ಕಾಯಕಲ್ಪಕ್ಕೆ ಕಾಯುತ್ತಿದೆ…. ಕಾಡು ಪಾಲಾದ ಸ್ಮಾರಕ

ಕಾಯಕಲ್ಪಕ್ಕೆ ಕಾಯುತ್ತಿದೆ…. ಕಾಡು ಪಾಲಾದ ಸ್ಮಾರಕ

ಪ್ರತಿಯೊಂದು ಸ್ಮಾರಕಗಳ ಹಿಂದೆಯೂ ಹಲವಾರು ಕತೆಗಳಿರುತ್ತವೆ. ಸ್ಮಾರಕಗಳ ಸೌಂದರ್ಯದಷ್ಟೇ, ಅವುಗಳ ಇತಿಹಾಸವೂ ಜನರನ್ನು ಸೆಳೆಯುತ್ತದೆ. ಐತಿಹಾಸಿಕ ಸ್ಮಾರಕಗಳು ಚರಿತ್ರೆಯನ್ನು ಅರಿಯುವ ದಾರಿದೀಪಗಳಾಗಿದ್ದು, ಇಂಥ ಸ್ಮಾರಕಗಳನ್ನು ಉಳಿಸಿ ಬೆಳೆಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಇನ್ನು ಊರಾಚೆ ಇರುವ ದಿಕ್ಕಿಲ್ಲದ ಸ್ಮಾರಕಗಳನ್ನು ರಾತ್ರೋರಾತ್ರಿ ನೆಲಸಮಗೊಳಿಸಿ ನಿವೇಶನ ಅಭಿವೃದ್ಧಿ ಪಡಿಸುವವರ ಹಾವಳಿಯಂತೂ ವಿಪರೀತವಾಗಿರುವ ಕಾಲಘಟ್ಟದಲ್ಲಿ ಮಡಿಕೇರಿ ನಗರದ ಹೃದಯ ಭಾಗದಂತಿರುವ ಐತಿಹಾಸಿಕ ರಾಜಾಸೀಟ್ ಬಳಿ ಇತಿಹಾಸದ ಕುರುಹುಗಳನ್ನು ಬಿಟ್ಟುಹೋಗಿರುವ ಸ್ಮಾರಕವೊಂದು ಕಾಡಿನೊಳಗೆ ಇನ್ನು ಬಿಸಿಲು, ಮಳೆ, ಗಾಳಿಗೂ ಜಗ್ಗದೆ ಸುಸ್ಥಿತಿಯಲ್ಲಿ ಇನ್ನೂ ಭದ್ರವಾಗಿ ನೆಲೆ ನಿಂತಿದೆ. ಆದರೆ ಸುತ್ತಲೂ ಕಾಡು ಆವರಿಸಿಕೊಂಡು ಅತಿಕ್ರಮಣಕಾರರಿಂದ ತನ್ನನ್ನು ತಾನೂ ಇಲ್ಲಿಯವರಗೆ ಸಂರಕ್ಷಿಸಿಕೊಂಡಿದೆ.
ಇಲ್ಲಿ ನಿಂತಿರುವ ಸರಿ ಸುಮಾರು 90 ವರ್ಷಗಳ ಇತಿಹಾಸವಿರುವ ಸ್ಮಾರಕಕ್ಕೂ ಒಂದು ಹಿನ್ನಲೆ ಇದೆ. 1929 ನವೆಂಬರ್‌ 29ರಂದು ಈ ಸ್ಮಾರಕ ನೆಲೆ ನಿಂತಿರುವ ಜಾಗದಲ್ಲಿ, ಸ್ವತಂತ್ರ ಪೂರ್ವ ಭಾರತದ ವೈಸ್‌ರಾಯ್ ಲಾರ್ಡ್ ಇರ್ವಿನ್‌ ನನು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕೊಡಗಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ಸ್ಥಳವಾಗಿದೆ. ಇವಿನ್ ಸ್ಮಾರಕವು ರಾಜಾಸೀಟ್‌ ಮತ್ತು ಗಾಂಧಿ ಮೈದಾನದ ನಡುವಿನಲ್ಲಿರುವ ಗುಡ್ಡದ ಮೇಲಿದೆ. ಈ ಸ್ಮಾರಕವು ಇಲ್ಲಿರುವ ಬಗ್ಗೆ ಬಹುಪಾಲು ಸ್ಥಳೀಯರಿಗೆ ಮಾಹಿತಿ ಇರಲಿಕ್ಕಿಲ್ಲ. ಈ ಸ್ಮಾರಕವು ಕಾಡು ಪಾಲಾಗಿ 30 ವರ್ಷಗಳು ಕಳೆದಿರಬಹುದು. ಹಾಗಾಗಿ ಇಂದಿನ ಪೀಳಿಗೆಯವರಿಗೆ ಇರ್ವಿನ್‌ ಸ್ಮಾರಕದ ಬಗ್ಗೆ ಎಳ್ಳಷ್ಟು ಗೊತ್ತೆ ಇಲ್ಲಾ.

ಈ ಸ್ಮಾರಕದ ಬಗ್ಗೆ ಮಾಹಿತಿಗಾಗಿ ಕೊಡಗಿನ ಇತಿಹಾಸವನ್ನು ತಿಳಿಸುವ ಪರಿಷ್ಕೃತಗೊಂಡಿರುವ “ಕೊಡಗು ಗೆಜೆಟಿಯರ್” ಹಾಗೂ “ಕೊಡಗಿನ ಇತಿಹಾಸ” ಪುಸ್ತಕವನ್ನು ತಿರುವಿ ಹಾಕಿದಾಗ ಲಾರ್ಡ್ ಇರ್ವಿನ್‌ನನು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕೊಡಗಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ನೆನೆಪಿಗೆ ಒಂದು ಸ್ಮಾರಕವಿತ್ತು. ಅದು ಈಗ ಇಲ್ಲವಾಗಿದೆ. ಎಂದು ಮಾತ್ರ ಉಲ್ಲೇಖವಿದೆ. ಒಂದೊಂದು ಪ್ರಾಚೀನ ಸ್ಮಾರಕದ ಹಿಂದೆ ಒಂದೊಂದು ಕತೆ ಇರುವುದರಿಂದ ಮುಂದಿನ ಪೀಳಿಗೆಯ ಅರಿವು ವಿಸ್ತರಣೆಗೆ ನಾವು ಸಂರಕ್ಷಿಸಬೇಕಿದೆ. ಐತಿಹಾಸಿಕ ಸ್ಮಾರಕ, ಅವಶೇಷಗಳನ್ನು ಸಂರಕ್ಷಿಸುವರು ಇತಿಹಾಸವನ್ನು ಪ್ರೀತಿಸುತ್ತಾರೆ ಎಂಬುದು ಒಂದು ಮಾತು ರೂಡಿಯಲ್ಲಿದೆ.
ಇತಿಹಾಸವು ತತ್ಕಾಲದಲ್ಲಿನ ಮತ್ತು ಕಾಲಾಂತರದಲ್ಲಿನ ಬದುಕುಗಳು, ಘಟನೆಗಳು, ಪರಿಸ್ಥಿತಿಗಳು ಮತ್ತು ಬೆಳವಣಿಗೆಗಳಿಗೆ ಸಂಬಂಧಪಟ್ಟಿರುತ್ತದೆ. ಆದ್ದರಿಂದ ಇದನ್ನು ಅರ್ಥ ಮಾಡಿಕೊಳ್ಳಲು ಕಾಲಾನುಕ್ರಮದ ಅರಿವು ಅತ್ಯಗತ್ಯ. ಇವು ಮಕ್ಕಳು ಬದಲಾವಣೆ ಹಾಗು ಕಾರ್ಯಕಾರಣ ಸಂಬಂಧಗಳಂತಹ ಪ್ರಮುಖ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇತಿಹಾಸದಲ್ಲಿ ಅನೇಕ ರಾಜ ಸಂತತಿಗಳು ಆಳಿವೆ ಹಾಗೆಯೇ ಅಳಿದಿವೆ ಅವರ ಗುರುತಾಗಿ ಅನೇಕ ಸ್ಮಾರಕಗಳನ್ನು ಬಿಟ್ಟು ಹೋಗಿರುತ್ತಾರೆ. ಕಾಲಾನುಕ್ರಮವನ್ನು ಅರಿತುಕೊಳ್ಳಲು ಅವು ಉಪಯುಕ್ತ ಸಾಧನಗಳಾಗಿವೆ. ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲು ಆಗುವುದಿಲ್ಲ. ಸರಿಯಾಗಿ ಇತಿಹಾಸವನ್ನು ತಿಳಿದುಕೊಂಡರೆ ಮುಂದಿನ ಪೀಳಿಗೆಗೆ ಇತಿಹಾಸದ ಮಹತ್ವವನ್ನು ತಿಳಿಸಬಹುದು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸ್ಮಾರಕದ ಕಲ್ಪನೆಯೇ ರೋಚಕವಾದದ್ದು. ಏಕಕಾಲಕ್ಕೆ ವ್ಯಕ್ತಿತ್ವದ ಮಹಿಮೆ ಸಾರುತ್ತಲೇ ಸ್ಥಳ ಸೊಬಗನ್ನು ಹೆಚ್ಚಿಸುವ ಒಂದು ಸುಂದರ ಕಲ್ಪನೆಯೇ ಸ್ಮಾರಕ. ಒಂದೊಂದು ಸ್ಮಾರಕವು ವ್ಯಕ್ತಿಯ ಅಥವಾ ಸ್ಥಳಗಳ ಪ್ರಮುಖ ಘಟನೆಗಳನ್ನು ನೆನಪಿಸುವ, ಆಯಾ ಘಟನೆಗಳನ್ನು ಮತ್ತು ವಸ್ತುಗಳನ್ನು ಪ್ರಚುರಪಡಿಸುವ ರಚನಾತ್ಮಕ ವಿನ್ಯಾಸಗಳಾಗಿವೆ. ಆಯಾ ವ್ಯಕ್ತಿಗಳ ಬದುಕನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಒಂದು ಪ್ರಯತ್ನವೇ ಸ್ಮಾರಕ. ಸಾರ್ವಜನಿಕ ಕ್ಷೇತ್ರವೊಂದರಲ್ಲಿ ಬಾಳಿದ ವ್ಯಕ್ತಿ ಆ ಕಾಲಕ್ಕೆ ಮಾತ್ರ ಸಲ್ಲುವುದಿಲ್ಲ, ಮುಂದಿನವರಿಗೂ ಅವರ ವಿಷಯಗಳು ತಿಳಿಯಬೇಕು. ಅವರ ಬಗೆಗಿನ ಮಾಹಿತಿಗಳನ್ನು ಹಸ್ತಾಂತರಿಸುವಂತಾಗಬೇಕು. ಹೀಗಿದ್ದವರೊಬ್ಬರು ಬದುಕಿದ್ದರು ಎಂಬ ಚಿತ್ರಣವನ್ನು ನಮ್ಮ ಮುಂದಿನ ತಲೆಮಾರಿಗೆ ಕಟ್ಟಿಕೊಡುವ ಜವಾಬ್ದಾರಿ ನಮ್ಮದಾಗಬೇಕು. ಇತಿಹಾಸದಲ್ಲಿ ತಮ್ಮ ಛಾಪನ್ನು ಬಿಟ್ಟು ಹೋದ ವ್ಯಕ್ತಿಗಳು ತಮ್ಮ ಕಾಲವಾದ ನಂತರವೂ ಸ್ಮಾರಕದ ಮೂಲಕ ಹೊಸ ತಲೆಮಾರುಗಳಿಗೆ ಮುಖಾಮುಖಿ ಆಗುತ್ತಲೇ ಇದ್ದಾರೆ.
ಹೆಚ್ಚುತ್ತಿರುವ ನಗರೀಕರಣ ಪ್ರಕ್ರಿಯೆಯಿಂದಾಗಿ ಈ ಸ್ಮಾರಕಗಳು ಹಾನಿಗೊಳಗಾಗುತ್ತಿವೆ. ಹೀಗಾಗಿ ಇವುಗಳ ಸಂರಕ್ಷಣೆಗೆ ಗಂಭೀರವಾಗಿ ಚಿಂತಿಸಬೇಕು. ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲಾಕೃತಿಗಳು ದೇಶದ ಅಮೂಲ್ಯ ಆಸ್ತಿಗಳಾಗಿವೆ. ಅವುಗಳನ್ನು ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಸ್ಮಾರಕಗಳು ಕೇವಲ ಪ್ರವಾಸಿ ತಾಣವಾಗಿ ಉಳಿಯದೇ, ಸಂಶೋಧನೆ ಬಯಸಿ ಬರುವವರಿಗೆ ಆಕರಗಳಾಗಿ, ತಂತ್ರಜ್ಞರಿಗೆ ಗೈಡ್‌ ಆಗಿ, ಸಿನಿಮಾ ಚಟುವಟಿಕೆಗಳಿಗೆ ಶೂಟಿಂಗ್‌ ತಾಣವಾಗಿಯೂ ಅವುಗಳು ರೂಪಗೊಂಡಿವೆ.

ಸ್ಮಾರಕಗಳು ವರುಷಗಳು ಉರುಳಿದಂತೆ ಆಂತರಿಕ ಹಾಗೂ ಬಾಹ್ಯ ಕಾರಣದಿಂದ ತನ್ನ ಸಮಸ್ಥಿತಿ ಕಳೆದುಕೊಳ್ಳುತ್ತವೆ. ಮೂಲ ಸ್ವರೂಪ ಕ್ಷೀಣಿಸಿ ವಿರೂಪವಾಗುತ್ತವೆ. ಅಂತಹ ಸ್ಥಿತಿಯಲ್ಲಿ ಅವುಗಳನ್ನು ಸಂರಕ್ಷಿಸಿ ಸಮಸ್ಥಿತಿಗೆ ಕೊಂಡೊಯ್ಯಬೇಕಾದ ಅಗತ್ಯತೆ ಇರುವುದರಿಂದ ಪುರಾತತ್ವ ಇಲಾಖೆ ಅಸ್ತಿತ್ವಕ್ಕೆ ಬಂದಿದೆ. ಕಣ್ಣೆದುರಿನಲ್ಲಿಯೇ ಅನೇಕ ಸ್ಮಾರಕಗಳು ನಾಶವಾಗುತ್ತಿದ್ದರು. ಸಾರ್ವಜನಿಕರಲ್ಲಿ ಜಾಗೃತಿಯಾಗುತ್ತಿಲ್ಲ. ಹಾಗಾಗಿ ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ. 1940ರ ನಂತರ ಸ್ಮಾರಕಗಳ ಸಂರಕ್ಷಣಾ ಕಾರ್ಯ ಮಹತ್ವ ಪಡೆದುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕ್ಷೀಣಿಸುತ್ತಿದೆ. ಮತ್ತೆ ಸ್ಮಾರಕಗಳ ಸಂರಕ್ಷಣೆಗೆ ಜೀವತುಂಬಿ ಇತಿಹಾಸದ ಕುರುಹುಗಳನ್ನು ಉಳಿಸುವ ಮಹತ್ಕಾರ್ಯವಾಗಬೇಕಿದೆ.
ಸ್ಮಾರಕಗಳು, ಹಾನಿಗೊಳಗಾಗುತ್ತಿರುವುದು ಇಲಾಖೆಗಳ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಒಂದು ನಾಡಿನ ಬದುಕು, ಭವಿಷ್ಯ ರೂಪಿಸಿಕೊಳ್ಳಲು ಇತಿಹಾಸದ ತಿಳುವಳಿಕೆ ಬಹಳ ಮುಖ್ಯ. ಇತಿಹಾಸವೆಂದರೆ ಕಳೆದು ಹೊದ ಘಟನಾವಳಿಗಳಿಗೆ ಮಾತ್ರ ಸಂಭಂದಿಸಿದ್ದಲ್ಲ. ಭವಿಷ್ಯ ರೂಪಿಸಿಕೊಳ್ಳುವ ಕೈಗನ್ನಡಿಯೂ ಹೌದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹೊಸತನದ ಆವೇಶದಲ್ಲಿ ಪ್ರಾಚೀನ ಸ್ಮಾರಕ, ಕಟ್ಟಡ, ಅವಶೇಷಗಳು ನಾಶವಾಗಲು ಬಿಡಬಾರದು. ಹಿಂದಿನ ಇತಿಹಾಸ ಗೊತ್ತಿಲ್ಲದೆ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪುರಾತನ ಜ್ಞಾನದ ಪ್ರಜ್ಞೆ ನಮ್ಮಲ್ಲಿ ಇರಬೇಕಾಗಿದೆ.

ಲೇಖಕರು: ✍. ಅರುಣ್ ಕೂರ್ಗ್

0 0 votes
Article Rating
Subscribe
Notify of
guest
0 Comments
Inline Feedbacks
View all comments