ಮುಂಡಚಾಡಿರ. ಕೆ. ಭರತ್, ಅಧ್ಯಕ್ಷರು: ಗ್ರಾಮ ಪಂಚಾಯಿತಿ, ಕದನೂರು.
ಕೊಡಗು ಜಿಲ್ಲೆಯ ಮಡಿಕೇರಿಯಿಂದ-ವೀರಾಜಪೇಟೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ವಿರಾಜಪೇಟೆಗೆ ಐದು ಕೀಲೋ ಮೀಟರ್ ಅಂತರದಲ್ಲಿ ನಾಪೋಕ್ಲು ಪಟ್ಟಣಕ್ಕೆ ಸಂಪರ್ಕಿಸುವ ಮಾರ್ಗದ ಪಕ್ಕದಲ್ಲಿ ಇರುವ ಪಂಚಾಯಿತಿ ಕದನೂರು ಗ್ರಾಮ ಪಂಚಾಯಿತಿ. ಈ ಪಂಚಾಯಿತಿಯು ವೀರಾಜಪೇಟೆ ತಾಲ್ಲೂಕಿನಲ್ಲಿದೆ.
ಕದನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಮುಂಡಚಾಡಿರ. ಕೆ. ಭರತ್‌ರವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಮುಂಡಚಾಡಿರ. ಕೆ. ಭರತ್‌ರವರು “ನನ್ನ 18ನೇಯ ವಯಸ್ಸಿಗೆ ಸಾಮಾಜ ಸೇವೆಯನ್ನು ಮೈಗೂಡಿಸಿಕೊಂಡು ಸಾಮಾಜಿಕ ಕ್ಷೇತ್ರಕ್ಕೆ ಇಳಿದೆ. ಅಲ್ಲಿಂದ ನಮ್ಮ ಗ್ರಾಮವಾದ ಮೈತಾಡಿಯ ಅಂದಿನ ಹಿರಿಯರು ಚುನಾವಣ ಅಖಾಡದಲ್ಲಿ ಇದ್ದಂದಂತ ಸಂದರ್ಭದಲ್ಲಿ ಅವರೊಂದಿಗೆ ಕೂಡಿಕೊಂಡು ಚುನಾವಣ ಪ್ರಚಾರಕ್ಕೆ ತೆರಲುವುದು, ಬ್ಯಾನರ್-ಬಂಟಿಂಗ್ಸ್ ಕಟ್ಟುವುದು ಮುಂತಾದ ಕೆಲಸ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತಿದೆ. ಆ ಸಂದರ್ಭದಲ್ಲಿ ನಾನು ಕೂಡ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಕಾರ್ಯವನ್ನು ಮಾಡುವ ಬಗ್ಗೆ ಮನಸ್ಸಿಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡೆ. ತದ ನಂತರ 2021ರಲ್ಲಿ ರಾಜಕೀಯ ಅಖಾಡಕ್ಕೆ ಪೂರ್ಣ ಪ್ರಮಾಣದಲ್ಲಿ ಇಳಿಯಲು ನಿಶ್ಚಯಿಸಿ ಕದನೂರು ಗ್ರಾಮ ಪಂಚಾಯಿತಿಗೆ ಒಳಪಡುವ ಮೈತಾಡಿ ಗ್ರಾಮದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ಆಗ ನನ್ನ ಬೆಂಬಲಕ್ಕೆ ನಿಂತ ನನ್ನ ಏಳು ಜನ ಆತ್ಮೀಯ ಮಿತ್ರರಾದ ಕುಂಡಚ್ಚಿರ ಮಂಜು ದೇವಯ್ಯ, ಬೇರೆರ ಬೆಳ್ಯಪ್ಪ, ಚಪ್ಪಂಡ ಸೋಮಯ್ಯ, ಚಪ್ಪಂಡ ಸುಬ್ಬಯ್ಯ, ಬಾಳೆಕುಟ್ಟಿರ ಭುವನ್, ಮುಂಡಚಾಡಿರ ಸೂರಜ್ ಮಂದಣ್ಣ, ಕುಂಡಚ್ಚಿರ ಮೊಣ್ಣಪ್ಪರವರು. ಇವರುಗಳ ಸಹಕಾರದಿಂದ ಹಾಗೂ ನನ್ನ ಮೇಲೆ ನಂಬಿಕೆಯಿಟ್ಟು ನನ್ನನ್ನು ಆಯ್ಕೆ ಮಾಡಲು ಮತ ಹಾಕಿದ ಗ್ರಾಮಸ್ಥರು ಇವರೆಲ್ಲರಿಂದ ಅತ್ಯಧಿಕ ಬಹುಮತದಿಂದ ಪಂಚಾಯಿತಿ ಸದಸ್ಯನಾಗಿ ಆಯ್ಕೆಗೊಂಡೆ” ಎಂದು ತಿಳಿಸಿದರು.
ಕದನೂರು ಗ್ರಾಮ ಪಂಚಾಯಿತಿಗೆ ಮೈತಾಡಿ ಗ್ರಾಮದಿಂದ ಪ್ರತಿನಿಧಿಯಾಗಿ ಆರಿಸಿ ಬಂದ ನಂತರ ತಮ್ಮ ಗ್ರಾಮದಲ್ಲಿ ಜಲಜೀವನ್ ಮಿಷನ್‌ನ ಅಡಿಯಲ್ಲಿ ಶೇಕಡ 75% ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ ಎಂದ ಭರತ್‌ರವರು, ಉಳಿದ ಮನೆ-ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕದ ವ್ಯವಸ್ಥೆಯು ಪ್ರಗತಿಯಲ್ಲಿದೆ ಎಂದರು. ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಮನೆ-ಮನೆಗಳಿಗೆ ಶೌಚಾಲಯ ನಿರ್ಮಾಣದ ಕಾಮಗಾರಿಯು ಅನುದಾನದ ಕೊರತೆಯಿಂದ ಶೇಕಡ 100% ರಷ್ಟು ಪೂರ್ಣವಾಗಿರುವುದಿಲ್ಲ, ಮುಂದಿನ ದಿನಗಳಲ್ಲಿ ಅನುದಾನವನ್ನು ಹೊಂದಿಸಿಕೊಂಡು ಪೂರ್ಣಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಬೀದಿ ದೀಪಗಳ ವ್ಯವಸ್ಥೆಯು ಬಹುಪಾಲು ಪೂರ್ಣಗೊಂಡಿದ್ದು, ಸೋಲಾರ್ ಬೀದಿ ದೀಪ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. 2017-18ರ ಸಾಲಿನಲ್ಲಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸರಿ ಸುಮಾರು ಒಂದು ಕೋಟಿ ಅನುದಾನ ಬಂದಿತ್ತು. ಆದರಲ್ಲಿ ಮೈತಾಡಿ ಗ್ರಾಮದ ರಸ್ತೆಗಳು ಕಾಂಕ್ರಿಟ್‌ಕರಣಗೊಂಡಿತ್ತು. ಸೋಲಾರ್ ದೀಪಗಳನ್ನು ಅಳವಡಿಸಲಾಗಿತ್ತು. ಸಮುದಾಯ ಭವನ ನಿರ್ಮಾಣ ಮಾಡಲಾಗಿತ್ತು. ಎಂದು ತಿಳಿಸಿದರು.
ಮೈತಾಡಿ ಗ್ರಾಮದಲ್ಲಿ ಅಂದಾಜು 14 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಯು ಅರ್ಧಕ್ಕೆ ನಿಂತು ಹೋಗಿದ್ದು, ಇದಕ್ಕೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಭರತ್‌ರವರು, ಮುಂದಿನ ದಿನಗಳಲ್ಲಿ ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.
ಕಸ ವಿಲೇವಾರಿಗೆ ಮನೆ ಮನೆಗಳಲ್ಲಿ ಬುಟ್ಟಿಯನ್ನು ನೀಡಲಾಗಿ ಅದರಲ್ಲಿ ಒಣ ಕಸವನ್ನು ಸಂಗ್ರಹಿಸಲಾಗುತ್ತಿದ್ದು, ಪಂಚಾಯಿತಿಯಿಂದ ಕಸ ವಿಲೇವಾರಿ ಘಟಕವನ್ನು ಮಾಡಲು ಜಾಗದ ಕೊರತೆಯಿರುವುದರಿಂದ ಅದು ತಾತ್ಕಾಲಿಕವಾಗಿ ನಿಂತು ಹೋಗಿದೆ, ಜಾಗವನ್ನು ಹೊಂದಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.
ಲೋಕಸಭಾ ಸದಸ್ಯರ ಅನುದಾನದಿಂದ ಕಾವೇರಿ ನೀರಾವರಿ ನಿಗಮದಡಿಯಲ್ಲಿ 800 ಮೀಟರ್ ಮುಖ್ಯ ರಸ್ತೆ ಕಾಮಗಾರಿಯು ಪೂರ್ಣಗೊಂಡಿದ್ದು, ಅನುದಾನದ ಕೊರತೆಯಿಂದ ಮೂಲಭೂತ ಸೌಕರ್ಯನ್ನು ಒದಗಿಸಲು ಅಡಚಣೆಯಾಗಿದೆ, ಒಂದು ವರ್ಷಕ್ಕೆ ಒಂದು ಗ್ರಾಮಕ್ಕೆ ಕನಿಷ್ಠ 40 ಲಕ್ಷ ಅನುದಾನ ದೊರೆತಲ್ಲಿ ಗ್ರಾಮದ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಪ್ರಗತಿ ಗ್ರಾಮವಾಗಿ ಮಾಡಬಹುದು ಎಂದು ತಿಳಿಸಿದರು.
ನರೇಗಾ ಯೋಜನೆಯು ಕೊಡಗಿನ ಹವಾಗುಣಕ್ಕೆ ಸೂಕ್ತವಾದ ಯೋಜನೆಯಲ್ಲ, ಕೊಡಗಿನ ಹವಾಗುಣಕ್ಕೆ ಸೂಕ್ತವಾದ ಯೋಜನೆಯನ್ನು ರೂಪಿಸುವಲ್ಲಿ ಸಂಬಂಧ ಪಟ್ಟವರು ಇದರ ಬಗ್ಗೆ ಗಮನ ಹರಿಸಬೇಕು. ಕುಡಿಯುವ ನೀರಿಗೆ ಬೋರ್‌ವೆಲ್ ಸುಕ್ತವಾದದಲ್ಲ ತೆರೆದ ಬಾವಿ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮೈತಾಡಿ ಗ್ರಾಮದಲ್ಲಿರುವ ಅತಿದೊಡ್ಡ ಧವಸ ಭಂಡಾರವನ್ನು ಮರು ಪ್ರಾರಂಭಿಸಿ, ಇದರಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಪ್ರಯತ್ನ ಸಾಗಿದೆ, ಇದರಿಂದ 8 ಕಿ.ಮೀ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.
ಮೈತಾಡಿ ಗ್ರಾಮದಲ್ಲಿ 2022-23ರ ಸಾಲಿನಲ್ಲಿ ಆಶ್ರಯ ಯೋಜನೆಯಡಿ 7 ಮನೆಗಳು ಪೂರ್ಣಗೊಂಡಿದ್ದು, ಉಳಿದ ಮನೆಗಳು ಶೀಘ್ರದಲ್ಲೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ ಭರತ್‌ರವರು, ನಿವೇಶನ ಇಲ್ಲದವರಿಗೆ ನಿವೇಶನ ಒದಗಿಸಿ ಅಲ್ಲಿ ವಸತಿ ನಿರ್ಮಿಸಿ ಕೊಡುವಲ್ಲಿ ಪ್ರಯತ್ನ ಸಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಮಸ್ಥರಿಗೆ ವಾಯು ವಿಹಾರಕ್ಕೆ ಹಾಗೂ ವ್ಯಾಯಾಮ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮದಲ್ಲಿ ಉದ್ಯಾನವನಗಳನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ, ಗ್ರಾಮದ ಸುರಕ್ಷತೆಯ ದೃಷ್ಠಿಯಿಂದ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರಗಳನ್ನು ಅಳವಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದರು.
ವಲಸೆ ಕಾರ್ಮಿಕರ ಕೆ.ವೈ.ಸಿ. ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಹೆಜ್ಜೆ ಇಡಲಾಗಿದ್ದು, ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಪಿ.ಡಿ.ಒ, ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸುಭದ್ರ, ಸುರಕ್ಷ, ಸಧೃಡ, ಸುಂದರ ಗ್ರಾಮ ನಿರ್ಮಾಣ ಮಾಡುವಲ್ಲಿ ಒಟ್ಟಾಗಿ ವಿಶ್ವಾಸದೊಂದಿಗೆ ಕೆಲಸ ಮಾಡುವಲ್ಲಿ ನಾವು ಹೆಜ್ಜೆ ಯಿಟ್ಟಿದ್ದೇವೆ ಎಂದು ಈ ಸಂದರ್ಭದಲ್ಲಿ ಭರತ್‌ರವರು ತಿಳಿಸಿದರು.
ಮುಂಡಚಾಡಿರ. ಕೆ. ಭರತ್‌ರವರು ರಾಜಕೀಯ ಕ್ಷೇತ್ರದಲ್ಲಿ ಸ್ವತಂತ್ರ ಕಾರ್ಯಕರ್ತರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಮೈತಾಡಿ ಮಂದತ ಚಾಮುಂಡಿ ದೇವಾಲಯ ಸಮಿತಿ ಸದಸ್ಯರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮೈತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.
ಮುಂಡಚಾಡಿರ. ಕೆ. ಭರತ್ರವರ ತಂದೆ: ದಿವಂಗತ ಮುಂಡಚಾಡಿರ ಕುಟ್ಟಪ್ಪ(ಭಾರತೀಯ ಸೇನೆಯಲ್ಲಿ ಹಾನರಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿರುತ್ತಾರೆ. ತಾಯಿ: ಎಂ.ಕೆ. ಜಾನಕಿ(ತಾಮನೆ: ಅಚ್ಚಯಂಡ ಅಮ್ಮತ್ತಿ). ಪತ್ನಿ: ಎಂ.ಕೆ. ರಿನಿ(ತಾಮನೆ: ಮುಕ್ಕಾಟಿರ ಕುಂಜಿಲಗೇರಿ) ಪ್ರಸ್ತುತ ಅರಮೇರಿ SMS ವಿದ್ಯಾ ಪೀಠದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗ: ಕ್ಲೆವಿನ್ ಅಪ್ಪಯ್ಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮೂಲತ: ಕೃಷಿಕರಾಗಿರುವ ಮುಂಡಚಾಡಿರ. ಕೆ. ಭರತ್‌ರವರು ಪ್ರಸ್ತುತ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮೈತಾಡಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಧಾರ್ಮಿಕ, ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 22-07-2023