ಸರಕಾರದ ನೂತನ ಸುತ್ತೋಲೆ ಸಹಕಾರ ಸಂಘಗಳಿಗೆ ಮಾರಕ: ಬಲ್ಲಾರಂಡ ಮಣಿ ಉತ್ತಪ್ಪ

Reading Time: 4 minutes

ಸರಕಾರದ ನೂತನ ಸುತ್ತೋಲೆ ಸಹಕಾರ ಸಂಘಗಳಿಗೆ ಮಾರಕ: ಬಲ್ಲಾರಂಡ ಮಣಿ ಉತ್ತಪ್ಪ

ಸಹಕಾರ ಸಂಘಗಳ ರೈತ ಸದಸ್ಯರಿಗೆ ನೀಡುವ ಸಾಲವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ರುಪೇ ಕಾರ್ಡ್ ಮೂಲಕವೇ ವಿತರಿಸಬೇಕೆಂದು ಸಹಕಾರ ಇಲಾಖೆ ಇತ್ತೀಚೆಗೆ ಹೊರಡಿಸಿರುವ ನೂತನ ಸುತ್ತೋಲೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಈ ನೂತನ ನೀತಿಯಿಂದ ಸಹಕಾರ ಸಂಘಗಳು ಕೇವಲ ಡಿಸಿಸಿ ಬ್ಯಾಂಕ್‌ನ ಏಜೆಂಟರಂತೆ ಕಾರ್ಯನಿರ್ವಹಣೆ ಮಾಡುವ ಪರಿಸ್ಥಿತಿ ಎದುರಾಗಿದ್ದು, ರೈತರ ಕೃಷಿ ಜೀವನಕ್ಕೆ ಸಹಕಾರಿಯಾಗಿರುವ ಸಹಕಾರ ಸಂಘಗಳ ಅಸ್ತಿತ್ವಕ್ಕೆ ಧಕ್ಕೆ ತರಬಲ್ಲ ಸರಕಾರದ ಈ ಕ್ರಮಗಳನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಈ ಸಂಬಂಧವಾಗಿ ಈಗಾಗಲೇ ಮುಖ್ಯಮಂತ್ರಿಗಳು, ಸಹಕಾರ ಸಚಿವರು ಸೇರಿದಂತೆ ಸರಕಾರ ಪ್ರಮುಖರಿಗೆ ಮನವಿ ಸಲ್ಲಿಸಲಾಗಿದ್ದು, ರೈತರಿಗೆ ಹಾಗೂ ಸಹಕಾರ ಸಂಘಗಳಿಗೆ ಮಾರಕವಾಗಿರುವ ನೂತನ ಸುತ್ತೋಲೆಯನ್ನು ಕೈಬಿಟ್ಟು ಹಿಂದಿನ ನಿಯಮವನ್ನೇ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮೂಲತಃ ರೈತರ ಆರ್ಥಿಕ ಅನುಕೂಲಕ್ಕಾಗಿ ಪ್ರಾರಂಭಗೊಂಡಿದ್ದು, ಶೇ.೯೦ ರಷ್ಟು ರೈತರೇ ಸದಸ್ಯರಾಗಿರುತ್ತಾರೆ. ಬಿತ್ತನೆ ಬೀಜ, ರಸಗೊಬ್ಬರ, ಪಡಿತರ ಹಾಗೂ ಇನ್ನಿತರ ಅಗತ್ಯ ಸಾಮಾಗ್ರಿಗಳನ್ನು ಒದಗಿಸುತ್ತಿರುವ ಸಂಘ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೈತರ ಸೇವೆಯಲ್ಲಿ ತೊಡಗಿದೆ.ಆದರೆ ಈಗ ಹೊರಡಿಸಿರುವ ಸುತ್ತೋಲೆಯಿಂದ ರೈತ ಸಮೂಹಕ್ಕೆ ಆರ್ಥಿಕ ಸಂಕಷ್ಟ ಎದುರಾಗುವುದಲ್ಲದೆ ಸಹಕಾರ ಸಂಘಗಳ ಉಳಿವಿನ ಬಗ್ಗೆಯೂ ಸಂಶಯಗಳು ಮೂಡುತ್ತವೆ ಎಂದು ಟೀಕಿಸಿದರು.

೨೦೧೮-೧೯ನೇ ಸಾಲಿನವರೆಗೆ ರೂ.೩ ಲಕ್ಷದವರೆಗೆ ಯಾವುದೇ ನಿರ್ಬಂಧಗಳಿಲ್ಲದೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲವನ್ನು ವಿತರಿಸಲಾಗುತ್ತಿತ್ತು. ಬಡ್ಡಿ ಸಹಾಯ ಧನದಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುತ್ತಿತ್ತು. ಆದರೆ ಹೊಸ ಸುತ್ತೋಲೆ ಇದಕ್ಕೆ ತದ್ವಿರುದ್ಧವಾಗಿದ್ದು, ಸರ್ಕಾರ ರೈತರ ಹಿತ ಕಾಯುವ ಕೆಲಸವನ್ನು ಮೊದಲು ಮಾಡಲಿ ಎಂದರು.

ಒಂದೇ ಪಡಿತರ ಚೀಟಿ ಹೊಂದಿರುವ ರೈತರಿಗೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗುವುದೆಂದು ತಿಳಿಸಲಾಗಿದೆ. ಆಧಾರ್ ಕಾರ್ಡ್ ಯಾವ ವಿಳಾಸದಲ್ಲಿದೆಯೋ ಆ ವಿಳಾಸದ ಕಾರ್ಯವ್ಯಾಪ್ತಿಯ ಪತ್ತಿನ ಸಹಕಾರ ಸಂಘದಿಂದ ಸಾಲ ಪಡೆಯಬೇಕೆಂದು ಹೇಳಲಾಗಿದೆ.

ಆದರೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಜಮ್ಮಾ ಆಸ್ತಿಯನ್ನು ಹೊಂದಿದ್ದು, ಒಂದೇ ಆರ್.ಟಿ.ಸಿ ಯಲ್ಲಿ ಸುಮಾರು ೧೦ ರಿಂದ ೨೦ ಮಂದಿ ಪಾಲು ಪತ್ರವನ್ನು ಮಾಡಿಸಿಕೊಂಡು ಅವರ ಅನುಭವದಲ್ಲಿರುವ ಆಸ್ತಿಯನ್ನು ಸಂಬಂಧ ಪಟ್ಟ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಮೂನೆ ೩ ರಂತೆ ನೋಂದಣಿ ಮಾಡಿ ಸಾಲ ಪಡೆಯುವ ಕ್ರಮವನ್ನು ಇಲ್ಲಿಯ ತನಕ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಪ್ರತ್ಯೇಕ ಪಡಿತರ ಚೀಟಿ ಹೊಂದಿಲ್ಲವೆಂಬ ಕಾರಣ ನೀಡಿ ಕೇವಲ ಒಬ್ಬರಿಗೆ ಮಾತ್ರ ಬಡ್ಡಿ ಸಹಾಯಧನ ನೀಡುವುದು ಎಷ್ಟು ಸರಿ ಎಂದು ಮಣಿ ಉತ್ತಪ್ಪ ಪ್ರಶ್ನಿಸಿದರು.

ಅವೈಜ್ಞಾನಿಕ ಸುತ್ತೋಲೆಯನ್ನು ತಡೆ ಹಿಡಿದು ಈ ಹಿಂದೆ ಅನುಸರಿಸುತ್ತಿದ್ದ ರೀತಿಯಲ್ಲೇ ಸಾಲ ಹಾಗೂ ಬಡ್ಡಿ, ಸಹಾಯಧನ ನೀಡಿದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಸಹಕಾರ ಸಂಘಗಗಳು ಕೂಡ ಉಳಿಯಬಹುದಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಲಾಕ್‌ಡೌನ್‌ನಿಂದಾಗಿ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ತರಾತುರಿಯಲ್ಲಿ ಸಾಲ ವಸೂಲಾತಿಗೆ ಮುಂದಾಗಬಾರದು ಎಂದೂ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಟಿ.ಎಸ್.ಧನಂಜಯ, ಬಿ.ಎಂ.ಕಾಶಿ ಹಾಗೂ ಪೇರಿಯನ ಪೂಣಚ್ಚ ಉಪಸ್ಥಿತರಿದ್ದರು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments