ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ;
ಐದು ಸಾವಿರ ವರುಷಗಳ ಹಿಂದೆ ಶ್ರೀ ಕೃಷ್ಣ ಜಗತ್ತಿಗೆ ನೀಡಿದ ಸಂದೇಶ
2019 ಡಿಸೆಂಬರ್ 8 ಶ್ರೀ ಕೃಷ್ಣನಿಂದ ಭಗವದ್ಗೀತೆ ಬೋಧಿಸಲ್ಪಟ್ಟ ದಿನ. ನಮ್ಮಲ್ಲೊಂದು ಅಭಿಪ್ರಾಯವಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು ಇವೆಲ್ಲ ಪ್ರಾಯವಾದವರಿಗೆ. ಅಜ್ಜಂದಿರಿಗೆ. ಕೈಲಾಗದೆ ಕೂತವರಿಗೆ. ಊರುಗೋಲಿಲ್ಲದೆ ನಡೆದಾಡಲು ಆಗದ ಸ್ಥಿತಿಗೆ ತಲುಪಿದ ಮೇಲೆ ಇವೆಲ್ಲ ವೇದಾಂತಗಳು. ಅಲ್ಲಿಯವರೆಗೆ ನಮಗೆ ಧರ್ಮಗ್ರಂಥಗಳು ಬೇಕಾಗಿಲ್ಲ, ಅಂತ. ಭಗವದ್ಗೀತೆ ಅಧ್ಯಯನದಿಂದ ಜೀವನದಲ್ಲಿ ನೆಮ್ಮದಿ ಹಾಗೂ ಶಾಂತಿ ಲಭಿಸುತ್ತದೆ. ಜತೆಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಮಾನವಕೋಟಿಯ ಮೇಲೆ ಕರುಣೆಯಿಂದ ಶ್ರೀಕೃಷ್ಣ ಪರಮಾತ್ಮನು ಮಾನವ ಬದುಕಿಗೆ ಅವಶ್ಯಕವೆನಿಸುವ ತತ್ವವನ್ನು ಸಾಮಾನ್ಯನೂ ತಿಳಿದುಕೊಳ್ಳಬಲ್ಲಂಥ ತಿಳಿಯಾದ ಭಾಷೆಯಲ್ಲಿ ಭಗವದ್ಗೀತೆಯ ರೂಪದಲ್ಲಿ ಅಮೃತಧಾರೆಯಾಗಿ ಸುರಿಸಿರುವನು. ಇದು ಎಲ್ಲ ಉಪನಿಷತ್ತುಗಳ ಸಾರ. ಮನುಷ್ಯನ ಜೀವನದಲ್ಲಿ ಸುಖದುಃಖಗಳ ಏರಿಳಿತ ನಿರಂತರವಾಗಿರುತ್ತದೆ. ಮನುಷ್ಯ ಸುಖ ಬಂದಾಗ ಹಿಗ್ಗುತ್ತಾನೆ, ದುಃಖ ಬಂದಾಗ ಕುಗ್ಗುತ್ತಾನೆ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಈ ಸಮಚಿತ್ತ ಪ್ರತಿಯೊಬ್ಬನಿಗೂ ಅತ್ಯಗತ್ಯ. ಈ ಕೌಶಲವನ್ನು ಕಲಿಸುವುದು ಭಗವದ್ಗೀತೆ. ಪ್ರಪಂಚದ ಮೊಟ್ಟ ಮೊದಲ ಮನಃಶಾಸ್ತ್ರ ಗ್ರಂಥ ಭಗವದ್ಗೀತೆಯಾಗಿದ್ದು, ಯಾವುದೇ ಜಾತಿ ಧರ್ಮದ ಹಂಗಿಲ್ಲದೆ ಎಲ್ಲಾ ವರ್ಗದ ಜನರೂ ಇದನ್ನು ಅಧ್ಯಯನ ಮಾಡಿ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳಬಹುದಾಗಿದೆ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.
ಭಗವದ್ಗೀತೆಯು ನಮಗೆ ಉತ್ತಮ ಸಂದೇಶಗಳನ್ನು ನೀಡಿದೆ. ಬೆಂಕಿಪೊಟ್ಟಣದ ಪ್ರತಿ ಕಡ್ಡಿಗಳು ಜ್ಯೋತಿಯನ್ನು ಹೇಗೆ ಬೆಳಗಿಸುತ್ತವೆಯೋ ಹಾಗೇ ಭಗವದ್ಗೀತೆಯ ಪ್ರತಿ ಶ್ಲೋಕಗಳು ಜೀವನಕ್ಕೆ ಉತ್ಸಾಹ ನೀಡುತ್ತವೆ. ಹದಿನೆಂಟು ಪರ್ವಗಳ ಮಹಾಭಾರತದ ಸಾರವಾಗಿ ಭಗವದ್ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿದ್ದು, ಶ್ರೀ ಕೃಷ್ಣನ ಗೀತೋಪದೇಶ ಮಾನವನ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೈಗನ್ನಡಿಯಾಗಿದೆ. ಒಂದು ಜಾತಿ ಅಥವಾ ಮತಕ್ಕೆ ಮಾತ್ರ ಸೀಮಿತವಾಗದೆ ಇಡೀ ಮಾನವ ಜನಾಂಗಕ್ಕೇ ಇದು ದಾರಿದೀಪವಾಗಿದೆ. ಅದ್ಭುತ ಶಕ್ತಿಯುಳ್ಳ ಪ್ರತಿ ಶ್ಲೋಕವೂ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ದಿವ್ಯ ಪ್ರಭೆಯಾಗಿದೆ. ಸತ್ಯದ ಪೂರ್ಣದೃಷ್ಟಿ ಇಲ್ಲಿದೆ. ಭಗವದ್ಗೀತೆಯ ತತ್ವ ಜಿಜ್ಞಾಸೆ ಆಗಸದಷ್ಟು ವಿಶಾಲ, ಕಡಲಿನಷ್ಟು ಆಳ. ತನ್ನೆಡೆಗೆ ಬಂದ ಯಾರನ್ನೂ ಗೀತೆ ನಿರಾಸೆಯಿಂದ ಹಿಂದಕ್ಕೆ ಕಳಿಸುವುದಿಲ್ಲ, ಅವರವರ ಯೋಗ್ಯತೆಗೆ ತಕ್ಕಂತೆ ಮಾರ್ಗದರ್ಶನವನ್ನು ನೀಡುತ್ತದೆ.
ಕೃಷ್ಣ ಹೇಳುತ್ತಾನೆ: “ಸೋಲೋ ಗೆಲುವೋ ಏನೋ ಒಂದು; ಆದರೆ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳದಿದ್ದರೆ ಸಾಕು!” ಈ ಅದ್ಭುತ ಸಂದೇಶವನ್ನು ಹೇಳುವ ಭಗವದ್ಗೀತೆಯನ್ನು ಯೌವನದಲ್ಲಿ ಓದದೆ ಮತ್ಯಾವಾಗ, ಕೈಗೆ ಊರುಗೋಲು ಬಂದಮೇಲೆ ಓದಬೇಕೇ ಎಂಬುದು ನಿಮ್ಮಲ್ಲಿ ನನ್ನ ಪ್ರಶ್ನೆ? ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದೊಂದು ಬೆಸ್ಟ್ ಪರ್ಸನಾಲಿಟಿ ಡೆವಲಪ್‌ಮೆಂಟ ಹಾಗೂ ಮೋಟಿವೆಷನಲ್ ಬುಕ್ ಕೂಡ ಆಗಿದೆ. ಅದರಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರಗಳಿವೆ. ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ. ನೀವು ತಪ್ಪದೆ ಒಂದ್ಸಾರಿ ಭಗವದ್ಗೀತೆಯನ್ನು ಓದಿ. ಖಂಡಿತ ನಿಮ್ಮ ಲೈಫ್ ಸಕ್ಸೆಸ್ ಫುಲ್ಲಾಗುತ್ತದೆ. ಭಗವದ್ಗೀತೆಯಿಂದ ಹೆಕ್ಕಿ ತೆಗೆದ ಕೆಲವು ವಿಷಯಗಳು ಇಂತಿವೆ ;
“ನಮ್ಮ ಮನಸ್ಸು ನಮ್ಮ ಅಸಲಿ ಮಿತ್ರ ಹಾಗೂ ಅಸಲಿ ಶತ್ರುವಾಗಿದೆ. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಅದಕ್ಕಿಂತ ಒಳ್ಳೇ ಮಿತ್ರ ಬೇರ್ಯಾರಿಲ್ಲ. ಅದೇ ಮನಸ್ಸು ನಮ್ಮ ನಿಯಂತ್ರಣ ತಪ್ಪಿ ಹೋದರೆ ಅದಕ್ಕಿಂತ ಕೆಟ್ಟ ಶತ್ರು ಬೇರೆಯಾರಿಲ್ಲ. ನಾವು ನಮ್ಮ ಮನಸ್ಸನ್ನು ಗೆದ್ದರೆ ಎಲ್ಲವನ್ನೂ ಗೆದ್ದಂತೆ.”
“ಇಲ್ಲಿ ತನಕ ಆಗಿದ್ದೆಲ್ಲವು ಒಳ್ಳೆಯದೇ, ಸದ್ಯಕ್ಕೆ ಆಗುತ್ತಿರುವುದೆಲ್ಲವು ಒಳ್ಳೆಯದೇ, ಮುಂದೆ ಆಗುವುದೆಲ್ಲವು ಒಳ್ಳೆಯದೇ. ಆದಕಾರಣ ಯಾವುದಕ್ಕೂ ಜಾಸ್ತಿ ಚಿಂತಿಸದಿರಿ, ಜಾಸ್ತಿ ಕೊರಗದಿರಿ. ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ.”
“ಎಲ್ಲದಕ್ಕೂ ಅನುಮಾನಪಡುವವರು ಎಂದಿಗೂ ಖುಷಿಯಾಗಿರಲಾರರು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ಯಾವುದರ ಮೇಲೆಯೂ ವಿಶ್ವಾಸ ಮಾಡಲಾಗದು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ನಿಮ್ಮನ್ನು ನಿಮ್ಮ ಗುರಿ ತಲುಪಿಸಲ್ಲ. ಆದ್ದರಿಂದ ಸಂಶಯದಿಂದ ಹೊರಬನ್ನಿ. ಕೆಟ್ಟ ಆಲೋಚನೆಗಳಿಂದ ಹೊರ ಬನ್ನಿ. ಉಚ್ಛ ಯೋಚನೆಗಳನ್ನು ಮಾಡಿ. ಉಚ್ಛ ಕೆಲಸಗಳನ್ನು ಮಾಡಿ.”
“ನಿಮ್ಮ ಕರ್ತವ್ಯದಿಂದ ದೂರ ಓಡಬೇಡಿ. ಅದರ ಪರಿಣಾಮ ಒಳ್ಳೆಯದಾಗಿರದಿದ್ದರೂ ಸಹ ಅದನ್ನು ಪೂರ್ಣಗೊಳಿಸಿ. ನಿಮ್ಮ ಕರ್ತವ್ಯವನ್ನು ನೀವು ಪ್ರಾಮಾಣಿಕವಾಗಿ ಮಾಡಿ. ಫಲಿತಾಂಶವನ್ನು ಭಗವಂತನಿಗೆ ಬಿಟ್ಟು ಬಿಡಿ. ಕೇವಲ ಕರ್ಮ ನಿಮ್ಮ ಕೈಯಲ್ಲಿದೆ, ಫಲ ನಿಮ್ಮ ಕೈಯಲಿಲ್ಲ.”
“ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ.”
“ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ. ಕಾಲ ಕೆಳಗಿನ ನೆಲ ಕುಸಿದು ಬಿದ್ದರೂ ಯಾರಿಂದಲೂ ಏನನ್ನೂ ಬಯಸದೆ, ಯಾರಿಗೂ ಹೆದರದೇ ಮುನ್ನುಗ್ಗಿ.”
ಭಗವದ್ಗೀತೆಯ ಸಂದೇಶದಂತೆ ನಡೆದುಕೊಳ್ಳುವುದೇ ನಿಜವಾದ ಧರ್ಮಪಾಲನೆ. ಭಗವದ್ಗೀತೆ ಕಾದಂಬರಿ ಪುಸ್ತಕವಲ್ಲ, ಅದೊಂದು ಜೀವನ ಪದ್ಧತಿ ಸಾರುವ ಪವಿತ್ರ ಗ್ರಂಥ. ದೇಶ, ಕಾಲ, ಜಾತಿ, ಮತ, ಪಂಥಗಳನ್ನೂ ಮೀರಿದ ಸರ್ವಧರ್ಮ ಸಮನ್ವಯದ ಮತ್ತು ಸರ್ವಮಾನ್ಯವಾದ ನಿಘಂಟೂ ಭಗವದ್ಗೀತೆ. ಗೀತೆಯ ಸಾರವನ್ನು ಅರಿತು ನಮ್ಮಲ್ಲಿನ ಅಜ್ಞಾನದ ಕೊಳೆಯನ್ನು ತೊಳೆದು ಭಗವಂತನ ಶುದ್ಧಿಯನ್ನು ಜೀವನದಲ್ಲಿ ಅಳವಡಿಸಿದಲ್ಲಿ ಗೊಂದಲ, ಸಂದಿಗ್ಧತೆ, ಜಿಗುಪ್ಸೆಗಳು ದೂರವಾಗಬಲ್ಲುದು. ಮಾನಸಿಕ ಸಿದ್ಧತೆಯೊಂದಿಗೆ ಜೀವನದ ಗುರಿ ಹಾಗೂ ಅರ್ಥವನ್ನು ತಿಳಿದಾಗ ಜೀವನ ಪರಿಪೂರ್ಣ ಹಾಗೂ ಸಾರ್ಥಕವಾಗುವುದು.
✍. ಕಾನತ್ತಿಲ್ ರಾಣಿ ಅರುಣ್