ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಪತ್ರಿಕೋದ್ಯಮಕ್ಕೆ ಸಾಮಾಜಿಕ ಬದ್ಧತೆ ಹಲವು
{ಮೇ,3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ವಿಶೇಷ ಲೇಖನ}
ಪತ್ರಿಕಾ ಸ್ವಾತಂತ್ರದ ಮೂಲಭೂತ ತತ್ವಗಳ ಅರಿವು ಮೂಡಿಸಲು, ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಪತ್ರಕರ್ತರ ರಕ್ಷಣೆಗೆಂದೇ ಹುಟ್ಟಿಕೊಂಡ ಈ ದಿನವೇ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ದೇಶದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತೊಂದು ರೂಪವೇ ಮಾಧ್ಯಮಗಳು. ಪತ್ರಿಕಾ ಸ್ವಾತಂತ್ರ್ಯದ ದಿನವವನ್ನು ಪ್ರತಿ ವರ್ಷ ಮೇ 3 ರಂದು ಆಚರಣೆ ಮಾಡಲಾಗುತ್ತದೆ.
ಪತ್ರಿಕೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಅಥವಾ ಆಯಾಮ ಎಂದೇ ಪರಿಗಣಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೇ ಅಥವಾ ಅದಕ್ಕಿಂತಲೂ ಪ್ರಬಲವಾದ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ ಎನ್ನುವುದು ಹಲವಾರು ಸಾರಿ ಸಾಬೀತಾಗಿದೆ.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳ ಉತ್ತಮ ಸಾಧನೆಗಳನ್ನು, ಕಾರ್ಯವೈಖರಿಗಳನ್ನು ಜೊತೆಗೆ ಹುಳುಕುಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪತ್ರಿಕೆಗಳು ವಸ್ತುನಿಷ್ಠವಾಗಿ ಮಾಡುತ್ತಿವೆ. ಈ ಮೂಲಕ ಜನರಿಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿವೆ. ಆದರೆ ಪತ್ರಿಕೋದ್ಯಮ ಆರಂಭವಾಗಿಂದಿನಿಂದಲೂ ಪತ್ರಿಕೆಗಳನ್ನು, ಪತ್ರಕರ್ತರನ್ನು, ಪತ್ರಿಕಾ ಸ್ವಾತಂತ್ರ್ಯವನ್ನು ಧಮನಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ವಸ್ತುನಿಷ್ಠವಾದ ವರದಿಗಳಿಗೆ ಅಡ್ಡಗಾಲು ಹಾಕುವುದು, ಪತ್ರಕರ್ತರನ್ನು ಧಮನಿಸುವುದು, ಅವರ ಹತ್ಯೆಗೆ ಯತ್ನಿಸುವುದು ಮುಂತಾದ ಘಟನೆಗಳು ದಿನನಿತ್ಯ ಕೇಳಿ ಬರುತ್ತಿವೆ. ಇದನ್ನೆಲ್ಲಾ ನಿವಾರಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರತಿವರ್ಷ ಮೇ 3 ರಂದು ವರ್ಲ್ಡ್ ಫ್ರೀಡಂ ಡೇ ಅಥವಾ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತದೆ.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಹಿನ್ನೆಲೆ :
ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಸವಾರಿ ಇಂದು, ನಿನ್ನೆ, ಮೊನ್ನೆಯದಲ್ಲ. ಜೊತೆಗೆ ಪತ್ರಕರ್ತರ ಹತ್ಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದಕ್ಕೆ ದಶಕಗಳ ಇತಿಹಾಸವೇ ಇದೆ. ಇದರ ಪರಿಣಾಮವಾಗಿ 1991ರಲ್ಲಿ ನಡೆದ ಯುನೆಸ್ಕೋದ 26ನೇ ಸಮೇಳನದಲ್ಲಿ ಪತ್ರಿಕಾ ಸ್ವಾತಂತ್ರದ ಕುರಿತು ಆಫ್ರಿಕನ್ ಜರ್ನಲಿಸ್ಟ್ ಗಳ ಒತ್ತಾಸೆಯಂತೆ ಮೇ 3ರಂದು ವಿಶ್ವ ಪತ್ರಿಕಾ ದಿನಾಚರಣೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. 1993ರಲ್ಲಿ ಇದು ಅಂಗೀಕಾರವಾಯಿತು.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಉದ್ದೇಶ :
ವಿಶ್ವಾದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡುವುದು, ತಮ್ಮ ಸ್ವಾತಂತ್ರ್ಯಕ್ಕಾಗಿ ಮಾಧ್ಯಮದ ಮೇಲೆ ನಡೆಯುತ್ತಿರುವ ದಾಳಿಯಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳ ಬಗೆ ಅರಿವು ಮೂಡಿಸುವುದು, ವೃತ್ತಿ ನಿರತರಾಗಿದ್ದಾಗ ಮೃತಪಟ್ಟ ಪತ್ರಕರ್ತರಿಗೆ ಶ್ರದ್ದಾಂಜಲಿ ಸಲ್ಲಿಸುವುದು, ಜತೆಗೆ ವಿಶ್ವದ ಹಲವೆಡೆಗಳಲ್ಲಿ ಇಂದಿಗೂ ಪತ್ರಿಕೆಗಳಿಗೆ ನಿರ್ಭಂದ ಹೇರುವ, ಪತ್ರಕರ್ತರು, ಸಂಪಾದಕರು ಹಾಗೂ ಪ್ರಕಾಶಕರಿಗೆ ಕಿರುಕುಳ ನೀಡುವ, ಬಂಧಿಸುವ ಹಾಗೂ ಕೊಲೆ ಮಾಡಿದ ನಿದರ್ಶನಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಪತ್ರಿಕಾ ಸ್ವಾತಂತ್ರ್ಯ ಕಾಪಾಡುವ ಸಲುವಾಗಿ ಸರಕಾರಗಳಿಗೆ ಮನವರಿಕೆ ಮಾಡಿಕೊಡುವುದು ಈ ದಿನದ ಉದ್ದೇಶವಾಗಿದೆ.
ಮೇ 3 ರಂದು ವರ್ಲ್ಡ್ ಪ್ರೆಸ್ ಫ್ರೀಡಂ ಡೇಯನ್ನಾಗಿ ಘೋಷಿಸಿರುವ ವಿಶ್ವಸಂಸ್ಥೆ ಈ ಮೂಲಕ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಹೆಚ್ಚಿನ ಮಹತ್ವ ನೀಡಿದೆ. ಈ ದಿನದಂದು ಪತ್ರಿಕಾ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯನ್ನು ನೀಡಿದವರಿಗೆ ಯುನೇಸ್ಕೊ ಪ್ರಶಸ್ತಿಗಳನ್ನು ಪ್ರಕಟಿಸುತ್ತದೆ. 1986, ಡಿಸೆಂಬರ್ 17 ರಂದು ಡ್ರಗ್ ಮಾಫಿಯಾ ಬಗ್ಗೆ ಪರಿಣಾಮಕಾರಿಯಾದ ಲೇಖನ ಬರೆದು ಹತ್ಯೆಗೀಡಾದ ಕೊಲಂಬಿಯಾ ಪತ್ರಕರ್ತ ಗುಲ್ಲೆರ್ಮೊ ಕ್ಯಾನೊ ಇಸಾಜ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದಲ್ಲದೆ ಪ್ರತಿವರ್ಷ ಒಂದು ನಿಗದಿತ ಪ್ರದೇಶದಲ್ಲಿ ಮಾಧ್ಯಮದ ಗಣ್ಯರು, ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಇತರ ಉಪಸಂಸ್ಥೆಗಳ ಅಧಿಕಾರಿಗಳ ಸಮ್ಮೇಳನವನ್ನು ಈ ದಿನ ಮಾಡಲಾಗುತ್ತದೆ. ಇದರಲ್ಲಿ ಮಾಧ್ಯಮದ ಸವಾಲುಗಳು, ಪತ್ರಕರ್ತರ ಭದ್ರತೆ, ಯುದ್ಧ ಸಮಯದ ವರದಿಗಾರಿಕೆ ಇತ್ಯಾದಿಗಳ ಕುರಿತು ಚರ್ಚಿಸಲಾಗುತ್ತದೆ.
“ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವು ಪತ್ರಿಕಾ ಸ್ವಾತಂತ್ರ್ಯದ ಹೋರಾಟವೂ ಆಗಿತ್ತು” ಪತ್ರಿಕೆಗಳು ಉದ್ಯಮದ ತೆಕ್ಕೆಗೆ ಬರುವ ಸೂಚನೆಯನ್ನು ಸ್ವಾತಂತ್ರ್ಯ ಹೋರಾಟದ ಸಮಯದ ಪತ್ರಿಕೋದ್ಯಮವೇ ತೋರಿಸಿಕೊಟ್ಟಿತ್ತು. ಅಲ್ಪ ಬಂಡವಾಳದೊಂದಿಗೆ ಕೆಲವೇ ಜನರನ್ನು ಮುಟ್ಟುತ್ತಿದ್ದ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದ ಬಿರುಸು ಹೆಚ್ಚಾಗುತ್ತ ಹೋದಂತೆ ಪ್ರಸಾರದಲ್ಲಿ ನೆಗೆತ ಕಂಡವು. ಆ ಸಂದರ್ಭದಲ್ಲಿ ಬ್ರಿಟಿಷರಿಂದ ಪತ್ರಕರ್ತರ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ ಎಂಬ ಕೂಗು ಕೇಳಿಬಂದಿತು. ಆ ಸಮಯದಲ್ಲಿ ಪತ್ರಕರ್ತರ ಕೊಲೆಯಂಥ ಘಟನೆಗಳೂ ದಾಖಲಾಗಿವೆ.
ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಡಿವಿಜಿ ಅವರು ತಮ್ಮ `ವೃತ್ತಪತ್ರಿಕೆ’ ಪುಸ್ತಕದಲ್ಲಿ ಹೇಳುವ ಮಾತುಗಳು ಈಗಲೂ ಪ್ರಸ್ತುತ. ”ಪತ್ರಿಕಾಕರ್ತನ ಸ್ವಾತಂತ್ರ್ಯವು ನಿಜವಾಗಿ ಪ್ರಜಾಜನರೆಲ್ಲರಿಗೂ ಸೇರಿದ ಒಂದು ಅಧಿಕಾರವೇ ಹೊರತು ಅದು ಅವನೊಬ್ಬನಿಗೆ ಮಾತ್ರ ಸಂಬಂಧಪಟ್ಟ ಹಕ್ಕೇನೂ ಅಲ್ಲವೆಂಬುದನ್ನು ಯಾರೂ ಮರೆಯಲಾಗದು. ಅವನು ಪರಾಧೀನನಾಗದೆ ಇದ್ದರೆ ಅದರ ಪ್ರಯೋಜನವು ಎಲ್ಲ ಪ್ರಜೆಗಳಿಗೂ ಇರುವುದು. ಅವನಿಗೆ ಹಿಂಗಟ್ಟುಮುರಿ ಕಟ್ಟಿಸಿದರೆ ಅದರ ಬಾಧೆಯು ಎಲ್ಲರ ಪಾಲಿಗೂ ತಗುಲುವುದು. ಪತ್ರಕರ್ತನು ನಡೆಯಿಸುವ ಎಲ್ಲ ಕಾರ್ಯಗಳೂ ಪ್ರಜೆಯ ಪರವಾದುದಾಗಿರುತ್ತವೆ. ಅವನು ಅವರ `ಏಜೆಂಟ್’ ಅಥವಾ ಪ್ರತಿನಿಧಿ ಮಾತ್ರವಾಗಿರುತ್ತಾನೆ. ಅವನಿಗೆ ರಾಷ್ಟ್ರವು ವಹಿಸಿಕೊಡುವ ಅಧಿಕಾರ ಮರ್ಯಾದೆಗಳೆಲ್ಲವೂ ವಸ್ತುಶಃ ಪ್ರಜಾವರ್ಗಕ್ಕೆ ಸಲ್ಲತಕ್ಕವು. ಅವುಗಳಲ್ಲಿ ಯಾವುದನ್ನಾದರೂ ಅವನಿಗೆ ತಪ್ಪಿಸಿದರೆ ಆ ನಷ್ಟಕ್ಕೆ ಪ್ರಜೆಗಳೆಲ್ಲರೂ ಗುರಿಯಾಗುವರು. ಈ ತತ್ವವನ್ನು ನಮ್ಮ ಜನರು ಸದಾ ಜ್ಞಾಪಕದಲ್ಲಿರಿಸಿಕೊಳ್ಳಬೇಕು”.
ಪತ್ರಿಕಾ ಸ್ವಾತಂತ್ರ್ಯ ನಮ್ಮ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುವತ್ತ ನಮ್ಮ ಬದ್ಧತೆಯನ್ನು ಬೆಳೆಸಿ ಕೊಳ್ಳಬೇಕಾಗಿದೆ. ಇದು ಮಾನವೀಯತೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಅತ್ಯಗತ್ಯವಾಗಿದೆ. ಈಗಿನ ಕುಸಿಯುತ್ತಿರುವ ವೃತ್ತಪತ್ರಿಕೆಗಳ ಆರ್ಥಿಕತೆ ಹಾಗೂ ಅತಿರಂಜಿತ ಸುದ್ದಿಗಳ ಏರಿಕೆಯ ಈ ಕಾಲದಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ತಂತ್ರಜ್ಞಾನದಿಂದಾಗಿ ಖಾಸಗಿತನ ಹಾಗೂ ಪತ್ರಿಕೋದ್ಯಮ ವ್ಯಾಖ್ಯಾನಗಳು ಬದಲಾಗಿವೆ. ಎಲ್ಲಾ ಕಾಲದಲ್ಲೂ ಪೂರ್ಣ ಪತ್ರಿಕಾ ಸ್ವಾತಂತ್ರ್ಯ ಎಂಬುದಿಲ್ಲ. ಪತ್ರಕರ್ತರು ನಿರ್ಭೀತರಾಗಿ ಕಾರ್ಯನಿರ್ವಹಿಸಲು ಅವಕಾಶವಿರುವ ರಾಷ್ಟ್ರಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆಡಳಿತ ಶಾಹಿ ವ್ಯವಸ್ಥೆ ಮಾಧ್ಯಮಗಳ ಮೇಲೆ ಹಿಡಿತ ಹೆಚ್ಚಿಸುತ್ತಲೇ ಇದೆ.
ಕೆಲವು ಪತ್ರಕರ್ತರು ಇಂದು ದೇಶಕ್ಕೆ ಅತೀ ದೊಡ್ಡ ಅಪಾಯವಾಗಿರುವುದು ಕಂಡು ಬರುತ್ತಿದೆ. ಉತ್ತಮ ಪತ್ರಿಕೋದ್ಯಮ ಸತ್ಯವನ್ನು ಹುಡುಕುತ್ತದೆ. ಎಲ್ಲ ಉತ್ತಮ ಪತ್ರಕರ್ತರಿಗೂ ರಕ್ಷಣೆ ಸಿಗಬೇಕಾಗಿದೆ. ಅವರ ಮೇಲೆ ದೌರ್ಜನ್ಯ ನಡೆಯಬಾರದು, ಬೆದರಿಕೆ ಒಡ್ಡಬಾರದು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಬ ಎಂದು ಕರೆಯಿಸಿಕೊಳ್ಳುವ ಪತ್ರಿಕೋದ್ಯಮಕ್ಕಿರುವ ಸಾಮಾಜಿಕ ಬದ್ಧತೆ ಹಲವು. ಆ ಬದ್ಧತೆಯನ್ನು ಉಳಿಸಿಕೊಳ್ಳಲು ಸ್ವತಂತ್ರ್ಯವಾಗಿ, ಪೂರ್ವಗ್ರಹ ಮುಕ್ತವಾಗಿ ಪತ್ರಕರ್ತರು ಕೆಲಸ ಮಾಡಬೇಕಾದ್ದು ಅನಿವಾರ್ಯ. ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದಕ್ಕಾಗಿ ಮತ್ತು ನಮ್ಮ ದೇಶದ ಹಿತಕ್ಕಾಗಿ ಪ್ರತಿದಿನ ಧೈರ್ಯವಾಗಿ ಹೋರಾಡುತ್ತಿರುವ ಎಲ್ಲ ಧೈರ್ಯವಂತ ಪತ್ರಕರ್ತರಿಗೂ ನಮ್ಮ ನಮನವಿರಲಿ.
✍. ವಿವೇಕ್ ನರೇನ್