ಮೇ 31 ವಿಶ್ವ ತಂಬಾಕು ವಿರೋಧಿ ದಿನ
ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ
ಇಂದು (ಮೇ 31 ರಂದು) ವಿಶ್ವ ತಂಬಾಕು ರಹಿತ ದಿನ. ಈ ದಿನವು ವಿಶ್ವ ಜಾಗತಿಕ ತಂಬಾಕು ವಿರೋಧಿ ಜಾಗೃತಿ ದಿನವಾಗಿದೆ. ಪ್ರತಿವರ್ಷ ಮೇ 31 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಯು.ಎಚ್.ಓ.) ಹಾಗೂ ಅದರ ಸದಸ್ಯ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ತಂಬಾಕು ನಿಷೇಧ ದಿನವು ತಂಬಾಕು ಉತ್ಪನ್ನಗಳನ್ನು ತ್ಯಜಿಸಲು ಜಾಗೃತಿ ಮೂಡಿಸುತ್ತದೆ. ತಂಬಾಕು ರಹಿತ ದೇಶ ನಿರ್ಮಿಸುವ ಕಡೆ ನಾವು ಹೆಜ್ಜೆ ಹಾಕಬೇಕಿದೆ.
ಮಾದಕ ವಸ್ತುಗಳ ತಡೆಗೆ ಜನರ ಸಹಭಾಗಿತ್ವ ಅವಶ್ಯಕತೆಯಿದೆ:
ತಂಬಾಕು ಸೇವನೆಯಿಂದ ಮನುಷ್ಯನಿಗೆ ಉಂಟಾಗುವ ರೋಗ ರುಜಿನಗಳು ಹಾಗೂ ಸಾವು ನೋವುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇಂದಿನ ಜಾಗತಿಕ ಪ್ರಪಂಚದಲ್ಲಿ ನಾವು ಈಗ ಪ್ರಮುಖವಾಗಿ ಶಾಲಾ ಮಕ್ಕಳಲ್ಲಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ತಂಬಾಕು ಸೇವನೆಯಿಂದ ಆರೋಗ್ಯ ಹಾಳು ಎಂಬ ಬಗ್ಗೆ ಮಕ್ಕಳಿಗೆ ಎಳೆಯ ವಯಷ್ಸಿನಲ್ಲೇ ಅರಿವು ಮೂಡಿಸಿದರೆ ಅವರು ಭವಿಷ್ಯದಲ್ಲಿ ಇದರಿಂದ ದೂರ ಇರಲು ಸಹಕಾರಿಯಾಗುತ್ತದೆ.
ತಂಬಾಕು ಸೇವನೆಯು ಮನುಷ್ಯನ ದೇಹವನ್ನು ಹಾಳುಗೆಡಹುತ್ತದೆಯೇ ವಿನಃ ಎಂದಿಗೂ ಪ್ರಯೋಜನಕಾರಿಯಲ್ಲ. ನಾವು ತಂಬಾಕು ಮತ್ತು ಇದರ ಉತ್ಪನ್ನಗಳನ್ನು ಖರೀದಿಸಿ ಸೇವಿಸಿದರೆ ನಾವೇ ಸ್ವತಃ ಸಾವನ್ನು ಆಹ್ವಾನಿಸಿದಂತೆ. ತಂಬಾಕು ಸೇವನೆಯಿಂದ ದಮ್ಮು, ಸ್ಟ್ರೋಕ್, ಕ್ಯಾನ್ಸರ್ ಸೇರಿದಂತೆ ಮುಂತಾದ ಹೃದಯ ಸಂಬಂಧಿ ಖಾಯಿಲೆಗಳು ಬಹುಬೇಗ ಆವರಿಸುತ್ತವೆ. ಇದರಿಂದ ಖಂಡಿತಾ ಸಾವು ಸಂಭವಿಸುತ್ತದೆ.. ತಂಬಾಕು ಸೇವನೆಯಿಂದ ಪ್ರತಿವರ್ಷ 60 ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ತಂಬಾಕು ಸೇವನೆಯ ವ್ಯಸನಿಗಳಿಗೆ ಚಿಕಿತ್ಸೆ ಕೊಡಲೆಂದು ಎಷ್ಟೊಂದು ಆಸ್ಪತ್ರೆಗಳು, ಆರೋಗ್ಯ ಸೇವಾ ಕಾರ್ಯಕರ್ತರು, ಔಷಧ ಉತ್ಪಾದನೆಗಳು ಇವೆಲ್ಲ ಸೇರಿ ಪ್ರತಿ ವರ್ಷವೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟವೂ ತಂಬಾಕಿನಿಂದ ಉಂಟಾಗುತ್ತಿದೆ.
ತಂಬಾಕು ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಮಾರಕ ಎಂದು ತಿಳಿದಿದ್ದರೂ ಇಂದಿನ ಯುವ ಜನಾಂಗ ಮದ್ಯಪಾನದೊಂದಿಗೆ ತಂಬಾಕು ಸೇವನೆಗೂ ಹೆಚ್ಚು ಬಲಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಧೂಮಪಾನ ಮತ್ತು ತಂಬಾಕು ಅಗಿಯುವ ಜನರ ಜಾಗತಿಕ ಪ್ರಮಾಣದಲ್ಲಿ ಚೀನಾದ ಪಾಲು ಶೇ.30 ಇದ್ದರೆ, ಎರಡನೇ ಸ್ಥಾನ ಪಡೆದ ಭಾರತ ಪಾಲು ಶೇ.10 ರಷ್ಟಿದೆ. ಇದು ಹೀಗೆ ಮುಂದುವರಿದಲ್ಲಿ 2030 ರ ಹೊತ್ತಿಗೆ ತಂಬಾಕಿನಿಂದ ಪ್ರತಿವರ್ಷ ಅಕಾಲಿಕ ವಯಸ್ಸಿಗೇ ಸಾಯುವ ಸಂಖ್ಯೆ ೮೦ ಲಕ್ಷಕ್ಕೆ ಏರಲಿದೆ.
ತಂಬಾಕು ಚಟ : ವಿಶ್ವಸಂಸ್ಥೆಯು ಪ್ರಕಟಿಸಿರುವ ಒಂದು ಪೋಷ್ಟರಿನಲ್ಲಿ ತಂಬಾಕಿನ ಯಾವ್ಯಾವ ಭೀಕರ ಕಾಯಿಲೆಗಳು ಬರುತ್ತವೆ ಎಂದು ವಿವರಿಸಲಾಗಿದೆ. ತಂಬಾಕನ್ನು ಬೀಡಿ, ಸಿಗರೇಟು, ನಶ್ಯದ ಪುಡಿ, ಹುಕ್ಕಾ, ಜರ್ದಾ, ಗುಟಕಾ, ಸಿಗಾರ್, ಭಂಗಿ, ಚುಟ್ಟಾ, ಮಿಶ್ರಿ, ಗುಲ್, ಗುಧಾಕು – ಹೀಗೆ ನಾನಾ ಹೆಸರುಗಳಿರುವ ಚಟಗಳ ಅವತಾರಗಳಲ್ಲಿ ಕಾಣಬಹುದು. ಒಣ ತಂಬಾಕು (ಹೊಗೆಸೊಪ್ಪು) ಎಲೆಗಳನ್ನು ಎಲೆ-ಅಡಿಕೆ(ಪಾನ್,ಸುಪಾರಿ) ಯೊಂದಿಗೆ ನೇರವಾಗಿಯೂ ಜಗಿಯುತ್ತಾರೆ. ಇತ್ತೀಚೆಗಂತೂ ಭಾರತದಲ್ಲಿ ಗುಟುಕಾ ರೂಪದಲ್ಲಿ ತಂಬಾಕಿನ ಸೇವನೆ ವಿಪರೀತವಾಗಿದೆ.
ತಂಬಾಕಿನಲ್ಲಿ ಇರುವ 40 ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಎಂಬ ಕುಖ್ಯಾತ, ಭೀಕರ ಕಾಯಿಲೆಗೆ ಕಾರಣವಾಗಿವೆ. ಶ್ವಾಸಕೋಶದ ಕ್ಯಾನ್ಸರಿಗೆ ತಂಬಾಕು ಸೇವನೆಯು ನೂರಕ್ಕೆ 90 ರಷ್ಟು ಕಾರಣ. ತಂಬಾಕಿನಿಂದ ಬಾಯಿಯ ಕ್ಯಾನ್ಸರ್, ಜಠರದ ಕ್ಯಾನ್ಸರ್, ಮೂಗಿನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ – ಹೀಗೆ ಎಲ್ಲ ಭೀಕರ ರೋಗಗಳು ಬಹುಬೇಗ ಆವರಿಸುತ್ತವೆ ಎಂದು ಈ ಸಂಬಂಧ ನಡೆಸಿದ ಅಧ್ಯಯನಗಳು ಖಚಿತಪಡಿಸಿವೆ.
ಸಿಗರೇಟು ಸಂಸ್ಥೆಗಳು ಏನೆಲ್ಲ ಸುಳ್ಳು ಪ್ರಚಾರ ಮಾಡಿ ಹದಿಹರೆಯದವರನ್ನು ಸಿಗರೇಟು ಸೇವನೆಗೆ ದೂಡುತ್ತಿವೆ. ಒಮ್ಮೆ ತಂಬಾಕಿನ ಮಾದಕತೆಗೆ ದಾಸರಾದರೆ ಸಾಕು, ಜೀವನವಿಡೀ ಸಿಗರೇಟಿನ ದಾಸರಾಗುತ್ತಾರೆ. ಇದೇ ಸಿಗರೇಟು ಸಂಸ್ಥೆಗಳ ಮಾರುಕಟ್ಟೆ ಷಡ್ಯಂತ್ರವಾಗಿದೆ.
ತಂಬಾಕು ಚಟ ಹೀಗೇ ಹಬ್ಬುತ್ತಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತದಲ್ಲೇ ತಂಬಾಕಿನಿಂದ ಮರಣ ಹೊಂದುವವರ ಸಂಖ್ಯೆ ಅತಿ ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮನ್ನು ಎಚ್ಚರಿಸಿದೆ.
ಪರಿಸರ ನಾಶ : ತಂಬಾಕು ಬೆಳೆಯು ಅಪಾರ ಪ್ರಮಾಣದಲ್ಲಿ ಕಾಡಿನ ನಾಶಕ್ಕೆ ಕಾರಣವಾಗಿದೆ. ತಂಬಾಕಿನ (ಹೊಗೆಸೊಪ್ಪು) ಎಲೆಗಳನ್ನು ಹದಗೊಳಿಸಲು ನಿಗಿನಿಗಿ ಉರಿಯುವ ಕೆಂಡಗಳ ದೊಡ್ಡ ಒಲೆ ಬೇಕು. ಇಂಥ ಬೆಂಕಿಗೆ ನಮ್ಮ ಸುತ್ತಮುತ್ತಲಿನ ಅತ್ಯುತ್ತಮ ಮರಗಳು ಬಲಿಯಾಗುತ್ತಿವೆ. ಬ್ರೆಝಿಲ್ ದೇಶದಲ್ಲಿ ಹೀಗೆ ಹಸಿ ಮರಗಳ ಕಟಾವಿನಿಂದಾಗಿ ಕಾಡುಗಳೆಲ್ಲ ಬರಿದಾಗಿವೆ. ಹಾಗೆಯೇ, ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ 100 ಕೋಟಿಗೂ ಹೆಚ್ಚು ಟನ್ ಸೌದೆಯನ್ನು ತಂಬಾಕು ಹದಮಾಡಲೆಂದೇ ಉರಿಸಲಾಗಿದೆ ! ತಂಬಾಕು ಬೆಳೆಯಿಂದ ಕೀಟನಾಶಕಗಳ ವಿಪರೀತ ಬಳಕೆಯಾಗಿ ನೆಲವೆಲ್ಲ ವಿಷಮಯವಾಗುತ್ತದೆ; ಅತಿ ಕೃಷಿಯಿಂದ ಮಣ್ಣಿನ ಸವಕಳಿ ಹೆಚ್ಚುತ್ತದೆ. ತಂಬಾಕು ಬೆಳೆದಷ್ಟೂ ಪರಿಸರಕ್ಕೂ ನಷ್ಟ, ಸಮಾಜಕ್ಕೂ ನಷ್ಟವೇ ಹೆಚ್ಚು. ಹೀಗಿದ್ದೂ ಭಾರತದಲ್ಲಿ ತಂಬಾಕನ್ನು ಬೆಳೆಯನ್ನು ನಿರಂತರವಾಗಿ ಬೆಳೆಯುತ್ತಿದ್ದರೂ ನಿಷೇಧಿಸಿಲ್ಲ.
ವ್ಯಸನ ಬಿಡಿಸಲು ಕ್ರಮಗಳು: ವ್ಯಸನ ಬಿಡಿಸಲು ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಸಚಿವಾಲಯವು ಸಿಗರೇಟು ಮತ್ತು ತಂಬಾಕಿನ ಎಲ್ಲಾ ಉತ್ಪನ್ನಗಳ ಮೇಲೆ ‘ತಂಬಾಕು ಕ್ಯಾನ್ಸರಿಗೆ ಕಾರಣ’ ಎಂಬ ಸೂಚನೆ ಮತ್ತು ಚಿತ್ರಗಳನ್ನು ಪ್ರಕಟಿಸುವುದನ್ನು ಕಡ್ಡಾಯ ಮಾಡಿದೆ. ಸಿಗರೇಟಿ ಮೇಲೆ ಅತ್ಯಧಿಕ ತೆರಿಗೆಯನ್ನೂ ವಿಧಿಸುತ್ತಾ ಬಂದರೂ ತಂಬಾಕು ವ್ಯಸನಿಗಳು ತಂಬಾಕು ಸೇವನೆಯಿಂದ ದೂರವಾಗಿಲ್ಲ. ಕೋರ್ಟ್ ಆದೇಶದನ್ವಯ ಸರ್ಕಾರ ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಪರ್ಯಾಯ ಬೆಳೆಗೆ ಪ್ರೋತ್ಸಾಹ : ತಂಬಾಕು ಬೆಳೆಯುವ ರೈತರು ತಂಬಾಕು ಬೆಳೆಯುವುನ್ನು ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಸಬೇಕು ಎಂದು ಸರ್ಕಾರ ಕೂಡ ರೈತರಿಗೆ ಈಗಾಗಲೇ ಸೂಚನೆ ನೀಡಿದೆ. ರೈತರು ಪರ್ಯಾಯವಾಗಿ ಕಬ್ಬು, ಹತ್ತಿ, ಶೇಂಗಾ, ಆಲೂಗೆಡ್ಡೆ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಬೆಳೆದರೆ ತಂಬಾಕಿಗಿಂತ ಹೆಚ್ಚು ಆದಾಯವನ್ನು ಪಡೆಯಬಹುದು. ಆದರೆ ಈ ಬಗ್ಗೆ ರೈತರನ್ನು ಜಾಗೃತಗೊಳಿಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಿದೆ.
ನಾವೇನು ಮಾಡಬಹುದು ? : ಮೇ ೩೧ ರ ‘ವಿಶ್ವ ತಂಬಾಕು ವಿರೋಧಿ ದಿನ’ದ ಸಂದರ್ಭದಲ್ಲಿ ನಾವು ತಂಬಾಕಿನ ಬಳಕೆಯನ್ನು ನಿಲ್ಲಿಸಲು ಈ ಕೆಳಗಿನ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ.
* ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದು ನಿಷಿದ್ಧವಿದ್ದರೂ ಧೂಮಪಾನ ಮಾಡಲಿ, ಪಾನ್‌ಬೀಡಾ ಉಗಿಯಲಿ ಅದನ್ನು ಪ್ರತಿಭಟಿಸುವುದು ಎಲ್ಲರ ಹಕ್ಕು. ಆ ಹಕ್ಕನ್ನು ಎಲ್ಲರು ಮುಲಾಜಿಲ್ಲದೆ ಆದರೆ ವಿನಯದಿಂದ ಚಲಾಯಿಸೋಣ.
* ನಮ್ಮ ನೆರೆಹೊರೆಯಲ್ಲಿ ಧೂಮಪಾನಿಗಳಿದ್ದರೆ, ಅದು ತೀರ ನಾಚಿಕೆಗೇಡಿನ ಸಂಗತಿ ಮತ್ತು ಆರೋಗ್ಯಕ್ಕೆ ಹಾನಿ ಎಂದು ತಂಬಾಕಿನ ಅಪಾಯಗಳನ್ನು ಅವರಿಗೆ ತಿಳಿಸೋಣ.
* ತಂಬಾಕು ಸೇವನೆಯನ್ನು ಒಮ್ಮಲೇ ಬಿಡುವುದು ಕಷ್ಟಸಾಧ್ಯವಾದ ಧೂಮಪಾನಿಗಳಿಗೆ ಮತ್ತು ತಂಬಾಕು ಬಳಕೆದಾರರಿಗೆ ಕ್ರಮೇಣವಾಗಿ ತಂಬಾಕು ಬಳಕೆ ಬಿಡಲು ಸಲಹೆ ನೀಡೋಣ ಮತ್ತು ಬಿಟ್ಟವರನ್ನು ಸನ್ಮಾನಿಸೋಣ.
* ಧೂಮಪಾನ ಮಾಡುತ್ತಿರುವವರು ನಮ್ಮ ಬಳಿ ಇದ್ದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಅವರಿಗೆ ನಿಷ್ಠುರವಾಗಿ ಮತ್ತು ವಿನಯದಿಂದ ನಮ್ಮ ವಿರೋಧವನ್ನು ತಿಳಿಸೋಣ.
* ಶಾಲಾ-ಕಾಲೇಜುಗಳ ೨೦೦ ಅಡಿ ವ್ಯಾಪ್ತಿಯಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಮಾರಾಟವು ನಿಷೇಧವಾಗಿದೆ. ಹಾಗಿದ್ದರೂ ಈ ಪ್ರದೇಶದಲ್ಲಿ ಈ ನಿಯಮ ಉಲ್ಲಂಘನೆಯಾಗಿದ್ದರೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ಸ್ಥಳೀಯ ಆಡಳಿತಕ್ಕೆ ದೂರು ನೀಡೋಣ.
* ನಾವು ಭಾಗವಹಿಸುವ ಕಾರ್ಯಕ್ರಮ/ಸಮಾರಂಭ, ಕೌಟುಂಬಿಕ ಆಚರಣೆಗಳಲ್ಲಿ ತಂಬಾಕಿನ ಅಪಾಯಗಳನ್ನು ಬಿಂಬಿಸುವ ಮಾಹಿತಿಯನ್ನು ನೀಡುವುದು ಮತ್ತು ಇದಕ್ಕೆ ಇತರರನ್ನು ಪ್ರೇರೇಪಿಸೋಣ.
* ತಂಬಾಕು ಬೆಳೆಯುತ್ತಿರುವ ಕೃಷಿಕರ ಮನಸ್ಸು ಬದಲಿಸಲು ಗೆಳೆಯರ ಗುಂಪು ರಚಿಸಿಕೊಂಡು ಅಂಥ ಜೀವವಿರೋಧಿ ಕೃಷಿಯನ್ನು ಕೈಬಿಡುವಂತೆ ಪ್ರೇರೇಪಿಸಿ ಪ್ರಚಾರ ಮಾಡೋಣ.
ಹೀಗೆ ಹತ್ತು ಹಲವು ಯೋಜನೆ/ಕಾರ್ಯಕ್ರಮಗಳ ಮೂಲಕ ತಂಬಾಕು ಸೇವನೆಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಇದನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ ಭಾರತ ದೇಶವನ್ನು ತಂಬಾಕು ಮುಕ್ತ ದೇಶವನ್ನಾಗಿ ಪರಿವರ್ತಿಸಲು ಪ್ರಯತ್ನಿಸಬಹುದು.
ತಂಬಾಕು ಚಟ ಹೀಗೇ ಹಬ್ಬುತ್ತಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತದಲ್ಲೇ ತಂಬಾಕಿನಿಂದ ಸಾಯುವವರ ಸಂಖ್ಯೆ ಅತಿ ಹೆಚ್ಚಾಗಲಿದೆ. ಈ ದಿಸೆಯಲ್ಲಿ ಇಂತಹ ದಿನಗಳಂದು ತಂಬಾಕು ಬಳಕೆದಾರರನ್ನು ಜಾಗೃತಗೊಳಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣತೊಡೋಣ.
ಲೇಖಕರು: ✍. ಟಿ.ಜಿ.ಪ್ರೇಮಕುಮಾರ್,