"ಯುಗಪುರುಷನ ರಾಷ್ಟ್ರ ಧರ್ಮ" – "ರಾಷ್ಟ್ರೀಯ ಯುವ ದಿನ" ಸ್ವಾಮಿ ವಿವೇಕಾನಂದರ 157ನೇ ವರ್ಷಾಚರಣೆಯ ವಿಶೆಷ ಲೇಖನ:

“ರಾಷ್ಟ್ರೀಯ ಯುವ ದಿನ” ಸ್ವಾಮಿ ವಿವೇಕಾನಂದರ 157ನೇ ವರ್ಷಾಚರಣೆಯ ವಿಶೆಷ ಲೇಖನ:

“ಯುಗಪುರುಷನ ರಾಷ್ಟ್ರ ಧರ್ಮ”

ಸ್ವಾಮಿ ವಿವೇಕಾನಂದ ಬದುಕಿದ್ದು, ಕೇವಲ 39 ವರ್ಷಗಳಾದರೂ ಅವರ ಪ್ರಭಾವ ಮಾತ್ರ ಭರತ ಭೂಮಿ ಇರುವವರೆಗೂ…. ನರೇಂದ್ರರೇನೂ ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವದ ಗಮನ ಸೆಳೆದಿದ್ದು, ಕೇವಲ 7 ವರ್ಷಗಳ ಅವಧಿಯಲ್ಲಿ. ಅವರು ಯುಗಪುರುಷರೆನಿಸಿದ್ದು 1893-1900ರ ನಡುವಿನ ಕೇವಲ ಏಳು ವರ್ಷಗಳಲ್ಲಿ. ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ; ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಯಾವ ಕ್ಷಣದಲ್ಲೂ ಶಕ್ತಿ ಕಳೆದುಕೊಳ್ಳಬಾರದು ಎಂದು ಯುವಕರಿಗೆ ಸ್ವಾಮಿ ವಿವೇಕಾನಂದ ಕರೆ ನೀಡಿದ್ದರು.
12-1-1863 ಇತಿಹಾಸ ಎಂದೂ ಮರೆಯಲಾರದ ದಿನ. ಅಂದು ಭಾರತೀಯ ಸನಾತನ ಸಂಸ್ಕೃತಿಯ ಪುನರುತ್ಥಾನದ ಹರಿಕಾರ, ಅಪ್ರತಿಮ ವಾಗ್ಮಿ, ಅನುಪಮ ಮಾನವತಾವಾದಿ ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ನಾವೀಗ ವಿವೇಕಾನಂದರ 157ನೇ ವರ್ಷಾಚರಣೆಯಲ್ಲಿದ್ದೇವೆ. ಯುವ ಜನರಿಗೆ ಪ್ರೇರಕ ಶಕ್ತಿಯಾದ, ನವ ಚೈತನ್ಯದ ಚಿಲುಮೆಯಾದ ವಿವೇಕಾನಂದರನ್ನು ಲೇಖನವೊಂದರಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಅವರ ವ್ಯಕ್ತಿತ್ವದ ತೃಣಮಾತ್ರ ಪರಿಚಯ ಮಾಡಿಸುವ ಪ್ರಯತ್ನ ಇದು…..

ತಾರುಣ್ಯ ಎಂದರೆ ಶಕ್ತಿಯ ಅಪರಿಮಿತ ಉತ್ಸಾಹ. ಈ ಶಕ್ತಿಯನ್ನು ಧರ್ಮದ ಸ್ಥಾಪನೆಗಾಗಿ ಬಳಸಿಕೊಳ್ಳುವುದೇ ಜೀವನದ ನಿಜವಾದ ಅರ್ಥ ಎಂದು ಸನ್ಯಾಸಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದವರು ಸ್ವಾಮಿ ವಿವೇಕಾನಂದರು. ಧರ್ಮ ಎಂದರೆ ಅದೇನೂ ಎಲ್ಲೋ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸು ಅಲ್ಲ; ಜನರ ನಡುವೆ ಇದ್ದುಕೊಂಡು, ಜನರಿಗಾಗಿ ನಮ್ಮ ಸಮಸ್ತ ಶಕ್ತಿಯನ್ನೂ ವಿನಿಯೋಗಿಸುವುದೇ ಧರ್ಮ ಎಂದು ಧಾರ್ಮಿಕತೆಯ ವ್ಯಾಪ್ತಿಯನ್ನೂ ಹಿಗ್ಗಿಸಿದರು. ಈ ಸಮಾಜಯಜ್ಞಕ್ಕೆ ಅವರು ವಿಶೇಷ ಆಹ್ವಾನ ನೀಡಿದ್ದು ಯುವಕರಿಗೆ. ‘ಈ ಪ್ರಪಂಚ ಇರುವುದು ಹೇಡಿಗಳಿಗೆ ಅಲ್ಲ; ಜೀವನದಲ್ಲಿ ಎದುರಾಗುವ ಸೋಲು–ಗೆಲುವುಗಳಿಗೆ ಬಗ್ಗಬೇಡಿ. ಸ್ವಾರ್ಥರಹಿತ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಕೆಲಸದಲ್ಲಿ ತೊಡಗಿ; ಫಲಿತಾಂಶದ ಬಗ್ಗೆ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಒಳ್ಳೆಯ ಕೆಲಸ ಕೂಡ ಬಂಧನವೇ ಆಗಬಹುದು. ಹೀಗಾಗಿ ಕೀರ್ತಿಯನ್ನು ಬಯಸಿ ಯಾವುದೇ ಕೆಲಸದಲ್ಲಿ ತೊಡಗಬೇಡಿ’ ಎಂದು ಅವರು ಯುವಕರಿಗೆ ಕರೆ ಕೊಟ್ಟರು.
ಸ್ವಾಮಿ ವಿವೇಕಾನಂದರ ಜೀವನ ಅದೆಷ್ಟೋ ಮಂದಿಯ ಜೀವನವನ್ನೇ ಬದಲಿಸಿದೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ವಿವೇಕಾನಂದರ ಬರಹಗಳು ಸಾಕಷ್ಟು ಪ್ರಭಾವ ಬೀರಿರುವುದು ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್ ಅವರ ಮಾತುಗಳಲ್ಲಿ ಕಂಡು ಬರುತ್ತದೆ. ಸ್ವಾಮಿ ವಿವೇಕಾನಂದ ಎಂಬ ಹೆಸರೇ ಒಂದು ಪ್ರೇರಣೆ. ಸ್ವಾಮಿ ವಿವೇಕಾನಂದ ತಮ್ಮ ಭಾಷಣದ ಮೂಲಕ ಹೇಗೆ ಜಗತ್ತಿನ ಗಮನ ಸೆಳೆದರೋ ಅದೇ ರೀತಿ ಬರವಣಿಗೆ ಮೂಲಕವೂ ಕ್ರಾಂತಿ ಮಾಡಿದವರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು “ರಾಷ್ಟ್ರೀಯ ಯುವ ದಿನ” ಎಂದು ಘೋಷಿಸಲಾಗಿದ್ದು, ಈಗಲೂ ಆಚರಣೆಯಲ್ಲಿದೆ ಎಂಬುದಷ್ಟೇ ಸಂತೋಷ. ಇಂದು ದೇಶದಾದ್ಯಂತ ಆಚರಣೆ ಜಾರಿಯಲ್ಲಿದ್ದು, ಶಾಲಾ, ಕಾಲೇಜು ಅಲ್ಲಲ್ಲಿ ಮೆರವಣಿಗೆ, ಪ್ರಬಂಧ ಸ್ಪರ್ಧೆ, ಭಾಷಣ, ಚರ್ಚಾಕೂಟದಲ್ಲಿ ಪಾಲ್ಗೊಂಡು ವಿವೇಕಾನಂದರರ ಸಂದೇಶ ಸಾರುವಲ್ಲಿ ತೊಡಗಿದ್ದಾರೆ.
ಇಡೀ ಮನುಕುಲಕ್ಕೆ ಯುವ ಜನತೆಗೆ ಆದರ್ಶ ಪ್ರಾಯರಾದ ಸ್ವಾಮಿ ವಿವೇಕಾನಂದರ ಸಾಧನೆಯಾದರೂ ಏನು? ಅವರನ್ನೇಕೆ ವಿಶ್ವ ಸ್ಮರಿಸುತ್ತದೆ. ಇದನ್ನು ಭಾರತೀಯರಾದ ಪ್ರತಿಯೊಬ್ಬರೂ ತಿಳಿಯಲೇ ಬೇಕು. ಅದು ನಮ್ಮ ಕರ್ತವ್ಯ ಕೂಡ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಒಂದು ಮಾತು ಹೇಳಿದ್ದಾರೆ. ‘ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮೀ ವಿವೇಕಾನಂದರನ್ನು ಓದಿ’ ಎಂದು. ಅಂದರೆ ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ. ಅವರ ಜೀವನವೇ ಒಂದು ಯಶೋಗಾಥೆ.
ಜೀವನದಲ್ಲಿ ಸೋತವರು ಹತಾಶೆಯಿಂದ ಬಯಸುವ ಖಾಲಿತನವೇ ವೈರಾಗ್ಯ ಎಂಬ ಭಾವನೆಯಿದೆಯಷ್ಟೆ. ಆದರೆ ಈ ಅಭಾವ ವೈರಾಗ್ಯವನ್ನು ಟೀಕಿಸಿದ ಸ್ವಾಮೀಜಿ, ಸನ್ಯಾಸ ಎಂಬ ಪರಿಕಲ್ಪನೆಗೇ ಯೌವನವನ್ನು ತುಂಬಿದರು. ಸಮಾಜಸೇವೆ, ವ್ಯಕ್ತಿತ್ವನಿರ್ಮಾಣ, ದೈಹಿಕ–ಮಾನಸಿಕ ಸದೃಢತೆ, ರಾಷ್ಟ್ರಭಕ್ತಿ, ವೈಜ್ಞಾನಿಕ ಮನೋಧರ್ಮ ಇಂಥ ಹಲವು ಗುಣಗಳನ್ನು ಸನ್ಯಾಸದ ಪರಿಧಿಯೊಳಗೆ ತಂದವರು ಅವರೇ. ಸಾವಿರಾರು ವರ್ಷಗಳ ಭಾರತೀಯ ಭವ್ಯ ಪರಂಪರೆಯಲ್ಲಿ ಹಲವು ಕಳೆಗಳೂ ಕೊಳೆಗಳೂ ಸೇರಿಕೊಂಡಿದ್ದವು. ಇವನ್ನು ಒಂದೊಂದಾಗಿ ಕಳೆಯಲು ಜೀವನದುದ್ದಕ್ಕೂ ಶ್ರಮಿಸಿದರು. ಈ ನೆಲದ ಶುದ್ಧ ಅಧ್ಯಾತ್ಮಪರಂಪರೆಯ ಭವ್ಯರೂಪವಾದವರು ಸ್ವಾಮೀ ವಿವೇಕಾನಂದ.

ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ, ಅಕ್ಷರಶಃ ರೋಮಾಂಚನವಾಗುತ್ತದೆ. ವಿವೇಕವಾಣಿಯನ್ನು ಕೇಳುತ್ತಿದ್ದರೆ, ವಿವೇಕಾನಂದರ ಸಂದೇಶಗಳನ್ನು ಓದುತ್ತಿದ್ದರೆ, ಮೈ ಪುಳಕಿತವಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ. ತನುವಿನಲ್ಲಿ ಹೊಸ ಚೈತನ್ಯ ಒಡಮೂಡುತ್ತದೆ. ಇಂಥ ಮಹಾನ್ ವ್ಯಕ್ತಿಯ ಜೀವನ ಚರಿತ್ರೆ ಓದಿದರೆ ಯುವಕರಲ್ಲಿ ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆ ಮೂಡುವುದರ ಜೊತೆಗೆ ಸ್ವಾವಲಂಬನೆಯ, ಆತ್ಮಾಭಿಮಾನದ ಸಾಕ್ಷಾತ್ಕಾರವಾಗುತ್ತದೆ. ನಿಮ್ಮ ಜೀವನದ ಶಿಲ್ಪಿಗಳು ನೀವಾಗಬೇಕೆಂದರೆ, ಅಖಂಡ ಭಾರತದ ಪರಿಕಲ್ಪನೆಗಾಗಿ ವಿವೇಕಾನಂದರನ್ನೊಮ್ಮೆ ಓದಿ. ಅದುವೇ ನಿಮಗೊಂದು ದಿನವನ್ನು ಕಟ್ಟಿಕೊಟ್ಟ ಮಹಾಪುರುಷನಿಗೆ ನೀವು ನೀಡುವ ಅಪೂರ್ವ ಸಮರ್ಪಣೆ.
ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಯುವಜನತೆಯನ್ನು ಅಪೇಕ್ಷಿಸಿದ್ದರು ಸ್ವಾಮೀಜಿ. ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಬ್ಬನೇ ವ್ಯಕ್ತಿ ಕೋಟ್ಯಂತರ ದುಷ್ಟರ, ದುರುಳರ ಕಪಟ ಜಾಲವನ್ನು ನಾಶಮಾಡಬಹುದು. ಬನ್ನಿ ಯುವಕರೇ, ಹೊಸ ನಾಡನ್ನು ಕಟ್ಟೋಣ, ತ್ಯಾಗ-ಸೇವೆಗಳೇ ನಮ್ಮ ಉಸಿರಾಗಲಿ, ಸದೃಢರಾಗಿ, ಖಿನ್ನರಾಗದಿರಿ, ನಕಾರಾತ್ಮಕ ಚಿಂತನೆಗಳನ್ನು ದೂರ ಬಿಸಾಡಿ, ಇದೇ ನಮ್ಮ ನವಯುಗದ ಚಿಹ್ನೆಯಾಗಿರಲಿ, ಭವ್ಯ ಭಾರತವನ್ನು ಕಟ್ಟೋಣ.

✍. ವಿವೇಕ್‌ ನರೇನ್

0 0 votes
Article Rating
Subscribe
Notify of
guest
0 Comments
Inline Feedbacks
View all comments