ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದೆ – ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ

ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದೆ:

-ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ

ಹೋಂಸ್ಟೇಗಳನ್ನು ಅವಲಂಬಿಸಿಕೊಂಡು ಜೀವನ ಸಾಗಿಸುವುದು ಕೂಡ ಬದುಕಿನ ಒಂದು ಹಕ್ಕಾಗಿದ್ದು, ಇದನ್ನು ಕಸಿದುಕೊಳ್ಳುವುದಕ್ಕಾಗಿ ಪಿತೂರಿ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು, ಕಳೆದ ಎರಡೂವರೆ ತಿಂಗಳ ಲಾಕ್‌ಡೌನ್‌ನಿಂದಾಗಿ ಹೋಂಸ್ಟೇಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವರ್ಷಗಳ ಅತಿವೃಷ್ಟಿಯಿಂದಲೂ ಸಾಕಷ್ಟು ನಷ್ಟವಾಗಿದೆ. ಹೋಂಸ್ಟೇಗಳನ್ನು ತೆರೆಯಲು ಸರ್ಕಾರವೇ ಅನುಮತಿ ನೀಡಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಅತಿಥಿ ಸತ್ಕಾರವನ್ನು ಮಾಡಲಿದ್ದೇವೆ. ಕಷ್ಟ, ನಷ್ಟಗಳ ನಡುವೆ ಹೋಂಸ್ಟೇಗಳನ್ನು ಆರಂಭಿಸದೇ ಇದ್ದರೆ ಇವುಗಳನ್ನೇ ನಂಬಿರುವ ನೌಕರ ವರ್ಗದ ಕುಟುಂಬ ಬೀದಿಗೆ ಬರುತ್ತದೆ ಎಂದು ನುಡಿದರು.

ಡಿಸೆಂಬರ್ ಅಂತ್ಯದವರೆಗೆ ಕೊಡಗಿನ ಹೋಂಸ್ಟೇಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ಹೇಳಿಕೆ ನೀಡಿರುವವವರು ಹೋಂಸ್ಟೇಗಳನ್ನೇ ನಂಬಿ ಬದುಕು ಸಾಗಿಸುತ್ತಿರುವ ಮಾಲಕರು ಹಾಗೂ ನೌಕರರಿಗೆ ಆಗುವ ಸಂಪೂರ್ಣ ನಷ್ಟವನ್ನು ಭರಿಸುವುದಾದರೆ ಹೋಂಸ್ಟೇಗಳನ್ನು ಮುಚ್ಚಲು ಸಿದ್ಧವೆಂದು ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಜಿ.ಅನಂತಶಯನ ಈ ಸಂದರ್ಭ ಹೇಳಿದರು.

ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಲಾ ಪ್ರಕಾರ, ಪ್ರಕೃತಿ, ಕೃಷಿ ಮತ್ತು ಆಹಾರ ಪದ್ಧತಿಯನ್ನು ಪರಿಚಯಿಸುತ್ತಿದೆ. ಹೋಂಸ್ಟೇ ಪರಿಕಲ್ಪನೆ ಮಾಲಕನ ದುಡಿಮೆಯ ಬೆವರ ಹನಿಯಿಂದ ಸಾಕಾರಗೊಳ್ಳುತ್ತಿದೆಯೇ ಹೊರತು ಸರ್ಕಾರದಿಂದ ಯಾವುದೇ ನೆರವುಗಳು ದೊರೆಯುತ್ತಿಲ್ಲ. ನಾವು ಸರ್ಕಾರಕ್ಕೆ ನ್ಯಾಯಯುತವಾಗಿ ತೆರಿಗೆ ಪಾವತಿಸುತ್ತಿದ್ದೇವೆ, ಆದರೆ ಹೇಳಿಕೆಗಳನ್ನು ನೀಡುವವರು ತೆರಿಗೆ ಪಾವತಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ದಿಢೀರ್ ಆಗಿ ನಾಯಕರಾಗಬೇಕೆನ್ನುವ ಕಾರಣಕ್ಕೆ ವಿತಂಡವಾದದಲ್ಲಿ ತೊಡಗಿರುವಂತೆ ಕಂಡು ಬರುತ್ತಿರುವವರು, ದೊಡ್ಡ ದೊಡ್ಡ ರೆಸಾರ್ಟ್‌ಗಳ ಪರ ಮಾತನಾಡುವವರು ಮಧ್ಯಮ ವರ್ಗ ನಡೆಸುವ ಹೋಂಸ್ಟೇಗಳ ವಿರುದ್ಧ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಯಾವುದೋ ಲಾಭದ ದುರುದ್ದೇಶ ಅಡಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಅನಂತಶಯನ ಆರೋಪಿಸಿದರು.

ಹೋಂಸ್ಟೇಗಳಿಗಿಂತ ರೆಸಾರ್ಟ್ ಮತ್ತು ಲಾಡ್ಜ್‌ಗಳಲ್ಲಿ ಆರೋಗ್ಯ ವರ್ಧಕ ವ್ಯವಸ್ಥೆಗಳಿಗೆ ವೆಚ್ಚ ಹೆಚ್ಚಾಗುತ್ತದೆ. ಹೋಂಸ್ಟೇಗಳಲ್ಲಿ ೨ ರಿಂದ ೫ ಕೋಣೆಗಳು ಮಾತ್ರ ಇರುವುದರಿಂದ ಕೋವಿಡ್ ೧೯ ಸಂಬಂಧಿತ ಮುಂಜಾಗ್ರತಾ ಕ್ರಮಗಳಿಗೆ ಮತ್ತು ಪರೀಕ್ಷೆಗೆ ಹೆಚ್ಚಿನ ವೆಚ್ಚವಾಗುವುದಿಲ್ಲ. ಈಗಾಗಲೇ ಅಧಿಕೃತ ಹೋಂಸ್ಟೇಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಸುರಕ್ಷಾ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ರಾಜ್ಯದ ಪ್ರವಾಸೋದ್ಯಮದ ಚೇತರಿಕೆಗೆ ಅಗತ್ಯ ರೂಪುರೇಷಗಳನ್ನು ಸಿದ್ಧಪಡಿಸುವ ಸಂದರ್ಭ ಸರ್ಕಾರ ಸುಮಾರು ೧೪ ಜಿಲ್ಲೆಗಳಿಗೆ ಆದ್ಯತೆ ನೀಡಿದೆ. ಪ್ರವಾಸಿತಾಣಗಳು ಇಲ್ಲದ ಪ್ರದೇಶಗಳನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಆದರೆ ಜನಪ್ರಿಯ ಪ್ರವಾಸಿತಾಣಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಕೊಡಗು ಜಿಲ್ಲೆಯನ್ನೇ ಕೈಬಿಡಲಾಗಿದೆ ಎಂದು ಅನಂತಶಯನ ಬೇಸರ ವ್ಯಕ್ತಪಡಿಸಿದರು.

ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ, ಚರಂಡಿಗಳು ನಿರ್ಮಾಣಗೊಳ್ಳುತ್ತವೆ. ಅಲ್ಲದೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. ಇದರ ಲಾಭವನ್ನು ಜಿಲ್ಲೆಯ ಎಲ್ಲರೂ ಪಡೆಯುತ್ತಾರೆ, ಆದರೆ ಪ್ರವಾಸಿಗರಿಗೆ ಆತಿಥ್ಯ ನೀಡಿದ ಹೋಂಸ್ಟೇ ಮಾಲಕರಿಗೆ ಯಾವುದೇ ಲಾಭವಿಲ್ಲವೆಂದು ಅವರು ಪ್ರತಿಪಾದಿಸಿದರು.

ಆದರೆ ವಿನಾಕಾರಣ ಹೋಂಸ್ಟೇಗಳ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರ ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಇದೇ ಕಾರಣಕ್ಕೆ ಮುಂದೊಂದು ದಿನ ಬಂದ ಅತಿಥಿಗಳ ಮೇಲೆ ದೌರ್ಜನ್ಯ ನಡೆದರೆ ಹೇಳಿಕೆ ನೀಡಿದವರೇ ಹೊಣೆ ಹೊರಬೇಕಾಗುತ್ತದೆ ಎಂದೂ ಅನಂತಶಯನ ಎಚ್ಚರಿಕೆ ನೀಡಿದರಲ್ಲದೆ, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಒಂದು ಕಾಲದಲ್ಲಿ ಕಾಫಿ ಬೆಲೆ ಕುಸಿದಾಗ ಕೆಲವು ಬೆಳೆಗಾರರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಆರಂಭಿಸಿದ ಹೋಂ ಸ್ಟೇ ಉದ್ಯಮ ಬಹಳಷ್ಟು ಮಂದಿಯ ಬದುಕಿಗೆ ಆಸರೆಯಾಗಿತ್ತು. ಕೊಡಗಿನ ಆರ್ಥಿಕತೆ ನಿಂತಿರುವುದು ಕೇವಲ ಪ್ರವಾಸೋದ್ಯಮ ಹಾಗು ಕಾಫಿಯ ಮೇಲೆ. ಪ್ರವಾಸೋದ್ಯಮ ಅದೆಷ್ಟರ ಮಟ್ಟಿಗೆ ಕೊಡಗಿನ ಮಣ್ಣಿನಲ್ಲಿ ಹೊಕ್ಕಿದೆ ಎಂದರೆ, ಇಲ್ಲಿನ ಪ್ರತಿ ಹಳ್ಳಿ ಹಳ್ಳಿಯಲ್ಲೂ ಹೋಂ ಸ್ಟೇ ಗಳು, ಕಾಣುತ್ತವೆ.

ಸುದ್ದಿಗೋಷ್ಟಿಯಲ್ಲಿ ಸದಸ್ಯೆ ಶಶಿಮೊಣ್ಣಪ್ಪ, ಪದಾಧಿಕಾರಿ ಅಂಬೆಕಲ್ಲು ನವೀನ್ ಕುಶಾಲಪ್ಪ, ಪದಾಧಿಕಾರಿ ಮೋಂತಿಗಣೇಶ್ ಹಾಜರಿದ್ದರು.