ಮೂರ್ನಾಡು: ಇಲ್ಲಿನ ನಂ.೪೩೯ನೇ ಸಹಕಾರ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ೯೯ನೇ ವಾರ್ಷಿಕ ಕೈಲ್ ಮುಹೂರ್ತ ಹಬ್ಬದ ಆಟೋಟಗಳ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ಲಬ್‌ನ ವತಿಯಿಂದ ಆಯೋಜಿಸಲಾಗಿದ್ದ ಆಟೋಟಗಳ ಕಾರ್ಯಕ್ರಮಗಳನ್ನು ಮೂರ್ನಾಡು ವಿದ್ಯಾಸಂಸ್ಥೆಯ ಗೌ|| ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಮಹನೀಯರು, ಮಹಿಳೆಯರು, ಶಾಲಾ-ಕಾಲೇಜು ಮಕ್ಕಳು ವಿವಿಧ ಓಟದ ಸ್ಪರ್ಧೆಗಳು, ಕಣ್ಣುಕಟ್ಟಿ ಮಡಿಕೆ ಹೊಡೆಯುವುದು, ಭಾರದ ಕಲ್ಲು ಎಸೆತ, ವಿಷದ ಚೆಂಡು, ನಿಂಬೆಹಣ್ಣು ಚಮಚ ಓಟ, ವಾದ್ಯದ ಕುಣಿತ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರು ಮುಖ್ಯ ಅತಿಥಿಗಳಿಂದ ಬಹುಮಾನ, ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು.
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಆರು ಗ್ರಾಮಗಳ ಮಹನೀಯರು ಮತ್ತು ಮಹಿಳೆಯರ ತಂಡಗಳ ಮಧ್ಯೆ ಜರುಗಿದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಮಹನೀಯರ ಕಿಗ್ಗಾಲು ಗ್ರಾಮದ ತಂಡವು ಕಾಂತೂರು ಗ್ರಾಮದ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಕಿಗ್ಗಾಲು ಗ್ರಾಮದ ತಂಡವು ಮುತ್ತಾರುಮುಡಿ ಗ್ರಾಮದ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯಲ್ಲಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಪ್ರಥಮ, ಮಂಡಂಡ ಪವಿ ಸೋಮಣ್ಣ ದ್ವಿತೀಯ ಮತ್ತು ಅವರೆಮಾದಂಡ ಸುಗುಣ ಸುಬ್ಬಯ್ಯ ತೃತೀಯ ಬಹುಮಾನಗಳನ್ನು ಪಡೆದುಕೊಂಡರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ ಕೊಡಗಿನಲ್ಲಿ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಹಿಂದಿನ ಕಾಲದಿಂದಲೂ ನಡೆಸುತ್ತಾ ಬರುವ ಆಟೋಟಗಳು, ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಸಾಗುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯಾಗಿದೆ. ಕ್ರೀಡೆಯಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಇಲ್ಲಿ ಕ್ರೀಡಾ ತರಬೇತಿ ಶಾಲೆಯನ್ನು ಪ್ರಾರಂಭಿಸುವಂತಾಗಬೇಕು. ಕೊಡಗಿನ ಕಲೆ ಮತ್ತು ಸಂಸ್ಕೃತಿ ಬಗ್ಗೆ ದೇಶದ ಎಲ್ಲೆಡೆಯೂ ವಿಶೇಷ ಅಭಿಮಾನ ಇದೆ. ಪ್ರತಿ ಮಕ್ಕಳಲ್ಲೂ ಕಲಾಪ್ರತಿಭೆ ಸುಪ್ತವಾಗಿದ್ದು, ಅದನ್ನು ಹೊರಚೆಲ್ಲುವ ಪ್ರಯತ್ನಗಳಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಮತ್ತು ಅಂತರಾಷ್ಟ್ರೀಯ ಹಾಕಿ ಆಟಗಾರರು ಮತ್ತು ಏಕಲವ್ಯ ಪ್ರಶಸ್ತಿ ವಿಜೇತೆ ಕಂಬೀರಂಡ ಪೊನ್ನಮ್ಮ ಬೋಪಣ್ಣ ಅವರನ್ನು ಕ್ಲಬ್‌ನ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಮುಂಡಂಡ ಪವಿ ಸೋಮಣ್ಣ ವಹಿಸಿದ್ದರು. ವೇದಿಕೆಯಲ್ಲಿ ಕ್ಲಬ್‌ನ ಗೌ|| ಕಾರ್ಯದರ್ಶಿ ಮೇರ್ಕಜೆ ಲೋಹಿತ್ ಸೋಮಯ್ಯ, ಉಪಾಧ್ಯಕ್ಷ ಚೇನಂಡ ಪಿ. ಅಯ್ಯಣ್ಣ, ನಿರ್ದೇಶಕರುಗಳಾದ ಪುದಿಯೊಕ್ಕಡ ಪೊನ್ನು ಮುತ್ತಪ್ಪ, ಕೋಟೇರ ಮೇದಪ್ಪ, ಬೈಲೆ ತಿಮ್ಮಯ್ಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಮೂಡೇರ ಮನು ಮುತ್ತಪ್ಪ, ಕ್ಲಬ್‌ನ ಮಾಜಿ ಅಧ್ಯಕ್ಷರುಗಳಾದ ಚೇನಂಡ ಅಶೋಕ್, ಪಳಂಗಂಡ ಅಪ್ಪಣ್ಣ ಮತ್ತು ಪುದಿಯೊಕ್ಕಡ ಬೆಲ್ಲು ಸೋಮಯ್ಯ ಉಪಸ್ಥಿತರಿದ್ದರು. ಅಪ್ಪಚಂಡ ತ್ರಿಶಾ ಕಾವೇರಪ್ಪ ಪ್ರಾರ್ಥನೆಗೈದರು. ಮೂಡೇರ ಹರೀಶ್ ಕಾಳಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಬೈಲೆ ತಿಮ್ಮಯ್ಯ ವಂದಿಸಿದರು.
ಸುದ್ದಿ- ಚಿತ್ರ: ಟಿ. ಸಿ. ನಾಗರಾಜ್, ಮೂರ್ನಾಡು