ಇಂಥ ಶ್ರೇಷ್ಠ ಕಾರ್ಯಕ್ಕೆ ನಮ್ಮ ಜೀವನದ ಕೆಲ ಸಮಯ ನೀಡಿದ್ದು ಸಾರ್ಥಕ ಎನಿಸಿದೆ; ಕೆ.ಕೆ. ಮಹೇಶ್‌ ಕುಮಾರ್

ಇಂಥ ಶ್ರೇಷ್ಠ ಕಾರ್ಯಕ್ಕೆ ನಮ್ಮ ಜೀವನದ ಕೆಲ ಸಮಯ ನೀಡಿದ್ದು ಸಾರ್ಥಕ ಎನಿಸಿದೆ; ಕೆ.ಕೆ. ಮಹೇಶ್‌ ಕುಮಾರ್

 

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

1992 ರ ಕರಸೇವೆಯಲ್ಲಿ ಭಾಗವಹಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS)‌ ಹಿರಿಯ ಕಾರ್ಯಕರ್ತರಾದ ಕೆ.ಕೆ. ಮಹೇಶ್‌ ಕುಮಾರ್‌ ರವರ ಅನುಭವದ ಮಾತುಗಳು:

ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದ ಅಯೋಧ್ಯೆ ಹೋರಾಟ ನಿರ್ಣಾಯಕ ಘಟ್ಟಕ್ಕೆ ಮುಟ್ಟಲಾರಂಭಿಸಿದ್ದು 1988-89ರ ಸಂದರ್ಭದಲ್ಲಿ ದೇಶಾದ್ಯಂತ ನಡೆದ ರಾಮಶಿಲಾ ಪೂಜೆಯ ಮೂಲಕ.  1989ನೇಯ ಇಸವಿ ಆಗ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS)‌ ಕೊಡಗು ಜಿಲ್ಲಾ ಕಾರ್ಯವಾಹ ನಾಗಿದ್ದೆ. ಕೊಡಗಿನಲ್ಲಿ ಗ್ರಾಮಗಳಲ್ಲಿ ರಾಮಮಂದಿರಕ್ಕಾಗಿ ಇಟ್ಟಿಗೆಗಳನ್ನು ಪೂಜೆ ಮಾಡಲಾಯಿತು. ಅವನ್ನು ರಥಗಳಲ್ಲಿ ಇರಿಸಿಕೊಂಡು ಕೊಡಗಿನ ಅಷ್ಟದಿಕ್ಕುಗಳಲ್ಲೂ ಹಳ್ಳಿಹಳ್ಳಿಗೆ ತೆರಳಿ ಜನರಿಂದ ಪೂಜೆಗೊಳಪಟ್ಟಿತು.  ಆ ಸಮಯದಲ್ಲಿ ಕೊಡಗಿನಲ್ಲಿ ವ್ಯಾಪಕವಾದ ಬೆಂಬಲ ದೊರೆಯಿತು. ಲಾರಿಗಳಲ್ಲಿ ಪೂಜಿಸಿದ ಇಟ್ಟಿಗೆಳನ್ನು ಅಯೋಧ್ಯೆಗೆ ಕಳುಹಿಸಿ ಕೊಡಲಾಯಿತು.

ಕರಸೇವೆಗೆ ಜನರನ್ನು ಒಗ್ಗೂಡಿಸುವ ಸಲುವಾಗಿ 1990ರಲ್ಲಿ ರಾಮಜ್ಯೋತಿ ಯಾತ್ರೆಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಯಿತು. ಇದರಲ್ಲಿ ಕೊಡಗಿನಲ್ಲಿ ನಡೆದ ರಾಮಜ್ಯೋತಿ ಯಾತ್ರೆಯೂ ಕೂಡ ಬಹಳ ಯಶಸ್ವಿಯಾಯಿತು. 1990ರಲ್ಲಿ ಅಂದಿನ ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ ಸಿಂಘಾಲ್‌ ನೇತೃತ್ವದಲ್ಲಿ ನಡೆದ ಮೊದಲ ಕರಸೇವೆಗೆ ದೇಶದ್ಯಾಂತ ವ್ಯಾಪಕವಾದ ಬೇಂಬಲ ದೊರೆಯಿತು. 1990ರ ಅ.30ರಂದು ನಡೆದ ಮೊದಲ ಕರಸೇವೆಗೆ ಕೊಡಗಿನಿಂದ ಆಗಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS)‌ ಕೊಡಗು ಜಿಲ್ಲಾ ಸಂಘಚಾಲಕರಾದ ಸಿ.ವಿ. ಸದಾಶಿವರಾವ್‌ ಅವರ ನೇತೃತ್ವದಲ್ಲಿ 300 ಕ್ಕೂ ಹೆಚ್ಚು ಜನರು ತಂಡಗಳಲ್ಲಿ ಹೊರಟರು. ಕೊಡಗು ಸೇರಿದಂತೆ ಕರ್ನಾಟಕದಿಂದ ಒಟ್ಟು 3 ಸಾವಿರ ಜನರು ತಂಡಗಳಲ್ಲಿ ಹೊರಟರು. ಕಲ್ಲಡ್ಕ ಪ್ರಭಾಕರ ಭಟ್, ಬಿ.ಎನ್. ಮೂರ್ತಿ, ಅಯೋಧ್ಯಾ ಸೂರಿ, ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕರ ನೇತೃತ್ವದಲ್ಲಿ ತಂಡಗಳು ಹೊರಟವು. ಆದರೆ ಬಹುತೇಕರ ತಂಡಗಳನ್ನು ಉತ್ತರ ಪ್ರದೇಶ ಗಡಿಯಲ್ಲಿ, ಚಿತ್ರಕೂಟದಲ್ಲಿ ಮತ್ತಿತರ ಕಡೆ ಬಂಧಿಸಿ ಕೆಲಕಾಲ ಜೈಲಿನಲ್ಲಿರಿಸಿ ಬಿಡುಗಡೆ ಮಾಡಲಾಯಿತು. ಬಿ.ಎನ್. ಮೂರ್ತಿಯವರ ತಂಡ ಕರಸೇವೆ ಸ್ಥಳದವರೆಗೆ ತಲುಪುವಲ್ಲಿ ಸಫಲವಾಯಿತು. ಕೊಡಗಿನ ಚಿ.ನಾ. ಸೋಮೇಶ್ ಸ್ಥಳದಲ್ಲೇ, ಅಶೋಕ್ ಸಿಂಘಾಲ್ ಅವರಿಗೆ ಕಲ್ಲೇಟು ಬಿದ್ದಾಗ ಅವರ ಪಕ್ಕದಲ್ಲೆ ಇದ್ದು ಸಿಂಘಾಲ್ ಅವರ ತಲೆಗೆ ಬಟ್ಟೆಯನ್ನು ಒತ್ತಿ ಹಿಡಿದು ರಕ್ತವನ್ನು ತಡೆ ಹಿಡಿದಿದ್ದರು. ಕೊಡಗಿನ ತಂಡದಲ್ಲಿ ನನ್ನ ಅಣ್ಣ ಕೆ.ಕೆ. ಯೋಗೇಶ್‌ ಕುಮಾರ್‌ರವರು ಇದ್ದರು. 1990ರಲ್ಲಿ ಹಿಂದು ಸಮಾಜವನ್ನು ಒಂದೂಗೂಡಿಸುವ ನಿಟ್ಟಿನಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಡಿಕೇರಿಯಲ್ಲಿ ಪ್ರಾಂಭವಾಯಿತು. ಅಂದು ಪ್ರಾರಂಭವಾದ ಭಜನೆಯು ಸರಿ ಸುಮಾರು 33 ವರ್ಷಗಳಿಂದ ಇಂದಿಗೂ ಚಾಲ್ತಿಯಲ್ಲಿದೆ.

1992 ರಲ್ಲಿ ಡಿಸೆಂಬರ್‌ 6ರಂದು ಕರಸೇವೆ ಮಾಡುವ ಒಂದು ನಿರ್ಣಯ  ಸಂಘದಿಂದ  ಹೊರಬಂತು. ಅದರ ಪ್ರಕಾರ ಕೊಡಗಿನ ಗ್ರಾಮ ಗ್ರಾಮಗಳಿಂದ ದೊಡ್ಡ ಪ್ರಮಾಣದ ಅಭಿಯಾನ ಶುರುವಾಯಿತು. ಆಗ ಜಿಲ್ಲಾ ಕರಸೇವಕ ಪ್ರಮುಖನಾಗಿ ನನ್ನನ್ನು ನೇಮಿಸಿದ್ದರು. ನವೆಂಬರ್‌ 25ಕ್ಕೆ ತಂಡ ತಂಡವಾಗಿ 450ಕ್ಕೂ ಅಇಕ ಸಂಖ್ಯೆಯಲ್ಲಿ ಕರಸೇವಕರೊಂದಿಗೆ ಕೊಡಗಿನಿಂದ ಹೊರಟೆವು. ಅಂದು ನಮಗೆ ಡಾ. ಪಾಟ್ಕರ್‌ರವರ ಆರ್ಯ ನರ್ಸಿಂಗ್‌ ಹೋಂ ಕೊಡಗಿನಿಂದ ಹೊರಟ ಅಯೋಧ್ಯೆ ಕರಸೇವಕರ ಕೇಂದ್ರ ಸ್ಥಾನವಾಗಿತ್ತು. ನಮ್ಮೋಂದಿಗೆ ಅಂದು ಕರಸೇವೆಗೆ ಹೊರಟ ಪ್ರಮುಖರೆಂದರೆ, ದಂಬೆಕೊಡಿ ಮಾದಪ್ಪ, ಕೆ.ಜಿ. ಬೋಪ್ಪಯ್ಯ, ಮಂಡೇಪಂಡ ಸುನಿಲ್‌ ಸುಬ್ರಮಣಿ, ಪ್ರಸ್ತುತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊಡಗು ಜಿಲ್ಲಾ ಸಂಘ ಚಾಲಕರಾದ ಚಕ್ಕೇರ ಮನು, ಕುಶಾಲನಗರದ ತಿಮ್ಮಪ್ಪ ದಂಪತಿಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ಕೆ.ಕೆ.ದಿನೇಶ್‌ ಕುಮಾರ್‌, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ರಮೇಶ್‌ ಹೊಳ್ಳ, ಮಡಿಕೇರಿ ಬಿ.ಜೆ.ಪಿ. ನಗರಾಧ್ಯಕ್ಷರಾದ ಮನು ಮಂಜುನಾಥ್‌ ಮುಂತಾದ ಅನೇಕರಿದ್ದರು. ಮಂಗಳೂರು ವಿಭಾಗದಿಂದ ನಮ್ಮೊಂದಿಗೆ ಕಲ್ಲಡ್ಕ ಪ್ರಭಾಕರ್‌ ಭಟ್‌ ಇದ್ದರು.

ನವೆಂಬರ್‌ 25ಕ್ಕೆ ಹೊರಟ ನಾವುಗಳು 2 ದಿನದಲ್ಲಿ ಅಯೋಧ್ಯೆ ತಲುಪಿದ್ದೇವು. ಅಲ್ಲಿ ದೊಡ್ಡ ದೊಡ್ಡ ವಿಶಾಲ ಟೆಂಟ್‌ಗಳಲ್ಲಿ ನಮಗೆ ವಾಸ್ಥವ್ಯವನ್ನು ಏರ್ಪಾಡಿಸಲಾಗಿತ್ತು.  ನಾವು ಅಯೋಧ್ಯೆಯನ್ನು ತಲುಪಿದಾಗ ಕರ್ನಾಟಕದಿಂದ ಬಂದ ಕರಸೇವಕರಿಗೆ ಉಳಿಯಲು ಮಾಡಿದ್ದ ವಸತಿಯಲ್ಲಿ ನಮಗೆ ಜಾಗ ದೊರೆಯಿತು.  ನಾನಾ ರಾಜ್ಯಗಳಿಂದ ಬರುತ್ತಿದ್ದ ಕರಸೇವಕರಿಗಾಗಿ ಪ್ರತ್ಯೇಕ ವಸತಿ ಮತ್ತು ಊಟದ ವ್ಯವಸ್ಥೆಯಾಗಿತ್ತು. ಪ್ರತಿ ರಾಜ್ಯದಿಂದಲೂ ಅಡುಗೆ ಮಾಡಲು ದಿನಸಿ ಸರಬರಾಜು ತರಲು ಕಾರ್ಯಕರ್ತರು ವಾರ ಮುಂಚಿತವಾಗಿ ತಲುಪಿದ್ದರು. ಪ್ರತಿ ದಿನ ಸಂತ ಮಹಂತರಿಂದ ಪ್ರವಚನ ಏರ್ಪಡಿಸಲಾಗಿತ್ತು. ಎಲ್ಲಾ ವ್ಯವಸ್ಥೆಯು ಸಂಘದ ಶಿಬಿರಗಳಂತೆ ಭಾಸವಾಗುತ್ತಿತ್ತು. ಪ್ರತಿದಿನ ನಮಗೆ ಅಯೋಧ್ಯ ಪಟ್ಟಣದಲ್ಲಿರುವ ಹಲವಾರು ದೇವಾಲಯಗಳಿಗೆ ಸಂದರ್ಶಿಸಲು ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ದೇಶದ್ಯಾಂತ ಪೂಜಿಸಿ ತಂದಂತ ಕರಸೇವೆಯ ರಾಮಶಿಲೆಗಳು ಕರಸೇವಕ ಪುರಂನಲ್ಲಿ ಇರುವುದನ್ನು ನಾವು ಕಣ್ಣಾರೆ ಕಂಡು ಪುಳಕಿತರಾದೆವು. ಪ್ರತಿನಿತ್ಯ ಕರಸೇವಕರಿಗೆ ಬೈಠಕ್‌ಗಳು ಇದ್ದವು. ಉತ್ತರ ಭಾರತದ ಊಟಮಾಡಿ ನಮಗೆಲ್ಲ ಒಂದು ರೀತಿಯಲ್ಲಿ ಹೊಟ್ಟೆಯ ನೋವುಗಳು ಕಾಣಿಸಿಕೊಂಡಿತ್ತು. ನಂತರ ನಾವುಗಳೇ ಅಡುಗೆ ಮಾಡಿ ಊಟಮಾಡುತ್ತಿದೇವು. ಅದರಲ್ಲಿ ನಾವುಗಳು ತಾತ್ಕಾಲಿಕ ಟೀ ಅಂಗಡಿ ಕೂಡ ಅಲ್ಲಿ ಮಾಡಿ ಅಲ್ಲಿದ್ದವರಿಗೆಲ್ಲ ಟೀ ವಿತರಿಸಲು ಸುರು ಮಾಡಿದ್ದೇವು.

ಡಿ.3ರ ಮಧ್ಯಾಹ್ನ ಶ್ರೀರಾಮ ಜನ್ಮಭೂಮಿಗೆ ತೆರಳಿ ರಾಮಲಲ್ಲಾನ ದರ್ಶನ ಮಾಡಿದೆವು. ಆ ದರ್ಶನ ವಿವಾದಿತ ಕಟ್ಟಡದಲ್ಲಿ ಕೊನೆಯದಾಗಿರುತ್ತದೆ ಎಂಬ ಸುಳಿವು ನಮಗ್ಯಾರಿಗೂ ಇರಲಿಲ್ಲ. ಡಿ.6ರಂದು ಅಯೋಧ್ಯೆಯಲ್ಲಿ ಇನ್ನು ಜಾಗ ಇಲ್ಲ ಎಂದು ಬೋರ್ಡ್ ಹಾಕುವಷ್ಟು ಜನ ಸೇರಿದರು. ವಿವಾದಿತ ಕಟ್ಟಡದ ಸಮೀಪದಲ್ಲಿದ್ದ ಎಲ್ಲಾ ಕಟ್ಟಡಗಳ ಮೇಲೆ ಜನ ನಿಂತಿದ್ದರು. ರಾಮಭಕ್ತರು ಇಡೀ ಅಯೋಧ್ಯೆಯನ್ನು ವಶಕ್ಕೆ ಪಡೆದ ರೀತಿ ಇತ್ತು.

ನೋಡುತ್ತಿದ್ದಂತೆ ವಿವಾದಿತ ಕಟ್ಟಡದ ಮೂರು ಗುಮ್ಮಟಗಳ ಮೇಲೆ ಮಹಿಳೆಯರ ತಂಡಗಳು ಬಂದು ಗುಮ್ಮಟ ಒಡೆಯುವುದಕ್ಕೆ ಆರಂಭಿಸಿದವು. ಹೀಗೆ ವಿವಾದಿತ ಕಟ್ಟಡಕ್ಕೆ ಮೊದಲ ಕೊಡಲಿ ಪೆಟ್ಟು ಮಹಿಳೆಯರಿಂದ ಬಿದ್ದಿದ್ದು ವಿಶೇಷ. ಆ ಮಹಿಳಾ ತಂಡಕ್ಕೆ ಸಹಾಯ ಮಾಡಲು ಒಮ್ಮಿಂದೊಮ್ಮೆಗೆ ಕರಸೇವಕರು ವಿವಾದಿತ ಕಟ್ಟಡದ ಕಡೆ ವಾನರರಂತೆ ಆವೇಶಭರಿತರಾಗಿ ನುಗ್ಗಿದರು. ಅವರ ಆವೇಶಕ್ಕೆ ಬೆಚ್ಚಿದ ಪೊಲೀಸರು ತಡೆಯುವ ಯಾವುದೇ ಪ್ರಯತ್ನ ಮಾಡದೆ ಸುಮ್ಮನಾದರು. ನೋಡನೋಡುತ್ತಿದ್ದಂತೆ ಕರಸೇವೆಯ ಸ್ವರೂಪವೇ ಬದಲಾಗಿ ವಿವಾದಿತ ಕಟ್ಟಡ ನೆಲಸಮವಾಗತೊಡಗಿತು. ವಿವಾದಿತ ಕಟ್ಟಡ ಉರುಳಿದ ಸಂದರ್ಭ ಕಾರ್ಯಕರ್ತರ ಹಷೋದ್ಗಾರ ಮುಗಿಲು ಮುಟ್ಟಿತ್ತು.  ಅಂದು ಬೆಳಗ್ಗೆ ಆರಂಭವಾಗಿದ್ದ ಕರಸೇವೆ ಮುಗಿಯುವಾಗ ಸಂಜೆ ಕಳೆದಿತ್ತು. ಇಡೀ ದಿನ ಊಟ, ತಿಂಡಿ ಇಲ್ಲ, ಎಲ್ಲಿ ತೆರಳಬೇಕು ಎಂಬುದು ಗೊತ್ತಿಲ್ಲ.  ಅಯೋಧ್ಯೆಯ ವಿವಾದಿತ ಕಟ್ಟಡ ನಮ್ಮ ಕಣ್ಣೆದುರೇ ಉರುಳಿಬಿದ್ದ ಕ್ಷಣಗಳಿಗೆ ಸಾಕ್ಷಿಯಾದೆವು.

ರಾತ್ರಿ ಸಭೆ ಸೇರಿದ್ದ ವಿಹಿಂಪ ಮಾರ್ಗದರ್ಶಕ ಮಂಡಳಿ ಸಭೆಯ ನಿರ್ಣಯದಂತೆ ತಕ್ಷಣ ರಾಮಲಲ್ಲಾ ಮೂರ್ತಿಯನ್ನು ಮೂಲಸ್ಥಾನದಲ್ಲಿ ಪ್ರತಿಷ್ಠಾಪಿಸಬೇಕೆಂದಾಯಿತು. ಹೀಗಾಗಿ ಮರುದಿನ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಯಿತು. ಸಾವಿರಾರು ರಾಮಭಕ್ತರು ಕೆಲವೇ ಗಂಟೆಗಳಲ್ಲಿ ಬರಿಗೈಯಲ್ಲಿ ಎಲ್ಲ ಅವಶೇಷಗಳನ್ನು ಸಾಗಿಸಿ ತಾತ್ಕಾಲಿಕ ಮಂದಿರ ಕಟ್ಟಲು ಸಜ್ಜು ಮಾಡಿದರು. ಆ ತಂಡದಲ್ಲಿ ನಾವುಗಳು ಇದ್ದೇವು. ವಿವಾದಿತ ಕಟ್ಟಡ ಉರುಳಿದ ಬಳಿಕ, ಅದರ ಅವಶೇಷಗಳನ್ನು ತೆಗೆದು, ಆ ಪ್ರದೇಶವನ್ನು ಸಮತಟ್ಟು ಮಾಡುವುದು ಭಾರಿ ಸವಾಲಿನ ಕೆಲಸವಾಗಿತ್ತು. ಜತೆಗೆ, ಯಾವ ಕ್ಷಣದಲ್ಲಿ ಏನಾಗುತ್ತೆ ಎಂಬ ಆತಂಕದ ವಾತಾವರಣ.

ಜೆಸಿಬಿ ಅಥವಾ ಯಾವುದೇ ಯಂತ್ರಗಳು ಅಲ್ಲಿರಲಿಲ್ಲ. ಮೂರು ಸಾವಿರಕ್ಕೂ ಅಧಿಕ ರಾಮಭಕ್ತರು ಕೆಲವೇ ಗಂಟೆಗಳಲ್ಲಿ ಅಂದರೆ ಡಿ. 6ರ ರಾತ್ರಿಯ ಹೊತ್ತಿಗೆ ಕಟ್ಟಡದ ಪಳೆಯುಳಿಕೆಗಳನ್ನು ತೆಗೆದು, ಆ ಪ್ರದೇಶವನ್ನು ಸಮತಟ್ಟು ಮಾಡಿದರು. ಅಂದು ರಾತ್ರಿಯೇ ತಾತ್ಕಾಲಿಕ ಟೆಂಟ್ ನಿರ್ವಿುಸುವ ಕೆಲಸ ಆರಂಭವಾಯಿತು. ನಸುಕಿನ ಜಾವದ ಹೊತ್ತಿಗೆ ತಾತ್ಕಾಲಿಕ ಟೆಂಟ್ ನಿರ್ಮಾಣ ಆಗಿ, ಅಲ್ಲಿ ಬಾಲರಾಮನೂ ಬಂದ. ಟೆಂಟ್ ನಿರ್ಮಾಣ ಆಗಿ, ಅಲ್ಲಿ ಬಾಲರಾಮನನ್ನು ಇಡುವವರೆಗೂ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆ ಸ್ಥಳದಿಂದ ಕದಲಲಿಲ್ಲ. ಕರಸೇವಕರ ತಂಡದಲ್ಲಿದ್ದ ಇಂಜಿನಿಯರ್​ಗಳು ಈ ಕೆಲಸಕ್ಕೆ ಕೈಜೋಡಿಸಿದರು. ಶ್ರೀರಾಮನ ದರ್ಶನ ಪಡೆಯಲು ಎಲ್ಲರಿಗೂ ಅವಕಾಶ ನೀಡಲಾಯಿತು.

ಆ ಹೊತ್ತಿಗೆ ಇಡೀ ಪ್ರದೇಶವನ್ನು ಸೈನ್ಯ ಸುತ್ತುವರಿದಿತ್ತು. ಟೆಂಟ್​ನಲ್ಲಿ ಬಾಲರಾಮನು ಇರುವುದನ್ನು ನೋಡಿ, ಯೋಧರು ಶೂಗಳನ್ನು ಬಿಚ್ಚಿ ನಮಸ್ಕರಿಸಿದರು, ಸೆಲ್ಯೂಟ್ ಹೊಡೆದರು. ಈ ದೃಶ್ಯ ಇಡೀ ಕಾರ್ಯಕರ್ತ ಸಮುದಾಯವನ್ನು ರೋಮಾಂಚಿತಗೊಳಿಸಿತು. 

ಉತ್ತರಪ್ರದೇಶ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಲಾಯಿತು. ಡಿ.7ರ ಸಂಜೆ ಕರಸೇವಕರೆಲ್ಲ ಜಾಗ ತೆರವು ಮಾಡುವಂತೆ ಸ್ಪಷ್ಟವಾದ ಸೂಚನೆ ಬಂತು. ಮರುದಿನ ಮುಂಜಾನೆ 4 ಗಂಟೆಗೆ ಆರ್‌.ಎ.ಎಫ್. ಕರಸೇವಾ ನಗರವನ್ನು ಪ್ರವೇಶಿಸಿ ಒಂದೊಂದೆ ಶಿಬಿರವನ್ನು ವಶಕ್ಕೆ ಪಡೆಯಲು ಆರಂಭಿಸಿತು. ನಮ್ಮ ಲಗೇಜ್ ತೆಗೆದುಕೊಂಡು ಮೌನವಾಗಿ ರೈಲು ನಿಲ್ದಾಣದ ಕಡೆ ಹೆಜ್ಜೆ ಹಾಕ ತೊಡಗಿದೆವು. ವಾಪಸ್ ಪ್ರಯಾಣ ಸುಲಭವಾಗಿರಲಿಲ್ಲ. ರೈಲುಗಳ ಮೇಲೆ ಕಲ್ಲು ತೂರಿದರು. ದಾಳಿಗೆ ಯತ್ನಿಸಿದರು. ಲಕ್ನೋ ತಲುಪಿದೆವು ಅಲ್ಲಿಂದ ಬೆಂಗಲೂರಿಗೆ ರೈಲಿನ ಮೂಲಕ ಪ್ರಯಾಣ ಮುಂದುವರೆಸಿದೆವು. ಬೆಂಗಳೂರು ಹತ್ತಿರ ಸಮೀಪಿಸುತ್ತಿದ್ದಂತೆ ನಮಗಿಂತ ಮುಂಚೆ ರೈಲಿನಲ್ಲಿ ಬೆಂಗಳೂರಿಗೆ  ತಲುಪಿದ ಕರಸೇವಕರನ್ನು ಬಂದಿಸುತ್ತಿರುವ ಸುದ್ದಿ ಮುಟ್ಟಿತ್ತು. ಆ ಸಂದರ್ಭದಲ್ಲಿ ಬೆಂಗಳೂರು ರೈಲು ನಿಲ್ದಾಣಕ್ಕಿಂತ ಮುಂಚಿನ ನಿಲ್ದಾಣದಲ್ಲಿ ನಾವು ಇಳಿದು ವೇಷ ಮರೆಸಿಕೊಂಡು ಜನ ಸಾಮಾನ್ಯರಂತೆ ಬೆಂಗಳೂರಿನ ಕಡೆ ಪ್ರಯಾಣಿಸಿ ಅಲ್ಲಿಂದ ಬಸ್ಸು ಹತ್ತಿ ಕೊಡಗಿನ ಕಡೆ ಪ್ರಯಾಣ ಮುಂದುವರೆಸಿದೆವು.  ರಾಮನ ಕಾರ್ಯ ಪೂರ್ಣ ಆಗಿತ್ತಲ್ಲ, ಹಾಗಾಗಿ ನಮಗೆ ಯಾವುದೇ ಆತಂಕ ಕಾಡಲಿಲ್ಲ. ಸುರಕ್ಷಿತವಾಗಿ ಊರುಗಳಿಗೆ ಮರಳಿದೆವು. 

1992 ರಲ್ಲಿ ಕರಸೇವೆಗೆ ಹೋಗುವಾಗ ಮತ್ತು ಮರಳುವಾಗ ನಮ್ಮ ರೈಲಿನಲ್ಲಿ ಪುಟ್ಟ ಭಾರತವೇ ಇತ್ತು. ದೇಶದ ಬಹುತೇಕ ಎಲ್ಲ ರಾಜ್ಯಗಳ ರಾಮಸೇವಕರಿದ್ದರು. ಎಲ್ಲರಲ್ಲೂ ಉತ್ಸಾಹವಿತ್ತು, ರಾಮಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದೇವೆಂಬ ಸಾರ್ಥಕತೆ ಇತ್ತು.

ರಾಷ್ಟ್ರೀಯ ಚಿಂತನೆಯ ಅಲೆ ಅದಾಗಲೇ ದಶಕಗಳಿಂದ ಬೇರೂರಿದ್ದ ಕೊಡಗಿನಿಂದ ಎರಡು ಬಾರಿಯ ಕರಸೇವೆಗೆ ಸಾವಿರಾರು ರಾಮಭಕ್ತರು ಹೋಗಿದ್ದರ ಜತೆಗೆ ಕೊಡಗಿನಲ್ಲಿದ್ದುಕೊಂಡೆ ಭೂಗತವಾಗಿ ಬೆಂಬಲಕ್ಕೆ ನಿಂತವರ ಸಂಖ್ಯೆ ಸಹಸ್ರಾರು. ಕರಸೇವೆಗೆ ತೆರಳಿದ ಕಾರ್ಯಕರ್ತರಂತೆ  ಸ್ಥಳೀಯ ಕಾರ್ಯಕರ್ತರದ್ದು ಅಷ್ಟೆ ಯೋಗದಾನವಿರುವುದು ಇಲ್ಲಿ ಶ್ಲಾಘನೀಯ ಏಕೆಂದರೆ ಅಯೋಧ್ಯೆಯ ವಿವಾಧಿತ ಕಟ್ಟಡ ನೆಲಸಮಗೊಂಡ ಸಮಯದಲ್ಲಿ ಹಿಂದೂ ಸಮಾಜದ ರಕ್ಷಣೆಯ ಜವಾಬ್ದಾರಿ ಅವರ ಹೆಗಲ ಮೇಲಿತ್ತು ಹಾಗಾಗಿ ಅವರು ಕೂಡ ಈ ಸಂದರ್ಭದಲ್ಲಿ ಅಭಿನಂದನೆಗೆ ಅರ್ಹರಾಗಿದ್ದಾರೆ.

ಇಂಥ ಶ್ರೇಷ್ಠ ಕಾರ್ಯಕ್ಕೆ ನಮ್ಮ ಜೀವನದ ಕೆಲ ಸಮಯ ನೀಡಿದ್ದು, ಸಾರ್ಥಕ ಎನಿಸಿದೆ. ಆ ಹೋರಾಟ ಕೊನೆಗೂ ಫಲ ಕೊಟ್ಟಿದೆ. ರಾಮಕಾರ್ಯದಲ್ಲಿ ಭಾಗಿಯಾದ ಸಂತೋಷ ಅಸಾಧಾರಣ. ಈಗ ಭವ್ಯ ಮಂದಿರ ಸಾಕಾರಗೊಳ್ಳುತ್ತಿರುವುದು ನಮ್ಮ ಜೀವನದ ಸಾರ್ಥಕ ಕ್ಷಣ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments