ನಾಪೋಕ್ಲು : ನಾಪೋಕ್ಲುವಿನ ಮೊಹಿಯದ್ದೀನ್ ಜುಮಾ ಮಸೀದಿಯಲ್ಲಿ ದೇಶದ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು
ನಾಪೋಕ್ಲು ಪಟ್ಟಣದಲ್ಲಿರುವ ಮಸೀದಿಯ ಆವರಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಪಿ.ಎಂ. ಸಲೀಂ ಹಾರಿಸ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಲೀಂ ಹಾರಿಸ್ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಅಬ್ದುಲ್ ಕಲಾಂ ಆಜಾದ್ ಅವರಂತಹ ದೇಶದ ಅನೇಕ ರಾಜ್ಯಗಳ ಮಹಾನ್ ವ್ಯಕ್ತಿಗಳ ಹೋರಾಟದ ಫಲವಾಗಿ ನಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರನ್ನು ಸ್ಮರಿಸಿ ದೇಶವನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. ಮದರಸಗಳಲ್ಲಿ ಪ್ರಾಧ್ಯಾಪಕರು ದೇಶಪ್ರೇಮ,ದೇಶಭಕ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಜಾತಿ ಮತ ಭೇದವಿಲ್ಲದ ನಮ್ಮ ದೇಶಕ್ಕೆ ಇಂದು ಕಂಟಕವಾಗಿರುವ ಕೋಮುವಾದ, ಭಯೋತ್ಪಾದನೆ, ಮತಾಂಧ ಶಕ್ತಿಗಳನ್ನು ತೊರೆದು ದೇಶಭಕ್ತಿ, ದೇಶಪ್ರೇಮವನ್ನು ಬೆಳೆಸುವ ಮೂಲಕ ನಮ್ಮ ದೇಶವನ್ನು ಪ್ರಪಂಚದಲ್ಲೇ ಅತಿ ಮುಂದುವರಿದ ರಾಷ್ಟ್ರ ಮಾಡಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.
ಮೊದಲಿಗೆ ಕಾರ್ಯಕ್ರಮವನ್ನು ಮಸೀದಿಯ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಾಖಾಫಿ ಉದ್ಘಾಟಿಸಿದರು. ಜಮಾಅತ್ ಕಾರ್ಯದರ್ಶಿ ಸಿ.ಎಚ್ ಅಹಮದ್ ದಿನದ ಮಹತ್ವದ ಕುರಿತು ಹಿತನುಡಿಗಳನ್ನಾಡಿದರು.
ಕಾರ್ಯಕ್ರಮದ ಅಂಗವಾಗಿ ಮದರಸ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ,ಭಾಷಣ, ದೇಶಭಕ್ತಿ ಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಜಮಾಅತ್ ಆಡಳಿತ ಮಂಡಳಿ ಸದಸ್ಯರು, ಮದರಸ ಪ್ರಾಧ್ಯಾಪಕರು,ಮದರಸಾ ವಿದ್ಯಾರ್ಥಿಗಳು, ಪೋಷಕರು ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.
✍️….ವರದಿ: ಝಕರಿಯ ನಾಪೋಕ್ಲು