ಕೊಡಗಿನಲ್ಲಿ ನಡೆಯುವ ಹಾಕಿಪಂದ್ಯಾವಳಿಯ ನೇತೃತ್ವವನ್ನು ಪ್ರತಿವರ್ಷವೂ ಒಂದೊಂದು ಕೊಡವ ಕುಟುಂಬವು ವಹಿಸಿಕೊಂಡು ಬರುತ್ತಿದ್ದು, ಈ ಬಾರಿ ಕುಂಡ್ಯೋಳಂಡ ಕುಟುಂಬವು ಸಾರಥ್ಯವನ್ನು ವಹಿಸಿಕೊಂಡು ಕುಂಡ್ಯೋಳಂಡ ಕಪ್ ಹೆಸರಿನಲ್ಲಿಯೇ ಹಾಕಿ ಪಂದ್ಯಾವಳಿಯನ್ನು ಕೊಡಗಿನ ನಾಪೋಕ್ಲುವಿನ ಮೂರು ಮೈದಾನದಲ್ಲಿ ಆಯೋಜಿಸಿದೆ. ಈ ಬಾರಿ ಹಾಕಿ ಪಂದ್ಯಾವಳಿ ಅರ್ಥಾತ್ ಹಾಕಿ ಹಬ್ಬವು ಮಾ.30ರಿಂದ ಆರಂಭವಾಗಿ ಏ.28ರವರೆಗೆ ನಡೆಯಲಿದೆ.
ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬ ಮಾ.30 ರಿಂದ ಏ.28 ರ ವರೆಗೆ ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ದಾಖಲೆಯ 360 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿದೆ. ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯ ಆಯೋಜಿಸಲಾಗಿದೆ.
ಏಕಕಾಲಕ್ಕೆ 30 ಸಾವಿರ ಮಂದಿ ಆಸೀನರಾಗಿ ಪಂದ್ಯಾಟ ವೀಕ್ಷಿಸಲು ಅನುಕೂಲವಾಗುವಂತೆ ಮೈದಾನದ ಸುತ್ತಲೂ ಗ್ಯಾಲರಿ ನಿರ್ಮಾಣವಾಗಿದೆ. ಗಣ್ಯಾತಿಗಣ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳಿದ್ದು, ಒಟ್ಟು 3 ಮೈದಾನಗಳನ್ನು ಹಾಕಿ ಪಂದ್ಯಾವಳಿಗೆ ಸಿದ್ಧ ಮಾಡಲಾಗಿದೆ.
ಅಂತರ್ ರಾಷ್ಟ್ರೀಯ ಗುಣಮಟ್ಟದ ಮಾದರಿಯಲ್ಲಿ ಮೈದಾನವನ್ನು ಸಿದ್ಧಗೊಳಿಸಲಾಗಿದೆ. ಮೈದಾನದಲ್ಲಿ ಚೆಂಡು ಮತ್ತು ಆಟಗಾರರ ನಡುವೆ ಸಮತೋಲನೆ ಕಾಪಾಡುವ ಸಲುವಾಗಿ ಮೈದಾನವನ್ನು ನುಣುಪಾಗಿಸಲು ಟ್ರ್ಯಾ ಮೂಲಕ ನೀರನ್ನು ಹರಿಸಲಾಗುತ್ತಿದೆ. ಪ್ರತಿ ಮೈದಾನದಲ್ಲಿ 6 ಪಂದ್ಯಗಳಂತೆ 1 ದಿನಕ್ಕೆ 18 ಪಂದ್ಯಾಟಗಳು ನಡೆಯಲಿವೆ. 10 ದಿನಗಳ ಬಳಿಕ 2 ಮೈದಾನ, ಫ್ರೀ ಕ್ವಾಟರ್ ಹಂತದ ಬಳಿಕ 1ನೇ ಮೈದಾನದಲ್ಲಿ ಹಾಕಿ ಕ್ರೀಡಾಕೂಟಗಳು ನಡೆಯಲಿವೆ.
24ನೇ ವರ್ಷದ ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ ಈ ಬಾರಿ 360 ಕೊಡವ ಕೌಟುಂಬಿಕ ತಂಡಗಳು ನೋಂದಾವಣೆ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ಕ್ರೀಡಾ ಕೂಟವನ್ನು ಗಿನ್ನಿಸ್ ದಾಖಲೆ ಮಾಡುವ ಆಶಯವನ್ನು ಕುಂಡ್ಯೋಳಂಡ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಈ ಹಿಂದಿನಂತೆ ಹಲವು ತಂಡಗಳಲ್ಲಿ ಮಕ್ಕಳು, ಮಹಿಳಾ ಹಾಕಿ ಪಟುಗಳ ಸಹಿತ ಹಿರಿಯ ನಾಗರಿಕ ಆಟಗಾರರು ಕೂಡ ಮೈದಾನದಲ್ಲಿ ತಮ್ಮ ಕ್ರೀಡಾ ಸ್ಫೂರ್ತಿ ಪ್ರದರ್ಶಿಸಲಿದ್ದಾರೆ.
ಹಾಕಿ ಕ್ರೀಡೆಯ ಜೊತೆಯಲ್ಲಿಯೇ ವಾರಾಂತ್ಯದಂದು ಕೊಡವ ಸಾಂಪ್ರದಾಯಿಕ ಸಂಸ್ಕೃತಿ ಪ್ರತಿಬಿಂಬಿಸುವ ಉಮ್ಮತ್ತಾಟ್, ಬೊಳಕಾಟ್, ಮೆರಥಾನ್, ಆಹಾರ ಮೇಳ, ವಧುವರರ ಸಮಾವೇಶ, ಆರೋಗ್ಯ ಶಿಬಿರ, ವೃತ್ತಿ ಮಾರ್ಗದರ್ಶನ, ಹಾಕಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಆಟಗಾರರ ಪುನರ್ ಮಿಲನ ಮತ್ತು ಬಾಳೋಪಾಟ್ ತರಬೇತಿ ಮತ್ತಿತರ ಕಾರ್ಯಕ್ರಮಗಳು ಕೂಡ ನಡೆಯಲಿದೆ.
ಮಾ.30ರಂದು ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯವನ್ನು ಆಯೋಜಿಸಲಾಗಿದ್ದು, ಇದಕ್ಕೂ ಮುನ್ನ ಮಡಿಕೇರಿ ಮತ್ತು ಸಾಯಿ ಪೊನ್ನಂಪೇಟೆ ಬಾಲಕಿಯರ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟವನ್ನು ಆಯೋಜಿಸಲಾಗಿದೆ. ಕುಂಡ್ಯೋಳಂಡ ಹಾಕಿ ಹಬ್ಬದ ಚಾಂಪಿಯನ್ ತಂಡಕ್ಕೆ ರೂ.4ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ 3 ಲಕ್ಷ, ತೃತೀಯ 2 ಲಕ್ಷ ಮತ್ತು 4ನೇ ಸ್ಥಾನ ಪಡೆಯುವ ತಂಡಕ್ಕೆ ರೂ.1 ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಗುತ್ತಿದೆ.
ಭಾರತೀಯ ಹಾಕಿಯ ತೊಟ್ಟಿಲು ಎಂದೇ ಪರಿಗಣಿಸಲ್ಪಟ್ಟಿರುವ ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. 50ಕ್ಕೂ ಹೆಚ್ಚು ಕೊಡವ ಅಂತರ್ ರಾಷ್ಟ್ರೀಯ ಹಾಕಿ ಆಟಗಾರರು ಹಾಕಿ ಕ್ರೀಡೆಯ ಪರಂಪರೆಗೆ ಕೊಡುಗೆ ನೀಡಿದ್ದಾರೆ. ಪಾಂಡಂಡ ಕುಟ್ಟಣ್ಣಿ ಹಾಗೂ ಅವರ ಸಹೋದರ ಕಾಶಿಯವರಿಂದ ಕೊಡವ ಹಾಕಿ ಉತ್ಸವ ಆರಂಭವಾಯಿತು. 1997ರಲ್ಲಿ ಕರಡದಲ್ಲಿ ಪಾಂಡಂಡ ಕುಟುಂಬ ಮೊದಲ ಬಾರಿಗೆ ಆಯೋಜಿಸಿದ್ದ ಹಾಕಿಹಬ್ಬದಲ್ಲಿ 60 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ 360 ತಂಡಗಳ ನೋಂದಣಿಯೊಂದಿಗೆ ಹೊಸ ದಾಖಲೆ ಸೃಷ್ಟಿಸುವ ಮೂಲಕ ಪ್ರತಿಷ್ಠಿತ ಕಪ್‌ಗಾಗಿ ಸೆಣಸಾಡುತ್ತಿರುವುದು ವಿಶೇಷವಾಗಿದೆ.
1997ರಲ್ಲಿ ಆರಂಭವಾದ ಹಾಕಿ ಪಂದ್ಯಾವಳಿ:
ಹಾಕಿ ಪಂದ್ಯಾವಳಿಯಲ್ಲಿ ಈ ಬಾರಿ ಸುಮಾರು 400 ಕೊಡವ ಕುಟುಂಬಗಳ ತಂಡ ಭಾಗವಹಿಸುವಂತೆ ಮಾಡಲು ಶ್ರಮಪಡಲಾಗಿತ್ತಾದರೂ ಅಂತಿಮವಾಗಿ ದಾಖಲೆಯ ಸುಮಾರು 360 ಕುಟುಂಬ ತಂಡಗಳು ಭಾಗವಹಿಸುತ್ತಿರುವುದು ವಿಶೇಷವಾಗಿದ್ದು, ಇದು ವಿಶ್ವದಾಖಲೆಯ ಪುಟ ಸೇರಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇದರ ಜತೆಗೆ ಕೊಡವ ಹಾಕಿ ಪಂದ್ಯಾವಳಿಯ ಹಿಂದಿನ ದಿನಗಳನ್ನು ಮೆಲುಕು ಹಾಕಿದರೆ ಹತ್ತಾರು ವಿಶೇಷತೆಗಳಿರುವುದನ್ನು ಕಾಣಬಹುದಾಗಿದೆ. 1997ರಲ್ಲಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ ‘ಹಾಕಿ ಪಂದ್ಯಾವಳಿ’ ಯನ್ನು ಆರಂಭಿಸಲಾಯಿತು. ಕೊಡವರೆಲ್ಲರೂ ಇದನ್ನು ಪಂದ್ಯಾವಳಿಯಾಗಿ ನೋಡದೆ ನಮ್ಮ ಹಬ್ಬ ಎಂಬಂತೆ ನೋಡಿದರ ಪರಿಣಾಮವಾಗಿ ಇವತ್ತು ಇಪ್ಪತ್ತನಾಲ್ಕನೇ ಪಂದ್ಯಾವಳಿ ನಡೆಯಲು ಸಾಧ್ಯವಾಗಿದೆ. ಇಷ್ಟರಲ್ಲೇ ಬೆಳ್ಳಿಮಹೋತ್ಸವವನ್ನು ಆಚರಿಸಬೇಕಾಗಿತ್ತು. ಆದರೆ ಕೊಡಗಿನಲ್ಲಿ ನಡೆದ ಭೂಕುಸಿತ, ಕೊರೊನಾ ಕಾರಣಗಳಿಂದಾಗಿ ಕೆಲವು ವರ್ಷ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗಿರಲಿಲ್ಲ.