ಕಾಫಿ ಕೃಷಿಯಲ್ಲಿ ದೈನಂದಿನ ಜೀವನ: ಕಾಫಿ ಬೆಳೆಗಾರರಾದ ನಡಿಕೇರಿಯಂಡ ಬೋಸ್ ಮಂದಣ್ಣ ಅವರೊಂದಿಗಿನ ಸಂದರ್ಶನ

Reading Time: 27 minutes

ಕಾಫಿ ಕೃಷಿಯಲ್ಲಿ ದೈನಂದಿನ ಜೀವನ: ಕಾಫಿ ಬೆಳೆಗಾರರಾದ ನಡಿಕೇರಿಯಂಡ ಬೋಸ್ ಮಂದಣ್ಣ ಅವರೊಂದಿಗಿನ ಸಂದರ್ಶನ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

Search Coorg Media Presents

“Search Coffee” Digital Edition

ಕಾಫಿ ಸಮುದಾಯದ ಕಥೆಗಳನ್ನು ನೀವು ಆಲಿಸಿ, ಕಾಫಿ ರೈತರಿಗೆ ಒದಗುವ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಒಂದು ಅವಲೋಕನವನ್ನು ಪಡೆಯಿರಿ. ಅವರ ಪ್ರತಿದಿನದ ಚಟುವಟಿಕೆಗಳು ಹಾಗೂ ತೋಟಗಳು ಹೇಗಿರುತ್ತವೆ. ಕಾಫಿ ಕೃಷಿಕರ ಭರವಸೆ ಮತ್ತು ನಿರೀಕ್ಷೆಗಳೇನು. ಕೆಳಗಿನ ಸಂದರ್ಶನದಲ್ಲಿ, ಕೊಡಗಿನ ಪ್ರಗತಿಪರ ಕಾಫಿ ಬೆಳೆಗಾರರಾದ ಬೋಸ್‌ ಮಂದಣ್ಣ ಅವರ ಕಾಫಿ ಉದ್ಯಮದೊಂದಿಗಿನ ಒಡನಾಟವನ್ನು ನೀವು ಓದಬಹುದು.

ನಮಸ್ತೆ ಬೋಸ್ ಮಂದಣ್ಣ ಅವರೇ, ನಿಮ್ಮ ಬಗ್ಗೆ ಸ್ವಲ್ಪ ಹೇಳಿ ಮತ್ತು ನಿಮ್ಮ ಕಾಫಿ ಪ್ರಯಾಣವನ್ನು ನೀವು ಹೇಗೆ ಪ್ರಾರಂಭಿಸಿದ್ದೀರಿ?

ನನ್ನ ಹೆಸರು ಬೋಸ್ ಮಂದಣ್ಣ, ನಾನು ಹುಟ್ಟಿದ್ದು 1948ರ ಫೆಬ್ರವರಿ 5 ರಂದು. ನನ್ನ ತಾಯಿ ಬೊಳ್ಳಮ್ಮ ನನ್ನ ಬಾಲ್ಯದಲ್ಲಿಯೇ ದೈವಾದೀನರಾದರು.  ನನ್ನ ತಂದೆ  ನಡಿಕೇರಿಯಂಡ ಕಾಳಪ್ಪ ಮಂದಣ್ಣ  ಅಂದಿನ ಕೊಡಗು ರಾಜ್ಯದ ( Coorg State’s Development Commissioner )  ಅಭಿವೃದ್ದಿ  ಆಯುಕ್ತರಾಗಿದ್ದರು. ನನ್ನ ಬಾಲ್ಯದ ವಿಧ್ಯಾಭ್ಯಾಸ 1952 ರಿಂದ 1956 ರವರಿಗೆ ಮಡಿಕೇರಿಯ ಬ್ಯಾಸಲ್ ಮಿಷನ್ ಶಾಲೆಯಲ್ಲಿ(ಈಗಿನ ಮಿಷ್‌ನ್‌ ಸ್ಕೂಲ್) 4ನೇಯ ತರಗತಿವರೆಗೆ ಮುಂದುವರೆದು 1956 ರಿಂದ 1957 ರಲ್ಲಿ 5ನೇಯ ತರಗತಿ ಸೇಂಟ್ ಜೋಸೆಫ್ ಕಾನ್ವೆಂಟ್ ನಲ್ಲಿ ನಂತರ 5 ರಿಂದ 2ನೇಯ ಪೀ.ಯು.ಸಿ ವರೆಗೆ ಬೆಂಗಳೂರಿನ  ಭಾರತೀಯ ರಕ್ಷಣಾ ಇಲಾಖೆಯ ಅಧೀನದಲ್ಲಿರುವ  ರಾಷ್ಟ್ರೀಯ ಮಿಲಿಟರಿ ಸ್ಕೂಲ್ (ಅಂದಿನ ಕಿಂಗ್ ಜಾರ್ಜ್ ಸ್ಕೂಲ್ ) ನಲ್ಲಿ ಮುಗಿಸಿದೆ. ಅಲ್ಲಿಂದ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ B.A. economics ನಲ್ಲಿ ಪದವಿ ಪಡೆದೆ.

ನನ್ನ ಉನ್ನತ ವಿದ್ಯಾಭ್ಯಾಸದ  ಸಮಯದಲ್ಲೇ ನನ್ನ ತಂದೆಯವರಿಗೆ ಕಣ್ಣಿನ ಗ್ಲಾಕೋಮಾದ ಅನಾರೋಗ್ಯದಿಂದ ಕಣ್ಣಿನ ದ್ದೃಷ್ಟಿಯ ಸಮಸ್ಯೆ ಹೆಚ್ಚಾದ ಕಾರಣ ತೋಟವನ್ನು ನೋಡಿಕೊಳ್ಳುವುದು ಅಸಾಧ್ಯವಾಗಿತು. ಅದರಿಂದ ತಂದೆಯವರ ಸೇವೆ ಮಾಡಲು ಹಾಗೂ ಕಾಫಿ ತೋಟವನ್ನು ನೋಡಿಕೊಳ್ಳಲು ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮರಳಿ ಕೊಡಗಿಗೆ ಬಂದೆ.‌ ನನಗೆ 4 ಜನ ಅಕ್ಕಂದಿರು, ನಾನೆ ಕಡೆಯವನಾಗಿದ್ದೆ. ಕಾಫಿ ತೋಟದ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲಿಗೆ ಬಂದ ಕಾರಣ ನಾನು ಪೂರ್ಣ ವಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾಫಿ ಕೃಷಿಯಲ್ಲಿ ತೊಡಗಿಸಿಕೊಂಡು ತೋಟದ ಅಭಿವೃದ್ಧಿಗೆ ಶ್ರಮಿಸಿದೆ.

ಕಾಫಿ ತೋಟದಲ್ಲಿ ನಿಮ್ಮ ದಿನಚರಿ ತಿಳಿಸುವಿರಾ? 

1967 ರಿಂದ 1985 ರವರಿಗೆ 18 ವರ್ಷಗಳ ಕಾಲ ನಾನು ಕಾಫಿ ತೋಟವನ್ನು ಬಿಟ್ಟು ಹೊರಗೆ ಎಲ್ಲಿಯೂ ಹೆಚ್ಚಾಗಿ ಪ್ರವಾಸ ಹೋಗಲಿಲ್ಲ. ಕಾಫಿ ತೋಟದಲ್ಲಿನ ದೈನಂದಿನ ಕೆಲಸವನ್ನು ಬದ್ಧತೆಯಿಂದ ಮಾಡಿ, ಉಳಿದ ಸಮಯದಲ್ಲಿ ಮಾದಾಪುರದ ಕ್ಲಬ್‌ನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ.

Muster Roll Attendance : ಬೆಳಿಗೆ  7.15ಕ್ಕೆ ಎಲ್ಲಾ ಕಾರ್ಮಿಕರಿಗೆ ಕಪಾತ್, ಸ್ಪ್ರೇ  ಮುಂತಾದಂತಹ ಕಾಫಿತೊಟಗಳಲ್ಲಿನ ಅಗತ್ಯ ಕೆಲಸಗಳನ್ನು  ಹಂಚಲಾಗುವುದು. ಬೆಳ್ಳಿಗೆ 9.30 ರಿಂದ 9.45 ರ ವರೆಗೆ ಟೀ ಬ್ರೇಕ್, ಮಧ್ಯಾಹ್ನ 12 ಗಂಟೆಯಿಂದ 12.45 ರವರಗೆ ಊಟದ ಸಮಯ. ಸಂಜೆ  4 ಗಂಟೆಗೆ ಕೆಲಸದ ಮುಕ್ತಾಯ ಸಮಯವಾಗಿರುತ್ತದೆ. ಒಟ್ಟು 8 ಗಂಟೆಗಳ ಕೆಲಸ. 1ಗಂಟೆ ವಿಶ್ರಾಂತಿ ಪ್ರತೀ ಭಾನುವಾರ ವಾರದ ರಜೆಯಾಗಿರುತ್ತದೆ.

ಎಲ್ಲಾ ಕಾರ್ಮಿಕರಿಗೆ ವಸತಿ ಗೃಹ, ಬೋನಸ್, ಪಿಎಫ್, ಆರೋಗ್ಯದ ವೆಚ್ಚ, ನೀರು, ಇಂಧನ ಜೊತೆಗೆ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಾ ಬಂದಿದ್ದೇನೆ.

ನಮ್ಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಎಲ್ಲಾ ಮಕ್ಕಳೂ ಕೂಡ ಹೊರಗೆ ವಿದ್ಯಾಭ್ಯಾಸ ಹಾಗೂ ಉನ್ನತ ಹುದ್ದೆಗಳಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಯಾರ ಮಕ್ಕಳೂ ಕೂಡಾ ತೋಟದ ಕೆಲಸದಲ್ಲಿ ಇಂದು ಇಲ್ಲ. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ತೋಟದ ಕೆಲಸ ಮಾಡಲಾಗುತ್ತಿದೆ. 

ನಿಮ್ಮ ತೋಟದಲ್ಲಿ ಪ್ರಸ್ತುತ ನೀವು ಎಷ್ಟು ಕಾಫಿ ಗಿಡಗಳನ್ನು ಹೊಂದಿದ್ದೀರಿ? ಮತ್ತು ನೀವು ಯಾವ ರೀತಿಯ ತಳಿಗಳನ್ನು ಬೆಳೆಸುತ್ತಿದ್ದಾರಾ? ಮತ್ತು ಅವು ಏಕೆ? 

ನಮ್ಮ ತೋಟದಲ್ಲಿಅರೇಬಿಕಾ ಕಾಫಿ ಗಿಡಗಳನ್ನು 6/6 ರಂತೆ ಒಟ್ಟು 1200 ಗಿಡಗಳನ್ನು ಪ್ರತಿ ಏಕರೆಯಂತೆ ಒಟ್ಟು 30 ಏಕರೆಯಲ್ಲಿ 36,000 ಗಿಡಗಳನ್ನು ಬೆಳೆಸಿದ್ದೇವೆ. ಅದರೊಂದಿಗೆ ಡಾವರ್ಪ್ ಅರೇಬಿಕಾ (Dwarf Arabica) ಕಾಫಿ ಗಿಡಗಳು 4.5 / 4.5 20  ವರ್ಷದ ಗಿಡಗಳಿವೆ. ಚಂದ್ರಗಿರಿ 15 ವರ್ಷದ ಗಿಡಗಳಿವೆ. ರೋಬೋಸ್ಟಾ ಕಾಫಿ ಗಿಡಗಳನ್ನು 10/10 ರಂತೆ ಒಟ್ಟು 480 ಗಿಡಗಳು ಪ್ರತಿ ಏಕರೆಯಂತೆ ಒಟ್ಟು  20 ಏಕರೆಯಲ್ಲಿ9600 ಗಿಡಗಳನ್ನು ಬೆಳೆಸಿದ್ದೇವೆ. 1990ರ ಸಮಯದಲ್ಲಿ ನೀರು ಇಲ್ಲದೆ ಅರೇಬಿಕಾ ಕಾಫಿ ಗಿಡಗಳಿಗೆ  ಬೆಳೆಕಾಂಡ ಕೊರಕ ಕಾಯಿಲೆ ಬಂದವು . ಇದಕ್ಕೆ ಕಾರಣ ಮಳೆಯ ಅಭಾವ. ಮಳೆ ಇಲ್ಲದ ಸಮಯದಲ್ಲಿ ಹುಳಗಳು ಬೆಳೆಯುತ್ತಾ ಗಿಡಗಳ ಕಾಂಡವನ್ನು ತಿನ್ನಲು ಪ್ರಾರಂಭಿಸುವುದು.  ಅದರಿಂದ ಸುಮಾರು ಅರೇಬಿಕಾ ಗಿಡಗಳು ನಾಶವಾದವು ನಂತರ ರೊಬಸ್ಟಾ ಗಿಡಗಳನ್ನು ನೆಡುತಾ ಬಂದೆವು. ಅರೇಬಿಕಾ ಕಾಫಿ ಗಿಡಗಳಿಗೆ ಬೋರರ್ ಬಂದ ನಂತರ 20% ರೋಬಾಸ್ಟ ಮತ್ತು 30% ಅರೇಬಿಕಾ ಕಾಫಿ ಗಿಡಗಳಿವೆ. ಕೆರೆ ಮಾಡಿ ನೀರಿನ ವ್ಯವಸ್ಥೆ ಮಾಡಿದ ನಂತರ ರೋಬಾಸ್ಟ ಕಾಫಿ ಗಿಡಗಳನ್ನು ತೋಟದ ಗಡಿಗಳಲ್ಲಿ ನೆಡಲಾಯಿತು. 

ಈ ಎಲ್ಲಾ ಕಾರಣಗಳಿಂದ ಪ್ರಸ್ತುತ ನಮ್ಮ ತೋಟದಲ್ಲಿ ಮಳೆಯ ಕೊರತೆಯಿಂದ ನೀರಿನ ಅಭಾವ ಬರದ ಹಾಗೆ ಮಳೆನೀರು ಕೊಯ್ಲು(Rain Water Harvesting) ಮೂಲಕ ಮಳೆಗಾಲದ ಸಮಯದಲ್ಲಿ  ನಮ್ಮ ತೋಟದಲ್ಲಿರುವ ಎಲ್ಲಾ ಕಟ್ಟಡ ಗಳಿಂದ ನೀರನ್ನು ಸಂಗ್ರಹ ಮಾಡಿ 2 ದೊಡ್ಡದಾದ ಕೆರೆಗಳಿಗೆ ನೀರನ್ನು ತುಂಬಿಸಲಾಗುವುದು. ಇದರಿಂದ ಕಾಫಿ ತೋಟದ ಆರೈಕೆಗೆ ನೀರಿನ ಸಮಸ್ಯೆ ಎದುರಾಗುತ್ತಿಲ್ಲ.

ನಮ್ಮಲ್ಲಿ ಒಂದು ಕೆರೆ 100 ಅಡಿ ಅಗಲ 100 ಅಡಿ ಉದ್ದ ಹಾಗೂ 20 ಅಡಿ ಆಳ ಇದೆ. ಮತ್ತೊಂದು ಕೆರೆ 50 ಅಡಿ ಅಗಲ 50 ಅಡಿ ಉದ್ದ ಹಾಗೂ 12 ಅಡಿ ಆಳ ಇದೆ. ಒಂದು ಬೋರ್ ವೆಲ್ ಹಾಗೂ 3 ತೆರೆದ ಬಾವಿಗಳಿವೆ. ಈ ಮೊದಲು ನೀರಿಗೆ ತುಂಬಾ ಸಮಸ್ಯೆ ಇದ್ದು, ಪಕ್ಕದ ತೊಡಿನಿಂದ ನೀರನ್ನು ಟ್ಯಾಂಕ್ ನಲ್ಲಿ ತುಂಬಿಸಿ ಜಿಪ್ ಮೂಲಕ ತೋಟಕ್ಕೆ ತರುವಂತಹ ಪರಿಸ್ಥಿತಿ ತಲೆದೋರಿತ್ತು. ಈಗ ಮಳೆನೀರು ಕೊಯ್ಲು(Rain Water Harvesting) ಮಾಡುತ್ತಿರುವ ಕಾರಣ  ನಮ್ಮ ತೋಟದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಪ್ರತಿಯೊಬ್ಬ ರೈತರು ಈ ರೀತಿ ಮಳೆನೀರು ಕೊಯ್ಲು(Rain Water Harvesting) ಮೂಲಕ ನೀರನ್ನು ಉಳಿಸಿದರೆ. ಮುಂದಿನ ದಿನಮಾನಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಅಭಾವ ತಲೆದೊರುವುದಿಲ್ಲ ಎಂಬುದು ನನ್ನ ಅನಿಸಿಕೆಯಾಗಿದೆ. ಮಳೆನೀರು ಕೊಯ್ಲು(Rain Water Harvesting) ಎಂಬುದು ಮಳೆನೀರನ್ನು ಒಟ್ಟುಗೂಡಿಸುವ, ಅಥವಾ ಸಂಚಯನ ಮಾಡುವ ಮತ್ತು ಶೇಖರಿಸಿಟ್ಟುಕೊಳ್ಳುವ ವಿಧಾನಕ್ಕಿರುವ ಹೆಸರು.

ಅರೇಬಿಕಾ ಗಿಡಗಳಲ್ಲಿ S795 ( Selection 795), SLN 6 ( New Line Selection 6), SLN 9 ಹಾಗೂ ಭಾರತದ ತಳಿಗಳಾದ ಚಂದ್ರಗಿರಿ, ಇತ್ಯಾದಿ ಗಿಡಗಳಿವೆ.

ರೋಬೋಸ್ಟಾ ಗಿಡಗಳಲ್ಲಿ S274 ತಳಿ ಸುಮಾರು 60 ವರ್ಷಗಳ ಕಾಲ ಜೀವಿತಾವಧಿ ಇದೆ. CXR ( ಕಾಂಜನ್ಸಿ x ರೋಬೋಸ್ಟಾ ) 10*10 . ಕಾಂಜನ್ಸಿ  ಕಾಫಿಗಿಡಗಳಿಗೆ ಹೆಚ್ಚು ನೀರು ಬೇಕು. ಪೆರಿಡೇನೀಯಾ ರೋಬೋಸ್ಟಾ(Peridenia Robusta) ಕಾಫಿ ಗಿಡಗಳಿಗೆ ಕಮ್ಮಿ ನೀರು ಸಾಕು. ಇದರ ಜೀವಿತಕಾಲ 80ರಿಂದ 100ವರ್ಷಗಳು. 12*12 ಇದು ಶ್ರೀಲಂಕಾ ಮೂಲದಾಗಿದ್ದು, ಬ್ರಿಟಿಷರು ಭಾರತಕ್ಕೆ ತಂದರು. ಪ್ರಸ್ತುತ ಹೊಸ ತಳಿಯಾದ ಡಾವರ್ಪ್ ರೋಬೋಸ್ಟ(Dwarf Robusta) 6/6, 3 ವರ್ಷದಿಂದ ಬೆಳೆ ಬರಲು ಪ್ರಾರಂಭವಾಗುತ್ತದೆ. ಇದು ತೋಟದಲ್ಲಿ ಹೆಚ್ಚು ಗಿಡಗಳನ್ನು ನಾಟಿ ಮಾಡಬಹುದು. ಈ ಕಾಫಿ ಗಿಡಕ್ಕೆ 1.5 ಇಂಚು ನೀರು ಬೇಕು. ಬರಗಾಲದಲ್ಲಿ ಕಾಫಿ ಗಿಡಗಳಿಗೆ ನೀರಿನ ಅಭಾವ ತಲೆದೋರುವುದರಿಂದ ಹೆಚ್ಚು ಸಮಸ್ಯೆ ಆಗುತ್ತದೆ. ನಾವು ಉಳಿಸಿದ ನೀರನ್ನು ಬಳಸುವಾಗ ಮೊದಲ ಆದ್ಯತೆ ಮನುಷ್ಯರಿಗೆ, ನಂತರ ಪ್ರಾಣಿ ಪಕ್ಷಿಗಳಿಗೆ, ಕೊನೆಯದಾಗಿ ಕೃಷಿಗೆ ಉಪಯೋಗಿಸಬೇಕು ಅದರಿಂದ ಬರಗಾಲ ಸಂದರ್ಭದಲ್ಲಿ ಕಾಫಿ ಕೃಷಿಗೆ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಸರ್ವೆ ಸಾಮಾನ್ಯವಾಗಿದೆ.

ಕಾಫಿ ತಳಿಗಳನ್ನು ಆಯ್ಕೆ ಮಾಡಿ ನಾಟಿ ಮಾಡುವಾಗ ಮುಖ್ಯವಾಗಿ ಗಮನಿಸಬೇಕಾದದ್ದು ಆ ಪ್ರದೇಶದ ಎತ್ತರ ಸಮುದ್ರ ಮಟ್ಟದಿಂದ ಎಷ್ಟಿದೆ ಎಂಬುದು. ಸಾಮಾನ್ಯವಾಗಿ ಸಮುದ್ರ ಮಟ್ಟ MSL (Mean Sea Level) 2500 ಅಡಿ ಮೇಲಿನ ಪ್ರದೇಶಕ್ಕೆ ರೋಬಾಸ್ಟ. ಸಮುದ್ರ ಮಟ್ಟ MSL (Mean Sea Level) 2500 ದಿಂದ 3000 ಅಡಿ ಮೇಲಿನ ಪ್ರದೇಶಕ್ಕೆ ರೋಬಾಸ್ಟ ಮತ್ತು ಅರೇಬಿಕಾ, ಹಾಗೂ ಸಮುದ್ರ ಮಟ್ಟ MSL (Mean Sea Level) 3000 ಅಡಿ ಮೇಲ್ಪಟ್ಟ ಪ್ರದೇಶಕ್ಕೆ ಅರೇಬಿಕಾ ಗಿಡಗಳು ಸೂಕ್ತವಾದದ್ದು. ಅರೇಬಿಕಾ ಗಿಡಗಳಿಗೆ ತಂಪಾಗಿರುವ ವಾತಾವರಣದ ಸೂಕ್ತವಾಗಿದೆ. 

ನಿಮ್ಮ ಕಾಫಿ ತೋಟವು ಸಂಪೂರ್ಣವಾಗಿ ಸಾವಯವವಾಗಿ ಪರಿವರ್ತನೆಯಾಗಿದೆಯಾ? ಜಮೀನಿನಲ್ಲಿ ರಸಗೊಬ್ಬರಗಳನ್ನು ಬಳಸುವ ಬಗ್ಗೆ ನಿಮ್ಮ ಅಭಿಪ್ರಾಯಗಳು?

ಪ್ರಪಂಚದಲ್ಲಿ ಸುಮಾರು 80 ದೇಶಗಳಲ್ಲಿ ಕಾಫಿಯನ್ನು ಬೆಳೆಸಲಾಗುತ್ತಿದೆ. ಆದರೆ ಅದರಲ್ಲಿ ಭಾರತ ದೇಶದಲ್ಲಿ ಮಾತ್ರ ನ್ಯಾಚುರಲ್ ಫಾರೆಸ್ಟ್ ನಲ್ಲಿ ಪ್ರಾಕೃತಿಕವಾಗಿ ಕಾಫಿಯನ್ನು ಬೆಳೆಸಲಾಗುತ್ತಿದೆ. 

ನೆರಳಿನಲ್ಲಿ ಬೆಳೆದ ಕಾಫಿಯು(Shade-grown coffee)  ಮರಗಳ ಮೇಲಾವರಣದ ಅಡಿಯಲ್ಲಿ ಬೆಳೆದ ಕಾಫಿ ಗಿಡಗಳಿಂದ ಉತ್ಪತ್ತಿಯಾಗುವ ಬೆಳೆಗಳ ಒಂದು ರೂಪವಾಗಿದೆ. ನೆರಳಿನಲ್ಲಿ ಕಾಫಿಯನ್ನು ಬೆಳೆಸಲು ವಿವಿಧ ರೀತಿಯ ನೆರಳು ಮರಗಳ ಮೇಲಾವರಣವನ್ನು ರಚಿಸಲಾಗಿದೆ. ನೈಸರ್ಗಿಕ ಪರಿಸರ ಸಂಬಂಧಗಳನ್ನು ಉತ್ತೇಜಿಸಲು ನೈಸರ್ಗಿಕ ಪರಿಸರ ವಿಜ್ಞಾನದ ತತ್ವಗಳನ್ನು ಒಳಗೊಂಡಿರುವ ಕಾರಣ, ನೆರಳು-ಬೆಳೆದ ಕಾಫಿಯನ್ನು ಅಗ್ರೋಫಾರೆಸ್ಟ್ರಿಯ ಒಂದು ಶಾಖೆ ಎಂದು ಪರಿಗಣಿಸಬಹುದು. ಪರಿಣಾಮವಾಗಿ ಕಾಫಿಯನ್ನು “ನೆರಳು-ಬೆಳೆದ”(Shade-grown coffee) ಎಂದು ಮಾರಾಟ ಮಾಡಬಹುದು.

ಅಂದರೆ ಕಾಫಿ ತೋಟವನ್ನು ಮಾಡುವ ಸಂದರ್ಭದಲ್ಲಿ ಸುತ್ತಲಿನ ಪರ್ಯಾವರಣಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಜೊತೆಗೆ ಅಲ್ಲಿರುವ ಮರಗಳನ್ನು ಯಾವುದನ್ನು ಕಡೆಯುವುದಿಲ್ಲ. ಈ ಕಾರಣದಿಂದ ಭಾರತದಲ್ಲಿರುವ ಕಾಫಿ ತೋಟಗಳ ಭೂಮಿಯಲ್ಲಿನ ಫಲವತ್ತತೆ ಹೆಚ್ಚಿರುತ್ತದೆ. ಆದರೂ ಭೂಮಿಯಲ್ಲಿ ಹಾಕುವ ಗೊಬ್ಬರದ ಬಹುಪಾಲು ಭಾಗವನ್ನು ಅಲ್ಲಿರುವ ಮರಗಳೇ ಪಡೆದುಕೊಳ್ಳುತ್ತದೆ ಇದರಿಂದ ಕಾಫಿಯ ಉತ್ಪಾದನೆಯಲ್ಲಿ ಕಾಫಿ ಬೇಳೆಗಳು ಕಮ್ಮಿ ಇರುತ್ತದೆ. 

ಭಾರತದಲ್ಲಿರುವ ಕಾಫಿ ತೋಟದ ಮಣ್ಣಿನ ಫಲವತ್ತತೆಯನ್ನು ವಿಜ್ಞಾನಿಗಳು ವೈಜ್ಞಾನಿಕವಾಗಿ ಪರಿಶೀಲಿಸಿದ ನಂತರ ಇಲ್ಲಿನ ಫಲವತ್ತತೆಯು  ಹೆಚ್ಚಿದ್ದು ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿದರೆ ಸಾಕು ಎಂಬ ಸಲಹೆಯನ್ನು ನೀಡಿದ್ದಾರೆ.  ಉದಾಹರಣೆಗೆ ಒಂದು ಎಕರೆ ಕಾಫಿ ತೋಟಕ್ಕೆ ಬಳಸಬೇಕಾದ ಗೊಬ್ಬರಗಳ ಪ್ರಮಾಣ 120 KG ನೈಟ್ರೋಜನ್, 90 KG ಪ್ರಾಸ್ಪರಸ್, 120 KG ಪೊಟ್ಯಾಷ್ ಅನ್ನು ಬಳಸಲಾಗುವುದು.

ಆದರೆ ಇದೇ ಭಾರತದ ಹೊರಗಿರುವ ವಿಹಟ್ನಾಂ ದೇಶದಲ್ಲಿ ಈ ಗೊಬ್ಬರದ ಪ್ರಮಾಣಗಳ ಐದರಷ್ಟು ಹೆಚ್ಚು ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದಕ್ಕೆ ಕಾರಣ ಅಲ್ಲಿ ಪ್ರಾಕೃತಿಕವಾಗಿ ಮರಗಳು ಕಮ್ಮಿ ಇರುವುದು ಹಾಗೂ ಅಲ್ಲಿನ ಫಲವತ್ತತೆ ತುಂಬಾ ಕಮ್ಮಿ ಇದೆ. ಈ ಎಲ್ಲಾ ಕಾರಣಗಳಿಂದ ಭಾರತದ ಕಾಫಿ ತೋಟಗಳ ಫಲವತ್ತತೆ ಬಗ್ಗೆ ಹೇಳುವುದಾದರೆ ಇಲ್ಲಿ ಮಾತ್ರ ಕಮ್ಮಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ.

ಆದರೂ ಕೂಡ ಭಾರತದಲ್ಲಿ ಪೂರ್ಣಮಟ್ಟದಲ್ಲಿ ಸಾವಯವ ಗೊಬ್ಬರವನ್ನು ಬಳಸಲು ಸಾಧ್ಯವಿದೆ. ಆದರೆ ಇನ್ನೂ ಕೂಡ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳ ಸಂಶೋಧನೆ ನಡೆಯುತ್ತಿಲ್ಲ. ಆದರಿಂದ ನೂರು ಪ್ರತಿಶತ ಸಾವಯವದಲ್ಲಿ ಕಾಫಿ ಕೃಷಿಯನ್ನು ಮಾಡಲು ಪ್ರಸ್ತುತ ದಿನಮಾನಗಳಲ್ಲಿ ಕಷ್ಟವಿದೆ. 

ಸಾಮಾನ್ಯವಾಗಿ ನಮ್ಮ ತೋಟದಲ್ಲಿ ಸಾಯುವ ಗೊಬ್ಬರವನ್ನು ನಾವೇ ತಯಾರಿಸುತ್ತೇವೆ ಅದನ್ನು ಮಲ್ನಾಡ್ ಮೆಥಡ್ ಆಫ್ ಕಾಂಪೋಸ್ಟಿಂಗ್ ಎಂದು ಕರೆಯಲಾಗುವುದು. ಈ ಸಾವಯವ ಗೊಬ್ಬರವನ್ನು ತಯಾರಿಸಲು ಕಾಫಿ ಪಲ್ಪ್, ಕೊಟ್ಟಿಗೆ ಗೊಬ್ಬರ, ಎಲೆಗಳು, ಕಾಡು ಮಣ್ಣು, ಬೆಲ್ಲದ ಜೋನಿ ಗಳನ್ನು ಸೇರಿಸಿದ ಮಿಶ್ರಣವನ್ನು ತಯಾರಿಸಿ ಬಳಸಲಾಗುವುದು. ಈ ವಿಧಾನವನ್ನು ಬಳಸಿ ಕಳೆದ ಏಳು ವರ್ಷಗಳಿಂದ ಗೊಬ್ಬರವನ್ನು ತಯಾರಿಸಿ ನಮ್ಮ ತೋಟದಲ್ಲಿ ಉಪಯೋಗಿಸುತ್ತಿದ್ದೇವೆ. ಈ ವಿಧಾನವನ್ನು ತಿಳಿಸಿಕೊಟ್ಟವರು ಹೆಬ್ಬಾಳದ ಜಿಕೆವಿಕೆ ಯ ಮಾಜಿ ಕೃಷಿ ವಿಜ್ಞಾನಿಗಳಾದ ಡಾಕ್ಟರ್ ಪೋನ್ನಬಲಿ ಸ್ವಾಮಿ ಅವರು.

ನಮ್ಮ ಕಾಫಿ ತೋಟಗಳಲ್ಲಿ ರಾಸಾಯನಿಕ ಗೊಬ್ಬರವನ್ನು ನಿಧಾನ ಗತಿಯಲ್ಲಿ ಕಡಿಮೆ ಮಾಡಿ ಸಾವಯವ ಕೃಷಿಯನ್ನು ಹೆಚ್ಚಿಸುತ್ತಾ ಹೋಗುವುದರ ಜೊತೆಗೆ ಫಲವತ್ತಾತಾದ  ಭೂಮಿಯನ್ನು ಮುಂದಿನ ತಲಮಾರಿಗೆ ನೀಡುವಂತಾಗಬೇಕು ತೋಟದ ಮಣ್ಣು ಪರೀಕ್ಷೆಯನ್ನು ಮಾಡಿ ಸಾವಯವ ಪ್ರಮಾಣಪತ್ರವನ್ನು ಪಡೆದರೆ ನಮ್ಮ ಕಾಫಿ ಬೆಳೆಗೆ ಉತ್ತಮ ದರ ದೊರೆಯುತ್ತದೆ.

ನೀವು ಬೆಳೆದಂತಹ ಕಾಫಿಯನ್ನು ಯಾವ ರೀತಿ ಮಾರಾಟ ಮಾಡುತ್ತಿದ್ದೀರಿ? 

1992 ರವರೆಗೆ ನಾವು ಬೆಳೆದ ಕಾಫಿಯನ್ನು ನೇರವಾಗಿ ಕಾಫಿ ಬೋರ್ಡ್‌ಗೆ  ಕೊಡಬೇಕಿತ್ತು. ಬೇರೆ ಯಾವುದೇ ಹೊರಗಿನ ಮಾರುಕಟ್ಟೆಗೆ ಕಾಫಿಯನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿತ್ತು. ತದ ನಂತರ ದೇವೇಗೌಡರು ಹಾಗೂ ಆ ಸಮಯದಲ್ಲಿ ವಾಣಿಜ್ಯ ಮತ್ತು ಜವಳಿ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಐ.ಕೆ.ಗುಜ್ರಾಲ್ ಅವರ ಪ್ರಯತ್ನದಿಂದ  ಐ.ಎಸ್.ಕ್ಯೂ.ಎಫ್. ಇಂಟರ್ನಲ್ ಸೇಲ್ಸ್ ಕ್ವಾಟ (internal sales quota act) ಕಾನೂನನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಗೊಳಿಸಿದ ನಂತರ ಕಾಫಿ ಬೆಳೆಯ ಮಾರಾಟವನ್ನು ಮುಕ್ತ ಮಾರುಕಟ್ಟೆಗೆ ತರಲಾಯಿತು. 

ಒಂದು ಉತ್ತಮವಾದ ವರ್ಷದಲ್ಲಿ ಅರೇಬಿಕದಲ್ಲಿ 80% ಪ್ರತಿಶತ ಬೆಳೆಯನ್ನು ಪಾರ್ಚ್‌ಮೆಂಟ್ ಆಗಿ. ಉಳಿದ 20% ಬೆಳೆಯನ್ನು ಚೆರಿಯಾಗಿ ಬೇರ್ಪಡಿಸಲಾಗುವುದು. ರೋಬಾಸ್ಟ 60೫ ಪ್ರತಿಶತ ಬೆಳೆಯನ್ನು ಪಾರ್ಚ್‌ಮೆಂಟ್‌ ಆಗಿ. ಉಳಿದ 40% ಬೆಳೆಯನ್ನು ಚೆರಿಯಾಗಿ ಬೇರ್ಪಡಿಸಲಾಗುವುದು. 

ಕಾಫಿ ಬೆಳೆಯನ್ನು ಪಾರ್ಚ್‌ಮೆಂಟ್‌ ಮಾಡಲು ಸ್ವಂತ ಪಲ್ಪಿಂಗ್ ಮಿಷನ್ ಅನ್ನು ಖರೀದಿಸಲಾಗಿದೆ. ಇದಕ್ಕೆ ಕಾಫಿ ಬೋರ್ಡ್ ನಿಂದ ಸಬ್ಸಿಡಿ ದೊರೆತಿದೆ. ನಂತರ ಕಾಫಿಯನ್ನು 2 ರೀತಿಯಲ್ಲಿ ಮಾರಾಟ ಮಾಡಲಾಗುವುದು. ನಾವು ಬೆಳೆದ ಕಾಫಿಯ 20% ಪ್ರತಿಶತವನ್ನು ಕೊಡಗಿನ FPC Farmers producers Company ಆದ Coorg Bayota ಗೆ ಕೊಡಲಾಗುವುದು. ಬಾಕಿ 80% ಪ್ರತಿಶತವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು. Coorg Bayota ಪ್ರಾರಂಭವಾಗಿ ನಾಲ್ಕು ವರ್ಷಗಳಾಗಿದೆ. ಇದರಲ್ಲಿರುವ ಕಾಫಿಯನ್ನು ಕ್ವಾಲಿಟಿ ಟೆಸ್ಟ್, ಕಪ್ ಟೆಸ್ಟ್ ಮಾಡಿ ನಂತರ ಉತ್ತಮ ಬೆಲೆಗೆ ಹೊರದೇಶಗಳಿಗೆ ರಫ್ತು ಮಾಡಲಾಗುವುದು. ಆದರೆ ಇದಕ್ಕೆ ಹಲವು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. Coorg Bayota ದಲ್ಲಿ ಪ್ರಸ್ತುತ 120 ಸದಸ್ಯರಿದ್ದಾರೆ.

ಭಾರತದಲ್ಲಿ ವಿಶೇಷ ಕಾಫಿಯನ್ನು(Speciality Coffee) ಹೇಗೆ ಗ್ರಹಿಸಲಾಗಿದೆ ಮತ್ತು ಅದು ಯಾವ ದಿಕ್ಕಿನಲ್ಲಿದೆ ಎಂದು ನೀವು ಹೇಗೆ ಭಾವಿಸುತ್ತೀರಿ?

ನಮ್ಮ ತೋಟವು UTZ Certification (Now Part of the Rainforest Alliance) ಪ್ರಮಾಣ ಪತ್ರವನ್ನು ಹೊಂದಿದೆ. ಇದರಿಂದ ನಮ್ಮ ತೋಟದಲ್ಲಿ ಬೆಳೆದ ಕಾಫಿಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಇದು ಸಹಾಯಕವಾಗಿದೆ. ಇದು ಕಾಫೀ ತೋಟದ ಉತ್ತಮ ವಾತಾವರಣವನ್ನು ಪರಿಶೀಲಿಸಿ ನೀಡುವ ಪ್ರಮಾಣ ಪತ್ರ. ಹಾಗೆ ತೋಟದ ಕಾರ್ಮಿಕರ ಕೆಲಸ, ಬಾಲ ಕಾರ್ಮಿಕರನ್ನು ಬಳಸುವುದು, ನಿರ್ಬಂಧಿತ ಉತ್ಪನ್ನಗಳನ್ನು ಬಳಸದೆ ಇರುವುದು, ಸಮಯ ಪಾಲನೆ ಮುಂತಾದ ಅಂಶವನ್ನು ಗಮನಿಸಿ ನೀಡುವ ಪ್ರಮಾಣ ಪತ್ರವನ್ನು ಹೊಂದಿದೆ.

ಕಾಫಿಯಿಂದ ಇತರೆ ಉತ್ಪನಗಳನ್ನು ಮಾಡುವಲ್ಲಿ ನಿಮ್ಮ ಅಭಿಪ್ರಾಯ?

ಯಾವುದೇ ರೀತಿಯ‌ ಕಾಫಿ ಉತ್ಪನ್ನವನ್ನು ಇಲ್ಲಿಯವರೆಗೆ ನಾವು ಉತ್ಪಾದಿಸಿಲ್ಲ. ಕೇವಲ ಪಾರ್ಚ್‌ಮೆಂಟ್‌ ಹಾಗೂ ಚೆರಿಯನ್ನು ಮಾತ್ರ ಮಾರಾಟ ಮಾಡುತ್ತಿದೇವೆ. ನನ್ನ ಮಗಳು ಅದಿತಿ ಮಂದಣ್ಣ ಬೆಂಗಳೂರಿನ TCS ನಲ್ಲಿ ಉದ್ಯೋಗಿ ಯಾಗಿದ್ದಾರೆ. ಬೆಂಗಳೂರಿನಲ್ಲಿ ನಿವಾಸಿಯಾಗಿರುವ ಅವರು ಅವರ ಬಿಡುವಿನ ಸಮಯದಲ್ಲಿ ಕಾಫೀ ಬೋರ್ಡ್ ಆಯೋಜನೆ ಮಾಡುವ ಕಾಫಿ ಶಾಸ್ತ್ರ ಮುಂತಾದ  ಸೆಮಿನಾರ್ ಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿ ನಮ್ಮ ತೋಟದಲ್ಲಿ ಮುಂದಿನ ದಿನಗಳಲ್ಲಿ ಕಾಫೀಯ ರೋಸ್ಟಿಂಗ್ , ಫೌಡರಿಂಗ್ ಹಾಗೂ ಕಾಫಿಯ ಇತರೆ ಉತ್ಪನ್ನಗಳನ್ನು ತಯಾರಿಸಲು ಆಲೋಚನೆ ಮಾಡಲಾಗಿದೆ.

ಯಾವ ಯಾವ ರುಚಿಯ ಕಾಫಿ ಇದೆ ಎಂಬುವುದು ಬೆಳೆಗಾರರಿಗೆ ತಿಳಿದಿರುವುದು ಅವಶ್ಯಕವೇ?

ಕಾಫಿ ಬೆಳೆಗಾರರಿಗೆ ಕಾಫೀ ಬೆಳೆಗಳ ರುಚಿಯು ಕಂಡಿತವಾಗಿ ತಿಳಿದಿರಬೇಕು. ಏಕೆಂದರೆ ಈ ಮೊದಲು ಕಾಫಿ ಕೇವಲ ಒಂದು ವಾಣಿಜ್ಯ ಬೆಳೆಯಾಗಿ ಮಾರಾಟವಾಗುತಿತ್ತು. ಆದರೆ ಈಗ ಕಾಫಿಯ ಕಫ್ ಟೇಸ್ಟಿಂಗ್  ನಂತರ ಅದರ ದರ ನಿಶ್ಚಯ ಮಾಡಲಾಗುತ್ತದೆ. ಉತ್ತಮ ದರ ಬೇಕೆಂದರೆ ಈ ರೀತಿಯ ಕ್ರಮಗಳನ್ನೂ ಅನುಸರಿಸುವುದು ಅನಿವಾರ್ಯವಾಗಿದೆ. ಕಾಫಿಯ ಕಫ್ ಟೇಸ್ಟಿಂಗ್‌ನಲ್ಲಿ80 ಕ್ಕೂ ಅಧಿಕ ಅಂಕಗಳನ್ನು ಪಡೆದರೆ ಅದನ್ನು ಸ್ಪೆಷಾಲಿಟಿ ಕಾಫಿ(Speciality Coffee) ಎಂದು ಪರಿಗಣಿಸಲಾಗುತ್ತದೆ.

ನೀವು ನಿಮ್ಮ ಕಾಫಿಯನ್ನು ನಿಮ್ಮದೇ ಆದ ರೀತಿಯಲ್ಲಿ ಸಂಸ್ಕರಿಸುತ್ತಿದ್ದಿರಾ?

ಈ ಮೊದಲು ಕಾಫಿ ಪಲ್ಪಿಂಗ್‌ ಮಾಡಲು  ತುಂಬಾ ನೀರು ಖರ್ಚಾಗುತ್ತಿತ್ತು. ಸರಾಸರಿ 60,000 ಲೀಟರ್ ನೀರು ಬೇಕಿತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅವರ ಸಹಾಯದಿಂದ ತಂತ್ರಜ್ಞಾನ ಬಳಸಿ ವಾಟರ್ ಫಿಲ್ಟರ್ ಅನ್ನು ಬಳಸಿ ವಾಟರ್ ರೀಸೈಕ್ಲಿಂಗ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಈ ತಂತ್ರಜ್ಞಾನದಿಂದ ಕಾಫಿ ಪಲ್ಪಿಂಗ್ ವಾಷರ್‌‌ ಯಂತ್ರಗಳನ್ನು ಉತ್ಪಾದಿಸುವ ಕಂಪನಿಗಳು ಅಭಿವೃದ್ದಿಪಡಿಸಿ ತಯಾರಿಸಿದ ಯಂತ್ರಗಳಿಂದ ಒಂದು ಟನ್ ಕಾಫಿ ಪಲ್ಪಿಂಗ್‌ ಮಾಡಲು ಈವಾಗ 1000 ಲೀಟರ್ ನೀರು ಸಾಕು. 60% ಪ್ರತಿಶತ ನೀರು ಇದರಿಂದ ಉಳಿತಾಯವಾಗುತ್ತಲಿದೆ. 

ಕಾಫಿ ವಾಷಿಂಗ್ ಸಿಸ್ಟಮ್ ಹಾಗೂ ಡ್ರೈಯಿಂಗ್ ಸಿಸ್ಟಮ್ ನಲ್ಲಿ ಕ್ವಾಲಿಟಿ ಹೆಚ್ಚು ಮಾಡಲು ಶ್ರಮಿಸುತ್ತಿದೇವೆ. ಭಾರತ ದೇಶ ಒಂದೇ 100% ಶೇಡ್ ಗ್ರೋವ್ ಕಾಫಿ ಉತ್ಪಾದಿಸುತ್ತಿದೆ. ಹಾಗೆ ಹ್ಯಾಂಡ್ ಪಿಕ್‌ಡ್‌ ಹಾಗೂ ಸನ್ ಡ್ರೈ ಮಾಡಲಾಗುತ್ತದೆ. ಇತರೆ ಕಾಫಿ ಬೆಳೆಯುವ ದೇಶದಲ್ಲಿ  ಡೈರೆಕ್ಟ್ ಡ್ರೈ ಮಾಡುತ್ತಾರೆ.  ನಾವು ನೈಸರ್ಗಿಕ ಕ್ರಮವನ್ನು ಅನುಸರಿಸುತ್ತೇವೆ. ನಮ್ಮದು ಖರ್ಚು ಕಮ್ಮಿ ಹೆಚ್ಚು ಕ್ವಾಲಿಟಿಯನ್ನು ಒಳಗೊಂಡಿದೆ.

ಕಾಫಿ ಕೃಷಿಯಲ್ಲಿ ಯಾಂತ್ರಿಕರಣ ಅಳವಡಿಕೆ ಕುರಿತು ನಿಮ್ಮ ಅನಿಸಿಕೆ ತಿಳಿಸಿ?

ಭಾರತದಲ್ಲಿ ಕಾಸ್ಟ್ ಆಫ್ ಪ್ರೊಡಕ್ಷನ್ 65% ಲೇಬರ್ ಇನ್ಪುಟ್. ಉಳಿದ ದೇಶಗಳಲ್ಲಿ ಅಂದರೆ ಬ್ರೆಜಿಲ್ ನಲ್ಲಿ 25% ಲೇಬರ್ ಇನ್ಪುಟ್. ಹಾಗಾಗಿ ಭಾರತದಲ್ಲಿ ಕಾರ್ಮಿಕರ ಅವಲಂಬನೆ ಬೇಕೆ ಬೇಕು. ಭಾರತೀಯ ಕಾಫಿ ಕೃಷಿಯಲ್ಲಿ ಬೃಹತ್ತ ಗಾತ್ರದ ಯಂತ್ರಗಳ ಬಳಕೆ ಮಾಡಲು ಬಹು ಕಷ್ಟ ಎಂಬುವುದು ನನ್ನ ಅನಿಸಿಕೆಯಾಗಿದೆ.

ಭಾರತೀಯ ಕಾಫಿಗಳು ನಮ್ಮ ಅಭಿಪ್ರಾಯದಲ್ಲಿ ವಿಶ್ವದ ಅತ್ಯುತ್ತಮ ಕಾಫಿಗಳಲ್ಲಿ ಒಂದಾಗಿದೆ. ಇದನ್ನು ವಿಶ್ವದ ಅತ್ಯುತ್ತಮ ಕಾಫಿ ಮಾಡುವಲ್ಲಿ ನಿಮ್ಮ ಸಲಹೆ ಏನು?

ಕೂರ್ಗ್ ಅರೇಬಿಕಾ ಕಾಫಿ, ವಯನಾಡ್ ರೋಬಸ್ಟಾ ಕಾಫಿ, ಚಿಕ್ಕಮಗಳೂರು ಅರೇಬಿಕಾ ಕಾಫಿ, ಅರಕು ವ್ಯಾಲಿ ಅರೇಬಿಕಾ ಕಾಫಿ ಮತ್ತು ಬಾಬಾಬುಡನ್‌ಗಿರಿ ಅರೇಬಿಕಾ ಕಾಫಿ. ಗಳನ್ನು ಭೌಗೋಳಿಕ ಸೂಚನೆಗಳ ನೋಂದಣಿಯು ಕಾಫಿ ಪ್ರಭೇದಗಳಿಗೆ ಭೌಗೋಳಿಕ ಸೂಚಕ (GI) ಟ್ಯಾಗ್ ಅನ್ನು ಅನುಮೋದಿಸಿದೆ. 

ಕೂರ್ಗ್ ಅರೇಬಿಕಾ ಕಾಫಿ: ಕರ್ನಾಟಕದ ಕೊಡಗು ಜಿಲ್ಲೆ ಕಾಫಿ ಕೃಷಿಗೆ ಹೆಸರುವಾಸಿಯಾಗಿದೆ. ವಿಶಿಷ್ಟ ಜೈವಿಕ ಮತ್ತು ಅಜೀವಕ ಪರಿಸ್ಥಿತಿಗಳು ಕೊಡಗು ಪ್ರದೇಶದಲ್ಲಿ ಬೆಳೆಯುವ ಕಾಫಿಗೆ ಅನನ್ಯತೆಯನ್ನು ಒದಗಿಸುತ್ತವೆ. ವಿಶಾಲವಾದ ಭೂದೃಶ್ಯವು ಹುರಿದ ಕಾಫಿಗೆ ವಿಶಿಷ್ಟವಾದ ಪರಿಮಳ ಮತ್ತು ಪರಿಮಳವನ್ನು ಒದಗಿಸುತ್ತದೆ.

ವಯನಾಡ್ ರೋಬಸ್ಟಾ ಕಾಫಿ: ವಯನಾಡ್ ರೋಬಸ್ಟಾ ಕಾಫಿ ಕೇರಳದ ವಯನಾಡ್ ಪ್ರದೇಶದಲ್ಲಿ ಕಾಳುಮೆಣಸಿನೊಂದಿಗೆ ಶುದ್ಧ ಬೆಳೆಯಾಗಿ ಮತ್ತು ಮಿಶ್ರ ಬೆಳೆಯಾಗಿ. ವಯನಾಡ್ ಕೇರಳದ ಸುಮಾರು 90% ಕಾಫಿ ಉತ್ಪಾದನೆಯನ್ನು ಉತ್ಪಾದಿಸುತ್ತದೆ ಮತ್ತು ಕೇರಳದ ಕಾಫಿ ಆರ್ಥಿಕತೆಯ ಬೆನ್ನೆಲುಬಾಗಿದೆ.

ಚಿಕ್ಕಮಗಳೂರು ಅರೇಬಿಕಾ ಕಾಫಿ: ಚಿಕ್ಕಮಗಳೂರು ಅರೇಬಿಕಾ ಕಾಫಿಯನ್ನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಇದು ಭಾರತದಲ್ಲಿ ಕಾಫಿ ಕೃಷಿಯನ್ನು ಮೊದಲು ಪ್ರಾರಂಭಿಸಿದ ಪ್ರದೇಶವಾಗಿದೆ.

ಬಾಬಾಬುಡನ್‌ಗಿರಿ ಅರೇಬಿಕಾ ಕಾಫಿ: ಬಾಬಾಬುಡನ್‌ಗಿರಿ ಅರೇಬಿಕಾ ಕಾಫಿಯನ್ನು ಕರ್ನಾಟಕದ ಬಾಬಾಬುಡನ್‌ಗಿರಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ಚಿಕ್ಕಮಂಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿ ಕಾಫಿಯನ್ನು ಭಾರತದಲ್ಲಿ ಮೊದಲು ಬೆಳೆಯಲಾಯಿತು. ಇಲ್ಲಿ ಬೆಳೆಯುವ ಕಾಫಿ ತನ್ನ ವಿಶಿಷ್ಟ ಸುವಾಸನೆ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ. ನೈಸರ್ಗಿಕ ಹುದುಗುವಿಕೆಯಿಂದ ಆಯ್ದ ಕೈಯಿಂದ ಆರಿಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸುತ್ತದೆ, ಕಪ್ ಪೂರ್ಣ ದೇಹ, ಆಮ್ಲೀಯತೆ, ಸೌಮ್ಯವಾದ ಸುವಾಸನೆ ಮತ್ತು ವಿಶಿಷ್ಟವಾದ ಚಾಕೊಲೇಟ್ನ ಟಿಪ್ಪಣಿಯೊಂದಿಗೆ ಹೊಡೆಯುವ ಪರಿಮಳವನ್ನು ಪ್ರದರ್ಶಿಸುತ್ತದೆ.

ಅರಕು ವ್ಯಾಲಿ ಅರೇಬಿಕಾ ಕಾಫಿ: ಅರಕು ವ್ಯಾಲಿ ಅರೇಬಿಕಾ ಕಾಫಿಯು ದ್ರಾಕ್ಷಿಹಣ್ಣಿನ ಸಿಟ್ರಸ್ ಟಿಪ್ಪಣಿಯೊಂದಿಗೆ ಆಹ್ಲಾದಕರ ಆಮ್ಲೀಯತೆಯನ್ನು ಹೊಂದಿದೆ ಮತ್ತು ಹಗುರವಾದ ಬೆಲ್ಲದಂತಹ ಮಾಧುರ್ಯವನ್ನು ಹೊಂದಿದ್ದು ಹಗುರದಿಂದ ಮಧ್ಯಮ ಶಕ್ತಿಯೊಂದಿಗೆ ಇರುತ್ತದೆ. ಇದನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆ ಮತ್ತು ಒಡಿಶಾದ ಕೊರಾಪುಟ್ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ.

ವಿಶೇಷ ಸ್ವಾದ, ಕ್ವಾಲಿಟಿ ಯಿಂದ ಕೂಡಿದ ಭಾರತದ ರೋಬಾಸ್ಟ(Robusta) ಹಾಗೂ ಉಗಾಂಡ ರೋಬಾಸ್ಟ(Robusta) ಪ್ರಪಂಚದಲ್ಲೇ ಉತ್ತಮವಾಗಿದೆ.

1990ರ ಮೊದಲು ಎಲ್ಲಾ ಕಾಫಿಗಳು ಕಾಫಿ ಬೋರ್ಡ್ ಮೂಲಕ ಮಾರಾಟವಾಗುತ್ತಿತ್ತು. ಯಾವ ತೋಟದ ಕಾಫಿಗಳು ಎಂದು ಗೊತ್ತಾಗುತ್ತಿರಲಿಲ್ಲ. ಎಲ್ಲಾ ಕಾಫಿಗಳು ಮಿಕ್ಸ್ ಆಗಿ ಮಾರಾಟವಾಗುತ್ತಿತ್ತು. ಈಗ ಲೊಕೇಷನ್‌ ಸ್ಪೆಸಿಫಿಕ್ ಹಾಗೂ ಎಸ್ಟೇಟ್ ವೈಸ್‌ ಬ್ರಾಂಡ್ ಕಾಫಿಗಳು ಮಾರುಕಟ್ಟೆಗೆ ಬರುತ್ತಿದೆ. ಅದರಿಂದ ಪ್ರತಿಯೊಬ್ಬ ಕಾಫಿ ಬೆಳೆಗಾರರು ಒಳ್ಳೆಯ ಗುಣಮಟ್ಟದ ಕಾಫಿಯನ್ನು ಬೆಳೆಸುವುದು ಅನಿವಾರ್ಯತೆಯಿದೆ. ಭಾರತದ ಕಾಫಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಚಾರ ಮಾಡುವ ಮೂಲಕ, ರೈತರಿಗೆ ಹೊಸ ಅವಕಾಶಗಳು ಮತ್ತು ಮಾರುಕಟ್ಟೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ 2023ರ ಸೆಪ್ಟಂಬರ್ 25 ರಿಂದ 28ರ ವರೆಗೆ ಬೆಂಗಳೂರಿನಲ್ಲಿ ನಡೆದ ವಿಶ್ವ ಕಾಫಿ ಸಮ್ಮೇಳನವು ಒಂದು ಹೆಜ್ಜೆಯಾಗಿದೆ. ಭಾರತದ ಕಾಫಿಯ ಬಗ್ಗೆ ಇಲ್ಲಿಯವರಗೆ ಪ್ರಮೋಶನ್ ಇಲ್ಲ. ಬ್ರಾಂಡಿಂಗ್ + ಸ್ಟೋರಿ ಕಾಫಿ ಪ್ರಮೋಶನ್ ಬಗ್ಗೆ ಇತೀಚಿನ ದಿನಗಳಲ್ಲಿ ಚಿಂತನೆಗಳು ನಡೆಯುತಿದೆ. ಕಾಫಿ ಸಮುದಾಯದ ಬೆಂಬೆಲಕ್ಕೆ ನಿಮ್ಮಂತಹ ಮಾಧ್ಯಮಗಳು ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವುದು ಸಂತಸ ತಂದಿದೆ.

ಕಾಫಿ ಕೃಷಿ ಲಾಭದಾಯಕವೋ ಅಥವಾ ನಷ್ಟವೋ ವಿವರಿಸಿ? 

ನನ್ನ ಅನುಭವದಲ್ಲಿ ಕಾಫಿ ಉದ್ಯಮ ಲಾಭದಾಯಕವಾಗಿದೆ. ಕಾಫಿ ನಂಬಿಕೆಯ ಬೆಳೆ, ಕಾಫಿ ಹಾಳಾಗುವುದಿಲ್ಲ ಕೊಳೆಯುವುದಿಲ್ಲ. ಮೊದಲು 1979-80 ರಾಲ್ಲಿ ನಮ್ಮ ತೋಟದ ಒಂದು ವರ್ಷದ ಬಡ್ಜೆಟ್ ಮಾಡುತ್ತಿದ್ದೆವು. ಪ್ರತಿ ಕಾಫಿ ಕೃಷಿಯ ವಾರ್ಷಿಕ ಖರ್ಚು 50% ಹೆಚ್ಚಾಗುತ್ತ ಹೊಗುತ್ತಿತ್ತು. ನಾವು ನ್ಯೂಯರ್ಕ್ ಅರೇಬಿಕಾ ಮತ್ತು ಲಂಡನ್ ರೋಬಾಸ್ಟ ಬೆಲೆ ಮೇಲೆ ಅವಲಂಬಿಸಿ ವ್ಯಾಪಾರವನ್ನು ನಡೆಸುತ್ತಿದ್ದೇವೆ. ಅದರಿಂದ ಕಾಫಿಯ ಬೆಲೆ ನಿಗದಿ ಪಡಿಸುವ ಮೇಲೆ ಭಾರತದ ನಿಯಂತ್ರಣ ಇಲ್ಲ.

ಕಾಫಿ ಕೃಷಿಗೆ ಸರಕಾರದಿಂದ ನೀವು ಏನನ್ನು ಅಪೇಕ್ಷಿಸುತ್ತಿರಿ?

ಕಾಫಿ ಭಾರತದಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆ ಕೆಳಗೆ ಬರುತ್ತದೆ.  ಆದರೆ ಭೂಮಿ ರಾಜ್ಯ ಸರ್ಕಾರದ ಕೆಳಗೆ ಬರುತ್ತದೆ. ಅದರಿಂದ ರಾಜ್ಯ ಸರ್ಕಾರ ಕಾಫಿ ಬಗ್ಗೆ ಅಷ್ಟು ಗಮನ ನೀಡುತ್ತಿಲ್ಲ. ಕೊಡಗಿನಲ್ಲಿ 1 ಲಕ್ಷ ಹೆಕ್ಟೇರ್ ಕಾಫಿ ತೋಟ ಇದೆ. ಅಲ್ಲದೆ ಕಾಫಿ ಉದ್ಯಮದಲ್ಲಿ 99% ರಷ್ಟು ಪಾಲು ಖಾಸಗಿ ಒಡೆತನದಲ್ಲಿದೆ. ಅಲ್ಲದೆ ಕಾಫಿ ಉದ್ಯಮ ಹಾಗೂ ತೋಟವನ್ನು ಉಳಿಸುವುದು ಪ್ರಾಕೃತಿಕವಾಗಿ ಅನಿವಾರ್ವಾಗಿದೆ. ಇದರಿಂದ ಪರ್ಯಾವರಣ ಹಾಗೂ ಅರಣ್ಯ ನಾಶ ಕಡಿಮೆ ಆಗಲಿದೆ. ಅಲ್ಲದೆ ಅತಿ ಹೆಚ್ಚು ಜನರಿಗೆ ಉದ್ಯೋಗದ ಮೂಲವಾಗಿದೆ. ಅದರಿಂದ ರಾಜ್ಯ ಸರ್ಕಾರ ಕಾಫಿ ಉದ್ಯಮದ ಬಗ್ಗೆ ಮಹತ್ವವನ್ನೂ ಅರಿತು ಸೂಕ್ತವಾದ ಮೌಲ್ಯವನ್ನು ನೀಡಬೇಕು ಎಂಬುವುದು ಸರ್ಕಾರದಿಂದ ನಾವು ಅಪೇಕ್ಷೆಪಡುತ್ತಿದೇವೆ.

ಕಾಫಿ ರೈತರಿಗೆ ಸುಸ್ಥಿರ ಜೀವನೋಪಾಯವನ್ನು ಸಾಧಿಸಲು ಸರ್ಕಾರಗಳು, ನಾಗರಿಕ ಸಮಾಜ ಮತ್ತು ಇಡೀ ಕಾಫಿ ವಲಯದ ಸಹಯೋಗ ಮತ್ತು ಬೆಂಬಲವು ಪ್ರಮುಖವಾಗಿದೆ.

ಕಾಫಿ ಕೃಷಿಯಲ್ಲಿ ಸೀಸನ್ ಆಫ್ ಆಗಿರುವಾಗ ನೀವು ಏನು ಮಾಡುತ್ತೀರಿ?

ಕಾಫಿ ಕೃಷಿಯಲ್ಲಿ ಆಫ್ ಸೀಸನ್ ಎಂಬುವುದು ಇಲ್ಲ. ಕಾಫಿ ತೋಟದಲ್ಲಿ ಕೆಲಸ ಇಲ್ಲದ ಸಮಯ ಅಂದರೆ ಅದು ಗಿಡದಲ್ಲಿ ಹೂ ಅರಳುವ(Blossom) ಸಂದರ್ಭ, ಆ ಸಂದರ್ಭ 10-15 ದಿನ ತೋಟದಲ್ಲಿ ಕೆಲಸ ಇರುವುದಿಲ್ಲ. ಆಗ ಕಾರ್ಮಿಕರಿಗೆ ಬೋನಸ್ ಕೊಡಲಾಗುವುದು. ಅವರು ತಮ್ಮ ತಮ್ಮ ಊರಿಗೆ ಪ್ರವಾಸ ಹೋಗಿ ಬರುತ್ತಾರೆ.

ಕಾಫಿ ಕೃಷಿಯ ಜೊತೆಗೆ ಇತರೆ ಯಾವ ಕೃಷಿಯನ್ನು ಮಾಡುತ್ತಿರುವಿರಿ?

ರೋಬಾಸ್ಟ ತೋಟದಲ್ಲಿ ಪ್ರತಿ ಎಕರೆಗೆ 50 ಮರ ಬೆಳೆಸಬಹುದು ಹಾಗೆ ಅರೇಬಿಕಾ ತೋಟದಲ್ಲಿ ಪ್ರತಿ ಎಕರೆಗೆ 100 ಮರ ಬೆಳೆಸಬಹುದು. ನೈಸರ್ಗಿಕ ಅರಣ್ಯದೊಂದಿಗೆ ಬೇರೆ ಬೇರೆ ಮರಗಳನ್ನು ಬೆಳೆಸಿದ್ದೇವೆ. ಅಲ್ಲದೆ ಆ ಮರಗಳಲ್ಲಿ ಆಂತರಿಕ ಬೆಳೆಯಾಗಿ ಕರಿಮೆಣಸನ್ನು ಬೆಳೆಸುತ್ತಿದ್ದೇವೆ.1 ಕರಿಮೆಣಸಿನ ಬಳ್ಳಿಯಲ್ಲಿ 2 ಕೆ.ಜಿ.ಯಷ್ಟು ಕರಿಮೆಣಸು ದೊರೆಯುತ್ತದೆ. ನಮ್ಮ ತೋಟ ಇರುವ ಪ್ರದೇಶದಲ್ಲಿ ತಾಪಮಾನ ಹೆಚ್ಚಾಗಿದ್ದು ಏಲಕ್ಕಿ ಕೃಷಿ ಮಾಡಲು ಸಾಧ್ಯವಿಲ್ಲ, ಕಿತ್ತಳೆ ಹಣ್ಣಿನ(Coorg Mandarin) ಗಿಡಗಳಿವೆ. 40 ವರ್ಷ ಮೊದಲು ಗ್ರೀನಿಂಗ್ ಡಿಸೀಸ್ ವೈರಸ್ ಮಿಂದ ಸಂಪೂರ್ಣ ಕಿತ್ತಲೆ ಗಿಡಗಳು ನಾಶವಾಗಿತ್ತು. ನಂತರ ಹೊಸ ಗಿಡಗಳನ್ನು ನೆಡಲಾಯಿತು. ಅದರೊಂದಿಗೆ ಸಪೋಟ, ಲಿಚ್ಚಿ. ಮತ್ತು ಹಲಸಿನ ಹಣ್ಣಿನ ತಲಿಯಾದ ಸಿದ್ದು ಹಾಗೂ ಶಂಕರ ಮರಗಳಿವೆ. 6 ಎಕರೆ ಭತ್ತದ ಗದ್ದೆ ಇದೆ. 1 ಎಕರೆ ಕೆರೆ ಇದೆ. ಭತ್ತದಕೃಷಿಯನ್ನು ಸಂಪೂರ್ಣವಾಗಿ ಯಂತ್ರಗಳ ಮೂಲಕ ಮಾಡಲಾಗುತ್ತದೆ. ಬೆಳೆ ಬೆಳೆದ ಮೇಲೆ ಭತ್ತದ ಹುಲ್ಲನ್ನು ನಮ್ಮಲ್ಲಿ ಸಾಕುವ 10ರಿಂದ12 ಹಸು ಕರುಗಳಿಗೆ ನೀಡಲಾಗುತ್ತದೆ. ಹೈನುಗಾರಿಕೆಯಿಂದ ಹಾಲನ್ನು ಮಾರಾಟ ಮಾಡುತ್ತಿದ್ದೇವೆ. ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತಿದೆ. 

ಕಾಫಿ ಕೃಷಿಯ ಬಗ್ಗೆ ಇನ್ನು ಹೆಚ್ಚಿನದನ್ನು ಹೇಳ ಬಯಸುವಿರಾ?

ಅಮೆರಿಕಾದಲ್ಲಿ ನಿಖರವಾದ ಕೃಷಿ (ಪಿಎ Precision Agriculture) ಮೂಲಕ ವೈಜ್ಞಾನಿಕವಾಗಿ ಒಂದು ಗಿಡಕ್ಕೆ ಎಷ್ಟು ನೀರು ಬೇಕು ಎಂದು ಡ್ರೋನ್, ಸೆಟಲೈಟ್ ಮೂಲಕ ಅಧ್ಯಯನ ನಡೆಸಿ ಕಾಫಿ ತೋಟವನ್ನು ಬೆಳೆಸುವ ಆರೈಕೆ ಮಾಡುವ ವಿಧಾನವನ್ನು ಪರೀಕ್ಷಿಸಲಾಗುತ್ತದೆ. ಕಾಫಿ ಗಿಡದ ಕೆಳಗೆ ಹಾದು ಹೋಗುವ ಡ್ರೋನ್ ಬಳಸಿ ನಿಖರವಾದ ಕೃಷಿಯು ಮಾಹಿತಿ ತಂತ್ರಜ್ಞಾನವನ್ನು ಬಳಸುತ್ತದೆ (IT) ಬೆಳೆಗಳು ಮತ್ತು ಮಣ್ಣು ಅತ್ಯುತ್ತಮವಾದ ಆರೋಗ್ಯ ಮತ್ತು ಉತ್ಪಾದಕತೆಗೆ ಬೇಕಾದುದನ್ನು ನಿಖರವಾಗಿ ಪಡೆಯುತ್ತದೆ ಎಂದು ಖಚಿತಪಡಿಸುತ್ತದೆ. ಇದು ಲಾಭದಾಯಕತೆಯನ್ನು ಖಚಿತಪಡಿಸುತ್ತದೆ, ಇವೆಲ್ಲ ಗೊಂದಲದಿಂದ ಕಾಫಿ ಕೃಷಿ ಬಿಡಬೇಕು ಎನ್ನುವ ಅಭಿಪ್ರಾಯ ಕಾಫಿ ಕೃಷಿಕರಲ್ಲಿ ಬೇಡ. ಭಾರತದಲ್ಲಿ ಭವಿಷ್ಯದಲ್ಲಿ ಕಾಫಿಯಿಂದ ಆದಾಯ ಹೆಚ್ಚಾಗುತ್ತಾ ಹೋಗುತ್ತದೆ ಎಂಬ ಅಂಕಿ ಅಂಶಗಳು ಇವೆ. ಮೊದಲು ಕಾಫಿಯನ್ನು ಶ್ರೀಮಂತರು ಮಾತ್ರ ಬಳಸುತ್ತಾರೆ ಎನ್ನುವ ಮನೋಭಾವ ವಿತ್ತು. ಆದರೆ ಈಗ ಪ್ರತಿ ವರ್ಷ 2% ರಿಂದ 5% ಪ್ರತಿಶತ ಬೇಡಿಕೆ ಹೆಚ್ಚಾಗುತ್ತಾ ಇದೆ. 

ನೀವು ಇನ್ನಿತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದನ್ನು ಸಂಕ್ಷಿಪ್ತವಾಗಿ ವಿವರಿಸಿ?

*ನಾನು 2001 ರಿಂದ 2009ರವರಗೆ ಕಾಫಿ ಬೋರ್ಡ್‌ನ ಸದಸ್ಯನಾಗಿ ಹಾಗೂ  2009 ರಿಂದ 2010ರರವರಗೆ ಎರಡು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ.

*1988 ರಲ್ಲಿ ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್(‌CPA) ಇದರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ.

* ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌(KPA) ಇದರ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದೇನೆ.

* ಯುನೈಟೆಡ್‌ ಪ್ಲಾಂಟರ್ಸ ಅಸೋಸಿಯೇಷನ್‌ ಸೌತ್‌ ಇಂಡಿಯಾ(UPASI) ಇದರ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದೇನೆ.

* ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌ ಇದರ ಸಂಧಾನ ಸಮಿತಿ ಸಂಚಾಲಕ(Negotiation Committee Convenor) ರಾಗಿ 25ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದೇನೆ.

* ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಇದರ ಸದಸ್ಯರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ.

(ಕಾಫಿ ಉದ್ಯಮದ ಜಂಟಿ ಕ್ರಿಯಾ ಸಮಿತಿಯ ವಕ್ತಾರರಾಗಿ (Spokesman) ಕಾಫಿ ಉದ್ಯಮದ ಪರವಾದ ವಾದವನ್ನು ಕೇಂದ್ರ ಸರಕಾರದ ಮುಂದೆ ಮಂಡಿಸಲು ಹೋದಾಗ ನಮ್ಮ ಅಂದಿನ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬೋಸ್‌ ಮಂದಣ್ಣನವರು  ಹಸ್ತ ಲಾಘವ ಮಾಡುತ್ತಿರುವ ಸಂದರ್ಭ)

ನಿಮ್ಮ ಕುಟುಂಬದ ಪರಿಚಯವನ್ನು ತಿಳಿಸುವಿರಾ?

ತಂದೆ: ದಿವಂಗತ: ನಡಿಕೇರಿಯಂಡ ಕಾಳಪ್ಪ ಮಂದಣ್ಣ. ತಾಯಿ: ದಿವಂಗತ: ಬೊಳ್ಳಮ್ಮ ಮಂದಣ್ಣ,ತಾಮನೆ: ಕೊರವಂಡ.  ಪತ್ನಿ: ಸ್ವಾತಿ ಮಂದಣ್ಣ, ಗುಂಡುಕುಟ್ಟಿ ಬೀ ಎಸ್ಟೇಟ್ ಮಾಲೀಕರಾಗಿದ್ದಾರೆ. ಮಗಳು: ಅದಿತಿ ಮಂದಣ್ಣ ಬೆಂಗಳೂರಿನ TCSನಲ್ಲಿ ಉದ್ಯೋಗಿಯಾಗಿದ್ದಾರೆ. ಅಳಿಯ: ಅಶೋಕ್ ಶಿವರಾಂ ಬೆಂಗಳೂರಿನಲ್ಲಿ ಸಾಪ್ಟ್‌ವೇರ್‌ ಇಂಜಿನೀಯರ್‌. ಮೊಮ್ಮಗ: ಅನಂತ್ ವ್ಯಾಸಂಗ ನಿರತರಾಗಿದ್ದಾರೆ.

“ಸರ್ಚ್‌ ಕಾಫಿ” ಡಿಜಿಟಲ್‌ ಆವೃತ್ತಿಯನ್ನು(“Search Coffee” Digital Edition) ಪ್ರಾರಭಿಸಿರುವ “ಸರ್ಚ್‌ ಕೂರ್ಗ್‌ ಮೀಡಿಯಾ” ದ ಓದುಗರಿಗಾಗಿ ನೀವು ಏನು ಹೇಳಲು ಬಯಸುತ್ತೀರಿ?

ನಾನು ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ಹಾಗೂ ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ ಆಗಾಗ ನಡೆಯುವ ಸೆಮಿನಾರ್‌ಳಿಗೆ  ಹೋಗುತ್ತಿರುತ್ತೇನೆ ಆ ಸೆಮಿನಾರ್‌ಗಳಲ್ಲಿ ಪಾಲ್ಗೋಳ್ಳುವುದು ಕೇವಲ 100 ಜನ ಕೃಷಿಕರು ಮಾತ್ರ ಆದರೆ ಕೊಡಗಿನಲ್ಲಿ ಸುಮಾರು 40000ಕ್ಕೂ ಅಧಿಕ ಕೃಷಿಕರಿದ್ದಾರೆ. ಆದರೆ ಯಾಕೆ ಅವರು ಇಂತಹ ಸೆಮಿನಾರ್‌ಗಳಿಗೆ ಬರುತ್ತಿಲ್ಲ ಎಂಬುವುದೇ ಪ್ರಶ್ನೆಯಾಗಿ ಉಳಿದಿದೆ? ಈ ಮುಂತಾದ ಕಾರಣಗಳಿಂದ ಕೃಷಿಗೆ ಸಂಭಂದಿಸಿದ ಸುದ್ದಿ-ಮಾಹಿತಿಗಳನ್ನು ನಿಮ್ಮ “ಸರ್ಚ್‌ ಕೂರ್ಗ್ ಮೀಡಿಯಾ”ದಲ್ಲಿ ಎಲ್ಲರಿಗೂ ತಲುಪುವ ಹಾಗೆ ಮಾಡಿ ಕೃಷಿಕರಲ್ಲಿ ಜಾಗೃತಿ ಮೂಡಿಸಿ ಅವರು ಇನ್ನಷ್ಟು ಉತ್ತೇಜನದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ನಿಮ್ಮ ಮಾಧ್ಯಮ ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸುತ್ತಿದ್ದೇನೆ. ಹಾಗೆ ನನ್ನ ಅಭಿನಂದನೆಗಳನ್ನು ತಿಳಿಸುತ್ತಾ, “ಸರ್ಚ್‌ ಕಾಫಿ” ಡಿಜಿಟಲ್‌ ಆವೃತ್ತಿಯು (“Search Coffee” Digital Edition) ಭಾರತದಾದ್ಯಂತ ಯಶಸ್ವಿಯಾಗಿ ಮುನ್ನಡೆಯಲಿ ಎಂದು  ಈ ಸಂದರ್ಭದಲ್ಲಿ  ಹಾರೈಸುತ್ತೇನೆ. 

ನಾವು ನಿಮ್ಮ ಕಾಫಿಯ ಬಗ್ಗೆ ಎಲ್ಲಿ ಹುಡುಕಬಹುದು?

ನಮ್ಮ ಕಾಫಿ ತೋಟದ ಹೆಸರು: ಸುಬ್ರಮಣ್ಯ ಎಸ್ಟೇಟ್, ಕೊಡಗಿನ ಸುಂಟಿಕೊಪ್ಪ ಹೋಬಳಿಯ ಉಲುಗುಳಿ ಎಂಬ ಗ್ರಾಮದಲ್ಲಿದೆ. ‌

ನಮ್ಮ ಸಂಪರ್ಕ ಸಂಖ್ಯೆ: +91 99800 60244

ನಮ್ಮ ಗೂಗಲ್‌ ಲೋಕೇಶನ್:

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments