ನಾಡಿನ ಸರ್ವಾಂಗೀಣ ಪ್ರಗತಿಗೆ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘ ಸಹಕಾರಿ : ಶಾಂತ ಮಲ್ಲಿಕಾರ್ಜುನ ಸ್ವಾಮಿಜಿ
ಚೆಯ್ಯಂಡಾಣೆ, ಡಿ 3. ನಾಡಿನಾದ್ಯಂತ ಲಕ್ಷಾಂತರ ಜನರ ಬದುಕಿಗೆ ಬೆಳಕನ್ನು ಚೆಲ್ಲಿದಂತಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಬೇಕಾದಂತಹ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಮನುಷ್ಯನ ಜೀವನದ ಗುಣಮಟ್ಟವನ್ನು ಮೇಲೆತರಲು ಮಾಡಿರುವ ಸೇವೆ ಶ್ಲಾಘನೀಯ ಎಂದು ಅರಮೇರಿ ಕಳಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ನರಿಯಂದಡ ಇದರ ಸಹಯೋಗದಲ್ಲಿ ಚೆಯ್ಯಂಡಾಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಎನ್ನುವುದು ಒಬ್ಬ ವ್ಯಕ್ತಿಯ ವೈಯಕ್ತಿಕ ಆಚರಣೆಯಾಗಿದೆ. ಒಬ್ಬ ಮನುಷ್ಯ ಉತ್ತಮ ಸಂಸ್ಕಾರವನ್ನು ಹೊಂದಿದರೆ ಅವನಿಗೆ ಉತ್ತಮ ಜೀವನ ನಡೆಸಲು ಸಾಧ್ಯ. ಯಾವುದೇ ಜಾತಿ ಧರ್ಮಕ್ಕೆ ಸೇರಿದವನಾಗಿದ್ದರು ಮನುಷ್ಯ ಕುಲಕ್ಕೆ ಒಳ್ಳೆಯದನ್ನು ಬಯಸಬೇಕು. ಮನುಷ್ಯನು ತನ್ನ ವ್ಯಕ್ತಿತ್ವದ ಬಗ್ಗೆ ಅರಿವಿಲ್ಲದೆ ಆಗಬಾರದು.ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವವನ್ನು ಪರಿಚಯಿಸಲು ಜೀವನದಲ್ಲಿ ದೈವ ಭಕ್ತಿಯನ್ನು ಒಂದಿದರೆ ಮಾತ್ರ ಸಾಧ್ಯ ಎಂದ ಅವರು ದೈವಭಕ್ತಿಯು ಪೈಶಾಚಿಕ ಧರ್ಮ ಮತ್ತು ವ್ಯಕ್ತಿತ್ವವನ್ನು ನಾಶ ಮಾಡಿ ಒಳ್ಳೆಯ ಭಾವನೆಗಳನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದು ಆಶೀರ್ವದಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ನ ಯೋಜನಾಧಿಕಾರಿ ಪುರುಷೋತ್ತಮ ಅವರು ಮಾತನಾಡಿ ಪೂಜ್ಯ ವೀರೇಂದ್ರ ಹೆಗಡೆಯವರ ಕನಸಿನಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಯಾವುದೇ ಜಾತಿ,ಮತ,ಧರ್ಮ ಬೇದವಿಲ್ಲದೆ ನಾವೆಲ್ಲರೂ ಒಂದೇ ಎಂಬುವುದಾಗಿದೆ. ಪ್ರತಿ ಮನೆಯಲ್ಲೂ ಬೆಳಕು ಕಾಣಬೇಕು. ಬಡತನ ಎಂಬ ಬೇಗೆಯಿಂದ ಪ್ರತೀ ಕುಟುಂಬ ಮುಂದೆ ಬರಬೇಕು ಎಂಬ ಕಲ್ಪನೆಯಿಂದ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯನ್ನು ಮಾಡಿದ್ದಾರೆ. ಧರ್ಮಸ್ಥಳ ಸಂಘ ಆರ್ಥಿಕ ಚೈತನ್ಯಕ್ಕೆ ಮಾತ್ರ ಸೀಮಿತವಲ್ಲ.ಸಾಲ ಕೊಡುವುದರಿಂದ ಒಂದು ಕುಟುಂಬ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುವ ಮನೋಭಾವನೆ ಇದ್ದರೆ ಮಾತ್ರ ಒಂದು ಕುಟುಂಬ ಅಭಿವೃದ್ಧಿ ಹೊಂದಲು ಸಾದ್ಯ ಎಂದರು. ನಿವೃತ್ತ ಶಿಕ್ಷಕರಾದ ರೇಖಾ ಉಲ್ಲಾಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ವೀರೇಂದ್ರ ಹೆಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಹೆಗಡೆಯವರ ಶುಭ ಆಶೀರ್ವಾದಗಳೊಂದಿಗೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗೆ ಅರ್ಚಕರಾದ ಶಿವ ಶರ್ಮ ನೇತೃತ್ವ ವಹಿಸಿದರು.
ನರಿಯಂದಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪೆಮ್ಮಂಡ ಕೌಶಿ ಕಾವೇರಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಕುಮಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಒಕ್ಕೂಟ ನರಿಯಂದಡ ಇದರ ಅಧ್ಯಕ್ಷೆ ಮುಂಡಿಯೊಳಂಡ ಮಾಚಮ್ಮ, ನಾಪೋಕ್ಲು ಶೌರ್ಯ ತಂಡದ ಸದಸ್ಯರು, ಸ್ಥಳೀಯ ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು,ಮತಿತ್ತರರು ಪಾಲ್ಗೊಂಡಿದ್ದರು. ಸ್ವಾಗತವನ್ನು ಭಾಗಮಂಡಲ ವಲಯದ ಮೇಲ್ವಿಚಾರಕರಾದ ಸುನಿಲ್ ಕುಮಾರ್ ಹಾಗೂ ವಂದನೆಯನ್ನು ಪ್ರಭಾ ನಿರ್ವಹಿಸಿದರು.