದವರಿಗೆ ಸೈನ್ಯದಿಂದ ನಿವೃತ್ತಿ ಇಲ್ಲ. ಇವರ ಸೇವಾವಧಿಯು ಅಜೀವನ ಪರ್ಯಂತವಾಗಿದ್ದು, ಸೈನ್ಯದ ಅಧಿಕೃತ ಕಾರ್ಯಕ್ರಮದಲ್ಲಿ ಅವರು ಸಂಪೂರ್ಣ ಸಮವಸ್ತ್ರದೊಂದಿಗೆ ಹಾಜರಿರಬೇಕು. ಇವರಿಗೆ ಪಿಂಚಣಿಯ ಬದಲಾಗಿ ಸಂಬಳವನ್ನು ನೀಡಲಾಗುತ್ತದೆ.
ಭಾರತೀಯ ಭೂಸೇನೆಯು ಇದುವರೆಗೆ ಇಬ್ಬರು ಫೀಲ್ಡ್ ಮಾರ್ಷಲ್ ಗಳನ್ನು ಹೊಂದಿತ್ತು. ಸ್ಯಾಮ್ ಮಾಣಿಕ್ ಷಾ ಮತ್ತು ಕೊಡಗಿನ ಹೆಮ್ಮೆಯ ವೀರ ಪುತ್ರ ಕೆ.ಎಂ. ಕಾರ್ಯಪ್ಪ. ಭಾರತೀಯ ವಾಯುಸೈನ್ಯ ಇದುವರೆಗೆ ಒಬ್ಬರೇ ಮಾರ್ಷಲ್ ಆಫ್ ಏರ್ ಫೋರ್ಸ್ ಅನ್ನು ಹೊಂದಿದ್ದು, ಅವರೇ ೨೦೧೭ ರಲ್ಲಿ ನಿಧನ ಹೊಂದಿದ ಅರ್ಜುನ್ ಸಿಂಗ್. ಭಾರತೀಯ ನೌಕಾದಳವು ಇದುವರೆಗೆ ಅಡ್ಮಿರಲ್ ಆಫ್ ದ ಫ್ಲೀಟ್ ಅನ್ನು ಹೊಂದಿಲ್ಲ. ಈ ಮೇಲ್ಕಂಡ ೫ ನಕ್ಷತ್ರಗಳ ಹುದ್ದೆಯಲ್ಲಿ ಈಗ ಯಾರೂ ಕಾರ್ಯನಿರ್ವಹಿಸುತ್ತಿಲ್ಲ. ಇದರ ನಂತರ ಬರುವ ಹುದ್ದೆಯೇ ೪ ನಕ್ಷತ್ರಗಳ ಸಿ.ಡಿ.ಎಸ್ ಹುದ್ದೆ. ಅಮೆರಿಕಾ, ಜಪಾನ್, ಪಾಕಿಸ್ತಾನ, ಚೀನಾ ದೇಶಗಳಲ್ಲೂ ಇದಕ್ಕೆ ಸಮಾನವಾದ ಹುದ್ದೆಗಳಿವೆ.
ದೇಶದ ಮೂರು ಸೇನಾಪಡೆಗಳ (ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ಅಂದರೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಸಿ.ಡಿ.ಎಸ್) ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಆಯ್ಕೆಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಹುದ್ದೆಯನ್ನು ಸೃಷ್ಟಿಸಲಾಗಿದೆ. ಭಾರತದ ಮಿಲಿಟರಿಯಲ್ಲಿರುವ ಭೂ ಸೇನೆ, ನೌಕಾ ಪಡೆ ಹಾಗೂ ವಾಯುಪಡೆ ವಿಭಾಗಗಳಿವೆ. ಈ ಮೂರೂ ಸೇನೆಗಳಲ್ಲಿ ಸಹಕಾರ ಏರ್ಪಡಿಸುವ ಜವಾಬ್ದಾರಿ ಸಿ.ಡಿ.ಎಸ್.ಗೆ ಇರುತ್ತದೆ.
ಒಬ್ಬರೇ ಪರಮೋಚ್ಚ ಮಿಲಿಟರಿ ಅಧಿಕಾರಿ ಇರಬೇಕೆಂಬ ಕೂಗು ದಶಕಗಳಿಂದಲೂ ಇದೆ. 1999ರಲ್ಲಿ ಪಾಕಿಸ್ತಾನವು ಕಾರ್ಗಿಲ್ನಲ್ಲಿ ಶತ್ರುಗಳು ಎರಗಿ ಬಂದಾಗ ಭಾರತೀಯ ಸೇನಾ ಪಡೆ ಪ್ರತಿರೋಧ ತೋರಿ ಶತ್ರುಗಳನ್ನೇನೋ ಹಿಮ್ಮೆಟ್ಟಿಸಿತ್ತು. ಆದರೆ, ಆ ಯುದ್ಧದಲ್ಲಿ ಸೇನೆಯ ಹಲವು ಲೋಪದೋಷಗಳು ಕಣ್ಣಿಗೆ ಕಟ್ಟುವಂತಿದ್ದವು. ಅದನ್ನು ಪರಿಶೀಲಿಸಲು ರಚನೆಯಾಗಿದ್ದ ಸಮಿತಿ ಕೂಡ ಭಾರತದ ಮೂರು ಸೇನೆಯ ಮಧ್ಯೆ ಸಮನ್ವಯತೆ ಸಾಧಿಸುವ ಒಬ್ಬ ಮಿಲಿಟರಿ ಸಲಹೆಗಾರನ ಅಗತ್ಯ ಇದೆ ಎಂದು ಶಿಫಾರಸು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಶಿಫಾರಸನ್ನು ಈಗ ಜಾರಿಗೆ ತಂದಿದ್ಧಾರೆ.
ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು ವಿಶ್ವದ ಎರಡನೇ ಅತ್ಯಂತ ದೊಡ್ಡ ಸೈನ್ಯವನ್ನು ಹೊಂದಿದೆ. ಭಾರತವು ತಾನಾಗಿಯೇ ಯಾವುದೇ ರಾಷ್ಟ್ರದ ಮೇಲೆ ಯುದ್ಧವನ್ನು ಸಾರಲು ಹೋಗಿಲ್ಲವಾದರೂ ದೇಶದ ರಕ್ಷಣೆಯ ವಿಷಯ ಬಂದಾಗ ತಾವು ಯಾವುದಕ್ಕೂ ಸಿದ್ದ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಹಳಷ್ಟು ಬಾರಿ ಭಾರತದ ಈ ಸಹನಾ ಸ್ವಭಾವವನ್ನೇ ವಿದೇಶಗಳು ಬಲಹೀನತೆ ಎಂದು ಭಾವಿಸಿ ಮಣ್ಣು ಮುಕ್ಕಿದ ಸಂದರ್ಭಗಳೂ ಇವೆ. ಭಾರತೀಯ ಸೈನ್ಯವು ಬದಲಾವಣೆಗಳಿಗೆ ಯಾವತ್ತೂ ತೆರೆದುಕೊಂಡಿದೆ.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆಯು, ತುರ್ತು ಸಂದರ್ಭದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲು ಸಹಾಯಕವಾಗುವ ನಿರೀಕ್ಷೆ ಇದೆ. ಸರ್ಕಾರವು ಮೂರು ಸೇನಾಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚಿಸುವ ಪ್ರಮೇಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥರೇ ಸರ್ಕಾರದ ಪಾಲಿಗೆ ಏಕಗವಾಕ್ಷಿಯಾಗಿರಲಿದ್ದಾರೆ. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
62 ವರ್ಷದ ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿ ನಿವೃತ್ತಿ ಹೊಂದಲು ಒಂದು ದಿನ ಇರುವಂತೆಯೇ ಅಚ್ಚರಿಯ ಬೆಳವಣಿಗೆಯಲ್ಲಿ ಸಿ.ಡಿ.ಎಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಭೂಸೇನಾ ಮುಖ್ಯಸ್ಥ ಹುದ್ದೆಯಿಂದ 31-12-2019ರ ಮಂಗಳವಾರದಂದು ನಿವೃತ್ತಿಯಾದ ರಾವತ್, ಭಾರತದ ಮೊದಲ ಸಿ.ಡಿ.ಎಸ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇಂದ್ರ ಸರ್ಕಾರ ಕೂಡ ಬಿಪಿನ್ ರಾವತ್ ಅವರಿಗೆ ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ಸೇನಾ ಮುಖ್ಯಸ್ಥರ ವಯೋಮಿತಿಯನ್ನು 62ರಿಂದ 65 ವರ್ಷಕ್ಕೆ 30-12-2019ರಂದು ಏರಿಸಿತು.
ಸ್ವಾತಂತ್ರ ಪಡೆದ ಬಳಿಕ ೧೯೬೨, ೧೯೭೧, ೧೯೯೯ ರ ಯುದ್ಧಗಳಲ್ಲಿ ಮೂರು ಪಡೆಗಳ ನಡುವೆ ಸಮನ್ವಯದ ಕೊರತೆಯು ಕಂಡುಬಂದಿತ್ತು. ಆದ್ದರಿಂದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆಯು ಮೂರು ಪಡೆಗಳ ನಡುವೆ ಸಮನ್ವಯ ಸಾಧಿಸಲು ಸಹಕಾರಿಯಾಗುವುದಷ್ಟೇ ಅಲ್ಲದೆ ಸೈನ್ಯದ ಕಾರ್ಯತಂತ್ರಗಳ ಬಗ್ಗೆ ರಕ್ಷಣಾಸಚಿವರು ಮತ್ತು ಪ್ರಧಾನಿಗೆ ಸೈನ್ಯದ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಾರೆ.
ಹೊಸದಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಸಿಡಿಎಸ್) ಹುದ್ದೆ ಸೃಷ್ಟಿಸಿ, ಆ ಹುದ್ದೆಗೆ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಿರುವ ಸರ್ಕಾರ, ಇದೀಗ ಮಿಲಿಟರಿ ವ್ಯವಹಾರ ಎಂಬ ಹೊಸ ಇಲಾಖೆಯನ್ನೇ ಅವರಿಗಾಗಿ ಸೃಷ್ಟಿಸಿದೆ. ಅವರ ಹೊಸ ಹುದ್ದೆಯ ಸೇವಾವಧಿಯು ಮೂರು ವರ್ಷಗಳದ್ದಾಗಿದೆ. ಈ ಮೂಲಕ ಬಿಪಿನ್ ರಾವತ್ ಇನ್ನೂ ಮೂರು ವರ್ಷಗಳ ಕಾಲ ದೇಶಕ್ಕೆ ಸೇವೆಯನ್ನು ಸಲ್ಲಿಸಲಿದ್ದಾರೆ.
1958, ಮಾರ್ಚ್ 16ರಂದು ಉತ್ತರಾಖಂಡ್ನ ಪೌರಿಯಲ್ಲಿ ಜನಿಸಿದ ಬಿಪಿನ್ ರಾವತ್ 1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ನಿಯುಕ್ತಿಗೊಂಡವರು. ಸೈನಿಕ ಕುಟುಂಬದ ಹಿನ್ನೆಲೆಯವರಾದ ಅವರು ಹಂತ ಹಂತವಾಗಿ ಮೇಲೇರಿ 2016ರಲ್ಲಿ ಭಾರತೀಯ ಸೇನಾ ಪಡೆ ಮುಖ್ಯಸ್ಥರಾದರು. 1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೇನೆ ಮುಖಾಮುಖಿಯಾದಾಗ ಬಿಪಿನ್ ರಾವತ್ ನೇತೃತ್ವದ ಬೆಟಾಲಿಯನ್ ಪ್ರಮುಖ ಪಾತ್ರ ವಹಿಸಿತ್ತು. 2015ರಲ್ಲಿ ಮಯನ್ಮಾರ್ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಬಿಪಿನ್ ರಾವತ್ ಅವರ ಪಾತ್ರವಿತ್ತು. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ಅವರೇ ವಹಿಸಿದ್ದರು. ಹಲವು ಸೇನಾನುಭವ ಮತ್ತು ಯುದ್ಧಾನುಭವ ಹೊಂದಿರುವ ಬಿಪಿನ್ ರಾವತ್ ಭಾರತದ ಮೊದಲ ಸಿ.ಡಿ.ಎಸ್(ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಿಲಿಟರಿ ವ್ಯವಹಾರ ಎಂಬ ಹೊಸ ಇಲಾಖೆಯ ಕಾರ್ಯಚೌಕಟ್ಟಿನ ಪ್ರಕಾರ, ಇದು ಭೂಸೇನೆ, ನೌಕಾಪಡೆ, ವಾಯುಪಡೆಗಳ ನಡುವೆ ಸಮನ್ವಯದ ಕಾರ್ಯ ಸಾಧನೆ ಮತ್ತು ಸೇನಾ ಪಡೆಗಳಿಗೆ ಬೇಕಾಗುವ ಖರೀದಿ, ಮದ್ದು ಗುಂಡು ಮುಂತಾದ ಅಗತ್ಯದ ಕಡೆ ಇಲಾಖೆ ಗಮನ ಹರಿಸಲಿದೆ ಎಂದೂ ಹೇಳಲಾಗಿದೆ. ‘ಮೂರೂ ಪಡೆಗಳು ತಂಡವಾಗಿಯೇ ಕಾರ್ಯಾಚರಣೆ ನಡೆಸಲಿವೆ. ಇವುಗಳಿಗೆ ಒದಗಿಸಲಾದ ಸಂಪನ್ಮೂಲದ ಸೂಕ್ತ ಬಳಕೆ ಹಾಗೂ ಸಾಮರ್ಥ್ಯ ಹೆಚ್ಚಿಸುವ ಹೊಣೆಗಾರಿಕೆ ಸಿ.ಡಿ.ಎಸ್ ಮೇಲಿದೆ. ಮೂರೂ ಪಡೆಗಳು ಜೊತೆಯಾಗಿ ಕಾರ್ಯಾಚರಣೆಗೆ ಇಳಿದಾಗ ಸೇನೆಗೆ ಸಾಮರ್ಥ್ಯ ದುಪ್ಪಟ್ಟಾಗಬೇಕು ಅಥವಾ ಅದಕ್ಕಿಂತ ಹೆಚ್ಚಾಗಬೇಕೇ ಹೊರತು ಕಡಿಮೆಯಾಗಬಾರದು. ಇದು ಸಿ.ಡಿ.ಎಸ್ ಗುರಿ. ಸರ್ಕಾರ ನೀಡಿದ ಮೂರು ವರ್ಷದ ಗಡುವಿನೊಳಗೇ ಭೂ ಸೇನೆ, ವಾಯುಪಡೆ ಹಾಗೂ ನೌಕಾಪಡೆಯನ್ನು ಏಕೀಕರಿಸಲು ಶ್ರಮಿಸುವುದಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
✍. ವಿವೇಕ್ ನರೇನ್