ದೀಪಧಾರಿಣಿ ದಾದಿಯ 201ನೇ ಜನ್ಮದಿನ; ಅಂತರರಾಷ್ಟ್ರೀಯ ನರ್ಸಸ್‌ ಡೇ

ದೀಪಧಾರಿಣಿ ದಾದಿಯ 201ನೇ ಜನ್ಮದಿನ; ಅಂತರರಾಷ್ಟ್ರೀಯ ನರ್ಸಸ್‌ ಡೇ

ಮೇ 12ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನ; ವಿಶೇಷ ಲೇಖನ

“ಶುಶ್ರೂಷೆ ಒಂದು ಕಲೆ. ಅದನ್ನು ಕಲೆಯಾಗಿ ಮಾಡಬೇಕೆಂದರೆ ಓರ್ವ ಕಲಾವಿದ ಅಥವಾ ಶಿಲ್ಪಿಯಂತಹ ಸಮರ್ಪಣಾ ಮನೋಭಾವ, ಪರಿಶ್ರಮದಾಯಕ ಸಿದ್ಧತೆ ಬೇಕು. ಇದು ಉನ್ನತ ಕಲೆಗಳಲ್ಲಿ ಒಂದು. ಉನ್ನತ ಕಲೆಗಳಲ್ಲಿ ಉನ್ನತವಾದದ್ದು”
– ಫ್ಲಾರೆನ್ಸ್ ನೈಟಿಂಗೇಲ್

ನಿಫಾ ರೋಗಿಗೆ ಚಿಕಿತ್ಸೆ ನೀಡುವಾಗ 2018ರಲ್ಲಿ ಕೇರಳದಲ್ಲಿ ನಿಪಾ ವೈರಸ್‌ನಿಂದ ಏಕಾಏಕಿ ಸಾವನ್ನಪ್ಪಿದ ಕೇರಳದ ದಾದಿ ಲಿನಿ ಪಿ.ಎನ್‌. ಗೆ ಮರಣೋತ್ತರ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ -2017 ನೀಡಿ ಗೌರವಿಸಲಾಗಿತು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರತಿವರ್ಷ ಮೇ 12ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಆಧುನಿಕ ನರ್ಸಿಂಗ್‌ನ ಸ್ಥಾಪಕಿ ಎಂದೇ ಖ್ಯಾತಿವೆತ್ತಿರುವ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮದಿನ. ಆಕೆ ಹುಟ್ಟಿದ್ದು ಮೇ 12, 1820. ಆಗಿನ್ನೂ ವೈದ್ಯಕೀಯ ಲೋಕ ಇಷ್ಟೊಂದು ಪ್ರಗತಿ ಕಂಡಿರಲಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ದಾದಿ ಅಥವಾ ನರ್ಸ್‌ ಎಂದೆಲ್ಲ ಕರೆಯಲ್ಪಡುವ ಉಪಚಾರಿಕೆ ವೃತ್ತಿಗಿಳಿಯುವುದು ಸವಾಲಿನ ಮಾತೇ ಆಗಿತ್ತು. ಅಂತಹ ಕಾಲಘಟ್ಟದಲ್ಲಿ ಕಣ್ಣು ಬಿಟ್ಟವರು ‘ಫ್ಲಾರೆನ್ಸ್ ನೈಟಿಂಗೇಲ್.’

ಫ್ಲಾರೆನ್ಸ್ ನೈಟಿಂಗೇಲ್ – “ಲೇಡಿ ವಿತ್ ದಿ ಲ್ಯಾಂಪ್” ಎಂದೇ ಪ್ರಖ್ಯಾತರಾಗಿದ್ದ ಮಹಿಳೆ. ಫ್ಲಾರೆನ್ಸ್ ನೈಟಿಂಗೇಲ್ ಇಟಲಿಯಲ್ಲಿ 1820ರ ಮೇ 12ರಂದು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ, ತಮ್ಮ 17ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು. 1854ರ ಅಕ್ಟೋಬರ್ 21ರಂದು ತಮ್ಮ 38 ನರ್ಸ್ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಶುಶ್ರೂಷೆ ಮಾಡಿದರು. ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಳು. ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು.

ಅದೊಂದು ಬೃಹದಾಕಾರದ ಮಿಲಿಟರಿ ಆಸ್ಪತ್ರೆ. ಕಟ್ಟಡವು ದೊಡ್ಡದಾಗಿತ್ತು. ಆದರೆ ಕನಿಷ್ಠ ಸೌಕರ್ಯವೂ ಇಲ್ಲದ ಆಸ್ಪತ್ರೆ. ಆಸ್ಪತ್ರೆಯ ಉದ್ದ ಸುಮಾರು 6.5 ಕಿಲೋಮೀಟರು. ಆಸ್ಪತ್ರೆಯಲ್ಲಿ ಸಾವಿರಾರು ಹಾಸಿಗೆಗಳು, ಆದರೆ ಒಬ್ಬ ರೋಗಿಯ ಹಾಸಿಗೆಗೂ, ಇನ್ನೊಬ್ಬ ರೋಗಿಯ ಹಾಸಿಗೆಗೂ ಇದ್ದ ಅಂತರ ಕೇವಲ 45 ಸೆಂಟಿಮೀಟರುಗಳು. ಇಂಥಹ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರಾತ್ರಿಯ ಹೊತ್ತು ಆಕೆ ಕೈಯಲ್ಲಿ ದೀಪ ಹಿಡಿದು ಪ್ರತಿಯೊಂದು ಹಾಸಿಗೆಯ ಬಳಿ ಹೋಗುತ್ತಾಳೆ. ಪ್ರತಿಯೊಬ್ಬ ರೋಗಿಯನ್ನೂ ವಿಚಾರಿಸುತ್ತಾಳೆ. ಅವರಿಗೆ ಅಗತ್ಯವಾದ ಔಷದ ಮತ್ತು ಇತರ ವಸ್ತುಗಳನ್ನು ನೀಡುತ್ತಾಳೆ. ಮೆಲುದನಿಯಲ್ಲಿ ಅವರನ್ನು ಉಪಚರಿಸುತ್ತಾಳೆ, ಅವರಿಗೆ ಧೈರ್ಯ ತುಂಬುತ್ತಾಳೆ. ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಗೆ, ಆಗತಾನೇ ಚೇತರಿಸಿಕೊಳ್ಳುತ್ತಿರುವ ರೋಗಿಗೆ ಅವಳು ಮಾಡುತ್ತಿದ್ದ ಸೇವೆಯಿಂದ ‘ಅವಳೊಬ್ಬ ದೇವತೆ’ ಎನಿಸಿದ್ದರೆ ಆಶ್ಚರ್ಯವಿಲ್ಲ. ಪ್ರತಿದಿನ ಕತ್ತಲಾದೊಡನೆ ದೀಪವನ್ನು ಹಿಡಿದು ರೋಗಿಗಳನ್ನು ವಿಚಾರಿಸಲು ಬರುತ್ತಿದ್ದ ಈಕೆಯನ್ನು ‘ದೀಪಧಾರಿಣಿ’ ಎಂದೇ ಕರೆಯುತ್ತಿದ್ದರು.

ಇಂಗ್ಲೆಂಡ್‍ನಲ್ಲಿ ಆಸ್ಪತ್ರೆಗಳೆಂದರೆ ರೋಗ ಹರಡುವ ತಾಣಗಳಂತಿದ್ದ ಕಾಲದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಬಿರುಗಾಳಿಯಾಗಿ ಬಂದು ವೈದ್ಯಕೀಯ ಕೊಳೆಯನ್ನೆಲ್ಲಾ ತೆಗೆದಳು. ಪಾಲಕರ ವಿರೋಧದ ನಡುವೆಯೂ ಜರ್ಮನಿಗೆ ತೆರಳಿ ನರ್ಸಿಂಗ್‍ನಲ್ಲಿ ಹೆಚ್ಚಿನ ತರರಬೇತಿ ಪಡೆದಳು. ಕ್ರಿಮಿಯನ್ ವಾರ್ ನಡೆದ ಸಂಧರ್ಭದಲ್ಲಿ ಸೈನಿಕ ಆಸ್ಪತ್ರೆಯ ಮೇಲ್ವಿಚಾರಕಿಯಾಗಿದ್ದಳು. ಪರಿಪೂರ್ಣವಾಗಿ ನರ್ಸ್ ತರಬೇತಿ ಪಡೆದ ನಂತರವೇ ಆಸ್ಪತ್ರೆಗಳನ್ನು ಶೂಚಿಗೊಳಿಸುವ ಕಾರ್ಯ ಕೈಗೊಂಡಳು. ಆಸ್ಪತ್ರೆಗಳನ್ನು ಸ್ವಚ್ಚ ಮಂದಿರಗಳನ್ನಾಗಿಸಲು ಶ್ರಮಿಸಿದಳು. ಸೈನಿಕರಿಗೆ ವಿಶೇಷ ಗಮನ ನೀಡಿ ಉಪಚರಿಸುತ್ತಿದ್ದಳು. ಜರ್ಮನಿಯಿಂದ ಹಿಂದಿರುಗಿ ಬಂದ ಮೇಲೆ ನರ್ಸಿಂಗ್ ಶಾಲೆ ತೆರೆದಳು. ಇಂಗ್ಲೆಂಡ್ ಅಲ್ಲದೇ ಭಾರತೀಯ ಆಸ್ಪತ್ರೆಗಳ ಪರಿಸ್ಥಿತಿಗಳನ್ನು ಬದಲಾಯಿಸಲು ಶ್ರಮಿಸಿದಳು. ಭಾರತದಲ್ಲಿ ಸಿಪಾಯಿ ದಂಗೆಯ ಸಮಯದಲ್ಲೂ ಆಕೆ ಮಾಡಿದ ಸೇವೆ ಅಭೂತಪೂರ್ವವಾದದ್ದು. ಉತ್ತಮ ನರ್ಸಿಂಗ್ ಸೇವೆ ಮತ್ತು ಕೌಶಲ್ಯಾಭಿವೃದ್ದಿ ಕುರಿತು ಅನೇಕ ಪುಸ್ತಕಗಳನ್ನು ಬರೆದ ಫ್ಲಾರೆನ್ಸ್‌ ನೈಟಿಂಗೇಲ್‌, ಸಂಘಟನೆ, ಪರಿವೀಕ್ಷಣೆ, ಸ್ವಚ್ಚತೆ, ಹಾಗೂ ರೋಗಿಗಳೊಂದಿಗಿನ ಒಡನಾಟ ಕುರಿತ ಪುಸ್ತಕಗಳನ್ನೂ ಬರೆದಳು. ಫ್ಲಾರೆನ್ಸ್‌ ನೈಟಿಂಗೇಲ್‌ ದಾದಿಯಾಗಷ್ಟೇ ಅಲ್ಲ 200ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಒಬ್ಬ ಲೇಖಕಿಯಾಗಿ ಹೆಸರುಗಳಿಸಿದಳು.

ಪ್ರತೀ ವರ್ಷ ಈ ಸುಸಂದರ್ಭವನ್ನು ಲಂಡನಿನ ವೆಸ್ಟ್‌ ಮಿನ್‌ಸ್ಟರ್‌ ಆ್ಯಬಿಯಲ್ಲಿ ಮೋಂಬತ್ತಿ ಪ್ರಾರ್ಥನೆಯ ಮೂಲಕ ಆಚರಿಸಲಾಗುತ್ತದೆ. ದಾದಿಯರು ಒಬ್ಬರಿಂದ ಇನ್ನೊಬ್ಬರಿಗೆ ಜ್ಞಾನವನ್ನು ಹಂಚುವುದರ ಸಂಕೇತವಾಗಿ ಉರಿಯುವ ಮೋಂಬತ್ತಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರಿಸುತ್ತಾ ಕೊನೆಗೆ ಅದನ್ನೊಂದು ಎತ್ತರದ ಪೀಠದ ಮೇಲೆ ಇರಿಸಲಾಗುತ್ತದೆ. ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಸಮಾಧಿಯಿರುವ ಸಂತ ಮಾರ್ಗರೆಟ್‌ ಚರ್ಚ್‌ನಲ್ಲಿ ಆಕೆಯ ಜನ್ಮದಿನದ ಬಳಿಕ ಬರುವ ರವಿವಾರದಂದು ಬೃಹತ್‌ ಸಮಾರಂಭವನ್ನು ಕೂಡ ಆಯೋಜಿಸಲಾಗುತ್ತದೆ.

1899ರಲ್ಲಿ ಸ್ಥಾಪನೆಗೊಂಡಿರುವ ಐ.ಸಿ.ಎನ್‌. ಆರೋಗ್ಯ ಸೇವಾ ವೃತ್ತಿನಿರತರ ಪ್ರಪ್ರಥಮ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಸಚಿವಾಲಯದ ಅಧಿಕಾರಿ ಡೊರೊಥಿ ಸೂತರ್‌ಲ್ಯಾಂಡ್‌ ಎಂಬವರು 1953ರಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ನಡೆಸುವ ಪ್ರಸ್ತಾವವನ್ನು ಮಂಡಿಸಿದರು; ಅಮೆರಿಕದ ಆಗಿನ ಅಧ್ಯಕ್ಷ ಡ್ವೆ„ಟ್‌ ಡಿ. ಐಸೆನ್‌ ಹೋವರ್‌ ಪ್ರಪ್ರಥಮವಾಗಿ ಇದನ್ನು ಘೋಷಿಸಿದರು. 1965ರಲ್ಲಿ ಅಂತಾರಾಷ್ಟ್ರೀಯ ದಾದಿಯರ ಮಂಡಳಿ (ಐ.ಸಿ.ಎನ್‌) ಇದನ್ನು ಮೊತ್ತಮೊದಲ ಬಾರಿಗೆ ಆಚರಿಸಿತು. ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮದಿನವಾಗಿರುವ ಮೇ 12ನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸುವ ಘೋಷಣೆಯನ್ನು 1974ರ ಜನವರಿಯಲ್ಲಿ ಹೊರಡಿಸಲಾಯಿತು. ದಾದಿಯರ ದಿನಾಚರಣೆಯನ್ನು ಆರಂಭಿಸಿದ್ದಕ್ಕಾಗಿ ವಿಶ್ವದ 16 ಮಿಲಿಯ ದಾದಿಯರನ್ನು ಪ್ರತಿನಿಧಿಸುವ 130 ರಾಷ್ಟ್ರಗಳ ನರ್ಸಿಂಗ್‌ ಸಂಘಟನೆ (ಎನ್‌.ಎನ್‌.ಎ)ಗಳ ಒಕ್ಕೂಟವಾಗಿರುವ ದಿ ಇಂಟರ್‌ನ್ಯಾಶನಲ್‌ ಕೌನ್ಸಿಲ್‌ ಆಫ್ ನರ್ಸಸ್‌ (ಐ.ಸಿಎ.ನ್‌) ಶ್ಲಾಘನಾರ್ಹವಾಗಿದೆ.

ಫ್ಲಾರೆನ್ಸ್‌ ನೈಟಿಂಗೇಲ್‌ ಅವರಿಗೆ ಮೊದಲಿನಿಂದಲೂ ಶ್ರೀಮಂತ ಮಹಿಳೆಯರ ಬದುಕು ನೀರಸವೆನಿಸಿತ್ತು. ದುಬಾರಿ ಪೋಷಾಕುಗಳನ್ನು ಧರಿಸುವುದು, ಪಾರ್ಟಿಗಳಲ್ಲಿ ಭಾಗಿಯಾಗುವುದು, ಅತ್ತಿತ್ತ ಅಡ್ಡಾಡುವುದು, ನರ್ತನ, ಸಂಭ್ರಮ ವೈಭವ ಜೀವನ ಬೇಕಿರಲಿಲ್ಲ. ಜನ ಸೇವೆಯೇ ಮುಖ್ಯ ಧ್ಯೇಯವಾಗಿತ್ತು.

ಯಾವುದೇ ವ್ಯವಸ್ಥೆಗಳಿಲ್ಲದ, ಬೇಜವಾಬ್ದಾರಿಗಳ ಸರ್ಕಾರಿ ವ್ಯವಸ್ಥೆ, ಅಪಹಾಸ್ಯಗಳನ್ನು ಎದುರಿಸಿ ಕೂಡಾ, ಮಾನವೀಯ ಅನುಕಂಪ, ಸೇವಾ ಮನೋಭಾವನೆಗಳ ಹಾದಿಯಲ್ಲಿ ಬಂದ ಅಡೆತಡೆಗಳನ್ನೆಲ್ಲಾ ನಿವಾರಿಸಿ ಮಾನವ ಕುಲಕ್ಕೆ ಫ್ಲಾರೆನ್ಸ್‌ ನೈಟಿಂಗೇಲ್‌ ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು. ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲಹುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾಳೆ.

ನಮ್ಮ ಸಮಾಜ ದಾದಿಯರನ್ನು ಗೌರವಾದರಗಳಿಂದ ಕಾಣುತ್ತಿಲ್ಲ. ಈ ಕೋರಾನಾ ಕಾಲದಲ್ಲಿ ದಾದಿಯರ ಸೇವೆ ಮರೆಯಲಾಗದಂತದು. ದಾದಿಯರ ಸೇವೆ ಮತ್ತು ಸದಾ ಅವರ ಮುಖದಲ್ಲಿರುವ ಮಂದಹಾಸದಿಂದ ರೋಗಿಗಳಲ್ಲಿ ಆತ್ಮಸ್ಥೈರ‍್ಯ ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆ ಬದಿಗಿರಿಸಿ ರೋಗಿಗಳ ಬಗ್ಗೆ ಕಾಳಜಿ ತೋರಿಸುವ ಶುಶ್ರೂಷಕರ ಬಗ್ಗೆ ಸಮಾಜದಲ್ಲಿ ಗೌರವಾದರ ಹೆಚ್ಚಾಗಬೇಕು. ಗುಣಮಟ್ಟದ ಮತ್ತು ಪರಿಣಾಮಕಾರಿ ಆರೋಗ್ಯ ತಲುಪಿಸುವಲ್ಲಿ ಮತ್ತು ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ದಾದಿಯರು ನಿಜಕ್ಕೂ ‘ಸೇವೆ, ಶುಶ್ರೂಷೆ, ಕರುಣೆಯ ಸಂಕೇತವಾಗಿದ್ದಾರೆ. ನರ್ಸಿಂಗ್ ಕೆಲಸವೆಂದರೆ ಅದು ಶೃದ್ದೆಯ ಸೇವೆ ಎಂದೆ ಹೇಳಬಹುದು. ಎಲ್ಲ ಸೇವೆಗಿಂತ ಆರೋಗ್ಯ ಸೇವೆ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ನರ್ಸ್ ಹುದ್ದೆ ಅತ್ಯಂತ ಪವಿತ್ರವಾದದ್ದು.

ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‌ಗಳ ಸೇವೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಒಳ್ಳೆಯ ನರ್ಸ್‌ಗಳು ಇರುವರೆಡೆ ಒಳ್ಳೆಯ ವೈದ್ಯಕೀಯ ಸೇವೆ ಸಿಗುತ್ತದೆ. ರೋಗದಿಂದ ಬೇಸತ್ತು ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡವರಿಗೆ ಆತ್ಮಸ್ಥೈರ್ಯ ತುಂಬಿ ಆರೈಕೆ ಮಾಡುವ ನರ್ಸ್‌ಗಳ ಕೆಲಸ ವಿಶ್ವದಲ್ಲೇ ಪ್ರಶಂಸೆಗೆ ಪಾತ್ರವಾಗಿದೆ. ವೈದ್ಯರ ಸೇವೆ ಪರಿಪೂರ್ಣವಾಗುವಲ್ಲಿ ದಾದಿಯರ ನಿಸ್ವಾರ್ಥ ಸೇವೆ ಅತೀ ಅವಶ್ಯಕ.

ಸಾವಿರಾರು ಜನರ ಬದುಕನ್ನು ಉಳಿಸಿದ, ಸಾವಿರಾರು ಜನರ ಜೀವನವನ್ನು ಉತ್ತಮಗೊಳಿಸಿದ, ಶುಶ್ರೂಷಕಿ ವೃತ್ತಿಗೆ ಗೌರವ ಹಾಗೂ ಘನತೆಯನ್ನು ತಂದುಕೊಟ್ಟ, ಇಡಿ ವಿಶ್ವದಲ್ಲಿ ಆರೋಗ್ಯ ಆರೈಕೆ, ನೈರ್ಮಲ್ಯ ಹಾಗೂ ಆಸ್ಪತ್ರೆ ರಚನೆ ಹಾಗೂ ಆಡಳಿತದಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದ ಫ್ಲಾರೆನ್ಸ್ ನೈಟಿಂಗೇಲ್ ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಆದರ್ಶಪ್ರಾಯರು. ಶುಶ್ರೂಷಕಿಯರಿಗಂತು ಫ್ಲಾರೆನ್ಸ್‌ ನೈಟಿಂಗೇಲ್ ಸದಾ ಆದರ್ಶ.

ಜೀವನದಲ್ಲಿ ಎರಡು ಶ್ರೇಷ್ಠ ದಿನಗಳಿವೆ. ಒಂದು ನಾವು ಹುಟ್ಟಿದ ದಿನ. ಇನ್ನೊಂದು ಹುಟ್ಟಿದ್ದು ಏಕೆಂದು ಗೊತ್ತಾದ ದಿನ. ಜೀವನ ಇರುವುದು ಪಡೆದುಕೊಳ್ಳುವುದಕ್ಕಲ್ಲ. ಅದು ಇರುವುದು ಕೊಡುವುದಕ್ಕೆ. ಪ್ರೀತಿಯಿಂದ ಸ್ಫೂರ್ತಿ ಹೊಂದಿದ ಮತ್ತು ಜ್ಞಾನದ ಮಾರ್ಗದರ್ಶನ ಹೊಂದಿದ ಜೀವನವೇ ಸಾರ್ಥಕ ಜೀವನ. ದೀಪಧಾರಿಣಿ ದಾದಿ ಎಂದು ಜಗದ್ವೀಖ್ಯಾತಳಾದ ಫ್ಲಾರೆನ್ಸ್‌ ನೈಟಿಂಗೇಲ್ ಶುಶ್ರೂಷಕಿಯರಿಗೆ ಸದಾ ಆದರ್ಶವಾಗಿರಲಿ ಎಂದು ಕರೋನಾ ಸಂದರ್ಭದ ಈ ಕಷ್ಟ ಕಾಲದಲ್ಲಿ ನಾವೆಲ್ಲರೂ ಆಶಿಸೋಣ.

✍. ಕಾನತ್ತಿಲ್ ರಾಣಿ ಅರುಣ್

0 0 votes
Article Rating
Subscribe
Notify of
guest
0 Comments
Inline Feedbacks
View all comments