ಡ್ರ್ಯಾಗನ್ ಸಂಹರಿಸಲು ಗುರಿಯಿಟ್ಟ ರಾಮ
ಭಾರತದ ಅವಿಭಾಜ್ಯ ಅಂಗವಾದ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಪಾಪಿ ಚೀನಾದ ಕಮ್ಯುನಿಸ್ಟ್ ಸೈನಿಕರು LAC (Line of Actual Control) ವಾಸ್ತವಿಕ ನಿಯಂತ್ರಣದ ರೇಖೆ ದಾಟಿ ಬಂದು ಭಾರತದ ವೀರ ಸೈನಿಕರೊಂದಿಗೆ ಸಂಘರ್ಷ ನಡೆಸಿದ್ದಾರೆ.
ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ, ಅದರಲ್ಲಿ ಅನೇಕ ಯೋಧರ ಬಲಿದಾನವಾಯಿತು. ಗಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಮತ್ತು ಭಾರತೀಯ ನಡುವಿನ ಸಂಘರ್ಷವನ್ನು ಭಾರತೀಯ ಮಾಧ್ಯಮಗಳು ತುಂಬ ಮಹತ್ವ ನೀಡಿದ ಪ್ರಸಾರ ಮಾಡಿತು.
ಆದರೆ ಚೀನಾದ ಮಾಧ್ಯಮಗಳು ಏನೂ ಆಗಿಲ್ಲ ಎಂಬಂತೆಯೇ ವರ್ತಿಸಿವೆ. ಚೀನಾದ ಬಹುತೇಕ ಪತ್ರಿಕೆಗಳು, ಟಿವಿಗಳು ಈ ವಿಷಯವನ್ನು ನಗಣ್ಯವಾಗಿ ಪರಿಗಣಿಸಿವೆ. ಚೀನಾದ ಸರಕಾರಿ ಮಾಧ್ಯಮವಾಗಿರುವ ಗ್ಲೋಬಲ್ ಟೈಮ್ಸ್ ಐವರು ಚೀನಿ ಯೋಧರು ಮೃತಪಟ್ಟಿದ್ದಾರೆಂಬುದನ್ನು ಹೇಳಿದ್ದು ಬಿಟ್ಟರೆ ಮತ್ತೇನೂ ವಿವರಗಳನ್ನು ಒದಗಿಸಿಲ್ಲ. ಚೀನಾದ ಬಹುತೇಕ ಮಾಧ್ಯಮಗಳು ಇದೇ ರೀತಿಯಾಗಿ ವರ್ತಿಸಿವೆ.
ಇನ್ನು ಭಾರತದ ಮಾಧ್ಯಮಗಳಂತೂ 20 ಯೋಧರ ಹುತಾತ್ಮ ಸುದ್ದಿಗೆ ಹೆಚ್ಚಿನ ಮಹತ್ವ ನೀಡಿ, ಚೀನಾದ ವಿರುದ್ಧ ಪ್ರತಿಕಾರ ತೆಗೆದುಕೊಳ್ಳುವ ಒತ್ತಡವನ್ನು ಹಾಕುತ್ತಿವೆ. ತೈವಾನ್‌ನ ‘ತೈವಾನ್ ನ್ಯೂಸ್’ ಪತ್ರಿಕೆಯಂತೂ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಡ್ರ್ಯಾಗನ್‌ಗೆ ರಾಮ ಗುರಿಯಿಟ್ಟು ಬಾಣ ಬಿಡುವ ಚಿತ್ರವನ್ನು ಹಾಕಿ, ಭಾರತದ ರಾಮ ಚೀನಾ ಡ್ರ್ಯಾಗನ್ ಅನ್ನು ಎದುರಿಸಲಿದ್ದಾನೆಂಬ ಕ್ಯಾಪ್ಷನ್ ನೀಡಿದೆ.
ಗಲ್ವಾನ್ ಕಣಿವೆಯಲ್ಲಿ ನಡೆದ ಚಕಮಕಿ ಹಾಗೂ ಯೋಧರ ಸಾವಿನ ಹಿನ್ನೆಲೆಯಲ್ಲಿ ಎರಡೂ ದೇಶಗಳು ಗಡಿ ಪ್ರದೇಶದಲ್ಲಿ ಹೆಚ್ಚಿನ ಸೇನೆ ಜಮಾವಣೆ ನಡೆಸಿವೆ. ಭಾರತೀಯ ವಾಯುಸೇನೆಯ ವಿಮಾನಗಳನ್ನು ಗಡಿಗೆ ಇನ್ನಷ್ಟು ಹತ್ತಿರದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಚೀನಾ ಸೇನೆ ಸುಮಾರು 6000ದಷ್ಟು ಸೈನಿಕರನ್ನು, ಟ್ಯಾಂಕ್ ಹಾಗೂ ಮದ್ದುಗುಂಡುಗಳನ್ನು ಗಲ್ವಾನ್ ಪ್ರದೇಶಕ್ಕೆ ಕಳಿಸಿದೆ. ಭಾರತ ಕೂಡ ಸಾಕಷ್ಟು ಸಂಖ್ಯೆಯ ಸೈನಿಕರನ್ನು ಗಡಿಯುದ್ದಕ್ಕೂ ಜಮಾವಣೆ ಮಾಡಿದೆ. ಈ ಪ್ರಕ್ರಿಯೆಯ ಒಟ್ಟಾರೆ ಜವಾಬ್ದಾರಿಯನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಹಿಸಿಕೊಂಡಿದ್ದಾರೆ. ಗಲ್ವಾನ್ ಮಾತ್ರವಲ್ಲದೆ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವಲ್ಲೆಲ್ಲ ಸೈನಿಕರನ್ನು ಅಲರ್ಟ್ ಮಾಡಲಾಗಿದೆ.
ಸುಮಾರು ೪ ದಶಕಗಳ ಬಳಿಕ ಭಾರತ-ಚೀನಾ ಗಡಿ ಪ್ರದೇಶ ಪ್ರಕ್ಷುಬ್ಧವಾಗಿದೆ. ಭಾರತದ ೨೦ ವೀರ ಯೋಧರು ಹುತಾತ್ಮರಾಗಿದ್ದಾರೆ. ೧೯೬೨ರಲ್ಲೇ ಭಾರತ-ಚೀನಾ ಯುದ್ಧವಾಗಿತ್ತು. ನಂತರದ ದಿನಗಳಲ್ಲಿ ಬಹುತೇಕ ಶಾಂತಿ ನೆಲೆಸಿದಂತಿದ್ದರೂ ಅಲ್ಲಿನ ಪರಿಸ್ಥಿತಿ ಯಾವಾಗಲೂ ಬೂದಿ ಮುಚ್ಚಿದ ಕೆಂಡದಂತೇ ಇತ್ತು. ಚೀನಾ ಒಳಗೊಳಗೇ ಕುದಿಯುತ್ತಲೇ ಇತ್ತು. ಕೆಲವೊಮ್ಮೆ ಅರುಣಾಚಲ ಪ್ರದೇಶದ ಭೂ ಭಾಗ ತನ್ನದೆನ್ನುತ್ತಿತ್ತು. ಕೆಲವು ಸಲ ಸಿಕ್ಕಿಂ ಬಳಿಯ ಗಡಿಯ ಕ್ಯಾತೆ ತೆಗೆಯುತ್ತಲೇ ಇತ್ತು. ಈಗ ಲಡಾಕ್ ಪ್ರದೇಶದ ಗಲ್ವಾನ್ (Galwan) ಕಣಿವೆಯ ಪ್ರದೇಶಲ್ಲಿರುವ ಭೂಪ್ರದೇಶಗಳು ತನ್ನದೆನ್ನುವ ಮೂರ್ಖವಾದ ಮಾಡುತ್ತಿದೆ. ಭಾರತವು ಚೀನಾ ಜೊತೆಗೆ ಸುಮಾರು ೩೦೦೦ ಕಿ.ಮೀ.ಗೂ ಅಧಿಕ ಗಡಿಯನ್ನು ಹಂಚಿಕೊಂಡಿದೆ.
ಉಭಯ ದೇಶಗಳ ಸೈನಿಕರ ತಿಕ್ಕಾಟಕ್ಕೆ ಕಾರಣವಾಗಿರುವುದು ರಸ್ತೆ ನಿರ್ಮಾಣ. ಗಡಿಯ ಸಮೀಪ, ನಮ್ಮದೇ ನೆಲದಲ್ಲಿ ರಸ್ತೆ ನಿರ್ಮಿಸುವುದಕ್ಕೂ ಚೀನಾ ಸದಾ ಆಕ್ಷೇಪ ತೆಗೆಯುತ್ತದೆ. ಈಗ ಚೀನಾದ ಆಕ್ಷೇಪಕ್ಕೆ ಕಾರಣವಾಗಿರುವುದು ದರ್ಬುಕ್- ಶಾಯಕ್- ದೌಲತ್ ಬೇಗ್ ಓಲ್ಡೀ ರಸ್ತೆ (ಡಿಎಸ್‌ಡಿಬಿಒ). ಇದು ಸುಮಾರು 255 ಕಿಲೋಮೀಟರ್ ಉದ್ದವಾಗಿದೆ. ಇದು ಎಷ್ಟು ಪ್ರಮುಖ ಎಂದರೆ, ಇದು ದೌಲತ್ ಬೇಗ್ ಓಲ್ಡೀ ವಿಮಾನ ನಿಲ್ದಾಣದಿಂದ ಲೇಹ್ ನಡುವಿನ ಪ್ರಯಾಣ ಸಮಯವನ್ನು 2 ದಿನಗಳಿಂದ 6 ಗಂಟೆಗಳಿಗೆ ಇಳಿಸುತ್ತದೆ. ಇದು ಗಲ್ವಾನ್ ನದಿಯ ಹಾಗೂ ವಾಸ್ತವಿಕ ಗಡಿರೇಖೆಯ ಪಕ್ಕದಲ್ಲೇ ಹಾದುಹೋಗುತ್ತದೆ. ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ನಡುವಿನ ಕಾರಕೋರಂ ಹೆದ್ದಾರಿ ಹಾದುಹೋಗಿರುವ ಆಕ್ಸಾಯ್ ಚಿನ್ ಪ್ರದೇಶವೂ ಈ ಭಾರತ ನಿರ್ಮಿತ ರಸ್ತೆಯ ಪಕ್ಕದಲ್ಲೇ ಇರಲಿದೆ. ಯುದ್ಧ ಸಂಭವಿಸಿದರೆ ಭಾರತಕ್ಕೆ ತನ್ನ ಸೇನೆಯನ್ನು ಕ್ಷಿಪ್ರ ಅವಧಿಯಲ್ಲಿ ಇಲ್ಲಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಇದರಿಂದ ಚೀನಾಕ್ಕೆ ಆತಂಕ ಉಂಟಾಗಿದ್ದು, ರಸ್ತೆ ನಿರ್ಮಾಣಕ್ಕೆ ಕ್ಯಾತೆ ತೆಗೆಯುತ್ತಿದೆ.
ಲಡಾಕ್ ನ್ನು ಕೇಂದ್ರಾಡಳಿತ ಪ್ರದೇಶ ಎಂದು ಭಾರತವು ಘೋಷಿಸಿದ ಬಳಿಕ ಅಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಣಿವೆ ಪ್ರದೇಶಗಳಲ್ಲಿ ರಸ್ತೆಗಳು ನಿರ್ಮಾಣವಾಗುತ್ತಿವೆ. ಇದನ್ನು ನೋಡಲಾರದ ಚೀನಾವು ಈಗ ಈ ಭೂಭಾಗವು ತನ್ನದೆಂದು ಹೇಳಿ ಕೋಳಿ ಜಗಳ ಮಾಡುತ್ತಿದೆ. ಮೊನ್ನೆ ನಡೆದ ಹಲ್ಲೆಗಳು ಬಂದೂಕಿನಿಂದ ಮಾಡಿದವುಗಳಲ್ಲ. ೧೯೯೬ರ ಒಂದು ಒಪ್ಪಂದದಂತೆ ಭಾರತ-ಚೀನಾ ದೇಶಗಳ ಸೈನಿಕರು ಗಡಿಯನ್ನು ಕಾಯುವಾಗ ಬಂದೂಕು ಹಿಡಿಯುವಂತಿಲ್ಲ. ಯಾವುದೇ ದೇಶ ಮೊದಲ ಗುಂಡು ಹಾರಿಸುವಂತಿಲ್ಲ ಎಂದು ಒಪ್ಪಂದವಾಗಿದೆ. ಅದಕ್ಕಾಗಿಯೇ ಚೀನಾ ಸೈನಿಕರು ಬೆಟ್ಟದ ಮೇಲಿನ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ದೊಡ್ಡ ದೊಡ್ಡ ಕಲ್ಲು ಹಾಗೂ ಸಿಮೆಂಟ್ ನಿಂದ ಮಾಡಿದ ಸಲಾಖೆಗಳಿಂದ ನಮ್ಮ ಯೋಧರನ್ನು ಅನ್ಯಾಯವಾಗಿ ಕೊಂದರು. ಅಲ್ಲಿಯೇ ಹರಿಯುತ್ತಿದ್ದ ನದಿಗೆ ದೂಡಿ ಹಾಕಿದರು. ಕೊರೆಯುವ ಚಳಿಯಲ್ಲಿ ನಮ್ಮ ಸೈನಿಕರು ತಮ್ಮ ಜೀವವನ್ನು ದೇಶಕ್ಕಾಗಿ ಬಲಿದಾನ ಮಾಡಿದರು. ಇದು ಪೂರ್ವ ನಿಯೋಜಿತ ಕೃತ್ಯವೇ ಆಗಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಳೆದ ಕೆಲವು ತಿಂಗಳಿಂದ ಅನೇಕ ಆಕ್ರಮಣಕಾರಿ ನಡೆಗಳನ್ನು ಚೀನಾ ಪ್ರದರ್ಶಿಸಿದೆ. ಹಾಂಕಾಂಗ್‌ನಲ್ಲಿ ಅಸ್ತಿತ್ವದಲ್ಲಿದ್ದ ಒಂದು ದೇಶ ಎರಡು ವ್ಯವಸ್ಥೆಯಾದ ಕಾನೂನಿಗೆ ಚೀನಾದ ರಬ್ಬರ್‌ಸ್ಟಾಂಪ್ ಸಂಸತ್ತು ಒಪ್ಪಿಗೆ ನೀಡಿದೆ. ಅದರರ್ಥ ಹಾಂಕಾಂಗ್‌ನ ಸ್ವಾಯತ್ತ ಸ್ಥಾನಮಾನವನ್ನು ಚೀನಾ ಅಮಾನ್ಯ ಮಾಡಿದೆ. ದಕ್ಷಿಣ ಚೀನಾ ಸಮುದ್ರದಲ್ಲೂ ತನ್ನ ಆಕ್ರಮಣಶೀಲತೆಯನ್ನು ಪ್ರದರ್ಶಿಸಿದೆ. ಇಲ್ಲಿರುವ ಬಹುತೇಕ ದ್ವೀಪಗಳ ಮೇಲೆ ಹಕ್ಕು ಸಾಧಿಸಿರುವ ಚೀನಾ ಅವುಗಳಿಗೆ ತನ್ನದೇ ಹೆಸರುಗಳನ್ನು ಇಟ್ಟಿದೆ. ಇಡೀ ದಕ್ಷಿಣ ಚೀನಾ ಸಮುದ್ರ ತನ್ನದೇ ಎನ್ನುವ ರೀತಿಯಲ್ಲಿ ವರ್ತಿಸಲಾರಂಭಿಸಿದೆ. ಇದು ಆಗ್ನೇಯ ಏಷ್ಯಾದ ಬಹುತೇಕ ರಾಷ್ಟ್ರಗಳಿಗೆ ಎಚ್ಚರಿಕೆ ಗಂಟೆಯಾಗಿದೆ.
ಭಾರತ ಮತ್ತು ಚೀನಾದ ಪ್ರಕ್ಷುಬ್ಧ ಪರಿಸ್ಥಿತಿಯ ನಡುವೆ ಭಾರತದ ಗಡಿಯಲ್ಲಿನ ಮೂರು ಪ್ರದೇಶಗಳನ್ನು ತನ್ನ ಪ್ರದೇಶ ಎಂದು ತೋರಿಸುವ ಹೊಸ ವಿವಾದಾತ್ಮಕ ನಕ್ಷೆಯನ್ನು ನೆರೆಯ ನೇಪಾಳ ಸಂಸತ್ ಸರ್ವಾನುಮತದಿಂದ ಅನುಮೋದಿಸಿದೆ. ಹೊಸ ನಕ್ಷೆಯ ಪ್ರಕಾರ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಾಲಾಪಾನಿ ನೇಪಾಳಕ್ಕೆ ಸೇರಿದ್ದು ಎಂದು ತೋರಿಸಲಾಗಿದೆ. ಈ ಹೊಸ ತಿದ್ದುಪಡಿ ನಕ್ಷೆಗೆ ಸದನದ 57 ಸದಸ್ಯರೂ ಮಸೂದೆ ಪರವಾಗಿಯೇ ಮತ ಚಲಾಯಿಸಿದ್ದಾರೆ. ಹೀಗಾಗಿ ನೇಪಾಳ ಪರೋಕ್ಷವಾಗಿ ಚೀನಾಕ್ಕೆ ಬೆಂಬಲ ನೀಡಿದೆ. ನೇಪಾಳದ ಈ ನಡೆ ಭಾರತಕ್ಕೆ ದ್ರೋಹ ಎಸಗುವಂತಾಗಿದೆ.
ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ. ಆದ್ರೆ ಕೊರೊನಾ ವೈರಸ್ ಉಗಮ ಸ್ಥಾನವಾಗಿರುವ ಚೀನಾ ಭಾರತದೊಂದಿಗೆ ಗಡಿಯಲ್ಲಿ ಕ್ಯಾತೆ ತೆಗೆದಿದೆ.
ಭಾರತದಲ್ಲಿ ಈಗಾಗಲೇ ಬಾಯ್ಕಟ್ ಚೀನಾ ಅಭಿಯಾನ ನಡೆಯುತ್ತಿದೆ. ಗಾಲ್ವನ್ ಗಡಿಯಲ್ಲಿ ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಣೆ ನಡೆದಿದ್ದು, ಈ ಹಿನ್ನಲೆಯಲ್ಲಿ ದೇಶದಲ್ಲಿ ಬಾಯ್ಕಟ್ ಚೀನಾ ಅಭಿಯಾನ ಮತ್ತಷ್ಟು ಚುರುಕು ಪಡೆದುಕೊಂಡಿದೆ.
ಚೀನಾದ ಗಡಿ ಉಪಟಳ ಹೆಚ್ಚುತ್ತಿದೆ. ಜತೆಗೆ ನೆರೆಯ ನೇಪಾಳವನ್ನೂ ಚೀನಾ ಭಾರತದ ಮೇಲೆ ಛೂ ಬಿಟ್ಟು ಗಡಿ ತಂಟೆ ಎಬ್ಬಿಸಿದೆ. ಜತೆಗೆ ಬಾಯಿ ಮಾತಿನಲ್ಲಿಶಾಂತಿಯ ಮಂತ್ರ ಪಠಿಸುತ್ತಲೇ ಚೀನಾ ಮಗ್ಗುಲಮುಳ್ಳಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ‘ಡ್ರ್ಯಾಗನ್ ದರ್ಪ’ಕ್ಕೆ ಕಡಿವಾಣ ಹಾಕುವುದು ಭಾರತಕ್ಕೆ ಅನಿವಾರ್ಯವಾಗಿದೆ.
ಲೇಖಕರು: ✍. ಅರುಣ್ ಕೂರ್ಗ್