“ಲಾಕ್‌ಡೌನ್‌ ಡೈರಿ” ಮತ್ತು ಲಾಕ್‌ಔಟಾದ ಪ್ರಶ್ನೆಗಳು…!?

“ಲಾಕ್‌ಡೌನ್‌ ಡೈರಿ” ಮತ್ತು ಲಾಕ್‌ಔಟಾದ ಪ್ರಶ್ನೆಗಳು…!?

ಹೇಗಾಯಿತು ಏನಾಯಿತು ಯಾರಿಂದ ಆಯಿತು, ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಅಪ್ರಸ್ತುತ ಮತ್ತು ಭವಿಷ್ಯದಲ್ಲಿ, ಭೂತಕಾಲದ ನಡೆಗಳು ಇಂದಿನ ವರ್ತಮಾನಕ್ಕೆ ಮಾರ್ಗದರ್ಶನವಾಗಬಲ್ಲದು ಎಂಬುದಂತೂ ಸತ್ಯ.

ಬಹುಶಃ ಡಾರ್ವಿನ್‌ ವಾದವೇ ಇರಬೇಕು, ಪ್ರಕೃತಿ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಅದು ಕೂಡ ಕ್ರಿಯಾತ್ಮಕವಾಗಿ ತನ್ನದೇ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎನ್ನುವುದು. ಈ ಒಂದು ವಾದ ವಿಶೇಷವಾಗಿ ಆಕಾಲದಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಹೇಳಿದ ಮಾತು ಯಾ ವಾದವಿರಬೇಕು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಒಂದು ಕಾಲದಲ್ಲಿ ಭಾರತ ಕೂಡ ಸಿಡುಬು, ಪ್ಲೇಗ್‌ನಂತಹ ರೋಗಗಳನ್ನು ಅನುಭವಿಸಿ ಕೂಡ ಮುನ್ನಡೆದು ಬಂದಿರುವುದು ವಾಸ್ತವ.

ಇದೀಗ, ಪ್ರಪಂಚ “ಕೊರೋನ” ಎಂಬ ಶತ್ರುವನ್ನು ನಾಶಪಡಿಸಲು ಹರಸಾಹಸ ಪಡುತ್ತಿದೆ.

ಆಯಾಯ ದೇಶ ಪ್ರಾಂತ್ಯಗಳಲ್ಲಿ ಅಲ್ಲಲ್ಲಿಯ ನಾಯಕರುಗಳು ಪರಿಣಿತರೊಂದಿಗೆ ಚರ್ಚಿಸಿ, ಹರಸಾಹಸ ಪಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೊಡಗಿನ ಶಕ್ತಿ” ದಿನಪತ್ರಿಕೆಯಲ್ಲಿ “ಕೊರೋನ” ಸಾಗುತ್ತಿದ್ದ ದಾರಿಯ ಹತ್ತು ಹಲವಾರು ವಿಚಾರಗಳು ಮತ್ತದರ ಒಳನೋಟಗಳನ್ನು ಅಕ್ಷರಗಳಲ್ಲಿ ಹಂಚಿಕೊಳ್ಳುತ್ತಿದ್ದರು.

ಆ ಧೀರ್ಘ ಅಕ್ಷರ ಪಯಣದ ದಾಖಲಾ ಸಾಹಿತ್ಯ, ಇದೀಗ “ಲಾಕ್‌ಡೌನ್‌ ಡೈರಿ” ತಲೆಬರಹದ ಪುಸ್ತಕವಾಗಿ ಲೋಕಾರ್ಪಣೆಗೊಂಡಿದೆ.

ಅತ್ಯಂತ ಅಲ್ಪಾವಧಿಯಲ್ಲಿ ಪ್ರಕಟಗೊಂಡ ಪುಸ್ತಕದಲ್ಲಿ, ವರ್ತಮಾನ, ಭೂತಕಾಲದ ನೆನಪುಗಳನ್ನು ಕೂಡ ಮಿಳಿತಗೊಳಿಸಿಕೊಂಡಿದೆ ಎಂಬುದು ದಾಖಲಾ ಸಾಹಿತ್ಯದ ಶಕ್ತಿ ಕೂಡ.

ಭೂತಕಾಲವನ್ನು ಅವಲೋಕಿಸಿಕೊಳ್ಳದಿದ್ದ ಕಾರಣಕ್ಕಾಗಿ, ಚೀನಾ ದೇಶ ಪ್ರಪಂಚವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವುದು ವರ್ತಮಾನದ ದುರಂತ ಎಂಬುದನ್ನು ಲೇಖಕ, ಲಾಕ್‌ಡೌನ್‌ ಡೈರಿಯಲ್ಲಿ ದಾಖಲಿಸಿದ್ದಾರೆ.

ಪರೋಕ್ಷವಾಗಿ ಚೀನಾದ ಗತಕಾಲದ ದಡ್ಡತನವನ್ನು ತೋರು ಬೆರಳಿನಿಂದ ಗುರುತಿಸಿದ್ದಾರೆ. ಭವಿಷ್ಯಕ್ಕೂ ಎಚ್ಚರಿಕೆ ನೀಡಿದ್ದಾರೆ ಎಂಬುದು ಅವರ “ಡೈರಿ”ಯ ಅಕ್ಷರಗಳು ಮಾರ್ಮಿಕವಾಗಿ ಹೇಳಿದೆ ಮತ್ತು ಬರಹ “ಬದ್ಧತೆಗೆ” ಕೂಡ ಸಾಕ್ಷಿಯಾಗಿದೆ.

ಡೈರಿಯ ಮೊದಲ ಬರಹ, “ಕಣ್ಣಿನ ವೈದ್ಯನ ಎಚ್ಚರಿಕೆಗೆ ಕಣ್ತೆರೆದಿದ್ದರೆ ಹೀಗಾಗುತ್ತಿರಲಿಲ್ಲ”ವನ್ನು ಓದಿದೊಡನೆ ಪ್ರಸ್ತಕ ಪರಿಸ್ಥಿತಿಯಲ್ಲಿ ಪ್ರಪಂಚದ ದೊಡ್ಡಣ್ಣನಾಗಲು ಹೊರಟಿರುವ, ಭಾರತದ ನಿದ್ದೆಗೆಡಿಸಲು ಪ್ರಯತ್ನಿಸುತ್ತಿರುವ ʼಚೀನಾʼ ವಿರುದ್ಧ ಅದೆಂತ ಕಠೋರವಾಗಿ ಪ್ರತಿಕ್ರಿಯಿಸುತ್ತೀರೋ ನಿಮಗೆ ಬಿಟ್ಟದ್ದು.

“ಹಲೋ ಫ್ರೆಂಡ್ಸ್‌…
ನನ್ನಲ್ಲಿರುವ ರೋಗಿಯೋರ್ವನಲ್ಲಿ
ವಿಚಿತ್ರ ಸೋಂಕು ಕಾಣಿಸಿಕೊಂಡಿದೆ…
ಸಾರ್ಸ್‌ ರೋಗ ಬಂದಿತ್ತಲ್ಲಾ
ಅದೇ ರೀತಿಯ ವೈರಸ್ ಎಂಬ ಸಂಶಯವಾಗುತ್ತಿದೆ.
ಎಲ್ಲರೂ ಎಚ್ಚರವಹಿಸಿಕೊಳ್ಳಿ…”

ಹೀಗೊಂದು ಸಂದೇಶವನ್ನು 2019ರ ಡಿಸೆಂಬರ್‌ ಎರಡನೇ ವಾರದಲ್ಲಿ ಚೀನಾದಲ್ಲಿನ ವೈದ್ಯರ ವಾಟ್ಸಾಪ್‌ ಗ್ರೂಪ್‌ನಲ್ಲಿ ಡಾ|| ಲಿ ವೆನ್‌ ಲಿಯಾಂಗ್‌ ಎಚ್ಚರಿಕೆ ಸಂದೇಶವನ್ನು ಪ್ರಕಟಿಸುತ್ತಾರೆ.

ಗತಕಾಲವನ್ನು ನೆನಪಿಸಿಕೊಳ್ಳದ ಚೀನಾ ಅಥವಾ ಪ್ರಪಂಚವೇ ಸಂಶಯಪಡುತ್ತಿರುವಂತೆ ಉದ್ದೇಶಪೂರ್ವಕವಾಗಿ ತನ್ನಲ್ಲಿಯೇ ಸೃಷ್ಠಿಸಿಕೊಂಡು, ತನ್ನ ಒಂದಷ್ಟು ಪ್ರಜೆಗಳನ್ನು ಬಲಿಕೊಟ್ಟು, ಪ್ರಪಂಚಕ್ಕೂ ಹಬ್ಬಿಸಿ, ಇದೀಗ ತಾನು ಭದ್ರತೆಯತ್ತ ಸಾಗಿ ಮತ್ತೆ ಪ್ರಪಂಚಕ್ಕೆ ನಿಮಗೇನು ಬೇಕು ಎಂಬುದಾಗಿ ಕೇಳುವ ಮಟ್ಟಕ್ಕೆ ತಲುಪಿರುವುದನ್ನು ಬರಹ ಚಿಂತನೆಗೆ ಹಚ್ಚುವಂತಿದೆ.

ಈ ಒಂದು ಪ್ರಶ್ನೆ ಹುಟ್ಟುವುದಕ್ಕೆ ಕಾರಣವೂ ಇದೆ. ವಿಜ್ಞಾನಿ ಗೆಲಿಲಿಯೋ, ಭೂಮಿ ದುಂಡಗೆ ಇದೆ ಎಂದು ವಾದಿಸಿದಾಗ, ಆತನ ಜನರು ಭೂಮಿ ಚಪ್ಪಟೆ ಎಂದು ಪೂರ್ವಾಗ್ರಹ ಪೀಡಿತ ತನದಿಂದ ಆತನನ್ನು ಕೊಂದು, ಚಪ್ಪಟೆ ಶವಪೆಟ್ಟಿಗೆಯೊಳಗಿರಿಸಿ, ಅವರ ಚಪ್ಪಟೆ ಭೂಮಿಯೊಳಗೆ ಮಣ್ಣಾಗಿಸಿದರೂ, ಗೆಲಿಲಿಯೋ ಮಾತ್ರ ಜೀವಂತವಾಗಿದ್ದಾನೆ ಎನ್ನುವುದನ್ನು ತಿಳಿಸುವ ಒಳನೋಟಗಳು ಡೈರಿಯಲ್ಲಿದೆ.

ಡಾ|| ವೆನ್‌ ಲಿಯಾಂಗ್‌ ತನ್ನ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಂತೆ ಬಹು ಬುದ್ಧಿವಂತ ʼಚೀನಾʼ ಆತನನ್ನು ಕರೆಸಿ ಮಾತುಕತೆ ನಡೆಸುವ ಬದಲು, ಆತನ ಮನೆ ಬಾಗಿಲು ತಟ್ಟಲು ಕಳುಹಿಸಿದ್ದು ಪೊಲೀಸರನ್ನ.

“ಏಯ್‌ ವೆನ್‌ ಲಿಯಾಂಗ್‌,
ಸುಖಾಸುಮ್ಮನೆ ಹೊಸ ವೈರಸ್‌ ಇದೆ ಎಂದು ವದಂತಿ ಹಬ್ಬಿಸುತ್ತಿದ್ದೀಯಾ?
ಚೀನಾ ಸರಕಾರ ನಿನ್ನ ಸುಳ್ಳುಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದೆ.”

ನಮ್ಮ ಆಡು ಭಾಷೆಯಲ್ಲಿ ಹೇಳುವುದಾದರೆ…

“ಏಯ್‌ ಲಿಯಾಂಗ್‌, ಮುಚ್ಚಿಕೊಂಡು ಕೂತರೆ ಸರಿ,
ಇಲ್ಲ ನಿನ್ನ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡುತ್ತೇವೆ.
ಬಾ ಇಲ್ಲಿ ಮುಚ್ಚಳಿಕೆಗೆ ಸಹಿ ಹಾಕು
ಮತ್ತೆ ಬಾಲ ಬಿಚ್ಚಿದರೆ ನೀನು ಹುಟ್ಟಿಲ್ಲ ಎಂದು ತಿಳಿದುಕೋ”

ಎಂದು ಬೆದರಿಸಿ ಲಿಯಾಂಗನ ಬಾಯಿಗೆ ಬೀಗ ಹಾಕಿಡುತ್ತದೆ ಚೀನ.

ಪ್ರಪಂಚಕ್ಕೆ ಒಳಿತು ಮಾಡಲು ಹಾತೊರೆದಿದ್ದ ಡಾ|| ವೆನ್‌ ಲಿಯಾಂಗ್‌ ಕೆಲವೇ ಕೆಲವು ದಿನಗಳಲ್ಲಿ ಕೊರೋನಾದ ಕೈಸೆರೆಯಾಗಿ ತನ್ನ ಕೊನೇ ಉಸಿರನ್ನು ಕೊರೋನಾಗೆ ಒಪ್ಪಿಸಿದ ದುರಂತ ಕಥೆಯನ್ನು ಅನಿಲ್‌ ಮನಮುಟ್ಟುವಂತೆ ಅವರದೇ ಶೈಲಿಯಲ್ಲಿ ಓದುಗನಿಗೆ ವಿಚಾರ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು, 196 ಪುಟಗಳ ಮನಕಲುಕುವ ಮಾತುಗಳ ಡೈರಿಯಲ್ಲಿ “ಮಾನವ ಸೇವೆಯಲ್ಲಿ ಮಾಧವನನ್ನು ಕಂಡ ರಾಮಕೃಷ್ಣ ಶಾರದಾಶ್ರಮ”, “ಅಲ್ಲಿದೆ ನಮ್ಮನೆ…ಆಶ್ರಯ ಕೊಟ್ಟಿತು ನಿಮ್ಮ ಮನೆ”, “ಕೊರೋನಾ ಕಂಡು ಸಣ್ಣಪುಟ್ಟ ಕಾಯಿಲೆಗಳೆಲ್ಲಾ ಕಾಣದಂತೆ ಓಡಿಹೋದವೇ?”, ಪ್ರವಾಸೋದ್ಯಮದ ವಿವಿಧ ಮಜಲುಗಳು ಹೋಟೆಲ್‌, ಹೋಂ ಸ್ಟೇ ಇತ್ಯಾದಿಗಳ ಚಿತ್ರಣ, ಕೊಡಗಿನ ಖಾಸಗಿ ಬಸ್ಸುಗಳು ಮತ್ತು ಅವುಗಳು ಜನರ ನಾಡಿಗಳಲ್ಲಿ ಬೆಸೆದು ಹೋಗಿದ್ದ ಗತಕಾಲದ ನೆನಪುಗಳು ಮತ್ತು ಇಂದಿನ ಚಿತ್ರಣ, ಆಟೋ ಚಾಲಕರು, ಅರ್ಚಕರು, ವಿಶೇಷವಾಗಿ ದೇಶ ಕಟ್ಟುವ ಕಾರ್ಮಿಕರ ಬಗೆಗಿನ ಚಿತ್ರಣಗಳ ತೆರೆದ ಪುಸ್ತಕ “ಲಾಕ್‌ಡೌನ್‌ ಡೈರಿ”.

ಕನಸು ಕಟ್ಟಿಕೊಂಡು ವಿವಿಧ ಬೆಳೆಗಳನ್ನು ಬೆಳೆದ ರೈತನ ಅತಂತ್ರ ಸ್ಥಿತಿಗಳು ಸೇರಿದಂತೆ, ಕೊರೋನ ಅನುಭವಿಸಿದ, ಅನುಭವಿಸುತ್ತಿರುವ ಎಲ್ಲಾ ಮಗ್ಗಲುಗಳನ್ನು “ಡೈರಿ” ಮಡಿಲಲ್ಲಿ ತುಂಬಿಕೊಂಡಿದೆ.

ಅನಿಲ್‌ ಬರೆದಿರುವ ೩೦ ಲೇಖನಗಳೊಂದಿಗೆ ಇತರೆ ೧೮ ಬರಹಗಾರರ, ಚಿಂತಕರ ಅಕ್ಷರಗಳೂ ಡೈರಿಯಲ್ಲಿ ದಾಖಲಾಗಿದೆ.

ಗೆಲಿಲಿಯೋವನ್ನು ನೆನಪಿಸಿಕೊಳ್ಳುವ ಡಾ|| ವೆನ್‌ ಪಿಯಾಂಗ್‌ ದುರಂತ ಕಥೆಯೊಂದಿಗೆ ಪ್ರಾರಂಭವಾಗುವ ಡೈರಿಯ ಪುಟಗಳು, ದೇಶ ನೆನಪಿಸಿಕೊಳ್ಳುವ ಶ್ರಮಿಕರಿಗೆ

“ನೀವು ನಮ್ಮ ಮನೆಯನ್ನು ಕಟ್ಟಿದಿರಿ,
ರಸ್ತೆ-ಸೇತುವೆ ನಿರ್ಮಿಸಿದಿರಿ,
ಮರಗಳನ್ನು ಏರಿದಿರಿ…ಮಣ್ಣು ಹೊತ್ತಿರಿ…ಬಾವಿ ತೋಡಿದಿರಿ,
ಆದರೆ ನೀವು ನಿಮ್ಮೂರಿಗೆ ಹೊರಟು ನಿಂತಾಗ…
ನಾವೆಲ್ಲಾ ನಮ್ಮ ಜೀವ ರಕ್ಷಣೆಗೆ
ಮೆನೆಯೊಳಗೇ ಕುಳಿತುಬಿಟ್ಟಿದ್ದೆವು.
ನಮ್ಮ ಮನೆಯ ಮಂದಿಯ ಸಾಂಗತ್ಯದಲ್ಲಿ
ಮೈ ಮರೆತಿದ್ದ ನಾವೆಲ್ಲಾ
ನಮಗಾಗಿ, ನಮ್ಮೂರಿಗೆ ವರ್ಷಾನುಗಟ್ಟಲೆ ದುಡಿದ
ಶ್ರಮ ಜೀವಿಗಳಾದ ನಿಮ್ಮನ್ನು ಯೋಚಿಸಲೇ ಇಲ್ಲ…
ಕ್ಷಮಿಸಿಬಿಡಿ ನಮ್ಮನ್ನು…
ಮರೆಯದೇ ಬನ್ನಿ ನಮ್ಮೂರಿಗೆ. ನಮಗಾಗಿ…!

ಎಂಬುದನ್ನು ದೇಶಕಟ್ಟುವ ಶ್ರಮಿಕರಿಗೆ ಅನಿಲ್‌ ಅಕ್ಷರಗಳು ಕಂಬನಿ ಸುರಿಸುವುದರೊಂದಿಗೆ ಡೈರಿಯ ಕೊನೆಯ ಪುಟ ಓದುಗರ ಕಣ್ಣಂಚಿನಲ್ಲಿ ಹನಿಯೊಂದು ಜಾರುವಂತೆ ಮಾಡಿ, ಪ್ರಶ್ನೆಗಳನ್ನು, ಆತ್ಮಾವಲೋಕನವನ್ನು, ಚಿಂತನೆಗಳನ್ನು ಹುಟ್ಟಿಸಿ, ನಿಮಗಳನ್ನು ಗಂಟೆಗಟ್ಟಲೆ ಮೌನಿಯಾಗಿಸುತ್ತಾನೆ, ಅಕ್ಷರ ಮಾಂತ್ರಿಕ ಅನಿಲ್.‌

ಬಹುಶಃ ಆಂತರ್ಯದಲ್ಲಿ ಅನುಭವಿಸಿ, ಅಭಿವ್ಯಕ್ತಗೊಳಿಸಿಕೊಳ್ಳಲಾರದ ಮಾತುಗಳನ್ನು ಮನದ ಮಾತುಗಳಿಗೆ ಪ್ರಶ್ನಿಸಲು ಬಿಟ್ಟಿದ್ದಾನೆ ಎಂದನಿಸುತ್ತೆ ಎಂದರೆ ಅತಿಶಯೋಕ್ತಿಯೇನಲ್ಲ.

ಕೊರೋನ ಕಂಪನ ಅನುಭವವಾಗುತ್ತಿದ್ದಂತೆ ನಮ್ಮ ಉಕ್ಕಿನ ಹಕ್ಕಿಗಳಲ್ಲಿ ವಿದೇಶ ಕಟ್ಟಲು ಹೋದವರನ್ನು ಅವರವರ ಗೂಡಿಗೆ ಕರೆತಂದು ಸರಿಯಾದ ಬಂದೋಬಸ್ತ್‌ ಮಾಡದೆ ದಿಡ್ಡಿ ಬಾಗಿಲನ್ನು ಹಾಕಿದ್ದು…

ಗಂಟೆ, ಜಾಗಟೆ, ದೀಪ ಆರಿಸಿ, ಕ್ಯಾಂಡಲ್‌ ಬೆಳಗಿಸಿ, ಕೊರೋನಾಕ್ಕೆ ಚೂ…ಚೂ…ಕರೋನ ಅಂದದ್ದು…

ಮಧ್ಯಪ್ರದೇಶ, ಗುಜರಾತ್‌, ಗೋವಾಗಳಲ್ಲಿ ನಡೆದ ಕುದುರೆ ವ್ಯಾಪಾರ, ಸಿಖ್ಖರ ಧರ್ಮ ಸಭೆ, ಅಯೋಧ್ಯೆ ರಾಮಮಂದಿರ ಕಟ್ಟುವ ಮಾತುಕತೆಗಳು, ಇವೆಲ್ಲ ಪ್ರಶ್ನೆಗಳು ಏಳುತ್ತಿದ್ದಂತೆ, ತಬ್ಲಿಘಿಗಳ ಹೆಸರಿನಲ್ಲಿ ನಡೆದ ಕರಡಿ ಕುಣಿತ ಅವೆಲ್ಲವನ್ನೂ ನೇಪಥ್ಯಕ್ಕೆ ಸರಿಸಿದ್ದು…

ನಮ್ಮ ದೇಶ ಕಟ್ಟುವ ಯೋಗಿಗಳು, ತಾವೇ ಕಟ್ಟಿದ ರಸ್ತೆಯಲ್ಲಿ ಬಾಣಂತಿಯರು, ಹಸುಗೂಸುಗಳಿಂದ ಹಿಡಿದು ಹಿರಿಯ ಜೀವಗಳನ್ನು ಹಸಿವನ್ನು ಧಿಕ್ಕರಿಸಿ ಮರಳಿ ಮನೆಗೆ ಹೊರಟಾಗ ಮಸಣ ಸೇರಿದವರು…
ಹೀಗೆ, ಹತ್ತು ಹಲವಾರು ಪ್ರಶ್ನೆಗಳ ಹುತ್ತವನ್ನು ಮೌನದಲ್ಲೇ ಕಟ್ಟಿಕೊಳ್ಳುವಂತೆ ಲಾಕ್‌ಡೌನ್‌ ಡೈರಿ ಮಾಂತ್ರಿಕ ಮಾಡಿಬಿಡುತ್ತಾನೆ.

ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಬಿಡಿ ಬಿಡಿಯಾಗಿ ಬಹಳಷ್ಟು ಜನ ಓದಿದ್ದರೂ, ನಂತರದಲ್ಲಿ ಪರಿಷ್ಕೃತಗೊಂಡು ಮತ್ತಷ್ಟು ಲೇಖಕರ ಅಭಿಪ್ರಾಯಗಳನ್ನು ಮುದ್ರಣಾಲಯದಿಂದ ಹೊತ್ತು ತಂದಿರುವ ಡೈರಿಯನ್ನು ಓದಿಯೇ ಅನುಭವಿಸಬೇಕು.

ಪುಸ್ತಕಕ್ಕಾಗಿ:
anilmadikeri@gmail.com
ಕರೆ : 9844060174

ಲೇಖಕರು: ✍. ಅಲ್ಲಾರಂಡ ವಿಠಲ್ ನಂಜಪ್ಪ

ಅಲ್ಲಾರಂಡ ವಿಠಲ ನಂಜಪ್ಪ

0 0 votes
Article Rating
Subscribe
Notify of
guest
0 Comments
Inline Feedbacks
View all comments