ತೋಟಗಾರಿಕೆ ಸಾಧನ ಮತ್ತು ಸಲಕರಣೆಗಳು
ದೇಶದಲ್ಲಿ ಕೃಷಿಗೆ ಅನುಕೂಲಕರ ವಾತಾವರಣವಿದ್ದು, ವಿವಿಧ ಕೃಷಿ ವಲಯಗಳ ಒಟ್ಟು ಉತ್ಪಾದನೆಯಲ್ಲಿ ತೋಟಗಾರಿಕೆ ಬೆಳೆಗಳ ಕೊಡುಗೆ ಬಹಳ ಮಹತ್ತರವಾದುದು. ಸಸ್ಯಗಳ ಉತ್ಪಾದನೆ, ಗಿಡ ನೆಡುವುದು, ಕಳೆ ನಿರ್ವಹಣೆ, ಮಣ್ಣು ಸೇರಿಸುವುದು, ನೀರಾವರಿ, ಸಸ್ಯ ಸಂರಕ್ಷಣೆ, ಕೊಯ್ಲು, ಪ್ಯಾಕಿಂಗ್ ಮುಂತಾದ ಹಲವು ಕೆಲಸಗಳನ್ನು ಜಮೀನಿನಲ್ಲಿ ನಿರ್ವಹಿಸಬೇಕು. ಈ ಕೆಲಸಗಳೆಲ್ಲಾ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಉಪಯೋಗಿಸುವ ಸಲಕರಣೆಗಳೊಂದಿಗೆ ಕೆಲವೊಂದು ವಿಶೇಷ ಸಾಧನ ಮತ್ತು ಸಲಕರಣೆಗಳ ಅವಶ್ಯಕತೆ ಇದೆ. ಸಲಕರಣೆಗಳು ಕಾರ್ಮಿಕರ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಬೇಸಾಯ ವೆಚ್ಚ ಕಡಿಮೆಯಾಗುತ್ತದೆ.
ಕೊಡಲಿ
ಸಾಮಾನ್ಯ ಸಾಧನವಾಗಿದ್ದು ಒಂದು ಬದಿಯಲ್ಲಿ ಹರಿತವಾಗಿದ್ದು ಇನ್ನೊಂದು ತುದಿಯಲ್ಲಿ ಹಿಡಿ ಅಥವಾ ಕಾವು ಹಾಕಲು ರಂಧ್ರವಿದೆ. ಕೊಡಲಿ ವಿವಿಧ ಗಾತ್ರ ಮತ್ತು ಆಕಾರದಲ್ಲಿ ದೊರೆಯುತ್ತದೆ. ಕೈಕೊಡಲಿ, ಮರ ಕತ್ತರಿಸುವ ಕೊಡಲಿ, ಮರ ಸೀಳುವ ಕೊಡಲಿ ಮುಂತಾದ ನಮೂನೆಗಳಿವೆ. ಕಬ್ಬಿಣದಿಂದ ಮಾಡಲ್ಪಟ್ಟು ಇದರ ಹರಿತವಾದ ಕೊನೆಯನ್ನು ಗಡಸುಗೊಳಿಸಲಾಗಿದೆ. ಇದೊಂದು ವಿವಿಧೋಪಯೋಗಿ ಸಾಧನವಾಗಿದ್ದು ಮರ ಕತ್ತರಿಸಲು, ಕೊಂಬೆ ಕತ್ತರಿಸಲು, ಸೌದೆಗಾಗಿ ಮರ ಸೀಳಲು, ಮರದ ದಿಮ್ಮಿಯನ್ನು ನಯಗೊಳಿಸುವ ಮುಂತಾದ ಕೆಲಸಗಳಲ್ಲಿ ಬಳಸುತ್ತಾರೆ. ಕೈಕೊಡಲಿಯನ್ನು ಕಾಡು ಕಡಿಯಲು ಸಹ ಬಳಸುತ್ತಾರೆ.
ಕತ್ತಿ
ತೋಟಗಾರಿಕೆಯಲ್ಲಿ ವಿವಿಧ ರೀತಿಯ ಕತ್ತಿಗಳನ್ನು ಬಳಸುತ್ತಾರೆ. ಇವುಗಳು ವಿವಿಧ ಗಾತ್ರ ಮತ್ತು ಆಕಾರಗಳನ್ನು ಹೊಂದಿವೆ. ಕತ್ತಿಗಳನ್ನು ಸ್ಟೀಲ್ ಸ್ಪ್ರಿಂಗ್ ಪಟ್ಟಿಯಿಂದ ಹೆಚ್ಚಾಗಿ ತಯಾರಿಸುತ್ತಾರೆ. ಕೆಲಸ ಮಾಡುವ ಬದಿಯನ್ನು ತಟ್ಟಿ ಹರಿತಗೊಳಿಸಲಾಗುತ್ತದೆ. ಹಿಡಿಯುವ ತುದಿಗೆ ಮರದ ಹಿಡಿಕೆಯನ್ನು ತೂರಿಸಲಾಗುತ್ತದೆ. ಇನ್ನೊಂದು ತುದಿಯು ಕತ್ತರಿಸುವ ಕಡೆಗೆ ಸ್ವಲ್ಪ ಬಾಗಿರುತ್ತದೆ. ಕತ್ತಿಯ ಎರಡೂ ಬದಿಗಳನ್ನು ಕೆಲಸಕಾರ್ಯಗಳಿಗೆ ಬಳಸುತ್ತಾರೆ. ಇದೊಂದು ಕತ್ತರಿಸುವ ಸಾಧನವಾಗಿದ್ದು ವಿವಿಧ ಕೃಷಿ ಕಾರ್ಯಗಳಲ್ಲಿ ಮತ್ತು ಮನೆ ಕೆಲಸದಲ್ಲಿ ಬಳಸುತ್ತಾರೆ
ಕಸಿ ಚಾಕು
ಪ್ರತಿಯೊಬ್ಬ ಮಾಲಿಯ ಪ್ರಮುಖ ಸಾಧನವಾಗಿದೆ. ಉತ್ತಮ ಕಾರ್ಬನ್ ಸ್ಟೀಲ್‍ನಿಂದ ತಯಾರಿಸಲ್ಪಟ್ಟ ಅಲಗನ್ನು ಮಡಚಬಹುದು ಮತ್ತು ಮರದ ಅಥವಾ ಪೈಬರ್‍ನ ಹಿಡಿಕೆಯನ್ನು ಹೊಂದಿರುತ್ತದೆ. ಒಂದು ಬದಿಯಲ್ಲಿ ಉದ್ದಕ್ಕೂ ಹರಿತವಾಗಿರುತ್ತದೆ ಇನ್ನೊಂದು ತುದಿಯಲ್ಲಿ ಹರಿತವಾಗಿದ್ದು ಸ್ವಲ್ಪ ಮೇಲಕ್ಕೆ ಬಾಗಿರುತ್ತದೆ ಈ ಭಾಗವನ್ನು ಟಿ ಕಸಿಮಾಡಲು, ಕಸಿ ಕಣ್ಣನ್ನು ಒಳಸೇರಿಸಲು ಬಳಸುತ್ತಾರೆ. ಹರಿತವಾದ ಬದಿಯನ್ನು ಕಸಿ ಕೊಂಬೆ, ಎಲೆ, ಕಸಿ ಕಣ್ಣು ಕತ್ತರಿಸಲು ಬಳಸುತ್ತಾರೆ. ಕೆಲವೊಂದು ಕಸಿ ಚಾಕುಗಳ ಒಂದು ಕಡೆಯಲ್ಲಿ ಬಡ್ಡರ್ ಎಂದು ಕರೆಯಲ್ಪಡುವ ಪ್ಲಾಸ್ಟಿಕ್ ಬ್ಲೇಡು ಇರುತ್ತದೆ. ಇದನ್ನು ಗಿಡದ ಸಿಪ್ಪೆ ಮೇಲೆತ್ತಿ ಕಸಿ ಕಣ್ಣು ಸೇರಿಸಲು ಬಳಸುತ್ತಾರೆ. ಅಲಗು ಬಳಕೆಯಲ್ಲಿ ಇಲ್ಲದಿರುವಾಗ ಹಿಡಿಕೆಯೊಳಗೆ ಸೇರಿಸಲ್ಪಡುತ್ತದೆ.
ಗ್ರಾಫ್ಟಿಂಗ್ ಚಾಕು
ಗ್ರಾಫ್ಟಿಂಗ್ ಚಾಕು ಸಸ್ಯಾಭಿವೃದ್ದಿಯಲ್ಲಿ ಬಳಸುವ ಇನ್ನೊಂದು ಸಾಧನವಾಗಿದ್ದು ಮನೆ ಬಳಕೆಯ ಕತ್ತಿಯನ್ನು ಹೋಲುತ್ತದೆ. ಇದು ಸಹ ಅಲಗು ಮತ್ತು ಹಿಡಿಯನ್ನು ಹೊಂದಿದೆ. ಅಲಗಿನ ಒಂದು ಬದಿಯು ಹರಿತವಾಗಿದ್ದು ಇನ್ನೊಂದು ಕಡೆ ಮೊಂಡಾಗಿದೆ. ಅಲಗನ್ನು ಬಳಸದೇ ಇದ್ದಾಗ ಮಡಚಿ ಹಿಡಿಯೊಳಗೆ ಸೇರಿಸಬಹುದು. ಉತ್ತಮ ಕಾರ್ಬನ್ ಸ್ಟೀಲಿನಿಂದ ತಯಾರಿಸಲ್ಪಟ್ಟ ಸಲಕರಣೆ ಕಸಿ ಚಾಕುವಿನಂತೆ ಕೆಲಸಕ್ಕೆ ಬಳಸಲ್ಪಡುತ್ತದೆ. ಪ್ರಮುಖವಾಗಿ ವೆನೀರ್, ಕ್ಲೆಪ್ಟ್ ಮತ್ತು ಸ್ಟೋನ್ ಗ್ರಾಫ್ಟಿಂಗ್‍ನಲ್ಲಿ ಕಸಿ ಕೊಂಬೆ ಕತ್ತರಿಸಲು ಬಳಸುತ್ತಾರೆ. ಹಿಡಿಯ ಮೇಲ್ಭಾಗದಲ್ಲಿ ಕೊಂಬು/ಪ್ಲಾಸ್ಟಿಕ್/ ಹಿತ್ತಾಳೆ ಪಟ್ಟಿ ಅಳವಡಿಸಲಾಗಿರುತ್ತದೆ. ಇದಲ್ಲದೆ ಒಂದು ಸ್ಟೀಲ್‍ನ ಸ್ಪ್ರಿಂಗ್‍ನಂತ ಕೊಂಡಿಯಿದ್ದು, ಕೆಲಸ ಮಾಡುವಾಗ ಅಲಗನ್ನು ಬಿಗಿಯಾಗಿ ಹಿಡಿದಿಡುತ್ತದೆ.
ಕಸಿ ಮತ್ತು ಗ್ರಾಫ್ಟಿಂಗ್ ಚಾಕು
ಕಸಿ ಮತ್ತು ಗ್ರಾಫ್ಟಿಂಗ್ ಕೆಲಸಕ್ಕಾಗಿ ಉಪಯೋಗಿಸುವ ವಿವಿದೊದ್ಧೇಶ ಸಾಧನವಾಗಿದೆ. ಕಸಿ ಮತ್ತು ಗ್ರಾಫ್ಟಿಂಗ್ ಮಾಡಲು ಎರಡು ಬೇರೆ ಬೇರೆ ಅಲಗುಗಳಿದ್ದು ಒಂದು ಬದಿಯಲ್ಲಿ ಹಿಡಿಗೆ ಸೇರಿಸಲ್ಪಟ್ಟಿದೆ. ಹಿಡಿಯ ಇನ್ನೊಂದು ಬದಿಯಲ್ಲಿ ಪ್ಲಾಸ್ಟಿಕ್ ಬಡ್ಡರ್ ಇದೆ. ಉಪಯೋಗದಲ್ಲಿ ಇಲ್ಲದಿದ್ದಾಗ ಎರಡು ಅಲಗುಗಳನ್ನು ಮಡಚಿ ಹಿಡಿಯೊಳಗೆ ಸೇರಿಸಬಹುದು. ಅಲಗನ್ನು ಕಾರ್ಬನ್ ಸ್ಟೀಲ್‍ನಿಂದ ತಯಾರಿಸಲ್ಪಟ್ಟಿದ್ದು ಗಡುಸಾಗಿದೆ. ಮಾಲಿಯ ಉಪಯುಕ್ತ ಸಾಧನವಾಗಿದ್ದು ವ್ಯಾಪಕವಾಗಿ ಹಣ್ಣು, ತರಕಾರಿ ಮತ್ತು ವಾಣಿಜ್ಯ ಬೆಳೆಯ ತೋಟಗಳಲ್ಲಿ ಹೊಸ ತಳಿಗಳ ಅಭಿವೃದ್ದಿಗಾಗಿ ಕಸಿ ಮತ್ತು ಗ್ರಾಫ್ಟಿಂಗ್ ಕೆಲಸಗಳಲ್ಲಿ ಬಳಸುತ್ತಾರೆ. ಎರಡು ಅಲಗುಗಳನ್ನು ಸೇರಿಸಲು ಹಿಡಿಯು ದಪ್ಪವಾಗಿದೆ. ಹಿಡಿಯ ಹೊರಭಾಗ ಪ್ಲಾಸ್ಟಿಕ್, ಕೊಂಬು ಅಥವಾ ಮರದಿಂದ ಮಾಡಲ್ಪಟ್ಟಿದೆ. ಒಳಭಾಗದಲ್ಲಿ ಅಲ್ಯುಮಿನಿಯಂ ಅಥವಾ ಹಿತ್ತಾಳೆಯ ಪಟ್ಟಿಯಿದೆ ಕೆಲಸಮಾಡುವಾಗ ಅಲಗನ್ನು ಭದ್ರವಾಗಿ ಹಿಡಿದಿಡಲು ಸ್ಟೀಲ್ ಕೊಂಡಿಯಿದೆ.
ಸವರುವ ಮತ್ತು ಕೊಚ್ಚುವ ಕತ್ತಿ
ಗಾಳಿಯಾಡಲು, ಬೆಳಕು ಬೀಳಲು, ಆಕಾರ ಕೊಡಲು, ಬೇಡವಾದ ಗಿಡದ ಅಥವಾ ಮರದ ರೆಂಬೆ ಕೊಂಬೆಗಳನ್ನು ತೆಗೆಯುವುದರಿಂದ ಉತ್ತಮ ಇಳುವರಿ ದೊರೆಯುತ್ತದೆ. ಇದನ್ನು ಸವರುವುದು ಎಂದು ಕರೆಯುತ್ತಾರೆ. ಸವರುವ ಮತ್ತು ಕೊಚ್ಚುವ ಕತ್ತಿಗೆ ಅಲಗು ಮತ್ತು ಹಿಡಿಯ ಭಾಗವಿರುತ್ತದೆ. ಅಲಗಿನ ತುದಿ ಕೊಕ್ಕೆಯಂತೆ ಬಾಗಿರುವುದರಿಂದ ಕೊಂಬೆ ಮತ್ತು ರೆಂಬೆ ಕತ್ತರಿಸಲು ಅಥವಾ ಕೊಚ್ಚಲು ಅನುಕೂಲವಾಗಿರುತ್ತದೆ.
ವಿವಿದೊದ್ಧೇಶ ತುಂಡರಿಸುವ ಕತ್ತಿ
ಸ್ಪ್ರಿಂಗ್ ಸ್ಟೀಲ್ ಅಥವಾ ಮೆದು ಸ್ಟೀಲ್‍ನಿಂದ ತಯಾರಿಸಲಾಗುತ್ತದೆ. ಅಲಗು ಮತ್ತು ಹಿಡಿಕೆ ಎಂಬ ಎರಡು ಭಾಗಗಳಿವೆ. ಅಲಗಿನ ತುದಿಯ ಕೊಕ್ಕೆಯಂತೆ ಬಾಗಿರುತ್ತದೆ ಮತ್ತು ಅಲಗಿನ ಒಂದು ಬದಿ ಹರಿತವಾಗಿರುತ್ತದೆ. ಅಲಗನ್ನು ಗಡಸುಗೊಳಿಸಲಾಗಿರುತ್ತದೆ. ಹಿಡಿಯನ್ನು ಬಿದಿರು ಅಥವ ಮರದಿಂದ ತಯಾರಿಸಲಾಗುತ್ತದೆ. ಕತ್ತಿ ಮರ ಮತ್ತು ಬಿದಿರು ಕತ್ತರಿಸಲು ಬಳಕೆಯಾಗುತ್ತದೆ.
ಸಿಕೇಚರ್
ಕಸಿ ಚಾಕುವಿನಿಂದ ಕತ್ತರಿಸಲಾಗದ ರೆಂಬೆಗಳನ್ನು ತುಂಡರಿಸಲು ಸಿಕೇಚರ್ ಬಳಸುತ್ತಾರೆ. ಮಾಲಿಗಳಿಗೆ ಅವಶ್ಯವಾದ ಸಾಧನವಾಗಿದ್ದು ಉಪಯೋಗಿಸಲು ಸುಲಭವಾಗಿದೆ. ರೆಂಬೆ, ಟೊಂಗೆಗಳನ್ನು ಕತ್ತರಿಸಲು ವಿವಿಧ ರೀತಿಯ ಸಿಕೇಚರ್‍ಗಳು ಬಳಕೆಯಲ್ಲಿವೆ. ಸಿಕೇಚರುಗಳಿಗೆ ಕತ್ತರಿಸುವ ಒಂದು ಅಥವಾ ಎರಡು ಅಲಗು ಮತ್ತು ಹಿಡಿಕೆಯಿದೆ. ಇವೆರಡರ ಮಧ್ಯೆ ಅಳವಡಿಸಿದ ಸ್ಪ್ರಿಂಗ್‍ನ ಸಹಾಯದಿಂದ ಅಲಗು ಮತ್ತು ಹಿಡಿಕೆಯನ್ನು ತೆಗೆಯಬಹುದು. ಒಂದು ಚಿಕ್ಕ ಕೊಂಡಿಯಂತಿರುವ ಸಾಧನದಿಂದ ಸಿಕೇಚರನ್ನು ಮುಚ್ಚಿದ ಸ್ಥಿತಿಯಲ್ಲಿ ಇಡಬಹುದು. ಹಣ್ಣಿನ ತೋಟದಲ್ಲಿ ಬೇಡವಾದ ಕೊಂಬೆ, ರೆಂಬೆ, ಬಳ್ಳಿ, ಕಸಿಕೊಂಬೆ, ಎಲೆ ಕತ್ತರಿಸಲು ಸಿಕೇಚರನ್ನು ಬಳಸುತ್ತಾರೆ.
ವಾಯು ಒತ್ತಡ ಸಿಕೇಚರ್‍ಗಳು
ಗಾಳಿ ಒತ್ತಡವನ್ನು ಉಪಯೋಗಿಸಿ ಗಿಡ ಸವರಲು ಈ ಸಿಕೇಚರನ್ನು ಬಳಸುತ್ತಾರೆ. ಇದರ ಒಂದು ಅಲಗು ನಿಶ್ಚಲವಾಗಿರುತ್ತದೆ ಮತ್ತು ಕತ್ತರಿಸುವ ಅಲಗು ಪಿಸ್ಟನ್ ಸಹಾಯದಿಂದ ಕೆಲಸ ಮಾಡುತ್ತದೆ. ಪಿಸ್ಟನ್‍ನ ಒಂದು ತುದಿಗೆ ಒತ್ತಡ ಒದಗಿಸುವ ಮತ್ತು ಸಾಗಿಸಲು ಸಾಧ್ಯವಾದ ಸಿಲಿಂಡರು ಇರುತ್ತದೆ. ಕರಾರುವಾಕ್ಕಾಗಿ, ಸುಲಭವಾಗಿ, ಕಷ್ಟಪಡದೆ ಕೊಂಬೆಗಳನ್ನು ಕತ್ತರಿಸಲು ಸಾಧ್ಯವಾಗುತ್ತದೆ.
ಪವರ್ ಸಾ
ಒಬ್ಬನಿಂದ ಉಪಯೋಗಿಸಲ್ಪಡುವ ಹಗುರವಾದ ಯಂತ್ರವಾಗಿದೆ. ಸರಪಳಿಗೆ ಜೋಡಿಸಿದ ಚಿಕ್ಕ ಕಟ್ಟರುಗಳು ಪಟ್ಟಿಯ ಮೇಲೆ ಸುತ್ತುತ್ತವೆ. ಸರಪಳಿಯನ್ನು ಸ್ಪ್ರಾಕೆಟ್ಟಿಗೆ ಅಳವಡಿಸಲಾಗಿರುತ್ತದೆ. ಸ್ಪ್ರಾಕೆಟ್ಟನ್ನು ಪೆಟ್ರೊಲ್ ಅಥವಾ ವಿದ್ಯುತ್‍ನ ಸಹಾಯದಿಂದ ಜೋರಗಿ ತಿರುಗಿಸಲಾಗುತ್ತದೆ. ಸ್ಪ್ರಾಕೆಟ್ಟಿನೊಂದಿಗೆ ಸರಪಳಿಯು ತಿರುಗಲ್ಪಟ್ಟು ಕಟ್ಟರುಗಳ ಸಹಾಯದಿಂದ ಮರ ಅಥವಾ ಕೊಂಬೆಯನ್ನು ಕತ್ತರಿಸಬಹುದು.
ಬೇಲಿ ಸವರುವ ಕತ್ತಿ
ಬೇಲಿಯನ್ನು ಸವರಲು, ಕತ್ತರಿಸಲು ಕೈಯಿಂದ ಬಳಸುವ ಸಾಧನ ಉದ್ದನೆಯ ಅಲಗಿದ್ದು ಎರಡು ಬದಿಯೂ ಹರಿತವಾಗಿದೆ. ಒಂದು ಬದಿಯಲ್ಲಿ ಹಿಡಿಕೆಯನ್ನು ಸೇರಿಸಲಾಗಿದೆ. ಬ್ಲೇಡಿನ ಎರಡು ಬದಿಯಿಂದ ಬೇಲಿಯನ್ನು ಸವರಬಹುದು. ಸವರು ಕತ್ತರಿಯನ್ನು ಬೇಲಿ ಸವರಲು ಮತ್ತು ಬೇಲಿಗೆ ಆಕಾರ ಕೊಡಲು ಉಪಯೋಗಿಸಲಾಗುತ್ತದೆ. ಉದ್ಯಾನದಲ್ಲಿ ಅಡ್ಡಾದಿಡ್ಡಿ ಬೆಳೆದ ಪೊದರುಗಳನ್ನು ಕತ್ತರಿಸಲು ಸಹ ಸವರು ಕತ್ತರಿಯನ್ನು ಬಳಸಬಹುದು.
ಬೇಲಿ ಕತ್ತರಿ
ಬೇಲಿ ಕತ್ತರಿಯಲ್ಲಿ ಎದುರು ಬದುರಾದ ಎರಡು ಅಲಗುಗಳಿವೆ. ಮೇಲಿನ ಬ್ಲೇಡಿನಲ್ಲಿ ವಜ್ರಾಕೃತಿಯ ಹಲ್ಲುಗಳಿದ್ದು ಎರಡು ಬದಿಯಲ್ಲಿ ಹರಿತವಾಗಿದ್ದು, ಹೆಚ್ಚು ಸಮಯ ಬಾಳಿಕೆ ಬರುವಂತೆ ತಯಾರಿಸಲಾಗಿದೆ. ಮೋಟಾರಿನ ಸಹಾಯದಿಂದ ಚಲಾಯಿಸಲಾಗುವ ಕತ್ತರಿಯಿಂದ 16 ಮಿ.ಮೀ. ದಪ್ಪದ ಕೊಂಬೆಗಳನ್ನು ಸಹ ಕತ್ತರಿಸಬಹುದು. ಎಡ, ಬಲ, ಮೇಲೆ ಅಥವಾ ಕಳಗೆ ವಿವಿಧ ಕೋನಗಳಲ್ಲಿ ಕೆಲಸ ಮಾಡುವಾಗ ಹಾರಾಡುವ ಎಲೆ, ಕೊಂಬೆಗಳಿಂದ ರಕ್ಷಣೆ ಪಡೆಯಲು ತಡೆಯನ್ನು ಅಳವಡಿಸಲಾಗಿದೆ. ಬಳಕುವ ವೈರಿನಿಂದ ಮೋಟಾರಿಗೆ ವಿದ್ಯುತ್ ಸಂಪರ್ಕ ಕೊಡಲಾಗಿರುವುದರಿಂದ ಕತ್ತರಿಯನ್ನು ತೋಟದ ಬೇಕಾದೆಡೆ ಸಾಗಿಸಲು ಅನುಕೂಲವಾಗಿದೆ. ಹಿಡಿಕೆಯಲ್ಲಿ ಸ್ವಿಚ್ಚನ್ನು ಕೊಟ್ಟಿರುವುದರಿಂದ ಸುರಕ್ಷಿತವಾಗಿ ಮತ್ತು ಕ್ಷಿಪ್ರವಾಗಿ ಬಳಸಬಹುದು. ಬೇಲಿ, ಪೊದೆ ಸವರಲು ಬಳಸುವುದಲ್ಲದೆ ಹೂತೋಟದ ಗಿಡಗಳಿಗೆ ವಿವಿಧ ಗಾತ್ರ ಮತ್ತು ಆಕಾರಗಳನ್ನು ಕೊಡಲು ಬಳಸುತ್ತಾರೆ. ಇದರಿಂದ ಹೂ ತೋಟದ ಅಂದ ಹೆಚ್ಚುತ್ತದೆ.
ಮರಕತ್ತರಿಸುವ ಕತ್ತರಿ
ಒಂದು ಸ್ಥಾನದಲ್ಲಿ ನಿಂತು ಮರವನ್ನು ಸವರಲು ಕೈಯಿಂದ ಉಪಯೋಗಿಸುವ ಸಾಧನ. ಕಾರ್ಮಿಕರಿಗೆ ತಲುಪಲಾಗದ ರೆಂಬೆಗಳನ್ನು ಈ ಕತ್ತಿಯಿಂದ ತುಂಡರಿಸುತ್ತಾರೆ. ಸಿಕೇಚರು ಅಥವಾ ಸವರು ಕತ್ತರಿಯಂತೆ ಎರಡು ಅಲಗುಗಳಿದ್ದು ಸಾಕೆಟ್ಟಿಗೆ ಜೋಡಿಸಲ್ಪಟ್ಟು, ಮರದ ಹಿಡಿಗಳನ್ನು ಹೊಂದಿದೆ.
ಫಾರೆಸ್ಟರು ಕತ್ತರಿ
ಮರ ಕತ್ತರಿಸುವ ಕತ್ತರಿಯಂತಿದ್ದು ಒಂದು ಕಡೆ ನಿಂತು ಕೊಂಬೆಗಳನ್ನು ಕತ್ತರಿಸಲು ಬಳಸುತ್ತಾರೆ. ಉದ್ದನೆಯ ಹಿಡಿಯನ್ನು ಹೊಂದಿದ್ದು ಕತ್ತರಿಸಲು ಹೆಚ್ಚಿನ ಬಲವನ್ನು ಕೊಡಲು ಸಾಧ್ಯವಾಗಿದೆ. ಅಲಗು ಮತ್ತು ಉದ್ದನೆಯ ಹಿಡಿಯನ್ನು ಸಾಕೆಟ್ಟಿನಲ್ಲಿ ಸೇರಿಸಲಾಗಿದೆ. ಉದ್ದನೆಯ ಹಿಡಿಯ ಸಹಾಯದಿಂದ ಕೈಗೆ ಎಟುಕಲಾರದ ಮತ್ತು 60 ಮಿ.ಮೀ.ನಷ್ಟು ದಪ್ಪದ ಬೇಡವಾದ ಕೊಂಬೆಗಳನ್ನು ಕೊಂಬೆಗಳನ್ನು ಕತ್ತರಿಸಲು ಸಾಧ್ಯವಿದೆ. ತೋಟದಲ್ಲಿ ಅಥವಾ ಕಾಡಿನಲ್ಲಿ ಇದು ಉಪಯೋಗಕ್ಕೆ ಬರುತ್ತದೆ.
ಹುಲ್ಲು ಕತ್ತರಿ
ಹುಲ್ಲು ಹಾಸು ಕತ್ತರಿಸಲು ಕೈಯಿಂದ ಉಪಯೋಗಿಸುವ ಸಾಧನ. ವಿವಿಧ ರೀತಿಯ ಹುಲ್ಲು ಕತ್ತರಿಗಳು ಬಳಕೆಯಲ್ಲಿವೆ. ಕತ್ತರಿಸುವ ಅಲಗುಗಳು ಇದರ ಮುಖ್ಯಭಾಗ. ಅಲಗುಗಳನ್ನು ‘v’ ಆಕಾರzಲ್ಲಿ ಸ್ಪ್ರಿಂಗ್‍ನೊಂದಿಗೆ ಹಿಡಿಕೆಗೆ ಸೇರಿಸಲಾಗಿದೆ ಇದು ಕತ್ತರಿಯನ್ನು ಯವಾಗಲೂ ತೆರೆದ ಸ್ಥಿತಿಯಲ್ಲಿಡುತ್ತದೆ. ಹುಲ್ಲು ಮತ್ತು ಹುಲ್ಲು ಹಾಸಿನ ಅಂಚನ್ನು ಕತ್ತರಿಸಲು ಬಳಸುತ್ತಾರೆ. ಮೆದು ಸಸಿಗಳನ್ನು ಕತ್ತರಿಸಲು ಸಹ ಬಳಸಬಹುದು.
ಹೂ ತೋಟದ ಕತ್ತಿ (ಕುಡುಗೋಲು)
ಕುಳಿತು ಕೊಂಡು ಕೈಯಿಂದ ಬಳಸಬಹುದಾದ ಒಂದು ಸಲಕರಣೆ. ಲೋಹದಿಂದಾದ ಕತ್ತಿಯಲ್ಲಿ ಒಂದು ಬದಿ ಹರಿತವಾಗಿದ್ದು ಅಲಗನ್ನು ಮರದ ಹಿಡಿಗೆ ಜೋಡಿಸಲಾಗಿದೆ. ಅಲಗನ್ನು ಮಧ್ಯಮ ಸ್ಟೀಲ್ ಅಥವಾ ಕಾರ್ಬನ್ ಸ್ಟೀಲ್‍ನಿಂದ ಮಾಡಲಾಗಿದೆ. ಕತ್ತಿಯನ್ನು ಹೂತೋಟದಲ್ಲಿ ಮತ್ತು ತೋಟಗಳಲ್ಲಿ ಹುಲ್ಲು ಕತ್ತರಿಸಲು ಬಳಸುತ್ತಾರೆ ಹಾಗು ತೋಟದಲ್ಲಿ ಮೆದು ಕಳೆ ಕೊಚ್ಚಲು ಸಹ ಬಳಸಬಹುದು.
ಹೂ ಕತ್ತರಿ
ಶಸ್ತ್ರ ಚಿಕಿತ್ಸೆಯ ಕತ್ತರಿಯನ್ನು ಹೋಲುವ ಹೂ ಕತ್ತರಿಸುವ ಸರಳ ಸಾಧನ. ಎರಡು ಬ್ಲೇಡುಗಳಿದ್ದು ಹಿಡಿಕೆಗಳಿವೆ. ಬೆರಳನ್ನು ತೂರಿಸಲು ರಂಧ್ರಗಳಿದ್ದು ಹೂ ಕತ್ತರಿಸಲು ಅನುಕೂಲವಾಗುತ್ತದೆ.
ಹುಲ್ಲು ಕತ್ತರಿಸುವ ಯಂತ್ರ
ಅತ್ಯಂತ ವೇಗವಾಗಿ ತಿರುಗುವ ಚಾಕು ಹುಲ್ಲನ್ನು ಕತ್ತರಿಸುತ್ತದೆ. ವೃತ್ತಾಕಾರದ ಡಿಸ್ಕಿಗೆ ಅಡ್ಡಲಾಗಿ 2 ಅಥವ 4 ತ್ರಿಕೋನಾಕಾರದ ಅಥವಾ ಆಯತಾಕಾರದ ಉತ್ತಮ ಕಾರ್ಬನ್ ಸ್ಟೀಲಿನಿಂದಾದ ಬ್ಲೇಡನ್ನು ಅಳವಡಿಸಲಾಗಿದೆ. ಬ್ಲೇಡುಗಳನ್ನು ಬದಲಾಯಿಸುವ ವ್ಯವಸ್ಥೆ ಇದೆ. ಬ್ಲೇಡು ಹರಿತವಿಲ್ಲದಿದ್ದರೆ ಹುಲ್ಲು ಕಿತ್ತು ಬರುತ್ತದೆ. ಯಂತ್ರವು ವಿದ್ಯುತ್ ಮೋಟಾರು ಅಥವಾ ಎಂಜಿನಿಂದ ಕೆಲಸ ನಿರ್ವಹಿಸುತ್ತದೆ.
ಸಿಲಿಂಡರ್ ಆಕಾರದ ಹುಲ್ಲು ಹಾಸು ಕತ್ತರಿಸುವ ಯಂತ್ರ
ಸಿಲಿಂಡರ್‍ನಂತ ರಾಟೆಯಿದ್ದು ಅದಕ್ಕೆ ಬ್ಲೇಡನ್ನು ಸಿಂಬಿಯಾಕಾರದಲ್ಲಿ ಅಳವಡಿಸಲಾಗಿದೆ. ಮುಂದೆ ಉರುಳು ಪಟ್ಟಿಯಿದ್ದು ಹುಲ್ಲು ನಿಗಧಿತ ಎತ್ತರಕ್ಕೆ ಕತ್ತರಿಸಲು ಅಳವಡಿಸಿಕೊಳ್ಳಬಹುದು. ಹಿಂಭಾಗದಲ್ಲಿ ಕತ್ತರಿಸಿದ ಹುಲ್ಲನ್ನು ಸಂಗ್ರಹಿಸಿಡಲು ಲೋಹದ ಡಬ್ಬಿಯಿದೆ.
ಗುಂಡಿ ತೆಗೆಯುವ ಯಂತ್ರ
ಟ್ರಾಕ್ಟರಿಗೆ ಜೋಡಿಸಲ್ಪಡುವ ಈ ಯಂತ್ರದಿಂದ ಗುಂಡಿ ತೋಡಬಹುದು. ಗುಂಡಿ ತೆಗೆಯುವ ಅಗಾರನ್ನು ಟ್ರಾಕ್ಟರಿಗೆ ಶಾಪ್ಟಿನ ಮೂಲಕ ಜೋಡಿಸಲಾಗುವುದು. ಅಗಾರಿನ ತುದಿಯು ವಜ್ರಾಕೃತಿ ಅಥವಾ ಮೊನಚಾಗಿದೆ. ಟ್ರಾಕ್ಟರು ಚಾಲನೆಯಿಂದ ಶಾಪ್ಟ್ ತಿರುಗಿ ಅಗಾರು ತಿರುಗಲ್ಪಡುತ್ತದೆ. ಅಗಾರು ಬದಲಾಯಿಸುವುದರಿಂದ ಬೇಕಾದ ಅಳತೆಯ ಗುಂಡಿಗಳನ್ನು ತೆಗೆಯಬಹುದು. ಹಣ್ಣಿನ ಸಸಿಗಳನ್ನು ನೆಡಲು ಬೇಕಾಗುವ ಗುಂಡಿ ತೆಗೆಯಲು ಈ ಯಂತ್ರವನ್ನು ಬಳಸುತ್ತಾರೆ.
ಹಾರೆ
ಕೈಯಿಂದ ಉಪಯೋಗಿಸುವ ಉದ್ದನೆಯ ಕಬ್ಬಿಣದ ಕಂಬಿ. ಒಂದು ಕೊನೆ ಮೊನಚಾಗಿದ್ದರೆ ಇನ್ನೊಂದು ಕೊನೆ ಉಳಿ ಅಥವಾ ಚಮಚದ ಆಕಾರದಲ್ಲಿ ಇರುತ್ತದೆ. ಮಧ್ಯಮ ಕಾರ್ಬನ್ ಸ್ಟೀಲಿನಿಂದ ಹಾರೆಯನ್ನು ತಯಾರಿಸುತ್ತಾರೆ. ಗಿಡನೆಡಲು, ಬೇಲಿ ಕಂಬಕ್ಕಾಗಿ ಹಾರೆಯಿಂದ ಗುಂಡಿಗಳನ್ನು ತೋಡಬಹುದು. ಸನಿಕೆ, ಗುದ್ದಲಿ, ಮುಳ್ಳು ಗುದ್ದಲಿ ಇವು ತೋಟಗಾರಿಕೆಯಲ್ಲಿ ಉಪಯೋಗಿಸುವ ಇನ್ನಿತರ ಸಲಕರಣೆಗಳು.