ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ದಿಯೆಡೆಗೆ ನನ್ನಚಿತ್ತ; ಎನ್. ಬಾಲಚಂದ್ರನ್ ನಾಯರ್

Reading Time: 9 minutes

ಎನ್. ಬಾಲಚಂದ್ರನ್ ನಾಯರ್, ಅಧ್ಯಕ್ಷರು:  ಗ್ರಾಮ ಪಂಚಾಯಿತಿ, ಕರಿಕೆ

ಕೊಡಗು ಜಿಲ್ಲೆಯ ಮಡಿಕೇರಿಯಿಂದ ಭಾಗಮಂಡಲ ಮಾರ್ಗವಾಗಿ ಕೇರಳ ರಾಜ್ಯದ ಗಡಿಯನ್ನು ಹೊಂದಿಕೊಂಡಿರುವ ಒಂದು ಸುಂದರ ಗ್ರಾಮ ಕರಿಕೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲೊಂದಾದ ಕರಿಕೆ ಗ್ರಾಮ ಪಂಚಾಯಿತಿಯು ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿರುತ್ತದೆ. ಮಡಿಕೇರಿಯಿಂದ ಕೇರಳ-ಮಂಗಳೂರು ಹೆದ್ದಾರಿಯಲ್ಲಿ 70ಕಿ.ಮೀ.ದೂರದಲ್ಲಿ ಇದ್ದು ಪಂಚಾಯಿತಿ ವಿಸ್ತೀರ್ಣವು 6874 ಹೆಕ್ಟೇರ್ ಆಗಿರುತ್ತದೆ.

ಸದ್ರಿ ಗ್ರಾಮ ಪಂಚಾಯಿತಿಯಲ್ಲಿ ಕರಿಕೆ ಗ್ರಾಮ ಮಾತ್ರ ಕಂದಾಯ ಗ್ರಾಮವಾಗಿದ್ದು 4 ವಾರ್ಡ್ ಗಳನ್ನು ಹೊಂದಿರುತ್ತದೆ. ಅಧ್ಯಕ್ಷ ಉಪಾಧ್ಯಕ್ಷರನ್ನು ಒಳಗೊಂಡ 11 ಜನ ಚುನಾಯಿತ ಸದಸ್ಯರಿದ್ದು, 6 ಜನ ಸಿಬ್ಬಂದಿಗಳಿರುತ್ತಾರೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಪ್ರಾಥಮಿಕ, 1 ಪ್ರೌಢಶಾಲೆ,  1 ಆಶ್ರಮ ಶಾಲೆ ಮತ್ತು 1 ಖಾಸಗಿ ಶಾಲೆ ಇರುತ್ತದೆ. 1 ಪಶುಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರವಾಸಿ ಮಂದಿರ, ಪೋಲಿಸ್ ಠಾಣೆ, ಅಂಚೆಕಛೇರಿ, ವೆ.ಸೇ.ಸ.ಬ್ಯಾಂಕ್, ಯೂನಿಯನ್‌ ಬ್ಯಾಂಕ್ ಆಪ್‌ ಇಂಡಿಯಾ, ಹಾಗೂ ದೂರವಾಣಿ ಸೇವಾ ಕೇಂದ್ರದ ಸೌಲಭ್ಯವಿರುತ್ತದೆ.

ಇಲ್ಲಿ ಹೆಚ್ಚಿನ ಜನ ಕೂಲಿ ಕಾರ್ಮಿಕರಾಗಿರುತ್ತಾರೆ. ಇಲ್ಲಿನ ಜನರ ಮುಖ್ಯ ಉದ್ಯೋಗ ಕೃಷಿ ಆಗಿದ್ದು ತೆಂಗು, ಅಡಿಕೆ, ಬಾಳೆ ಹಾಗೂ ವಾಣಿಜ್ಯ ಬೆಳೆಗಳಾದ ರಬ್ಬರ್, ಗೇರು, ಶುಂಠಿ ಹಾಗೂ ಕೋಕೋ ಬೆಳೆಗಳನ್ನು ಬೆಳೆಯುತ್ತಾರೆ.

ಕರಿಕೆ ಗ್ರಾಮದಲ್ಲಿ ಎಲ್ಲಾ ವರ್ಗದ ಜನರು ವಾಸವಾಗಿರುತ್ತಾರೆ. ಈ ಗ್ರಾಮವು ಕೇರಳದ ಗಡಿಯಲ್ಲಿರುವುದರಿಂದ ಅಲ್ಲಿ ನಡೆಯುವ ಕೆಲವು ಧಾರ್ಮಿಕ ಆಚರಣೆಗಳು ಇಲ್ಲಿ ಕೂಡ ನಡೆಯುತ್ತದೆ. ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1 ದೊಡ್ಡ ಬರೂಕ ವಿದ್ಯುತ್ ಸ್ಥಾವರವಿದೆ.

ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ದಿಯೆಡೆಗೆ ನನ್ನಚಿತ್ತ; ಎನ್. ಬಾಲಚಂದ್ರನ್ ನಾಯರ್

ಕರಿಕೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎನ್. ಬಾಲಚಂದ್ರನ್ ನಾಯರ್ ರವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಿದ ಸಂದರ್ಭ “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಎನ್. ಬಾಲಚಂದ್ರನ್ ನಾಯರ್ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಕ್ಷೇತ್ರಕ್ಕೆ ನಾನು ಪ್ರವೇಶಿಸಿದೆ. ಕರಿಕೆ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಹಾಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಾಯ೯ಕಾರಿ ಸಮಿತಿ ಸದಸ್ಯರಾಗಿ, 2015-20ರ ಸಾಲಿನಲ್ಲಿ ಕರಿಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿ, 2020-23ರ ಸಾಲಿನ ಕರಿಕೆ ಗ್ರಾಮ ಪಂಚಾಯತಿ ನಿಕಟಪೂರ್ವ ಉಪಾಧ್ಯಕ್ಷರಾಗಿ 2023 ರಿಂದ ಪ್ರಸ್ತುತ ಕರಿಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.

ಮುಂದುವರಿದು ಮಾತನಾಡಿದ ಬಾಲಚಂದ್ರನ್ ನಾಯರ್‌ರವರು ಕರಿಕೆ ಗ್ರಾಮ ಪಂಚಾಯತಿ ಹೊಸ ಕಟ್ಟಡ ನಿರ್ಮಾಣ, ಡಿಜಿಟಲ್ ಲೈಬ್ರರಿ ನಿರ್ಮಾಣ, ಕಸ ವಿಲೇವಾರಿ ಘಟಕ ನಿರ್ಮಾಣ, ಕಸ ವಿಲೇವಾರಿ ವಾಹನ ಖರೀದಿ, ಆರೋಗ್ಯ ವಿಸ್ತರಣಾ ಕೇಂದ್ರ ಮಂಜೂರು ಮತ್ತು ವೈದ್ಯರ ನೇಮಕ, ಉದ್ಯೋಗ ಖಾತ್ರಿಯಲ್ಲಿ ಪಂಚಾಯತಿ ಕಛೇರಿ ಮುಂಭಾಗ ಮತ್ತು ಆಸ್ಪತ್ರೆ ಮುಂಭಾಗ ಉದ್ಯಾನವನ ನಿರ್ಮಾಣ, ಉದ್ಯೋಗ ಖಾತ್ರಿಯಲ್ಲಿ ತೆರೆದ ಬಾವಿಗಳು, ಕಾಂಕ್ರಿಟ್ ರಸ್ತೆಗಳು, ಚರಂಡಿ ಮತ್ತು ಆಟದ ಮೈದಾನ ನಿರ್ಮಾಣ, ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಸಾವ೯ಜನಿಕ ಶೌಚಾಲಯಗಳ ನಿರ್ಮಾಣ, ಪಂಚಾಯತ್ ರಸ್ತೆಗಳ ಅಭಿವೃದ್ಧಿ ಮತ್ತು ಸೇತುವೆ ನಿರ್ಮಾಣ, ಕರಿಕೆ ಬಸ್ ನಿಲ್ದಾಣ ಜಾಗದ ಒತ್ತುವರಿಯನ್ನು ತೆರವುಗೊಳಿಸಿ ಪಂಚಾಯತ್ ಅಧೀನಕ್ಕೆ ತಂದಿದ್ದು, ಬಡವರಿಗೆ ವಸತಿ ಯೋಜನಡಿ ಹೆಚ್ಚುವರಿ ಮನೆ ಮಂಜೂರಾತಿ, ಪಿಂಚಣಿ ವಂಚಿತರಿಗೆ ಪಿಂಚಣಿ ಮಾಡಿಸಿದೆ. BPL ಪಡಿತರ ಚೀಟಿ ವಂಚಿತರಿಗೆ BPL ಕಾಡ್೯ ಒದಗಿಸಿದೆ. ಬೀದಿ ದೀಪ ಅಳವಡಿಕೆ. ಕಸ ವಿಲೇವಾರಿ ಜಾಗ ಮತ್ತು ಸ್ಮಶಾನ ಜಾಗ ಮಂಜೂರಾತಿ, ಶಾಲೆ ಬಿಟ್ಟ ಮಕ್ಕಳ ಮರು ದಾಖಲಾತಿ, ಕರಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ರಚನೆ, ಕನ್ನಡ ರಾಜ್ಯೋತ್ಸವ’, ಗಾಂಧಿ ಜಯಂತಿ, ಅಂಬೇಡಕ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೆಳನ ನಡೆಸುವಲ್ಲಿ ನಾನು ನನ್ನ ಶಕ್ತಿ ಮೀರಿ ನನಗೆ ದೊರೆತ ಅಧಿಕಾರದ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.‌

ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಔಷಧ ಪೂರೈಕೆ ಮಾಡುವಂತೆ ಕರಿಕೆ ಗ್ರಾ.ಪಂ ಉಪಾಧ್ಯಕ್ಷರಾಗಿದ್ದ ಸಂದರ್ಭ ಎನ್. ಬಾಲಚಂದ್ರ ನಾಯರ್‌ರವರು ಇತ್ತೀಚೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್‌ರವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಇವರು, ಕೊಡಗು ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಗಡಿಗ್ರಾಮ ಕರಿಕೆ ಕೂಡ ಒಂದು. ಮಳೆಗಾಲದಲ್ಲಿ ರೋಗಿಗಳ ಸಂಖ್ಯೆಯೂ ಇಲ್ಲಿ ಹೆಚ್ಚು. ಆದರೆ, ಇಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ಔಷಧಿ ಲಭಿಸುತ್ತಿಲ್ಲ. ಪ್ರತಿವರ್ಷ ಮಳೆಗಾಲ ಬಂತೆಂದರೆ ಕೊಡಗು-ಕೇರಳ ಗಡಿಯಲ್ಲಿರುವ ಕರಿಕೆ ಗ್ರಾಮದಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿನ ರೋಗಿಗಳು ಸುಮಾರು 70 ಕಿ.ಮೀ ದೂರದಲ್ಲಿರುವ ಮಡಿಕೇರಿಯ ಜಿಲ್ಲಾಸ್ಪತ್ರೆ ಅಥವಾ ಕೇರಳದ ಪಾಣತ್ತೂರು ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಕರಿಕೆಯಲ್ಲಿ ಆರೋಗ್ಯ ಕೇಂದ್ರ ಇದೆಯಾದರೂ ಸೂಕ್ತ ಔಷಧಿಗಳು ಸಕಾಲದಲ್ಲಿ ದೊರೆಯುತ್ತಿಲ್ಲ. ದೂರದ ಊರುಗಳಿಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಡ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ ಹಾಗೆ ಕರಿಕೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳು ಹಾಗೂ ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೋಗಗಳು ಕಾಣಿಸಿಕೊಂಡರೆ ಇವರುಗಳಿಗೆ ದೂರದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ತೆರಳಿದರೆ ಔಷಧಿಯ ಕೊರತೆ ಎದುರಾಗುತ್ತಿದೆ. ಆದ್ದರಿಂದ ಕರಿಕೆ ಆಸ್ಪತ್ರೆಗೆ ಸಕಾಲದಲ್ಲಿ ಹೆಚ್ಚಿನ ಪ್ರಮಾಣದ ಔಷಧಿಯನ್ನು ವಿತರಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್, ಔಷಧಿ ಸರಬರಾಜು ಮಾಡುವ ಭರವಸೆ ನೀಡಿದ್ದಾರೆ.

ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಜಟಿಲ ಸಮಸ್ಯೆಗಳ ಪರಿಹಾರಕ್ಕಾಗಿ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸದಸ್ಯ ಹಾಗೂ ಕರಿಕೆ ಗ್ರಾ.ಪಂ ಅಧ್ಯಕ್ಷರಾದ ಎನ್.ಬಾಲಚಂದ್ರನ್ ನಾಯರ್ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಕೊಡಗಿಗೆ ಸಚಿವ ಸ್ಥಾನ ದೊರೆತ್ತಿದೆ, ಈ ಬಾರಿಯೂ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.ಕಳೆದ 20-25 ವರ್ಷಗಳಿಂದ ಜಿಲ್ಲೆಯ ಗಡಿ ಗ್ರಾಮಗಳು ಸೇರಿದಂತೆ ವಿವಿಧ ಪ್ರದೇಶಗಳು ಅಭಿವೃದ್ಧಿ ಶೂನ್ಯವಾಗಿದೆ. ಮೂಲಭೂತ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದೆ ಜನಸಾಮಾನ್ಯರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸಲು ಸಾಧ್ಯವಾಗಿಲ್ಲ. ಇದೀಗ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಬೇಧಿಸಿರುವ ಕಾಂಗ್ರೆಸ್ ನ ಉತ್ಸಾಹಿ ಯುವ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದು, ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರದ ಮುಂದೆ ಸಮರ್ಥವಾಗಿ ಮಂಡಿಸಲು ಮತ್ತು ಇಲ್ಲಿನ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡಲು ನಮ್ಮ ಶಾಸಕರು ಸಚಿವರಾಗುವ ಅಗತ್ಯವಿದೆ. ಕೊಡಗಿನ ಜನರ ಅಪೇಕ್ಷೆಯೂ ಇದೇ ಆಗಿದ್ದು, ವರಿಷ್ಠರು ಸ್ಪಂದಿಸಲಿದ್ದಾರೆ ಎಂದು ಈ ಸಂದರ್ಭದಲ್ಲಿ ಬಾಲಚಂದ್ರನ್ ನಾಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ಎನ್. ಬಾಲಚಂದ್ರನ್ ನಾಯರ್‌ರವರು ಶ್ರೀ ಕಾಟೂರ್ ನಾರಾಯಣನ್ ನಂಬಿಯಾರ್ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದ್ದಾರೆ. ಹಾಗೆ ಟ್ರಸ್ಟ್‌ ವತಿಯಿಂದ ಆಂಬುಲೆನ್ಸ್‌ ಕೂಡ ಕಾರ್ಯನಿರ್ವಹಿಸುತ್ತಿದೆ.

ಧಾರ್ಮಿಕ ಕ್ಷೇತ್ರದಲ್ಲಿ ಕರಿಕೆ ಚೆಂಬೇರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಹಾಗೆ ಪಾಣತ್ತೂರು ಅಯ್ಯಪ್ಪ ದೇವಸ್ಥಾನದ ಮೆರವಣಿಗೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀ ಕಾಟೂರ್ ನಾರಾಯಣನ್ ನಂಬಿಯಾರ್ ಮೆಮೋರಿಯಲ್ ಶಾಲೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಲತಃ ಕೃಷಿಕರಾಗಿರುವ ಎನ್. ಬಾಲಚಂದ್ರನ್ ನಾಯರ್‌ರವರ ತಂದೆ: ದಿವಂಗತ ಕಾಟೂರ್‌ ನಾರಾಯಣ ನಂಬಿಯಾರ್‌( ಕೆ.ಪಿ.ಸಿ.ಸಿ. ಸದಸ್ಯರಾಗಿದ್ದರು, ತಾಯಿ: ಅಮ್ಮಾಳು ಅಮ್ಮ, ಪತ್ನಿ: ಪ್ರಜೂಷ ಬಾಲಚಂದ್ರನ್ ನಾಯರ್ (ಶಿಕ್ಷಕಿ), ಮಗ: ಅಭಿನವ್ ಬಿ. ನಾಯರ್ (10ನೇ ತರಗತಿ), ಮಗಳು: ಸೌಪಣಿ೯ಕ ಬಿ. ನಾಯರ್ (6ನೇ ತರಗತಿ)

ಮೂಲತಃ ಕೃಷಿಕರಾಗಿರುವ ಎನ್. ಬಾಲಚಂದ್ರನ್ ನಾಯರ್‌ರವರು ಪ್ರಸ್ತುತ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕರಿಕೆ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ, ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.

ಸಂದರ್ಶನ ದಿನಾಂಕ: 11-08-2023

ಹೆಚ್ಚಿನ ಚಿತ್ರಗಳನ್ನು ವೀಕ್ಷೀಸಲು ಇಲ್ಲಿ ಕ್ಲಿಕ್‌ ಮಾಡಿ

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x