ಮನುಕುಲದ ರಕ್ಷಣೆಯ ಮಹತ್ವದ ದಿನ : ಇಂದು ವಿಶ್ವ ಭೂ ದಿನ :
ಮಹಾ ಮಾರಿ ಕೊರೊನಾ ತೊಲಗಿಸಿ ; ಭೂಮಿಯನ್ನು ಸಂರಕ್ಷಿಸೋಣ ಬನ್ನಿ.
ಭೂಮಿಯು ನಮ್ಮ ಅಗತ್ಯತೆಗಳನ್ನು ಪೂರೈಸುತ್ತದೆ, ಆದರೆ ನಮ್ಮ ದುರಾಸೆಗಳನ್ನಲ್ಲ – ಮಹಾತ್ಮ ಗಾಂಧೀಜಿ
ಇಂದು ( ಏಪ್ರಿಲ್ 22) ಭೂಮಿಯ ಹುಟ್ಟುಹಬ್ಬ :
ಇಂದು ವಿಶ್ವ ಭೂಮಿ ದಿನ. ಪ್ರತಿ ವರ್ಷ ಜಗತ್ತಿನ ಎಲ್ಲಾ ದೇಶಗಳಲ್ಲಿ ಏಪ್ರಿಲ್ 22 ರಂದು ವಿಶ್ವ ಭೂ ದಿನ (ಹುಟ್ಟುಹಬ್ಬ) ವನ್ನು ಆಚರಿಸಲಾಗುತ್ತಿದೆ. ಭೂಮಿಯ ಹುಟ್ಟುಹಬ್ಬ ಅಂದರೆ ಅಮ್ಮನ ಹುಟ್ಟುಹಬ್ಬದ ದಿನ.ಅಮ್ಮ ತುಂಬ ಸುಂದರವಾಗಿ, ನಗುನಗುತ್ತ ಓಡಾಡುವ ಹಾಗೆ ಭೂಮಾತೆಯ ಮಡಿಲ್ಲಲ್ಲೂ ಈ ದಿನಗಳಲ್ಲಿ ಗಿಡಮರ, ಹೂ ಬಳ್ಳಿ, ಪಶು-ಪಕ್ಷಿಗಳಿಗೂ ಸಡಗರ -ಸಂಭ್ರಮ.
ಏಪ್ರಿಲ್ 22 ನೇ 1970 ರಂದು ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಯುನೆಸ್ಕೋ ಸಮಾವೇಶದಲ್ಲಿ ‘ಪರಿಸರ ಅರಿಯಿರಿ’ ಎಂಬ ಘೋಷಣೆಯಡಿ ಆರಂಭವಾದ ಭೂಮಿ ದಿನಕ್ಕೆ ಇಂದಿಗೆ 50 ವರ್ಷಗಳಾಗಿದೆ. ಕಳೆದ 50 ವರ್ಷಗಳಿಂದ ಪ್ರತಿವರ್ಷ ಜಾಗತಿಕ ಪರಿಸರ ಸಮಸ್ಯೆಗಳ ಕ್ಷಿಪ್ರ ಪರಿಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುುಖ್ಯತೆ ನೀಡುವ ವಿಷಯದ ಬಗ್ಗೆ ವಿಶ್ವದಾದ್ಯಂತ ಗಮನ ಸೆಳೆಯಲು ಸಂಯುಕ್ತ ರಾಷ್ಟçಗಳ ಪರಿಸರ ಕಾರ್ಯಕ್ರಮ (ಯು.ಎನ್.ಇ.ಪಿ.)ದಡಿ ಭೂ ರಕ್ಷಣೆಗೆ ಮುಂದಾಗುತ್ತದೆ.
ಬೇಸಿಗೆಯ ವಸಂತ ಕಾಲದಲ್ಲಿ ಜೀವಲೋಕದ ಎಲ್ಲಡೆ ನಲಿವು, ಸಂತಸ ಹೊಮ್ಮುತ್ತಿದೆ. ಈ ಸುಂದರ ಪೃಥ್ವಿಯ ಹುಟ್ಟುಹಬ್ಬ (ಭೂಮಿಯ ದಿನ) ವನ್ನು ಆಚರಿಸುವ ಸಮಯ ಬಂದಿದೆ.
ಪ್ರಸಕ್ತ ವರ್ಷ (2020) ನೇ ವರ್ಷ)ದಲ್ಲಿ ‘ವಾಯುಗುಣ ಸಕ್ರಿಯತೆ’ ಎಂಬ ಶೀರ್ಷಿಕೆಯಡಿ ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಮೇಲೆ ಅವ್ಯಾಹತವಾಗಿ ನಡೆದ ಮನುಷ್ಯನ ದೌರ್ಜನ್ಯಗಳಿಂದಾಗಿ ಇಂದು ಭೂಮಿಯ ಸಂಪನ್ಮೂಲಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳಿಂದಾಗಿ ವರ್ಷದಿಂದ ವರ್ಷಕ್ಕೆ ವಾಯುಗುಣ ಬದಲಾವಣೆ ಉಂಟಾಗುತ್ತಿದೆ. ಇದರಿಂದ ನಿರಂತರವಾಗಿ ಸಂಭವಿಸುತ್ತಿರುವ ಜಾಗತಿಕ ತಾಪಾಮಾನ, ಹವಾಮಾನ ವೈಪರೀತ್ಯ, ಅಂತರ್ಜಲದ ಕ್ಷೀಣತೆ, ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕ ಮಳೆ, ಪ್ರವಾಹದಂತಹ ಪ್ರಕೃತಿ ವಿಕೋಪಗಳು ಇಡೀ ಭೂಮಂಡಲಕ್ಕೆ ಸವಾಲಾಗಿ ಪರಿಣಮಿಸಿವೆ.
ನಾವು ಈ ಭೂ ದಿನದ ಸಂದರ್ಭ ಭೂಮಿಯ ಸಂರಕ್ಷಣೆ ಮತ್ತು ಭೂ ಮಂಡಲದ ಎಲ್ಲಾ ಜೀವಿಗಳ ಸಂರಕ್ಷಣೆ, ನೀರು ಮತ್ತು ವಾಯುಮಂಡಲದ ರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಭೂ ಸಂರಕ್ಷಣೆಗಾಗಿ ಈ ದಿನವನ್ನು ಆಚರಿಸಲೇಬೇಕಾಗಿದೆ.
ಇಂದು ಪರೀಕ್ಷೆ ಎದುರಿಸಬೇಕಾದ ವಿದ್ಯಾರ್ಥಿಗಳು ಕೊರೊನ ಎಂಬ ಮಹಾಮಾರಿ ರೋಗ ಪರೀಕ್ಷೆಯನ್ನು ಎದುರಿಸಿ ಹೋರಾಡುವ ಅನಿವಾರ್ಯತೆ ಬಂದಿದೆ.
ಕೊರೊನ ತೊಲಗಿಸೋಣ : ಆದರೆ, ಇಂದು ಈ ಶತಮಾನದ ಮಹಾಮಾರಿ ಕೊರೋನ ವೈರಸ್ ಎಂಬ ಸಾಂಕ್ರಾಮಿಕ ರೋಗ ಇಂದು ವಿಶ್ವವನ್ನೇ ವ್ಯಾಪಿಸಿದೆ. ವಿಶ್ವದ 195 ದೇಶಗಳು ಕೊರೊನ ವೈರಸ್ ಸೋಂಕು ಇಂದು ಇಡೀ ಮನುಕುಲವನ್ನೇ ದಂಗುಬಡಿಸಿದೆ. ದೇಶದಲ್ಲಿ ಎಲ್ಲಾ ಕಾಯಿಲೆಗಳನ್ನು ಮೆಟ್ಟಿ ನಿಂತಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕಿನ ಕಾಯಿಲೆಯನ್ನು ನಿರ್ಮೂಲನೆಗೊಳಿಸಲು ಇಂದು ಇಡೀ ವಿಶ್ವವೇ ಇಂದು ಸಮಷ್ಠಿ ಶಕ್ತಿಯಾಗಿ ಹೋರಾಟ ನಡೆಸುತ್ತಿದೆ.
ನಾವು ಈಗ ಕೊರೊನ ವೈರಸ್ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಭೂಗ್ರಹವನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಮತ್ತು ಜವಾಬ್ದಾರಿ ಎಲ್ಲ ದೇಶಗಳ ನಾಗರಿಕರ ಮೇಲಿದೆ.
ವಿಶ್ವದ ಹಿರಿಯಣ್ಣ ಎನ್ನುವ ಅಮೇರಿಕ ದೇಶ ಸೇರಿದಂತೆ ಅನೇಕ ಸಂಯುಕ್ತ ರಾಷ್ಟ್ರಗಳು ಕೊರೊನ ಸೋಂಕಿಗೆ ಸಿಲುಕಿ ತತ್ತರಿಸಿವೆ. ಈ ಸೋಂಕಿನಿಂದ ವಿಶ್ವದಲ್ಲಿ ಈ ತನಕ 1.65 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 17,250ಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಒಳಗಾಗಿ ಈ ತನಕ(ಏಪ್ರಿಲ್ 20 ರ ತನಕ) 559 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಕೊರೊನ ವೈರಸ್‌ನ ರೋಗ ನಿರ್ಮೂಲನೆಗೆ ಎಲ್ಲಾ ರಾಷ್ಟ್ರಗಳು ನಡೆಸುತ್ತಿರುವ ಹೋರಾಟವು ಎಲ್ಲರನ್ನು ಒಗ್ಗೂಡಿಸಿದೆ. ಇದು ನಮ್ಮನ್ನು ಯಾವುದೇ ಯುದ್ಧ ಸಾರದೆ ನಾವೆಲ್ಲಾ ಒಂದೇ (ವಿಶ್ವ ಮಾನವರು) ಎಂಬ ಮನಸ್ಥಿತಿಯನ್ನು ಹೊಂದುವಂತೆ ಮಾಡಿ ಕೊರೊನ ಸೋಂಕಿನ ವಿರುದ್ಧ ಯುದ್ಧದ ಮಾದರಿಯಲ್ಲಿ ಹೋರಾಡುವಂತೆ ಮಾಡಿದೆ.
ಪರಿಸರ – ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ನಮ್ಮ ದೈನಂದಿನ ಬದುಕನ್ನು ನಿಯಂತ್ರಿಸುವ ಪರಿಸರವನ್ನು ನಾಳಿನ ಜನಾಂಗಕ್ಕೆ ಉಳಿಸುವ ದಿಸೆಯಲ್ಲಿ ಪರಿಸರವನ್ನು ನಾವು ಕಾಪಾಡಿ ಸಂರಕ್ಷಿಸಬೇಕಿದೆ. ಭವಿಷ್ಯತ್ತಿಗಾಗಿ ನಾವು ನೆಲ -ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ ವೈವಿಧ್ಯ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಿಸಬೇಕಿದೆ. ಪರಿಸರದ ಬಗ್ಗೆ ನಿರ್ಲಕ್ಷö್ಯ ವಹಿಸಿದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ಗಂಡಾಂತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
ನದಿ, ಕೆರೆ ಹಾಗೂ ಜಲಮೂಲಗಳು ಸೇರಿದಂತೆ ಅಂತರ್ಜಲ ಸಂರಕ್ಷಣೆಗೆ ನಾವು ಹೆಚ್ಚಿನ ಜಾಗೃತಿ ವಹಿಸಬೇಕಿದೆ. ಪ್ರಕೃತಿಯಲ್ಲಿನ ನೂರಾರು ಸಸ್ತನಿಗಳು ಹಾಗೂ ಪಕ್ಷಿ ಪ್ರಬೇಧಗಳು, ಅಪರೂಪದ ಸಸ್ಯ ಮತ್ತು ಜೀವಿಗಳನ್ನೊಳಗೊಂಡ ಅರಣ್ಯ ಹಾಗೂ ಜೀವಿ ವೈವಿಧ್ಯ ಸಂಪತ್ತನ್ನು ಹೊಂದಿರುವ ಪಶ್ಚಿಮ ಘಟ್ಟ ಸಂರಕ್ಷಣೆಗೆ ನಾವು ಹೆಚ್ಚಿನ ಕಾಳಜಿ ವಹಿಸುವ ಮೂಲಕ ಇಡೀ ಜೀವ ಸಂಕುಲವನ್ನು ಸಂರಕ್ಷಿಸಲು ಪಣ ತೊಡೋಣ.
ಭೂಮಿಯನ್ನು ಸಂರಕ್ಷಿಸೋಣ : ಜೀವಿಗಳಿರುವ ಏಕೈಕ ಗ್ರಹವಾದ ಭೂಮಿಯೇ ನಮ್ಮ ಮನೆ, ಹಾಗಾಗಿ ಎಲ್ಲಾ ಜೀವಿಗಳು ಜೀವಿಸಲು ಇರುವುದೊಂದೇ ಭೂಮಿ. ನಾವು ಇದನ್ನು ಸಂರಕ್ಷಿಸಿ, ಸಂಪೋಷಿಸಿ ಮುಂದಿನ ಪೀಳಿಗೆಗೆ ಜೋಪಾನವಾಗಿ ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ನಾವೆಲ್ಲರೂ ಭೂಮಿಯಲ್ಲಿರುವ ಅಮೂಲ್ಯ ಸಂಪತ್ತನ್ನು ರಕ್ಷಿಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ.
ಭೂ ದಿನದ ಸಂದರ್ಭ ನಮಗೆ ಮತ್ತು ಭೂಮಿಗೆ ಇರುವ ಸಂಬಂಧವನ್ನು ನೆನಪಿಸಿಕೊಳ್ಳುವ ದಿನ. ನಾವು ನಿಸರ್ಗದಿಂದ ಅದೆಷ್ಟೇ ದೂರ ಬಂದರೂ ನಮ್ಮ ಮತ್ತು ಭೂಮಿಯ ಸಂಬಂಧ ಮಾತ್ರ ಸಡಿಲವಾಗುವುದಿಲ್ಲ. ನಮ್ಮ ಪ್ರತಿಯೊಂದು ಚಟುವಟಿಕೆಯೂ ಆ ಸಂಬಂಧವನ್ನು ಉತ್ತಮಗೊಳಿಸುತ್ತದೆ ಇಲ್ಲವೆ ಬಿಗಡಾಯಿಸುತ್ತದೆ. ಯಾವುದು ಉತ್ತಮಗೊಳಿಸುತ್ತದೆ ಎಂಬ ತಿಳುವಳಿಕೆ ನಮಗಿರಬೇಕು.
ಭೂ ದಿನ : ನಾವು ಈ ‘ ಭೂ ದಿನ ’ವನ್ನು ಹಿಂದೆಂದಿಗಿಂತಲೂ ವ್ಯಾಪಕವಾಗಿ ಮತ್ತು ಶ್ರದ್ಧೆಯಿಂದ ಆಚರಿಸಬೇಕಾದ ದಿನಗಳು ಬಂದಿವೆ. ಏಕೆಂದರೆ ಭೂಮಿಯ ಒಟ್ಟಾರೆ ಸ್ಥಿತಿಗತಿ ನಿಜಕ್ಕೂ ದಿನದಿನಕ್ಕೆ ಆತಂಕಕಾರಿ ಆಗುತ್ತಿದೆ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ನೆಲ ಮಾಲಿನ್ಯ ಎಲ್ಲವೂ ಹೆಚ್ಚುತ್ತಿವೆ. ದಿನೇ ದಿನೇ ಭೂಮಿ ಬಿಸಿಯಾಗುತ್ತಿದೆ. ಅದರಿಂದಾಗಿ ಹವಾಮಾನ ಸಮತೋಲ ಬಿಗಡಾಯಿಸುತ್ತಿದೆ. ಭೀಕರ ಮಳೆಗಾಲ, ಪ್ರಕೃತಿ ವಿಕೋಪ ಇಲ್ಲವೆ ಭೀಕರ ಬರಗಾಲಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.
ಇಂದು ನಾವು ಗಾಳಿಶಕ್ತಿ, ಸೌರಶಕ್ತಿ, ಜೀವದ್ರವ್ಯಶಕ್ತಿ(ಜೈವಿಕ ಇಂಧನ), ಅಲೆಶಕ್ತಿಗಳೆಲ್ಲವನ್ನೂ ಮತ್ತೆ ಬಳಕೆಗೆ ಈಗೀಗ ತರುತ್ತಿದ್ದೇವಾದರೂ ಫಾಸಿಲ್ ಇಂಧನ(ಪೆಟ್ರೋಲಿಯಂ)ಗಳು ಇಲ್ಲದಿದ್ದರೆ ನಮ್ಮ ಒಂದು ದಿನವನ್ನೂ ಕಳೆಯುವುದು ನಮಗೆ ಕಷ್ಟವಾಗುತ್ತಿದೆ. ಈ ಬಗೆಯೆ ಪೆಟ್ರೋಲ್ ದಾಸ್ಯದಿಂದ ಹೊರಬರುವ ಮಾರ್ಗಗಳನ್ನು ನಾವು ಆದಷ್ಟು ಶೀಘ್ರವಾಗಿ ಹುಡುಕಬೇಕಿದೆ.
ವೈಯಕ್ತಿಕ ಮಟ್ಟದಲ್ಲಿ ನಮ್ಮ ನಡವಳಿಕೆಗಳು ಬದಲಾಗಬೇಕಿದೆ. ಪರಿಸರ ರಕ್ಷಣೆಯ ಕಾನೂನುಗಳಿಗೆ ನಾವೆಲ್ಲ ಬದ್ಧರಾಗಬೇಕಾಗಿದೆ. ಸಾಮೂಹಿಕ ಸ್ತರದಲ್ಲಿ ಇಡೀ ಸಮಾಜವೇ ಒಂದಾಗಿ ಭೂ ಸಂರಕ್ಷಣೆಯಲ್ಲಿ ತೊಡಗಬೇಕಾಗಿದೆ. ಆದ್ದರಿಂದ ನಿಜವಾದ ಭೂ ದಿನಾಚರಣೆಯಲ್ಲಿ ನಾವು ನಮ್ಮ ನಮ್ಮ ಮನೆಗಳಲ್ಲಿ, ವೈಯಕ್ತಿಕ ಮಟ್ಟದಲ್ಲಿ ಹಾಗೂ ಸಾಮೂಹಿಕವಾಗಿ ಈ ಕೆಳಗಿನ ಜೀವನಕ್ರಮ/ಹವ್ಯಾಸಗಳನ್ನು ರೂಢಿಸಿಕೊಳ್ಳೋಣ.
• ನಾವು ನಮ್ಮ ಮನೆಯಿಂದಲೇ ಜೈವಿಕ ಮತ್ತು ಅಜೈವಿಕ ತ್ಯಾಜ್ಯವನ್ನು ಬೇರ್ಪಡಿಸಿ ಸೂಕ್ತವಾಗಿ ವಿಲೇವಾರಿ ಮಾಡೋಣ.
• ಮನೆಯ ಪರಿಸರದ ಹಿತ್ತಿಲ್ಲಲ್ಲೇ ಜೈವಿಕ ಕಸವನ್ನು ಕೊಳೆಯಿಸಿ ಕಾಂಪೋಸ್ಟ್ ಮಾಡುವ ನಿರ್ಧಾರವನ್ನು ಕೈಗೊಳ್ಳೊಣ.
• ಮನೆಯಲ್ಲಿರುವ ಬುರುಡೆ ಬಲ್ಬ್ಗಳನ್ನೂ, ಟ್ಯೂಬ್‌ಲೈಟ್‌ಗಳನ್ನೂ ತೆಗೆದು ಹಾಕಿ ಸಿ.ಎಫ್.ಎಲ್., ಎಲ್.ಇ.ಡಿ. ಬಲ್ಬ್ಗಳನ್ನು ಅಳವಡಿಸೋಣ.
• ನೀರು ಕಾಯಿಸಲು ಮತ್ತು ವಿದ್ಯುತ್ ತಯಾರಿಸಲು ಸೋಲಾರ್(ಸೌರಶಕ್ತಿ) ಉಪಕರಣವನ್ನು ಹಾಕಿಸಿಕೊಳ್ಳಲು ಪಣತೊಡೋಣ.
• ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆಯನ್ನು ತ್ಯಜಿಸಿ ಬದಲಿಗೆ ಬಟ್ಟೆ, ಸೆಣಬಿನ ಬ್ಯಾಗ್ ಬಳಕೆಗೆ ಒತ್ತು ನೀಡಲು ಸಂಕಲ್ಪ ಮಾಡೋಣ.
• ಮಳೆನೀರನ್ನು ಸಂಗ್ರಹಿಸಿ ಬಳಸಲು ನಿರ್ಧರಿಸಿ ಅಂತರ್ಜಲ ವೃದ್ಧಿಗೆ ಕಾರ್ಯಪ್ರವೃತರಾಗೋಣ.
• ಮನೆಯ ಸಮೀಪದ ಸ್ಥಳಗಳಿಗೆ ವಾಹನದ ಬದಲಿಗೆ ಬೈಸಿಕಲ್‌ಅನ್ನು ಬಳಸುತ್ತೇನೆ ಎಂಬ ಪ್ರತಿಜ್ಞೆ ಮಾಡೋಣ.
• ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚು ಗಿಡ-ಮರಗಳನ್ನು ನೆಟ್ಟು ಬೆಳೆಸಲು ಸಂಕಲ್ಪ ತೊಡೋಣ.
ಹೀಗೆ ಇನ್ನೂ ಹತ್ತು ಹಲವು ಪರಿಸರಪೂರಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ನಾವು ಭೂ ದಿನವನ್ನು ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ಕೈಗೊಳ್ಳೋಣ.
ಈ ದಿಸೆಯಲ್ಲಿ ನಾವು ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡದೆ ಭೂಮಿಯನ್ನು ಸಂರಕ್ಷಿಸಬೇಕಿದೆ. ಭೂ ಮಾಲಿನ್ಯ ತಡೆಗಟ್ಟುವ ಮೂಲಕ ನೆಲ- ಜಲ, ಜೀವಿ ವೈವಿಧ್ಯ ಹಾಗೂ ಪರಿಸರ ಸಂರಕ್ಷಣೆಗೆ ದಿಟ್ಟ ಹೆಜ್ಜೆ ಹೆಜ್ಜೆ ಇಡೋಣ.
ಹಾಗಾದರೆ , ಬನ್ನಿ ! ಇರುವುದೊಂದೇ ಭೂಮಿ ; ಇದೇ ನಮ್ಮ ಮನೆ, ಇದನ್ನು ಸಂರಕ್ಷಿಸಿ, ಸಂಪೋಷಿಸಿ ಮುಂದಿನ ಪೀಳಿಗೆಗೆ ಈ ಭೂಮಿಯನ್ನು ಪುನಃಶ್ಚೇತಗೊಳಿಸೋಣ.
ಲೇಖಕರು: ✍. ಟಿ.ಜಿ.ಪ್ರೇಮಕುಮಾರ್,