ಕೀಟನಾಶಕಗಳ ಸುರಕ್ಷಿತ ಬಳಕೆ
ಕೀಟನಾಶಕಗಳು ಅತ್ಯಂತ ವಿಷಕಾರಿಯಾಗಿರುವುದರಿಂದ ಅವುಗಳ ಶಿಸ್ತುಬದ್ಧ ಬಳಕೆಯಿಂದ ಮಾನವ, ಸಾಕು ಮತ್ತು, ಜಲಚರ ಪ್ರಾಣಿಗಳು, ಗಾಳಿ, ನೀರು ಮುಂತಾದುವುಗಳ ಮೇಲೆ ಆಗಬಹುದಾದ ದುಷ್ಪರಿಣಾಮಗಳನ್ನು ತಡೆಯುವುದರ ಜೊತೆಗೆ ಬೆಳೆಯನ್ನು ಬಾಧಿಸುವ ಕೀಟ ರೋಗಗಳನ್ನು ಯಶಸ್ವಿಯಾಗಿ ಹತೋಟಿ ಮಾಡಬಹುದು. ಈ ದಿಸೆಯಲ್ಲಿ ರೈತರು ಈ ಕೆಳಕಂಡ ಮುಂಜಾಗ್ರತಾ ಕ್ರಮಗಳತ್ತ ಗಮನ ಹರಿಸುವುದು ಅನಿವಾರ್ಯವಾಗಿದೆ. ಇವುಗಳನ್ನು ಮೂರು ಹಂತಗಳಲ್ಲಿ ಅನುಸರಿಸಬೇಕಾಗುತ್ತದೆ.
• ಕೀಟನಾಶಕಗಳ ಬಳಕೆಯ ಪೂರ್ವದಲ್ಲಿ ಅನುಸರಿಸುವ ಸುರಕ್ಷತಾ ಕ್ರಮಗಳು.
• ಕೀಟನಾಶಕಗಳನ್ನು ಬಳಸುವಾಗ ಅನುಸರಿಸುವ ಸುರಕ್ಷತಾ ಕ್ರಮಗಳು.
• ಕೀಟನಾಶಕಗಳ ಬಳಕೆಯ ನಂತರ ಅನುಸರಿಸುವ ಸುರಕ್ಷತಾ ಕ್ರಮಗಳು
ಕೀಟನಾಶಕಗಳ ಬಳಕೆಯ ನಂತರ ಪೂರ್ವದಲ್ಲಿ ಅನುಸರಿಸುವ ಸುರಕ್ಷತಾ ಕ್ರಮಗಳು
• ಅಧಿಕೃತವಾಗಿ ಶಿಫಾರಸ್ಸು ಮಾಡಲಾದ ಸೂಕ್ತ ಕೀಟನಾಶಕಗಳನ್ನು ಮಾತ್ರ ಆಯ್ಕೆ ಮಾಡಿ ಬಳಸಬೇಕು.
• ಕೀಟನಾಶಕಗಳನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು.
• ಕೀಟನಾಶಕಗಳನ್ನು ಕೊಳ್ಳುವಾಗ ಸೀಸೆಯ/ಚೀಲ/ಡಬ್ಬದ ಮೇಲೆ ನಮೂದಿಸಿರುವ ತಯಾರಿಕೆಯ ದಿನಾಂಕ ನಿರ್ಧಿಷ್ಟ ಬಳಕೆಯ ಅವಧಿ, ಬ್ಯಾಚ್ ನಂಬರ್, ಅಂತರರಾಷ್ಟ್ರೀಯ ಗುಣಮಟ್ಟ ಸಂಸ್ಥೆಯ ಚಿನ್ಹೆ, ತಯಾರಕರ ಪರವಾನಿಗೆ ಸಂಖ್ಯೆ ಮತ್ತು ವಿಳಾಸ, ರಾಸಾಯನಿಕ ಮತ್ತು ವಾಣಿಜ್ಯ ಹೆಸರು, ಕೀಟನಾಶಕದ ಮೂಲವಸ್ತುಗಳ ಪ್ರಮಾಣ ಇತ್ಯಾದಿಗಳನ್ನು ನೋಡಿಕೊಳ್ಳುವುದು ಉತ್ತಮ.
• ಕೀಟನಾಶಕಗಳ ಜೊತೆಗಿರುವ ಹಸ್ತ ಪ್ರತಿಯನ್ನು ಚೆನ್ನಾಗಿ ಓದಿ ಅದರಲ್ಲಿ ತಿಳಿಸಿರುವಂತೆ ಯಾವ ಬೆಳೆ, ಯಾವ ಕೀಟ/ರೋಗಕ್ಕೆ, ಯಾವ ಸಮಯ ಮತ್ತು ಪ್ರಮಾಣದಲ್ಲಿ ಬಳಸಬೇಕೆಂದು ತಿಳಿಯುವುದು ಅತ್ಯವಶ್ಯಕ.
• ಸಿಂಪಡಣೆ ಮಾಡುವ ಸ್ಪ್ರೇಯರ್‍ಗಳು ಉತ್ತಮ ಸ್ಥಿತಿಯಲ್ಲಿದೆಯೇ ಎಂಬುದನ್ನು ಬಳಕೆಯ ಮುಂಚೆ ಪರಿಶೀಲಿಸಿಕೊಳ್ಳಬೇಕು.
• ಸಿಂಪಡಣೆ ಕಾರ್ಯಕ್ಕೆ ಸೋರುವ ಅಥವಾ ಒಡೆದ ಸ್ಪ್ರೇಯರ್‍ಗಳನ್ನು ಬಳಸಬಾರದು.
• ಕೀಟನಾಶಕಗಳ ದ್ರಾವಣ ತಯಾರಿಸಲು ಆದಷ್ಟು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬೇಕು.
• ಮೊದಲಿಗೆ ಶಿಫಾರಸ್ಸಿನಂತೆ ಕೀಟನಾಶಕಗಳನ್ನು ನೀರಿನೊಂದಿಗೆ ಪ್ಲಾಸ್ಟಿಕ್ ಬಕೆಟ್‍ನಲ್ಲಿ ಚೆನ್ನಾU ಕೋಲಿನಿಂದ ಕಲುಕುತ್ತಾ ಬೆರೆಸಿ ಸಿಂಪಡಣಾ ದ್ರಾವಣವನ್ನು ತಯಾರಿಸಿದ ನಂತರ ಅದನ್ನು ಬೇಕಾದ ಪ್ರಮಾಣದಷ್ಟು ಮಾಡಿಕೊಳ್ಳಬೇಕು.
• ಸಿಂಪಡಣಾ ದ್ರಾವಣವನ್ನು ಸ್ಪ್ರೇಯರ್‍ಗಳಿಗೆ ತುಂಬಿಸಲು ಆಳಿಕೆಯ ಸಹಾಯದಿಂದ ದ್ರಾವಣ ಚೆಲ್ಲದಂತೆ ತುಂಬಬೇಕು.
• ಸ್ಪ್ರೇಯರ್ ಸೂಸುಬಾಯಿ ಕಟ್ಟಿಕೊಂಡಾಗ ಯಾವುದೇ ಕಾರಣಕ್ಕೆ ಬಾಯಿಂದ ಊದುವುದಾಗಲಿ ಅಥವಾ ಹೀರುವುದಾಗಲಿ ಮಾಡಬಾರದು.
• ಕೀಟನಾಶಕಗಳ ಡಬ್ಬ/ಸೀಸೆ/ಚೀಲಗಳ ಮುಚ್ಚಳವನ್ನು ಹಲ್ಲಿನಿಂದ ಕಚ್ಚಿ ತೆಗೆಯುವ ಪ್ರಯತ್ನ ಮಾಡಬಾರದು ಮತ್ತು ಸಿಂಪಡಣಾ ದ್ರಾವಣ ಮಿಶ್ರಣ ಮಾಡಲು ಮರದ ಕೋಲನ್ನು ಬಳಸಬೇಕೇ ಹೊರತು ಕೈಯಿಂದ ಮಿಶ್ರಣ ಮಾಡಬಾರದು.
• ಕೀಟನಾಶಕಗಳ ಡಬ್ಬಿ/ಸೀಸೆ/ಚೀಲಗಳ ಮುಚ್ಚಳವನ್ನು ಸಿಂಪಡಣೆ ಮಾಡುವ ಜಾಗದಲ್ಲಿ ಮಾತ್ರ ತೆರೆಯಬೇಕೆ ವಿನಹ ಯಾವುದೇ ಕೊಠಡಿ/ವಾಸಮನೆ/ಸಾಕುಪ್ರಾಣಿಗಳ ಕೊಠಡಿಯೊಳಗೆ ತೆಗೆಯಬಾರದು.
• ಕೀಟನಾಶಕಗಳನ್ನು ಯಾವುದೇ ಕಾರಣಕ್ಕೆ ಆಹಾರ ಧಾನ್ಯ/ಪಶು ಆಹಾರ/ ಮೇವು/ ನೀರು ಇತ್ಯಾದಿಗಳ ಜೊತೆ ಸಾಗಿಸಬಾರದು.
• ಸಾಧ್ಯವಾದಷ್ಟು ಎರಡು-ಮೂರು ಕೀಟನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಸಿಂಪಡಿಸಬಾರದು.
ಕೀಟನಾಶಕಗಳನ್ನು ಬಳಸುವಾಗ ಅನುಸರಿಸುವ ಸುರಕ್ಷಿತಾ ಕ್ರಮಗಳು
• ಸಿಂಪಡಣಾ ದ್ರಾವಣದಿಂದ ರಕ್ಷಿಸಿಕೊಳ್ಳಲು ಕಣ್ಣಿಗೆ ಕನ್ನಡಕ, ಮುಖಕ್ಕೆ ಮುಖವಾಡ, ಕೈಗೆ ಕೈಹೊದಿಕೆ, ಕಾಲಿಗೆ ಪಾದರಕ್ಷೆ ಮತ್ತು ಸರಿಯಾದ ಬಟ್ಟೆಗಳನ್ನು ಮೈ ತುಂಬಾ ಧರಿಸಿ ಸಿಂಪಡಿಸಬೇಕು.
• ಸಿಂಪಡಣೆ ಕಾರ್ಯವನ್ನು ಆದಷ್ಟು ಮುಂಜಾನೆ ಅಥವಾ ಸಂಜೆ ತಂಪಾಗಿರುವ ಸಮಯದಲ್ಲಿ ಮಾತ್ರ ಮಾಡಬೇಕೇ ಹೊರತು ಉರಿ ಬಿಸಿಲಿನಲ್ಲಿ ಸಿಂಪಡಣೆ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ.
• ಸಿಂಪಡಣೆಯನ್ನು ಅತಿ ಕಡಿಮೆ ಗಾಳಿಯಿರುವ ಸಮಯದಲ್ಲಿ ಹಾಗೂ ಗಾಳಿ ಬೀಸುವ ದಿಕ್ಕಿನಲ್ಲಿ ಸಿಂಪಡಿಸಬೇಕು, ಯಾವುದೇ ಕಾರಣಕ್ಕೆ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಮಾಡಬಾರದು.
• ಸಿಂಪಡಣೆ ಅಥವಾ ಧೂಳೀಕರಣ ಕಾರ್ಯವನ್ನು ಮಕ್ಕಳು, ಬುದ್ಧಿಮಾಂದ್ಯರು, ರೋಗಿಗಳು, ಮಾನಸಿಕ ರೋಗಿಗಳು, ವೃದ್ಧರು ಮತ್ತು ಗಾಯಾಳುಗಳು ಮಾಡಬಾರದು.
• ಸಿಂಪಡಣೆ ಅಥವಾ ಧೂಳೀಕರಣ ಕಾರ್ಯ ಮಾಡುವಾಗ ಧೂಮಪಾನ, ಎಲೆಅಡಿಕೆ ಜಗಿಯುವುದು, ನೀರು ಕುಡಿಯುವುದು ಮತ್ತು ಇತರೆ ತಿಂಡಿ ತಿನಿಸುಗಳನ್ನು ಸೇವಿಸಬಾರದು.
• ಸಿಂಪಡಣೆ ಕಾರ್ಯವನ್ನು ಕೈಗೊಳ್ಳುವವರು ಸಿಂಪಡಣೆಗೆ ಮುಂಚೆ ಹೊಟ್ಟೆ ತುಂಬಾ ಊಟ ಮಾಡಿದ ನಂತರ ಸಿಂಪಡಿಸಬೇಕು.
• ಸಿಂಪಡಣೆ ಸಮಯದಲ್ಲಿ ಅಸ್ವಸ್ಥತೆ ಉಂಟಾದರೆ ರೋಗಿಯನ್ನು ವೈದ್ಯರ ಬಳಿಗೆ ಕೊಂಡೊಯ್ಯುವ ಮೊದಲು ತುರ್ತಾಗಿ ಕೆಲವು ಪ್ರಥಮ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು.
ಕೀಟನಾಶಕಗಳ ಬಳಕೆಯ ನಂತರ ಅನುಸರಿಸುವ ಸುರಕ್ಷಿತಾ ಕ್ರಮಗಳು
• ಕೀಟನಾಶಕಗಳ ದ್ರಾವಣ ತಯಾರಿಸಿದ ನಂತರ ಉಳಿದ ಕೀಟನಾಶಕವನ್ನು ತನ್ನ ಮೂಲ/ನಿಜ ಡಬ್ಬ /ಸೀಸೆ/ಚೀಲಗಳಲ್ಲಿಯೇ ಶೇಖರಿಸಬೇಕು.
• ಸಿಂಪಡಣೆಯ ನಂತರ ಧರಿಸಿದ ಬಟ್ಟೆಗಳನ್ನು ಬದಲಾಯಿಸಿ ಅವುಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದು, ಸಾಬೂನಿನಿಂದ ಸ್ನಾನ ಮಾಡಿದ ನಂತರ ಆಹಾರ ಸೇವಿಸಬೇಕು.
• ಖಾಲಿಯಾದ ಕೀಟನಾಶಕಗಳ ಚೀಲ/ಸೀಸೆ/ಡಬ್ಬಗಳನ್ನು ನಾಶಪಡಿಸಿ ಮಣ್ಣಿನಲ್ಲಿ ಹೂತು ಹಾಕಬೇಕು. ಅವುಗಳನ್ನು ಆಹಾರ ಪದಾರ್ಥಗಳ ಸಂಗ್ರಹಣೆಗೆ ಅಥವಾ ಗೃಹ ಬಳಕೆಗೆ ಉಪಯೋಗಿಸಬಾರದು.
• ಕೀಟನಾಶಕಗಳನ್ನು ಅಡಿಗೆಮನೆ, ಆಹಾರ ಧಾನ್ಯ, ಪಶು ಆಹಾರ ಮತ್ತು ಕುಡಿಯುವ ನೀರಿರುವ ಸ್ಥಳಗಳಲ್ಲಿ ಶೇಖರಿಸಬಾರದು.
• ಕೀಟನಾಶಕಗಳನ್ನು ಮಕ್ಕಳಿಗೆ ಮತ್ತು ಸಾಕುಪ್ರಾಣಿಗಳಿಗೆ ಸಿಗದಂತೆ ಸುರಕ್ಷಿತವಾದ ಸ್ಥಳದಲ್ಲಿಟ್ಟು ಬೀಗ ಹಾಕಬೇಕು.
• ಕೀಟನಾಶಕಗಳನ್ನು ತಂಪಾದ ಹಾಗೂ ನೇರವಾಗಿ ಸೂರ್ಯನ ಕಿರಣಗಳು ಬೀಳದಂತಹ ಸ್ಥಳದಲ್ಲಿ ಶೇಖರಿಸಬೇಕು.
• ಸಿಂಪಡಣೆ ಮಾಡಿದ ನಂತರ ಕುಡಿಯಲು ಉಪಯೋಗಿಸುವ ಬಾವಿ, ಕೆರೆ, ಕೊಳಗಳಲ್ಲಿ ಉಳಿದ ದ್ರಾವಣ ಅಥವಾ ಕೀಟೌಷಧಿಯನ್ನು ಚೆಲ್ಲುವ ಮತ್ತು ಸ್ಪ್ರೇಯರ್‍ಗಳನ್ನು ತೊಳೆಯುವುದು ಮಾಡಬಾರದು.
• ಸಿಂಪಡಣಾ ದ್ರಾವಣ ತಯಾರಿಸಲು ಬಳಸಿದ ಪಾತ್ರೆಗಳನ್ನು ಆಹಾರ ಶೇಖರಣೆ, ಗೃಹ ಬಳಕೆ ಅಥವಾ ದನಕರುಗಳಿಗೆ ನೀರು ಕುಡಿಸಲು ಉಪಯೋಗಿಸಬಾರದು.
• ಕಳೆನಾಶಕಗಳನ್ನು ಸಿಂಪಡಿಸಲು ಬಳಸಿದ ಸ್ಪ್ರೇಯರ್‍ಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿದ ನಂತರವೇ ಕೀಟನಾಶಕಗಳ ಬಳಕೆಗೆ ಉಪಯೋಗಿಸಬೇಕು.
ವಿಷಪೂರಿತ ರೋಗಿಯಲ್ಲಿ ಕಂಡುಬರುವ ಬಾಹ್ಯ ಲಕ್ಷಣಗಳು
• ತಲೆನೋವು, ತಲೆಸುತ್ತು, ವಾಂತಿ, ವಾಕರಿಕೆ, ನಡುಕ, ಭೇದಿ, ಬೆವರುವಿಕೆ, ದೃಷ್ಟಿ ಮಾಂದ್ಯತೆ, ಜೊಲ್ಲುಸುರಿತ, ಕುಗ್ಗಿದ ಕಣ್ಣುರೆಪ್ಪೆ, ಒದ್ದಾಟ, ಭಯಭೀತಿ, ಆತಂಕ, ಅಲರ್ಜಿ, ಕಣ್ಣು ಉರಿ, ಚರ್ಮಕೆರೆತ, ಹೊಟ್ಟೆನೋವು, ನರದೌರ್ಬಲ್ಯ, ಮಾತಿನಲ್ಲಿ ಬಿಕ್ಕಳಿಕೆ ಇತ್ಯಾದಿ.
ಪ್ರಥಮ ಚಿಕಿತ್ಸೆ
• ಕೀಟನಾಶಕಗಳನ್ನು ಸೇವಿಸಿದಾಗ ಅಥವಾ ಉಸಿರಾಟದಿಂದ ವಿಷಪೂರಿತ ಬಾಹ್ಯ ಲಕ್ಷಣಗಳು ಕಂಡು ಬಂದಾಗ ತಕ್ಷಣ ಬಿಸಿ ನೀರಿನಲ್ಲಿ 15 ಗ್ರಾಂ. ಉಪ್ಪು ಮತ್ತು 1 ಚಮಚ ಸಾಸಿವೆ ಪುಡಿಯನ್ನು ಬೆರೆಸಿ ವಾಂತಿ ಮಾಡುವವರೆಗೆ ಮೇಲಿಂದ ಮೇಲೆ ರೋಗಿಗೆ ಕುಡಿಸಿ ಅಥವಾ ಬಲಗೈ ಎರಡು ತೋರುಬೆರಳುಗಳನ್ನು ರೋಗಿಯ ಬಾಯಿಯೊಳಗೆ ಹಾಕಿ ವಾಂತಿ ಮಾಡಿಸಬೇಕು. ಪೂರ್ತಿಯಾಗಿ ವಿಷ ವಾಂತಿಯಲ್ಲಿ ಹೊರಬಂದ ನಂತರ ಹೊಟ್ಟೆಯಲ್ಲಿ ಸಮಾಧಾನವಿಲ್ಲದಂತಾದರೆ ಕೋಳಿ ಮೊಟ್ಟೆಯ ಬಿಳಿಭಾಗ ಅಥವಾ ಆಲೂಗಡ್ಡೆಯ ಸಾರವನ್ನು ಕುಡಿಸಬೇಕು.
• ರೋಗಿಗೆ ಉಸಿರಾಟದ ತೊಂದರೆಯಿದ್ದಲ್ಲಿ ತಣ್ಣೀರು ಬಟ್ಟೆಯಿಂದ ತೊಳೆದು ನಂತರ ತಂಪಾದ ಮತ್ತು ಚೆನ್ನಾಗಿ ಗಾಳಿಯಾಡುವ ಸ್ಥಳಕ್ಕೆ (ರೋಗಿ ನಡೆಯಬಾರದು) ಕೊಂಡೊಯ್ಯಬೇಕು.
• ರೋಗಿಯ ಮೈ ತಣ್ಣಗಾಗದಂತೆ ತೆಳು ಹೊದಿಕೆಯನ್ನು ಹೊದಿಸಬೇಕು.
• ಕೀಟನಾಶಕಗಳು ಆಕಸ್ಮಿಕವಾಗಿ ಕಣ್ಣಿನೊಳಗೆ ಸೇರಿದ್ದಲ್ಲಿ ಕಣ್ಣನ್ನು ಚೆನ್ನಾಗಿ ಶುದ್ಧ ನೀರಿನಿಂದ ಪದೇ ಪದೇ ತೊಳೆಯಬೇಕು.
• ನಂತರ ಖಾಲಿಯಾದ ಕೀಟನಾಶಕದ ಸೀಸೆ/ಡಬ್ಬ/ಚೀಲ ಮತ್ತು ಅದರ ಜೊತೆಗಿನ ಹಸ್ತ ಪ್ರತಿಯೊಂದಿಗೆ ವೈದ್ಯರನ್ನು ಕೂಡಲೀ ಸಂಪರ್ಕಿಸಬೇಕು.