ಸಿರಿಲ್‌ ಮೊರಾಸ್, ಸಹಕಾರಿಗಳು: ಮಡಿಕೇರಿ

Reading Time: 8 minutes

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಡಿಕೇರಿ ನಗರದಲ್ಲಿ ಕಾರ್ಯಾಚರಿಸುತ್ತಿರುವ *ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘ* ಇದರ ಅಧ್ಯಕ್ಷರಾಗಿ ಶ್ರೀ ಸಿರಿಲ್‌ ಮೊರಾಸ್‌ರವರು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.

ಇವರನ್ನು”ಸರ್ಚ್‌ ಕೂರ್ಗ್‌ ಮೀಡಿಯಾ”ವು ಪ್ರಸ್ತುತ ಪಡಿಸಿರುವ “ಕೊಡಗು ಸಹಕಾರ ದರ್ಶನ” ಎಂಬ ಕೊಡಗಿನ ಸಹಕಾರ ಚಳುವಳಿಯ ಡಿಜಿಟಲ್‌ ದಾಖಲೆಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀ ಸಿರಿಲ್‌ ಮೊರಾಸ್‌ರವರು, ನಾನು 1985ರಲ್ಲಿ ಸಹಕಾರ ಸಂಘದ ಲೆಕ್ಕ ಪರಿಶೋಧನ ಇಲಾಖೆಗೆ ಉದ್ಯೋಗಿಯಾಗಿ ಸೇರಿದೆನು. 5ವರ್ಷಗಳ ಕಾಲ ಮಂಗಳೂರಿನಲ್ಲಿ ಸೇವೆ ಸಲ್ಲಿಸಿ 1990ರಲ್ಲಿ ಕೊಡಗು ಜಿಲ್ಲೆಗೆ ವರ್ಗಾವಣೆಗೊಂಡೆ. ಅಲ್ಲಿಂದ 2017ರವರಗೆ ಸಹಕಾರ ಸಂಘದ ಲೆಕ್ಕ ಪರಿಶೋಧನ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2017 ರ ಆಗಸ್ಟ್‌ ಮಾಹೆಯಲ್ಲಿ ನಿವೃತ್ತಿ ಹೊಂದಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಹಕಾರ ಸಂಘದ ಲೆಕ್ಕ ಪರಿಶೋಧನ ಇಲಾಖೆಯಲ್ಲಿ ಸರಿ ಸುಮಾರು 32 ವರ್ಷಗಳ ಕಾಲ ಸೇವಾ ಅನುಭವವನ್ನು ಹೊಂದಿದ ನಾನು 2019ರಲ್ಲಿ ಕೊಡಗು ಜಿಲ್ಲೆಯ ಕ್ರೈಸ್ತ ಸಮುದಾಯದವರ ಹಾಗೂ ಸಾರ್ವಜನಿಕರ ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘವನ್ನು ಸಮಾನ ಮನಸ್ಕರು ಹಾಗೂ ಸ್ನೇಹಿತರನ್ನು ಕೂಡಿಕೊಂಡು ಸಮಾಲೋಚಿಸಿ ಆರಂಭ ಮಾಡಿದೆವು. ಅದರೊಂದಿಗೆ ಸಂಘದ ಸ್ಥಾಪಕ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ.

ಕೊಡಗು ಜಿಲ್ಲಾದ್ಯಂತ ಮುಖ್ಯ ಪ್ರವರ್ತಕನಾದ ನಾನು ಹಾಗೂ ಪ್ರವರ್ತಕರುಗಳಾದ ಶ್ರೀ ಸಾರ್ಜಂಟ್‌ ಇಮ್ಯಾನುವೆಲ್, ಶ್ರೀ ಮಾರ್ಟಿನ್‌ .ಪಿ.ಟಿ,  ಶ್ರೀ ಜೋಸೆಫ್‌ ವಿನ್ಸೆಂಟ್‌, ಶ್ರೀ ಕ್ಲೆಮೆಂಟ್‌ ರೇಗೊ, ಶ್ರೀ, ಸುನಿಲ್‌ ಲೋಬೊ, ಶ್ರೀ ಗೋಡ್ವಿನ್‌ ಮಸ್ಕರೇನಸ್‌, ಕುಮಾರಿ ಜುಡಿತ್‌ ಮಸ್ಕರೇನಸ್‌, ಶ್ರೀ ರಿಚರ್ಡ್‌ ಉಲ್ಲಾಸ್‌, ಶ್ರೀ ಎಸ್.‌ಎಂ. ಡಿಸಿಲ್ವಾ, ಶ್ರೀ ಜೋಕಿಮ್‌ ವಾಜ್‌, ಶ್ರೀ ವಿನ್ಸಿ ಡಿಸೋಜಾ, ಶ್ರೀ ಎನ್.ಟಿ. ಜೋಸೆಫ್‌, ಶ್ರೀ ಬೆನೆಡಿಕ್ಟ್‌ ಆರ್.‌ ಸಲ್ಡಾನ, ಶ್ರೀ ಸಿ.ಜಿ. ವರ್ಗಿಸ್‌ ಹಾಗೂ ಶ್ರೀಮತಿ ಅನಿತಾ ತೆರೆಸಾ ಲೋಬೊ ಇವರೊಂದಿಗೆ ಪ್ರಯಾಣ ಮಾಡಿ ಸರಿ ಸುಮಾರು 962 ಸದಸ್ಯರನ್ನೊಳಗೊಂಡ ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘವನ್ನು ಸಹಕಾರ ಇಲಾಖೆಯಲ್ಲಿ ನೋಂದಾವಣೆಗೊಳಿಸಿ ಅಧಿಕೃತವಾಗಿ ಚಾಲನೆಗೆ ತಂದೆವು. ಪ್ರಸ್ತುತ ಸಂಘದಲ್ಲಿ 1036 ಸದಸ್ಯರು ಇದ್ದಾರೆ.

ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘವು ಲಾಭದಲ್ಲಿದ್ದು, 2022-23ರ ಸಾಲಿನಲ್ಲಿ ರೂ. 8.66 ಲಕ್ಷಗಳಷ್ಷು ಲಾಭವನ್ನು ಪಡೆದಿದ್ದು, ಇದರಲ್ಲಿ ಸದಸ್ಯರಿಗೆ ಶೇಕಡ 8%ರಷ್ಟು ಡಿವಿಡೆಂಟ್‌ನ್ನು ವಿತರಿಸಲಾಯಿತು.

ಸಂಘದಲ್ಲಿ ನಿರಖು ಠೇವಣಿ, ಸಂಚಯ ಠೇವಣಿ, ಪಿಗ್ಮಿ ಠೇವಣಿ, ಆರ್.ಡಿ ಹಾಗೂ ತ್ರಿಪ್ಟ್ ಡಿಪಾಸಿಟ್‌ ನಂತಹ ಠೇವಣಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಹಾಗೆ ಜಾಮೀನು ಸಾಲ, ಆಸ್ತಿ ಅಡಮಾನದ ಸಾಲ, ಆಭರಣ ಸಾಲ, ವಾಹನ ಸಾಲ, ವೇತನ ಆಧಾರಿತ ಸಾಲ, ಪಿಗ್ಮಿ ಆಧಾರಿತ ಸಾಲ ಹಾಗೂ ಸ್ವ ಸಹಾಯ ಸಂಘಗಳಿಗೆ ಸಾಲ ಮುಂತಾದ ಸಾಲಗಳನ್ನು ನೀಡಲಾಗುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ‌ ರೂ. 6.52 ಕೋಟಿಗಳಷ್ಟು ಠೇವಣಿ ಹಾಗೂ ರೂ. 5.76 ಕೋಟಿಗಳಷ್ಟು ವಿವಿಧ ಸಾಲಗಳು ಹೊರ ಬಾಕಿಯಿದ್ದು, 2022-23ನೇ ಸಾಲಿನಲ್ಲಿ ರೂ. 30.72 ಕೋಟಿಯಷ್ಟು ಒಟ್ಟು ವಹಿವಾಟು ಆಗಿದೆ. ಸಂಘವು ಪ್ರಾರಂಭಗೊಂಡು ಕೇವಲ ಮೂರುವರೆ ವರ್ಷದಲ್ಲಿ ಹಲವಾರು ಠೇವಣಿಗಳನ್ನು ಸಂಗ್ರಹಿಸಿ ಹಾಗೆ ವಿವಿಧ ರೀತಿಯ ಸಾಲಗಳನ್ನು ನೀಡಲಾಗಿದೆ. ಅದರೊಂದಿಗೆ ಸದಸ್ಯರಿಗೆ ಶೇಕಡ 8%ರಷ್ಟು ಡಿವಿಡೆಂಟ್‌ನ್ನು ನೀಡಿರುವುದು ಸಂಘವು ಪ್ರಗತಿಯತ್ತ ಸಾಗುತ್ತಿರುವುದನ್ನು ತೋರಿಸುತ್ತಿದೆ.

ಸಂಘದಲ್ಲಿ ಇ-ಸ್ಟಾಂಪಿಂಗ್‌, NEFT, RTGS, ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿವರ್ಷ ನಿಗದಿತ ಸಮಯದಲ್ಲಿ ಪರಿಶೋಧನೆ ಪೂರ್ಣಗೊಳಿಸಿ ಮಹಾ ಸಭೆಯನ್ನು ನಡೆಸಲಾಗುತ್ತಿದೆ. ಸಂಘದ ಲೆಕ್ಕ ಪರಿಶೋಧನೆಯಲ್ಲಿ ಸಂಘವನ್ನು “ಬಿ” ತರಗತಿಯಲ್ಲಿ ವರ್ಗೀಕರಿಸಲಾಗಿದೆ. 2022-23ರ ಸಾಲಿನಲ್ಲಿ ಶೇಕಡ 93.03% ಸಾಲ ವಸೂಲಾತಿಯಾಗಿದ್ದು, ಮುಂದಿನ ದಿನಗಳಲ್ಲಿ ಶೇಕಡ 100% ರಷ್ಟು ಸಾಲ ವಸೂಲಾತಿಯ ಗುರಿಯನ್ನು ಹೊಂದಲಾಗಿದೆ.

ನಮ್ಮ ಸಂಘದ ವ್ಯವಹಾರವು ಶೇಕಡ 100% ರಷ್ಟು ಗಣಕೀಕರಣಗೊಂಡಿದ್ದು, ಸಂಘವು ಸ್ಥಾಪನೆಗೊಂಡಾಗ ಸಂತ ಮೈಕಲರ ಚರ್ಚ್‌ನ ವಾಣಿಜ್ಯ ಸಂಕೀರ್ಣದಲ್ಲಿ ಕೇವಲ 10*20 ಅಡಿಗಳ ಕೊಠಡಿಯಲ್ಲಿ ಕಾರ್ಯಾಚರಿಸುತ್ತಿತ್ತು. ಇದೀಗ 2023ರ ಜನವರಿಯಿಂದ ಮಡಿಕೇರಿಯ ಕಾಲೇಜು ರಸ್ತೆಯಲ್ಲಿನ ಕೂರ್ಗ್‌ ಎಂಟರ್‌ಪ್ರೈಸಸ್‌ ವಾಣಿಜ್ಯ ಸಂಕೀರ್ಣದ ವಿಶಾಲವಾದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಮಾನಗಳಲ್ಲಿ ಸಂಘಕ್ಕೆ ಸುಸಜ್ಜಿತವಾದ ಸ್ವಂತ ಕಟ್ಟಡ ನಿರ್ಮಿಸಲು ಜಾಗವನ್ನು ಖರೀದಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ. ಹಾಗೆ ಕೊಡಗು ಜಿಲ್ಲೆಯ ತಾಲ್ಲೂಕು ಮಟ್ಟದಲ್ಲಿ ಸಂಘದ ಶಾಖೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ. ಜಿಲ್ಲಾದ್ಯಂತಾ ಪಿಗ್ಮಿ ಏಜೆಂಟರುಗಳನ್ನು ನೇಮಿಸಿ ಕಡಿಮೆ ವೆಚ್ಚದ ಠೇವಣಿಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಅದರೊಂದಿಗೆ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೂಡ ಕ್ರೀಯಾ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಒಟ್ಟಿನಲ್ಲಿ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘವನ್ನು ಕೊಡಗು ಜಿಲ್ಲೆಯಲ್ಲಿ ಮಾದರಿ ಸಂಘವಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮವಹಿಸಲಾಗುತ್ತಿದೆ.

ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರುಗಳು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲು‌ ಹರ್ಷ ವ್ಯಕ್ತಪಡಿಸುತ್ತಿದ್ದೇನೆ.

 ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪವಿರಬಾರದು ಆದರೆ ಇಲಾಖಾ ಮಟ್ಟದಲ್ಲಿ ಸ್ವಲ್ಪ ನಿಯಂತ್ರಣವಿರಬೇಕೆಂಬುದು ನನ್ನ ಆಭಿಪ್ರಾಯವಾಗಿದೆ. ಸಹಕಾರ ಸಂಘಗಳಲ್ಲಿ ಆಡಳಿತ ನಡೆಸುವವರು ಜವಾಬ್ದಾರಿಯುತವಾಗಿ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು. ವಿಶೇಷವಾಗಿ ಪತ್ತಿನ ಸಹಕಾರ ಸಂಘಗಳಲ್ಲಿ ನಿಧಿಗಳ ನಿರ್ವಹಣೆ ಅತಿ ಮುಖ್ಯವಾಗಿದ್ದು, ಅದರಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಆಳವಾದ ಅರಿವಿರುವ ನುರಿತ ಆಡಳಿತಗಾರರು ಇರಬೇಕು.  ಸ್ವಾರ್ಥ ರಹಿತವಾದ ಪಾರದರ್ಶಕವಾದ ಆಡಳಿತವಿದ್ದರೆ ಸಹಕಾರ ಕ್ಷೇತ್ರವು ಅಭಿವೃದ್ದಿ ಪಥದತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ನನ್ನ ಅಭಿಮತವಾಗಿದೆ.

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ರಾಜಕೀಯ ರಹಿತವಾಗಿ ತಮ್ಮನ್ನು ತೊಡಿಗಿಸಿಕೊಳ್ಳಬೇಕು. ಇದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ನನ್ನ  ಸಂದೇಶವಾಗಿದೆ.

ಸಹಕಾರ ಕ್ಷೇತ್ರದಲ್ಲಿ ನಾನು ಕೊಡಗು ಜಿಲ್ಲಾ ಸಹಕಾರ ನೌಕರರ ಸಂಘದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಸಾಮಾಜಿಕ ಕ್ಷೇತ್ರದಲ್ಲಿ ಸಂತ ಮೈಕಲರ ಪ್ಯಾರಿಸ್‌ ಸೊಸೈಟಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವ. ಕೊಡಗಿನಾದ್ಯಂತವಿರುವ ಎಲ್ಲಾ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘಗಳಿಗೆ ವೈದ್ಯನಾಥನ್‌ ಸಮಿತಿಯ ಶಿಫಾರಸಿನನ್ವಯ ಲೆಕ್ಕಪತ್ರ ನಿರ್ವಹಣೆಯ ಬಗ್ಗೆ ನಿರಂತರವಾಗಿ ಉಪನ್ಯಾಸ ನೀಡಿದ್ದೇನೆ. ಸಹಕಾರಿ ಡಿಪ್ಲೋಮ ಕಾಲೇಜಿಗೆ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತೇನೆ.

ಎಂ.ಕಾಂ. ಹಾಗೂ ಎಂ.ಬಿ.ಎ. ಪಧವೀದರರಾಗಿರುವ, ಮೂಲತ: ಕೃಷಿಕರು ಹಾಗೂ ಮಂಗಳೂರಿನ ಬಂಟವಾಳ ತಾಲ್ಲೂಕಿನ ಸಿದ್ದಕಟ್ಟೆ ಎಂಬಲ್ಲಿ ಜನಿಸಿದ ಶ್ರೀ ಸಿರಿಲ್‌ ಮೊರಾಸ್‌ರವರ ತಂದೆ: ದಿವಂಗತ ಬ್ಯಾಪ್ಟಿಸ್ಟ್ ಮೊರಾಸ್‌. ತಾಯಿ: ದಿವಂಗತ ಸಂತಾನ ಮೊರಾಸ್‌. ಪತ್ನಿ: ಶ್ರೀಮತಿ ಗ್ರೇಸಿ ಲೋಬೊ ಇವರು ಮಡಿಕೇರಿಯ ಸಂತ ಜೋಸೆಫ್‌ ಫ್ರೌಡ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಮಗ: ಅಚಲ್‌ ಮೊರಾಸ್‌ ಇಂಜಿನಿಯರಿಂಗ್‌ ಪಧವೀದರರಾಗಿ‌ ಅಮೇರಿಕಾದಲ್ಲಿ ಸ್ನಾತಕೋತರ ಪದವಿ ಪಡೆದು ಅಮೇರಿಕಾದ ಪೆನ್ಸಿಲಿವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಸೊಸೆ: ಶ್ರೀಮತಿ ಅಪೂರ್ಬ ಸಿಕ್ವೇರಾ ಇಂಜಿನಿಯರಿಂಗ್‌ ಪಧವೀದರರಾಗಿ ಸ್ನಾತಕೋತರ ಪದವಿಯನ್ನು ದೆಹಲಿಯಲ್ಲಿ ಪೂರೈಸಿ ಅಮೇರಿಕಾದ ಪೆನ್ಸಿಲಿವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಮೊಮ್ಮಕ್ಕಳು ಆಸರ್‌ ಮೊರಾಸ್‌ ಮತ್ತು ಏವಾ ಮೊರಾಸ್‌. ಮಗಳು: ಕುಮಾರಿ ಕ್ರಿಸ್ಟಲ್‌ ಮೊರಾಸ್‌ ಅಮೇರಿಕಾದ ನ್ಯೂಯರ್ಕ್‌ನಲ್ಲಿ ಎಂ.ಡಿ. ವ್ಯಾಸಂಗ ನಿರತರಾಗಿದ್ದಾರೆ. 

ಪ್ರಸ್ತುತ ಶ್ರೀ ಸಿರಿಲ್‌ ಮೊರಾಸ್‌ರವರು ಮಡಿಕೇರಿ ನಗರದ ಕಾವೇರಿ ಲೇಔಟ್‌ನಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

*ಸಂದರ್ಶನ ದಿನಾಂಕ: 02-11-2023*

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments