ನಿರ್ಲಕ್ಷ್ಯಕ್ಕೆ ಒಳಗಾದ ಸೂಳಿಮಳ್ತೆಯ ಶಿಲಾಗೋರಿಗಳು

ನಿರ್ಲಕ್ಷ್ಯಕ್ಕೆ ಒಳಗಾದ ಸೂಳಿಮಳ್ತೆಯ ಶಿಲಾಗೋರಿಗಳು

ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಕಾನನದಲ್ಲಿ ನೆಲೆಸಿರುವ ಶಿಲಾಯುಗದ ಮಾನವನ ನೆಲೆಯನ್ನು ಪ್ರಚುರಪಡಿಸುವ ಶಿಲಾಗೋರಿಗಳ ತಾಣವೊಂದು ಕೊಡಗಿನ ಸೋಮವಾರಪೇಟೆಯಿಂದ ಅನತಿ ದೂರದಲ್ಲಿರುವ ದೊಡ್ಡಮಳ್ತೆ ಸಮೀಪದ ಸೂಳಿಮಳ್ತೆಯಲ್ಲಿದೆ.
ಈ ಶಿಲಾಗೋರಿಗಳು ಸೋಮವಾರಪೇಟೆಯಿಂದ ದೊಡ್ಡಮಳ್ತೆ ಗ್ರಾಮದ ಮೂಲಕ ಶನಿವಾರಸಂತೆಗೆ ಹಾದು ಹೋಗುವ ಮುಖ್ಯರಸ್ತೆಯಿಂದ ಸರಿ ಸುಮಾರು ಒಂದೂವರೆ ಕೀಲೋ ಮೀಟರ್ ದೂರದ ಗುಡ್ಡದ ಮೇಲಿದೆ. ಈ ಶಿಲಾಗೋರಿಗಳಿರುವ ಜಾಗಕ್ಕೆ ಹೋಗಲು ಕಚ್ಚಾರಸ್ತೆ ಮಾತ್ರವಿದ್ದು, ಜೀಪ್ ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಅಲ್ಲಿಗೆ ಹೇಗೆ ಹೋಗಬೇಕೆನ್ನುವ ಬಗ್ಗೆ ಒಂದು ಕಲ್ಲಿನ ಸೂಚನಾ ಫಲಕ ಮಾತ್ರ ಮುಖ್ಯ ರಸ್ತೆಯ ಬಳಿಯಿದೆ. ಈ ತಾಣಕ್ಕೆ ಮುಖ್ಯ ರಸ್ತೆಯಿಂದ ನಡೆದು ಕೊಂಡು ಹೋಗಬೇಕಾಗುತ್ತದೆ. ವಾಹನವಾದರೆ 4‌ ವೀಲ್ ಜೀಪ್‌ನ ಮುಖಾಂತರ ಮಾತ್ರ‌ ಹೋಗಲು ಸಾಧ್ಯವಾಗುತ್ತದೆ.
ಹೊನ್ನಮ್ಮನ ಕೆರೆಯ ಪಕ್ಕದಲ್ಲಿರುವುದರಿಂದ ಇದೂ ಕೂಡಾ ಉತ್ತಮ ಪ್ರವಾಸಿ ತಾಣವಾಗಿ ರೂಪು ಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಸುಮಾರು 3000 ವರ್ಷಗಳ ಹಿಂದೆ ಶಿಲಾಯುಗದ ಮಾನವರು ಇಲ್ಲಿ ನೆಲೆ ನಿಂತಿರುವುದಾಗಿ ಇತಿಹಾಸಕಾರರು ಹೇಳುತ್ತಾರೆ. ಪಕ್ಕದಲ್ಲಿಯೇ ಹೊನ್ನಮ್ಮನ ಕೆರೆ ಇದ್ದಿದ್ದರಿಂದ ಕೃಷಿ ಕಾರ್ಯದಲ್ಲಿ ಶಿಲಾಯುಗದ ಮಾನವರು ತೊಡಗಿಕೊಂಡಿದ್ದು, ಶವಗಳನ್ನು ಈ ಗುಡ್ಡದಲ್ಲಿ ಹೂಳುತ್ತಿದ್ದರು ಎನ್ನಲಾಗುತ್ತದೆ. ಇನ್ನೊಂದು ಮಾಹಿತಿ ಪ್ರಕಾರ ಆಧ್ಯಾತ್ಮಿಕ ಸಾಧನೆ ಮಾಡಲು ಬಂದ ಸಾಧು ಸಂತರು ಇಲ್ಲಿ ನೆಲಸಿ ಕಾಲಾನಂತರ ಇಲ್ಲಿರುವ ಕಲ್ಲಿನ ಗೋರಿಗಳಲ್ಲಿ ಸಮಾಧಿಯಾದರೆಂದು ತಿಳಿದು ಬರುತ್ತದೆ.
ಇದೊಂದು ಆದಿಮಾನವರ ಅತ್ಯಂತ ಮುಂದುವರೆದ ಸಂಸ್ಕೃತಿಯ ಸಂದರ್ಭದ ಸಾಕ್ಷಿ ಎಂಬುದಕ್ಕೆ ಈ ಸ್ಮಾರಕದಲ್ಲಿ ಹಲವು ಪುರಾವೆಗಳಿವೆ. ಈ ಪ್ರದೇಶದಲ್ಲಿ ಬಾಳಿದ ಹಿಂದಿನ ಜನ ತುಂಬಾ ಕುಳ್ಳರು, ಅವರನ್ನು ಮೋರೇರು ಎನ್ನುತ್ತಿದ್ದರು. ಈ ಮನೆಗಳಲ್ಲಿ ಅವರು ವಾಸಿಸುತ್ತಿದ್ದರು ಎನ್ನಲಾಗುತ್ತದೆ. ಅಂದಿನ ಜನ ಈ ಕಿಂಡಿಯ ಮುಖಾಂತರ ಒಳಗೆ ಹೊರಗೆ ಸಾಗುತ್ತಿದ್ದರು ಎಂದು ಹೇಳಲಾಗುತ್ತಾದರೂ, ಅವುಗಳು ಅಂದಿನ ಜನರು ಸತ್ತ ಮೇಲೆ ಹೂಳುತ್ತಿದ್ದ ಸಮಾಧಿಗಳಾಗಿದ್ದವು ಎಂಬುದು ಪುರಾತತ್ವಶಾಸ್ತ್ರಜ್ಞರ ವಿವರಣೆಯಾಗಿದೆ.
17.5 ಏಕರೆ ವಿಸ್ತೀರ್ಣದ ಅರಣ್ಯವನ್ನು ಆವರಿಸಿರುವ ಈ ಗುಡ್ಡದಲ್ಲಿ 3.5 ಏಕರೆ ವಿಸ್ತೀರ್ಣದಲ್ಲಿ ಈ ಶಿಲಾಗೋರಿಗಳು ನೆಲೆನಿಂತಿವೆ. ಇಲ್ಲಿ ಬೆಳಕಿಗೆ ಬಂದಿರುವುದು 40ರಿಂದ 45 ಗೋರಿಗಳು ಮಾತ್ರ ಇದರಲ್ಲಿ 20 ಗೋರಿಗಳು ಮಾತ್ರ ಯಾವುದೇ ಹಾನಿಗೊಳಗಾಗದೆ ಯಥಾಸ್ಥಿಯಲ್ಲಿದೆ. ಉಳಿದವು ನಿಧಿ ಚೋರರ ದಾಳಿಯಿಂದ ಮತ್ತು ಸ್ಥಳೀಯರ ನಿರ್ಲಕ್ಷ್ಯದಿಂದ ಸಾಕಷ್ಟು ಗೋರಿಗಳು ಹಾಳಾಗಿವೆ. ಶಿಲಾಯುಗದ ಕಾಲದಲ್ಲಿ ಚಿನ್ನ-ಬೆಳ್ಳಿಗಳಿರಲಿಲ್ಲ ಎಂಬ ಅರಿವಿಲ್ಲದ ಕೆಲವು ಕಳ್ಳರು, ಇಲ್ಲಿ ನಿಧಿ ಸಿಗಬಹುದೆಂಬ ಆಸೆಯಲ್ಲಿ ಹಲವು ಶಿಲಾಗೋರಿಗಳನ್ನು ಹಾಳುಗೆಡವಿದ್ದಾರೆ.
ಒಂಬತ್ತು ವರ್ಷಗಳ ಹಿಂದೆ ಅಂದರೆ 2011ರಲ್ಲಿ ಪ್ರಾಚ್ಯವಸ್ತು ಇಲಾಖೆ ಇದರ ಬಗ್ಗೆ ಗಮನ ಹರಿಸಿ ಈ ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿ ಯೋಜನೆಯೊಂದನ್ನು ರೂಪಿಸಿತು. ಬಿರುಸಿನಿಂದ ಕಾರ್ಯಾಚರಣೆ ಆರಂಭಿಸಿ ಸುತ್ತಲೂ ಬೇಲಿ ನಿರ್ಮಿಸಲು ಕಬ್ಬಿಣದ ಕಂಬ ನೆಟ್ಟವರು ಮತ್ತೆ ಈ ಕಡೆ ತಲೆ ಹಾಕಿಲ್ಲ. ಕಬ್ಬಿಣದ ಕಂಬಗಳು ತುಕ್ಕು ಹಿಡಿಯುತ್ತಿವೆ. ಇದರಿಂದಾಗಿ ಈ ಸ್ಥಳದಲ್ಲಿ ಮತ್ತೆ ಕಾಡು ಬೆಳೆದು ಮರಗಳ್ಳರ ಆವಾಸ ಸ್ಥಾನವಾಗಿದೆ. ಈ ಜಾಗದಲ್ಲಿರುವ ಹೇರಳವಾದ ಶ್ರೀಗಂಧದ ಮರಗಳು ಕಳ್ಳರ ಪಾಲಾಗುತಿವೆ.
ಈ ಗುಡ್ಡದಲ್ಲಿರುವ ಶಿಲಾಗೋರಿಗಳು ಹಲವು ಬೇರೆ ಬೇರೆ ಅಳತೆಗಳಲ್ಲಿ ಕಾಣಸಿಗುತ್ತವೆ. ಕೆಲವು ಬರೀ 50 ಸೆಂಟಿಮೀಟರಿನಷ್ಟು ಉದ್ದವಿದ್ದರೆ ಇನ್ನೂ ಕೆಲವು ಸುಮಾರು ಹತ್ತು ಅಡಿಗಳಷ್ಟು ಎತ್ತರವಿದೆ. ಈ ಗೋರಿಗಳಿಗೆ ಮೂರುಗೋಡೆಗಳಿದ್ದು ಮೇಲೆ ದೊಡ್ಡ ಚಪ್ಪಡಿ ಕಲ್ಲುಗಳ ಸೂರು ಇದೆ. ಕೆಲವು ಕಟ್ಟಡಗಳಲ್ಲಿ ಕಿಂಡಿಗಳೂ ಇದ್ದು, ನೆಲೆಸುವ ಮನೆಗಳಂತೆ ಕಂಡರೂ ಈ ಕಲ್ಲು ಕೋಣೆಗಳು ಗೋರಿಗಳೇ ಆಗಿವೆ ಎಂದು ತಿಳಿದು ಬರುತ್ತದೆ. ಇಲ್ಲಿ ಒಂದು ಗೋರಿ ಇದ್ದು, ಅದರ ಸುತ್ತ ಹುತ್ತವೊಂದು ಆವೃತ್ತವಾಗಿದ್ದು, ಅದರಲ್ಲಿ ಸುಮಾರು 9ಅಡಿ ಉದ್ದದ ಮೈಮೆಲೆ ಕೂದಲು ಆವರಿಸಿರುವ ನಾಗರ ಹಾವೊಂದು ಹಲವು ವರ್ಷಗಳಿಂದ ನೆಲೆಸಿದೆ ಎಂದು ಈ ಸ್ಮಾರಕದ ಪ್ರಾಚ್ಯವಸ್ತು ಇಲಾಖೆ ಸಹಾಯಕರು ಮಾಹಿತಿ ನೀಡಿದರು.
ಕೊಡಗು ಜಿಲ್ಲೆ ಬೃಹತ್‌ ಶಿಲಾಯುಗದ ಕಲ್ಮನೆಗಳ ತವರೂರಾಗಿದ್ದು, 1856ರಲ್ಲಿ ಮೊಗ್ಲಿಂಗ್‌ ಎಂಬ ಬ್ರಿಟೀಷ್‌ ಅಧಿಕಾರಿ ವಿರಾಜಪೇಟೆ ತಾಲೂಕಿನ ಅರಮೇರಿ ಹಳ್ಳಿಯ ಅಲಮಂಡ ಮನೆಯ ಸಮೀಪ ಕಲ್ಮನೆಗಳನ್ನು ಶೋಧಿಸಿ ಉತ್ಖನನ ಮಾಡಿದ್ದರು. 1869ರಲ್ಲಿ ಕ್ಯಾ.ಕೋಲ್‌ ಎಂಬಾತ ಸೋಮವಾರಪೇಟೆ ತಾಲೂಕಿನ ಮೋರಿಬೆಟ್ಟದಲ್ಲಿ 50 ಕಲ್ಮನೆಗಳನ್ನು ಸಂಶೋಧಿಸಿ ಪ್ರಕಟಿಸಿದ. ನಂತರ ಆತನೇ ರಾಮಸ್ವಾಮಿ ಕಣಿವೆಯಲ್ಲಿ ನಾಲ್ಕು ಕಲ್ಮನೆಗಳನ್ನು ಉತ್ಖನನ ಮಾಡಿದ. 1978ರಲ್ಲಿ ಡಾ. ಕೆ.ಕೆ. ಸುಬ್ಬಯ್ಯನವರು ಸೋಮವಾರಪೇಟೆಯ ಹೆಗ್ಗಡೆಹಳ್ಳಿಯ ಮೋರಿಕಲ್ಲು ಬೆಟ್ಟದಲ್ಲಿ ಪಾಂಡವ ಬಂಡೆ ಎಂದು ಕರೆಯಲ್ಪಡುವ 1,000 ಕಲ್ಮನೆಗಳನ್ನು ಸಂಶೋಧಿಸಿ, 10 ಕಲ್ಮನೆಗಳ ಉತ್ಖನನ ಮಾಡಿದರು. 1995ರಲ್ಲಿ ರಾಜ್ಯ ಪುರಾತತ್ವ ಇಲಾಖೆಯವರು ಹೆಗ್ಗಡೆಹಳ್ಳಿಯಲ್ಲಿ 11 ಕಲ್ಮನೆಗಳ ಉತ್ಖನನವನ್ನು ಮಾಡಿ, ವರದಿಯನ್ನು ಪ್ರಕಟಿಸಿದ್ದಾರೆ.
ಈ ಶಿಲಾಸಮಾಧಿಗಳು‌ ಅಂದರೆ ಇದನ್ನು ಡಾಲ್ಮೆನ್‌ ಸರ್ಕಲ್ ಎಂದು ಇತಿಹಾಸದ ಅಧ್ಯಯನದಲ್ಲಿ ಕರೆಯುತ್ತಾರೆ. ಡಾಲ್ಮೆನ್‌ ಸರ್ಕಲ್(ಕಲ್ಮನೆ)ಗಳೆಂದರೆ ಭಾರಿ ಗಾತ್ರದ ಕಲ್ಲು ಚಪ್ಪಡಿಗಳನ್ನು ಚೌಕಾಕಾರದಲ್ಲಿ ಒಂದಕ್ಕೊಂದು ತಾಗಿಸಿ ನಿಲ್ಲಿಸಿ ಅದರ ಮೇಲೆ ಮತ್ತೊಂದು ಅಗಲವಾದ ಕಲ್ಲು ಚಪ್ಪಡಿಯನ್ನು ಮುಚ್ಚುಗೆಯಂತೆ ಮುಚ್ಚಿ ನಿರ್ಮಿಸಿದ ಕಲ್ಲಿನ ಮನೆ. ನಾಲ್ಕು ದಿಕ್ಕಿಗೆ ನಿಲ್ಲಿಸಿದ ನಾಲ್ಕು ಕಲ್ಲು ಚಪ್ಪಡಿಗಳಲ್ಲಿ ಯಾವುದಾದರೊಂದು ಚಪ್ಪಡಿಯಲ್ಲಿ ಸುಮಾರು 2 ಅಡಿ ಸುತ್ತಳತೆಯ ಒಂದು ರಂಧ್ರ ಅಥವಾ ತೂತನ್ನು ರಚಿಸಲಾಗಿರುತ್ತದೆ. ಇದು ಡಾಲ್ಮೆನ್‌ ಸರ್ಕಲ್ ಅಥವಾ ಕಲ್ಮನೆಯ ಏಕೈಕ ಪ್ರವೇಶ ದ್ವಾರ. ಇಂತಹ ರಚನೆಗಳನ್ನು ದಕ್ಷಿಣ ಭಾರತದಲ್ಲಿ ಪಾಂಡವರ ಮನೆ, ಪಾಂಡವರ ಕಲ್ಲು, ಮೋರಿಯರ ಮನೆ, ಕಲ್ಮನೆ, ತೂತುಕಲ್ಲು, ಪಾಣಾರ ಅರೆಕಲ್ಲು ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಸೂಳಿಮಳ್ತೆಯ 3000 ವರ್ಷಗಳ ಹಿಂದಿನ ಶಿಲಾಗೋರಿಗಳು ಅವಸಾನ ಸ್ಥಿತಿಗೆ ತಲುಪಿದೆ. ಇದೊಂದು ರಮ್ಯ ಪರಿಸರದಲ್ಲಿರುವ ಚಾರಿತ್ರಿಕ ತಾಣ. ಹೆಬ್ಬಂಡೆಗಳ ನಡುವಿನ ನಿರ್ಜನ ಪ್ರದೇಶ. ಸಂಬಂಧಪಟ್ಟ ಇಲಾಖೆಯವರು ಕೂಡಲೆ ಇದರ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಕೊಡಗಿನ ವಿವಿಧ ಕಡೆಗಳಲ್ಲಿ ಪುರಾತನ ಕಾಲದ ಶಿಲಾಗೋರಿಗಳು ಪತ್ತೆಯಾಗಿದ್ದರೂ, ದೊಡ್ಡಮಳ್ತೆ ಗ್ರಾಮದ ಸೂಳಿಮಳ್ತೆಯಲ್ಲಿರುವಷ್ಟು ಸುಸ್ಥಿತಿಯಲ್ಲಿ ಇಲ್ಲ. ಆದರೆ ಈ ಗೋರಿಗಳನ್ನು ಸರಿಯಾಗಿ ಸಂರಕ್ಷಿಸದೆ ಅವುಗಳೂ ನಾಶವಾಗತೊಡಗಿವೆ.
ಸೋಮವಾರಪೇಟೆಯಿಂದ ಕೇವಲ 6 ಕಿ.ಮೀ ದೂರದಲ್ಲಿ ಹೊನ್ನಮ್ಮನ ಕೆರೆಯಿದೆ. ಇದರ ಎಡಭಾಗದ ಗುಡ್ಡದಲ್ಲಿ ಸೂಳಿಮಳ್ತೆಯ ಶಿಲಾ ಗೋರಿಗಳ ಪ್ರದೇಶವಿದೆ. ಈಚೆಗೆ ಹೊನ್ನಮ್ಮನ ಕೆರೆಯ ಸುತ್ತಲಿನ ಜಾಗವನ್ನು ಅಭಿವೃದ್ಧಿಪಡಿಸಲಾಗಿದರೂ ಶಿಲಾಗೋರಿ ಗಳಿರುವ ಸ್ಥಳ ಮಾತ್ರ ಎಲ್ಲರ ಕಣ್ಣಿಂದ ಮರೆಯಾಗಿ ಅನಾಥವಾಗಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕೆಂಬುದು ಕೇವಲ ಅರಣ್ಯರೋದನವಾಗಿಯೇ ಉಳಿದಿದೆ. ಇಂತಹ ಐತಿಹಾಸಿಕ ತಾಣವನ್ನು ಗುರುತಿಸಿ ಸಂರಕ್ಷಿಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಆದ್ದರಿಂದ ಈ ರೀತಿಯ ಪ್ರಾಗೈತಿಹಾಸಿಕ ನೆಲೆಗಳನ್ನು ಯಾವ ಕಾರಣಕ್ಕೂ ನಾಶ ಪಡಿಸಬಾರದು. ಈ ಬಗ್ಗೆ ಸಂಬಂಧಿಸಿದವರು ನಿಗಾವಹಿಸಬೇಕಾಗಿದೆ.
ಪ್ರಾಚೀನ ಸ್ಮಾರಕಗಳ ಮತ್ತು ಪುರಾತತ್ವ ಅಧಿನಿಯಮ 1958ರ ಪ್ರಕಾರ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಡಿಸೆಂಬರ್ 2011ರಲ್ಲಿ ಈ ಪ್ರದೇಶವನ್ನು ಘೋಷಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲೂ 150 ಮೀಟರ್‌ವರೆಗಿನ ಕ್ಷೇತ್ರವನ್ನು ಸಂರಕ್ಷಿಸಲ್ಪಟ್ಟ ಪ್ರದೇಶವೆಂದು ಘೋಷಿಸಲಾಗಿದೆ. ಭಾರತ ಸರ್ಕಾರ ಪುರಾತತ್ವ ಇಲಾಖೆಯ ಅನುಮತಿ ಇಲ್ಲದೇ ಇಲ್ಲಿ ಯಾವುದೇ ರೀತಿಯ ಗಣಿಗಾರಿಕೆ, ಕಟ್ಟಡಗಳ ನಿರ್ಮಾಣ ಅಥವಾ ಸ್ಥಳಾಂತರ ಮಾಡುವುದು ಅಪರಾಧವಾಗಿದೆ. ಇಲ್ಲಿಗೆ ಬರುವ ಕೆಲವರು ತಮ್ಮ ಹೆಸರನ್ನು ಶಿಲೆಗಳ ಮೇಲೆ ಬರೆದು ಶಿಲಾಗೋರಿಗಳಿಗೂ ಮತ್ತು ಇಲ್ಲಿರುವ ಬೃಹತ್‌ ಬಂಡೆಗಳಗೂ ಹಾನಿ ಮಾಡಿದ್ದಾರೆ. ಇವುಗಳನ್ನು ತಡೆಯುವ ಕೆಲಸ ಈವರೆಗೂ ಆಗಿಲ್ಲ. ಈ ಕೂಡಲೇ ಇದನ್ನು ಕಾಪಾಡಿಕೊಳ್ಳದಿದ್ದರೆ ಈಗಿರುವ ಉಳಿಕೆಗಳೂ ಅಳಿದು ಹೋಗುಬಹುದು. ಒಟ್ಟಿನಲ್ಲಿ ಕೊಡಗಿನಲ್ಲಿರುವ ಮಹಾಶಿಲಾಯುಗದ ಅಪರೂಪದ ಪಳೆಯುಳಿಕೆಯೊಂದು ಪೂರ್ತಿ ನಶಿಸುವ ಮುನ್ನ ಅದರ ಸಂರಕ್ಷಣೆಯಾಗಬೇಕಿದೆ.

ಲೇಖಕರು: ✍. ಅರುಣ್ ಕೂರ್ಗ್

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
0 0 votes
Article Rating
Subscribe
Notify of
guest
0 Comments
Inline Feedbacks
View all comments