ಗಲ್ವಾನ್ ಕಣಿವೆ ಹಾಗೂ ಗಲ್ವಾನ್ ನದಿಯ ಹಿಂದಿನ ರೋಚಕ ಕಥನ

ಗಲ್ವಾನ್ ಕಣಿವೆ ಹಾಗೂ ಗಲ್ವಾನ್ ನದಿಯ ಹಿಂದಿನ ರೋಚಕ ಕಥನ

ಭಾರತದ ಬಹುತೇಕ ನದಿಗಳಿಗೆ ದೇವತೆಗಳ ಹೆಸರುಗಳಿವೆ. ಇದಕ್ಕೆ ಕೆಲವು ನದಿಗಳ ಹೆಸರು ಅಪವಾದ ಆಗಿರಬಹುದು. ಆದರೆ, ‘ಗಲ್ವಾನ್‌’ ನದಿಯ ಹೆಸರಿನ ಹಿಂದೆ ಪೌರಾಣಿಕ ಹಿನ್ನೆಲೆ ಇಲ್ಲ. ಸಿಂಧು ನದಿಯ ಪ್ರಮುಖ ಉಪನದಿಯಾಗಿರುವ ಗಲ್ವಾನ್‌ ನದಿ ಹೆಸರಿನ ಹಿಂದೆ ರೋಚಕ ಇತಿಹಾಸವಿದೆ.

‘ಗುಲಾಮ್ ರಸೂಲ್ ಗಲ್ವಾನ್’ ಎಂಬ ಅಪ್ರತಿಮ ಲಡಾಕಿ ಸಾಹಸಿ ಮತ್ತು ಸಂಶೋಧಕನ ಹೆಸರು ಇಲ್ಲಿಯ ನದಿಗೆ ಮತ್ತು ಕಣಿವೆಗೆ ಇಟ್ಟಿದ್ದಾರೆ. ಇಲ್ಲಿ ಹರಿಯುತ್ತಿರುವ ಈ ಗಲ್ವಾನ್ ನದಿ ಸಿಂಧೂ ನದಿಯ ಉಪನದಿ. ೧೯ನೇ ಶತಮಾನ (ಜನನ: ೧೮೭೮)ದಲ್ಲಿ ಬದುಕಿದ್ದ ಈ ರಸೂಲ್ ಗಲ್ವಾನ್ ಟಿಬೇಟ್ ಮತ್ತಿತರ ಹಲವಾರು ಪ್ರದೇಶಗಳಲ್ಲಿ ನಡೆದ ಶೋಧನೆಗಳ ಹಿಂದಿನ ಶಕ್ತಿ. ಯೂರೋಪ್ ದೇಶಗಳಾದ ಬ್ರಿಟನ್, ಇಟಲಿ, ಫ್ರಾನ್ಸ್ ನಿಂದ ಬರುತ್ತಿದ್ದ ಹಲವಾರು ಮಂದಿ ಪ್ರವಾಸಿ ಸಂಶೋಧಕರಿಗೆ ಮಾರ್ಗದರ್ಶಕನಾಗಿದ್ದ. ರಸೂಲ್ ಗಲ್ವಾನ್ ರ ಮರಿ ಮೊಮ್ಮಗ ಬರೆದಿರುವಂತೆ ಗಲ್ವಾನ್ ಸಾಹಸವನ್ನು ಎಲ್ಲರೂ ಪ್ರಶಂಸಿಸುತ್ತಿದ್ದರು. ದುರ್ಗಮ ಬೆಟ್ಟಗಳ ಹಾಗೂ ಹರಿಯುತ್ತಿರುವ ನದಿಯ ಬಗ್ಗೆ ಗಲ್ವಾನ್ ಜ್ಞಾನ ಅಪರಿಮಿತವಾಗಿತ್ತು. ಭಾರತ ಮತ್ತು ಚೀನಾದ ಗಡಿ ಭಾಗದಲ್ಲಿ ಸುಮಾರು ೮೦ ಕಿ.,ಮೀ ಹರಿಯುವ ಈ ನದಿಗೆ ಗಲ್ವಾನ್ ಎಂದೂ ಅಲ್ಲಿರುವ ಕಣಿವೆ ಗಲ್ವಾನ್ ಕಣಿವೆ ಎಂದೂ ಹೆಸರಿಡಲಾಗಿದೆ. ಈ ನದಿ ಮುಂದಕ್ಕೆ ಹರಿದು ಸಿಂಧೂ ನದಿಯನ್ನು ಸೇರುತ್ತದೆ. ಈ ಅಪ್ರತಿಮ ಸಾಹಸಿಯು ೪೭ನೇ ವಯಸ್ಸಿನಲ್ಲೇ ಅಕಾಲ ಮರಣಕ್ಕೀಡಾಗುತ್ತಾರೆ. ಆದರೆ ಅವರ ಅಂದಿನ ಮಾರ್ಗದರ್ಶನ ಮತ್ತು ಸಾಹಸದಿಂದಾಗಿ ಈಗಲೂ ಗಲ್ವಾನ್ ಹೆಸರು ಅಜರಾಮರವಾಗಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಲಡಾಖ್ ನ ಈ ಪ್ರಸಿದ್ಧ ಕಣಿವೆಗೆ ಗುಲಾಮ್ ರಸೂಲ್ ಗಲ್ವಾನ್ ರ ಹೆಸರನ್ನು ಅವರ ಸ್ಮರಣಾರ್ಥ ಇಡಲಾಗಿದೆ. ಹಾಗಾಗಿ ಗಲ್ವಾನ್ ಕಣಿವೆ ಯಾವತ್ತಿಗೂ ಭಾರತದ ಭಾಗ ಎಂದು ಲಡಾಖಿ ಅನ್ವೇಷಕ ಗುಲಾಮ್ ರಸೂಲ್ ಗಲ್ವಾನ್ ಅವರ ಮೊಮ್ಮಗ ಮುಹಮ್ಮದ್ ಅಮೀನ್ ಗಲ್ವಾನ್ ಹೇಳಿದ್ದಾರೆ. ತಲೆಮಾರುಗಳಿಂದ ಲಡಾಖ್ ನ ಲೇಹ್ ನಲ್ಲಿ ನೆಲೆಸಿರುವ ಅಮೀನ್ ಗಲ್ವಾನ್ ತಮ್ಮ ನೆಲದ ಕಥೆಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

15-06-2020ರ ಸೋಮವಾರ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯ ಬಗ್ಗೆ ಮಾತನಾಡಿದ ಅವರು, “1962ರಲ್ಲೂ ಚೀನಾ ಇದು ತನ್ನ ನೆಲ ಎಂದು ಪ್ರತಿಪಾದಿಸಿತ್ತು. ಇದು ಭಾರತದ ಭೂಭಾಗವಾಗಿದ್ದು, ಭಾರತದ ಭೂಭಾಗವಾಗಿಯೇ ಉಳಿಯಲಿದೆ. ಆಗ ಈ ನೆಲಕ್ಕಾಗಿ ನಮ್ಮ ಸೈನಿಕರು ಹೋರಾಡಿದ್ದರು. ಈಗ ಮತ್ತೊಮ್ಮೆ ಹೋರಾಡಿದ್ದಾರೆ. ನಾವು ನಮ್ಮ ಸೈನಿಕರನ್ನು ಗೌರವಿಸುತ್ತೇವೆ ಮತ್ತು ಅವರ ತ್ಯಾಗಕ್ಕೆ ಸೆಲ್ಯೂಟ್ ಹೊಡೆಯುತ್ತೇವೆ” ಎಂದವರು ಹೇಳಿದರು.

ಆಗಿನ ಬ್ರಿಟಿಷ್ ಅಧಿಕಾರಿ ಲಾರ್ಡ್ ಡನ್ ಮೋರ್ ಸುತ್ತಾಟದಲ್ಲಿದ್ದಾಗ ಪ್ರತಿಕೂಲ ಹವಾಮಾನದಿಂದ ಅಲ್ಲಿದ್ದವರು ದಿಕ್ಕಾಪಾಲಾಗಿದ್ದರು. “ನನ್ನ ತಾತ ದಾರಿಯೊಂದನ್ನು ಹುಡುಕಿ ಎಲ್ಲರನ್ನೂ ನದಿಯೊಂದರ ಬದಿಗೆ ಕರೆದೊಯ್ದಿದ್ದರು. ನನ್ನ ತಾತ ಕಂಡುಹಿಡಿದ ದಾರಿಯಿಂದ ಅವರೆಲ್ಲರೂ ಸಾವಿನಿಂದ ಪಾರಾಗಿದ್ದರು. ಇದರಿಂದಾಗಿ ಕಣಿವೆ ಮತ್ತು ನದಿಗೆ ತಾತನ ಹೆಸರಿಡಲಾಯಿತು” ಎಂದವರು ಹೇಳಿದರು.

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದ ಭಾರತಕ್ಕೆ ಟಿಬೆಟ್ ವರೆಗೆ ರಷ್ಯನ್ನರು ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾರೆ ಎನ್ನುವ ಆತಂಕವಿತ್ತು. ಆಗ ಈ ಪ್ರದೇಶದಲ್ಲಿ ಭಾರತದ ಬ್ರಿಟಿಷ್ ಸರಕಾರಕ್ಕೆ ಸಣ್ಣ ವಯಸ್ಸಿನವರಾಗಿದ್ದ ಗುಲಾಮ್ ರಸೂಲ್ ಗಲ್ವಾನ್ ಸಹಾಯ ಮಾಡಿದ್ದರು. ರಷ್ಯಾದ ಆಕ್ರಮಣದ ಬಗ್ಗೆ ಮಾಹಿತಿ ನೀಡುವಲ್ಲಿಯೂ ಅವರು ನೆರವಾಗಿದ್ದರು ಎಂದು ಲಡಾಖಿ ಅನ್ವೇಷಕ ಗುಲಾಮ್ ರಸೂಲ್ ಗಲ್ವಾನ್ ಅವರ ಮೊಮ್ಮಗ ಮುಹಮ್ಮದ್ ಅಮೀನ್ ಗಲ್ವಾನ್ ಹೇಳಿದ್ದಾರೆ.

ಗಾಲ್ವಾನ್ ಕಣಿವೆ ಅಲ್ಲದೆ ಸ್ಪಾಂಗುರ್, ಪ್ಯಾಂಗಾಂಗ್ ಸರೋವರಗಳಲ್ಲಿ ರಸೂಲ್ ಅಥವಾ ಬ್ರಿಟಿಷ್ ಅನ್ವೇಷಕರು ಸಂಚರಿಸಿದ್ದು ಬಿಟ್ಟರೆ, ಗಸ್ತು ತಿರುಗುವ ಗಡಿ ಯೋಧರು ಕಾಣಿಸುತ್ತಿರಲಿಲ್ಲ. ಸಮುದ್ರಮಟ್ಟದಿಂದ 14 ಸಾವಿರ ಅಡಿಗೂ ಮೇಲ್ಪಟ್ಟ ಈ ಪ್ರದೇಶದಲ್ಲಿ ಉಸಿರಾಡುವುದೇ ಕಷ್ಟ. ಆದರೆ, ಚೀನಾದ ಕೃತ್ಯದಿಂದ 1962ರಲ್ಲಿ ಯುದ್ಧ ಶುರುವಾಯಿತು. ಸ್ಯಾಮ್ ಜುಂಗ್ ಗ್ಲಿಂಗ್ ಪೋಸ್ಟ್ ನ ಸಂವಹನ ಸಂಪರ್ಕ ಕಡಿತಗೊಳಿಸಿದ ಗೋರ್ಖಾ ಪಡೆ ಮೆಲೆ ಚೀನಿಯರು ಮುಗಿಬಿದ್ದರು. ರಸೂಲ್ ಅನ್ವೇಷಿಸಿದ ಕಣಿವೆ ಸೇರಿದಂತೆ ನಿರ್ಜನ ಪ್ರದೇಶವಾಗಿದ್ದ ಕಣಿವೆಯಲ್ಲಿ ರಕ್ತಪಾತ ಮೊದಲುಗೊಂಡಿತು.

ಚೀನಾ ಸರಕಾರ ಇದೇ ಅವಧಿಯಲ್ಲಿ ತೈವಾನ್‌ ಜೊತೆಗೂ ಕಿರಿಕ್‌ ಮಾಡಿಕೊಂಡಿದೆ. ಹಾಗೆಯೇ, ಕೊರೊನಾ ವೈರಸ್‌ ಹರಡಲು ಚೀನಾವೇ ಕಾರಣ ಎಂದ ಆಸ್ಪ್ರೇಲಿಯಾದ ಜೊತೆಗೆ ವಾಗ್ವಾದಕ್ಕಿಳಿದಿದೆ ಚೀನಾ. ಹಾಗಾಗಿ, ಚೀನಾದ ನೆರೆಯ ರಾಷ್ಟ್ರಗಳೊಂದಿಗಿನ ಕಿರಿಕಿರಿಯ ಭಾಗವಾಗಿಯೇ ಗಲ್ವಾನ್‌ ಕಣಿವೆಯ ಮೇಲಿನ ಕದನ ಎಂದು ಹೇಳಬಹುದು.

ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ, ಈಶಾನ್ಯ ಲಡಾಖ್‌ನ ಗಲ್ವಾನ್‌ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್‌ ಕಾಣಿಸಿದೆ.

ತನ್ನ ಪೂರ್ವಜರು ಕಾಶ್ಮೀರದವರು. ಶ್ರೀಮಂತರಿಂದ ಸೊತ್ತು ಕೊಳ್ಳೆ ಹೊಡೆದು ಬಡವರಿಗೆ ಕೊಡುವ ಅಭ್ಯಾಸವಿದ್ದ ತನ್ನ ತಾಯಿಯ ಅಜ್ಜನನ್ನು ದೊಗ್ರ ಅರಸರು ಬಂಧಿಸಿ ಗಡೀಪಾರು ಮಾಡಿದಾಗ ಬಲತ್ತಿಸ್ತಾನಕ್ಕೆ ಹೋಗಬೇಕಾಯಿತು ಎಂದು ಗುಲಾಂ ರಸೂಲ್ ಗಲ್ವಾನ್ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ಅಲ್ಲಿಂದ ಇವರು ಲೇಹ್‌ಗೆ ಬಂದರು. ಲೇಹ್‌ನಿಂದ ಗುಲಾಂ ರಸೂಲ್ ತಮ್ಮ ಸಾಹಸಿಕ ಸಂಚಾರ ಆರಂಭಿಸಿದರು.

ಈಶಾನ್ಯ ಲಡಾಕ್ ಮೂಲಕ ಹರಿಯುವ ಹೊಳೆಯ ದಡಕ್ಕೆ ಗುಲಾಂ ರಸೂಲ್ ತನ್ನ 21ನೇ ವರ್ಷದಲ್ಲಿ ಬಂದು ತಲುಪಿದ್ದರು. ಈ ಪ್ರದೇಶದಲ್ಲಿ ಶೋಧ ನಡೆಸಿದ ಬ್ರಿಟಿಷ್ ತಂಡದಲ್ಲಿ ಗುಲಾಂ ರಸೂಲ್ ಇದ್ದರು. ಈಗ ಗಡಿಯಲ್ಲಿ ಭಾರತ ಚೀನ ಘರ್ಷಣೆ ನಡೆಯುವುದು ಚರ್ಚೆಯಾಗುವಾಗ ಗಲ್ವಾನ್ ನದಿ ವಿಷಯವೂ ಬರುತ್ತದೆ. ಸರ್ವೆಂಟ್ಸ್ ಆಫ್ ಸಾಹಿಬ್ಸ್ (ಉನ್ನತರ ಸಹಾಯಕ) ಎಂಬ ಹೆಸರಿನ ಆತ್ಮಕಥೆಯನ್ನೂ ಗುಲಾಂ ರಸೂಲ್ ಗಲ್ವಾನ್ ಬರೆದಿದ್ದಾರೆ.

✍. ಕಾನತ್ತಿಲ್ ರಾಣಿ ಅರುಣ್

0 0 votes
Article Rating
Subscribe
Notify of
guest
0 Comments
Inline Feedbacks
View all comments