ಕೊಡಗಿನ ಅನಿವಾಸಿಗಳ ಒಕ್ಕೂಟವಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವಾರ್ಷಿಕ ಮಹಾಸಭೆಯು ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಂಸ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ರಿಯಾದ್ ಅಲ್ಮಾಸ್ ಆಡಿಟೋರಿಯಂನಲ್ಲಿ ನಡೆಯಿತು. ಮರ್ಕಝುಲ್ ಹಿದಾಯ ಕೊಟ್ಟಮುಡಿ ಇದರ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಮುಖ್ಯ ಅತಿಥಿಯಾಗಿ ಆಗಮಿಸಿದರು.
ಸೌದಿ ಅರೇಬಿಯಾದಲ್ಲಿರುವ ಕೊಡಗಿನ ಯಾವುದೇ ಅನಿವಾಸಿಗಳು ಜಾತಿ ಮತ ಭೇದವಿಲ್ಲದೆ ಸಂಕಷ್ಟಕ್ಕೆ ಒಳಗಾದರೆ ಅವರಿಗೆ ಬೇಕಾದ ಸಹಾಯ ಹಸ್ತಗಳನ್ನು ನೀಡಲು, ಸಂಘಟನೆಯ ಸದಸ್ಯರುಗಳ ಕುಂದು ಕೊರತೆಗಳನ್ನು ತಿಳಿದು ಅವರಿಗೆ ಬೇಕಾದಂತಹ ರೀತಿಯಲ್ಲಿ ಸಹಾಯ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಲಹಾ ಸಮಿತಿ ಚೆರ್ಮೆನ್ ಆಗಿ ಮುಸ್ತಫಾ ಕಡಂಗ, ಅಧ್ಯಕ್ಷರಾಗಿ ಹಂಝ ಮುಸ್ಲಿಯಾರ್ ಚೋಕಂಡಳ್ಳಿ,ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ನೆಲ್ಯಹುದಿಕೇರಿ, ಕೋಶಾಧಿಕಾರಿಯಾಗಿ ಖಾಸಿಂ ಸಖಾಫಿ ಕೊಂಡಂಗೇರಿ, ಸಂಘಟನಾ ಕಾರ್ಯದರ್ಶಿಯಾಗಿ ಶಂಸುದ್ದೀನ್ ತಕ್ಕಪಳ್ಳಿ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ 41 ಮಂದಿಯನ್ನು ಆಯ್ಕೆಮಾಡಲಾಯಿತು. ಸಮಿತಿಯ ಕೊಡಗು ಜಿಲ್ಲಾ ಉಸ್ತುವಾರಿಯಾಗಿ ಸಯ್ಯದ್ ಅಬ್ದುಲ್ ಖಾದರ್ ತಙ್ಙಳ್ ಅಯ್ಯಂಗೇರಿಯವರನ್ನು ನೇಮಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗಿನ ಅನಿವಾಸಿ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಂಝ ಮುಸ್ಲಿಯಾರ್ ಮಾಪಿಳತ್ತೋಡು ಪ್ರಾರ್ಥಿಸಿದರೆ,ಮುಸ್ತಫಾ ಝೈನಿ ನಿರೂಪಿಸಿ,ಮುಸ್ತಫಾ ಕಡಂಗ ಸ್ವಾಗತಿಸಿ, ರಫೀಕ್ ನೆಲ್ಯಹುದಿಕೇರಿ ವಂದಿಸಿದರು.