ಉದ್ಯಾನವನ The park

ಉದ್ಯಾನವನ

ಉದ್ಯಾನವನ ಹೊರಾಂಗಣದಲ್ಲಿ ನಿರ್ಮಿತವಾದ ವ್ಯವಸ್ಥಿತ ಸ್ಥಳವಾಗಿದ್ದು, ಅಲ್ಲಿ ಪ್ರದರ್ಶನ, ಅಭಿವೃದ್ಧಿ ಮತ್ತು ಮನೋರಂಜನೆಗಾಗಿ ಸಸಿಗಳನ್ನು ಹಾಗು ಪ್ರಕೃತಿಯ ಇತರ ವಸ್ತುಗಳನ್ನು ಪೋಷಿಸಲಾಗುತ್ತದೆ. ಉದ್ಯಾನವನ ಪ್ರಕೃತಿಯಲ್ಲಿ ದೊರೆಯುವ ಮತ್ತು ಮಾನವ ನಿರ್ಮಿತ ವಸ್ತುಗಳನ್ನು ಒಳಗೊಂಡಿರುತ್ತದೆ. ಇತ್ತೀಚೆಗೆ ಮನೆ ಮನೆಗಳಲ್ಲಿ ಹೂ ತೊಟ ಸಾಮಾನ್ಯವಾಗಿ ಕಂಡುಬರುತ್ತವೆ. ಕೆಲವು ಉದ್ಯಾನವನಗಳು ಅಲಂಕಾರಿಕ ಉದ್ಧೇಶ ಹೊಂದಿದ್ದರೆ, ಕೆಲವು ಆಹಾರ ಉತ್ಪಾದನೆಗಾಗಿ ಸಹ ಬಳಸಲ್ಪಡುತ್ತದೆ. ಉದ್ಯಾನವನದಲ್ಲಿ ಆಹಾರ ಉತ್ಪಾದನೆಗಾಗಿ ಬೇರೆ ಎಡೆಗಳಿರಬಹುದು ಅಥವಾ ಹೂಗಿಡಗಳೊಂದಿಗೆ ಮಿಶ್ರವಾಗಿ ಬೆಳೆಯಬಹುದು. ಆಹಾರ ಉತ್ಪಾದನೆಯ ಉದ್ಯಾನವನ ತನ್ನ ವಿಸ್ತಾರ, ಹೆಚ್ಚು ಕಾರ್ಮಿಕ ಬಳಕೆ ಮತ್ತು ಉದ್ಧೇಶಗಳಿಂದ ಕೃಷಿ ಕ್ಷೇತ್ರಕ್ಕಿಂತ ಭಿನ್ನವಾಗಿದೆ. ವಿವಿಧ ಗಾತ್ರದ ಗಿಡಗಳು ಬಣ್ಣ, ಹೊಳಪು ಮತ್ತು ಸುವಾಸನೆಯಿಂದ ಎಲ್ಲಾ ನೋಡುಗರ ಮನಸೆಳೆಯುತ್ತದೆ. ಉದ್ಯಾನ ಮತ್ತು ಭೂ ದೃಶ್ಯ ವಿನ್ಯಾಸವನ್ನು ಮಾಲಿಕರು ಅಥವಾ ವೃತ್ತಿಪರರು ಮಾಡಬಹುದು. ಉದ್ಯಾನದ ಮಾದರಿಯು ಭೂದೃಶ್ಯ ವಿನ್ಯಾಸಗಳಿಗೆ ಬಳಸುವ ದಾರಿ, ಕಲ್ಲು ಜೋಡಣೆ, ಗೋಡೆ, ನೀರಿನ ಬಳಕೆ, ಕುಳಿತುಕೊಳ್ಳುವ ಸ್ಥಳ ಮತ್ತು ತೋಟಗಾರಿಕೆಗೆ ಒತ್ತು ಕೊಡುವ ಗಿಡಗಳನ್ನು ಒಳಗೊಂಡಿದೆ. ಇದರೊಂದಿಗೆ ವಿವಿಧ ಋತುಗಳಲ್ಲಿ ಗಿಡಗಳು ಕಾಣುವ ರೀತಿ, ಜೀವಿತಾವಧಿ, ಬೆಳವಣಿಗೆ, ಗಾತ್ರ, ಬೆಳವಣಿಗೆಯ ವೇಗ, ಇತರ ಗಿಡಗಳೊಂದಿಗೆ ಹೊಂದಿಕೊಳ್ಳುವ ರೀತಿ ಮತ್ತು ಭೂದೃಶ್ಯ ಅಂಶಗಳು ಸಹ ಸೇರ್ಪಡೆಗೊಂಡಿದೆ.. ಉದ್ಯಾನ ನಿರ್ವಹಣೆಯು ದೊರೆಯುವ ಸಮಯ ಮತ್ತು ಬಂಡವಾಳದ ಮೇಲೆ ಅವಲಂಬಿತವಾಗಿದೆ. ಇದು ಗಿಡಗಳ ಆಯ್ಕೆ, ಬೆಳವಣಿಗೆ, ವಿಸ್ತಾರ ಬೀಜೋತ್ಪಾದನೆ ಮತ್ತು ಹೂಬಿರಿಯುವ ಸಮಯ ಮುಂತಾದವುಗಳ ಮೇಲೆ ಪರಿಣಾಮ ಬೀರುತ್ತದೆ. ಉದ್ಯಾನ ಮಾದರಿಯನ್ನು ಈ ಕೆಳಗಿನಂತೆ 2 ಗುಂಪಾಗಿ ವಿಂಗಡಿಸಬಹುದು.
1. ಸಂಪ್ರದಾಯಕ ಉದ್ಯಾನವನ
2. ಸ್ವಾಭಾವಿಕ ಉದ್ಯಾನವನ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮೂಲವಸ್ತುಗಳು
ಉದ್ಯಾನವು ಸ್ವಾಭಾವಿಕವಾಗಿ ದೊರೆಯುವ ಮೂಲವಸ್ತುಗಳಾದ ಮಣ್ಣು, ಕಲ್ಲು, ಗಾಳಿ, ನೀರು, ಸಸ್ಯ, ಮತ್ತು ಗಿಡದ ಪಾತಿ, ದಾರಿ, ಕೊಳ, ನೀರಿನ ಕಾರಂಜಿ, ಚಾವಣಿ, ಕುಳಿತುಕೊಳ್ಳುವ ಸ್ಥಳ, ಬೆಳಕಿನ ವ್ಯವಸ್ಥೆ, ಪ್ರತಿಮೆ, ಕಟ್ಟಡ ಮುಂತಾದುವುಗಳಿಂದ ನಿರ್ಮಿಸಲ್ಪಟ್ಟಿರುತ್ತದೆ.

ಉದ್ಯಾನ ಶೈಲಿ
ಅಲಂಕಾರಿಕ ಹೂ ತೋಟದಲ್ಲಿ 2 ಶೈಲಿಗಳಿವೆ. ಸಂಪ್ರದಾಯಕ ಮತ್ತು ಅಸಂಪ್ರದಾಯಕ. ಸಂಪ್ರದಾಯಕ ವಿಧಾನದಲ್ಲಿ ರೇಖಾಗಣಿತದ ನಿಯಮಗಳಿಗನುಗುಣವಾಗಿ ಉದ್ಯಾನ ನಿರ್ಮಿಸಲಾಗುತ್ತದೆ. ಅಸಂಪ್ರದಾಯಕ ವಿಧಾನದಲ್ಲಿ ರೇಖಾಗಣಿತದ ಯಾವುದೇ ನಿಯಮವನ್ನು ಪಾಲಿಸುವುದಿಲ್ಲ.

ವಿನ್ಯಾಸದ ನಿಯಮಗಳು
ಉದ್ಯಾನ ಶೈಲಿಯನ್ನು ವಿನ್ಯಾಸಗೊಳಿಸುವುದರ ಮೊದಲು ಸ್ಥಳದ ನೆಲೆ ಮತ್ತು ವಿಸ್ತಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ವಾಭಾವಿಕವಾಗಿ ದೊರೆಯುವ ಮೂಲವಸ್ತುಗಳನ್ನು ಬಳಸಿಕೊಳ್ಳಬೇಕು. ಮರಗಿಡಗಳನ್ನು ನೆಟ್ಟಾಗ ಅವು ದಟ್ಟವಾಗಿದ್ದು, ಜನರನ್ನು ಆಕರ್ಷಿಸಲು ಪ್ರತಿಮೆ ಮತ್ತು ಸ್ವಾಭಾವಿಕ ವಸ್ತುಗಳನ್ನು ಅಳವಡಿಸಬೇಕು. ಎತ್ತರ ಪ್ರದೇಶದಿಂದ ಉದ್ಯಾನ ನಿರ್ಮಾಣ ಪ್ರಾರಂಭಿಸಬೇಕು. ಅಂದ ಹೆಚ್ಚಿಸಲು ಅಧಿಕ ಸಂಖ್ಯೆಯ ಹೂ ಗಿಡಗಳನ್ನು ಬಳಸಬೇಕು. ಗಿಡ, ಹುಲ್ಲು ಮತ್ತು ಇತರ ವಸ್ತುಗಳ ಸಂಯೋಗ, ಹೊಂದಾಣಿಕೆ, ಬಣ್ಣ ಜನರ ಮನಸೆಳೆಯುವಂತಿರಬೇಕು. ಸದಾಹಸಿರಿನ ಎಲೆ ಉದುರಿಸದ ಮರಗಳು, ಪೊದರು, ಹೂ, ಹುಲ್ಲುಹಾಸು ಉದ್ಯಾನದಲ್ಲಿ ಅಡಕವಾಗಿರಬೇಕು. ಉತ್ತಮ ಬೆಳವಣಿಗೆಗಾಗಿ ಗಿಡಗಳನ್ನು ಅನುಕೂಲಕರ ಅಂತರದಲ್ಲಿ ನೆಡಬೇಕು ಮತ್ತು ವಾಯುಗುಣ ಹಾಗು ನೀರಿನ ವ್ಯವಸ್ಥೆಗೆ ಅನುಗುಣವಾಗಿ ಗಿಡಗಳ ಆಯ್ಕೆ ಮಾಡಬೇಕು.

ಸಂಪ್ರದಾಯಕ ಶೈಲಿ
ಅಚ್ಚುಕಟ್ಟಾಗಿ ನಿರ್ಮಿತವಾದ ಉದ್ಯಾನಕ್ಕೆ ಸಂಪ್ರದಾಯಕ ಶೈಲಿಯ ಉದ್ಯಾನ ಎಂದು ಕರೆಯುತ್ತಾರೆ. ಇಲ್ಲಿ ಕೃತಕ ಸನ್ನಿವೇಶಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಶಿಲ್ಪಿಯ ಕಲ್ಪನೆಗೆ ಅನುಗುಣವಾಗಿ ಭೂದೃಶ್ಯ ವಿನ್ಯಾಸ ಮಾಡಲಾಗುತ್ತದೆ.
ಸ್ಥಳದಲ್ಲಿ ಸ್ವಾಭಾವಿಕವಾಗಿರುವ ವಸ್ತುಗಳನ್ನು ಹಾಗೆಯೇ ಇರಲು ಬಿಟ್ಟು ಉದ್ಯಾನ ರಚನೆ ಮಾಡಲಾಗುತ್ತದೆ. ಸಾಧಾರಣವಾಗಿ ರಸ್ತೆಯನ್ನು ಉದ್ಯಾನದ ಮಧ್ಯದಲ್ಲಿ ನಿರ್ಮಿಸಲಾಗುತ್ತದೆ ಮತ್ತು ರಸ್ತೆಯ 2 ಬದಿಗಳು ಕನ್ನಡಿಯ ಪ್ರತಿಬಿಂಬದಲ್ಲಿರುವಂತೆ ಒಂದೇ ರೀತಿಯಲ್ಲಿರುತ್ತದೆ. ಮೊಘಲರ ಕಾಲದಲ್ಲಿ ನಿರ್ಮಿಸಿದ ಮೊಘಲ್ ಉದ್ಯಾನ ಸಂಪ್ರದಾಯಕ ಶೈಲಿಯಲ್ಲಿ ನಿರ್ಮಿತವಾಗಿದೆ. ಉದ್ಯಾನವನ್ನು ಅನೇಕ ಭಾಗಗಳಾಗಿ ವಿಂಗಡಿಸಲ್ಪಟ್ಟು ಪ್ರತೀ ಭಾಗವು ಒಂದನ್ನೊಂದು ಹೋಲುತ್ತದೆ. ಎಲ್ಲಾ ಭಾಗದಲ್ಲಿ ಹುಲ್ಲುಹಾಸು, ಪೊದರು, ಗಿಡಗಳು ಮತ್ತು ಹೂ ಗಿಡಗಳಿರುತ್ತವೆ ಮತ್ತು ಗಡಿಯು ಇಟ್ಟಿಗೆ ಅಥವಾ ಕಲ್ಲಿನಿಂದ ನಿರ್ಮಿಸಲ್ಪಟ್ಟಿರುತ್ತದೆ. ಕಟ್ಟಡವು ಸಾಮಾನ್ಯವಾಗಿ ಉದ್ಯಾನದ ಮಧ್ಯ ಭಾಗದಲ್ಲಿರುತ್ತದೆ. ಅಥವಾ ಉದ್ಯಾನದ ಒಳಭಾಗದಲ್ಲಿರುತ್ತದೆ. ನಿರ್ಮಾಣಕ್ಕೆ ಹೆಚ್ಚು ಕಾರ್ಮಿಕ ಮತ್ತು ಹಣ ವೆಚ್ಚವಾದರೂ ನೋಡಲು ಸುಂದರವಾಗಿರುತ್ತದೆ. ಉದ್ಯಾನವು ಹಲವು ಮೂಲವಸ್ತುಗಳಿಂದ ಕೂಡಿವೆ. ಅವು ಈ ಕೆಳಗಿನಂತಿವೆ.

ಸುತ್ತಲಿನ ಗೋಡೆ
ಸುತ್ತಲಿನ ಗೋಡೆಯನ್ನು ಇಟ್ಟಿಗೆ ಮತ್ತು ಕಲ್ಲುಗಳಿಂದ ಎತ್ತರವಾಗಿ ಕಟ್ಟಲ್ಪಟ್ಟಿರುತ್ತದೆ ಮತ್ತು ಮುಖ್ಯದ್ವಾರವನ್ನು ಸುಂದರವಾಗಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಗಾಳಿ ಮತ್ತು ಪ್ರಾಣಿಗಳಿಂದ ರಕ್ಷಣೆ ದೊರೆಯುತ್ತದೆ.

ದಾರಿ
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡಲು, ಪ್ರವಾಸಿಗರಿಗೆ ಮತ್ತು ಭೇಟಿಕೊಡಲು ಬರುವವರಿಗೆ ನಡೆದಾಡಲು ದಾರಿ ಅವಶ್ಯಕತೆಯಿದೆ. ಕಾಲು ದಾರಿಯನ್ನು ಬಣ್ಣದ ಕಲ್ಲಿನಿಂದ ಆಕರ್ಷಕವಾಗಿ ನಿರ್ಮಿಸಲಾಗುತ್ತದೆ.

ನೀರು
ಮೊಘಲ್ ಶೈಲಿಯ ಉದ್ಯಾನದ ಬಹು ಮುಖ್ಯ ಅಂಗವಾಗಿದೆ. ಉದ್ಯಾನದ ಮಧ್ಯೆ ಇರುವ ಕಾಲುವೆ, ಕಾರಂಜಿ ಉದ್ಯಾನದ ಅಂದವನ್ನು ಹೆಚ್ಚಿಸುತ್ತದೆ.

ಕಾರಂಜಿ
ಬಣ್ಣದ ಬೆಳಕಿನ ವ್ಯವಸ್ಥೆ ಇರುವ ಕಾರಂಜಿ ರಾತ್ರಿ ವೇಳೆಯಲ್ಲಿ ಉದ್ಯಾನದ ಅಂದವನ್ನು ಹೆಚ್ಚಿಸುತ್ತದೆ.

ಬರ್ದಾರಿ ಅಥವಾ ಕೇಂದ್ರ ಕಟ್ಟಡ
ಮೊಘಲ್ ಶೈಲಿ ಉದ್ಯಾನದಲ್ಲಿ ಕಂಡುಬರುತ್ತದೆ. ಬರ್ದಾರಿ ವಿಶಾಲ ಸಭಾಂಗಣದಂತಿದ್ದು ಭೇಟಿ ನೀಡಿದವರಿಗೆ ಮಳೆಯಿಂದ ರಕ್ಷಣೆ ಕೊಡುತ್ತದೆ.

ಹೂ ಪಾತಿಗಳು
ಹೂ ಪಾತಿಗಳು ವಿವಿಧ ಬಣ್ಣದ ಹೂಗಳ ಮಿಶ್ರಣದಿಂದ ಕೂಡಿದ್ದು ಉದ್ಯಾನಕ್ಕೆ ಅಂದ ಕೊಡುತ್ತದೆ ಮತ್ತು ಗುಂಪಾಗಿ ನೆಡುವುದರಿಂದ ಆಕರ್ಷಿಣೀಯವಾಗಿ ಕಾಣುತ್ತದೆ.

ಬೇಲಿ
ಬೇಲಿಯನ್ನು ಕೆಲವು ನಿರ್ಧಿಷ್ಟ ಸ್ಥಳ, ಗಡಿ, ಹುಲ್ಲುಹಾಸು ಮತ್ತು ಇತರ ರಚನೆಗಳನ್ನು ಸುತ್ತುವರಿಯಲು ಬೆಳೆಸುತ್ತಾರೆ. ಉದ್ಯಾನವನ್ನು ವಿವಿಧ ಭಾಗಗಳಾಗಿ ವಿಂಗಡಿಸಲು ಸಹ ಬೇಲಿಯನ್ನು ಬಳಸುತ್ತಾರೆ.

ಹುಲ್ಲುಹಾಸು
ಹುಲ್ಲುಹಾಸು ಸಹ ಉದ್ಯಾನದ ಪ್ರಮುಖ ಭಾಗವಾಗಿದೆ. ನೋಡಲು ಸುಂದರವಾಗಿರುತ್ತದೆ. ಮತ್ತು ಭೇಟಿ ನೀಡುವವರಿಗೆ ಕುಳಿತುಕೊಳ್ಳಲು ಸ್ಥಳ ಒದಗಿಸುತ್ತದೆ. ಹುಲ್ಲು ಹಾಸಿಲ್ಲದೆ ಉದ್ಯಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಲ್ಲದೆ ಉದ್ಯಾನದಲ್ಲಿ ಪ್ರತಿಮೆ, ದೀಪ, ಕುಳಿತುಕೊಳ್ಳುವ ಆಸನಗಳಿದ್ದರೆ ಉದ್ಯಾನಕ್ಕೆ ಶೋಭೆ ಕೊಡುತ್ತದೆ. ತಾಜ್ ಗಾರ್ಡನ್, ಸಿಕಂದರ ಗಾರ್ಡನ್, ರಾಷ್ಟ್ರಪತಿ ಭವನದ ಮೊಗಲ್ ಗಾರ್ಡ£, ಬೃಂದಾವನ ಗಾರ್ಡನ್, ನಿಶಾತ್ ಬಾಗ್, ಶಾಲಿಮಾರ್ ಗಾರ್ಡನ್, ಪಿಂಜೋರೆ ಗಾರ್ಡನ್ ಇವು ಸಂಪ್ರದಾಯಕ ಉದ್ಯಾನಕ್ಕೆ ಉದಾಹರಣೆ.

ಅಸಂಪ್ರದಾಯಕ ಉದ್ಯಾನ
ಪ್ರಕೃತಿಯ ರಮಣೀಯ ದೃಶ್ಯ ಕಾಣುವಂತೆ ಅಸಂಪ್ರದಾಯಕ ಉದ್ಯಾನವನ್ನು ವಿನ್ಯಾಸಗೊಳಿಸುತ್ತಾರೆ. ಉದ್ಯಾನದ ವಿವಿಧ ಭಾಗಗಳು ಒಂದೇ ರೀತಿಯಲ್ಲಿರುವುದಿಲ್ಲ. ಗೋಡೆ, ದಾರಿ, ನದಿ, ಸೇತುವೆ, ಕಾರಂಜಿ, ಕೊಳ ಎಲ್ಲವನ್ನು ಸ್ವಾಭಾವಿಕವಾಗಿ ಕಾಣುವಂತೆ ನಿರ್ಮಿಸಲಾಗುತ್ತದೆ. ನೀರಿನ ಸಸ್ಯಗಳಾದ ತಾವರೆ ಲಿಲ್ಲಿಗಳನ್ನು ಕೆರೆ, ಕೊಳದಲ್ಲಿ ಬೆಳಸಲಾಗುವುದು. ಸದಾ ಹಸಿರು ಮತ್ತು ಎಲೆ ಉದುರುವ ಗಿಡಗಳನ್ನು ಒಂದೇ ಗುಂಪಿನಲ್ಲಿ ಮತ್ತು ಹೂ ಗಿಡಗಳಿಗಿಂತ ಮರಗಳನ್ನು ನೆಡಲು ಹೆಚ್ಚು ಒತ್ತು ಕೊಡಲಾಗುವುದು. ಜಪಾನಿನ ಹೆಚ್ಚಿನ ಉದ್ಯಾನವನಗಳು ಈ ಶೈಲಿಯಲ್ಲಿ ನಿರ್ಮಾಣವಾಗಿದೆ. ಜಪಾನಿನ ಶೈಲಿಯ ಉದ್ಯಾನವನ್ನು ಹಿಲ್ ಗಾರ್ಡನ್, ಪ್ಲ್ಯಾಟ್ ಗಾರ್ಡನ್ ಮತ್ತು ಬೇ ಗಾರ್ಡನ್ ಎಂದು 3 ವಿಧವಾಗಿ ವಿಂಗಡಿಸಬಹುದು. ಗುಡ್ಡಪ್ರದೇಶದಲ್ಲಿ ನಿರ್ಮಿಸಲಾಗುವ ವಿಸ್ತಾರವಾದ ಹಿಲ್ ಗಾರ್ಡನ್ ಸಾಮಾನ್ಯವಾಗಿ ಕೊಳ, ಕೆರೆ, ಕಾರಂಜಿ, ಸದಾ ಹಸಿರು ಗಿಡಗಳನ್ನು ನೆಡಲು ಹೆಚ್ಚು ಒತ್ತು ಕೊಡಲಾಗುವುದು. ತಪ್ಪಲು ಪ್ರದೇಶದಲ್ಲಿ ಪ್ಲ್ಯಾಟ್ ಗಾರ್ಡನ್ ಸ್ವಾಭಾವಿಕವಾಗಿ ಕಾಣುವಂತೆ ನಿರ್ಮಿಸಲಾಗುವುದು. ಕಲ್ಲು, ಅಂಕುಡೊಂಕಿನ ಹಾದಿ, ಚಿಕ್ಕ ಸೇತುವೆ ಉದ್ಯಾನಕ್ಕೆ ಸ್ವಾಭಾವಿಕ ನೋಟ ಕೊಡುತ್ತದೆ. ಜಪಾನಿನ ನಗರಗಳಲ್ಲಿ ಕಂಡುಬರುವ ಈ ವಿಧಾನದ ಉದ್ಯಾನ ನಿರ್ಮಾಣಕ್ಕೆ ಸ್ವಾಭಾವಿಕವಾಗಿ ದೊರೆಯುವ ವಸ್ತುಗಳನ್ನು ಬಳಸಲಾಗುವುದು.
ಈ ಮೇಲಿನ 3 ವಿಧಾನಗಳಲ್ಲದೆ ಫ್ರಿಸ್ಟೈಲ್ ಎಂಬ ಶೈಲಿ ಜನಪ್ರಿಯವಾಗುತ್ತಿದೆ. ಇದು ಸಂಪ್ರದಾಯಕ ಮತ್ತು ಅಸಂಪ್ರದಾಯಕ ಶೈಲಿಯ ಮಿಶ್ರಣವಾಗಿದೆ.

 

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments