ಪಿ.ಆರ್. ಸುನಿಲ್ ಕುಮಾರ್, ಅಧ್ಯಕ್ಷರು: ಗ್ರೇಡ್ ಒನ್ ಗ್ರಾಮ ಪಂಚಾಯಿತಿ ಸುಂಟಿಕೊಪ್ಪ
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯತಿ ಯಾಗಿದೆ. ಸುಂಟಿಕೊಪ್ಪ ಬ್ರಿಟಿಷರ ಕಾಲದಲ್ಲಿ ಒಪತ್ತಿನ ಸಂತೆ ನಡೆಯುತ್ತಿದ್ದರಿಂದ ಸಾಂಟಿಕೊಪ್ಪ ಎಂದು ಕರೆಯುತ್ತಿದ್ದರು. ಸಂತೆಕೊಪ್ಪ ಎಂಬುದರ ಅನ್ವರ್ಥ ನಾಮವೇ ಈಗಿನ ಸುಂಟಿಕೊಪ್ಪ ಎಂದು ತಿಳಿದು ಬಂದಿದೆ. ಸುಂಟಿಕೊಪ್ಪಕ್ಕೆ ಉಲುಗುಲಿ ಎಂಬ ಹೆಸರು ಬಂದಿದು ಹುಲಿ ಮತ್ತು ಗೂಳಿಗಳ ಕಾದಾಟದಲ್ಲಿ ಗೂಳಿಯೇ ಹುಲಿಯನ್ನು ಕೊಂದು ಹಾಕಿದ ಕಥೆ ಇದೆ. ಹುಲಿಗುಲಿ ಎಂಬುದರ ಅನ್ವರ್ಥ ನಾಮವೇ ಈಗಿನ ಉಲುಗುಲಿ. ಸುಂಟಿಕೊಪ್ಪ ಕುಶಾಲನಗರ ಮತ್ತು ಮಡಿಕೇರಿಯ ಮಧ್ಯ ಭಾಗದಲ್ಲಿದೆ. ಸುಂಟಿಕೊಪ್ಪ ಜಿಲ್ಲಾ ಕಛೇರಿಯಿಂದ 15 ಕಿ.ಮೀ ದೂರದಲ್ಲಿದೆ. ಮತ್ತು ತಾಲ್ಲೂಕುನಿಂದ 15 ಕಿ.ಮೀ ದೂರದಲ್ಲಿದೆ. ಸುಂಟಿಕೊಪ್ಪ ಗ್ರೇಡ್1 ಗ್ರಾಮ ಪಂಚಾಯತಿ ಆಗಿದ್ದು, ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇದೆ. ಇಲ್ಲಿ ಮುಖ್ಯವಾಗಿ ಕಾಫಿ, ಏಲಕ್ಕಿ, ಕರಿಮೆಣಸು, ಭತ್ತವನ್ನು ಬೆಳೆಯುತ್ತಾರೆ ಇಲ್ಲಿಯ ಬಹುಪಾಲು ಜನರು ವ್ಯವಸಾಯವನ್ನು ಅವಲಂಬಿಸಿದ್ದಾರೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಪಿ. ಸುನಿಲ್ ಕುಮಾರ್‌ರವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಪಿ. ಸುನಿಲ್ ಕುಮಾರ್ ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಪ್ರಮುಖ ಕಾರಣವೇನೆಂದರೆ ಮೊದಲು 2000 ಇಸವಿಯಲ್ಲಿ ನಾನು ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದ ಸದಸ್ಯನಾಗಿ ನಂತರ ಎಂಟು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದೆ. ಈ ಸಂದರ್ಭದಲ್ಲಿ ನಮ್ಮ ಸಂಘ ಹಾಗೂ ಸಮಾಜದ ಕೆಲಸಕ್ಕಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡೆ. 2001ರಲ್ಲಿ ನಿಕಟಪೂರ್ವ ಶಾಸಕರಾದ ಅಪ್ಪಚ್ಚು ರಂಜನ್, ಪಕ್ಷದ ಮುಖಂಡರಾದ ಭಾರತೀಶ್ ಹಾಗೂ ಪಕ್ಷದ ಹಿರಿಯರಾದ ವೈ.ಎಂ.ಕರುಂಬಯ್ಯ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯನಾಗಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ. 2013ರಲ್ಲಿ ಸುಂಟಿಕೊಪ್ಪ ನಗರದ ಬಿ.ಜೆ.ಪಿ. ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷನಾಗಿ ಆಯ್ಕೆಗೊಂಡೆ. ನಂತರ ಸುಂಟಿಕೊಪ್ಪ ನಗರ ಬಿ.ಜೆ.ಪಿ. ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದೆ. ಬಳಿಕ 2018ರ ವಿಧಾನಸಭಾ ಚುನಾವಣೆಯ ಬಳಿಕ ಸೋಮವಾರಪೇಟೆ ತಾಲೂಕು ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದೆ.
2020ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರ್ಗಾಣೆ ಗ್ರಾಮದಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿ ಸದಸ್ಯನಾಗಿ ಆಯ್ಕೆಗೊಂಡೆ. ಪ್ರಸ್ತುತ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯಲ್ಲಿ ಅಂದರೆ 2023ರ ಆಗಸ್ಟ್ ತಿಂಗಳಿನಿಂದ ಅಧ್ಯಕ್ಷನಾಗಿ ಆಯ್ಕೆಗೊಂಡು ಕಾರ್ಯನಿರ್ವಹಿಸುತ್ತಿದ್ದೇನೆ.
ನಾರ್ಗಾಣೆ ಗ್ರಾಮದ ಪ್ರಗತಿಯ ಬಗ್ಗೆ ಹೇಳುವುದಾದರೆ ನಾನು ಸದಸ್ಯನಾದ ಬಳಿಕ ಪಂಚಾಯಿತಿ ನಿಧಿಯಿಂದ ದೊರೆಯುವಂತಹ ಎಲ್ಲಾ ಕಾಮಗಾರಿಗಳನ್ನು ನನ್ನ ಗ್ರಾಮದಲ್ಲಿ ಪೂರ್ಣ ಮಾಡಲಾಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಬೀದಿ ದೀಪ, ಚರಂಡಿ ಮುಂತಾದ ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದ 15ನೇ ಹಣಕಾಸಿನ ಯೋಜನೆಯ ಅನುದಾನ ಹಾಗೂ ನಿಕಟಪೂರ್ವ ಶಾಸಕರ ಅನುದಾನದಿಂದ 40 ರಿಂದ 50 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದಂತಹ ಜೇನಿ ಕಾಡಿನ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಲಾಗಿದೆ. ಜೊತೆಗೆ ಬೈಚ್ಚನ ಮನೆ ರಸ್ತೆಯ ಕಾಮಗಾರಿ ಪೂರ್ಣವಾಗಿದೆ. ಸ್ವಚ್ಛ ಭಾರತ ಯೋಜನೆ ಮೂಲಕ ಶೌಚಾಲಯವನ್ನು ನಿರ್ಮಾಣ ಮಾಡಿಕೊಡಲಾಗಿದೆ. ನನ್ನ ಗ್ರಾಮದಲ್ಲಿ ಬರುವಂತಹ ಏಳು ವಾರ್ಡ್ ನಲ್ಲಿ ಸಹ ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ನಾರ್ಗಾಣೆ ಗ್ರಾಮದಲ್ಲಿ ವಸತಿ ಯೋಜನೆಯಲ್ಲಿ 7 ರಿಂದ 10 ಮನೆಗಳನ್ನು ಫಲಾನುಭವಿ ಕುಟುಂಬಗಳಿಗೆ ನಿರ್ಮಾಣ ಮಾಡಿಕೊಡಲಾಗಿದೆ. ಒಟ್ಟಿನಲ್ಲಿ ನಮ್ಮ ಗ್ರಾಮದಲ್ಲಿ ಶೇಕಡ 70%ರಷ್ಟು ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿದೆ.
ಪ್ರಸ್ತುತ ಗ್ರಾಮ ಪಂಚಾಯಿತಿಯ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ನನ್ನ ಕ್ರಿಯಾ ಯೋಜನೆ ಬಗ್ಗೆ ಹೇಳುವುದಾದರೆ ಪ್ರಸ್ತುತ ಹೊಸ ಪಂಚಾಯಿತಿ ಕಟ್ಟಡ ನಮ್ಮ ಅವಧಿಯಲ್ಲಿ ಉದ್ಘಾಟನೆಗೊಂಡಿದ್ದು. ಸುಂಟಿಕೊಪ್ಪ ನಗರದಲ್ಲಿ ಒಂದು ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವುದು ಇದಕ್ಕಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಲೋಟಸ್ ಲೇಔಟ್ ನಿಂದ 9.½ ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಹಾಗೂ ಇದಕ್ಕಾಗಿ ಆರ್.ಎಂ.ಸಿ ಜಿಲ್ಲಾ ಪಂಚಾಯಿತಿ ಯಿಂದ ಅನುದಾನ ಬಿಡುಗಡೆ ಆಗಿದೆ. ಜೊತೆಗೆ ಪ್ರಸ್ತುತ ನಗರದ ರಸ್ತೆ ಬದಿಯಲ್ಲಿರುವ ಹಳೆ ಮಾರುಕಟ್ಟೆ ಮತ್ತು ಪಂಚಾಯಿತಿ ಕಟ್ಟಡವನ್ನು ಕೆಡವಿ ಉತ್ತಮವಾದ ವಾಣಿಜ್ಯ ಸಂಕೀರ್ಣವನ್ನು ಹಾಗೂ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ಮಾಡಲಾಗಿದೆ.
ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರ್ಮಿಕ ಕುಟುಂಬಗಳೇ ಹೆಚ್ಚಾಗಿದ್ದು ಅವರೆಲ್ಲರಿಗೂ ಸ್ವಂತ ಮನೆಯನ್ನು ಮಾಡಲು ಪೈಸಾರಿ ಜಾಗವನ್ನು ಗುರುತಿಸಲಾಗುವುದು. ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರೂ ಕೂಡ ವಸತಿ ರಹಿತರಾಗಿರಬಾರದು ಎಂಬುದು ನನ್ನ ಕನಸಾಗಿದೆ.
ಅಲ್ಲದೆ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದೇಶದಿಂದ ಕಾರ್ಮಿಕರು ಆಗಮಿಸುತ್ತಿದ್ದಾರೆ ಎಂಬ ವದಂತಿ ಇದ್ದು, ಇದನ್ನು ಪರಿಹರಿಸಲು ಯಾರೆಲ್ಲ ಕಾರ್ಮಿಕರಾಗಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ ಅವರ ವೋಟರ್ ಐ.ಡಿ, ಆಧಾರ್ ಕಾರ್ಡ್ ಮಾಹಿತಿಯನ್ನು ಪಂಚಾಯಿತಿ ಕಚೇರಿಗೆ ತಲುಪಿಸಬೇಕು ಮತ್ತು ಸ್ಥಳೀಯ ಪೊಲೀಸ್ ಕಚೇರಿಗೆ ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇದಕ್ಕಾಗಿ ತೋಟದ ಮಾಲೀಕರು ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿ ಕೊಳ್ಳುತ್ತಿದ್ದೇನೆ.
ಸುಂಟಿಕೊಪ್ಪ ಮಾರ್ಗವಾಗಿ ಹಾದು ಹೋಗುವ ನೂತನ ಬೈಪಾಸ್ ಮಾರ್ಗದ ಸರ್ವೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ನಮ್ಮ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ. ಹಾಗಾಗಿ ಬೈಪಾಸ್ ಮಾರ್ಗ ನಿರ್ಮಾಣಗೊಂಡಲ್ಲಿ ಸುಂಟಿಕೊಪ್ಪ ಪಟ್ಟಣದಲ್ಲಿ ಈಗಿರುವ ರಸ್ತೆ ಬದಿಯ ಕಟ್ಟಡಗಳಿಗೆ ರಸ್ತೆ ಅಗಲೀಕರಣದ ಸಂದರ್ಭ ಎದುರಾಗುವ ಸಮಸ್ಯೆ ಎದುರಾಗುವುದನ್ನು ತಪ್ಪಿಸಿದಂತಾಗುತ್ತದೆ.
ಸುಂಟಿಕೊಪ್ಪ ನಗರದಲ್ಲಿರುವ ಸರಕಾರಿ ಆಸ್ಪತ್ರೆಯು 7 ಗ್ರಾಮ ಪಂಚಾಯಿತಿಗೆ ಸೇರಿದ ಹೋಬಳಿ ಆಸ್ಪತ್ರೆಯಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯರ ಕೊರತೆ ಇದ್ದು, ಜೊತೆಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ನಮ್ಮ ಕ್ಷೇತ್ರದ ಲೋಕಸಭಾ ಸದಸ್ಯರು ಹಾಗೂ ವಿಧಾನಸಭಾ ಶಾಸಕರಿಗೆ ಮನವಿಯನ್ನು ಮಾಡಲಾಗಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣವನ್ನು ಮಾಡಲು ಅಕ್ಕ-ಪಕ್ಕದ ನಗರಕ್ಕೆ ಹೋಗುವ ಅನಿವಾರ್ಯತೆ ಇದೆ ಹಾಗಾಗಿ ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ ಪದವಿ ಕಾಲೇಜಿನ ಅವಶ್ಯಕತೆ ಇದ್ದು, ಅದರ ನಿರ್ಮಾಣಕ್ಕೆ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ.
ಸುಂಟಿಕೊಪ್ಪ ಪಂಚಾಯಿತಿಗೆ ಆದಾಯದ ಮೂಲ ತೆರಿಗೆ ಆಗಿದೆ. ಇತ್ತೀಚೆಗೆ ಪಂಚಾಯಿತಿಯಿಂದ ಬಾಕಿ ಉಳಿದಿದ್ದ ಸುಮಾರು 32 ಲಕ್ಷದ ವಿದ್ಯುತ್ ಶಕ್ತಿ ಬಿಲ್ಲನ್ನು ಕಟ್ಟಲಾಗಿದೆ.
ಮುಂದಿನ ದಿನಗಳಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯತಿಯನ್ನು ಸುಂದರವಾದ ಮಾದರಿ ಪಂಚಾಯಿತಿಯನ್ನಾಗಿ ಮಾಡಲು ನಾನು ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರವನ್ನು ಪಡೆದು ಶ್ರಮಿಸುತ್ತೇನೆ.
ಧಾರ್ಮಿಕ ಕ್ಷೇತ್ರದಲ್ಲಿ ನಾನು ಸುಂಟಿಕೊಪ್ಪ ರಾಮ ಮಂದಿರ ಹಾಗೂ ಚಾಮುಂಡೇಶ್ವರಿ ದೇವಾಲಯ ಮುತ್ತಪ್ಪ ದೇವಾಲಯ ಸಮಿತಿಯ ಜೊತೆಗೆ ವಿನಾಯಕ ಸೇವಾ ಸಮಿತಿ ನಾರ್ಗಾಣೆ ಗ್ರಾಮದ ಸದಸ್ಯನಾಗಿದ್ದೇನೆ. ಸಾಮಾಜಿಕ ಕ್ಷೇತ್ರದಲ್ಲಿ ನಾನು ಸುಂಟಿಕೊಪ್ಪ ವರ್ಕ್‌ಶಾಪ್ ಮಾಲೀಕರ ಸಂಘದ ಅಧ್ಯಕ್ಷನಾಗಿದ್ದೇನೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಾನು ಗದ್ದೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯಲ್ಲಿ ಸದಸ್ಯನಾಗಿದ್ದೇನೆ.
ಪಿ.ಆರ್. ಸುನಿಲ್ ಕುಮಾರ್ ಅವರ ಕುಟುಂಬ ಪರಿಚಯ: ತಂದೆ: ದಿ. ಪಿ.ವಿ. ರಾಮಕೃಷ್ಣ (ಆಗಿನ ಗದ್ದೆಹಳ್ಳ ಪುರಸಭೆಯ ಸದಸ್ಯರಾಗಿದ್ದರು), ತಾಯಿ: ಪಿ.ಕೆ. ಶಾಂತ, ಪತ್ನಿ: ರಾಜೇಶ್ವರಿ ಸುನಿಲ್ ಕುಮಾರ್ (ಗೃಹಿಣಿ), ಹಿರಿಯ ಸಹೋದರ: ಸುಕುಮಾರ್ (ಸುಂಟಿಕೊಪ್ಪ ಪಂಚಾಯಿತಿಯ ಎರಡು ಬಾರಿ ಸದಸ್ಯರಾಗಿ ಹಾಗೂ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ)
ಮೂಲತ: ಕೃಷಿಕರು ಹಾಗೂ ಸ್ವ-ಉದ್ಯಮವಾದ ಸೌಮ್ಯ ಇಂಜಿನಿಯರಿಂಗ್ ವರ್ಕ್ಸ್‌ನ ಮಾಲೀಕರಾಗಿರುವ ಪಿ.ಆರ್. ಸುನಿಲ್ ಕುಮಾರ್‌ವರು ಪ್ರಸ್ತುತ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಾರ್ಗಾಣೆ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಧಾರ್ಮಿಕ, ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 14-08-2023