ಜನಾಂಗದ ಪದ್ಧತಿ ಪರಂಪರೆಗಳನ್ನು ಉಳಿಸಿ ಬೆಳಸಬೇಕು – ಸುಜಾ ಕುಶಾಲಪ್ಪ
ನಾಪೋಕ್ಲು: ಜನಾಂಗದ ಹಿರಿಯರು ಪಾಲಿಸಿಕೊಂಡು ಬಂದ ತಮ್ಮ ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ಉಳಿಸಿ ಬೆಳೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹೇಳಿದರು.
ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಗೌಡ ಯುವ ವೇದಿಕೆ ಮಡಿಕೇರಿ ಹಾಗೂ ನರಿಯಂದಡ ಅಯ್ಯಪ್ಪ ಯುವಕ ಸಂಘದ ಸಹಯೋಗದಲ್ಲಿ ಸಮೀಪದ ಪಾರಾಣೆ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಆಟಿ ಜಂಬರ 2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಹಿಂದಿನಿಂದಲೂ ನಡೆದು ಬಂದ ಪದ್ಧತಿ ಪರಂಪರೆಗಳನ್ನು ಮರೆಯಬಾರದು. ಜಿಲ್ಲೆಯ ಪರಿಸರ ಉತ್ತಮವಾಗಿದ್ದು ಸಮಾಜ ಬಾಂಧವರು ತಮ್ಮ ಕೃಷಿ ಭೂಮಿಗಳನ್ನು ಉಳಿಸಿಕೊಳ್ಳಬೇಕು ಎಂದರು.
ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ ಅನಂತಶಯನ ಮಾತನಾಡಿ ಮನುಷ್ಯನಾಗಿ ಹುಟ್ಟಲು ಪುಣ್ಯ ಪಡೆದಿರಬೇಕು ಅದರಲ್ಲೂ ಜಿಲ್ಲೆಯಲ್ಲಿ ಹುಟ್ಟಿದವರು ಪುಣ್ಯವಂತರು.ಇಂದಿನ ಜನಾಂಗ ಆಚರಿಸುತ್ತಿರುವಂತಹ ಕಾರ್ಯಕ್ರಮಗಳು ಕಳೆದುಹೋದ ಸಂಪ್ರದಾಯವನ್ನು ನೆನಪಿಸುತ್ತಿವೆ.ಇಂದಿನ ದಿನಗಳಲ್ಲಿ ಸ್ವಾರ್ಥ ಮೆರೆಯುತ್ತಿದ್ದು ಸಾಮೂಹಿಕವಾಗಿ ಒಗ್ಗೂಡುವುದು ಅಪರೂಪವಾಗುತ್ತಿದೆ. ಗೌಡ ಜನಾಂಗ ಸಂಸ್ಕೃತಿ ಸಂಪ್ರದಾಯದ ಉಳಿವಿಕೆಗಾಗಿ ಒಗ್ಗಟು ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.ಇಂತಹ ಕಾರ್ಯಕ್ರಮಗಳು ಕೇವಲ ಮನರಂಜನೆಗಷ್ಟೇ ಅಲ್ಲ. ಒಗ್ಗಟ್ಟು ಪ್ರದರ್ಶಿಸಲು ನೆರವಾಗುತ್ತದೆ. ಸೀಮಿತ ಬದುಕಿನಲ್ಲಿ ಇರುವಷ್ಟು ದಿನ ಸುಂದರ ಬದುಕು ರೂಪಿಸುವುದು ಅತ್ಯಗತ್ಯ ಎಂದರು.
ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಮಾತನಾಡಿ ಭಾಷೆ,ಸಂಸ್ಕೃತಿ ನಾಶವಾದರೆ ಒಂದು ಜನಾಂಗದ ನಾಗರಿಕತೆ ನಾಶವಾದಂತೆ. ಮಕ್ಕಳಿಗೆ ಮನೆಯಿಂದಲೇ ಕಲಿಸುವ ಕೆಲಸ ಆಗಬೇಕು. ಸಾಂಪ್ರದಾಯಿಕ ತಿಂಡಿ,ತಿನಿಸು, ಹಣ್ಣು ಸೇರಿದಂತೆ ಜಾನಪದ ಸಂಸ್ಕೃತಿಯ ಅರಿವನ್ನು ಮಕ್ಕಳಿಗೆ ಮೂಡಿಸಬೇಕು ಎಂದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡಿ ಗೌಡ ಯುವ ವೇದಿಕೆಯಿಂದ ಜಾನಪದ ಲೋಕ ನಿರ್ಮಾಣವಾಗಿದೆ. ಅಪರೂಪದ ಕಾರ್ಯಕ್ರಮದ ಮೂಲಕ ಜನರನ್ನು ಒಗ್ಗೂಡಿಸುವಲ್ಲಿ ಯುವ ವೇದಿಕೆ ಮತ್ತು ಯುವಕ ಸಂಘ ಯಶಸ್ವಿಯಾಗಿದೆ ಎಂದರು.ಹಿಂದಿನ ಸಂಸ್ಕೃತಿಯ ಜೊತೆಗೆ ಸಾಹಿತ್ಯವನ್ನೂ ಪಸರಿಸುವಂತಹ ಕೆಲಸ ಸಹ ಆಗಬೇಕು ಎಂದು ಆಶಿಸಿದರು.
ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಕೊಟ್ಟಕೇರಿಯನ ಡಾ.ಸಿ.ಪಿ. ಲಾವಣ್ಯ ಆಟಿ ತಿಂಗಳ ವಿಶೇಷತೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಪದ್ಧತಿ.ನಂಬಿಕೆ, ಆಚರಣೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹಿರಿಯರ ಬದುಕಿನ ಕ್ರಮ ಶಿಸ್ತನ್ನು ನಾವು ಪಾಲಿಸುವುದರ ಮೂಲಕ ಮುಂದಿನ ಪೀಳಿಗೆಗೆ ಪಸರಿಸುವಂತ ಕೆಲಸ ಮಾಡಬೇಕು ಎಂದರು.
ಪಾರಾಣೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ಕುಶಾಲಪ್ಪ,ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬೆಳಿಯಂಡ್ರ ಹರಿಪ್ರಸಾದ್ ಮಾತನಾಡಿದರು.
ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತೋಟಂಬೈಲು ಬಿಂದು ಮಂತನ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬೆಳೆಯಂಟ್ರ ಹರಿಪ್ರಸಾದ್ ಸ್ವಾಗತಿಸಿದರು. ಮೂಡಗದ್ದೆ ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಮಂದನೆರವಂಡ ವಿಶು ವಂದಿಸಿದರು.
ಸಾಂಪ್ರದಾಯಿಕ ಅಡುಗೆ ತಿನಿಸುಗಳ ಸ್ಪರ್ಧೆ, ಆಟಿ ಆಟೋಟ ಪ್ರದರ್ಶನ, ಅರೆ ಭಾಷೆ ಜಾನಪದ ಹಾಡು, ಗುಂಪು ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮದ್ದು ಸೊಪ್ಪು, ಕೆಸ, ನಾಡು ಕೋಳಿ, ಎಸೆಂಡ್ ಕಡಿಮೆ ಸೇರಿದಂತೆ ವಿವಿಧ ಅಡುಗೆ ಪೈಪೋಟಿಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕಾಡು ಹಣ್ಣುಗಳ ಪ್ರದರ್ಶನ ಆಟಿ ಆಟೋಟ ಪ್ರದರ್ಶನ ನೆರೆದವರ ಗಮನ ಸೆಳೆಯಿತು.
ವರದಿ: ಝಕರಿಯ ನಾಪೋಕ್ಲು