135ನೆಯ ವರ್ಷಾಚರಣೆಯತ್ತ ಮೇ ದಿನಾಚರಣೆ/ವಿಶ್ವ ಕಾರ್ಮಿಕ ದಿನಾಚರಣೆ

{ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ವಿಶೆಷ ಲೇಖನ}

135ನೆಯ ವರ್ಷಾಚರಣೆಯತ್ತ ಮೇ ದಿನಾಚರಣೆ/ವಿಶ್ವ ಕಾರ್ಮಿಕ ದಿನಾಚರಣೆ

ಕಾರ್ಮಿಕರು ಸತತವಾಗಿ ಕಷ್ಟ ಪಟ್ಟು ದುಡಿಯುತ್ತಾರೆ, ಆದರೆ ಭಾನುವಾರ ದಿನ ಬಿಟ್ಟು ಬೇರೆ ಯಾವ ದಿನವೂ ಕಾರ್ಮಿಕರಿಗೆ ರಜೆ ಸಿಗುವುದಿಲ್ಲ. ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಆಗಿದ್ದು, ಈ ದಿನವನ್ನು ನಾವು ಲೇಬರ್ಸ್ ಡೇ, ವರ್ಕರ್ಸ್ ಡೇ ಅಂತಾ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತೇವೆ. ಭಾರತ ದೇಶವಲ್ಲದೆ ಬೇರೆ ದೇಶಗಳಲ್ಲೂ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಹತ್ತು ಹಲವಾರು ಕ್ಷೇತ್ರಗಳಲ್ಲಿ ಕಾರ್ಮಿಕರು ಶ್ರಮ ಮತ್ತು ಆಸಕ್ತಿ ಇಂದ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ದಿನದ ಹಿಂದೆ ಇರುವ ಕಥೆ ಏನು? ಮುಂದೆ ಓದಿ.

“ವಿಶ್ವಕಾರ್ಮಿಕ ದಿನಾಚರಣೆ”ಯು ಪ್ರಾರಂಭವಾಗಿ 134 ವರುಷಗಳು ಕಳೆದು, ಇಂದು (ಮೇ 1, 2020) 135ನೆಯ ಆಚರಣೆ ವಿಶ್ವದಾದ್ಯಂತ ನಡೆಯುತ್ತಿದೆ. ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ 19ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯು ಉಚ್ಛ್ರಾಯ ಸ್ಥಿತಿ ತಲುಪಿತ್ತು. ವಿವಿಧ ಕೈಗಾರಿಕೆಗಳು ಜನರಿಗೆ ಉದ್ಯೋಗ ನೀಡಿದ್ದವಾದರೂ ಕಾರ್ಮಿಕರ ಬದುಕು ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಅವರು ದುಡಿಯುತ್ತಿದ್ದ ಕಾರ್ಖಾನೆಗಳಲ್ಲೂ ಸಹ ಮನುಷ್ಯರ ಜೀವನಕ್ಕೆ ಅಗತ್ಯವಾದ ಕನಿಷ್ಠ ಸವಲತ್ತುಗಳನ್ನೂ ಮಾಲೀಕರು ಒದಗಿಸುತ್ತಿರಲಿಲ್ಲ. ಕೆಲಸಗಾರರನ್ನು ಗಾಣದೆತ್ತುಗಳಂತೆ ಅಸುರಕ್ಷಿತ ವಾತಾವರಣದಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಮಾಲೀಕರ ಲಾಭವನ್ನು ನಿಯಂತ್ರಿಸಿ ಕಾರ್ಮಿಕರಿಗೆ ಸವಲತ್ತು ನೀಡುವ ಯಾವುದೇ ಶಾಸನವೂ ಅಸ್ತಿತ್ವದಲ್ಲಿರಲಿಲ್ಲ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ದಿನದ ಇಪ್ಪತ್ತುನಾಲ್ಕು ಗಂಟೆಗಳೂ ಮಾಲೀಕನ ಕಾರ್ಖಾನೆಯಲ್ಲಿ ಡುಡಿಯಬೇಕಿದ್ದ ಕೆಲಸಗಾರರು ವಿಶ್ರಾಂತಿಯಿಂದ ಮತ್ತು ಕೌಟುಂಬಿಕ ಜೀವನದಿಂದ ವಂಚಿತರಾಗಿದ್ದರು. ಈ ರೀತಿ ಕಾರ್ಮಿಕರು ಹರಿಸಿದ ಬೆವರು ಮಾಲೀಕರ ಖಜಾನೆಯನ್ನು ತುಂಬಲು ಕಾರಣವಾಗಿತ್ತು ಹಾಗೇ ಮಾಲೀಕರ ವರ್ಗ ಇನ್ನಷ್ಟು ಶ್ರೀಮಂತವಾಗುತ್ತಲೇ ಇತ್ತು. ಕಾರ್ಮಿಕರು ನೊಂದು ಬೆಂದು ಮಣ್ಣಾಗುತ್ತಲಿದ್ದರು. 8 ಗಂಟೆ ದುಡಿಯುವ ಅವಧಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886ರಂದು ಲಕ್ಷಾಂತರ ಸಂಖ್ಯೆಯಲ್ಲಿ ಹೋರಾಟ ಮಾಡಿದ್ದರು. ಇದರ ಫಲವಾಗಿ ಕಾರ್ಮಿಕರು ಹೋರಾಟ ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆಗೆ ತಂದರು. ಇದರ ಸವಿ ನೆನಪಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಅಮೇರಿಕದಲ್ಲಿ 1886ರ ಮೇ 1ರಂದು 13,000 ವಿವಿಧ ಕ್ಷೇತ್ರಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಮೂರುವರೆ ಲಕ್ಷ ಜನ ಕಾರ್ಮಿಕರು ಕೆಲಸಕ್ಕೆ ಹೋಗದೆ ಮುಷ್ಕರ ಹೂಡಿದರು. ಈ ಕಾರ್ಮಿಕರ ಮುಷ್ಕರವನ್ನು ಅಲ್ಲಿನ ಎಡಪಂಥೀಯ ಕಾರ್ಮಿಕ ಸಂಘಟನೆ ಸಂಘಟಿಸಿತ್ತು. ಚಿಕಾಗೊ ನಗರವೊಂದರಲ್ಲೇ 40,000 ಶ್ರಮಿಕರು ಕೆಲಸದಿಂದ ದೂರ ಉಳಿದರು. ರಸ್ತೆಗಳು ಬಿಕೊ ಎನುತ್ತಿದ್ದವು. ರೈಲುಗಳು ಸ್ತಬ್ಧಗೊಂಡಿದ್ದವು, ಯಂತ್ರಗಳನ್ನು ನಡೆಸುವವರಿಲ್ಲದೆ ಕಾರ್ಖಾನೆಗಳಲ್ಲಿ ಮೌನ ಆವರಿಸಿತ್ತು. ನಿರ್ಮಾಣ ಕೈಗಾರಿಕೆಯಲ್ಲಿ ದುಡಿಯುತ್ತಿದ್ದವರೂ ಸೇರಿದಂತೆ ಸುಮಾರು 1,85,000 ಕಾರ್ಮಿಕರು ಆ ಕಾಲದಲ್ಲಾಗಲೇ ಎಂಟು ಗಂಟೆ ಕೆಲಸದ ಪದ್ಧತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಹಲವಾರು ಕ್ಷೇತ್ರಗಳ ಕಾರ್ಮಿಕರು ಮೇ 1ರ ಮುಷ್ಕರದಲ್ಲಿ ಕೈಜೋಡಿಸಿ ಕಾರ್ಮಿಕ ಚಳವಳಿಯ ಪ್ರವಾಹವನ್ನು ಸೇರಿಕೊಂಡರು. ಅನೇಕ ಕಾರ್ಮಿಕ ಸಂಘಗಳು ರಚನೆಯಾಗಿ ಕಾರ್ಮಿಕರು ಸಂಘಟಿತರಾದರು. ಕಾರ್ಮಿಕರು ಮಾಲೀಕರ ಮತ್ತು ಸರ್ಕಾರದ ದಬ್ಬಾಳಿಕೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಟವನ್ನು ಶಾಂತಿಯುತವಾಗಿಯೇ ಮುಂದುವರಿಸಿದರು.

ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದ್ದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್. 1923ರ ಮೇ1ರಂದು ಚೆನ್ನೈನಲ್ಲಿ ‘ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್’ ಅಡಿಯಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಆ ಸಮಯದಲ್ಲಿ ಇದನ್ನು ‘ಮದ್ರಾಸ್ ಡೆ’ ಎಂದು ಕರೆಯಲಾಗುತ್ತಿತು. ಭಾರತದಲ್ಲಿ ಕಾರ್ಮಿಕ ದಿನಾಚರಣೆಯನ್ನು “ಅಂತರಾಷ್ಟ್ರೀಯ ಶ್ರಮಿಕ್ ದಿವಸ್” ಎಂದು ಆಚರಿಸಲಾಗುತ್ತದೆ.

ಶ್ರಮ ಅನ್ನೋದು ನಮ್ಮ ದುಡಿಮೆಯಲ್ಲಿ ಅಡಗಿರುವ ಸತ್ಯ. ಶ್ರಮಕ್ಕೆ ಪರ್ಯಾಯ ಪದ ‘ಬೆವರು’ ಎಂದರೆ ತಪ್ಪಾಗದು. ಕೆಲಸ ಮಾಡದವನಿಗೆ ಶ್ರಮದ ಅರ್ಥ ಮತ್ತು ಮಹತ್ವ ತಿಳಿಯದು. ಸೋಮಾರಿಗಳು ಇದರಿಂದ ಬಲುದೂರ. ಶ್ರಮ ಒಳ್ಳೆಯದಕ್ಕೂ ಇದೆ ಕೆಟ್ಟದ್ದಕ್ಕೂ ಇದೆ. ಫಲಿತಾಂಶ ಮಾತ್ರ ಶ್ರಮವನ್ನು ಅವಲಂಭಿಸಿರುತ್ತದೆ. ಎರಡು ರೀತಿಯಲ್ಲಿ ನಾವು ಶ್ರಮವನ್ನು ನೋಡಬಹುದು. ಫಲಾಪೇಕ್ಷೆಯನ್ನು ಬಯಸಿ ಹೊಟ್ಟೆಪಾಡಿಗೆ ಅಥವ ಜೀವನಕ್ಕಾಗಿ ಮಾಡುವ ಶ್ರಮ ಒಂದಾದರೆ, ಏನನ್ನೂ ನಿರೀಕ್ಷಿಸದೆ ಸೇವಾ ಮನೋಭಾವದಿಂದ ಪರರಿಗಾಗಿ ಮಾಡುವ ಶ್ರಮಧಾನ.

ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುತ್ತದೆ. ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಟ ಮಾಡಿ ಹಣ ಗಳಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ. ಮೇ 1ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನು ಲೇಬರ್ ಡೇ, ಮೇ ಡೇ ವರ್ಕರ್ಸ್ ಡೇ ಎಂದೂ ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಕಾರ್ಮಿಕ ದಿನವನ್ನು ಆಚರಿಸಿಕೊಂಡು ಬರುತ್ತಿವೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ.

ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರಾಗಿರುವ ನಾವು ಇಂದು ಸಂಘಟಿತರಾಗಿದ್ದೇವೆಯೇ? ಇಲ್ಲ. ಪ್ರತಿಷ್ಠತೆ, ಕೆಲಸದ ಭದ್ರತೆ ಸೇರಿದಂತೆ ಇತರೆ ಕಾರಣಗಳಿಗಾಗಿ ನಾವು ಸಂಘಟಿತರಾಗಲಾಗುತ್ತಿಲ್ಲ. ಹಲವು ರೀತಿಯ ಕಾರ್ಮಿಕ ಸಂಘಗಳು ಇದೆಯಾದರೂ ಆಂತರಿಕ ಭಿನ್ನಾಭಿಪ್ರಾಯದಿಂದ ನಿಜವಾದ ಕಾರ್ಮಿಕರಿಗೆ ಸರ್ಕಾರದ ಸವಲತ್ತನ್ನು ತಲುಪಿಸಲಾಗುತ್ತಿಲ್ಲ. ಇನ್ನು ಅಸಂಘಟಿತ ಕಾರ್ಮಿಕರ ಪಾಡಂತೂ ಹೇಳ ತೀರದ್ದಾಗಿದೆ. ಕಟ್ಟಡ ಕಾರ್ಮಿಕರು ಪ್ರತೀ ಬಾರಿ ಸಾವನ್ನಪ್ಪಿದಾಗ ಸರ್ಕಾರದ ವತಿಯಿಂದ ಒಂದು ಲಕ್ಷ ಅಥವಾ ಎರಡು ಲಕ್ಷ ಕೊಟ್ಟು ಪ್ರಕರಣವನ್ನು ಮುಚ್ಚಲಾಗುತ್ತದೆ. ಆದರೆ ಅವರಿಗೆಂದು ಇರುವ ಯೋಜನೆಗಳು ಅನುಷ್ಠಾನದ ಕೊರತೆಯಿಂದಾಗಿ ತಲುಪುವುದೇ ಇಲ್ಲ.

ಜೀವವನ್ನು ಮುಡಿಪಾಗಿಟ್ಟು ರಾಷ್ಟ್ರದ ಗಡಿ ರಕ್ಷಣೆ ಮಾಡುವ ಯೋಧನ ಮತ್ತು ನಮ್ಮ ದೇಶದ ಬೆನ್ನೆಲುಬಾಗಿ ಅನ್ನದಾತನ ಗೌರವ ಪ್ರತಿಷ್ಠೆಗಳನ್ನು “ಜೈ ಜವಾನ, ಜೈ ಕಿಸಾನ್” ಘೋಷಣೆಯ ಮೂಲಕ ಅವರಲ್ಲಿ ಆತ್ಮ ಗೌರವವನ್ನು ಹೆಚ್ಚಿಸಿದ್ದು ಮಹಾನ್ ಚೇತನ ಲಾಲ್ ಬಹಾದ್ದೂರ್ ಶಾಸ್ತ್ರಿ. ಆದರೆ ಈಗ ನಮ್ಮ ದೇಶ ಔದ್ಯಮೀಕರಣ ಆಗಿದ್ದರಿಂದ ಕಾರ್ಮಿಕರಲ್ಲಿ ಗೌರವ ಪ್ರತಿಷ್ಠೆಗಳನ್ನು ಹಾಗೂ ಆತ್ಮ ಗೌರವವನ್ನು ಹೆಚ್ಚಿಸುವುದು ನಮ್ಮ ಆದ್ಯ ಕರ್ತವ್ಯ. ಆದ್ದರಿಂದ “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್‌ ಎಂದರು ಅಟಲ್‌ ಬಿಹಾರಿ ವಾಜಪೇಯಿ ಅದರೊಂದಿಗೆ ಈಗ “ಜೈ ಮಜ್ದೂರ” ಎಂದು ಸೇರಿಸಿದರೆ ಸರಿಯಲ್ಲವೆ?

ಇದೀಗ ಕೋವಿಡ್ 19 ಎಂಬ ಸಾಮಾಜಿಕ ಪಿಡುಗು ಇಡೀ ವಿಶ್ವದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಎಷ್ಟೋ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಕಾರ್ಮಿಕರಿಗೆ ಭದ್ರತೆ ಒದಗಿಸುವಂತಾಗಲಿ. ಸ್ವತಂತ್ರ ಭಾರತದಲ್ಲಿ ಸಮಾನತೆ, ಭ್ರಾತೃತ್ವ, ಐಕ್ಯತೆ ಮತ್ತು ಮಾನವತೆಯನ್ನು ಮೆರೆಸುವ ಸುಭಿಕ್ಷ ಬೆಳೆಯನ್ನು ಶ್ರಮಜೀವಿಗಳು ಬೆಳೆದಿದ್ದಾರೆ.

ಶತಮಾನಗಳ ಹೋರಾಟದ ಪರಂಪರೆ ಹಾಗೂ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಹೋರಾಟಗಳ ಅನುಭವಗಳಿರುವ ನಮ್ಮ ನಾಡಿನ ಕಾರ್ಮಿಕ ವರ್ಗ ಬಂಡವಾಳಶಾಹಿಯಿಂದ ಸಮಾಜವಾದಕ್ಕೆ ಪರಿವರ್ತನೆಯನ್ನು ಸಾಧಿಸುವ ಮಾರ್ಗದಲ್ಲಿ ಮತ್ತೊಮ್ಮೆ ಚರಿತ್ರಾರ್ಹ ಜಯ ಸಾಧಿಸುವ ಪಣವನ್ನು, ಮೇ 1ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಕಾರ್ಮಿಕರ ದಿನವವಾದ, ಶ್ರಮಿಕ್ ದಿವಸ್, ಲೇಬರ್ ಡೇ, ಮೇ ಡೇ, ವರ್ಕರ್ಸ್ ಡೇ ಎಂದೂ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ಸಂಧರ್ಭದಲ್ಲಿ ಅಂಗೀಕರಿಸಬೇಕಾಗಿದೆ.

ಲೇಖಕರು: ✍. ಅರುಣ್ ಕೂರ್ಗ್

0 0 votes
Article Rating
Subscribe
Notify of
guest
0 Comments
Inline Feedbacks
View all comments