ಮೆಣಸಿನ ಕಾಯಿ
ಮೆಣಸಿನಕಾಯಿಯು ಮುಖ್ಯವಾದ ತರಕಾರಿ ಹಾಗೂ ಸಂಬಾರ ಪದಾರ್ಥದ ಬೆಳೆಯಾಗಿದ್ದು ದೇಹದ ಪೆÇೀಷಣೆಗೆ ಬೇಕಾದ ಎ ಮತ್ತು ಸಿ ಅನ್ನಾಂಗವನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ. ದೇಶದಲ್ಲಿ ಸುಮಾರು 8.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 7.8 ಲಕ್ಷ ಟನ್‍ಗಳಷ್ಟು ಉತ್ಪಾದನೆ ಪಡೆಯಲಾಗುತ್ತಿದೆ. ಕರ್ನಾಟಕದಲ್ಲಿ 1.7 ಲಕ್ಷ ಪ್ರದೇಶದಲ್ಲಿ ಬೆಳೆದು 1.04 ಲಕ್ಷ ಟನ್‍ಗಳಷ್ಟು ಉತ್ಪಾದನೆ ಪಡೆಯಲಾಗುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ಬೇಸಿಗೆ ಕಾಲದಲ್ಲಿ (ಜನವರಿ- ಜೂನ್) ಮುಖ್ಯವಾಗಿ ಹಸಿರು ಮೆಣಸಿಕಾಯಿಗಾಗಿ ಬೆಳೆಯಲಾಗುತ್ತಿದೆ.
ಮಣ್ಣು
ನೀರು ಬಸಿದು ಹೋಗುವಂತಹ ಫಲವತ್ತಾದ ಗೋಡು ಮಣ್ಣು ಈ ಬೆಳೆಗೆ ಉತ್ತಮ. ಮರಳು ಮಿಶ್ರಿತ ಕಪ್ಪು ಮತ್ತು ಕೆಂಪು ಗೋಡು ಮಣ್ಣುಗಳಲ್ಲಿ ಈ ಬೆಳೆಯನ್ನು ಚೆನ್ನಾಗಿ ಬೆಳೆಯಬಹುದಾಗಿದೆ.
ಹವಾಗುಣ
ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯಬಹುದಾದ ಮುಖ್ಯ ಬೆಳೆ. ಇದನ್ನು ಸಮುದ್ರ ಮಟ್ಟದಿಂದ 2000 ಮೀ. ಎತ್ತರ ಮತ್ತು 20 ರಿಂದ 350 ಸೆ. ಉಷ್ಣಾಂಶವಿರುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯಬಹುದಾಗಿದೆ.
ಬಿತ್ತನೆ ಕಾಲ
ಮಳೆಯಾಶ್ರಯದ ಬೆಳೆಯನ್ನು ಪ್ರಾರಂಭ ಮಾಡಲು ಮೇ-ಜೂನ್ ತಿಂಗಳು ಹಾಗೂ ನೀರಾವರಿ ಬೆಳೆ ಪ್ರಾರಂಭ ಮಾಡಲು ಅಕ್ಟೋಬರ್-ನವೆಂಬರ್ ಹಾಗೂ ಜನವರಿ-ಫೆಬ್ರವರಿ ತಿಂಗಳು ಸೂಕ್ತ ಕಾಲವಾಗಿದೆ.
ಸ್ಥಳಿಯ ತಳಿಗಳು
1. ಬ್ಯಾಡಗಿ: ಹಣ್ಣಾದ ಕಾಯಿಗಳು ಕಡುಗೆಂಪು ಬಣ್ಣಕ್ಕೆ ತಿರುಗಿ ಮೇಲ್ಭಾಗದಲ್ಲಿ ಸುಕ್ಕುಗಳನ್ನು ಹೊಂದಿರುತ್ತವೆ. ಕಾಯಿಗಳು 12 ರಿಂದ 15. ಸೆಂ. ಮೀ. ಉದ್ದವಿದ್ದು ಕಡಿಮೆ ಖಾರ ಇರುತ್ತದೆ. ಇದು ಮಳೆಯಾಶ್ರಯದ ಬೆಳೆಗೆ ಯೋಗ್ಯವಾದ ತಳಿ.
2. ಮೈಸೂರು: ಗಿಡಗಳು ಎತ್ತರವಾಗಿದ್ದು ಕಡಿಮೆ ರೆಂಬೆಗಳಿರುತ್ತವೆ. ಕಾಯಿಗಳು ಖಾರವಾಗಿದ್ದು ಕಡು ಗೆಂಪು ಬಣ್ಣ ಹೊಂದಿರುತ್ತವೆ.
3. ಗೌರಿಬಿದನೂರು: ಹಣ್ಣಾದ ಕಾಯಿಗಳು ಕಡುಗೆಂಪು ಬಣ್ಣಕ್ಕೆ ತಿರುಗಿ ಹೆಚ್ಚು ಖಾರವಾಗಿದ್ದು ನೀರಾವರಿಗೆ ಸೂಕ್ತ.
ಸುಧಾರಿತ ತಳಿಗಳು
1. ಅರ್ಕಾ ಲೋಹಿತ್: ಗಿಡಗಳು ಪೊದೆಯಾಗಿದ್ದು, ಕಾಯಿಗಳು ಸಾಧಾರಣ ಉದ್ದವಾಗಿರುತ್ತವೆ ಮತ್ತು ಹೆಚ್ಚು ಖಾರವಾಗಿರುತ್ತವೆ.
2. ಅರ್ಕಾ ಸುಫಲ್: ಗಿಡಗಳು ಎತ್ತರವಾಗಿದ್ದು, ಮಧ್ಯಮ ಗಾತ್ರದ ಹಸಿರು ಕಾಯಿಗನ್ನು ಹೊಂದಿರುತ್ತದೆ. ಬೂದಿ ರೋಗಕ್ಕೆ ನಿರೋಧಕ ಶಕ್ತಿ ಇರುವ ಈ ತಳಿ ಮಳೆಯಾದಾರಿತ ಮತ್ತು ನೀರಾವರಿ ಪ್ರದೇಶಕ್ಕೆ ಸೂಕ್ತವಾಗಿದೆ.
3. ಎನ್.ಪಿ-46 ಎ: ಗಿಡಗಳು ಪೊದೆಯಾಗಿದ್ದು, ಉದ್ದವಾದ ಹಣ್ಣು ಅಚ್ಛ ಕೆಂಪು ಬಣ್ಣ ಹೊಂದಿದೆ. ಇದು ನೀರಾವರಿ ಬೆಳೆಗೆ ಯೋಗ್ಯವಾದ ತಳಿ. ಥ್ರಿಪ್ಸ್ ನುಶಿಯ ಬಾದೆಯನ್ನು ಸಹಿಸುವ ಶಕ್ತಿ ಹೊಂದಿದೆ.
4. ಪೂಸಾ ಜ್ವಾಲಾ: ಮಧ್ಯಮ ಗಾತ್ರದ ಪೊದೆಯಾಕಾರದ ಹೆಚ್ಚು ಇಳುವರಿ ಕೊಡಬಲ್ಲ ತಳಿ. ಎಲೆ ಮುರುಟು ರೋಗ ತಡೆಯಬಲ್ಲ ಹಸಿರು ಮೆಣಸಿನಕಾಯಿ ಪಡೆಯಲು ಸೂಕ್ತವಾಗಿದೆ.
ಬೇಸಾಯ ಸಾಮಗ್ರಿಗಳು (ಪ್ರತಿ ಹೆಕ್ಟೇರಿಗೆ)
ವಿವರ ನೀರಾವರಿ ಬೆಳೆಗೆ ಮಳೆಯಾಶ್ರಿತ ಬೆಳೆಗೆ
ಬೀತ್ತನೆ ಬೀಜ 500 ಗ್ರಾಂ. 500 ಗ್ರಾಂ.
ಕೊಟ್ಟಿಗೆ ಗೊಬ್ಬರ 10 ಟನ್ 10 ಟನ್
ರಾಸಾಯನಿಕ ಗೊಬ್ಬರಗಳು
ಸಾರಜನಕ 60 ಕಿ.ಗ್ರಾಂ 40 ಕಿ.ಗ್ರಾಂ.
ರಂಜಕ 30 ಕಿ.ಗ್ರಾಂ 20 ಕಿ.ಗ್ರಾಂ.
ಪೊಟ್ಯಾಷ್ 30 ಕಿ.ಗ್ರಾಂ. 20 ಕಿ.ಗ್ರಾಂ.
ನೀರಾವರಿ ಬೆಳೆಯಲ್ಲಿ ಸಸಿ ಮಡಿ ತಯಾರಿಕೆ
• ಎಕರೆಗೆ ಬೇಕಾಗುವ ಸಸಿಗಳನ್ನು ತಯಾರಿಸಲು 10 ಅಡಿ ಉದ್ದ, 3 ಅಡಿ ಅಗಲ ಮತ್ತು 10 ಸೆಂ.ಮೀ. ಎತ್ತರದ ಸಸಿ ಮಡಿಗಳನ್ನು ತಯಾರಿಸಿ 5 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಹಾಗೂ 100 ಗ್ರಾಂ 15:15:15 ಸಂಯುಕ್ತ ರಾಸಾಯನಿಕ ಗೊಬ್ಬರವನ್ನು ಪ್ರತಿ ಮಡಿಗೆ ಕೊಟ್ಟು ಚೆನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು.
• ಬಿತ್ತನೆ ಬೀಜವನ್ನು 2 ಗ್ರಾಂ. ಥೈರಾಮ್ 75 ಡಬ್ಲೂ.ಪಿ. ಶಿಲೀಂಧ್ರ ನಾಶಕದಿಂದ ಉಪಚರಿಸಬೇಕು.
• 8 ಸೆಂ.ಮೀ. ಅಂತರದ ಸಾಲುಗಳಲ್ಲಿ ಬೀಜ ಹಾಕಿ ಅಥವಾ ತೆಳುವಾಗಿ ಮಡಿಗಳಲ್ಲಿ ಬೀಜ ಬಿತ್ತಿ ಕೊಟ್ಟಿಗೆ ಗೊಬ್ಬರ ಅಥವಾ ಮಣ್ಣಿನಿಂದ ಮುಚ್ಚಿ ಬೇಸಿಗೆ ದಿನಳಲ್ಲಿ ಮೊಳಕೆ ಬರುವವರೆಗೆ ನೆರಳು ಒದಗಿಸಿ ಪ್ರತಿದಿನ ಸಾಯಂಕಾಲ ನೀರು ಪೂರೈಸಬೇಕು. ಬಿತ್ತನೆ ನಂತರ ಬೀಜಗಳು ಒಂದು ವಾರದಲ್ಲಿ ಮೊಳಕೆಯೊಡೆದು, ಆರು ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. ನಾಟಿ ಮಾಡುವುದಕ್ಕಿಂತ 10 ದಿನಗಳ ಮುಂಚೆ ಸಸಿಗಳಿಗೆ ನೀರಿನ ಪ್ರಮಾಣ ಕಡಿಮೆ ಮಾಡುವುದರಿಂದ, ಸಸಿಗಳು ಬಿರುಸಾಗುತ್ತವೆ.
ನಾಟಿ ಮಾಡುವುದು
• ಸಸಿ ನಾಟಿ ಮಾಡಬೇಕಾಗಿರುವ ಪ್ರದೇಶವನ್ನು ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು ನಾಟಿಗೆ ಸಿದ್ಧಪಡಿಸಬೇಕು.
• ಕೊಡಬೇಕಾದ ಪೂರ್ತಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಮಣ್ಣಿನಲ್ಲಿ ಬೆರೆಸಿ 75 ಸೆಂ.ಮೀ. ಅಂತರದ ಬದುಗಳಲ್ಲಿ ಶಿಫಾರಸ್ಸು ಮಾಡಿದ ಶೇ. 50 ಸಾರಜನಕ, ರಂಜಕ ಹಾಗೂ ಪೋಟ್ಯಾಷ್‍ಯುಕ್ತ ರಸಗೊಬ್ಬರಗಳನ್ನು ಕೊಟ್ಟು ಮಣ್ಣಿನಲ್ಲಿ ಬೆರೆಸಿ, ತೆಳುವಾಗಿ ನೀರು ಹಾಯಿಸಬೇಕು.
• 45 ಸೆಂ.ಮೀ. ಅಂತರದಲ್ಲಿ 2 ಸಸಿಗಳಂತೆ ಸಸಿ ನಾಟಿ ಮಾಡಿ 6 ವಾರಗಳ ನಂತರ ಉಳಿದ ಶೇ.50 ಸಾರಜನಕ, ರಂಜಕ ಹಾಗೂ ಪೋಟ್ಯಾಷ್ ಮೇಲುಗೊಬ್ಬರವಾಗಿ ಕೊಟ್ಟು ಮಣ್ಣು ಏರು ಹಾಕಬೇಕು.
ನೀರಾವರಿ ಹಾಗೂ ಅಂತರ ಬೇಸಾಯ
ಮಣ್ಣು ಹಾಗೂ ಹವಾಗುಣವನ್ನಾಧರಿಸಿ ಕೆಂಪು ಮಣ್ಣಿನಲ್ಲಿ 5-7 ದಿನಗಳಿಗೊಮ್ಮೆ ಕಪ್ಪ ಮಣ್ಣಿನಲ್ಲಿ 15-17 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಮೇಲುಗೊಬ್ಬರ ಕೊಟ್ಟ ನಂತರ ಮಣ್ಣು ಏರು ಹಾಕಿ, ಕಳೆ ನಿಯಂತ್ರಿಸಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಪ್ರತಿ 3 ದಿನಕ್ಕೊಮ್ಮೆ ಹಾಗೂ ಪ್ರತಿ ಗಿಡಕ್ಕೆ 1.8 ಲೀಟರ್ ನೀರು ಕೊಟ್ಟು ಶಿಫಾರಸ್ಸು ಮಾಡಿದ ಪೋಷಕಾಂಶಗಳನ್ನು ಸಮನಾದ 6 ಕಂತುಗಳಲ್ಲಿ 15 ದಿನಗಳಿಗೊಮ್ಮೆ ಒದಗಿಸುವುದು ಲಾಭದಾಯಕ.
ಸಸ್ಯ ಪ್ರಚೋದಕಗಳ ಬಳಕೆ
ಹೂ ಬಿಡುವ ಹಂತದಲ್ಲಿ 50 ಪಿ.ಪಿ.ಎಮ್. ನೆಫ್ತಲಿನ್ ಆ್ಯಸಿಟಿಕ್ ಆಸಿಡ್ (100 ಲೀ. ನೀರಿನಲ್ಲಿ 5 ಮಿ.ಲೀ. ಎನ್.ಎ.ಎ. ಬೆರೆಸುವುದು) ದ್ರಾವಣವನ್ನು ಸಿಂಪಡಿಸುವುದರಿಂದ ಹೂ ಉದುರುವುದನ್ನು ನಿಯಂತ್ರಿಸಬಹುದು.
ಸಾವಯವ ಕೃಷಿಯಲ್ಲಿ ಮೆಣಸಿನಕಾಯಿ ಹೂ ಬಿಡುವ (60 ದಿವಸಗಳ ನಂತರ) ಹಂತದಲ್ಲಿರುವಾಗ ಪಂಚಗವ್ಯ ಶೇ. 3 ರ ಪ್ರಮಾಣದಲ್ಲಿ ನೀರಿಗೆ ಬೆರೆಸಿ ತಯಾರಿಸಿ ದ್ರಾವಣವನ್ನು ಎರಡು ಸಲ 15 ದಿನಗಳ ಅಂತರದಲ್ಲಿ ಸಿಂಪಡಿಸುವುದರಿಂದ ಹೂ ಮತ್ತು ಕಾಯಿ ಹೆಚ್ಚಾಗಿ, ಇಳುವರಿ ಹೆಚ್ಚಿಸಲು ಸಹಾಯವಾಗುತ್ತದೆ ಇದನ್ನು ಪೋಷಕಾಂಶ ಮತ್ತು ಸಸ್ಯ ಪ್ರಚೋದಕದಂತೆ ಉಪಯೋಗಿಸಬಹುದು.
ಮಳೆಯಾಶ್ರಿತ ಬೆಳೆಗೆ
ಸಸಿಮಡಿ ಹಾಗೂ ಭೂಮಿ ಸಿದ್ಧಪಡಿಸುವಿಕೆಗಾಗಿ ನೀರಾವರಿ ಬೆಳೆಗೆ ಸೂಚಿಸಿದ ಕ್ರಮಗಳನ್ನೇ ಅನುಸರಿಸಬೇಕು.
• ಬಿತ್ತನೆಗೆ ಭೂಮಿ ಸಿದ್ಧವಾದೊಡನೆ ಮಾರ್ಕರ್ ಸಹಾಯದಿಂದ 90 ಘಿ 90 ಸೆಂ.ಮೀ. ಅಂತರದಲ್ಲಿ ಗುಣಿಗಳನ್ನು ಗುರ್ತು ಮಾಡಿ ಶಿಫಾರಿತ ಪೂರ್ತಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಹಾಗೂ ಶೇ.50 ರ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಗೊಬ್ಬರಗಳೆಲ್ಲವನ್ನೂ ಗುರ್ತು ಮಾಡಿರುವ ಸ್ಥಳಗಳಲ್ಲಿ ಕೊಟ್ಟು ಚೆನ್ನಾಗಿ ಮಣ್ಣಿನಲ್ಲಿ ಬೆರೆಸಿ, ಪ್ರತಿ ಗುಣಿಗೂ 2 ಸಸಿಗಳಂತೆ ನಾಟಿ ಮಾಡಬೇಕು.
• ನಾಟಿ ಮಾಡಿದ 6 ವಾರಗಳ ನಂತರ ಉಳಿದ ಶೇ.50 ಸಾರಜನಕ, ರಂಜಕ ಹಾಗೂ ಪೊಟ್ಯಾಷ್‍ನ್ನು ಮೇಲುಗೊಬ್ಬರವನ್ನಾಗಿ ಕೊಟ್ಟು ಮಣ್ಣೇರಿಸಬೇಕು.
ಕಳೆನಿಯಂತ್ರಣ
ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಿದ ದಿನ ಅಥವಾ ಮರುದಿನ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಪೆಂಡಿಮಿಥಿಲಿನ್ 30 ಇ.ಸಿ. ಕಳೆನಾಶಕವನ್ನು ಸಿಂಪಡಿಸಿ 30 ದಿನಗಳ ನಂತರ ಒಂದು ಸಲ ಅಂತರ ಬೇಸಾಯ ಮಾಡುವುದರಿಂದ ಬೀಜದಿಂದ ಹರಡುವ ಕಳೆಗಳನ್ನು ನಿಯಂತ್ರಿಸಬಹುದು.
ಸಸ್ಯ ಸಂರಕ್ಷಣೆ
ಕೀಟಗಳು
1. ಥ್ರಿಪ್ಸ್‍ನುಶಿ
ಅತೀ ಚಿಕ್ಕ ಗಾತ್ರದ ಈ ಕೀಟವು ಕಂದು ಬಣ್ಣವನ್ನು ಹೊಂದಿರುತ್ತದೆ. ಇದು ಬೆಳೆಯುವ ಚಿಗುರು ಹಾಗೂ ಎಳೆಯ ಎಲೆಗಳಿಂದ ರಸ ಹೀರುವುದರಿಂದ, ಎಲೆಗಳು ಮೇಲ್ಮುಖವಾಗಿ ಮುದುಡಿಕೊಳ್ಳುತ್ತವೆ.
2. ಹೇನು
ಈ ಕೀಟಗಳು ಸಹ ಅತೀ ಚಿಕ್ಕ ಗಾತ್ರದಲ್ಲಿದ್ದು, ಮೆದು ದೇಹವನ್ನು ಹೊಂದಿರುತ್ತವೆ. ಇವುಗಳು ಗುಂಪು ಗುಂಪಾಗಿ ಬೆಳೆಯುತ್ತಿರುವ ಚಿಗುರು ಮತ್ತು ಎಳೆಯ ಎಲೆಗಳಿಗೆ ಮುತ್ತಿಕೊಂಡು ರಸ ಹೀರುತ್ತವೆ. ಹೇನುಗಳ ಹಾವಳಿ ಜಾಸ್ತಿಯಾದಾಗ ಕಪ್ಪು ಬೂಷ್ಟು ಬೆಳವಣಿಗೆಯಾಗುವುದರಿಂದ ಗಿಡಗಳ ಬೆಳವಣಿಯು ಕುಂಠಿತವಾಗುತ್ತದೆ.
ನಿರ್ವಹಣೆ
• ಥ್ರಿಪ್ಸ್‍ನುಶಿ ಹಾಗೂ ಹೇನುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಬಿತ್ತನೆಯಾದ ಮೂರು ವಾರಗಳ ನಂತರ 0.5 ಮಿ.ಲೀ. ಫಾಸ್ಪಾಮಿಡಾನ್ 85 ಡಬ್ಲ್ಯೂ.ಎಸ್.ಸಿ. ಅಥವಾ 1.7 ಮಿ.ಲೀ. ಡೈಮೀಥೋಯೇಟ್ 30 ಇ.ಸಿ. ಅಥವಾ 1.0 ಗ್ರಾಂ ಅಸಿಫೇಟ್ 75 ಎಸ್.ಪಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ನಾಟಿ ಮಾಡಿದ 2 ಮತ್ತು 5 ವಾರಗಳ ನಂತರ ಇದೇ ಸಿಂಪಡಣೆಯನ್ನು ಪುನರಾವರ್ತಿಸಬೇಕು.
3. ಜೇಡ ನುಸಿ
ಜೇಡ ನುಸಿಯು ರಸ ಹೀರುವ ಪ್ರವೃತ್ತಿಯನ್ನು ಹೊಂದಿದ್ದು, ಬಾಧೆಗೊಂಡ ಗಿಡಗಳ ಎಲೆಗಳು ಕೆಳಭಾಗಕ್ಕೆ ಮುರುಟಿಕೊಳ್ಳುತ್ತವೆ. ಇದಲ್ಲದೇ ಈ ಜೇಡ ನುಸಿಗಳು ಮುರುಟು ರೋಗವನ್ನು ಉಂಟುಮಾಡುವ ವೈರಸನ್ನು ಸಹ ಹರಡುತ್ತವೆ. ಈ ರೀತಿಯಾಗಿ ಮುರುಟಿಕೊಂಡ ಗಿಡಗಳ ಬೆಳವಣಿಗೆಯು ಕುಂಠಿತವಾಗಿ ಕುಬ್ಜವಾಗುತ್ತದೆಯಲ್ಲದೆ ಇಳುವರಿಯೂ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ.
ನಿರ್ವಹಣೆ
• ಈ ಮೇಲೆ ತಿಳಿಸಿರುವ ಬಾಧೆಯ ಲಕ್ಷಣಗಳು ಕಾಣಿಸಿಕೊಂಡಾಗ ಅಥವಾ ನಾಟಿ ಮಾಡಿದ 7 ಮತ್ತು 11 ವಾರಗಳ ನಂತರ ಬೆಳೆಯನ್ನು 2.5 ಮಿ.ಲೀ. ಡೈಕೋಫಾಲ್ ಅಥವಾ 2 ಮಿ.ಲೀ. ಫೆನಜಕ್ವಿನ್ 10 ಇ.ಸಿ. ಅಥವಾ 3.2 ಮಿ.ಲೀ. ಪ್ರೊಪರ್‍ಗೈಟ್ ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಎಲೆಗಳ ಮೇಲೆ ಹಾಗೂ ಎಲೆಗಳ ತಳಭಾಗ ತೊಯುವಂತೆ ಸಿಂಪಡಣೆ ಮಾಡಬೇಕು. ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 625 ಲೀ. ಸಿಂಪಡಣಾ ದ್ರಾವಣವು ಬೇಕಾಗುತ್ತದೆ.
• ನೀರಾವರಿಯಲ್ಲಿ ಬೆಳೆಯುವ ಮೆಣಸಿನಕಾಯಿ ಬೆಳೆಯಾದಲ್ಲಿ ಬಿತ್ತನೆಯಾದ 14 ಹಾಗೂ 17 ವಾರಗಳ ನಂತರ ನುಸಿಯನ್ನು ಹತೋಟಿ ಮಾಡಲು 0.5 ಮಿ.ಲೀ. ಮೆಲ್ಬಿಮೆಕ್ಟಿನ್ 1.0 ಇ.ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
• ಮುರುಟು ರೋಗದ ಬಾಧೆ ತಡೆಗಟ್ಟಬೇಕಾದಲ್ಲಿ ಶೇ.0.5 ರ ಬೆಳ್ಳುಳ್ಳಿ + ಹಸಿಮೆಣಸಿನಕಾಯಿ + ಸೀಮೆಎಣ್ಣೆ ಕಷಾಯವನ್ನು ಬೇವಿನ ಮೂಲದ ಕೀಟನಾಶಕಗಳಾದ ನಿಂಬಿಸಿಡಿನ್ ಅಥವಾ ನೀಮಾಜಾಲ್ 2.5 ಮಿ.ಲೀ. ಪ್ರತಿ ಲೀಟರ್ ಕಷಾಯದೊಂದಿಗೆ ಬೆರೆಸಿ ಸಿಂಪರಣೆ ಮಾಡಬೇಕು.
4. ಸಸಿ ಕತ್ತರಿಸುವ ಕೀಡೆ
ಮರಿಹುಳು ಅಥವಾ ಕೀಡೆಗಳು ಸಸಿ ಮಡಿಯಲ್ಲಿ ಎಳೆಯ ಸಸಿಗಳನ್ನು ಬುಡ ಭಾಗದಲ್ಲಿ ಕತ್ತರಿಸುತ್ತವೆ. ಕೆಲವೊಮ್ಮೆ ಹೊಸದಾಗಿ ನಾಟಿ ಮಾಡಿದ ಸಸಿಗಳನ್ನು ಭೂಮಿಯ ಮೇಲ್ಬಾಗಕ್ಕೆ ಕತ್ತರಿಸುತ್ತವೆ. ಇದರಿಂದ ಬಾಧೆಗೊಂಡ ಸಸಿಗಳು ಸಾಯುತ್ತವೆ.
ನಿರ್ವಹಣೆ
• ಈ ಕೀಟದ ಬಾಧೆಯು ಕಂಡ ತಕ್ಷಣ ಶಿಫಾರಸ್ಸು ಮಾಡಿರುವ ಕೀಟನಾಶಕಗಳಾದ ಕ್ಲೋರೊಫೈರಿಫಾಸ್ 20ಇ.ಸಿ. 2 ಮಿ.ಲೀ. ಅಥವಾ ಕ್ವಿನಾಲ್‍ಫಾಸ್ 25ಇ.ಸಿ. 2 ಮಿ.ಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಬಾಧೆಗೊಂಡ ಗಿಡದ ಸುತ್ತಲೂ ನೆಲವನ್ನು ಚೆನ್ನಾಗಿ ತೊಯಿಸಬೇಕು.
5. ಕಾಯಿ ಕೊರೆಯುವ ಹುಳು
ಹೆಲಿಕೋವರ್ಪಾ ಎನ್ನುವ ಸರ್ವಭಕ್ಷಕ ಕೀಟವು ಬೆಳೆಯುತ್ತಿರುವ ಕಾಯಿಗಳನ್ನು ಅಥವಾ ಮಾಗುತ್ತಿರುವ ಹಣ್ಣುಗಳನ್ನು ತೊಟ್ಟಿನ ಕೆಳಭಾಗದಲ್ಲಿ ಕೊರೆದು ಒಳಸೇರಿ ತಿರುಳನ್ನು ತಿನ್ನುತ್ತವೆ. ಬಾಧೆಗೊಂಡ ಕಾಯಿಗಳು ಬಿಳಿ ಬಣ್ಣಕ್ಕೆ ತಿರುಗಿ ನಂತರ ಕೊಳೆತು ಹಾಳಾಗುತ್ತವೆ. ಈ ಕೀಟದ ಹಾವಳಿಯಿಂದಾಗಿ ಇಳುವರಿಯಲ್ಲಿ ಗಣನೀಯವಾಗಿ ಇಳಿಮುಖವಾಗುತ್ತದೆ.
ನಿರ್ವಹಣೆ
• ಕಾಯಿಕೊರೆಯುವ ಕೀಟವನ್ನು ಸಮರ್ಪಕವಾಗಿ ಹತೋಟಿ ಮಾಡಲು 0.75 ಮಿ.ಲೀ. ನವಲುರಾನ್ 10ಇ.ಸಿ. ಅಥವಾ 1 ಗ್ರಾಂ. ಥಯೋಡಿಕಾರ್ಬ 75 ಡಬ್ಲ್ಯೂ.ಪಿ. ಅಥವಾ 4 ಗ್ರಾಂ ಕಾರ್ಬರಿಲ್ 50 ಡಬ್ಲ್ಯೂ.ಪಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ರಸಾಯನಿಕಗಳ ಬದಲಾಗಿ ಶೇ.5 ರ ಬೇವಿನ ಬೀಜದ ಕಷಾಯವನ್ನು ನಾಟಿ ಮಾಡಿದ 7 ಹಾಗೂ 11ನೇ ವಾರಗಳಲ್ಲಿ ಸಿಂಪಡಿಸಬೇಕು. ಅಥವಾ ಶೇ.5 ರ ಬೇವಿನ ಬೀಜದ ಕಷಾಯವನ್ನು 7ನೇ ವಾರದಲ್ಲಿ ಮತ್ತು ಎನ್.ಪಿ.ವಿ. (250 ಎಲ್.ಇ.) ನಂಜಾಣುವನ್ನು 11ನೇ ವಾರದಲ್ಲಿ ಸಿಂಪಡಣೆ ಮಾಡಬಹುದು.
ಖುಷ್ಕಿ ಮೆಣಸಿನಕಾಯಿ ಬೆಳೆಗೆ ಶಿಫಾರಸ್ಸು ಮಾಡಿರುವ ಕೆಲವು ಸಮಗ್ರ ಕೀಟ ನಿರ್ವಹಣಾ ಕ್ರಮಗಳು
• ರಸ ಹೀರಿವ ಕೀಟಗಳ ನಿರ್ವಹಣೆಗಾಗಿ ಸಸಿ ಮಡಿಯಲ್ಲಿ ಬೀಜವನ್ನು ಬಿತ್ತನೆಗೆ ಮುಂಚೆ ಪ್ರತಿ ಕಿ.ಗ್ರಾಂ ಬೀಜಕ್ಕೆ 5 ಮಿ.ಲೀ. ಇಮಿಡಾಕ್ಲೋಪ್ರಿಡ್ 600 ಎಫ್.ಎಸ್. ದಿಂದ ಬೀಜೋಪಚಾರ ಮಾಡಿ ಬಿತ್ತಬೇಕು.
• ಶಿಫಾರಸ್ಸು ಮಾಡಿದ ರಸಾಯನಿಕ ಗೊಬ್ಬರದಲ್ಲಿ ಶೇ.50 ರಷ್ಟು ಸಾರಜನಕ, ರಂಜಕ, ಪೊಟ್ಯಾಶ್ ಕೊಟ್ಟು, ಹೆಕ್ಟೇರಿಗೆ 2.5 ಟನ್ ಎರೆಹುಳು ಗೊಬ್ಬರ ಮತ್ತು 2.5 ಕ್ವಿಂಟಾಲ್ ಬೇವಿನ ಹಿಂಡಿಯನ್ನು ಸಸಿ ನಾಟಿ ಮಾಡುವ ಮುನ್ನ ಮಣ್ಣಿನಲ್ಲಿ ಸೇರಿಸಿ ನಾಟಿ ಮಾಡಬೇಕು.
• ನಾಟಿ ಮಾಡುವ ಸಮಯದಲ್ಲಿ ಸಸಿಗಳನ್ನು ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. 0.25 ಮಿ.ಲೀ. ಪ್ರತಿ ಲೀಟರ್ ನೀರಿನ ದ್ರಾವಣದಲ್ಲಿ ಐದು ನಿಮಿಷಗಳವರೆಗೆ ನೆನೆಸಿ ನಾಟಿ ಮಾಡಬೇಕು.
• ಸಸಿಗಳನ್ನು ನಾಟಿ ಮಾಡುವಾಗ, ಆಫ್ರಿಕನ್ ಟಾಲ್ ಚೆಂಡು ಹೂ ಸಸಿಗಳನ್ನು ಮೆಣಸಿನ ಗಿಡಗಳ ಪ್ರತಿ 16 ಸಾಲಿಗೆ ಒಂದು ಸಾಲಿನಂತೆ ಬಲೆ ಬೆಳೆಯಾಗಿ ಬೆಳೆಯಬೇಕು ಹಾಗೂ ಚೆಂಡು ಹೂಗಳು ಅರಳಿದಂತೆ ಕಿತ್ತು ತೆಗೆಯುತ್ತಿರಬೇಕು.
• ಸಿಂಪಡಣೆ ಮಾಡಬೇಕಾದಲ್ಲಿ ನಾಟಿ ಮಾಡಿದ 5ನೇ ವಾರಕ್ಕೆ 4.0 ಮಿ.ಲೀ. ಬೇವು ಮೂಲದ ಕೀಟನಾಶಕ, 6ನೇ ವಾರಕ್ಕೆ 0.5 ಗ್ರಾಂ ಡೈಫೆಂಥಿಯುರಾನ್ 50 ಡಬ್ಲ್ಯೂ.ಪಿ., 11ನೇ ವಾರಕ್ಕೆ 2 ಮಿ.ಲೀ. ಫ್ರೋಫೆನೋಫಾಸ್ 50 ಇ.ಸಿ. ಮತ್ತು 14ನೇ ವಾರಕ್ಕೆ 4 ಮಿ.ಲೀ. ಬೇವಿನ ಮೂಲದ ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.
ರೋಗಗಳು
1. ಸಸಿ ಕೊಳೆ ರೋಗ
ಪೀಥಿಯಮ್ ಅಪ್ಯಾನಿಡರ್ಮೆಟಮ್ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಪ್ರಾರಂಭದಲ್ಲಿ ನೀರಿನಿಂದ ಒದ್ದೆಯಾದಂತಹ ಮಚ್ಚೆಗಳು ಕಾಂಡದ ಮೇಲೆ ಕಾಣಿಸಿಕೊಳ್ಳುತ್ತವೆ. ನಂತರ ಈ ಮಚ್ಚೆಗಳು ಹೆಚ್ಚಾಗಿ ಕಾಂಡವನ್ನೆಲ್ಲಾ ಆವರಿಸಿದಾಗ ಗಿಡಗಳು ಸಸಿ ಮಡಿಯಲ್ಲಿ ಗುಂಪಾಗಿ ಸಾಯುತ್ತವೆ.
ಹತೋಟಿ ಕ್ರಮಗಳು
• ನೀರು ನಿಲ್ಲದಂತೆ ಬಸಿಕಾಲುವೆಗಳನ್ನು ನಿರ್ಮಿಸಬೇಕು
• ಪ್ರತಿ ಕಿ.ಗ್ರಾಂ ಬಿತ್ತನೆ ಬೀಜವನ್ನು 2 ಗ್ರಾಂ ಕ್ಯಾಪ್ಟಾನ್ ಶಿಲೀಂದ್ರನಾಶಕದೊಡನೆ ಬೆರಸಿ ಬೀಜೊಪಚಾರ ಮಾಡಿ ಬಿತ್ತಬೇಕು.
• ರೋಗ ಕಂಡ ಕೂಡಲೆ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮೆಟಾಲಾಕ್ಸಿಲ್+ಮ್ಯಾಂಕೋಜೆಬ್‍ನ್ನು ಬೆರಸಿ ತಯಾರಿಸಿದ ದ್ರಾವಣವನ್ನು ಸಸಿ ಮಡಿಗೆ ಸಿಂಪಡಿಸಬೇಕು.
2. ಬೂದಿ ರೋಗ
ಲೇವುಲ್ಲುಲ್ಲಾ ಟಾರಿಕಾ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಅಕ್ಟೋಬರ್-ನವೆಂಬರ್‍ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಪ್ರಾರಂಭದಲ್ಲಿ ಎಲೆಯ ಕೆಳಭಾಗದಲ್ಲಿ ಅಲ್ಲಲ್ಲಿ ಬೂದಿ ಚೆಲ್ಲಿದ ಹಾಗೆ ಶಿಲೀಂದ್ರದ ಪುಡಿ ಇರುವುದನ್ನು ಕಾಣಬಹುದು. ರೋಗದ ತೀವ್ರತೆ ಹೆಚ್ಚಾದಂತೆಲ್ಲಾ ಎಲೆಯ ಮೇಲ್ಭಾಗದಲ್ಲಿಯೂ ಸಹ ಬೂದಿ ಬಣ್ಣದ ಮಚ್ಚೆಗಳನ್ನು ಕಾಣಬಹುದು. ಕ್ರಮೇಣ ಎಲೆಯು ಒಣಗಿ ಗಿಡದಿಂದ ಉದರಿ ಬೀಳುತ್ತದೆ.
ಹತೋಟಿ ಕ್ರಮಗಳು
• ರೋಗ ಕಂಡು ಬಂದ ಕೂಡಲೆ 1 ಗ್ರಾಂ ಡಿನೋಕ್ಯಾಪ್‍ನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು. ಅಗತ್ಯವಿದ್ದರೆ 20 ರಿಂದ 30 ದಿನಗಳ ಅಂತರದಲ್ಲಿ ಪುನಃ ಇದೇ ಸಿಂಪಡಣೆಯನ್ನು ಮಾಡಬೇಕು.
3. ಚಿಬ್ಬು ರೋಗ
ಕೊಲೆಟೋಟ್ರೈಕಮ್ ಕ್ಯಾಪ್ಸಿಸಿ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮೆಣಸಿನ ಕಾಯಿಗೆ ಬರುವ ಅಪಾಯಕಾರಿ ರೋಗವಾಗಿದೆ.
ಈ ರೋಗದ ಪರಿಣಾಮವಾಗಿ ಮೆಣಸಿನಕಾಯಿ ಗಿಡ ಕಾಯಿ ಬಿಟ್ಟಾಗ ತೊಟ್ಟಿನ ಮೇಲೆ ರೋಗ ಕಾಣಿಸಿ ಕೊಂಡು ಮೆಣಸಿನಕಾಯಿಗಳು ಗಿಡದಿಂದ ನೆಲಕ್ಕೆ ಬೀಳುತ್ತವೆ. ಮಾಗುವ ಹಣ್ಣಿನ ಮೇಲೆ ದುಂಡನೆಯ ನೀರಿನಿಂದ ಆವೃತವಾದ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ನಂತರ ಹಣ್ಣಿನ ಪೂರ್ತಿ ಭಾಗವನ್ನು ಆವರಿಸಿ ಉದ್ದನೆಯಕಾರದ ಮಚ್ಚೆಗಳಾಗಿ ಹರಡುತ್ತವೆ. ಇಂತಹ ಮಚ್ಚೆಗಳ ಮಧ್ಯಭಾಗದಲ್ಲಿ ಬೂದಿ ಬಣ್ಣದಿಂದ ಕೂಡಿದ ಶಿಲೀಂದ್ರದ ಸೋಂಕು ಕಾಣಿಸಿಕೊಂಡು ರೋಗಗ್ರಸ್ಥ ಹಣ್ಣುಗಳು ಬಿಳಿ ಬಣ್ಣಕ್ಕೆ ತಿರುಗಿ ಕೊಳೆಯುತ್ತವೆ.
ಹತೋಟಿ ಕ್ರಮಗಳು
• ರೋಗ ರಹಿತ ಬಿತ್ತನೆ ಬೀಜವನ್ನು ಬಿತ್ತನೆಗೆ ಉಪಯೋಗಿಸಬೇಕು.
• ರೋಗ ಕಂಡು ಬಂದ ಕೂಡಲೆ 2 ಗ್ರಾಂ ಮ್ಯಾಂಕೋಜೆಬ್‍ನ್ನು ಪ್ರತಿ ಲೀಟರ್ ನೀರಿಗೆ ಬೆರಸಿ 15 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು.
4. ಎಲೆ ಮುರುಟು ರೋಗ
ನಂಜಾಣುವಿಂದ ಬರುವ ಈ ರೋಗವು ನುಸಿ ಮತ್ತು ಬಿಳಿನೊಣಗಳಿಂದ ಗಿಡದಿಂದ ಗಿಡಕ್ಕೆ ಹರಡುತ್ತದೆ. ನಂಜು ತಗುಲಿದ ಎಲೆಗಳ ಮೇಲೆ ಹಸಿರು ಹಳದಿ ಬಣ್ಣದ ಉದ್ದನೆಯ ಪಟ್ಟಿಗಳು ಕಾಣಿಸಿಕೊಳ್ಳುವುದಲ್ಲದೆ ಚುಕ್ಕೆಗಳು ಉಬ್ಬು ದಿನ್ನೆಗಳಾಗಿ ಕಂಡು ಬರುತ್ತವೆ. ಇದರಿಂದ ರೋಗ ಪೀಡಿತ ಗಿಡಗಳ ಬೆಳವಣಿಗೆ ಕುಂಠಿತವಾಗುವುದಲ್ಲದೆ ಹೂ ಕಾಯಿ ಹಿಡಿಯುವುದಿಲ್ಲ. ಕೆಲವು ಸಂಧರ್ಭದಲ್ಲಿ ಪೂರ್ತಿ ಗಿಡ ಬಂಜೆಯಾಗಿರುವುದು ಸಹ ಕಂಡುಬರುತ್ತದೆ.
ಹತೋಟಿ ಕ್ರಮಗಳು
• ಈ ರೋಗದ ಹತೋಟಿಗೆ ಟ್ರಯಜೋಫಾಸ್ 1.7 ಮಿ.ಲೀ. ಅಥವಾ ಡೈಕೊಫಾಲ್ 2.5 ಮಿ.ಲೀ. ಅಥವಾ ಇಮೀಡಾಕ್ಲೋಪ್ರಿಡ್ 0.3 ಮಿ. ಲೀ ಯನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.